ಯುವ ಜನರು ಪ್ರಶ್ನಿಸುತ್ತಾರೆ . . .
ನನಗೆ ಲಕ್ಷ್ಯಕೊಡಲು ಸಾಧ್ಯವಾಗುವುದಿಲ್ಲವೇಕೆ?
“ಕೆಲವೊಮ್ಮೆ ಆಕಸ್ಮಿಕವಾಗಿ ಹಾಗಾಗುತ್ತದೆ. ಸಭಾ ಕೂಟದಲ್ಲಿ ಕುಳಿತುಕೊಂಡು ನಾನು ಕಿವಿಗೊಡುತ್ತಿರುತ್ತೇನೆ, ಮತ್ತು ತದನಂತರ ಇದ್ದಕ್ಕಿದ್ದ ಹಾಗೆ ನನ್ನ ಮನಸ್ಸು ಅಲೆದಾಡಲು ಆರಂಭಿಸುತ್ತದೆ. ಹತ್ತು ನಿಮಿಷಗಳ ತರುವಾಯ ನಾನು ಪುನಃ ಗಮನ ಕೊಡುತ್ತಿರುತ್ತೇನೆ.”—ಜೆಸ್ಸೀ.
“ಗಮನ ಕೊಡು!” ನಿಮ್ಮ ಶಿಕ್ಷಕರಿಂದ ಅಥವಾ ಹೆತ್ತವರಿಂದ ನೀವು ಆಗಿಂದಾಗ್ಗೆ ಈ ಮಾತುಗಳನ್ನು ಕೇಳಿಸಿಕೊಂಡಿದ್ದೀರೊ? ಹಾಗಿರುವಲ್ಲಿ, ವಿಷಯಗಳಿಗೆ ಲಕ್ಷ್ಯಕೊಡುವುದರಲ್ಲಿ ನಿಮಗೆ ಸಮಸ್ಯೆಯಿರಬಹುದು. ಇದರ ಫಲಿತಾಂಶವಾಗಿ, ನೀವು ಕಡಿಮೆ ಅಂಕಗಳನ್ನು ಪಡೆಯುತ್ತಿರಬಹುದು. ಮತ್ತು ಇತರರು ನಿಮ್ಮನ್ನು ಮತ್ತೇರಿದವರು, ಅಥವಾ ಕೇವಲ ಅಸಭ್ಯರು ಎಂದು ನಕಾರಾತ್ಮಕವಾಗಿ ಪರಿಗಣಿಸುತ್ತಾರೆ ಎಂದು ನಿಮಗನಿಸಬಹುದು.
ಹೆಚ್ಚು ಪ್ರಾಮುಖ್ಯವಾಗಿ, ಗಮನವನ್ನು ಕೊಡುವುದರಲ್ಲಿನ ಅಸಾಮರ್ಥ್ಯವು, ನಿಮ್ಮ ಆತ್ಮಿಕತೆಯ ಮೇಲೆ ಒಂದು ನಕಾರಾತ್ಮಕವಾದ ಪರಿಣಾಮವನ್ನು ಉಂಟುಮಾಡಬಲ್ಲದು. ಎಷ್ಟೆಂದರೂ ಬೈಬಲು ತಾನೇ ಶಿಫಾರಸ್ಸು ಮಾಡುವುದು: “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ.” (ಲೂಕ 8:18) ವಾಸ್ತವದಲ್ಲಿ, ಆತ್ಮಿಕ ವಿಷಯಗಳ ಕಡೆಗೆ “ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು” ಎಂಬ ಆಜ್ಞೆಯು ಕ್ರೈಸ್ತರಿಗೆ ಕೊಡಲ್ಪಟ್ಟಿದೆ. (ಇಬ್ರಿಯ 2:1) ಮತ್ತು ಲಕ್ಷ್ಯಕೊಡುವುದು ನಿಮಗೆ ಕಷ್ಟಕರವಾಗಿರುವಲ್ಲಿ, ಈ ಸಲಹೆಗೆ ಕಿವಿಗೊಡುವುದನ್ನು ನೀವು ಕಷ್ಟಕರವಾದದ್ದಾಗಿ ಕಂಡುಕೊಳ್ಳುವಿರಿ.
ಸಮಸ್ಯೆಯು ಏನಾಗಿರಬಹುದು? ಕೆಲವು ಸಂದರ್ಭಗಳಲ್ಲಿ, ಲಕ್ಷ್ಯಕೊಡುವುದರಲ್ಲಿನ ಕೊರತೆಯು, ಒಂದು ಶಾರೀರಿಕ ಸಮಸ್ಯೆಯ ಕಾರಣದಿಂದಾಗಿರಬಹುದು. ಉದಾಹರಣೆಗೆ, ಗಮನದ ಕೊರತೆಯ ವ್ಯಾಧಿ (ಅಟೆನ್ಷನ್ ಡೆಫಿಸಿಟ್ ಡಿಸಾರ್ಡರ್)ಯು, ಮಿದುಳಿನ ನರವಾಹಕ ವ್ಯೂಹಗಳು ಅವ್ಯವಸ್ಥಿತವಾಗಿ ಕಾರ್ಯನಡಿಸುವುದನ್ನು ಒಳಗೊಳ್ಳುತ್ತದೆ ಎಂದು ಕೆಲವು ಸಂಶೋಧಕರು ನಂಬುತ್ತಾರೆ.a ಕೆಲವು ಯುವ ಜನರಿಗೆ, ಶ್ರವಣಶಕ್ತಿಯ ಅಥವಾ ದೃಷ್ಟಿಯ ನಷ್ಟಗಳಂತಹ ರೋಗಲಕ್ಷಣಗಳಿಲ್ಲದ ಸಮಸ್ಯೆಗಳಿರುತ್ತವೆ. ಇವು ಸಹ ಒಬ್ಬ ವ್ಯಕ್ತಿಯ ಗಮನ ಕೊಡುವ ಸಾಮರ್ಥ್ಯವನ್ನು ಕುಂಠಿತಗೊಳಿಸಸಾಧ್ಯವಿದೆ. ಸರ್ವಸಾಮಾನ್ಯವಾಗಿ ವಯಸ್ಕರಿಗಿಂತಲೂ ಯುವ ಜನರಿಗೆ ಲಕ್ಷ್ಯಕೊಡುವುದರಲ್ಲಿ ಹೆಚ್ಚಿನ ತೊಂದರೆಯಿದೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಹೀಗೆ ಯುವ ಜನರ ನಡುವೆ ಅಸಡ್ಡೆ ತೋರಿಸುವ ಮನೋಭಾವವು ಸಾಮಾನ್ಯವಾಗಿದೆಯಾದರೂ, ಅದು ವೈದ್ಯಕೀಯ ರೋಗವೊಂದರ ಫಲಿತಾಂಶವಾಗಿರುವುದು ವಿರಳ.
ನಿಮ್ಮ ಬದಲಾಗುತ್ತಿರುವ ಆಲೋಚನಾ ವಿಧಗಳು
ಲಕ್ಷ್ಯಕೊಡುವ ವಿಷಯದಲ್ಲಿ ನಿಮಗೆ ತೊಂದರೆಯಿರುವಲ್ಲಿ, ನೀವು ಕೇವಲ ಬೆಳವಣಿಗೆಯ ವೇದನೆಯನ್ನು ಅನುಭವಿಸುತ್ತಿರುವುದು ಅತಿ ಸಂಭವನೀಯ. ಅಪೊಸ್ತಲ ಪೌಲನು ಬರೆದುದು: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.” (1 ಕೊರಿಂಥ 13:11) ಹೌದು, ನೀವು ಪ್ರೌಢಾವಸ್ಥೆಯ ಕಡೆಗೆ ಮುಂದುವರಿಯುತ್ತಿರುವಾಗ, ನಿಮ್ಮ ಆಲೋಚನಾ ವಿಧಗಳು ಬದಲಾಗುತ್ತವೆ. ಪ್ರೌಢಾವಸ್ಥೆಯ ವಿಕಸನ (ಇಂಗ್ಲಿಷ್) ಎಂಬ ಪುಸ್ತಕಕ್ಕೆ ಅನುಸಾರವಾಗಿ, “ಪ್ರೌಢಾವಸ್ಥೆಯ ಆರಂಭದ ಹಂತದಲ್ಲಿ . . . ಹೊಸ ಭಾವನಾತ್ಮಕ ಸಾಮರ್ಥ್ಯಗಳು ಹೊರಹೊಮ್ಮುತ್ತವೆ.” ನೀವು ಭಾವನಾರೂಪದ ಆಲೋಚನೆಗಳು ಹಾಗೂ ಕಲ್ಪನೆಗಳನ್ನು ಗ್ರಹಿಸುವ ಹಾಗೂ ವಿಶ್ಲೇಷಿಸುವ ಸಾಮರ್ಥ್ಯವನ್ನು ವಿಕಸಿಸಿಕೊಳ್ಳುತ್ತೀರಿ. ನೈತಿಕತೆಗಳು, ನೀತಿತತ್ವಗಳು, ಹಾಗೂ ವ್ಯಾಪಕವಾಗಿ ಅನ್ವಯವಾಗುವ ಇತರ ವಿವಾದಗಳ ಕುರಿತು ಬಹಳಷ್ಟು ಗ್ರಹಿಕೆಯನ್ನು ಪಡೆದುಕೊಳ್ಳಲು ನೀವು ಆರಂಭಿಸುತ್ತೀರಿ. ಒಬ್ಬ ವಯಸ್ಕರೋಪಾದಿ ನೀವು ನಿಮ್ಮ ಭವಿಷ್ಯತ್ತಿನ ಕುರಿತು ಆಲೋಚಿಸಲು ಪ್ರಾರಂಭಿಸುತ್ತೀರಿ.
ಸಮಸ್ಯೆಯು ಏನಾಗಿರಸಾಧ್ಯವಿದೆ? ಈ ಎಲ್ಲ ಹೊಸ ಅಭಿಪ್ರಾಯಗಳು, ಭಾವನೆಗಳು, ಹಾಗೂ ಕಲ್ಪನೆಗಳು ನಿಮ್ಮ ಮಿದುಳಿನಲ್ಲಿ ಸುಳಿದಾಡುತ್ತಿರುವುದರಿಂದ, ತೀರ ಅಪಕರ್ಷಣೆಯು ಉಂಟಾಗಸಾಧ್ಯವಿದೆ. ಇನ್ನೆಂದಿಗೂ ನೀವು ಒಂದು ಮಗುವಿನ ಸರಳವಾದ, ಮೂಲಭೂತ ಮಟ್ಟದ ಕುರಿತು ಆಲೋಚಿಸುವುದಿಲ್ಲ. ನೀವು ನೋಡುವ ಹಾಗೂ ಕೇಳಿಸಿಕೊಳ್ಳುವ ವಿಚಾರಗಳನ್ನು ವಿಶ್ಲೇಷಿಸಿ, ಅದನ್ನು ಪ್ರಶ್ನಿಸುವಂತೆ ನಿಮ್ಮ ಮಿದುಳು ನಿಮ್ಮನ್ನು ಪ್ರಚೋದಿಸುತ್ತದೆ. ಒಬ್ಬ ಶಿಕ್ಷಕರ ಅಥವಾ ಒಬ್ಬ ಉಪನ್ಯಾಸಕರ ಹೇಳಿಕೆಯು, ಒಂದು ಉದ್ರೇಕಿತ ಮಾನಸಿಕ ಅಲೆದಾಟವನ್ನು ಉಂಟುಮಾಡಸಾಧ್ಯವಿದೆ. ಆದರೆ ನಿಮ್ಮ ಗೊತ್ತುಗುರಿಯಿಲ್ಲದ ಆಲೋಚನೆಗಳನ್ನು ನಿಯಂತ್ರಿಸಲು ನೀವು ಕಲಿಯುವುದಿಲ್ಲವಾದರೆ, ನೀವು ಅಮೂಲ್ಯವಾದ ಮಾಹಿತಿಯನ್ನು ಕಳೆದುಕೊಳ್ಳಸಾಧ್ಯವಿದೆ. ಆಸಕ್ತಿಕರವಾಗಿ, ನೀತಿವಂತನಾದ ಇಸಾಕನು ಮೌನವಾಗಿ ಧ್ಯಾನಿಸುವುದರಲ್ಲಿ ಸಮಯವನ್ನು ಕಳೆದನೆಂದು ಬೈಬಲು ಹೇಳುತ್ತದೆ. (ಆದಿಕಾಂಡ 24:63) ವಿಶ್ರಮಿಸಲು, ಧ್ಯಾನಿಸಲು, ಹಾಗೂ ವಿಷಯಗಳನ್ನು ಸರಿಪಡಿಸಲಿಕ್ಕಾಗಿ, ಪ್ರತಿ ದಿನ ಸ್ವಲ್ಪ ಸಮಯವನ್ನು ಬದಿಗಿರಿಸುವುದು, ಇನ್ನಿತರ ಸಮಯಗಳಲ್ಲಿ ಹೆಚ್ಚಾಗಿ ಲಕ್ಷ್ಯಕೊಡಲು ನಿಮಗೆ ಸಹಾಯ ಮಾಡಬಹುದು.
ಭಾವೋದ್ವೇಗಗಳು ಹಾಗೂ ಹಾರ್ಮೋನುಗಳು
ನಿಮ್ಮ ಭಾವೋದ್ವೇಗಗಳು ಸಹ ಅಪಕರ್ಷಣೆಯ ಒಂದು ಮೂಲವಾಗಿರಬಹುದು. ನೀವು ಓದುತ್ತಿರುವ ಅಥವಾ ಕಿವಿಗೊಡುತ್ತಿರುವ ವಿಷಯಕ್ಕೆ ಲಕ್ಷ್ಯಕೊಡಲು ನೀವು ಪ್ರಯತ್ನಿಸುತ್ತೀರಿ, ಆದರೆ ನೀವು ಇನ್ನಾವುದೋ ವಿಷಯಗಳ ಕುರಿತು ಆಲೋಚಿಸುತ್ತೀರೆಂಬುದಾಗಿ ಸ್ವತಃ ಕಂಡುಕೊಳ್ಳುತ್ತೀರಿ. ಬೇಸರ ಹಾಗೂ ರೋಮಾಂಚನ, ಖಿನ್ನತೆ ಹಾಗೂ ಸಂಭ್ರಮದ ಭಾವನೆಗಳು ನಿಮ್ಮಲ್ಲಿ ವ್ಯತ್ಯಾಸಮಯವಾಗಿ ಉಂಟಾಗುತ್ತವೆ. ಚಿಂತಿಸಬೇಡಿ! ನೀವು ಹುಚ್ಚರಾಗುತ್ತಿಲ್ಲ. ಬಹುಶಃ, ನಿಮ್ಮ ಹಾರ್ಮೋನುಗಳು ನಿಮ್ಮನ್ನು ಧ್ವಂಸಮಾಡುತ್ತಿವೆ ಅಷ್ಟೆ. ನೀವು ಪ್ರೌಢಾವಸ್ಥೆಯ ಬದಲಾವಣೆಗಳನ್ನು ಅನುಭವಿಸುತ್ತಿದ್ದೀರಿ.
ಕ್ಯಾಥಿ ಮಕಾಯ್ ಮತ್ತು ಚಾರ್ಲ್ಸ್ ವಿಬಲ್ಸ್ಮನ್ ಬರೆಯುವುದು: “ತರುಣಾವಸ್ಥೆಯ ಸಮಯದಲ್ಲಿ ಭಾವನೆಗಳು ತುಂಬಿತುಳುಕುತ್ತವೆ . . . ಬದಲಾಗುವ ಈ ಮನಸ್ಥಿತಿಯು ಸ್ವಲ್ಪಮಟ್ಟಿಗೆ ತರುಣಾವಸ್ಥೆಯ ಒಂದು ಭಾಗವಾಗಿದೆ. ಇದು ಭಾಗಶಃ ನೀವು ಈಗ ಅನುಭವಿಸುತ್ತಿರುವ ಎಲ್ಲ ಬದಲಾವಣೆಗಳ ಒತ್ತಡದೊಂದಿಗೆ ಸಂಬಂಧಿಸಿದ್ದಾಗಿದೆ.” ಇದಲ್ಲದೆ, ನೀವು “ಯುವ ಪ್ರಾಯದ ಪರಿಪಕ್ವ ಸ್ಥಿತಿ”ಯನ್ನು (NW), ಲೈಂಗಿಕ ಬಯಕೆಗಳು ಅತಿ ಹೆಚ್ಚಾಗಿರುವಂತಹ ಒಂದು ಸಮಯವನ್ನು ಸಮೀಪಿಸುತ್ತಿದ್ದೀರಿ. (1 ಕೊರಿಂಥ 7:36) ರೂತ್ ಬೆಲ್ ಎಂಬ ಲೇಖಕಿಯು ಹೇಳುವುದು: “ಪ್ರೌಢಾವಸ್ಥೆಯ ದೈಹಿಕ ಬದಲಾವಣೆಗಳು ಅನೇಕವೇಳೆ ಹೆಚ್ಚು ಪ್ರಬಲವಾದ ಲೈಂಗಿಕ ಭಾವನೆಗಳನ್ನು ತರುತ್ತವೆ. ಸೆಕ್ಸ್ನ ವಿಷಯದಲ್ಲಿ ಹೆಚ್ಚು ಆಲೋಚಿಸುತ್ತಿರುವುದನ್ನು ನೀವು ಕಂಡುಕೊಳ್ಳಬಹುದು, ಲೈಂಗಿಕ ವಿಷಯದಲ್ಲಿ ಹೆಚ್ಚು ಸುಲಭವಾಗಿ ಉದ್ರೇಕಿತರಾಗಬಹುದು, ಕೆಲವೊಮ್ಮೆ ಸೆಕ್ಸ್ನ ವಿಷಯದಲ್ಲೇ ಮುಳುಗಿಹೋಗಿರುವ ಅನಿಸಿಕೆಯಾಗಬಹುದು.”b
ಆರಂಭದಲ್ಲಿ ಉಲ್ಲೇಖಿಸಲ್ಪಟ್ಟ ಜೆಸ್ಸೀ, ಹದಿಪ್ರಾಯದವರ ನಡುವೆ ತೀರ ಸಾಮಾನ್ಯವಾಗಿರುವ ಮಾನಸಿಕ ಅಲೆದಾಟವನ್ನು ಅನುಭವಿಸುತ್ತಾನೆ: “ಕೆಲವೊಮ್ಮೆ ನಾನು ಹುಡುಗಿಯರ ಕುರಿತು ಇಲ್ಲವೆ ನನಗಿರುವ ಯಾವುದಾದರೂ ಚಿಂತೆಯ ಕುರಿತು ಅಥವಾ ಮುಂದೆ ನಾನು ಏನು ಮಾಡಲಿದ್ದೇನೆ ಎಂಬುದರ ಕುರಿತು ಆಲೋಚಿಸುತ್ತೇನೆ.” ಕಾಲಕ್ರಮೇಣ, ಭಾವೋದ್ವೇಗಗಳ ಬಿರುಗಾಳಿಯು ಪ್ರಶಾಂತವಾಗುತ್ತದೆ. ಅಷ್ಟರಲ್ಲಿ, ಆತ್ಮಸಂಯಮವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಅಪೊಸ್ತಲ ಪೌಲನು ಬರೆದುದು: “ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) ಎಷ್ಟು ಹೆಚ್ಚಾಗಿ ನೀವು ನಿಮ್ಮ ಭಾವೋದ್ವೇಗಗಳನ್ನು ನಿಯಂತ್ರಿಸಲು ಕಲಿಯುತ್ತೀರೊ ಅಷ್ಟೇ ಹೆಚ್ಚಾಗಿ ನೀವು ಲಕ್ಷ್ಯಕೊಡಲು ಶಕ್ತರಾಗುವಿರಿ.
ನಿಮ್ಮ ನಿದ್ರೆಯ ಹವ್ಯಾಸಗಳು
ನೀವು ಶಾರೀರಿಕವಾಗಿ ಬೆಳೆಯಲು ಹಾಗೂ ಪ್ರತಿದಿನ ನೀವು ಎದುರಿಸುವ ಅನೇಕ ಹೊಸ ಕಲ್ಪನೆಗಳು ಮತ್ತು ಭಾವೋದ್ವೇಗಗಳನ್ನು ಪ್ರತ್ಯೇಕಿಸುವಂತೆ ನಿಮ್ಮ ಮಿದುಳಿಗೆ ಸಹಾಯ ಮಾಡಲು, ನಿಮ್ಮ ಬೆಳೆಯುತ್ತಿರುವ ದೇಹಕ್ಕೆ ಸಾಕಷ್ಟು ನಿದ್ರೆಯ ಆವಶ್ಯಕತೆಯಿದೆ. ಹಾಗಿದ್ದರೂ, ಅನೇಕ ಹದಿವಯಸ್ಕರು, ತಮಗೆ ನಿದ್ರಿಸಲು ಸ್ವಲ್ಪವೇ ಸಮಯವನ್ನು ಕೊಡುವಂತಹ ಒಂದು ಶೆಡ್ಯೂಲನ್ನು ಮಾಡಿಕೊಂಡಿರುತ್ತಾರೆ. ಒಬ್ಬ ನರತಜ್ಞನು ಹೇಳಿಕೆ ನೀಡುವುದು: “ಒಬ್ಬ ವ್ಯಕ್ತಿಯು ತನ್ನ ದೇಹಕ್ಕೆ ವಿನಿಯೋಗಿಸಬೇಕಾಗಿರುವಂತಹ ನಿದ್ರೆಯ ತಾಸುಗಳನ್ನು ದೇಹವು ಎಂದಿಗೂ ಮರೆಯುವುದಿಲ್ಲ. ಅದಕ್ಕೆ ಬದಲಾಗಿ, ಯಾವಾಗಲೂ ಅದನ್ನು ಜ್ಞಾಪಿಸಿಕೊಳ್ಳುತ್ತದೆ ಮತ್ತು ಜ್ಞಾಪಕಶಕ್ತಿ ಕಡಿಮೆಯಾಗುವಿಕೆ, ಲಕ್ಷ್ಯಕೊಡುವುದರ ಸಮಸ್ಯೆಗಳು, ಹಾಗೂ ನಿಧಾನವಾಗಿ ಆಲೋಚಿಸುವ ಸಾಮರ್ಥ್ಯದ ರೂಪದಲ್ಲಿ ಅದು ವ್ಯಕ್ತಿಯೊಬ್ಬನು ತನಗೆ ಸಲ್ಲಿಸಬೇಕಾದ ಪಾವತಿಚೀಟಿಯನ್ನು ಥಟ್ಟನೆ ನೀಡುತ್ತದೆ.”
ಪ್ರತಿ ರಾತ್ರಿ ಒಂದು ತಾಸು ಅಥವಾ ಹೆಚ್ಚು ತಾಸುಗಳು ಹೆಚ್ಚಿಗೆ ನಿದ್ರಿಸುವುದು, ಲಕ್ಷ್ಯಕೊಡುವ ಒಬ್ಬನ ಸಾಮರ್ಥ್ಯವನ್ನು ಹೆಚ್ಚೆಚ್ಚು ಉತ್ತಮಗೊಳಿಸಸಾಧ್ಯವಿದೆ ಎಂದು ಕೆಲವು ಸಂಶೋಧಕರು ನಂಬುತ್ತಾರೆ. ಬೈಬಲು ಸೋಮಾರಿತನವನ್ನು ಹಾಗೂ ನಿದ್ರೆಯ ವ್ಯಾಮೋಹವನ್ನು ಖಂಡಿಸುತ್ತದೆ ಎಂಬುದು ನಿಜ. (ಜ್ಞಾನೋಕ್ತಿ 20:13) ಆದರೂ, ಅತ್ಯುತ್ತಮವಾಗಿ ಕೆಲಸಮಾಡಲು ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುವುದು ವಿವೇಕಯುತವಾದದ್ದಾಗಿದೆ.—ಪ್ರಸಂಗಿ 4:6.
ಆಹಾರಪಥ್ಯ ಮತ್ತು ಲಕ್ಷ್ಯಕೊಡುವಿಕೆ
ಇನ್ನೊಂದು ಸಮಸ್ಯೆಯು ಆಹಾರಪಥ್ಯವಾಗಿರಬಹುದು. ಕೊಬ್ಬು ತುಂಬಿರುವ ಹಾಗೂ ಸಕ್ಕರೆಭರಿತ ಆಹಾರಗಳು ಹದಿವಯಸ್ಕರ ನಡುವೆ ಜನಪ್ರಿಯವಾಗಿವೆ. ಪೌಷ್ಟಿಕಾಂಶವಿಲ್ಲದ ಆಹಾರ (ಜಂಕ್ ಫುಡ್)ಗಳು ತುಂಬ ರುಚಿಕರವಾಗಿ ಕಂಡುಬರುತ್ತವಾದರೂ, ಅವು ಮಾನಸಿಕ ಚುರುಕುತನವನ್ನು ಕಡಿಮೆಗೊಳಿಸುವಂತೆ ತೋರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಬ್ರೆಡ್, ಸೀರಿಯಲ್, ಅನ್ನ, ಅಥವಾ ಪಾಸ್ಟದಂತಹ, ಕಾರ್ಬೋಹೈಡ್ರೇಟುಗಳುಳ್ಳ ಒಂದು ಊಟದ ಬಳಿಕ, ಮಾನಸಿಕ ಕಾರ್ಯನಿರ್ವಹಣಾ ಸಾಮರ್ಥ್ಯವು ಕ್ಷೀಣಿಸುತ್ತದೆ ಎಂದು ತದ್ರೀತಿಯ ಅಧ್ಯಯನಗಳು ಸೂಚಿಸುತ್ತವೆ. ಇದಕ್ಕೆ ಕಾರಣವೇನೆಂದರೆ, ಕಾರ್ಬೋಹೈಡ್ರೇಟುಗಳು ಮಿದುಳಿನಲ್ಲಿರುವ ಸಿರಟೋನನ್ ಎಂದು ಕರೆಯಲ್ಪಡುವ ಒಂದು ರಾಸಾಯನಿಕ ಪದಾರ್ಥದ ಪ್ರಮಾಣವನ್ನು ಹೆಚ್ಚಿಸುತ್ತವೆ, ಮತ್ತು ಒಬ್ಬ ವ್ಯಕ್ತಿಯನ್ನು ತೂಕಡಿಸುವಂತೆ ಮಾಡುತ್ತವೆ. ಹೀಗೆ, ಮಾನಸಿಕ ಜಾಗರೂಕತೆಯನ್ನು ಅಗತ್ಯಪಡಿಸುವ ಯಾವುದೇ ಚಟುವಟಿಕೆಯನ್ನು ಆರಂಭಿಸುವ ಮೊದಲು, ಪ್ರೋಟೀನ್ ಹೆಚ್ಚಾಗಿರುವ ಆಹಾರಗಳನ್ನು ಸೇವಿಸುವುದನ್ನು ಕೆಲವು ಪೋಷಕ ಆಹಾರತಜ್ಞರು ಸೂಚಿಸುತ್ತಾರೆ.
ಟಿವಿ ಹಾಗೂ ಕಂಪ್ಯೂಟರ್ ಸಂತತಿ
ಟಿವಿ ಹಾಗೂ ಅದರ ವೇಗವಾಗಿ ಚಲಿಸುವ ಚಿತ್ರಗಳು, ಯುವ ಜನರ ಗಮನದ ಆಯುಷ್ಯವನ್ನು ಕಡಿಮೆಗೊಳಿಸುತ್ತವೆ ಎಂದು ಅನೇಕ ವರ್ಷಗಳಿಂದ ಶಿಕ್ಷಕರು ಭಾವಿಸಿದ್ದರು, ಮತ್ತು ಕೆಲವರು ಈಗ ಕಂಪ್ಯೂಟರ್ ಟರ್ಮಿನಲ್ಗಳ ಮೇಲೆ ದೋಷಾರೋಪವನ್ನು ಹೊರಿಸುತ್ತಿದ್ದಾರೆ. ಈ ಆಧುನಿಕ ತಂತ್ರಜ್ಞಾನಗಳು ಯುವ ಜನರ ಮೇಲೆ ನಿರ್ದಿಷ್ಟವಾಗಿ ಹೇಗೆ ಪರಿಣಾಮವನ್ನು ಬೀರುತ್ತವೆ ಎಂಬ ವಿಷಯದಲ್ಲಿ ಪರಿಣತರ ನಡುವೆ ಅತ್ಯಧಿಕ ವಾಗ್ವಾದವು ನಡೆಯುತ್ತಿರುವಾಗ, ಟಿವಿ ನೋಡುವುದರಲ್ಲಿ ಅಥವಾ ಕಂಪ್ಯೂಟರ್ ಗೇಮ್ಸ್ಗಳನ್ನು ಆಡುವುದರಲ್ಲಿ ವಿಪರೀತ ಸಮಯವನ್ನು ವ್ಯಯಿಸುವುದು ಒಳಿತಾಗಿರುವುದಿಲ್ಲ. ಒಬ್ಬ ಯೌವನಸ್ಥನು ಒಪ್ಪಿಕೊಳ್ಳುವುದು: “ವಿಡಿಯೊ ಗೇಮ್ಸ್, ಕಂಪ್ಯೂಟರ್ಗಳು, ಮತ್ತು ಇಂಟರ್ನೆಟ್ನಂತಹ ವಸ್ತುಗಳಿಂದ, ನಾವು ಅಪೇಕ್ಷಿಸುವಂತಹ ವಿಷಯಗಳನ್ನು ಅತಿ ಬೇಗನೆ ಪಡೆಯುತ್ತೇವೆಂದು ಯೋಚಿಸುವಂತೆ ಮಾಡಲಾಗಿದೆ.”
ಸಮಸ್ಯೆ ಏನೆಂದರೆ, ಜೀವಿತದಲ್ಲಿ ಅನೇಕ ವಿಷಯಗಳು, ಪ್ರಯಾಸ, ಸತತ ಪ್ರಯತ್ನ, ಹಾಗೂ ಹಳೆಯ ಶೈಲಿಯ ತಾಳ್ಮೆಯ ಮೂಲಕವಾಗಿ ಮಾತ್ರವೇ ಸಾಧಿಸಲ್ಪಡುತ್ತವೆ. (ಹೋಲಿಸಿರಿ ಇಬ್ರಿಯ 6:12; ಯಾಕೋಬ 5:7) ಆದುದರಿಂದ ವಿಷಯಗಳು ಅತಿ ಬೇಗನೆ ದೊರೆಯುವವುಗಳಾಗಿರಬೇಕು ಮತ್ತು ಅವು ಮನೋರಂಜಕವಾಗಿದ್ದರೆ ಪ್ರಯೋಜನಕರವಾಗಿರುತ್ತವೆ ಎಂಬುದಾಗಿ ಎಂದೂ ಊಹಿಸಿಕೊಳ್ಳಬೇಡಿರಿ. ಟಿವಿ ನೋಡುವುದು ಮತ್ತು ಕಂಪ್ಯೂಟರ್ ಗೇಮ್ಸ್ಗಳನ್ನು ಆಡುವುದು ಮನೋರಂಜಕವಾಗಿರುವುದಾದರೂ, ಪೆಯಿಂಟ್ಮಾಡಲು, ಚಿತ್ರ ಬಿಡಿಸಲು, ಅಥವಾ ಒಂದು ಸಂಗೀತ ಸಾಧನವನ್ನು ನುಡಿಸುವುದನ್ನು ಕಲಿಯಬಾರದೇಕೆ? ಅಂತಹ ಕೌಶಲಗಳು ಲಕ್ಷ್ಯಕೊಡುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಬಹುದು.
ನಿಮ್ಮ ಲಕ್ಷ್ಯಕೊಡುವ ಸಾಮರ್ಥ್ಯಗಳನ್ನು ವಿಕಸಿಸಿಕೊಳ್ಳಲು ಸಾಧ್ಯವಿರುವ ಇನ್ನಿತರ ಮಾರ್ಗಗಳು ಇವೆಯೊ? ಖಂಡಿತವಾಗಿಯೂ ಇವೆ, ಮತ್ತು ಮುಂದಿನ ಲೇಖನವೊಂದು ಅವುಗಳಲ್ಲಿ ಕೆಲವನ್ನು ಕುರಿತು ವಿಚಾರಮಾಡುವುದು.
[ಅಧ್ಯಯನ ಪ್ರಶ್ನೆಗಳು]
a ಅವೇಕ್! ಸಂಚಿಕೆಗಳ, ನವೆಂಬರ್ 22, 1994, 3-12ನೆಯ ಪುಟಗಳು; ಜೂನ್ 22, 1996, 11-13ನೆಯ ಪುಟಗಳು; ಮತ್ತು ಫೆಬ್ರವರಿ 22, 1997, 5-10ನೆಯ ಪುಟಗಳನ್ನು ನೋಡಿರಿ.
b ನಮ್ಮ ಸೆಪ್ಟೆಂಬರ್ 8, 1994ರ ಸಂಚಿಕೆಯಲ್ಲಿ, “ವಿರುದ್ಧ ಲಿಂಗದವರ ಕುರಿತು ಯೋಚಿಸುತ್ತಾ ಇರುವುದನ್ನು ನಿಲ್ಲಿಸಲು ನಾನೇನು ಮಾಡಬಲ್ಲೆ?” ಎಂಬ ಲೇಖನವನ್ನು ನೋಡಿರಿ.
[ಪುಟ 20 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಮಗೆ ಕ್ಲಾಸಿನಲ್ಲಿ ಗಮನ ಕೊಡುವುದು ಅನೇಕವೇಳೆ ಕಷ್ಟಕರವಾದದ್ದಾಗಿ ಕಂಡುಬರುತ್ತದೊ?
[ಪುಟ 21 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪೌಷ್ಟಿಕಾಂಶವಿಲ್ಲದ ಆಹಾರಗಳು, ಮಾನಸಿಕ ಚುರುಕುತನವನ್ನು ಕಡಿಮೆಗೊಳಿಸುವಂತೆ ತೋರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ
[ಪುಟ 21 ರಲ್ಲಿರುವ ಚಿತ್ರ]
“ಕೆಲವೊಮ್ಮೆ ನಾನು ಹುಡುಗಿಯರ ಕುರಿತು ಇಲ್ಲವೆ ನನಗಿರುವ ಯಾವುದಾದರೂ ಚಿಂತೆಯ ಕುರಿತು ಆಲೋಚಿಸುತ್ತೇನೆ”