ಜಗತ್ತನ್ನು ಗಮನಿಸುವುದು
ಆಸ್ಟ್ರೇಲಿಯದ ಕಾಡು ಒಂಟೆಗಳು
ಅನೇಕ ವರ್ಷಗಳ ಹಿಂದೆ, ದೇಶದ ಬಹುದೂರದ ಗ್ರಾಮೀಣ ಪ್ರದೇಶದಲ್ಲಿನ ಟೆಲಿಗ್ರಾಫ್ ಲೈನ್ ಹಾಗೂ ರೈಲುರಸ್ತೆಯ ನಿರ್ಮಾಣ ಕಾರ್ಯದಲ್ಲಿನ ಕೆಲಸಕ್ಕಾಗಿ ಒಂಟೆಗಳನ್ನು ಆಸ್ಟ್ರೇಲಿಯಕ್ಕೆ ಆಮದುಮಾಡಿಕೊಳ್ಳಲಾಯಿತು. ಟ್ರಕ್‌ಗಳು ಈ ಗಟ್ಟಿಮುಟ್ಟಾದ ಪ್ರಾಣಿಗಳನ್ನು ಸ್ಥಾನಪಲ್ಲಟಗೊಳಿಸಿದಾಗ, ಅವುಗಳ ಅನೇಕ ಆಫ್ಘಾನ್ ಮಾಲಿಕರು ಅವುಗಳನ್ನು ಕೊಲ್ಲುವುದಕ್ಕೆ ಬದಲಾಗಿ, ಕಾಡುಗಳಲ್ಲಿ ಬಿಟ್ಟುಬಿಟ್ಟರು. ಆ ಒಂಟೆಗಳು ಮಧ್ಯ ಆಸ್ಟ್ರೇಲಿಯದ ಒಣಭೂಮಿಯಲ್ಲಿ ಏಳಿಗೆಹೊಂದಿ, ಇಂದು 2,00,000ದಷ್ಟು ಹೆಚ್ಚು ಒಂಟೆಗಳು ಅಲ್ಲಿ ಕಂಡುಬಂದಿವೆ. ಒಂಟೆಗಳು ಅತ್ಯಮೂಲ್ಯ ರಾಷ್ಟ್ರೀಯ ಆಸ್ತಿಯಾಗಸಾಧ್ಯವಿದೆ ಎಂದು ಈಗ ಕೆಲವು ಜನರು ನಂಬುತ್ತಾರೆಂದು ದಿ ಆಸ್ಟ್ರೇಲಿಯನ್ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. ಈಗಾಗಲೇ ಒಂಟೆ ಮಾಂಸವು ಪರೀಕ್ಷೆಗಾಗಿ ಬಳಕೆದಾರರಿಗೆ ಲಭ್ಯಗೊಳಿಸಲ್ಪಟ್ಟಿದೆ ಮತ್ತು ದನದ ಮಾಂಸದಷ್ಟು ಎಳಸಾಗಿದ್ದು, ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆಯೆಂದು ಹೇಳಲಾಗುತ್ತದೆ. ಒಂಟೆಯ ಇತರ ಉತ್ಪನ್ನಗಳಲ್ಲಿ, ಚರ್ಮ, ಹಾಲು, ಉಣ್ಣೆ, ಮತ್ತು ಸೋಪು ಹಾಗೂ ಕಾಂತಿವರ್ಧಕಗಳಲ್ಲಿನ ಉಪಯೋಗಕ್ಕಾಗಿರುವ ಕೊಬ್ಬು ಸೇರಿದೆ. ಜೀವಂತ ಒಂಟೆಗಳು ಸಹ ಬೇಡಿಕೆಯಲ್ಲಿವೆ. ಮಧ್ಯ ಆಸ್ಟ್ರೇಲಿಯದ ಒಂಟೆ ಸಂಸ್ಥೆಯ ಪೀಟರ್ ಸೈಡಲ್‌ರಿಗನುಸಾರ, “ಅನೇಕ ಅಂತಾರಾಷ್ಟ್ರೀಯ ಪ್ರಾಣಿಸಂಗ್ರಹಾಲಯಗಳು ಹಾಗೂ ಪ್ರವಾಸಿ ಉದ್ಯಾನವನಗಳು ಆಸ್ಟ್ರೇಲಿಯದ ಒಂಟೆಗಳನ್ನು ಪಡೆದುಕೊಳ್ಳಲು ಬಯಸುತ್ತಿವೆ, ಏಕೆಂದರೆ ನಮ್ಮ ಬಳಿ ರೋಗರಹಿತ ಮಂದೆಯಿದೆ.”
ಆರ್ಸನಿಕ್ ವಿಷಪರಿಣಾಮ
“ಬಾಂಗ್ಲಾದೇಶ್‌ನ ಸುಮಾರು 1.5 ಕೋಟಿ ಜನರು ಹಾಗೂ ಕಲ್ಕತ್ತವನ್ನೂ ಒಳಗೊಂಡು ವೆಸ್ಟ್ ಬೆಂಗಾಲ್‌ನ 3 ಕೋಟಿ ಜನರು, ಆರ್ಸನಿಕ್ ವಿಷಪರಿಣಾಮಕ್ಕೆ ಒಡ್ಡಲ್ಪಡುತ್ತಾರೆ” ಎಂದು ದ ಟೈಮ್ಸ್ ಆಫ್ ಇಂಡಿಯ ವರದಿಸುತ್ತದೆ. ಸಮಸ್ಯೆಯೇನೆಂದರೆ, ಹಸಿರು ಕ್ರಾಂತಿಯ ಅನಿರೀಕ್ಷಿತ ಉಪಉತ್ಪನ್ನವೇ. ಬೆಳೆಗಳ ಕೃಷಿಗಾಗಿ ಆಳವಾದ ಬಾವಿಗಳು ತೋಡಲ್ಪಟ್ಟಾಗ, ಭೂಮಿಯಲ್ಲಿ ಸ್ವಾಭಾವಿಕವಾಗಿಯೇ ಭದ್ರವಾಗಿ ಹೂತುಹೋಗಿರುವ ಆರ್ಸನಿಕ್, ನೀರಿನಲ್ಲಿ ಮೇಲಕ್ಕೆ ತರಲ್ಪಟ್ಟಿತು, ಮತ್ತು ಕಾಲಕ್ರಮೇಣ ಕುಡಿಯಲಿಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಬಾವಿಗಳಲ್ಲಿ ಸ್ರವಿಸಿತು. ಅಮೆರಿಕದ ಕಾಲರಾಡೊ ವಿಶ್ವವಿದ್ಯಾನಿಲಯದ ಪರಿಸರ ಪರಿಣತರಾದ ವಿಲಾರ್ಡ್ ಚಾಪಲ್ ಅವರು, ತೊಂದರೆಗೀಡಾದ ಕ್ಷೇತ್ರಗಳನ್ನು ಇತ್ತೀಚೆಗೆ ಸಂದರ್ಶಿಸಿದರು ಮತ್ತು ಆ ಸಮಸ್ಯೆಯನ್ನು “ಲೋಕದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ವಿಷಪ್ರಯೋಗದ ವಿದ್ಯಮಾನ” ಎಂದು ವರ್ಣಿಸಿದರು. ಈಗಾಗಲೇ 2,00,000ಕ್ಕಿಂತಲೂ ಹೆಚ್ಚು ಜನರು, ಆರ್ಸನಿಕ್ ವಿಷಪರಿಣಾಮದ ಒಂದು ಸೂಚನೆಯಾಗಿರುವ ಚರ್ಮ ವಿಕಾರಗಳಿಂದ ಬಾಧಿತರಾಗಿದ್ದಾರೆ. “(ಹಸಿರು ಕ್ರಾಂತಿ)ಯ ಮೂಲಕ ನಾವು ಹಸಿವಿನ ಸಮಸ್ಯೆಯನ್ನು ಬಗೆಹರಿಸಿ, ಈ ಕಾರ್ಯವಿಧಾನದಲ್ಲಿ ಹೆಚ್ಚು ದುರವಸ್ಥೆಯನ್ನು ಉಂಟುಮಾಡಿರುವಂತೆ ತೋರುತ್ತದೆ” ಎಂದು, ಬಾಂಗ್ಲಾದೇಶ್‌ನ ಸರಕಾರಿ ಅಧಿಕಾರಿಯಾದ ಈಶಾಕ್ ಆಲಿ ಹೇಳಿದರು.
ದಿವಾಳಿತನವು ಸರ್ವಸಾಮಾನ್ಯವಾಗುತ್ತಿದೆ
1996ರಲ್ಲಿ “ದಾಖಲಿಸಲ್ಪಟ್ಟಿರುವ 12 ಲಕ್ಷ ಅಮೆರಿಕನರು ಅಧಿಕೃತವಾಗಿ ದಿವಾಳಿಗಳೆಂದು ಘೋಷಿಸಲ್ಪಟ್ಟಿದ್ದು, 1994ಕ್ಕಿಂತ 44 ಪ್ರತಿಶತ ಏರಿಕೆಯಾಗಿದೆ” ಎಂದು ನ್ಯೂಸ್‌ವೀಕ್ ಪತ್ರಿಕೆಯು ಹೇಳುತ್ತದೆ. “ದಿವಾಳಿತನವು ಎಷ್ಟು ಸರ್ವಸಾಮಾನ್ಯವಾಗಿದೆಯೆಂದರೆ, ಅದು ತನ್ನ ಕಳಂಕವನ್ನೇ ಕಳೆದುಕೊಂಡಿದೆ.” ದಿವಾಳಿತನಗಳಲ್ಲಿನ ಏರಿಕೆಗೆ ಯಾವುದು ಕಾರಣವಾಗಿದೆ? ಒಂದು ಕಾರಣವು, “ದಿವಾಳಿತನದ ವೃದ್ಧಿಯಾಗುತ್ತಿರುವ ಸಮ್ಮತಿಯನ್ನು ಕೇವಲ ಇನ್ನೊಂದು ಜೀವನ ಶೈಲಿಯಾಗಿ ಆಯ್ಕೆಮಾಡುವುದೇ ಆಗಿದೆ” ಎಂದು ನ್ಯೂಸ್‌ವೀಕ್ ಹೇಳುತ್ತದೆ. “ಮನೋಭಾವದಲ್ಲಿನ ಬದಲಾವಣೆಯು ದಿವಾಳಿತನದ ದುರುಪಯೋಗಕ್ಕೆ ಮುನ್ನಡಿಸುತ್ತಿದೆಯೆಂದು ಸಾಲಕೊಡುವವರು ಹೇಳುತ್ತಾರೆ: ದಿವಾಳಿತನಕ್ಕಾಗಿ ಫೈಲ್‌ಮಾಡಿರುವವರಲ್ಲಿ 45 ಪ್ರತಿಶತ ಮಂದಿ ತಮ್ಮ ಸಾಲದಲ್ಲಿ ಹೆಚ್ಚಿನದ್ದನ್ನು ಹಿಂದಿರುಗಿ ಕೊಡಸಾಧ್ಯವಿತ್ತು ಎಂದು ಒಂದು ಅಧ್ಯಯನವು ಹೇಳುತ್ತದೆ.” ಆದರೆ ತಾವು ಕೊಡಬೇಕಾಗಿರುವ ಸಾಲವನ್ನು ಹಿಂದಿರುಗಿ ಕೊಡುವ ಒಂದು ಅಪೇಕ್ಷೆಯನ್ನು ತೋರಿಸುವ ಮತ್ತು ನಾಚಿಕೆಪಡುವ ಬದಲು, ಅನೇಕರು ‘ನನ್ನ ಸಾಲಗಳೆಲ್ಲವನ್ನೂ ರದ್ದುಗೊಳಿಸಿ, ಪುನಃ ಹೊಸದಾಗಿ ಆರಂಭಿಸುವ ಅಗತ್ಯವಿದೆ’ ಎಂದಷ್ಟೇ ಹೇಳುತ್ತಿದ್ದಾರೆ. ಹೆಚ್ಚೆಚ್ಚು ವ್ಯಕ್ತಿಗಳು ಹಾಗೂ ಸಂಸ್ಥೆಗಳು ದಿವಾಳಿತನದ ಮಾರ್ಗವನ್ನು ಹಿಡಿಯುತ್ತಿವೆ, ಮತ್ತು “ನಿಮ್ಮ ಸಾಲದ ಸಮಸ್ಯೆಗಳನ್ನು ಬೇಗನೆ ಮತ್ತು ಸುಲಭವಾಗಿ ಬಗೆಹರಿಸಿ!!” ಎಂಬ ವಕೀಲರ ಜಾಹೀರಾತುಗಳಿಂದಲೂ ಅವರು ಪ್ರಭಾವಿಸಲ್ಪಡುತ್ತಿದ್ದಾರೆ. ಆರ್ಥಿಕ ಉಚ್ಛ್ರಾಯ ಸ್ಥಿತಿಯ ಸಮಯದಲ್ಲಿ ದಿವಾಳಿತನದ ಸಂಖ್ಯೆಗಳು ಏರುತ್ತಾ ಹೋಗುವಾಗ, ಸ್ಟಾಕ್ ಮಾರ್ಕೆಟ್ ಕುಸಿತವಾಗುತ್ತಿದ್ದಲ್ಲಿ ಅಥವಾ ಆರ್ಥಿಕ ಹಿನ್ನಡೆಯಾಗುತ್ತಿದ್ದಲ್ಲಿ ಏನು ಸಂಭವಿಸಬಹುದು ಎಂಬುದರ ಕುರಿತು ಆಲೋಚಿಸಲು ಪರಿಣತರು ಭಯದಿಂದ ನಡುಗುತ್ತಾರೆ.
ಉದ್ಯೋಗಸ್ಥೆಯರಾದ ತಾಯಂದಿರು
“1990ಗಳ ಮಧ್ಯ ಸಮಯದಷ್ಟಕ್ಕೆ, ಶಾಲಾವಯಸ್ಸಿಗಿಂತಲೂ ಚಿಕ್ಕ ಪ್ರಾಯದ ಮಕ್ಕಳಿರುವ [ಅಮೆರಿಕದ] ಮಹಿಳೆಯರಲ್ಲಿ 65% ಮಂದಿ ಮತ್ತು ಶಾಲಾವಯಸ್ಸಿನ ಮಕ್ಕಳಿರುವ ಮಹಿಳೆಯರಲ್ಲಿ 77% ಮಂದಿ, ಉದ್ಯೋಗ ಮಾಡುತ್ತಿರುವರು” ಎಂದು, ಉದ್ಯೋಗಸ್ಥೆಯರಾದ ಮಹಿಳೆಯರ ರಾಷ್ಟ್ರೀಯ ಸಂಘವು 1991ರಲ್ಲಿ ಅಂದಾಜುಮಾಡಿತು. ಅವರ ಭವಿಷ್ಯನುಡಿಯು ಎಷ್ಟು ನಿಖರವಾಗಿತ್ತು? ಯು.ಎಸ್. ಜನಗಣತಿ ಇಲಾಖೆಗನುಸಾರ, 1996ರಲ್ಲಿ, ಐದು ವರ್ಷಗಳಿಗಿಂತಲೂ ಕಡಿಮೆ ಪ್ರಾಯದ ಮಕ್ಕಳಿರುವ 63 ಪ್ರತಿಶತ ಮಹಿಳೆಯರು ಉದ್ಯೋಗದಲ್ಲಿದ್ದರು ಎಂದು ದ ವಾಷಿಂಗ್‌ಟನ್ ಪೋಸ್ಟ್ ವರದಿಸುತ್ತದೆ. ಶಾಲಾವಯಸ್ಸಿನ ಮಕ್ಕಳಿರುವ ಮಹಿಳೆಯರಲ್ಲಿ 78 ಪ್ರತಿಶತ ಮಂದಿ ನೌಕರಿಮಾಡುವ ತಾಯಂದಿರಾಗಿದ್ದರು. ಯೂರೋಪಿನ ಕುರಿತಾಗಿ ಏನು? ಯೂರೋಪಿಯನ್ ಯೂನಿಯನ್‌ನ ಸ್ಟ್ಯಾಟಿಸ್ಟಿಕಲ್ ಆಫೀಸಿನಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯ ಮೇಲಾಧಾರಿಸಿ, 1995ರಲ್ಲಿ ಯೂರೋಪಿಯನ್ ದೇಶಗಳಲ್ಲಿನ “5ರಿಂದ 16 ವರ್ಷಪ್ರಾಯದ ಮಕ್ಕಳಿರುವ ಉದ್ಯೋಗಸ್ಥೆಯರಾದ ಮಹಿಳೆಯರ ಪ್ರಮಾಣವು,” ಪೋರ್ಚುಗಲ್‌ನಲ್ಲಿ 69, ಆಸ್ಟ್ರೀಯದಲ್ಲಿ 67, ಫ್ರಾನ್ಸ್‌ನಲ್ಲಿ 63, ಫಿನ್ಲೆಂಡ್‌ನಲ್ಲಿ 63, ಬೆಲ್ಜಿಯಮ್‌ನಲ್ಲಿ 62, ಬ್ರಿಟನ್‌ನಲ್ಲಿ 59, ಜರ್ಮನಿಯಲ್ಲಿ 57, ನೆದರ್ಲೆಂಡ್ಸ್‌ನಲ್ಲಿ 51, ಗ್ರೀಸ್‌ನಲ್ಲಿ 47, ಲಕ್ಸಂಬರ್ಗ್‌ನಲ್ಲಿ 45, ಇಟಲಿಯಲ್ಲಿ 43, ಐರ್ಲಂಡ್‌ನಲ್ಲಿ 39, ಮತ್ತು ಸ್ಪೆಯಿನ್‌ನಲ್ಲಿ 36 ಪ್ರತಿಶತವಾಗಿತ್ತು.
ವಿಧ್ವಂಸಕರವಾದ ಮೀನುಗಾರಿಕೆಯ ರೀತಿಗಳು
ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವ ಮೀನುಗಳ ಹುಡುಕಾಟದಲ್ಲಿ, ಮೀನುಗಾರಿಕೆಯ ವಾಣಿಜ್ಯ ದೋಣಿ ತಂಡಗಳು, ಮಹಾಸಾಗರದ ತಳಭಾಗವನ್ನು ಶೋಧಿಸುವ ಉಪಕರಣಕ್ಕಾಗಿ ಹಣವನ್ನು ಒಟ್ಟುಗೂಡಿಸುತ್ತಿವೆ. ಈ ಹಿಂದೆ ಅಲಕ್ಷಿಸಲ್ಪಟ್ಟಿದ್ದಂತಹ ಜಾತಿಯ ಪ್ರಾಣಿಗಳನ್ನು ತೋಡಿ ತೆಗೆಯಲಿಕ್ಕಾಗಿ, ಮೊಬೈಲ್ ಗೇರ್ ಎಂದು ಪ್ರಸಿದ್ಧವಾಗಿರುವ ಈ ಸಮುದ್ರತಲದ ಸಾಧನವು, 1,200 ಮೀಟರುಗಳಷ್ಟು ಆಳದಲ್ಲಿರುವ ಮಹಾಸಾಗರದ ತಳಭಾಗದುದ್ದಕ್ಕೂ ಎಳೆದೊಯ್ಯಲ್ಪಡುತ್ತದೆ. ಸಮಸ್ಯೆಯೇನೆಂದರೆ, ಈ ಕಾರ್ಯವಿಧಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ “ಟ್ಯೂಬ್ ಜಂತುಗಳು, ಸ್ಪಾಂಜ್‌ಗಳು, ಆ್ಯನಿಮೋನ್ (ಸಮುದ್ರದಲ್ಲಿರುವ ಒಂದು ಪ್ರಾಣಿಜಾತಿ)ಗಳು, ಹೈಡ್ರೋಸೋನ್‌ಗಳು, ಸಮುದ್ರ ಮುಳ್ಳುಹಂದಿಗಳು, ಮತ್ತು ಆಳವಾದ ನೀರಿನಲ್ಲಿರುವ ಇನ್ನಿತರ ಡಸನ್ನುಗಟ್ಟಲೆ ಕಡಲಪ್ರಾಣಿಗಳು” ಹಿಡಿಯಲ್ಪಡುತ್ತವೆ, ಮತ್ತು “ಕಸದೋಪಾದಿ ಎಸೆಯಲ್ಪಡುತ್ತವೆ” ಎಂದು ಸೈಯನ್ಸ್ ನ್ಯೂಸ್ ವರದಿಸುತ್ತದೆ. ಅವುಗಳನ್ನು ನಾಶಮಾಡುವುದು, ಮೀನಿನ ದಾಸ್ತಾನಿನ ಕೊರತೆಯನ್ನು ಹೆಚ್ಚಿಸುತ್ತದೆ. ಏಕೆಂದರೆ ಅವು ಚಿಕ್ಕ ಮೀನುಗಳಿಗೆ ಆಹಾರವನ್ನೂ ವಸತಿಯನ್ನೂ ಒದಗಿಸುತ್ತವೆ. ಮೀನುಗಾರಿಕೆಯ ಈ ವಿಧಾನದಿಂದ ಕಡಲಿನ ಇರುನೆಲೆಯನ್ನು ನಾಶಪಡಿಸುವುದನ್ನು, “ನೆಲದಲ್ಲಿರುವ ಕಾಡುಗಳನ್ನು ಸಂಪೂರ್ಣವಾಗಿ ಕಡಿದುಹಾಕು”ವುದಕ್ಕೆ ಹೋಲಿಸಸಾಧ್ಯವಿದೆ ಎಂದು, ಅಮೆರಿಕದ ವಾಷಿಂಗ್‌ಟನ್‌ನ ಮೆರೈನ್ ಕನ್‌ಸರ್‌ವೇಷನ್ ಬಯಾಲಜಿ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾದ ಈಲಿಯಟ್ ನಾರ್ಸ್ ಹೇಳುತ್ತಾರೆ.
ಜಾಗರೂಕ ನಕಲುಗಾರರು
ಬೈಬಲಿನಲ್ಲಿ ಗ್ರೀಕ್ ಶಾಸ್ತ್ರವಚನಗಳನ್ನು ರಚಿಸಿರುವ ಗ್ರಂಥಪಾಠಗಳು, ಸೂಕ್ಷ್ಮವಿವರಗಳೊಂದಿಗೆ ನಕಲುಮಾಡಲ್ಪಟ್ಟು, ಬಹಳ ಜಾಗರೂಕತೆಯಿಂದ ಒಪ್ಪಿಸಲ್ಪಟ್ಟಿವೆ ಎಂದು, ಜರ್ಮನಿಯ ಮೂನ್‌ಸ್ಟರ್‌ನಲ್ಲಿರುವ ಇನ್‌ಸ್ಟಿಟ್ಯೂಟ್ ಫಾರ್ ನ್ಯೂ ಟೆಸ್ಟಮೆಂಟ್ ರೀಸರ್ಚ್‌ನ ಮುಖ್ಯಸ್ಥರಾದ ಡಾ. ಬಾರ್‌ಬಾರಾ ಆಲಾಂಟ್ ಹೇಳುತ್ತಾರೆ. “ತಪ್ಪುಗಳು ಅಥವಾ ದೇವತಾಶಾಸ್ತ್ರದ ಪ್ರೇರಣೆಯಿಂದಾದ ಬದಲಾವಣೆಗಳು ಸಹ ಅಪರೂಪವಾಗಿವೆ” ಎಂದು ವೆಸ್ಟ್‌ಫಾಲಿಶ ನಾಕ್ರಿಕ್ಟನ್ ಎಂಬ ವಾರ್ತಾಪತ್ರಿಕೆಯು ವರದಿಸುತ್ತದೆ. 1959ರಿಂದ ಈ ಸಂಸ್ಥೆಯು, ಮಧ್ಯ ಯುಗಗಳು ಹಾಗೂ ಬಹಳ ಪುರಾತನ ಕಾಲದವುಗಳಾದ, 5,000ಕ್ಕಿಂತಲೂ ಹೆಚ್ಚಿನ ಕೈಬರಹದ ಹಸ್ತಪ್ರತಿಗಳನ್ನು ಪರೀಕ್ಷಿಸಿದೆ. ಈ ಹಸ್ತಪ್ರತಿಗಳಲ್ಲಿ ಸುಮಾರು 90 ಪ್ರತಿಶತ ಹಸ್ತಪ್ರತಿಗಳು, ಮೈಕ್ರೊಫಿಲ್ಮ್‌ಗಳಲ್ಲಿ ರೆಕಾರ್ಡ್ ಮಾಡಲ್ಪಟ್ಟಿವೆ. ತಪ್ಪುಗಳನ್ನು ಮಾಡದಿರಲಿಕ್ಕಾಗಿ ಬೈಬಲ್ ನಕಲುಗಾರರು ಅಷ್ಟೊಂದು ಜಾಗರೂಕತೆಯನ್ನು ಏಕೆ ತೆಗೆದುಕೊಂಡರು? ಏಕೆಂದರೆ ಅವರು “ತಮ್ಮನ್ನು ಅದರ ಲೇಖಕರನ್ನಾಗಿ ಅಲ್ಲ, ಬದಲಾಗಿ ‘ನಕಲುಗಾರ’ರಾಗಿ ಪರಿಗಣಿಸಿಕೊಂಡರು” ಎಂದು ಆ ವಾರ್ತಾಪತ್ರಿಕೆಯು ಹೇಳುತ್ತದೆ.
ಮಕ್ಕಳಿಗಾಗಿ ಪ್ರಾಥಮಿಕ ಬುದ್ಧಿಪ್ರಮಾಣದ ಪರೀಕ್ಷೆಗಳು
ಒಂದು ಶಿಶುವಿನ ಮಿದುಳು, ಜನನ ಮತ್ತು ಮೂರು ವರ್ಷಪ್ರಾಯದ ನಡುವೆ ತನ್ನ ಅತ್ಯಂತ ಪ್ರಮುಖ ವಿಕಸನಾ ಹಂತವನ್ನು ಪಡೆದುಕೊಳ್ಳುತ್ತದೆಂದು, ಮಾನವ ಬುದ್ಧಿಶಕ್ತಿಯನ್ನು ಅಧ್ಯಯನಮಾಡುತ್ತಿರುವ ವಿಜ್ಞಾನಿಗಳು ಈಗ ನಂಬುತ್ತಾರೆ. ಮಾನಸಿಕ ಪ್ರಚೋದನೆಗೆ ಪ್ರತ್ಯುತ್ತರವಾಗಿ, ಈ ಹಂತದಲ್ಲಿ ಮಿದುಳಿನಲ್ಲಿ ಶಾಶ್ವತವಾದ ನರ ಸಂಪರ್ಕಗಳು ಸ್ಥಾಪಿಸಲ್ಪಡುತ್ತವೆ ಎಂದು ಸಹ ಅಭಿಪ್ರಯಿಸಲಾಗಿದೆ. ಹೀಗೆ, ಮಕ್ಕಳು ಸ್ಪರ್ಧಾತ್ಮಕವಾದ ಹಂತವನ್ನು ತಲಪುವಂತೆ ಸಹಾಯ ಮಾಡಲಿಕ್ಕಾಗಿ ಕೆಲವು ಹೆತ್ತವರು, ತಮ್ಮ ಮಕ್ಕಳು ಶಿಶುವಿಹಾರವನ್ನು ಪ್ರವೇಶಿಸುವುದಕ್ಕಿಂತ ಬಹಳಷ್ಟು ಸಮಯ ಮುಂಚೆಯೇ ಅವರಿಗೆ ಬುದ್ಧಿಪ್ರಮಾಣದ ಪರೀಕ್ಷೆಗಳನ್ನು ಕೊಡಲು ಆರಂಭಿಸಿದ್ದಾರೆಂದು ಮಾಡರ್‌ನ್ ಮೆಚ್ಯೂರಿಟಿ ಎಂಬ ಪತ್ರಿಕೆಯು ವರದಿಸುತ್ತದೆ. ಹಾಗಿದ್ದರೂ, ಬೋಸ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿರುವ ಮಕ್ಕಳ ವೈದ್ಯಕೀಯ ಶಾಸ್ತ್ರದ ಇಲಾಖೆಯ ಅಧ್ಯಕ್ಷರಾಗಿರುವ ಡಾ. ಬ್ಯಾರಿ ಟ್ಸೂಕ್‌ರ್‌ಮನ್ ಅವರು, ಒಂದು “ಅತ್ಯುತ್ಕೃಷ್ಟವಾದ ಮಗು”ವನ್ನಾಗಿ ತಯಾರಿಸುವ ಪ್ರಯತ್ನದಲ್ಲಿ, “ತಮ್ಮ ಮಗುವನ್ನು ಸತತವಾಗಿ ‘ಪ್ರಚೋದಿಸುವ’ ಒತ್ತಡಕ್ಕೊಳಗಾಗಿರುವ” ಹೆತ್ತವರ ಕುರಿತಾಗಿ ಚಿಂತೆಯನ್ನು ವ್ಯಕ್ತಪಡಿಸಿದರು. ಮಕ್ಕಳ ಮನೋಶಾಸ್ತ್ರದ ಪ್ರೊಫೆಸರರಾದ ರಿಚರ್ಡ್ ವೈನ್‌ಬರ್ಗ್ ಕೂಡಿಸಿದ್ದು: “ತೀರ ಚಿಕ್ಕಪ್ರಾಯದಲ್ಲಿಯೇ ಮಕ್ಕಳಿಗೆ ಸ್ಪರ್ಧಿಸುವಂತೆ ಒತ್ತಾಯಿಸುವುದು ಅನೇಕವೇಳೆ ತದ್ವಿರುದ್ಧವಾದ ಪರಿಣಾಮಗಳನ್ನು ಉಂಟುಮಾಡುತ್ತದೆ. ನಿಮ್ಮ ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಆನಂದಿಸಲಿ.”
ಲೋಕವ್ಯಾಪಕವಾದ ಕಾಡುಕಡಿಯುವಿಕೆ
“ಈ ಭೂಗ್ರಹದ ಮೂರನೇ ಎರಡು ಭಾಗದಷ್ಟು ಕಾಡು ಈಗಾಗಲೇ ನಾಶಗೊಳಿಸಲ್ಪಟ್ಟಿದೆ” ಎಂದು ಸೋರ್ನಲ್ ಡ ಟಾರ್ಡ ವರದಿಸುತ್ತದೆ. ಭೂಮಿಯ ಮೂಲಭೂತವಾದ ಎಂಟು ಕೋಟಿ ಚದರ ಕಿಲೊಮೀಟರುಗಳಷ್ಟು ವನ್ಯ ಕ್ಷೇತ್ರಗಳಲ್ಲಿ, ಕೇವಲ ಮೂರು ಕೋಟಿ ವನ್ಯ ಕ್ಷೇತ್ರವು ಈಗ ಉಳಿದಿದೆ. ಏಷಿಯದ ಮೂಲಭೂತ ಸಸ್ಯಗಳಲ್ಲಿ 88 ಪ್ರತಿಶತದಷ್ಟು ನಾಶಪಡಿಸಲ್ಪಟ್ಟಿರುವುದರಿಂದ, ಏಷಿಯವು ಅತ್ಯಂತ ಹೆಚ್ಚು ಕಾಡುಕಡಿಯಲ್ಪಟ್ಟಿರುವ ಖಂಡವಾಗಿದೆಯೆಂದು, ವರ್ಲ್ಡ್ ವೈಲ್ಡ್‌ಲೈಫ್ ಫಂಡ್ (ಡಬ್ಲ್ಯೂಡಬ್ಲ್ಯೂಎಫ್) ಕಂಡುಕೊಂಡಿದೆ. ಯೂರೋಪಿನಲ್ಲಿ ಆ ಸಂಖ್ಯೆಯು 62 ಪ್ರತಿಶತ, ಆಫ್ರಿಕದಲ್ಲಿ 45 ಪ್ರತಿಶತ, ಲ್ಯಾಟಿನ್ ಅಮೆರಿಕದಲ್ಲಿ 41 ಪ್ರತಿಶತ, ಮತ್ತು ಉತ್ತರ ಅಮೆರಿಕದಲ್ಲಿ 39 ಪ್ರತಿಶತವಾಗಿದೆ. ಲೋಕದ ಅತ್ಯಂತ ದೊಡ್ಡ ಉಷ್ಣವಲಯದ ಮಳೆಕಾಡುಗಳ ಮೂಲಸ್ಥಾನವಾಗಿರುವ ಆ್ಯಮಸೋನಿಯ, ತನ್ನ ಮೂಲ ಕಾಡುಗಳಲ್ಲಿ 85 ಪ್ರತಿಶತಕ್ಕಿಂತಲೂ ಹೆಚ್ಚನ್ನು ಉಳಿಸಿಕೊಂಡಿದೆ. ಡಬ್ಲ್ಯೂಡಬ್ಲ್ಯೂಎಫ್‌ನ ಗೇರೊ ಬಾಟ್‌ಮಾನ್ಯನ್, ಹೀಗೆ ಹೇಳಿರುವುದಾಗಿ ಓ ಎಸ್ಟಾಡೊ ಡ ಸಾವ್ ಪೌಲೂ ವಾರ್ತಾಪತ್ರಿಕೆಯು ಉಲ್ಲೇಖಿಸಿದೆ: “ಇನ್ನಿತರ ಕಾಡುಗಳಲ್ಲಿ ನಡೆಸಲ್ಪಟ್ಟ ತಪ್ಪುಗಳನ್ನು ಪುನರಾವರ್ತಿಸದಿರುವ ಅವಕಾಶವು ಬ್ರೆಸಿಲ್‌ಗೆ ಇದೆ.”
ನಿಕ್ಷೇಪಗಳು ಕದಿಯಲ್ಪಟ್ಟದ್ದು
ಕೆನಡದಿಂದ ಇತ್ತೀಚಿನ ಒಂದು ವರದಿಯು ಪ್ರಕಟಿಸಿದ್ದೇನೆಂದರೆ, “1991ರ ಪರ್ಷಿಯನ್ ಕೊಲ್ಲಿ ಯುದ್ಧದ ಪರಿಣಾಮವಾಗಿ ಕಾರ್ಯತಃ ಸುಲಭಭೇದ್ಯವಾಗಿ ಪರಿಣಮಿಸಿರುವ, ಮೆಸೊಪೊಟೋಮಿಯದ ನಿಕ್ಷೇಪಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಅಂತಾರಾಷ್ಟ್ರೀಯ ದುಷ್ಕೃತ್ಯ
ತಂಡದ ಗುರಿಯಾಗಿದೆ” ಎಂದು ವರ್ಲ್ಡ್ ಪ್ರೆಸ್ ರಿವ್ಯೂ ವರದಿಸುತ್ತದೆ. 1996ರಲ್ಲಿ, ನಡುಹಗಲಿನಲ್ಲೇ ಕಳ್ಳರು ಬ್ಯಾಬಿಲೋನ್ ಮ್ಯೂಸಿಯಮ್‌ನ ಒಳಹೊಕ್ಕಿ, ಬೆಣೆ ಲಿಪಿಯಿಂದ ಕೆತ್ತಲ್ಪಟ್ಟಿದ್ದ ಸಿಲಿಂಡರ್‌ಗಳು ಹಾಗೂ ಶಿಲಾಫಲಕಗಳನ್ನು ಸ್ವಾಧೀನಪಡಿಸಿಕೊಂಡರು. II ನೆಬೂಕದ್ನೆಚ್ಚರನ ಆಳ್ವಿಕೆಯಷ್ಟು ಹಿಂದಿನ ಸಮಯದವುಗಳೆಂದು ಹೇಳಲಾಗುವ ಅಪರೂಪದ ಪುರಾತನ ಅವಶೇಷಗಳು, ಅಂತಾರಾಷ್ಟ್ರೀಯ ಕಲಾ ಮಾರುಕಟ್ಟೆಗಳಲ್ಲಿ 7,35,000 ಡಾಲರ್‌ಗಳಿಗಿಂತಲೂ ಹೆಚ್ಚು ಬೆಲೆಬಾಳುವಂತಹವುಗಳೆಂದು ಅಂದಾಜುಮಾಡಲ್ಪಟ್ಟವು. ಕಳ್ಳರಿಂದ ಗುರಿಯಿಡಲ್ಪಟ್ಟ ಇನ್ನೊಂದು ಕ್ಷೇತ್ರವು, ಆಲ್-ಹಾದರ್‌ನ ಪುರಾತನ ನಗರವಾಗಿದೆ. ಉಳಿದಿರುವ ನಿಕ್ಷೇಪಗಳನ್ನು ಸಂರಕ್ಷಿಸುವ ಪ್ರಯತ್ನದಿಂದ, ಸರಕಾರವು ನಗರದ ಎಲ್ಲ ಬಾಗಿಲುಗಳನ್ನು ಹಾಗೂ ಪ್ರವೇಶಮಾರ್ಗಗಳನ್ನು, ಇಟ್ಟಿಗೆಗಳು ಹಾಗೂ ಗಾರೆತುಂಬಿದ ಗೋಡೆಗಳಿಂದ ಸೀಲ್ ಮಾಡಿಬಿಟ್ಟಿದೆ ಎಂದು ಆ ಪತ್ರಿಕೆಯು ಹೇಳುತ್ತದೆ.