ಡೆಂಗಿ ಜ್ವರ—ಸೊಳ್ಳೆ ಕಡಿತದಿಂದ ಬರುವ ಒಂದು ಜ್ವರ
ಫಿಲಿಪ್ಪೀನ್ಸ್ನ ಎಚ್ಚರ! ಸುದ್ದಿಗಾರರಿಂದ
ಗೊತ್ತಾಗದಂತೆ ಒಂದು ಸೊಳ್ಳೆಯು ಚಿಕ್ಕ ಹುಡುಗಿಯ ಬರಿದಾದ ತೋಳಿನ ಮೇಲೆ ಬಂದು ಕುಳಿತುಕೊಳ್ಳುತ್ತದೆ. ತತ್ಕ್ಷಣವೇ ಆ ಕೀಟವು ಅವಳ ಚರ್ಮವನ್ನು ಚುಚ್ಚಿ, ರಕ್ತವನ್ನು ಹೀರಲಾರಂಭಿಸುತ್ತದೆ. ಕೆಲವು ಕ್ಷಣಗಳ ಬಳಿಕ, ತಾಯಿಯು ತನ್ನ ಮಗಳ ಕಡೆಗೆ ನೋಟಹರಿಸಿ, ಸೊಳ್ಳೆಯನ್ನು ನೋಡುತ್ತಾಳೆ. ಆ ಕೂಡಲೆ ಫಟ್ಟೆಂದು ಅದನ್ನು ಹೊಡೆಯುತ್ತಾಳೆ, ಆದರೆ ಸೊಳ್ಳೆಯು ತಪ್ಪಿಸಿಕೊಂಡು ಹಾರಿಹೋಗುತ್ತದೆ. ಇಷ್ಟಕ್ಕೇ ಅದರ ಕಥೆಯು ಮುಗಿಯುತ್ತದೊ? ಬಹುಶಃ ಇಲ್ಲ. ಸೊಳ್ಳೆಯು ಹೊರಟುಹೋಗಿರಬಹುದು, ಆದರೆ ಆ ಮಗುವಿನ ರಕ್ತಪ್ರವಾಹಕ್ಕೆ ಅದು ಸಂಕ್ಷಿಪ್ತವಾಗಿ ಮಾಡಿದ ದಾಳಿಯು, ರೋಗವನ್ನು ಉಂಟುಮಾಡಲು ಸಮರ್ಥವಾಗಿರುವಂತಹ ಅನಪೇಕ್ಷಿತ ಜೀವಿಗಳನ್ನು ಬಿಟ್ಟುಹೋಗಿದೆ.
ಎರಡು ವಾರಗಳೊಳಗೆ ಆ ಹುಡುಗನಿಗೆ ಚಳಿ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಅವಳ ಕೀಲುಗಳಲ್ಲಿ ವಿಪರೀತ ನೋವು ಹಾಗೂ ವಿಪರೀತ ಜ್ವರದ ಅನುಭವವಾಗುತ್ತದೆ. ಈ ಅನಾರೋಗ್ಯವು ಮುಂದುವರಿದಂತೆ, ಅವಳ ಮೈಮೇಲೆ ಕೆಂಪು ಗುಳ್ಳೆಗಳು ಏಳುತ್ತವೆ ಮತ್ತು ಅವಳು ಸಂಪೂರ್ಣ ನಿತ್ರಾಣಳಾಗುತ್ತಾಳೆ. ಅವಳಿಗೆ ಡೆಂಗಿ ಜ್ವರ ತಗಲಿದೆ—ಇದು ಸೊಳ್ಳೆ ಕಡಿತದಿಂದ ಬರುವ ಒಂದು ಜ್ವರ.
ಆದರೂ, ವಿಶೇಷವಾಗಿ ಹುಡುಗಿಗೆ ಈಗಾಗಲೇ ಒಮ್ಮೆ ಡೆಂಗಿ ಜ್ವರವು ಬಂದು ಹೋಗಿರುವಲ್ಲಿ, ಈ ಬಾರಿ ಅವಳಿಗೆ ಡೆಂಗಿ ರಕ್ತಸ್ರಾವದ ಜ್ವರ (ಡಿಏಚ್ಎಫ್) ಎಂಬ, ಹೆಚ್ಚು ಗಂಭೀರವಾದ ರೋಗವು ತಗಲಬಹುದು. ಈ ರೋಗವಿರುವವರಿಗೆ, ಲೋಮನಾಳಗಳು ಸೋರತೊಡಗಿ, ಚರ್ಮದಿಂದ ರಕ್ತಸ್ರಾವವಾಗುತ್ತದೆ. ಒಳಗಡೆಯೂ ರಕ್ತಸ್ರಾವವಾಗಬಹುದು. ಸರಿಯಾದ ಚಿಕಿತ್ಸೆಯು ಕೊಡಲ್ಪಡದೆ ಹೋದರೆ, ಆ ರೋಗಿಗೆ ತೀವ್ರವಾದ ಆಘಾತವಾಗಿ, ರಕ್ತಸಂಚಾರವು ನಿಂತುಹೋಗಿ, ಅಕಾಲ ಮರಣಕ್ಕೆ ತುತ್ತಾಗಬಹುದು.
ನಿಖರವಾಗಿ ಡೆಂಗಿ ಜ್ವರ ಎಂದರೇನು? ಅದು ನಿಮ್ಮ ಮೇಲೆ ಪರಿಣಾಮವನ್ನು ಉಂಟುಮಾಡಬಲ್ಲದೊ? ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು ನೀವು ಹೇಗೆ ಸಂರಕ್ಷಿಸಬಲ್ಲಿರಿ? ನಾವು ಈಗ ನಿಕಟವಾಗಿ ಗಮನ ಹರಿಸೋಣ.
ಡೆಂಗಿ ಜ್ವರ ಎಂದರೇನು?
ಡೆಂಗಿ ಜ್ವರವನ್ನು ವೈರಸ್ ಜ್ವರವೆಂದೂ ಕರೆಯಲಾಗುತ್ತದೆ. ಸೊಳ್ಳೆ ಕಡಿತದಿಂದ ಉಂಟಾಗಸಾಧ್ಯವಿರುವ ಅನೇಕ ರೋಗಗಳಲ್ಲಿ ಇದು ಕೇವಲ ಒಂದಾಗಿದೆ. ಈ ರೋಗದ ನಿಜವಾದ ಮೂಲವು ವೈರಸ್ ಆಗಿದೆ. ಸೋಂಕು ತಗಲಿದ ಒಂದು ಸೊಳ್ಳೆಯು (ಅಂದರೆ, ಈ ಹಿಂದೆ ಆ ರೋಗ ಅಂಟಿದ್ದ ಮನುಷ್ಯನನ್ನು ಕಚ್ಚಿರುವ ಒಂದು ಸೊಳ್ಳೆ) ತನ್ನ ಜೊಲ್ಲುಗ್ರಂಥಿಗಳಲ್ಲಿ ವೈರಸನ್ನು ಕೊಂಡೊಯ್ಯುತ್ತದೆ. ರಕ್ತವನ್ನು ಹೀರಲಿಕ್ಕಾಗಿ ಒಬ್ಬ ವ್ಯಕ್ತಿಯನ್ನು ಕಚ್ಚುವ ಪ್ರಕ್ರಿಯೆಯಲ್ಲಿ, ಅದು ವೈರಸನ್ನು ಆ ವ್ಯಕ್ತಿಯೊಳಗೆ ಸಾಗಿಸುತ್ತದೆ.
ನಾಲ್ಕು ರೀತಿಯ ಡೆಂಗಿ ಜ್ವರಗಳಿವೆ. ಒಂದು ರೀತಿಯ ಸೋಂಕಿಗೆ ನೀಡಲ್ಪಟ್ಟ ಸೋಂಕುರಕ್ಷೆಯು, ಇನ್ನು ಮೂರು ರೀತಿಯ ಸೋಂಕುಗಳಿಗೆ ಸೋಂಕುರಕ್ಷೆಯನ್ನು ಒದಗಿಸುವುದಿಲ್ಲ. ಒಂದು ಸಾರಿ ಈ ರೋಗ ತಗಲಿದ ಬಳಿಕ, ಇನ್ನೊಂದು ರೀತಿಯ ಸೋಂಕನ್ನು ಹರಡುವ ಒಂದು ಸೊಳ್ಳೆಯು ಆ ವ್ಯಕ್ತಿಯನ್ನು ಕಚ್ಚುವುದಾದರೆ, ಇದರ ಫಲಿತಾಂಶ ಡಿಏಚ್ಎಫ್ ಆಗಿರಸಾಧ್ಯವಿದೆ.
“ಲೋಕದ ಜನಸಂಖ್ಯೆಯ ಐದನೇ ಎರಡು ಭಾಗದಷ್ಟು ಜನ” ಅಪಾಯದಲ್ಲಿದ್ದಾರೆ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಏಚ್ಓ)ಗನುಸಾರವಾಗಿ, ಡೆಂಗಿ ಜ್ವರವು 250 ಕೋಟಿ ಜನರನ್ನು, “ಲೋಕದ ಜನಸಂಖ್ಯೆಯ ಐದನೇ ಎರಡು ಭಾಗದಷ್ಟು” ಜನರನ್ನು ಬಾಧಿಸುತ್ತಿದೆ. ಏಷಿಯವೀಕ್ ವರದಿಸಿದ್ದು: “ಉಷ್ಣವಲಯದ ಹಾಗೂ ಹೆಚ್ಚುಕಡಿಮೆ ಉಷ್ಣಪ್ರದೇಶವುಳ್ಳ 100ಕ್ಕಿಂತಲೂ ಹೆಚ್ಚು ದೇಶಗಳು, ಡೆಂಗಿ ಜ್ವರದ ತಲೆದೋರುವಿಕೆಯನ್ನು ವರದಿಸಿವೆ, ಮತ್ತು ಪ್ರತಿ ವರ್ಷ ಕೋಟಿಗಟ್ಟಲೆ ರೋಗಿಗಳು ಇರುವ ವರದಿಯಿದ್ದು, ಅವರಲ್ಲಿ 95% ಮಂದಿ ಸೋಂಕಿತರು ಮಕ್ಕಳಾಗಿದ್ದಾರೆ.”
ಡೆಂಗಿ ಜ್ವರವು ಪ್ರಪ್ರಥಮ ಬಾರಿಗೆ ಯಾವಾಗ ಕಂಡುಹಿಡಿಯಲ್ಪಟ್ಟಿತು ಎಂಬುದು ಅಸ್ಪಷ್ಟವಾಗಿದೆ. 1779ರಲ್ಲಿ ಕೈರೊವಿನಲ್ಲಿ “ಮಂಡಿ ಜ್ವರ”ದ ಕುರಿತಾದ ಒಂದು ವರದಿಯು, ವಾಸ್ತವದಲ್ಲಿ ಡೆಂಗಿ ಜ್ವರವನ್ನೇ ಸೂಚಿಸುತ್ತಿದ್ದಿರಬಹುದು. ಅಂದಿನಿಂದ, ಡೆಂಗಿ ಜ್ವರವು ಲೋಕವ್ಯಾಪಕವಾಗಿ ವರದಿಸಲ್ಪಟ್ಟಿದೆ. ವಿಶೇಷವಾಗಿ IIನೆಯ ಲೋಕ ಯುದ್ಧದ ಸಮಯದಂದಿನಿಂದ, ಆಗ್ನೇಯ ಏಷಿಯದಲ್ಲಿ ಆರಂಭವಾಗಿ, ಡೆಂಗಿ ಜ್ವರವು ಮಾನವರ ಆರೋಗ್ಯದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಉಂಟುಮಾಡಿದೆ. ಬೇರೆ ಬೇರೆ ವಿಧದ ವೈರಸ್ಗಳು ಪ್ರಸರಿಸಲು ಆರಂಭವಾದವು, ಮತ್ತು ಇದು ಹೆಚ್ಚು ಅಪಾಯಕರವಾದ ರಕ್ತಸ್ರಾವದಂತಹ ರೀತಿಯ ಡೆಂಗಿ ಜ್ವರಕ್ಕೆ ನಡೆಸಿತು. ಡಬ್ಲ್ಯೂಏಚ್ಓನಿಂದ ಪ್ರಕಾಶಿಸಲ್ಪಟ್ಟ ಒಂದು ಪ್ರಕಾಶನವು ಹೇಳುವುದು: “ಏಷಿಯದಲ್ಲಿ ರಕ್ತಸ್ರಾವದ ಜ್ವರದ ಮೊಟ್ಟಮೊದಲ ತಲೆದೋರುವಿಕೆಯು, 1954ರಲ್ಲಿ ಮನಿಲದಲ್ಲಿ ಗುರುತಿಸಲ್ಪಟ್ಟಿತು.” ತದನಂತರ ಇನ್ನಿತರ ದೇಶಗಳಲ್ಲೂ ಹರಡಿತು, ಅವುಗಳಲ್ಲಿ ಥಾಯ್ಲೆಂಡ್, ವಿಯೆಟ್ನಾಮ್, ಮಲೇಶಿಯ, ಹಾಗೂ ನೆರೆಹೊರೆಯ ಕ್ಷೇತ್ರಗಳು ಸೇರಿವೆ. ಆಗ್ನೇಯ ಏಷಿಯದಲ್ಲಿನ ಈ ಆರಂಭದ ತಲೆದೋರುವಿಕೆಗಳು, 10ರಿಂದ 50 ಪ್ರತಿಶತ ಸಾವಿನ ಪ್ರಮಾಣಗಳನ್ನು ಹೊಂದಿದ್ದವು, ಆದರೆ ಈ ರೋಗದ ಕುರಿತು ಹೆಚ್ಚು ವಿಚಾರಗಳನ್ನು ಕಲಿತಂತೆ, ಈ ಪ್ರಮಾಣಗಳು ಇಳಿಮುಖವಾಗಿವೆ.
1960ಗಳಿಂದ, ಈ ವೈರಸನ್ನು ರವಾನಿಸುವ ಸೊಳ್ಳೆಯನ್ನು ನಿಯಂತ್ರಿಸುವ ಕಾರ್ಯಕ್ರಮಗಳಲ್ಲಿನ ಅಲಕ್ಷ್ಯವು, ಡೆಂಗಿ ಜ್ವರವು ಸ್ಫೋಟಕ ಪ್ರಮಾಣದಲ್ಲಿ ಅಧಿಕಗೊಂಡಿರುವುದಕ್ಕೆ ಕಾರಣವಾಗಿದೆ. ಡೆಂಗಿ ಜ್ವರವು ಹರಡಿಕೊಂಡಿರುವಂತೆಯೇ ಡಿಏಚ್ಎಫ್ ಸಹ ಹರಡಿಕೊಂಡಿದೆ. 1970ಕ್ಕೆ ಮುಂಚೆ ಕೇವಲ 9 ದೇಶಗಳಲ್ಲಿ ಸಾಂಕ್ರಾಮಿಕ ರೋಗವಿತ್ತು, ಆದರೆ 1995ರಷ್ಟಕ್ಕೆ ಈ ಸಂಖ್ಯೆಯು 41ಕ್ಕೆ ಏರಿತ್ತು. ವಾರ್ಷಿಕವಾಗಿ ಡಿಏಚ್ಎಫ್ನ 5,00,000 ರೋಗಿಗಳನ್ನು ಆಸ್ಪತ್ರೆಗೆ ದಾಖಲುಮಾಡಬೇಕಾಗುತ್ತದೆ ಎಂದು ಡಬ್ಲ್ಯೂಏಚ್ಓ ಅಂದಾಜುಮಾಡುತ್ತದೆ.
ಉಷ್ಣವಲಯದ ಕ್ಷೇತ್ರಗಳ ಹೊರಗೆ ಈ ರೋಗವು ಹೆಚ್ಚು ಪ್ರಸಿದ್ಧವಾಗಿರುವುದಿಲ್ಲವಾದರೂ, ಕೆಲವೊಮ್ಮೆ ಈ ರೋಗವು ತಗಲುವ ಅಪಾಯವಿರುವ ಪ್ರಾಂತಗಳಿಗೆ ಪ್ರಯಾಣಿಕರು ಹೋಗುವಾಗ, ಆ ರೋಗದಿಂದ ಸೋಂಕಿತರಾಗಿ, ಅದನ್ನು ತಮ್ಮೊಂದಿಗೆ ಸ್ವದೇಶಗಳಿಗೆ ತಂದಿದ್ದಾರೆ. ಉದಾಹರಣೆಗಾಗಿ, 1996ರ ಅಂತ್ಯದಷ್ಟಕ್ಕೆ, ಅಮೆರಿಕದಲ್ಲಿ—ಮ್ಯಾಸಚೂಸೆಟ್ಸ್, ನ್ಯೂ ಯಾರ್ಕ್, ಆರೆಗನ್, ಮತ್ತು ಟೆಕ್ಸಸ್ನಲ್ಲಿ—ಡೆಂಗಿ ಜ್ವರವಿದೆ ಎಂದು ದ ನ್ಯೂ ಯಾರ್ಕ್ ಟೈಮ್ಸ್ ಹೇಳಿತು.
ಡಿಏಚ್ಎಫ್ನಿಂದಾಗುವ ವಿಶಿಷ್ಟ ಅಪಾಯಗಳು
ಈ ಮುಂಚೆ ಗಮನಿಸಿದಂತೆ, ಜೀವಕ್ಕೆ ಬೆದರಿಕೆಯನ್ನು ಒಡ್ಡುವಂತಹ ಒಂದು ವಿಧದ ಡೆಂಗಿ ಜ್ವರವು ಡಿಏಚ್ಎಫ್ ಆಗಿದೆ. ಡಿಏಚ್ಎಫ್ನ ಅಪಾಯಗಳಲ್ಲಿ ಒಂದು ಯಾವುದೆಂದರೆ, ಇದು ಅಷ್ಟೇನೂ ಗಂಭೀರವಾದ ರೋಗವಲ್ಲ ಎಂದು ಜನರು ನೆನಸಿ ಮೋಸಹೋಗುವಂತೆ ಮಾಡುತ್ತದೆ. ಅನೇಕರು ಇದನ್ನು ಫ್ಲೂ ಜ್ವರವೆಂದು ತಪ್ಪಾಗಿ ನೆನಸುತ್ತಾರೆ. ಹಾಗಿದ್ದರೂ, ಚಿಕಿತ್ಸೆಯನ್ನು ಮುಂದೂಡುವುದು, ಈ ರೋಗವು ಹೆಚ್ಚು ಗಂಭೀರವಾದ ಸ್ಥಿತಿಯನ್ನು ತಲಪುವಂತೆ ಮಾಡಿ, ರಕ್ತದ ಪ್ಲೇಟ್ಲೆಟ್ಗಳ ಪ್ರಮಾಣವು ಇದ್ದಕ್ಕಿದ್ದ ಹಾಗೆ ಇಳಿತವಾಗಿ, (ಆಂತರಿಕವಾಗಿ ಅಥವಾ ಒಸಡುಗಳು, ಮೂಗು, ಅಥವಾ ಚರ್ಮದ ಮೂಲಕ) ರಕ್ತಸ್ರಾವವು ಆರಂಭವಾಗಿ, ರಕ್ತದೊತ್ತಡವು ಕಡಮೆಯಾಗುವಂತೆ ಮಾಡುತ್ತದೆ. ರೋಗಿಯು ನಿಶ್ಚೇತನಗೊಳ್ಳಬಹುದು. ಪರಿಸ್ಥಿತಿಯು ಗಂಭೀರವಾಗಿದೆ ಎಂಬುದನ್ನು ಕುಟುಂಬವು ಅರ್ಥಮಾಡಿಕೊಳ್ಳುವಷ್ಟರೊಳಗೆ, ಅವನಾಗಲೇ ಆಘಾತದಲ್ಲಿ ಸಿಲುಕಿರುತ್ತಾನೆ. ಅವರು ಅವನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾರೆ. ಅಲ್ಲಿ, ಅವನು ಈಗಾಗಲೇ ರಕ್ತಸಂಚಾರದ ವೈಫಲ್ಯವನ್ನು ಅನುಭವಿಸುತ್ತಿದ್ದಾನೆಂದು ವೈದ್ಯರು ಕಂಡುಕೊಳ್ಳುತ್ತಾರೆ. ಈ ಅಪಾಯಕರ ಸನ್ನಿವೇಶದ ಕಾರಣದಿಂದ, ಅಭಿಧಮನಿಯ ಒಳಗೆ ದ್ರವವನ್ನು ಪುನರ್ಭರ್ತಿ ಮಾಡಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.
ನಿಮ್ಮ ಕುಟುಂಬವನ್ನು ಸಂರಕ್ಷಿಸುವುದು
ಈ ರೋಗದ ಪರಿಣಾಮಗಳನ್ನು ಕಡಿಮೆಗೊಳಿಸಲು ಏನು ಮಾಡಸಾಧ್ಯವಿದೆ? ಡೆಂಗಿ ಜ್ವರವು ಎಲ್ಲಿ ಪ್ರಚಲಿತವಾಗಿದೆಯೋ ಅಂತಹ ಸ್ಥಳದಲ್ಲಿ ಒಂದು ಕುಟುಂಬವು ವಾಸಿಸುತ್ತಿರುವಲ್ಲಿ ಮತ್ತು ಕುಟುಂಬದ ಸದಸ್ಯನೊಬ್ಬನಿಗೆ ಒಂದು ದಿನಕ್ಕಿಂತಲೂ ಹೆಚ್ಚು ಸಮಯದ ವರೆಗೆ ಜ್ವರವು ಉಳಿಯುವಲ್ಲಿ, ಆ ಕುಟುಂಬವು ಒಬ್ಬ ವೈದ್ಯನನ್ನು ಸಂಪರ್ಕಿಸುವುದು ವಿವೇಕಯುತವಾದದ್ದಾಗಿದೆ. ಆ ಅಸ್ವಸ್ಥ ವ್ಯಕ್ತಿಗೆ ಡೆಂಗಿ ಜ್ವರದ ರೋಗಲಕ್ಷಣಗಳಿರುವಲ್ಲಿ—ಮೈಮೇಲೆ ಕೆಂಪು ಗುಳ್ಳೆಗಳಿರುವುದಾದರೆ ಅಥವಾ ಮಾಂಸಖಂಡಗಳು ಹಾಗೂ ಕೀಲುಗಳು ಅಥವಾ ಕಣ್ಣುಗಳ ಹಿಂಭಾಗದಲ್ಲಿ ನೋವಿರುವುದಾದರೆ—ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ.
ವೈದ್ಯರು ರಕ್ತಪರೀಕ್ಷೆಯನ್ನು ಮಾಡಬಹುದು. ರಕ್ತಸ್ರಾವರಹಿತ ಡೆಂಗಿ ಜ್ವರಕ್ಕೆ ಕೇವಲ ಸರಳವಾದ ಚಿಕಿತ್ಸೆಯು ಸಾಕಾಗಬಹುದು. ಆದರೆ ಅದು ಡಿಏಚ್ಎಫ್ ಆಗಿದೆ ಎಂಬುದನ್ನು ಪರೀಕ್ಷೆಯು ಸೂಚಿಸುವಲ್ಲಿ, ಜಾಗರೂಕವಾದ ದ್ರವದ ಒಳಸೇರಿಕೆಯನ್ನು ವೈದ್ಯರು ಶಿಫಾರಸ್ಸು ಮಾಡುವುದು ಸಂಭವನೀಯ. ಇದರಲ್ಲಿ, ಅತಿಭೇದಿಗಾಗಿ ಉಪಯೋಗಿಸಲ್ಪಡುವಂತಹ ಬಾಯಿಯ ಮೂಲಕ ಪುನಃದ್ರವೀಕರಿಸುವ ದ್ರಾವಣಗಳು ಸೇರಿರಬಹುದು. ಅಥವಾ, ಹೆಚ್ಚು ಅಪಾಯಕರ ಸನ್ನಿವೇಶಗಳಲ್ಲಿ, ರಿಂಗರ್ಸ್ ದ್ರಾವಣ, ಸಲೈನ್ ದ್ರಾವಣಗಳು, ಅಥವಾ ಇನ್ನಿತರ ದ್ರಾವಣಗಳನ್ನು ಉಪಯೋಗಿಸಿ ಅಭಿಧಮನಿಯ ಒಳಗಣ ದ್ರವದ ಪುನರ್ಭರ್ತಿಮಾಡುವಿಕೆಯಾಗಿದೆ. ಆಘಾತಕ್ಕೊಳಗಾಗಿರುವ ರೋಗಿಗಳಿಗೆ, ರಕ್ತದೊತ್ತಡವನ್ನು ಹೆಚ್ಚಿಸಲು ಹಾಗೂ ಪ್ಲೇಟ್ಲೆಟ್ಗಳ ಮಟ್ಟವನ್ನು ಪೂರ್ವಸ್ಥಿತಿಗೆ ತರಲು ನಿರ್ದಿಷ್ಟ ಔಷಧಗಳನ್ನು ವೈದ್ಯರು ಸೂಚಿಸಬಹುದು.
ತುಂಬ ರಕ್ತಸ್ರಾವವಾಗುತ್ತಿರುವಲ್ಲಿ, ವೈದ್ಯರು ಒಂದು ರಕ್ತಪೂರಣವನ್ನು ಶಿಫಾರಸ್ಸು ಮಾಡುವ ಪ್ರವೃತ್ತಿಯುಳ್ಳವರಾಗಿರಬಹುದು. ಇದಕ್ಕೆ ಬದಲಿಯಾಗಿರುವ ಚಿಕಿತ್ಸೆಯನ್ನು ಪರಿಗಣಿಸದೆ, ಆ ಕೂಡಲೆ ಕೆಲವರು ರಕ್ತಪೂರಣವನ್ನು ಶಿಫಾರಸ್ಸು ಮಾಡಬಹುದು. ಆದರೆ ಇದು ದೇವರ ನಿಯಮಕ್ಕೆ ವಿರುದ್ಧವಾಗಿದೆ ಮಾತ್ರವಲ್ಲ, ಸಾಮಾನ್ಯವಾಗಿ ಅನಗತ್ಯವಾಗಿದೆ. (ಅ. ಕೃತ್ಯಗಳು 15:29) ಚಿಕಿತ್ಸೆ ನಡೆಸುವಾಗ, ಈ ರೋಗದ ಆರಂಭದಲ್ಲೇ ರಕ್ತಸಂಚಾರದ ದ್ರವಗಳ ಜಾಗರೂಕವಾದ ನಿರ್ವಹಣೆಯು ಅತಿ ಪ್ರಮುಖವಾದ ಅಂಶವಾಗಿದೆ ಎಂಬುದನ್ನು ಅನುಭವವು ತೋರಿಸಿದೆ. ಇದರಲ್ಲಿ ರೋಗಿಯ ಹಾಗೂ ವೈದ್ಯರ ನಡುವಿನ ಸಹಕಾರವು, ರಕ್ತಪೂರಣದ ವಿಷಯದಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡಸಾಧ್ಯವಿದೆ. ಇದೆಲ್ಲವೂ ಒಬ್ಬ ವ್ಯಕ್ತಿಗೆ ಡಿಏಚ್ಎಫ್ ಇದೆಯೆಂದು ಅನುಮಾನ ಬಂದ ಕೂಡಲೆ ತ್ವರಿತಗತಿಯ ಕ್ರಿಯೆಯನ್ನು ಕೈಕೊಳ್ಳುವುದರ ಪ್ರಮುಖತೆಯನ್ನು ಒತ್ತಿಹೇಳುತ್ತದೆ.—“ರೋಗಲಕ್ಷಣಗಳೇನು?” ಎಂಬ ರೇಖಾಚೌಕವನ್ನು ನೋಡಿರಿ.
ತಡೆಗಟ್ಟುವ ಕಾರ್ಯವಿಧಾನಗಳು
ಡೆಂಗಿ ಜ್ವರದ ವೈರಸ್ನ ಪ್ರಮುಖ ವಾಹಕಗಳಲ್ಲಿ ಒಂದು, ಏಈಡೀಸ್ ಈಜಿಪ್ಟೈ ಸೊಳ್ಳೆಯಾಗಿದೆ. ಲೋಕವ್ಯಾಪಕವಾಗಿರುವ ಉಷ್ಣವಲಯದ ಹಾಗೂ ಹೆಚ್ಚುಕಡಿಮೆ ಉಷ್ಣಪ್ರದೇಶವುಳ್ಳ ಕ್ಷೇತ್ರಗಳಲ್ಲಿ ಈ ಜಾತಿಯ ಸೊಳ್ಳೆಗಳು ಸಾಮಾನ್ಯವಾಗಿ ಇವೆ. ದಟ್ಟವಾದ ಜನಸಂಖ್ಯೆಯಿರುವ ಕ್ಷೇತ್ರಗಳಲ್ಲಿ ಏಈಡೀಸ್ ಈಜಿಪ್ಟೈ ಸೊಳ್ಳೆಗಳು ಅಭಿವೃದ್ಧಿಯಾಗುತ್ತವೆ. ಈ ಸೊಳ್ಳೆಗಳನ್ನು ನಿಯಂತ್ರಿಸುವುದು, ರೋಗವನ್ನು ನಿಯಂತ್ರಿಸುವ ಕೀಲಿ ಕೈಗಳಲ್ಲಿ ಒಂದಾಗಿದೆ.
ಲೋಕವ್ಯಾಪಕ ಮಟ್ಟದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟೊಂದು ಸುಲಭವಲ್ಲ. ಆದರೂ, ನಿಮ್ಮ ಮನೆಯ ಸುತ್ತಲೂ ಈ ಅಪಾಯವನ್ನು ಕಡಿಮೆಮಾಡುವಂತೆ ಸಹಾಯ ಮಾಡಲಿಕ್ಕಾಗಿ ನೀವು ಮಾಡಸಾಧ್ಯವಿರುವ ಕ್ರಮಗಳಿವೆ. ಹೆಣ್ಣು ಸೊಳ್ಳೆಯು ನೀರಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಬೇಡವಾದ ಟೈರುಗಳು, ಎಸೆಯಲ್ಪಟ್ಟ ಡಬ್ಬಗಳು, ಬಾಟ್ಲಿಗಳು, ಅಥವಾ ಒಡೆದ ತೆಂಗಿನ ಕರಟಗಳಂತಹ, ಒಂದು ವಾರ ಅಥವಾ ಹೆಚ್ಚು ಸಮಯದ ವರೆಗೆ ನೀರು ಉಳಿದಿರುವಂತಹ ಯಾವುದೇ ಪಾತ್ರೆಯಲ್ಲಿ ಮರಿಕೀಟಗಳು ಬೆಳೆಯಬಲ್ಲವು. ಅಂತಹ ಪಾತ್ರೆಗಳನ್ನು ಎಸೆದುಬಿಡುವುದು, ಸೊಳ್ಳೆಗಳ ಸಂತಾನಾಭಿವೃದ್ಧಿಮಾಡುವ ಸ್ಥಳಗಳನ್ನು ನಿರ್ಮೂಲಮಾಡುವುದು. ಇದಲ್ಲದೆ, ನೀವು ಬಕೆಟ್ಗಳನ್ನು ಅಥವಾ ದೋಣಿಗಳನ್ನು ತಲೆಕೆಳಗಾಗಿ ಇಡುವಂತೆ ಶಿಫಾರಸ್ಸು ಮಾಡಲಾಗಿದೆ. ಚರಂಡಿಗಳಿಂದ ನಿಂತ ನೀರನ್ನು ಹೊರತೆಗೆಯುವುದು ಸಹ ಸಹಾಯ ಮಾಡುತ್ತದೆ. ಆಸಕ್ತಿಕರವಾಗಿ, 1997/98ರ ಶಾಲೆಯ ವರ್ಷಾರಂಭದಲ್ಲಿ, ಫಿಲಿಪ್ಪೀನ್ಸ್ನಲ್ಲಿರುವ ಆರೋಗ್ಯ ಇಲಾಖೆಯು, ಈ ಕಾರಣದಿಂದಾಗಿಯೇ ಶಾಲೆಯ ಕ್ಲಾಸ್ರೂಮ್ಗಳಲ್ಲಿ ಹೂವಿನಕುಂಡಗಳ ಉಪಯೋಗವನ್ನು ತಡೆಯಿತು.
ಮನೆಯಲ್ಲಿ ಯಾರಾದರೊಬ್ಬರಿಗೆ ಡೆಂಗಿ ಜ್ವರವು ತಗಲುವಲ್ಲಿ, ಬೇರೆ ಸೊಳ್ಳೆಗಳು ಅವನಿಗೆ ಕಚ್ಚದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಏಕೆಂದರೆ ಪ್ರತಿಯಾಗಿ ಅದು ಇತರರಿಗೆ ಆ ಸೋಂಕನ್ನು ಕೊಂಡೊಯ್ಯಬಹುದು. ಒಂದು ಸರಿಯಾದ ಪರದೆಹಾಕಲ್ಪಟ್ಟ ಅಥವಾ ಹವಾನಿಯಂತ್ರಣವಿರುವ ಕಟ್ಟಡವು ರಕ್ಷಣೆಯನ್ನು ಒದಗಿಸಬಲ್ಲದು.
ಲಸಿಕೆಹಾಕುವಿಕೆಯ ಕುರಿತಾಗಿ ಏನು? ಸೂಕ್ತವಾದ ಒಂದು ಲಸಿಕೆಯು ಪ್ರಸ್ತುತದಲ್ಲಿ ಲಭ್ಯವಿಲ್ಲ. ಒಂದು ಲಸಿಕೆಯನ್ನು ತಯಾರಿಸಲಿಕ್ಕಾಗಿ ಸಂಶೋಧನೆಯು ನಡೆಸಲ್ಪಡುತ್ತಿದೆ, ಆದರೆ ಎಲ್ಲ ನಾಲ್ಕು ರೀತಿ ಡೆಂಗಿ ಜ್ವರಗಳ ವಿರುದ್ಧ ಸೋಂಕುರಕ್ಷೆಯನ್ನು ಕೊಡುವ ಸಂಪೂರ್ಣ ಸುರಕ್ಷೆಯು ಬೇಕು ಎಂಬ ವಾಸ್ತವಾಂಶದಿಂದ ಇದು ಜಟಿಲಗೊಳಿಸಲ್ಪಟ್ಟಿದೆ. ಒಂದೇ ಒಂದು ತರಹದ ಡೆಂಗಿ ಜ್ವರಕ್ಕೆ ಲಸಿಕೆಹಾಕಿಸಿಕೊಳ್ಳುವುದು, ವಾಸ್ತವದಲ್ಲಿ ಡಿಏಚ್ಎಫ್ನ ಅಪಾಯವನ್ನು ಅಧಿಕಗೊಳಿಸಸಾಧ್ಯವಿದೆ. ಸಂಶೋಧಕರು, ಐದರಿಂದ ಹತ್ತು ವರ್ಷಗಳೊಳಗೆ ಪರಿಣಾಮಕಾರಿಯಾದ ಲಸಿಕೆಯು ಲಭ್ಯವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಕೆಲವು ಸಂಶೋಧಕರು ಇನ್ನೊಂದು ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ಜೆನಿಟಿಕ್ ಎಂಜಿನಿಯರಿಂಗನ್ನು (ಆನುವಂಶೀಯ ಬದಲಾವಣೆಯನ್ನು) ಉಪಯೋಗಿಸುವ ಮೂಲಕ ಅವರು, ಸೊಳ್ಳೆಯ ಜೊಲ್ಲಿನಲ್ಲಿ ಡೆಂಗಿ ಜ್ವರದ ವೈರಸ್ ದ್ವಿಗುಣವಾಗುವುದನ್ನು ತಡೆಯುವ ನಿರೀಕ್ಷೆಯಲ್ಲಿದ್ದಾರೆ. ಯೋಜನೆಗನುಸಾರ ಇದು ಸಫಲವಾಗುವಲ್ಲಿ, ಆನುವಂಶೀಯವಾಗಿ ಬದಲಾಯಿಸಲ್ಪಟ್ಟ ಸೊಳ್ಳೆಗಳು, ತಮ್ಮ ಸಂತತಿಗೆ ಡೆಂಗಿ ಜ್ವರದ ಪ್ರತಿರೋಧಕ ಶಕ್ತಿಯನ್ನು ದಾಟಿಸುತ್ತವೆ. ಸ್ವಲ್ಪ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ಇದು ಎಷ್ಟು ಯಶಸ್ವಿಕರವಾಗುವುದು ಎಂಬುದನ್ನು ನೋಡುವುದು ಬಾಕಿಯಿದೆ.
ಸದ್ಯಕ್ಕೆ, ಡೆಂಗಿ ಜ್ವರವನ್ನು ಸಂಪೂರ್ಣವಾಗಿ ನಿರ್ಮೂಲಮಾಡುವುದು ಸಾಧ್ಯವಿರುವಂತೆ ತೋರುವುದಿಲ್ಲ. ಆದರೆ ಪ್ರಾಯೋಗಿಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ನಿಮಗೆ ಮತ್ತು ನಿಮ್ಮ ಪ್ರಿಯರಿಗೆ, ಸೊಳ್ಳೆ ಕಡಿತದಿಂದ ಬರುವ ಜ್ವರವಾದ ಡೆಂಗಿ ಜ್ವರದ—ಜೀವಕ್ಕೆ ಬೆದರಿಕೆಯನ್ನು ಉಂಟುಮಾಡುವ—ಜಟಿಲತೆಗಳನ್ನು ತೊರೆಯಲು ಸಹಾಯ ಮಾಡಬಲ್ಲದು.
[ಪುಟ 23 ರಲ್ಲಿರುವ ಚೌಕ]
ರೋಗಲಕ್ಷಣಗಳೇನು?
ಡೆಂಗಿ ಜ್ವರ ಮತ್ತು ಡೆಂಗಿ ರಕ್ತಸ್ರಾವದ ಜ್ವರ (ಡಿಏಚ್ಎಫ್)ದ ರೋಗಲಕ್ಷಣಗಳು
• ಇದ್ದಕ್ಕಿದ್ದಂತೆ ಬರುವ ತೀವ್ರ ಜ್ವರ
• ವಿಪರೀತ ತಲೆನೋವುa
• ಕಣ್ಣುಗಳ ಹಿಂಭಾಗದಲ್ಲಿ ನೋವು
• ಕೀಲು ಹಾಗೂ ಮಾಂಸಖಂಡದ ನೋವು
• ದುಗ್ಧರಸ ಗ್ರಂಥಿಗಳಲ್ಲಿ ಊತ
• ಕೆಂಪು ಗುಳ್ಳೆಗಳು
• ನಿತ್ರಾಣವಾಗುವುದು
ಡಿಏಚ್ಎಫ್ನ ಹೆಚ್ಚು ಸಾಮಾನ್ಯವಾದ ರೋಗಲಕ್ಷಣಗಳು
• ಅನಿರೀಕ್ಷಿತ ಕುಸಿತ
• ಚರ್ಮದಿಂದ ರಕ್ತಸ್ರಾವವಾಗುವಿಕೆ
• ವ್ಯಾಪಕವಾದ ರಕ್ತಸ್ರಾವ
• ತಣ್ಣಗಿನ, ಅಂಟಂಟಾಗಿರುವ ಚರ್ಮ
• ಚಡಪಡಿಸುತ್ತಿರುವಿಕೆ
• ಆಘಾತ ಮತ್ತು ದುರ್ಬಲ ನಾಡಿಮಿಡಿತ (ಡೆಂಗಿ ಜ್ವರದ ಆಘಾತ ರೋಗಲಕ್ಷಣ)
ಈ ರೋಗಲಕ್ಷಣಗಳು ಗುರುತಿಸಲ್ಪಟ್ಟಲ್ಲಿ, ವೈದ್ಯರನ್ನು ಸಂಪರ್ಕಿಸಲು ತಡಮಾಡಬೇಡಿ. ವಿಶೇಷವಾಗಿ ಮಕ್ಕಳಿಗೆ ಹೆಚ್ಚು ಅಪಾಯವಿದೆ
[ಪಾದಟಿಪ್ಪಣಿ]
a ಆ್ಯಸ್ಪಿರಿನನ್ನು ತೆಗೆದುಕೊಳ್ಳಬಾರದೆಂದು ವೈದ್ಯಕೀಯ ಅಧಿಕಾರಿಗಳು ಹೇಳುತ್ತಾರೆ, ಏಕೆಂದರೆ ಇದು ರಕ್ತಸ್ರಾವವನ್ನು ಹೆಚ್ಚಿಸಬಹುದು
[ಪುಟ 24 ರಲ್ಲಿರುವ ಚೌಕ]
ಪ್ರಯಾಣಿಕರಿಗೆ ಎಚ್ಚರಿಕೆಗಳು
ಕೆಲವೊಮ್ಮೆ, ಉಷ್ಣವಲಯದ ಪ್ರಾಂತಗಳಿಗೆ ಪ್ರಯಾಣಿಸುವವರು ಡೆಂಗಿ ಜ್ವರವನ್ನು ಅಂಟಿಸಿಕೊಳ್ಳುತ್ತಾರೆ, ಆದರೆ ಡೆಂಗಿ ರಕ್ತಸ್ರಾವದ ಜ್ವರವು ಅತಿ ಅಪರೂಪವಾಗಿದೆ, ಏಕೆಂದರೆ ಅದರ ಹೆಚ್ಚು ಗಂಭೀರವಾದ ರೂಪವು ಸಾಮಾನ್ಯವಾಗಿ ಎರಡನೆಯ ಬಾರಿ ಡೆಂಗಿ ಜ್ವರದ ಸೋಂಕು ಬಂದುಹೋದ ಅನಂತರ ಅಂಟಿಕೊಳ್ಳುತ್ತದೆ. ಇಲ್ಲಿ ಪ್ರಯಾಣಿಕರಿಗಾಗಿ ಕೆಲವೊಂದು ಸುರಕ್ಷಾ ಸಲಹೆಗಳು ಕೊಡಲ್ಪಟ್ಟಿವೆ:
• ಉದ್ದ ತೋಳುಗಳುಳ್ಳ ಶರ್ಟುಗಳನ್ನು ಹಾಗೂ ಉದ್ದವಾದ ಪ್ಯಾಂಟ್ಗಳನ್ನು ಧರಿಸಿರಿ
• ಸೊಳ್ಳೆ ವಿಕರ್ಷಕವನ್ನು ಉಪಯೋಗಿಸಿರಿ
• ದಟ್ಟವಾದ ಜನಸಂಖ್ಯೆಯಿರುವ ಕ್ಷೇತ್ರಗಳಿಂದ ದೂರ ಉಳಿಯಿರಿ
• ನೀವು ಕಿಟಕಿಗಳನ್ನು ಮುಚ್ಚಸಾಧ್ಯವಿರುವ ಹಾಗೂ ಸೊಳ್ಳೆಗಳನ್ನು ಹೊರಗಿಡಸಾಧ್ಯವಿರುವ ಸ್ಥಳಗಳಲ್ಲಿ ವಾಸಿಸಿರಿ
• ಮನೆಗೆ ಹಿಂದಿರುಗಿದ ಬಳಿಕ ನಿಮಗೆ ಜ್ವರವು ಬರುವಲ್ಲಿ, ನೀವು ಎಲ್ಲಿಗೆ ಪ್ರಯಾಣಿಸಿದ್ದಿರಿ ಎಂಬುದನ್ನು ವೈದ್ಯರಿಗೆ ಹೇಳಿರಿ
[ಪುಟ 24ರಲ್ಲಿರುವಚಿತ್ರ]
ಡೆಂಗಿ ಸಾಂಕ್ರಾಮಿಕ ಜ್ವರದ ಅಪಾಯವಿರುವ ಕ್ಷೇತ್ರಗಳು
ಇತ್ತೀಚೆಗೆ ಡೆಂಗಿ ಜ್ವರವು ಹೆಚ್ಚಿರುವ ಕ್ಷೇತ್ರಗಳು
ಡೆಂಗಿ ಜ್ವರವನ್ನು ರವಾನಿಸುವ “ಏಈಡೀಸ್ ಈಜಿಪ್ಟೈ” ಎಂಬ ಸೊಳ್ಳೆಯ ವ್ಯಾಪ್ತಿ
[ಕೃಪೆ]
Source: Centers for Disease Control and Prevention, 1997
© Dr. Leonard E. Munstermann/Fran Heyl Associates, NYC
[ಪುಟ 25 ರಲ್ಲಿರುವ ಚಿತ್ರ]
ಸಂತಾನವೃದ್ಧಿ ಮಾಡಸಾಧ್ಯವಿರುವ ಸ್ಥಳಗಳು ಯಾವುವೆಂದರೆ, (1) ಬೇಡವಾದ ಟೈರುಗಳು, (2) ಮಳೆಯಿಂದಾದ ಚರಂಡಿಗಳು, (3) ಹೂವಿನಕುಂಡಗಳು, (4) ಬಕೆಟ್ಗಳು ಅಥವಾ ಇತರ ಪಾತ್ರೆಗಳು, (5) ಎಸೆಯಲ್ಪಟ್ಟ ಡಬ್ಬಗಳು, (6) ಪೀಪಾಯಿಗಳು
[ಪುಟ 22 ರಲ್ಲಿರುವ ಚಿತ್ರ ಕೃಪೆ]
© Dr. Leonard E. Munstermann/Fran Heyl Associates, NYC