ಕೆಂಬೋಡಿಯದಲ್ಲಿನ ಸಾವುಬದುಕಿನಿಂದ ನನ್ನ ದೀರ್ಘ ಪ್ರಯಾಣ
ವಾತನಾ ಮೀಅಸ್ ಅವರಿಂದ ಹೇಳಲ್ಪಟ್ಟಂತೆ
ಅದು ಇಸವಿ 1974 ಆಗಿತ್ತು, ಮತ್ತು ಕೆಂಬೋಡಿಯದಲ್ಲಿ ನಾನು ಕ್ಮರ್ ರೂಸ್ನ ವಿರುದ್ಧ ಹೋರಾಡುತ್ತಾ ಇದ್ದೆ. ಕೆಂಬೋಡಿಯದ ಸೈನ್ಯದಲ್ಲಿ ನಾನೊಬ್ಬ ಆಫೀಸರನಾಗಿದ್ದೆ. ಒಂದು ಹೋರಾಟದಲ್ಲಿ ನಾವು ಒಬ್ಬ ಕ್ಮರ್ ರೂಸ್ನ ಸೈನಿಕನನ್ನು ಸೆರೆಹಿಡಿದೆವು. ಭವಿಷ್ಯತ್ತಿಗಾಗಿ ಪಾಲ್ ಪಾನಿಗಿದ್ದ ಯೋಜನೆಗಳ ಕುರಿತು ಅವನು ನನಗೇನನ್ನು ಹೇಳಿದನೊ, ಅದು ನನ್ನ ಜೀವಿತವನ್ನೇ ಬದಲಾಯಿಸಿ, ಅಕ್ಷರಶಃವಾಗಿಯೂ ಆತ್ಮಿಕವಾಗಿಯೂ ಒಂದು ದೀರ್ಘವಾದ ಪ್ರಯಾಣದಲ್ಲಿ ನನ್ನನ್ನು ತೊಡಗಿಸಿತು.a
ಸಾಹಸ ಕಾರ್ಯಗಳಿಂದ ಕೂಡಿದ ನನ್ನ ದೂರ ಸಂಚಾರದ ಆರಂಭಕ್ಕೆ ನಾನು ನಿಮ್ಮನ್ನು ಕರೆದೊಯ್ಯುವಂತೆ ಅನುಮತಿಸಿರಿ. ನಾನು 1945ರಲ್ಲಿ, ಪನಾಮ್ ಪೆನ್ನಲ್ಲಿ ಹುಟ್ಟಿದೆ. ಅದು ಕ್ಮರ್ ಭಾಷೆಯಲ್ಲಿ, ಕಂಪೂಚಿಯ (ಕೆಂಬೋಡಿಯ) ಎಂದು ಜ್ಞಾತವಾಗಿದೆ. ನನ್ನ ತಾಯಿ ಗುಪ್ತ ಪೊಲೀಸ್ ದಳದಲ್ಲಿ ಒಂದು ಪ್ರಮುಖ ಸ್ಥಾನವನ್ನು ಹೊಂದಿದ್ದರು. ಆ ದೇಶದ ನಾಯಕನಾಗಿದ್ದ, ರಾಜಕುಮಾರ ನಾರಡಮ್ ಸೀಹಾನೂಕ್ಗಾಗಿ ಅವರು ಒಬ್ಬ ವಿಶೇಷ ಏಜೆಂಟ್ ಆಗಿದ್ದರು. ನಾನು ಅವರ ಪಾಲನೆಯ ಕೆಳಗಿದ್ದುದರಿಂದ ಮತ್ತು ಅವರ ಕಾರ್ಯತಖ್ತೆಯು ತೀರ ಕಾರ್ಯಮಗ್ನವಾಗಿದುದರಿಂದ, ಶಿಕ್ಷಣವನ್ನು ಪಡೆದುಕೊಳ್ಳಲಾಗುವಂತೆ ನನ್ನನ್ನು ಒಂದು ಬೌದ್ಧಮತದ ದೇವಾಲಯದಲ್ಲಿ ಬಿಡುವಂತೆ ಅವರು ನಿರ್ಬಂಧಿಸಲ್ಪಟ್ಟರು.
ನನ್ನ ಬೌದ್ಧಮತೀಯ ಹಿನ್ನೆಲೆ
ಮುಖ್ಯ ಬೌದ್ಧ ಸಂನ್ಯಾಸಿಯೊಂದಿಗೆ ನಾನು ವಾಸಿಸಲು ಹೋದಾಗ, ನಾನು ಎಂಟು ವರ್ಷ ಪ್ರಾಯದವನಾಗಿದ್ದೆ. ಆ ವರ್ಷದಿಂದ 1969ರ ವರೆಗೆ, ನಾನು ನನ್ನ ಸಮಯವನ್ನು ದೇವಾಲಯ ಮತ್ತು ಮನೆಯ ನಡುವೆ ಹಂಚಿಕೊಂಡೆ. ನಾನು ಸೇವೆಮಾಡಿದ ಸಂನ್ಯಾಸಿಯು ಚೂನ್ ನ್ಯಾಟ್ ಆಗಿದ್ದನು. ಅವನು ಆ ಸಮಯದಲ್ಲಿ ಕೆಂಬೋಡಿಯದಲ್ಲಿನ ಅತ್ಯುಚ್ಚ ಬೌದ್ಧಮತೀಯ ಅಧಿಕಾರಿಯಾಗಿದ್ದನು. ಸ್ವಲ್ಪ ಸಮಯದ ವರೆಗೆ ನಾನು ಅವನ ಸೆಕ್ರಿಟರಿಯಾಗಿ ಕೆಲಸಮಾಡಿದೆ, ಮತ್ತು “ಮೂರು ಬುಟ್ಟಿಗಳು” (ಟಿಪಿಟಿಕಾ, ಅಥವಾ ಸಂಸ್ಕೃತದಲ್ಲಿ ಟ್ರಿಪಿಟಿಕಾ) ಎಂಬ ಬೌದ್ಧಮತೀಯ ಪವಿತ್ರ ಪುಸ್ತಕವನ್ನು, ಒಂದು ಪ್ರಾಚೀನ ಭಾರತೀಯ ಭಾಷೆಯಿಂದ ಕೆಂಬೋಡಿಯನ್ ಭಾಷೆಗೆ ಭಾಷಾಂತರ ಮಾಡುವುದರಲ್ಲಿ ಅವನಿಗೆ ಸಹಾಯಮಾಡಿದೆ.
1964ರಲ್ಲಿ ನನ್ನನ್ನು ಒಬ್ಬ ಸಂನ್ಯಾಸಿಯಾಗಿ ಸೇರಿಸಿಕೊಳ್ಳಲಾಯಿತು ಮತ್ತು ನಾನು 1969ರ ವರೆಗೆ, ಆ ಸ್ಥಾನದಲ್ಲಿ ಸೇವೆ ಮಾಡಿದೆ. ಈ ಅವಧಿಯಲ್ಲಿ, ಲೋಕದಲ್ಲಿ ಇಷ್ಟೊಂದು ಕಷ್ಟಾನುಭವ ಏಕಿದೆ, ಮತ್ತು ಅದು ಹೇಗೆ ಆರಂಭವಾಯಿತು? ಎಂಬಂತಹ ಅನೇಕ ಪ್ರಶ್ನೆಗಳು ನನ್ನನ್ನು ಕಾಡಿದವು. ಜನರು ತಮ್ಮ ದೇವರುಗಳನ್ನು ಅನೇಕ ರೀತಿಗಳಲ್ಲಿ ಮೆಚ್ಚಿಸಲು ಪ್ರಯತ್ನಿಸುವುದನ್ನು ನಾನು ನೋಡಿದೆ, ಆದರೆ ತಮ್ಮ ದೇವರುಗಳು ತಮ್ಮ ಸಮಸ್ಯೆಗಳನ್ನು ಹೇಗೆ ಬಗೆಹರಿಸಸಾಧ್ಯವಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಬೌದ್ಧ ಬರಹಗಳಲ್ಲಿ ನಾನು ಯಾವುದೇ ತೃಪ್ತಿಕರ ಉತ್ತರವನ್ನು ಕಂಡುಕೊಳ್ಳಸಾಧ್ಯವಿರಲಿಲ್ಲ, ಮತ್ತು ಇತರ ಸಂನ್ಯಾಸಿಗಳಿಗೂ ಹಾಗೆ ಮಾಡಸಾಧ್ಯವಿರಲಿಲ್ಲ. ನಾನೆಷ್ಟು ಆಶಾಭಂಗಗೊಂಡೆನೆಂದರೆ ನಾನು ದೇವಾಲಯವನ್ನು ಬಿಟ್ಟುಬಿಡಲು ನಿರ್ಣಯಿಸಿದೆ ಮತ್ತು ನಾನೊಬ್ಬ ಸಂನ್ಯಾಸಿಯಾಗಿರುವುದನ್ನು ನಿಲ್ಲಿಸಿಬಿಟ್ಟೆ.
ಕೊನೆಗೆ, 1971ರಲ್ಲಿ ನಾನು ಕೆಂಬೋಡಿಯದ ಸೈನ್ಯವನ್ನು ಸೇರಿದೆ. ಸುಮಾರು 1971ರಷ್ಟಕ್ಕೆ ನನ್ನನ್ನು ವಿಯೆಟ್ನಾಮ್ಗೆ ಕಳುಹಿಸಲಾಯಿತು. ಮತ್ತು ನನ್ನ ಶೈಕ್ಷಣಿಕ ಹಿನ್ನಲೆಯ ಕಾರಣದಿಂದ ನನ್ನನ್ನು ಎರಡನೆಯ ಲೆಫ್ಟನೆಂಟ್ ಸ್ಥಾನಕ್ಕೆ ಬಡ್ತಿಮಾಡಿ, ವಿಶೇಷ ಪಡೆಗಳಿಗೆ ನೇಮಿಸಲಾಯಿತು. ನಾವು ಕಮ್ಯೂನಿಸ್ಟ್ ಕ್ಮರ್ ರೂಸ್ ಮತ್ತು ವಿಯೆಟ್ಕಾಂಗ್ ಸೇನೆಗಳ ವಿರುದ್ಧ ಹೋರಾಡುತ್ತಿದ್ದೆವು.
ಕೆಂಬೋಡಿಯದಲ್ಲಿ ಯುದ್ಧ ಮತ್ತು ಬದಲಾವಣೆಗಳು
ನಾನು ಯುದ್ಧದಿಂದ ಕಲ್ಲಾಗಿಸಲ್ಪಟ್ಟ ಒಬ್ಬ ಯೋಧನಾದೆ. ಬಹುಮಟ್ಟಿಗೆ ದಿನನಿತ್ಯವೂ ಮರಣವನ್ನು ನೋಡುವುದು ನನಗೆ ಅಭ್ಯಾಸವಾಗಿಬಿಟ್ಟಿತ್ತು. ನಾನು ವೈಯಕ್ತಿಕವಾಗಿ 157 ಕದನಗಳಲ್ಲಿ ಒಳಗೂಡಿದೆ. ಒಂದು ಸಮಯದಲ್ಲಿ, ಕಾಡಿನ ತೀರ ಒಳಭಾಗದಲ್ಲಿ, ನಾವು ಕ್ಮರ್ ರೂಸ್ ಸೈನ್ಯದಿಂದ ಒಂದು ತಿಂಗಳಿಗಿಂತ ಹೆಚ್ಚು ಸಮಯ ಸುತ್ತುವರಿಯಲ್ಪಟ್ಟಿದ್ದೆವು. 700ಕ್ಕಿಂತಲೂ ಹೆಚ್ಚು ಪುರುಷರು ಸತ್ತರು. ಕೇವಲ 15 ಮಂದಿ ಬದುಕುಳಿದರು—ಅವರಲ್ಲಿ ನಾನೊಬ್ಬನಾಗಿದ್ದೆ, ಮತ್ತು ನಾನು ಗಾಯಗೊಂಡಿದ್ದೆ. ಆದರೆ ನಾನು ಅಲ್ಲಿಂದ ಜೀವಂತವಾಗಿ ಹೊರಬಂದೆ.
ಇನ್ನೊಂದು ಸಂದರ್ಭದಲ್ಲಿ, 1974ರಲ್ಲಿ, ನಾವು ಒಬ್ಬ ಕ್ಮರ್ ರೂಸ್ ಸೈನಿಕನನ್ನು ಸೆರೆಹಿಡಿದೆವು. ನಾನು ಅವನನ್ನು ಪ್ರಶ್ನಿಸಿದಾಗ, ಸೈನ್ಯದಲ್ಲಿರುವವರನ್ನು ಸೇರಿಸಿ, ಎಲ್ಲ ಮಾಜಿ ಸರಕಾರಿ ಅಧಿಕಾರಿಗಳನ್ನು ನಿರ್ನಾಮಮಾಡಲು ಪಾಲ್ ಪಾ ಯೋಜಿಸಿದ್ದನೆಂಬುದಾಗಿ ಮತ್ತು ನಾನು ಎಲ್ಲವನ್ನು ಹಿಂದೆಬಿಟ್ಟು ಓಡಿಹೋಗುವಂತೆ ಅವನು ನನಗೆ ಹೇಳಿದನು. ಅವನು ಹೇಳಿದ್ದು: “ನಿನ್ನ ಹೆಸರನ್ನು ಬದಲಾಯಿಸುತ್ತಾ ಇರು. ನೀನು ಯಾರಾಗಿದ್ದೀ ಎಂದು ಯಾರಿಗೂ ತಿಳಿಯದಿರಲಿ. ಅರಿವಿಲ್ಲದವನೂ ಅಶಿಕ್ಷಿತನಂತೆಯೂ ವರ್ತಿಸು. ನಿನ್ನ ಹಿಂದಿನ ಜೀವಿತದ ಕುರಿತು ಯಾರಿಗೂ ಹೇಳಬೇಡ.” ಮನೆಗೆ ಹಿಂದಿರುಗುವಂತೆ ನಾನು ಅವನನ್ನು ಬಿಡುಗಡೆಮಾಡಿದ ನಂತರ, ಆ ಎಚ್ಚರಿಕೆಯು ನನ್ನ ಮನಸ್ಸಿನಲ್ಲಿ ದೃಢವಾಗಿ ಉಳಿಯಿತು.
ಸೈನಿಕರಾದ ನಾವು ನಮ್ಮ ದೇಶಕ್ಕಾಗಿ ಹೋರಾಡುತ್ತಿದ್ದೇವೆಂದು ನಮಗೆ ಹೇಳಲಾಗಿತ್ತಾದರೂ, ನಾವು ಕೆಂಬೋಡಿಯದವರನ್ನೇ ಕೊಲ್ಲುತ್ತಾ ಇದ್ದೆವು. ಅಧಿಕಾರವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದ ಒಂದು ಕಮ್ಯೂನಿಸ್ಟ್ ಪಕ್ಷವಾದ ಕ್ಮರ್ ರೂಸ್, ನಮ್ಮ ಸ್ವಂತ ಜನರಿಂದ ರಚಿತವಾಗಿತ್ತು. ವಾಸ್ತವದಲ್ಲಿ ಕೆಂಬೋಡಿಯದ 90 ಲಕ್ಷ ನಿವಾಸಿಗಳಲ್ಲಿ ಅಧಿಕಾಂಶ ಮಂದಿ, ಕ್ಮರ್ ಬುಡಕಟ್ಟಿನವರಾಗಿದ್ದರೂ, ಅವರಲ್ಲಿ ಹೆಚ್ಚಿನವರು ಕ್ಮರ್ ರೂಸ್ ಪಕ್ಷಕ್ಕೆ ಸೇರಿದವರಾಗಿರುವುದಿಲ್ಲ. ಇದು ನನಗೆ ಅರ್ಥವಾಗದ ಸಂಗತಿಯಾಗಿತ್ತು. ಬಂದೂಕುಗಳಿಲ್ಲದ ಮತ್ತು ಯುದ್ಧದಲ್ಲಿ ಯಾವುದೇ ಆಸಕ್ತಿಯಿಲ್ಲದಿದ್ದ ಮುಗ್ಧ ರೈತರನ್ನು ನಾವು ಕೊಲ್ಲುತ್ತಿದ್ದೆವು.
ಕದನದಿಂದ ಹಿಂದಿರುಗಿ ಬರುವದು ಯಾವಾಗಲೂ ಒಂದು ಹೃದಯವಿದ್ರಾವಕ ಅನುಭವವಾಗಿರುತ್ತಿತ್ತು. ಹೆಂಡತಿಯರು ಮತ್ತು ಮಕ್ಕಳು, ತಮ್ಮ ಗಂಡ ಅಥವಾ ತಂದೆ ಹಿಂದಿರುಗಿದ್ದಾರೊ ಎಂದು ನೋಡಲು ಕಾತುರದಿಂದ ಕಾಯುತ್ತಾ ಇರುತ್ತಿದ್ದರು. ಅವರಲ್ಲಿ ಅನೇಕರಿಗೆ, ತಮ್ಮ ಕುಟುಂಬದ ಸದಸ್ಯನು ಕೊಲ್ಲಲ್ಪಟ್ಟಿದ್ದಾನೆಂದು ನಾನು ಹೇಳಬೇಕಾಗುತ್ತಿತ್ತು. ಇದೆಲ್ಲದ್ದರಲ್ಲಿ, ಬೌದ್ಧಮತದ ಕುರಿತಾದ ನನ್ನ ತಿಳಿವಳಿಕೆಯು ನನಗೆ ಯಾವುದೇ ಸಾಂತ್ವನವನ್ನು ಒದಗಿಸಲಿಲ್ಲ.
ಕೆಂಬೋಡಿಯದಲ್ಲಿ ವಿಷಯಗಳು ಹೇಗೆ ಬದಲಾದವು ಎಂಬುದನ್ನು ನಾನು ಈಗ ಮರುಜ್ಞಾಪಿಸಿಕೊಳ್ಳುತ್ತೇನೆ. 1970ಕ್ಕಿಂತಲೂ ಮುಂಚೆ, ತುಲನಾತ್ಮಕವಾದ ಶಾಂತಿ ಮತ್ತು ಭದ್ರತೆ ಇತ್ತು. ಹೆಚ್ಚಿನ ಜನರ ಬಳಿ ಬಂದೂಕು ಇರಲಿಲ್ಲ; ಒಂದು ಲೈಸೆನ್ಸ್ ಇಲ್ಲದೆ ಅದನ್ನು ಇಟ್ಟುಕೊಳ್ಳುವುದು ಕಾನೂನುಬಾಹಿರವಾಗಿತ್ತು. ದರೋಡೆ ಅಥವಾ ಕಳ್ಳತನ ತುಂಬ ಕಡಿಮೆ ಇತ್ತು. ಆದರೆ ಪಾಲ್ ಪಾ ಮತ್ತು ಅವನ ಪಡೆಗಳ ದಂಗೆಯೊಂದಿಗೆ ಆರಂಭಿಸಿದ ಆಂತರಿಕ ಯುದ್ಧದ ನಂತರ, ಎಲ್ಲವೂ ಬದಲಾಯಿತು. ಎಲ್ಲಡೆಯೂ ಬಂದೂಕುಗಳಿದ್ದವು. 12 ಮತ್ತು 13 ವರ್ಷ ಪ್ರಾಯದ ಎಳೆಯರು ಕೂಡ ಗುಂಡಿಟ್ಟು ಕೊಲ್ಲುವುದನ್ನು ಕಲಿಯುತ್ತಾ, ಮಿಲಿಟರಿ ಸೇವೆಗಾಗಿ ತರಬೇತುಗೊಳಿಸಲ್ಪಟ್ಟರು. ತಮ್ಮ ಸ್ವಂತ ಹೆತ್ತವರನ್ನೂ ಕೊಲ್ಲುವಂತೆ ಪಾಲ್ ಪಾನ ಜನರು ಕೆಲವು ಮಕ್ಕಳ ಮನವೊಪ್ಪಿಸಿದರು. ಸೈನಿಕರು ಮಕ್ಕಳಿಗೆ ಹೀಗೆ ಹೇಳುತ್ತಿದ್ದರು: “ನೀವು ನಿಮ್ಮ ದೇಶವನ್ನು ಪ್ರೀತಿಸುವಲ್ಲಿ, ನೀವು ನಿಮ್ಮ ಶತ್ರುಗಳನ್ನು ದ್ವೇಷಿಸಬೇಕು. ನಿಮ್ಮ ಹೆತ್ತವರು ಸರಕಾರಕ್ಕಾಗಿ ಕೆಲಸಮಾಡುತ್ತಿರುವಲ್ಲಿ, ಅವರು ನಮ್ಮ ಶತ್ರುಗಳಾಗಿದ್ದಾರೆ ಮತ್ತು ನೀವು ಅವರನ್ನು ಕೊಲ್ಲಬೇಕು—ಇಲ್ಲದಿದ್ದಲ್ಲಿ ನೀವು ಕೊಲ್ಲಲ್ಪಡುವಿರಿ.”
ಪಾಲ್ ಪಾ ಮತ್ತು ಶುದ್ಧೀಕರಣ
1975ರಲ್ಲಿ, ಪಾಲ್ ಪಾ ಯುದ್ಧದಲ್ಲಿ ಜಯಗಳಿಸಿದನು ಮತ್ತು ಕೆಂಬೋಡಿಯವು ಒಂದು ಕಮ್ಯೂನಿಸ್ಟ್ ರಾಷ್ಟ್ರವಾಯಿತು. ಪಾಲ್ ಪಾ ಎಲ್ಲ ವಿದ್ಯಾರ್ಥಿಗಳ, ಶಿಕ್ಷಕರ, ಸರಕಾರಿ ಅಧಿಕಾರಿಗಳ, ಮತ್ತು ಶಿಕ್ಷಣವನ್ನು ಹೊಂದಿರುವ ಬೇರೆ ಯಾವುದೇ ವ್ಯಕ್ತಿಯ ಶುದ್ಧೀಕರಣವನ್ನು ಆರಂಭಿಸಿದನು. ನೀವು ಕನ್ನಡಕಗಳನ್ನು ಧರಿಸುತ್ತಿದ್ದಲ್ಲಿ, ನೀವು ಶಿಕ್ಷಿತರಾಗಿದ್ದೀರೆಂದು ಊಹಿಸಿಕೊಳ್ಳಲಾಗುತ್ತಿದ್ದರಿಂದ ನಿಮ್ಮನ್ನು ಕೊಲ್ಲುವ ಸಾಧ್ಯತೆಯಿತ್ತು! ಪಾಲ್ ಪಾ ಸರಕಾರವು, ಹೆಚ್ಚಿನ ಜನರನ್ನು ನಗರಗಳಿಂದ ಮತ್ತು ಪಟ್ಟಣಗಳಿಂದ ಒತ್ತಾಯದಿಂದ ಹೊರಹಾಕಿ, ರೈತರಾಗಿ ಕೆಲಸಮಾಡಲು ಅವರನ್ನು ಗ್ರಾಮಾಂತರ ಪ್ರದೇಶಕ್ಕೆ ಸ್ಥಳಾಂತರಿಸಿತು. ಎಲ್ಲರೂ ಒಂದೇ ರೀತಿಯ ಉಡುಪನ್ನು ಧರಿಸಬೇಕಿತ್ತು. ಸಾಕಷ್ಟು ಆಹಾರವಿಲ್ಲದೆ, ಔಷಧವಿಲ್ಲದೆ, ಬಟ್ಟೆಗಳಿಲ್ಲದೆ ಮತ್ತು ಕೇವಲ 2 ಅಥವಾ 3 ತಾಸುಗಳ ವರೆಗೆ ನಿದ್ರಿಸುತ್ತಾ, ನಾವು ದಿನಕ್ಕೆ 15 ತಾಸು ಕೆಲಸಮಾಡಬೇಕಿತ್ತು. ತೀರ ತಡವಾಗುವ ಮುಂಚೆಯೇ, ನಾನು ನನ್ನ ಸ್ವದೇಶವನ್ನು ಬಿಟ್ಟು ಹೋಗಲು ನಿರ್ಣಯಿಸಿದೆ.
ಆ ಕ್ಮರ್ ರೂಸ್ ಸೈನಿಕನ ಬುದ್ಧಿವಾದವನ್ನು ನಾನು ನೆನಪಿಸಿಕೊಂಡೆ. ನನ್ನನ್ನು ದೋಷಾರೋಪಣೆಗೆ ಒಳಪಡಿಸಸಾಧ್ಯವಿರುವ ಎಲ್ಲ ಫೋಟೋಗಳನ್ನು, ದಸ್ತಾವೇಜುಗಳನ್ನು ಮತ್ತು ಬೇರೆಲ್ಲವನ್ನೂ ನಾನು ಬಿಸಾಡಿಬಿಟ್ಟೆ. ನಾನೊಂದು ಗುಂಡಿಯನ್ನು ಅಗೆದು, ನನ್ನ ಕೆಲವೊಂದು ದಸ್ತಾವೇಜುಗಳನ್ನು ಹೂತುಬಿಟ್ಟೆ. ಅನಂತರ ನಾನು ಥೈಲೆಂಡ್ನ ದಿಕ್ಕಿನಲ್ಲಿ ಪಶ್ಚಿಮಕ್ಕೆ ಪ್ರಯಾಣಿಸಿದೆ. ಅದು ಅಪಾಯಕಾರಿಯಾಗಿತ್ತು. ನಾನು ರಸ್ತೆತಡೆಗಳನ್ನು ತಪ್ಪಿಸಿಹೋಗಬೇಕಿತ್ತು, ಮತ್ತು ಕರ್ಫ್ಯೂ ಸಮಯಗಳಲ್ಲಿ ನಿಜವಾಗಿಯೂ ಜಾಗರೂಕವಾಗಿರಬೇಕಿತ್ತು, ಯಾಕಂದರೆ ಕೇವಲ ಕ್ಮರ್ ರೂಸ್ ಸೈನಿಕರು, ಅಧಿಕೃತ ಅನುಮತಿಯೊಂದಿಗೆ ಪ್ರಯಾಣಿಸಸಾಧ್ಯವಿತ್ತು.
ನಾನು ಒಂದು ಕ್ಷೇತ್ರಕ್ಕೆ ಹೋಗಿ, ಒಬ್ಬ ಮಿತ್ರನೊಂದಿಗೆ ಸ್ವಲ್ಪ ಸಮಯ ವಾಸಿಸಿದೆ. ಅನಂತರ ಕ್ಮರ್ ರೂಸ್ ಎಲ್ಲರನ್ನೂ ಅಲ್ಲಿಂದ ಒಂದು ಹೊಸ ನಿವೇಶನಕ್ಕೆ ಸ್ಥಳಾಂತರಿಸಿದರು. ಅವರು ಶಿಕ್ಷಕರನ್ನು ಮತ್ತು ವೈದ್ಯರನ್ನು ಕೊಲ್ಲಲಾರಂಭಿಸಿದರು. ಮೂವರು ಮಿತ್ರರೊಂದಿಗೆ ನಾನು ಪಾಲಾಯನಗೈದೆ. ನಾವು ಕಾಡಿನಲ್ಲಿ ಅವಿತುಕೊಂಡು, ಮರಗಳಲ್ಲಿ ನಮಗೆ ಸಿಗುತ್ತಿದ್ದ ಯಾವುದೇ ಹಣ್ಣನ್ನು ತಿಂದೆವು. ಕಟ್ಟಕಡೆಗೆ, ನನ್ನ ಮಿತ್ರನೊಬ್ಬನು ವಾಸಿಸುತ್ತಿದ್ದ ಬಾಟಮ್ಬಾಂಗ್ ಪ್ರದೇಶದ ಒಂದು ಚಿಕ್ಕ ಹಳ್ಳಿಗೆ ನಾನು ಆಗಮಿಸಿದೆ. ನನ್ನ ಆಶ್ಚರ್ಯಕ್ಕೆ, ಪಾರಾಗುವುದು ಹೇಗೆಂಬುದರ ಕುರಿತು ನನಗೆ ಬುದ್ಧಿವಾದ ಕೊಟ್ಟಿದ್ದ ಆ ಮಾಜಿ ಸೈನಿಕನನ್ನೂ ಅಲ್ಲಿ ಭೇಟಿಯಾದೆ! ನಾನು ಅವನನ್ನು ಬಿಡುಗಡೆಗೊಳಿಸಿದ್ದರಿಂದ, ಅವನು ನನ್ನನ್ನು ಮೂರು ತಿಂಗಳುಗಳ ವರೆಗೆ ಒಂದು ಗುಂಡಿಯಲ್ಲಿ ಅಡಗಿಸಿಟ್ಟನು. ಒಂದು ಮಗು ನನಗಾಗಿ ಆಹಾರವನ್ನು ಹಾಕುವಂತೆ ಅವನು ನಿರ್ದೇಶಿಸಿದನು, ಆದರೆ ಗುಂಡಿಯೊಳಗೆ ನೋಡಬಾರದೆಂದು ಅವನಿಗೆ ಹೇಳಿದನು.
ಸಮಯಾನಂತರ ನಾನು ಪಲಾಯನಗೈಯಲು ಶಕ್ತನಾದೆ, ಮತ್ತು ಥೈ ಗಡಿಯ ಕಡೆಗೆ ಓಡಿಹೋಗುತ್ತಿದ್ದ ನನ್ನ ತಾಯಿ, ನನ್ನ ಚಿಕ್ಕಮ್ಮ, ಮತ್ತು ನನ್ನ ತಂಗಿಯನ್ನು ಕಂಡುಕೊಂಡೆ. ಅದು ನನಗಾಗಿ ಒಂದು ದುಃಖಕರ ಸಮಯವಾಗಿತ್ತು. ನನ್ನ ತಾಯಿ ಅಸ್ವಸ್ಥರಾಗಿದ್ದರು, ಮತ್ತು ಅವರು ಒಂದು ನಿರಾಶ್ರಿತರ ಶಿಬಿರದಲ್ಲಿ, ಕಟ್ಟಕಡೆಗೆ ರೋಗ ಮತ್ತು ಆಹಾರದ ಕೊರತೆಯಿಂದಾಗಿ ಸತ್ತರು. ಆದರೆ, ನನ್ನ ಜೀವಿತದಲ್ಲಿ ಬೆಳಕು ಮತ್ತು ಆಶೆಯ ಕಿರಣವೊಂದು ಪ್ರವೇಶಿಸಿತು. ನನ್ನ ಪತ್ನಿಯಾಗಿ ಪರಿಣಮಿಸಿದ ಸೋಫೆ ಊಮ್ಳನ್ನು ನಾನು ಭೇಟಿಯಾದೆ. ನನ್ನ ಚಿಕ್ಕಮ್ಮ ಮತ್ತು ನನ್ನ ತಂಗಿಯೊಂದಿಗೆ ನಾವು ಪಲಾಯನಗೈಯುತ್ತಾ, ಥೈ ದೇಶದ ಗಡಿಯನ್ನು ದಾಟಿ ವಿಶ್ವ ಸಂಸ್ಥೆಯ ನಿರಾಶ್ರಿತರ ಶಿಬಿರವನ್ನು ಸೇರಿಕೊಂಡೆವು. ಕೆಂಬೋಡಿಯದ ಆಂತರಿಕ ಯುದ್ಧದಲ್ಲಿ ನಮ್ಮ ಕುಟುಂಬವು ಒಂದು ಉಚ್ಚ ಬೆಲೆಯನ್ನು ತೆತ್ತಿತು. ನನ್ನ ತಮ್ಮ ಮತ್ತು ಅತ್ತಿಗೆಯನ್ನು ಸೇರಿಸಿ, ನಾವು 18 ಮಂದಿ ಕುಟುಂಬ ಸದಸ್ಯರನ್ನು ಕಳೆದುಕೊಂಡೆವು.
ಅಮೆರಿಕದಲ್ಲಿ ಒಂದು ಹೊಸ ಜೀವನ
ನಿರಾಶ್ರಿತರ ಶಿಬಿರದಲ್ಲಿ ನಮ್ಮ ಹಿನ್ನೆಲೆಯನ್ನು ಪರಿಶೀಲಿಸಲಾಯಿತು, ಮತ್ತು ನಾವು ಅಮೆರಿಕಕ್ಕೆ ಹೋಗಲು ಸಾಧ್ಯವಾಗುವಂತೆ, ವಿಶ್ವ ಸಂಸ್ಥೆಯು ನಮಗಾಗಿ ಒಬ್ಬ ಪ್ರಾಯೋಜಕನನ್ನು ಹುಡುಕಲು ಪ್ರಯತ್ನಿಸಿತು. ಕೊನೆಗೆ, ಒಬ್ಬ ಪ್ರಾಯೋಜಕನು ಸಿಕ್ಕಿದನು! 1980ರಲ್ಲಿ, ನಾವು ಮಿನೆಸೋಟಾದ ಸೆಂಟ್ ಪಾಲ್ಗೆ ಆಗಮಿಸಿದೆವು. ನನ್ನ ಹೊಸ ದೇಶದಲ್ಲಿ ನಾನು ಪ್ರಗತಿಯನ್ನು ಮಾಡಬೇಕಾದರೆ, ನಾನು ಸಾಧ್ಯವಿರುವಷ್ಟು ಬೇಗನೆ ಇಂಗ್ಲಿಷ್ ಭಾಷೆಯನ್ನು ಕಲಿಯುವ ಅಗತ್ಯವಿದೆಯೆಂದು ನನಗೆ ತಿಳಿದಿತ್ತು. ನಾನು ತುಂಬ ದೀರ್ಘ ಸಮಯದ ವರೆಗೆ ಕಲಿಯಬೇಕಾಗಿದ್ದರೂ, ನನ್ನ ಪ್ರಾಯೋಜಕನು ನನ್ನನ್ನು ಕೆಲವೇ ತಿಂಗಳಿಗೋಸ್ಕರ ಶಾಲೆಗೆ ಕಳುಹಿಸಿದನು. ಅದಕ್ಕೆ ಬದಲಾಗಿ, ಅವನು ನನಗೆ ಹೋಟೇಲೊಂದರಲ್ಲಿ ದ್ವಾರಪಾಲಕನ ಉದ್ಯೋಗವನ್ನು ಕೊಡಿಸಿದನು. ಆದರೆ ನನ್ನ ಸೀಮಿತ ಇಂಗ್ಲಿಷ್ ಭಾಷೆಯಿಂದಾಗಿ ನಾನು ಅನೇಕ ತಪ್ಪುಗಳನ್ನು ಮಾಡಿ, ನಗೆಗೀಡಾಗುತ್ತಿದ್ದೆ. ಧಣಿಯು ನನಗೆ ಏಣಿಯನ್ನು ತರಲು ಕೇಳುತ್ತಿದ್ದರು, ಮತ್ತು ನಾನು ಕಚಡವನ್ನು ತರುತ್ತಿದ್ದೆ!
ಭಯಗೊಳಿಸಿದ ಒಂದು ಸಂದರ್ಶನ
ಇಸವಿ 1984ರಲ್ಲಿ, ನಾನು ರಾತ್ರಿ ಪಾಳಿಯಲ್ಲಿ ಕೆಲಸಮಾಡಿ, ಹಗಲಿನಲ್ಲಿ ಮಲಗುತ್ತಿದ್ದೆ. ಏಷ್ಯದವರು ಮತ್ತು ಕಪ್ಪು ಜನರ ನಡುವೆ ತುಂಬ ಬಿಗಿತವಿದ್ದ ಒಂದು ಕ್ಷೇತ್ರದಲ್ಲಿ ನಾವು ವಾಸಿಸುತ್ತಿದ್ದೆವು. ಪಾತಕ ಮತ್ತು ಅಮಲೌಷಧಗಳು ಸಾಮಾನ್ಯವಾಗಿದ್ದವು. ಒಂದು ಮುಂಜಾನೆ, ಒಬ್ಬ ಕಪ್ಪು ವರ್ಣದ ಪುರುಷನು ಬಾಗಿಲಿನಲ್ಲಿ ನಿಂತಿದ್ದಾನೆಂದು ಹೇಳಲು, ನನ್ನ ಹೆಂಡತಿಯು ನನ್ನನ್ನು ಹತ್ತು ಗಂಟೆಗೆ ಎಬ್ಬಿಸಿದಳು. ಅವನು ನಮ್ಮನ್ನು ಲೂಟಿಮಾಡಲು ಬಂದಿದ್ದಾನೆಂದು ಅವಳು ಹೆದರಿಕೊಂಡಿದ್ದಳು. ನಾನು ಬಾಗಿಲಿನಲ್ಲಿದ್ದ ಒಂದು ಕಿಂಡಿಯಿಂದ ಇಣಿಕಿನೋಡಿದೆ, ಮತ್ತು ಅಲ್ಲಿ ಒಂದು ಬ್ರೀಫ್ಕೇಸನ್ನು ಹಿಡಿದು, ಚೆನ್ನಾಗಿ ಉಡುಪನ್ನುಟ್ಟ ಒಬ್ಬ ಕಪ್ಪು ಮನುಷ್ಯನು ನಿಂತಿದ್ದನು ಮತ್ತು ಅವನ ಪಕ್ಕದಲ್ಲಿ ಒಬ್ಬ ಬಿಳಿ ವರ್ಣದ ಪುರುಷನು ಇದ್ದನು. ಅನುಚಿತವಾದ ಯಾವ ವಿಷಯವೂ ಸಂಭವಿಸುತ್ತಿಲ್ಲವೆಂದು ನನಗನಿಸಿತು.
ಅವನು ಏನು ಮಾರಾಟಮಾಡುತ್ತಿದ್ದನೆಂದು ನಾನು ಅವನಿಗೆ ಕೇಳಿದೆ. ಅವನು ನನಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಗಳನ್ನು ತೋರಿಸಿದನು. ನನಗೆ ಏನೂ ಅರ್ಥವಾಗಲಿಲ್ಲ. ನಾನು ಅದನ್ನು ನಿರಾಕರಿಸಲು ಪ್ರಯತ್ನಿಸಿದೆ, ಯಾಕಂದರೆ ಕೆಲವೇ ತಿಂಗಳುಗಳ ಹಿಂದೆ ಒಬ್ಬ ಪ್ರಾಟೆಸ್ಟೆಂಟ್ ಮಾರಾಟಗಾರನು, ನಾನು ಐದು ಪುಸ್ತಕಗಳಿಗೆ 165 ಡಾಲರುಗಳನ್ನು ತೆರುವಂತೆ ಮೋಸಮಾಡಿದ್ದನು. ಆದರೆ ಈ ಕಪ್ಪು ಮನುಷ್ಯನು ನನಗೆ ಪತ್ರಿಕೆಗಳಲ್ಲಿದ್ದ ಚಿತ್ರಗಳನ್ನು ತೋರಿಸಿದನು. ಆ ಚಿತ್ರಗಳು ತುಂಬ ಆಹ್ಲಾದಕರವೂ ಮನೋಹರವೂ ಆಗಿದ್ದವು! ಮತ್ತು ಆ ಮನುಷ್ಯನ ಮುಖದಲ್ಲಿ ವಿಶಾಲವಾದ, ಸ್ನೇಹಪರ ನಸುನಗೆಯಿತ್ತು. ಆದುದರಿಂದ ನಾನು 1 ಡಾಲರನ್ನು ದಾನಮಾಡಿ, ಅವುಗಳನ್ನು ಪಡೆದುಕೊಂಡೆ.
ಸುಮಾರು ಎರಡು ವಾರಗಳ ಬಳಿಕ, ಅವನು ಹಿಂದಿರುಗಿ ಬಂದು, ನನ್ನಲ್ಲಿ ಒಂದು ಕೆಂಬೋಡಿಯನ್ ಭಾಷೆಯ ಬೈಬಲ್ ಇದೆಯೊ ಎಂದು ಕೇಳಿದನು. ವಾಸ್ತವದಲ್ಲಿ ನನ್ನಲ್ಲಿ ಒಂದಿತ್ತು. ನನಗೆ ಅದು ಅರ್ಥವಾಗದಿದ್ದರೂ, ಒಂದು ನಾಜರೀನ್ ಚರ್ಚ್ನಲ್ಲಿ ನಾನು ಪಡೆದುಕೊಂಡಿದ್ದ ಒಂದು ಬೈಬಲ್ ನನ್ನಲ್ಲಿತ್ತು. ಆದರೆ ಎರಡು ಭಿನ್ನ ಜಾತಿಗಳ ಪುರುಷರು ನನ್ನ ಮನೆಗೆ ಬಂದಿದ್ದರೆಂಬ ವಿಷಯದಿಂದ ನಾನು ಪ್ರಭಾವಿತನಾದೆ. ಅನಂತರ ಅವನು ನನಗೆ ಕೇಳಿದ್ದು: “ನೀನು ಇಂಗ್ಲಿಷ್ ಕಲಿಯಲು ಬಯಸುತ್ತೀಯೊ?” ಖಂಡಿತವಾಗಿಯೂ ನಾನು ಬಯಸಿದೆ, ಆದರೆ ಪಾಠಗಳಿಗಾಗಿ ಕೊಡಲು ನನ್ನಲ್ಲಿ ಹಣವಿಲ್ಲವೆಂದು ನಾನು ವಿವರಿಸಿದೆ. ಒಂದು ಬೈಬಲ್ ಆಧಾರಿತ ಪ್ರಕಾಶನವನ್ನು ಉಪಯೋಗಿಸುತ್ತಾ, ಅವನು ನನಗೆ ಉಚಿತವಾಗಿ ಕಲಿಸುವೆನೆಂದು ಹೇಳಿದನು. ಅವನು ಯಾವ ಧರ್ಮದವನಾಗಿದ್ದನೆಂದು ನನಗೆ ತಿಳಿದಿರದಿದ್ದರೂ, ನಾನು ಹೀಗೆ ನೆನಸಿದೆ: ‘ಕಡಿಮೆಪಕ್ಷ ನಾನು ಅವನಿಗೆ ಹಣ ಕೊಡಬೇಕಾಗಿಲ್ಲ, ಮತ್ತು ನಾನು ಇಂಗ್ಲಿಷ್ ಭಾಷೆಯನ್ನು ಓದಲು ಮತ್ತು ಬರೆಯಲು ಕಲಿತುಕೊಳ್ಳುವೆ.’
ಇಂಗ್ಲಿಷ್ ಭಾಷೆಯನ್ನು ಮತ್ತು ಬೈಬಲನ್ನು ಕಲಿಯುವುದು
ಅದೊಂದು ನಿಧಾನವಾದ ಪ್ರಕ್ರಿಯೆಯಾಗಿತ್ತು. ಅವನು ನನಗೆ ಬೈಬಲಿನ ಪ್ರಥಮ ಪುಸ್ತಕವಾದ ಆದಿಕಾಂಡವನ್ನು ತೋರಿಸುತ್ತಿದ್ದನು ಮತ್ತು ನಾನು ಅದನ್ನು ಕೆಂಬೋಡಿಯನ್ ಭಾಷೆಯಲ್ಲಿ, “ಲೋ ಕ ಬ್ಯಾಟ್” ಎಂದು ಹೇಳುತ್ತಿದ್ದೆ. ಅವನು “ಬೈಬಲ್” ಎಂದು ಹೇಳುತ್ತಿದ್ದನು, ಮತ್ತು ನಾನು “ಕಾಂಪೀ” ಎಂದು ಹೇಳುತ್ತಿದ್ದೆ. ನಾನು ಪ್ರಗತಿ ಮಾಡಲಾರಂಭಿಸಿದೆ ಮತ್ತು ಪ್ರಚೋದಿತನಾದೆ. ನಾನು ಕೆಲಸಕ್ಕೆ ಹೋಗುವಾಗ, ನನ್ನ ಇಂಗ್ಲಿಷ್-ಕೆಂಬೋಡಿಯನ್ ಡಿಕ್ಷನರಿ, ಒಂದು ಕಾವಲಿನಬುರುಜು ಪತ್ರಿಕೆ, ಬೈಬಲಿನ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್, ಮತ್ತು ನನ್ನ ಕೆಂಬೋಡಿಯನ್ ಭಾಷೆಯ ಬೈಬಲನ್ನು ಕೊಂಡೊಯ್ಯುತ್ತಿದ್ದೆ. ನನ್ನ ವಿರಾಮದ ಸಮಯಗಳಲ್ಲಿ ನಾನು ಪ್ರಕಾಶನಗಳನ್ನು ಹೋಲಿಸುತ್ತಾ, ಒಂದೊಂದೇ ಪದವಾಗಿ, ಇಂಗ್ಲಿಷ್ ಭಾಷೆಯನ್ನು ಅಭ್ಯಾಸಿಸಿ ಕಲಿತುಕೊಂಡೆ. ಸಾಪ್ತಾಹಿಕ ಪಾಠಗಳೊಂದಿಗೆ, ಈ ನಿಧಾನವಾದ ಪ್ರಕ್ರಿಯೆಗೆ ಮೂರು ವರ್ಷಗಳು ತಗಲಿದವು. ಆದರೆ ಕೊನೆಗೆ, ನಾನು ಇಂಗ್ಲಿಷನ್ನು ಓದಸಾಧ್ಯವಿತ್ತು!
ನನ್ನ ಹೆಂಡತಿ ಇನ್ನೂ ಬೌದ್ಧ ದೇವಾಲಯಕ್ಕೆ ಹೋಗುತ್ತಿದ್ದಳು ಮತ್ತು ಪೂರ್ವಜರಿಗಾಗಿ ಆಹಾರವನ್ನು ಹೊರಗೆ ಇಡುತ್ತಿದ್ದಳು. ಖಂಡಿತವಾಗಿಯೂ, ಅದರಿಂದ ಕೇವಲ ನೊಣಗಳಿಗೆ ಪ್ರಯೋಜನವಾಗುತ್ತಿತ್ತು! ನಾನು ಸೈನ್ಯದಲ್ಲಿ ಮತ್ತು ಬೌದ್ಧಮತದಲ್ಲಿದ್ದಾಗ ನನ್ನಲ್ಲಿ ಆಳವಾಗಿ ಬೇರೂರಿದ್ದ ಅನೇಕ ಕೆಟ್ಟ ಅಭ್ಯಾಸಗಳಿದ್ದವು. ನಾನೊಬ್ಬ ಸಂನ್ಯಾಸಿಯಾಗಿದ್ದಾಗ, ಜನರು ಸಿಗರೇಟುಗಳನ್ನು ಸೇರಿಸಿ, ಅರ್ಪಣೆಗಳನ್ನು ತರುತ್ತಿದ್ದರು. ಸಂನ್ಯಾಸಿಯು ಸಿಗರೇಟುಗಳನ್ನು ಸೇದುವಲ್ಲಿ, ಅದು ತಮ್ಮ ಪೂರ್ವಜರೇ ಸೇದುತ್ತಿರುವಂತೆ ಇದೆಯೆಂದು ಅವರು ನಂಬುತ್ತಿದ್ದರು. ಹೀಗೆ, ನಾನು ನಿಕೊಟೀನ್ ವ್ಯಸನಕ್ಕೆ ಬಲಿಯಾದೆ. ಮತ್ತು ನಾನು ಸೈನ್ಯದಲ್ಲಿದ್ದಾಗಲೂ, ತುಂಬ ಕುಡಿಯುತ್ತಿದ್ದೆ ಮತ್ತು ಕದನಗಳಲ್ಲಿ ಹೋರಾಡಲು ಸಾಹಸವನ್ನು ಕೊಡಲಿಕ್ಕಾಗಿ ಆಫೀಮನ್ನು ಸೇದುತ್ತಿದ್ದೆ. ಹೀಗಿರುವುದರಿಂದ, ನಾನು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ, ನಾನು ತುಂಬ ಬದಲಾವಣೆಗಳನ್ನು ಮಾಡಬೇಕಾಯಿತು. ಪ್ರಾರ್ಥನೆಯು ಒಂದು ದೊಡ್ಡ ಸಹಾಯಕ ಆಗಿದೆಯೆಂಬುದನ್ನು ನಾನು ಕಂಡುಕೊಂಡದ್ದು ಆಗಲೇ. ಕೆಲವೇ ತಿಂಗಳುಗಳೊಳಗೆ, ನಾನು ನನ್ನ ಕೆಟ್ಟ ಚಟಗಳನ್ನು ಜಯಿಸಿದೆ. ಅದು ಕುಟುಂಬದಲ್ಲಿ ಉಳಿದವರನ್ನು ಎಷ್ಟು ಸಂತೋಷಪಡಿಸಿತು!
ಇಸವಿ 1989ರಲ್ಲಿ ನಾನು ಮಿನೆಸೋಟಾದಲ್ಲಿ ಒಬ್ಬ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದುಕೊಂಡೆ. ಆ ಸಮಯದಷ್ಟಕ್ಕೆ, ಕ್ಯಾಲಿಫೋರ್ನಿಯದ ಲಾಂಗ್ ಬೀಚ್ನಲ್ಲಿ, ಕೆಂಬೋಡಿಯನ್ ಭಾಷೆಯನ್ನಾಡುವ ಸಾಕ್ಷಿಗಳ ಗುಂಪು ಮತ್ತು ಕೆಂಬೋಡಿಯದಿಂದ ಬಂದ ಒಂದು ದೊಡ್ಡ ಜನಸಂಖ್ಯೆಯಿತ್ತೆಂದು ನನಗೆ ತಿಳಿದುಬಂತು. ನನ್ನ ಪತ್ನಿ ಮತ್ತು ನಾನು ಅದನ್ನು ಚರ್ಚಿಸಿದ ಬಳಿಕ, ನಾವು ಲಾಂಗ್ ಬೀಚ್ಗೆ ಸ್ಥಳಾಂತರಿಸಲು ನಿರ್ಣಯಿಸಿದೆವು. ಆ ಬದಲಾವಣೆಯು ತುಂಬ ವ್ಯತ್ಯಾಸವನ್ನು ಮಾಡಿತು! ಮೊದಲು ನನ್ನ ತಂಗಿ, ನಂತರ ನನ್ನ ಚಿಕ್ಕಮ್ಮ (ಈಗ 85 ವರ್ಷ ಪ್ರಾಯದವರು) ಮತ್ತು ನನ್ನ ಪತ್ನಿ ದೀಕ್ಷಾಸ್ನಾನ ಪಡೆದುಕೊಂಡರು. ನನ್ನ ಮೂವರು ಮಕ್ಕಳು ಅದನ್ನು ಹಿಂಬಾಲಿಸಿದರು. ಕಟ್ಟಕಡೆಗೆ, ನನ್ನ ತಂಗಿ ಒಬ್ಬ ಸಾಕ್ಷಿಯನ್ನು ಮದುವೆಯಾದಳು ಮತ್ತು ಅವನು ಈಗ ಸಭೆಯಲ್ಲಿ ಒಬ್ಬ ಹಿರಿಯನೋಪಾದಿ ಸೇವೆಸಲ್ಲಿಸುತ್ತಿದ್ದಾನೆ.
ಇಲ್ಲಿ ಅಮೆರಿಕದಲ್ಲಿ ನಾವು ಅನೇಕ ಸಂಕಷ್ಟಗಳನ್ನು ಅನುಭವಿಸಿದ್ದೇವೆ. ನಾವು ಕಠಿನವಾದ ಆರ್ಥಿಕ ಕಷ್ಟಗಳನ್ನು ಮತ್ತು ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ಅನುಭವಿಸಿದ್ದೇವಾದರೂ, ಬೈಬಲ್ ಮೂಲತತ್ವಗಳಿಗೆ ಅಂಟಿಕೊಳ್ಳುವ ಮೂಲಕ, ನಾವು ಯೆಹೋವನಲ್ಲಿನ ನಮ್ಮ ಭರವಸೆಯನ್ನು ಕಾಪಾಡಿಕೊಂಡಿದ್ದೇವೆ. ಆತ್ಮಿಕ ಕ್ಷೇತ್ರದಲ್ಲಿ ಆತನು ನನ್ನ ಪ್ರಯತ್ನಗಳನ್ನು ಆಶೀರ್ವದಿಸಿದ್ದಾನೆ. 1992ರಲ್ಲಿ, ನಾನು ಸಭೆಯಲ್ಲಿ ಒಬ್ಬ ಶುಶ್ರೂಷಾ ಸೇವಕನಾಗಿ ಸೇವೆಸಲ್ಲಿಸಲು ನೇಮಿಸಲ್ಪಟ್ಟೆ, ಮತ್ತು 1995ರಲ್ಲಿ ನಾನು ಇಲ್ಲಿ ಲಾಂಗ್ ಬೀಚ್ನಲ್ಲಿ ಒಬ್ಬ ಹಿರಿಯನಾದೆ.
ಈಗಲಾದರೊ, ನಾನು ಒಬ್ಬ ಬೌದ್ಧ ಸಂನ್ಯಾಸಿಯೋಪಾದಿ ಮತ್ತು ಕದನದ ಕ್ಷೇತ್ರಗಳಲ್ಲಿ ಒಬ್ಬ ಅಧಿಕಾರಿಯಾಗಿ ಆರಂಭಿಸಿದ ದೀರ್ಘ ಪ್ರಯಾಣವು, ನಮ್ಮ ಹೊಸ ಮನೆ ಮತ್ತು ದೇಶದಲ್ಲಿ ಶಾಂತಿ ಮತ್ತು ಸಂತೋಷದೊಂದಿಗೆ ಅಂತ್ಯಗೊಂಡಿದೆ. ಹಾಗೂ ಯೆಹೋವ ದೇವರು ಮತ್ತು ಕ್ರಿಸ್ತ ಯೇಸುವಿನಲ್ಲಿ ನಮ್ಮ ಹೊಸದಾಗಿ ಕಂಡುಕೊಳ್ಳಲ್ಪಟ್ಟ ನಂಬಿಕೆ ನಮಗಿದೆ. ಕೆಂಬೋಡಿಯದಲ್ಲಿ ಜನರು ಈಗಲೂ ಒಬ್ಬರನ್ನೊಬ್ಬರು ಕೊಲ್ಲುತ್ತಿದ್ದಾರೆಂಬುದನ್ನು ತಿಳಿಯುವುದು ನನ್ನನ್ನು ನೋಯಿಸುತ್ತದೆ. ಎಲ್ಲ ಯುದ್ಧಗಳು ನಿಲ್ಲಿಸಲ್ಪಟ್ಟು, ಎಲ್ಲ ಜನರು ತಮ್ಮ ನೆರೆಯವರನ್ನು ತಮ್ಮಂತೆಯೇ ನಿಜವಾಗಿ ಪ್ರೀತಿಸುವ ವಾಗ್ದತ್ತ ಹೊಸ ಲೋಕವನ್ನು ಎದುರುನೋಡಲು ಮತ್ತು ಅದರ ಕುರಿತಾಗಿ ಘೋಷಿಸಲು ಇದು ನನ್ನ ಕುಟುಂಬಕ್ಕೆ ಮತ್ತು ನನಗೆ ಇನ್ನೂ ಹೆಚ್ಚಿನ ಕಾರಣವನ್ನು ಒದಗಿಸುತ್ತದೆ!—ಯೆಶಾಯ 2:2-4; ಮತ್ತಾಯ 22:37-39; ಪ್ರಕಟನೆ 21:1-4.
[ಪಾದಟಿಪ್ಪಣಿ]
a ಪಾಲ್ ಪಾ ಆಗ, ಯುದ್ಧದಲ್ಲಿ ಜಯಿಸಿ, ಕೆಂಬೋಡಿಯವನ್ನು ವಶಪಡಿಸಿಕೊಂಡ ಕ್ಮರ್ ರೂಸ್ ಸೈನ್ಯದ ಕಮ್ಯೂನಿಸ್ಟ್ ನಾಯಕನಾಗಿದ್ದನು.
[ಪುಟ 24ರಲ್ಲಿರುವಚಿತ್ರ]
ವಿಯೆಟ್ನಾಮ್
ಲಾವೋಸ್
ಥಾಯ್ಲೆಂಡ್
ಕೆಂಬೋಡಿಯ
ಬಾಟಮ್ಬಾಂಗ್
ಪನಾಮ್ ಪೆನ್
ನಾನೊಬ್ಬ ಬೌದ್ಧ ಸಂನ್ಯಾಸಿಯಾಗಿದ್ದ ವರ್ಷಗಳಲ್ಲಿ
[ಕೃಪೆ]
Mountain High Maps® Copyright © 1997 Digital Wisdom, Inc.
[ಪುಟ 26 ರಲ್ಲಿರುವ ಚಿತ್ರ]
ರಾಜ್ಯ ಸಭಾಗೃಹದಲ್ಲಿ ನನ್ನ ಕುಟುಂಬದೊಂದಿಗೆ