ಯುವ ಜನರು ಪ್ರಶ್ನಿಸುವುದು . . .
ಏಯ್ಡ್ಸ್—ನಾನು ಗಂಡಾಂತರದಲ್ಲಿರುವೆನೊ?
ನ್ಯೂಸ್ವೀಕ್ ಪತ್ರಿಕೆಯು ಹೇಳಿದ್ದೇನಂದರೆ ಆ ಪ್ರಕಟನೆಯು ‘ಲೋಕವನ್ನು ತಲ್ಲಣಗೊಳಿಸಿತು.’ 1991, ನವಂಬರ 7ರಂದು, ಅವನು ಏಯ್ಡ್ಸ್ ಸೋಂಕು ರೋಗದ ಸಾಂಕ್ರಾಮಿಕ ವಿಷದಿಂದ ಬಾಧಿಸಲ್ಪಟ್ಟಿದ್ದಾನೆಂದು, ಅಮೆರಿಕದ ಜನಪ್ರಿಯ ಕ್ರೀಡಾಪಟು ಅರ್ವನ್ “ಮ್ಯಾಜಿಕ್” ಜಾನ್ಸನ್ ವರದಿಗಾರರಿಗೆ ತಿಳಿಸಿದನು. ಈ ಭಯಚಕಿತ ಅಂಗೀಕಾರವನ್ನು ಅನುಸರಿಸಿ, ಏಯ್ಡ್ಸ್ನ ಸಮಾಚಾರದ ತ್ವರಿತ ಸಂಸರ್ಗಗಳು ಟೆಲಿಫೋನ್ ಕರೆಗಳಿಂದ ಕಿಕ್ಕಿರಿದು ತುಂಬಿದವು. ಏಯ್ಡ್ಸ್ನ ಕುರಿತಾದ ಪರೀಕ್ಷೆಗಳನ್ನು ಮಾಡುವ ಕೋರಿಕೆಗಳಿಂದ ಕೆಲವು ಆಸ್ಪತ್ರೆಗಳು ಮುಳುಗಿಸಲ್ಪಟ್ಟಿದ್ದವು. ಕೆಲವು ಜನರು ಅವರ ಸ್ವೇಚ್ಛಾ ಲೈಂಗಿಕ ನಡೆವಳಿಯನ್ನು ಕನಿಷ್ಠ ಪಕ್ಷ ತಾತ್ಕಾಲಿಕವಾಗಿಯಾದರೂ ಕಡಿಮೆಗೊಳಿಸಿದರು.
ಪ್ರಾಯಶಃ ಈ ಪ್ರಕಟನೆಯ ಅತ್ಯಂತ ಮಹತ್ತಾದ ಆಘಾತವು ಯುವಜನರ ಮೇಲಾಗಿತ್ತು. ಒಂದು ವಿಶ್ವವಿದ್ಯಾನಿಲಯದಲ್ಲಿ ಆರೋಗ್ಯ ಸೇವೆಗಳ ನಿರ್ದೇಶಕರು ಹೇಳುವುದು: “ಸ್ಪಲ್ಪ ಕಾಲದ ತನಕ, ವಿದ್ಯಾರ್ಥಿಗಳು ‘ಅದು ಅವನಿಗೆ ಸಂಭವಿಸಿತು, ಅದು ನನಗೂ ಸಂಭವಿಸಬಲ್ಲದು’ ಎಂಬ ವಿಷಯವನ್ನು ಹೃದಯಕ್ಕೆ ತೆಗೆದುಕೊಂಡರು. . . . ಅಧಿಕಾಂಶ ವಿದ್ಯಾರ್ಥಿಗಳಿಗೆ, ಮ್ಯಾಜಿಕ್ ಜಾನ್ಸನ್ನಿಗೆ ಏನು ಸಂಭವಿಸಿತೊ ಅದು ಅವರ ನಡತೆಯಲ್ಲಿ ಅವರು ಬದಲಾವಣೆಗಳನ್ನು ಮಾಡುವಂತೆ ಪ್ರಭಾವವನ್ನು ಹಾಕಲಿಲ್ಲ. ಅವರು ‘ಅದರಿಂದ ತಪ್ಪಿಸಿಕೊಳ್ಳಬಲ್ಲರೆಂದು’ ಅವರು ಇನ್ನೂ ಯೋಚಿಸುತ್ತಾರೆ.”
ನಮ್ಮ ಸಮಯಗಳು “ಅಂಟುರೋಗ”ಗಳಿಂದ ಅಂದರೆ, ಶೀಘ್ರವಾಗಿ ಹರಡುವ ಸಾಂಕ್ರಾಮಿಕ ರೋಗಗಳ ವೈಶಿಷ್ಟ್ಯಗಳಿಂದ ವರ್ಣಿಸಲ್ಪಡುವವೆಂದು ಬೈಬಲ್ ಪ್ರವಾದಿಸಿತ್ತು. (ಲೂಕ 21:11, NW) ನಿಸ್ಸಂದೇಹವಾಗಿ ಏಯ್ಡ್ಸ್ ಒಂದು ಅಂಟುರೋಗವೆಂದು ಕರೆಯಲ್ಪಡಸಾಧ್ಯವಿದೆ. 1981ರಿಂದ 1989ರ ವರೆಗೆ, ಅಮೆರಿಕದಲ್ಲಿ ಪ್ರಥಮ ಬಾರಿಗೆ ಏಯ್ಡ್ಸ್ನ 1,00,000 ರೋಗಿಗಳನ್ನು ಕಂಡುಹಿಡಿಯಲು—ಅದು ಎಂಟು ವರ್ಷಗಳನ್ನು ತೆಗೆದುಕೊಂಡಿತು. ಆದರೆ ದ್ವಿತೀಯ 1,00,000 ರೋಗಿಗಳನ್ನು ವರದಿಸಲು ಅದು ಕೇವಲ ಎರಡು ವರ್ಷಗಳನ್ನು ಮಾತ್ರ ತೆಗೆದುಕೊಂಡಿತು!
ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳಿಗನುಸಾರ, ಈ ವಿಷಾದಕರ ಸಂಖ್ಯಾ ಸಂಗ್ರಹಣವು “ಅಮೆರಿಕದಲ್ಲಿ ತೀವ್ರವಾಗಿ ಅಧಿಕಗೊಳ್ಳುತ್ತಿರುವ [ಏಯ್ಡ್ಸ್] ಸಾಂಕ್ರಾಮಿಕ ರೋಗದ ಪ್ರಮಾಣವನ್ನು ಒತ್ತಿ ಹೇಳುತ್ತದೆ.” ಹಾಗಿದ್ದರೂ, ಭೌಗೋಲಿಕವಾಗಿ ಏಯ್ಡ್ಸ್ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಆಫ್ರಿಕ, ಏಶಿಯ, ಯೂರೋಪ್, ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ಹೆಚ್ಚು ಮರಣ ಮತ್ತು ಕ್ಲೇಶವನ್ನು ಉಂಟುಮಾಡುತ್ತಿದೆ. ಅರ್ಥಗರ್ಭಿತವಾಗಿಯೇ, ಲಾಸ್ ಏಂಜಲೀಸ್ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ. ಮಾರ್ವನ್ ಬೆಲ್ಜರ್ ಏಯ್ಡ್ಸ್ “1990ರುಗಳಲ್ಲಿ ಯುವಜನರನ್ನು ಬಾಧಿಸುತ್ತಿರುವ ಅತ್ಯಂತ ಹೆಚ್ಚು ಭಯಗೊಳಿಸುವ ಸಮಸ್ಯೆ” ಎಂದು ಕರೆಯುತ್ತಾರೆ.
ಅಗೋಚರವಾಗಿ ಹರಡುವ ಅಂಟುರೋಗ
ಈ ವಿಲಕ್ಷಣವಾದ ರೋಗವು ಯಾವುದು, ಮತ್ತು ಅದು ಯಾಕೆ ಅಷ್ಟೊಂದು ಮಾರಕವಾದದ್ದಾಗಿದೆ? ಸೂಕ್ಷ್ಮದರ್ಶಕೀಯ ಕಣವೊಂದು—ಏಚ್ಐವಿ (ಹ್ಯೂಮನ್ ಇಮ್ಯೂನೊಡಿಫಿಷನ್ಸಿ ವೈರಸ್) ಎಂದು ಕರೆಯಲ್ಪಡುವ ಒಂದು ರೋಗಾಣು—ರಕ್ತ ಪ್ರವಾಹವನ್ನು ಅತಿಕ್ರಮಿಸುವಾಗ ಏಯ್ಡ್ಸ್ ಅಭಿವೃದ್ಧಿಗೊಳ್ಳುತ್ತದೆಂದು ವೈದ್ಯರು ನಂಬುತ್ತಾರೆ. ಕೂಡಲೆ ಅಲ್ಲಿ, ಆ ರೋಗಾಣು ದೇಹದ ಬಿಳಿಯ ರಕ್ತ ಕಣಗಳಲ್ಲಿ ನಿರ್ದಿಷ್ಟವಾದ, ಓಮಗ್ರಂಥಿಗಳಿಂದ ಉತ್ಪತ್ತಿಮಾಡಲ್ಪಟ್ಟ ಸಹಾಯಕಾರಿ ಜೀವಕೋಶಗಳ ವಿರುದ್ಧ ಹುಡುಕಾಟ ಮತ್ತು ನಾಶನ ಕಾರ್ಯವನ್ನು ಪ್ರಾರಂಭಿಸುತ್ತದೆ. ರೋಗವನ್ನು ನಿವಾರಿಸಿಕೊಳ್ಳುವಂತೆ ದೇಹಕ್ಕೆ ಸಹಾಯ ಮಾಡುವುದರಲ್ಲಿ ಈ ಜೀವ ಕೋಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಿದ್ದರೂ, ಈ ಏಯ್ಡ್ಸ್ ಸಾಂಕ್ರಾಮಿಕ ವಿಷ ಸೋಂಕು ರಕ್ಷಣಾ ವ್ಯವಸ್ಥೆಯನ್ನು ವಿಪರೀತ ಹಾನಿಗೊಳಪಡಿಸುವ ಮೂಲಕ ಅವುಗಳನ್ನು ನಿರ್ಬಲಗೊಳಿಸುತ್ತದೆ.
ಬಾಧಿತನೊಬ್ಬನಿಗೆ ಅಸ್ವಸ್ಥತೆಯ ಅರಿವಾಗುವ ಮೊದಲು ಪರಿಗಣನೀಯ ಸಮಯವು ಕಳೆದು ಹೋಗಬಹುದು. ಬಹುಶಃ ಕೆಲವರು ಸುಮಾರು ಒಂದು ದಶಕದ ವರೆಗೆ ರೋಗ ಸೂಚಕ ಲಕ್ಷಣಗಳಿಂದ ವಿಮುಕ್ತರಾಗಿರಬಹುದು. ಆದರೆ ಸಕಾಲದಲ್ಲಿ ಫ್ಲೂನಂತಹ ರೋಗ ಲಕ್ಷಣಗಳು ವಿಕಾಸಗೊಳ್ಳುತ್ತವೆ—ದೇಹದ ತೂಕ ಮತ್ತು ರುಚಿಗಳಲ್ಲಿ ಕುಸಿತ, ಜ್ವರ ಮತ್ತು ಭೇದಿ. ಸೋಂಕು ರಕ್ಷಾ ವ್ಯವಸ್ಥೆಯ ಅದರ ವಿಪ್ಲವದ ಕುಸಿತವನ್ನು ಮುಂದುವರಿಸಿದಂತೆ, ವ್ಯಾಧಿಗೆ ಆಹುತಿಯಾದವನ ನಿರೋಧ ಶಕ್ತಿಯು ತಗ್ಗಿಸಲ್ಪಡುವ ಮೂಲಕ ಉಂಟಾದ ಸದವಕಾಶವನ್ನು ಉಪಯೋಗಿಸಿಕೊಳ್ಳುವುದರಿಂದ, ಸಂದರ್ಭೋಚಿತವೆಂದು ಕರೆಯಲ್ಪಡುವ—ನ್ಯುಮೋನಿಯ, ಮಿದುಳಿನ ಉರಿಯೂತ, ಕ್ಷಯ ರೋಗ, ಅಥವಾ ನಿರ್ದಿಷ್ಟ ಕ್ಯಾನ್ಸರ್ಗಳಂತಹ ಅಧಿಕ ಸಂಖ್ಯೆಯ ಸೋಂಕು ರೋಗಗಳಿಗೆ ಆ ವ್ಯಾಧಿಗೆ ಆಹುತಿಯಾದವನು ಸುಲಭವಾಗಿ ಆಕ್ರಮಣಕ್ಕೊಳಗಾಗುತ್ತಾನೆ.
“ಎಲ್ಲಾ ಸಮಯ ನಾನು ಸತತವಾಗಿ ನೋವನ್ನು ಅನುಭವಿಸುತ್ತಿದ್ದೇನೆ,” ಎಂದು 20 ವರ್ಷ ಪ್ರಾಯದ ಏಯ್ಡ್ಸ್ ರೋಗಿಯೊಬ್ಬನು ಹೇಳುತ್ತಾನೆ. ಈ ರೋಗವು ಅವನ ದೊಡ್ಡ ಕರುಳು ಮತ್ತು ಗುದನಾಳದಲ್ಲಿ ಹುಣ್ಣುಗಳನ್ನುಂಟುಮಾಡಿದೆ. ಪೂರ್ತಿ ಅರಳಿದ ಏಯ್ಡ್ಸ್ ಅಂದರೆ ನೋವು ಮತ್ತು ಅಸೌಖ್ಯಕ್ಕಿಂತಲೂ ಹೆಚ್ಚಿನದನ್ನು ಅರ್ಥೈಸುತ್ತದೆ, ಯಾಕಂದರೆ ಕಾರ್ಯತಃ ಆ ವ್ಯಾಧಿಗೆ ಆಹುತಿಯಾದವರೆಲ್ಲರಿಗೆ ಅದು ಮರಣದ ಅರ್ಥದಲ್ಲಿದೆ. 1981ರಿಂದ ಅಮೆರಿಕ ಒಂದರಲ್ಲಿಯೇ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಜನರಲ್ಲಿ ಈ ರೋಗಾಣು ಸಾಂಕ್ರಾಮಿಕವಾಗಿ ಹಬ್ಬಿದೆ. ಈಗಾಗಲೇ 1,60,000ಕ್ಕಿಂತಲೂ ಅಧಿಕ ಜನರು ಮರಣಪಟ್ಟಿದ್ದಾರೆ. 1995ನೇ ವರ್ಷದೊಳಗೆ, ಸಾವುಗಳ ಸಂಖ್ಯೆಯು ಇಮ್ಮಡಿಯಾಗುವುದೆಂದು ಪರಿಣತರು ಭವಿಷ್ಯ ನುಡಿಯುತ್ತಾರೆ. ಪ್ರಸ್ತುತದಲ್ಲಿ ಏಯ್ಡ್ಸ್ಗೆ ಯಾವುದೇ ತಿಳಿದಿರುವ ಚಿಕಿತ್ಸೆಯೂ ಕಂಡುಕೊಳ್ಳಲ್ಪಟ್ಟಿಲ್ಲ.
ಗಂಡಾಂತರದಲ್ಲಿರುವ ಯುವಜನರು
ಇಲ್ಲಿಯ ವರೆಗೆ, ವರದಿಮಾಡಲ್ಪಟ್ಟ ಏಯ್ಡ್ಸ್ ರೋಗಿಗಳಲ್ಲಿ ಒಂದು ಅತ್ಯಲ್ಪ ಪ್ರತಿಶತ ಮಾತ್ರ—ಅಮೆರಿಕದಲ್ಲಿ 1 ಪ್ರತಿಶತಕ್ಕಿಂತಲೂ ಕಡಿಮೆ—ಹದಿವಯಸ್ಕರನ್ನು ಒಳಗೊಂಡಿದೆ. ಆದುದರಿಂದ, ಈ ರೋಗದಿಂದ ಮರಣಪಟ್ಟಂತಹ ಯಾವುದೇ ಯುವಜನರನ್ನು ನೀವು ವೈಯಕ್ತಿಕವಾಗಿ ತಿಳಿಯದೇ ಇರಬಹುದು. ಯುವಜನರು ಅಪಾಯಕ್ಕೆ ಒಳಗಾಗಿಲ್ಲವೆಂದು ಇದು ಅರ್ಥೈಸುವುದಿಲ್ಲ! ಅಮೆರಿಕದಲ್ಲಿರುವ ಎಲ್ಲಾ ಏಯ್ಡ್ಸ್ ವ್ಯಾಧಿಗೆ ಆಹುತಿಯಾದವರಲ್ಲಿ ಸುಮಾರು ಐದನೇ ಒಂದು ಭಾಗ ರೋಗಿಗಳು ತಮ್ಮ 20ರುಗಳಲ್ಲಿದ್ದಾರೆ. ರೋಗ ಸೂಚಕ ಲಕ್ಷಣಗಳು ಸ್ಪಷ್ಟವಾಗಿಗಿ ಗೋಚರವಾಗಲು ಅನೇಕ ವರ್ಷಗಳನ್ನು ತೆಗೆದುಕೊಳ್ಳುವುದರಿಂದ, ಇವರಲ್ಲಿ ಅಧಿಕಾಂಶ ವ್ಯಕ್ತಿಗಳು ಪ್ರಾಯಶಃ ಹೆಚ್ಚಾಗಿ ಅವರು ಹದಿಪ್ರಾಯದಲ್ಲಿರುವಾಗಲೆ ಈ ರೋಗದಿಂದ ಬಾಧಿಸಲ್ಪಟ್ಟಿರುತ್ತಾರೆ. ಒಂದು ವೇಳೆ ಪ್ರಚಲಿತ ಪ್ರವೃತ್ತಿಗಳು ಮುಂದುವರಿಯುವುದಾದರೆ, ಸಾವಿರಾರು ಅಧಿಕ ಯುವಜನರು ಏಯ್ಡ್ಸ್ ರೋಗಿಗಳಾಗಿ ಪರಿಣಮಿಸುವರು.
ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳಿಗನುಸಾರ, ಈ ಪ್ರಾಣ ಘಾತುಕ ಸಾಂಕ್ರಾಮಿಕ ವಿಷ “ರೋಗದಿಂದ ಬಾಧಿತರಾದ ಜನರ ರಕ್ತ, ವೀರ್ಯ, ಮತ್ತು ಯೋನಿಯ ಸ್ರಾವಗಳಲ್ಲಿ” ಅಡಗಿಕೊಂಡಿರುತ್ತದೆ. ಆದುದರಿಂದ “ಬಾಧಿತನಾದ ಒಬ್ಬ ವ್ಯಕ್ತಿಯೊಂದಿಗೆ—ಯೋನಿ, ಗುದದ್ವಾರ, ಅಥವಾ ಬಾಯಿಯ—ಲೈಂಗಿಕ ಸಂಪರ್ಕ ಮಾಡುವ” ಮೂಲಕ ಏಚ್ಐವಿಯು ಸಾಗಿಸಲ್ಪಡುತ್ತದೆ. ಅಧಿಕಾಂಶ ಮಂದಿ ಈ ವಿಧಾನದಿಂದ ವ್ಯಾಧಿಯನ್ನು ಅಂಟಿಸಿಕೊಂಡಿರುತ್ತಾರೆ. “ಈ ರೋಗದಿಂದ ಬಾಧಿತನಾದ ವ್ಯಕ್ತಿಯೊಬ್ಬನಿಗೆ ಅಥವಾ ವ್ಯಕ್ತಿಯೊಬ್ಬನಿಂದ ಉಪಯೋಗಿಸಲ್ಪಟ್ಟ ಒಂದು ಸೂಜಿ ಅಥವಾ ಸಿರಿಂಜನ್ನು ಉಪಯೋಗಿಸುವ ಅಥವಾ ಒಳತೂರಿಸುವ” ಮೂಲಕ ಕೂಡ ಏಯ್ಡ್ಸ್ ಹರಡಸಾಧ್ಯವಿದೆ. ಇನ್ನೂ ಹೆಚ್ಚಾಗಿ, ಏಚ್ಐವಿಯಿಂದ ಕಳಂಕಿತರಾಗಿದವ್ದರಿಂದ “ರಕ್ತಪೂರಣಗಳನ್ನು ಪಡೆದುಕೊಳ್ಳುವ” ಮೂಲಕ ಕೆಲವು ಜನರು ಸೋಂಕು ಹೊಂದಿದ್ದಾರೆ.—ಏಚ್ಐವಿ ಸ್ವಯಂ ಸಲಹೆ ಮತ್ತು ಶೋಧನೆಗಳು: ಸತ್ಯಾಂಶಗಳು, ವಿವಾದಾಂಶಗಳು, ಮತ್ತು ಉತ್ತರಗಳು (ವಾಲಂಟರಿ ಏಚ್ಐವಿ ಕೌನ್ಸಲಿಂಗ್ ಆ್ಯಂಡ್ ಟೆಸ್ಟಿಂಗ್: ಫ್ಯಾಕ್ಟ್ಸ್, ಇಷ್ಯೂಸ್, ಆ್ಯಂಡ್ ಆನ್ಸರ್ಸ್)
ಪರಿಣಾಮವಾಗಿ ಅನೇಕ ಯುವಜನರು ಗಂಡಾಂತರದಲ್ಲಿದ್ದಾರೆ. ಗಾಬರಿಗೊಳಿಸುವ ಸಂಖ್ಯೆಗಳಲ್ಲಿ ಯುವಜನರು (ಅಮೆರಿಕದಲ್ಲಿ 60 ಪ್ರತಿಶತದಷ್ಟು ಎಂದು ಕೆಲವರನ್ನುತ್ತಾರೆ) ಕಾನೂನು ವಿರುದ್ಧ ಅಮಲೌಷಧಗಳನ್ನು ಪ್ರಾಯೋಗಿಕವಾಗಿ ಉಪಯೋಗಿಸಿದ್ದಾರೆ. ಇವುಗಳಲ್ಲಿ ಕೆಲವು ಅಮಲೌಷಧಗಳನ್ನು ಚುಚ್ಚುಮದ್ದಿನಿಂದ ಒಳಹೊಗಿಸುವುದರಿಂದ, ಒಂದು ಕಲುಷಿತಗೊಂಡ ಸೂಜಿಯ ಮೂಲಕ ಹರಡುವ ರೋಗದ ಅಪಾಯವು ಇನ್ನೂ ಅಧಿಕವಾಗಿರುತ್ತದೆ. ಅಮೆರಿಕದ ಒಂದು ಸಮೀಕ್ಷೆಗನುಸಾರ, ಪ್ರೌಢ ಶಾಲೆ (ಮಾಧ್ಯಮಿಕ ಶಾಲೆ)ಯವರಲ್ಲಿ 82 ಪ್ರತಿಶತ ವಿದ್ಯಾರ್ಥಿಗಳು ಮದ್ಯ ಪಾನೀಯಗಳನ್ನು ಉಪಯೋಗಿಸಿದ್ದಾರೆ, ಸುಮಾರು 50 ಪ್ರತಿಶತ ವಿದ್ಯಾರ್ಥಿಗಳು ಸದ್ಯದಲ್ಲಿ ಹಾಗೆ ಮಾಡುತ್ತಿದ್ದಾರೆ. ಒಂದು ಬಾಟಲಿ ಬಿಯರ್ ಕುಡಿಯುವುದರಿಂದ ನಿಮಗೆ ಏಯ್ಡ್ಸ್ ರೋಗ ತಗಲುವುದಿಲ್ಲ, ಆದರೆ ಅನಂತರ ಅದು ನಿಮ್ಮ ನಿರ್ಣಯವನ್ನು ದುರ್ಬಲಗೊಳಿಸಬಹುದು ಮತ್ತು ನೀವು ಎಲ್ಲಕ್ಕಿಂತಲೂ ಅತ್ಯಂತ ಹೆಚ್ಚು ಅಪಾಯಕರ ನಡವಳಿಕೆಯಲ್ಲಿ—ಸ್ವೇಚ್ಛಾ ಸಂಪರ್ಕ, ಸಲಿಂಗಕಾಮ ಅಥವಾ ವಿರುದ್ಧಲಿಂಗಕಾಮ—ಅಧಿಕ ಸಂಭವನೀಯವಾಗಿ ಒಳಗೂಡುವಂತೆ ಅದು ಮಾಡುವುದು.
ಇಸವಿ 1970ರಲ್ಲಿ 15 ವರ್ಷ ಪ್ರಾಯದ ಹುಡುಗಿಯರಲ್ಲಿ 5 ಪ್ರತಿಶತಕ್ಕಿಂತಲೂ ಕಡಿಮೆ ಮಂದಿ ಲೈಂಗಿಕ ಸಂಭೋಗವನ್ನು ಅನುಭವಿಸಿದ್ದರು. 1988ರಲ್ಲಿ ಆ ಸಂಖ್ಯೆಯು 25 ಪ್ರತಿಶತಕ್ಕೆ ಏರಿತು. ಅಮೆರಿಕದ ಸ್ತ್ರೀಯರಲ್ಲಿ 75 ಪ್ರತಿಶತ ಮತ್ತು ಪುರುಷರಲ್ಲಿ 86 ಪ್ರತಿಶತ, 20 ವರ್ಷ ಪ್ರಾಯಕ್ಕೆ ಮೊದಲೇ ಲೈಂಗಿಕವಾಗಿ ಕ್ರಿಯಾಶೀಲರಾಗಿದ್ದಾರೆಂದು ಸಮೀಕ್ಷೆಗಳು ಸಹ ತೋರಿಸುತ್ತವೆ. ಭಯಗೊಳಿಸುವ ಇನ್ನೊಂದು ಅಂಶವು: ಸುಮಾರು 5 ಹದಿವಯಸ್ಕರಲ್ಲಿ ಒಬ್ಬರು ನಾಲ್ಕು ಜೊತೆಗಾರರಿಗಿಂತಲೂ ಹೆಚ್ಚಿನವರೊಂದಿಗೆ ಲೈಂಗಿಕ ಸಂಭೋಗವನ್ನು ಅನುಭವಿಸಿದ್ದಾರೆ. ಹೌದು, ಅಧಿಕಾಧಿಕ ಯುವಜನರು ವಿವಾಹಕ್ಕೆ ಮುಂಚಿನ ಲೈಂಗಿಕ ಸಂಭೋಗದಲ್ಲಿ ಒಳಗೂಡುತ್ತಿದ್ದಾರೆ, ಮತ್ತು ಇಂದೆಂದಿಗಿಂತಲೂ ಎಳೆಯವರಿರುವಾಗಲೆ ಅವರದರಲ್ಲಿ ಒಳಗೂಡಲು ಆರಂಭಿಸಿದ್ದಾರೆ.
ಬೇರೆ ದೇಶಗಳಲ್ಲಿ ಸನ್ನಿವೇಶದ ಭೀಕರತೆಯು ಕಡಿಮೆಯಾಗಿಲ್ಲ. ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ, ಮುಕ್ಕಾಲು ಭಾಗದಷ್ಟು ಹದಿವಯಸ್ಕರು ವಿವಾಹಕ್ಕೆ ಮುಂಚಿನ ಲೈಂಗಿಕ ಸಂಬಂಧಗಳಲ್ಲಿ ತಮ್ಮನ್ನು ಒಳಗೂಡಿಸಿಕೊಂಡಿದ್ದಾರೆ. ಆಫ್ರಿಕದ ಭೂಭಾಗಗಳಲ್ಲಿ ಏಯ್ಡ್ಸ್ ರೋಗಾಣುವಿನಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಅನೇಕ ಪುರುಷರು ಸಾಮಾನ್ಯವಾಗಿ ಹದಿಪ್ರಾಯದ ಹುಡುಗಿಯರನ್ನು ಲೈಂಗಿಕ ಸಹಭಾಗಿಗಳನ್ನಾಗಿ ಆರಿಸಿಕೊಂಡಿದ್ದಾರೆ. ಫಲಿತಾಂಶವೇನು? ಆಫ್ರಿಕದ ಹದಿಪ್ರಾಯದ ಹುಡುಗಿಯರ ನಡುವೆ ಏಯ್ಡ್ಸ್ ರೋಗಿಗಳ ಸಂಖ್ಯೆಯಲ್ಲಿ ಸ್ಫೋಟನ.
ಈ ವಿನಾಶಕಾರಿ ನಡವಳಿಕೆಯ ಒಲವನ್ನು ನಿಲ್ಲಿಸುವುದರಲ್ಲಿ ಏಯ್ಡ್ಸ್ನ ಹರಡುವಿಕೆಯು ಕೊಂಚವಾದದ್ದನ್ನು ಮಾಡಿದೆ. ಲ್ಯಾಟಿನ್ ಅಮೆರಿಕದ ದೇಶವೊಂದನ್ನು ಪರಿಗಣಿಸಿರಿ. 60 ಪ್ರತಿಶತಕ್ಕಿಂತಲೂ ಹೆಚ್ಚಿನ “ಲೈಂಗಿಕವಾಗಿ ಕ್ರಿಯಾಶೀಲರಾದ ಅವಿವಾಹಿತ ಯುವಜನರು ಏಯ್ಡ್ಸ್ ಸಾಂಕ್ರಾಮಿಕ ವಿಷವನ್ನು ಪಡೆಯಬಹುದಾದ ಒಂದು ಉನ್ನತ ಗಂಡಾಂತರದಲ್ಲಿದ್ದಾರೆ.” ಹಾಗಿದ್ದರೂ, ಅವರು ವೈಯಕ್ತಿಕವಾಗಿ ಗಂಡಾಂತರದಲ್ಲಿದ್ದಾರೆಂಬುದನ್ನು 10 ಪ್ರತಿಶತಕ್ಕಿಂತಲೂ ಕಡಿಮೆ ಮಂದಿ ಭಾವಿಸುತ್ತಾರೆ. ‘ಅದು ನನಗೆ ಸಂಭವಿಸುವುದಿಲ್ಲ’ ಎಂದು ಅವರು ಸ್ವತಃ ಹೇಳಿಕೊಳ್ಳುತ್ತಾರೆ. ಆದರೆ ಈ ದೇಶವು “ಅಮೆರಿಕದಲ್ಲಿರುವ ಏಚ್ಐವಿ ಅಂಟುರೋಗದ ಕುರಿತಾದ ಅತ್ಯುನ್ನತ ಪ್ರಮಾಣಗಳಲ್ಲಿ ಒಂದನ್ನು ಹೊಂದಿದೆ.”—ಅಮೆರಿಕದ ರೋಗ ನಿಯಂತ್ರಣ ಕೇಂದ್ರಗಳು.
ಅದು ಸಂಭವಿಸ ಸಾಧ್ಯವಿದೆ!
ಈ ಏಯ್ಡ್ಸ್ ಸಾಂಕ್ರಾಮಿಕ ರೋಗವು, ಲೈಂಗಿಕ ಅನೈತಿಕತೆಯ “ಅನಂತರದ ಪರಿಣಾಮವು” “ವಿಷದಂತೆ ಕಹಿ”ಯಾದದ್ದಾಗಿದೆ ಎಂಬ ಬೈಬಲಿನ ಎಚ್ಚರಿಕೆಯ ವಾಸ್ತವಿಕ ಸತ್ಯವನ್ನು ಒತ್ತಿ ಹೇಳುತ್ತದೆ. (ಜ್ಞಾನೋಕ್ತಿ 5:3-5; 7:21-23) ನಿಸ್ಸಂದೇಹವಾಗಿ, ಬೈಬಲು ಆತ್ಮಿಕ ಮತ್ತು ಭಾವನಾತ್ಮಕ ನಷ್ಟದ ಕುರಿತು ಪ್ರಥಮವಾಗಿ ನಿರ್ದೇಶಿಸುತ್ತದೆ. ಆದರೆ ಲೈಂಗಿಕ ಅನೈತಿಕತೆಯು ಶಾರೀರಿಕವಾಗಿ ಅಸಂಖ್ಯಾತ ದುಷ್ಪರಿಣಾಮಗಳನ್ನು ಸಹ ಉಂಟುಮಾಡುತ್ತದೆ ಎಂಬುದು ನಮಗೆ ಆಶ್ಚರ್ಯವನ್ನು ಉಂಟುಮಾಡಬಾರದು.
ಆದುದರಿಂದಲೇ ಯುವಜನರು ಏಯ್ಡ್ಸ್ ಮತ್ತು ಇತರ ರತಿ ರವಾನಿತ ರೋಗಗಳನ್ನು ತಗಲಿಸಿಕೊಳ್ಳುವ ಅಪಾಯವನ್ನು ವಾಸ್ತವಿಕವಾಗಿ ಎದುರಿಸುವುದು ಅತ್ಯಾವಶ್ಯಕವಾದದ್ದಾಗಿದೆ. ಏಯ್ಡ್ಸ್ ‘ನನಗೆ ಸಂಭವಿಲಾರದು’ ಎಂಬ ಸ್ವತೃಪ್ತಿಯ ಮನೋಭಾವವು ಪ್ರಾಣ ಘಾತುಕವಾಗಿ ರುಜುವಾಗಬಲ್ಲದು. “ನೀವು ಹದಿನೈದು ಅಥವಾ ಹದಿನಾರು ಅಥವಾ ಇನ್ನೂ ಹದಿನೇಳು, ಹದಿನೆಂಟು, ಹತ್ತೊಂಬತ್ತು, ಅಥವಾ ಇಪ್ಪತ್ತು ವರುಷದವರಿರುವಾಗ, ನೀವು ಹಾನಿ ತಟ್ಟತವರಾಗಿರಲು ಬಯಸುತ್ತೀರಿ,” ಎಂದು ಡೇವಿಡ್ ಎಂಬ ಯೌವನಸ್ಧನೊಬ್ಬನು ಹೇಳಿದನು. ಹಾಗಿದ್ದರೂ, ವಾಸ್ತವಾಂಶಗಳು ಬೇರೆ ರೀತಿಯಾಗಿ ರುಜುವಾಗುತ್ತವೆ. ಡೇವಿಡ್ ತನ್ನ 15ರ ಪ್ರಾಯದಲ್ಲಿ ಏಯ್ಡ್ಸ್ ಸಾಂಕ್ರಾಮಿಕ ವಿಷದಿಂದ ಬಾಧಿತನಾದನು.
ನಿರ್ದಾಕ್ಷಿಣ್ಯವಾಗಿ ಹೇಳುವುದಾದರೆ: ಕಾನೂನು ಬಾಹಿರ ಅಮಲೌಷಧಗಳನ್ನು ನೀವು ಉಪಯೋಗಿಸುತ್ತಿರುವುದಾದರೆ ಅಥವಾ ವಿವಾಹ ಪೂರ್ವ ಸಂಭೋಗದಲ್ಲಿ ಒಳಗೂಡುತ್ತಿರುವುದಾದರೆ, ನೀವು ಗಂಡಾಂತರದಲ್ಲಿದ್ದೀರಿ! ಆದರೂ, ಒಬ್ಬನು “ಸುರಕ್ಷಿತ ಸಂಭೋಗ”ದಲ್ಲಿ ಒಳಗೂಡಸಾಧ್ಯವಿದೆಯೆಂಬ ಹೇಳಿಕೆಯ ಕುರಿತೇನು? ಈ ಸಾಂಕ್ರಾಮಿಕ ರೋಗದಿಂದ ಒಬ್ಬನು ತನ್ನನ್ನು ಕಾಪಾಡಿಕೊಳ್ಳಲು ವ್ಯಾವಹಾರಿಕ ಮಾರ್ಗಗಳು ಅಲ್ಲಿವೆಯೋ? ಈ ಸರಣಿಯಲ್ಲಿರುವ ನಮ್ಮ ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಚರ್ಚಿಸುವುದು. (g93 8/22)
[ಪುಟ 14 ರಲ್ಲಿರುವ ಚೌಕ]
ಇತರ ರತಿ ರವಾನಿತ ರೋಗಗಳು
ಏಯ್ಡ್ಸ್ ವಾರ್ತಾಪತ್ರಿಕೆಗಳ ಶಿರೋನಾಮಗಳನ್ನು ಆಕ್ರಮಿಸಿದೆ. ಆದುದರಿಂದ, ದ ಮೆಡಿಕಲ್ ಪೋಸ್ಟ್ ಎಚ್ಚರಿಸುವುದು: ‘ತಾರುಣ್ಯದ ಸಾಂಕ್ರಾಮಿಕ ರೋಗವಾದ ಎಸ್ಟಿಡಿ [ರತಿ ರವಾನಿತ ರೋಗ]ದ ನಡುವೆ ಕೆನಡ ಇದೆ.’ ಕೆನಡ ಮಾತ್ರವೇ ಅಲ್ಲ. “ಪ್ರತಿ ವರ್ಷ ಅಮೆರಿಕದ 25 ಲಕ್ಷ ಹದಿವಯಸ್ಕರು ಈ ಎಸ್ಟಿಡಿಯಿಂದ ಬಾಧಿಸಲ್ಪಡುತ್ತಿದ್ದಾರೆ,” ಎಂದು ಅಮೆರಿಕದಲ್ಲಿರುವ ಜನಸಂಖ್ಯೆಯ ಆಯ್ಕೆಗಳಿಗಾಗಿರುವ ಕೇಂದ್ರವು ಹೇಳುತ್ತದೆ. “ಒಟ್ಟಂದಾಜಿನಲ್ಲಿ ಲೈಂಗಿಕವಾಗಿ ಕ್ರಿಯಾಶೀಲವಾಗಿರುವ ಪ್ರತಿ ಆರು ಮಂದಿಯಲ್ಲಿ ಒಬ್ಬರು ಮತ್ತು ದೇಶದ ಎಸ್ಟಿಡಿ ರೋಗಿಗಳಲ್ಲಿ ಐದರಲ್ಲಿ ಒಂದು ಭಾಗವನ್ನು ಈ ಸಂಖ್ಯೆಯು ಸೂಚಿಸುತ್ತದೆ.”
ಉದಾಹರಣೆಗೆ, ಉಪದಂಶ ರೋಗ (ಸಿಫಿಲಿಸ್), ಒಂದು ಕಾಲದಲ್ಲಿ ನಿರ್ಮೂಲದ ಪಥದಲ್ಲಿದೆ ಎಂದು ಭಾವಿಸಲ್ಪಟ್ಟಿದ್ದು, ಇತ್ತೀಚಿನ ವರ್ಷಗಳಲ್ಲಿ ಅದು ಪುನರಾಗಮಿಸಿದ್ದು, ಸುಮಾರು ವರದಿಮಾಡಲ್ಪಡುವಷ್ಟು ಸಂಖ್ಯೆಗಳಲ್ಲಿ ಯುವ ಜನರನ್ನು ಆಹುತಿ ತೆಗೆದುಕೊಳ್ಳುತ್ತಿದೆ. ತದ್ರೀತಿಯಲ್ಲಿ, ಮೇಹರೋಗ (ಗಾನೋರಿಯ) ಮತ್ತು ಕಮ್ಲೈಡಿಯ (ಅಮೆರಿಕದಲ್ಲಿ ಅತ್ಯಧಿಕವಾಗಿ ಚಾಲ್ತಿಯಲ್ಲಿರುವ ಎಸ್ಟಿಡಿಗಳು) ರೋಗಗಳು ಅವುಗಳನ್ನು ನಿರ್ಮೂಲ ಮಾಡುವ ಪ್ರಯತ್ನಗಳಿಗೆ ಗಮನಾರ್ಹವಾಗಿ ನಿರೋಧಕಗಳಾಗಿವೆ ಎಂದು ರುಜುಮಾಡಲ್ಪಟ್ಟಿವೆ. ಮತ್ತು ಹರೆಯದವರು ಅತ್ಯಧಿಕ ಪ್ರಮಾಣದಲ್ಲಿ ಬಾಧಿಸಲ್ಪಟ್ಟಿದ್ದಾರೆ. ಚರ್ಮಗಂಟು ರೋಗದಿಂದ ಪೀಡಿತರಾದ ಹದಿವಯಸ್ಕರ ಸಂಖ್ಯೆಯಲ್ಲಿ “ಒಂದು ತೀಕ್ಷೈ ಉಬ್ಬರ”ವನ್ನು ದ ನ್ಯೂ ಯಾರ್ಕ್ ಟೈಮ್ಸ್ ತದ್ರೀತಿಯಲ್ಲಿ ವರದಿಮಾಡುತ್ತದೆ. ಸಾವಿರಗಟ್ಟಲೆ ಯುವಜನರು ಚರ್ಮರೋಗದ ರೋಗಾಣುವನ್ನು ಸಹ ಹೊಂದಿದ್ದಾರೆ. ಸೈಎನ್ಸ್ ನ್ಯೂಸ್ಗನುಸಾರ, “ಜನನಾಂಗಗಳ ಚರ್ಮರೋಗವಿರುವ ಜನರು ಏಯ್ಡ್ಸ್ ರೋಗಕ್ಕೆ ಕಾರಣವಾದ, [ಏಚ್ಐವಿ]ಯಿಂದ ಬಾಧಿಸಲ್ಪಡುವ ಅಧಿಕ ಸಾಧ್ಯತೆಗಳನ್ನು ಹೊಂದಿದ್ದಾರೆ.”
“ಯಾವುದೇ ವಯೋಮಿತಿಗಿಂತಲೂ ಹರೆಯದವರು ಅತ್ಯಧಿಕ ಪ್ರಮಾಣದಲ್ಲಿ ಎಸ್ಟಿಡಿಯಿಂದ ಬಾಧಿತರಾಗಿರುವಾಗ, ಅವರು ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವ ಸಂಭವನೀಯತೆಗಳು ಬಹಳಷ್ಟು ಕಡಿಮೆ. ರೋಗವನ್ನು ಕಂಡುಹಿಡಿಯದೆ ಅಥವಾ ಚಿಕಿತ್ಸೆ ಪಡೆದುಕೊಳ್ಳಲ್ಪಡದೆ ಬಿಡಲ್ಪಟ್ಟಾಗ, ಅಸ್ಥಿಕುಹರ ಉರಿಯೂತ ರೋಗ, ಬಂಜೆತನ, ಗರ್ಭಾಶಯದ ಹೊರಗಿನ ಗರ್ಭಧಾರಣೆ, ಮತ್ತು ಗರ್ಭಕೋಶದ ಕ್ಯಾನ್ಸರ್ಗಳಲ್ಲಿ ಎಸ್ಟಿಡಿಗಳು ಅಧಿಕ ಹಾನಿಯನ್ನುಂಟುಮಾಡುತ್ತದೆ,” ಎಂದು ಜನಸಂಖ್ಯೆಯ ಆಯ್ಕೆಗಳಿಗಾಗಿರುವ ಕೇಂದ್ರವು ಹೇಳುತ್ತದೆ.
[ಪುಟ 12,13 ರಲ್ಲಿರುವ ಚಿತ್ರ ಕೃಪೆ]
ಕಾನೂನು ವಿರುದ್ಧ ಅಮಲೌಷಧಗಳನ್ನು ಸೇವಿಸುವ ಅಥವಾ ಸ್ವೇಚ್ಛಾ ಸಂಭೋಗಗಳಲ್ಲಿ ಒಳಗೂಡುತ್ತಿರುವ ಯಾವನಾದರೂ ಏಯ್ಡ್ಸ್ ರೋಗದಿಂದ ಬಾಧಿತನಾಗುವ ಗಂಭೀರವಾದ ಅಪಾಯವನ್ನು ಎದುರಿಸುತ್ತಾನೆ