ವಾಸ್ಕೋಡಿಗಾಮ ಎಂದು ಹೆಸರಿಡಲ್ಪಟ್ಟ ಒಂದು ಸೇತುವೆ
ಪೋರ್ಚುಗಲ್ನಲ್ಲಿರುವ ಎಚ್ಚರ! ಸುದ್ದಿಗಾರರಿಂದ
ಪೋರ್ಚುಗೀಸ್ ವಾರ್ತಾಪತ್ರಿಕೆಗಳೆಲ್ಲ ಈ ಸುದ್ದಿಯಿಂದ ತುಂಬಿದ್ದವು. ಅದೇನೆಂದರೆ, ಯೂರೋಪಿನಲ್ಲಿರುವ ಅತ್ಯಂತ ಉದ್ದವಾದ ಸೇತುವೆಗಳಲ್ಲಿ ಒಂದು, ಪಟಾಕಿಗಳನ್ನು ಸಿಡಿಸುವುದರೊಂದಿಗೆ ಈಗಷ್ಟೇ ಉದ್ಘಾಟಿಸಲ್ಪಟ್ಟಿತ್ತು. ಮಾರ್ಚ್ 29, 1998, 17.2 ಕಿಲೊಮೀಟರುಗಳಷ್ಟು ಉದ್ದದ ವಾಸ್ಕೋಡಿಗಾಮ ಸೇತುವೆಯ ಪ್ರಾರಂಭೋತ್ಸವದ ದಿನಾಂಕವಾಗಿತ್ತು. ಹದಿನೈದನೆಯ ಶತಮಾನದಲ್ಲಿ, ಪಶ್ಚಿಮ ಯೂರೋಪಿನಿಂದ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದ ಪೋರ್ಚುಗೀಸ್ ನಾವಿಕನ ನಾಮಾರ್ಥವಾಗಿ ಈ ಹೆಸರು ಕೊಡಲ್ಪಟ್ಟಿದೆ. ಈ ಹೊಸ ಸೇತುವೆಯು, ಆ ದೇಶದ ಔದ್ಯೋಗಿಕ ಕ್ಷೇತ್ರವಿರುವ ಉತ್ತರ ಭಾಗಕ್ಕೆ, ಆಲ್ಗಾರ್ವ್ನಲ್ಲಿರುವ ದಕ್ಷಿಣದ ಸಮುದ್ರ ತೀರಗಳಿಗೆ, ಮತ್ತು ಸ್ಪೆಯ್ನ್ಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ.
ಈ ಸೇತುವೆಯು ವಿಶ್ವದಲ್ಲಿರುವ ಐದನೆಯ ಅತ್ಯಂತ ಉದ್ದವಾದ ಸೇತುವೆಯಾಗಿದ್ದು, ಪೋರ್ಚುಗಲ್ನ ರಾಜಧಾನಿಯಾಗಿರುವ ಲಿಸ್ಬನ್ನಲ್ಲಿರುವ ಟಾಗಸ್ ನದಿಯ ನದೀಮುಖದಿಂದ, ದಕ್ಷಿಣ ತೀರದಲ್ಲಿರುವ ಮಾಂಟೀಹೊ ಪಟ್ಟಣವನ್ನು ಹಾದುಹೋಗುತ್ತದೆ. ಎರಡು ಕಂಬಗಳ ನಡುವೆ ತಂತಿಗಳಿಂದ ಆಧಾರಿತವಾಗಿ ತೂಗುತ್ತಿರುವ 826 ಮೀಟರ್ಗಳಷ್ಟು ಉದ್ದದ ಈ ಸೇತುವೆಯು, 45 ಮೀಟರುಗಳಷ್ಟು ಕೆಳಗೆ, ಸಮುದ್ರ ಸಂಚಾರದ ದೊಡ್ಡ ನೌಕೆಗಳು ಹಾದುಹೋಗಲು ಅವಕಾಶವನ್ನು ಮಾಡಿಕೊಡುತ್ತದೆ.
ಒಂದು ಉಲ್ಲಾಸಮಯ ಆರಂಭ
ಅಧಿಕೃತ ಉದ್ಘಾಟನೆಗೆ ಇನ್ನೂ ಒಂದು ವಾರ ಇರುವಾಗಲೇ ಪ್ರಾರಂಭೋತ್ಸವ ಸಮಾರಂಭವು ಒಂದು ದೊಡ್ಡ ಪಾರ್ಟಿಯಂತೆ ನಡೆಯಿತು. ಮಾರ್ಚ್ 22ರ ಭಾನುವಾರದಂದು, ಸಂಭ್ರಮವು ಪರಮಾವಧಿಯನ್ನು ಮುಟ್ಟಿತ್ತು. ಫಾಸೂಆಡೂ, ಅಥವಾ ಹುರುಳಿ ಸ್ಟ್ಯೂನ ಸಾಂಪ್ರದಾಯಿಕ ಪೋರ್ಚುಗೀಸ್ ಔತಣಕ್ಕಾಗಿ ಸುಮಾರು 15,000 ಜನರನ್ನು ಆಮಂತ್ರಿಸಲಾಗಿತ್ತು. ಅಷ್ಟೊಂದು ಜನರನ್ನು ಎಲ್ಲಿ ಊಟಕ್ಕೆ ಕೂರಿಸುವುದು? ಹೊಸ ಸೇತುವೆಯ ಮೇಲೆಯೇ ಆ ಏರ್ಪಾಡು ಮಾಡಲ್ಪಟ್ಟಿತ್ತು! ಸೇತುವೆಯ ಮೇಲೆ ಸುಮಾರು ಐದು ಕಿಲೊಮೀಟರುಗಳ ವರೆಗೆ ಮೇಜುಗಳು ಜೋಡಿಸಲ್ಪಟ್ಟಿರುವುದನ್ನು ನೋಡುವುದು ಎಂತಹ ನಯನ ಮನೋಹರ ದೃಶ್ಯವಾಗಿತ್ತು! ಊಟದ ವ್ಯವಸ್ಥೆಯು ಯಶಸ್ವಿಯಾಯಿತು, ಮತ್ತು ಜನರು ಆ ಏರ್ಪಾಡಿಗಾಗಿ ಕೃತಜ್ಞತೆಯ ಅಭಿವ್ಯಕ್ತಿಗಳನ್ನು ಸೂಚಿಸಿದರು.
ಹೆಚ್ಚುತ್ತಿರುವ ಆವಶ್ಯಕತೆ
ಅಂತಹ ಒಂದು ಸೇತುವೆಯನ್ನು ಕಟ್ಟುವ ಅಗತ್ಯವೇನಿತ್ತು? 1966ರಿಂದ, 1,013 ಮೀಟರ್ಗಳಷ್ಟು ಉದ್ದದ ಟ್ವೆಂಟಿಫಿಫ್ತ್ ಆಫ್ ಏಪ್ರಿಲ್ ಎಂಬ ತೂಗುಸೇತುವೆಯನ್ನು ಲಿಸ್ಬನ್ ಉಪಯೋಗಿಸುತ್ತಿತ್ತು. ಅಲ್ಲಿ ಒಂದು ದಿನಕ್ಕೆ ಸರಾಸರಿ 1,30,000 ವಾಹನಗಳು ಸಂಚರಿಸುತ್ತಿದ್ದವು. ದಿನದ ನಿರ್ದಿಷ್ಟ ತಾಸುಗಳಲ್ಲಿ ಹಾಗೂ ವಾರಾಂತ್ಯಗಳಲ್ಲಿನ ವಾಹನ ಕಿಕ್ಕಿರಿತವನ್ನು ನೀವು ಊಹಿಸಿಕೊಳ್ಳಬಲ್ಲಿರೊ? ಪೋರ್ಚುಗಲ್ನ ದಕ್ಷಿಣ ಭಾಗ ಮತ್ತು ಲಿಸ್ಬನಿನ ನಡುವೆಯಿರುವ ಈ ಸೇತುವೆಯನ್ನು ದಾಟಲು, ಒಂದು ಅಥವಾ ಎರಡು ತಾಸುಗಳನ್ನು ವ್ಯಯಿಸುವುದು ದಿನಾಲೂ ಪ್ರಯಾಣಿಸುವವರಿಗೆ ಹೋಸದೇನಾಗಿರಲಿಲ್ಲ. ಈ ಎಲ್ಲ ಕಾರಣಗಳಿಂದ ಬದಲಿ ವ್ಯವಸ್ಥೆಯ ಅಗತ್ಯವಿತ್ತು. ಹಿಂದಿನ ಸೇತುವೆಯಿಂದ ಈ ಸೇತುವೆಗೆ ಸುಮಾರು 13 ಕಿಲೊಮೀಟರುಗಳ ಅಂತರವಿದ್ದು, ಈ ಹೊಸ ಸೇತುವೆಯು, ನದೀಮುಖಕ್ಕೆ ಸಮೀಪವಾಗಿರುವುದರಿಂದ, ಹೊಸ ಸೇತುವೆಯ ಆರು ಕಿರುಹಾದಿಗಳು ವಾಹನ ಸಂಚಾರವನ್ನು ಸ್ವಲ್ಪಮಟ್ಟಿಗೆ ಸುಗಮಗೊಳಿಸಿವೆ. ಒಂದು ದಿನಕ್ಕೆ 52,000 ವಾಹನಗಳು ಸಂಚರಿಸುವುದಕ್ಕೆ ಆರಂಭವಾದಾಗ, ಎರಡೂ ದಿಕ್ಕುಗಳಲ್ಲಿ ಒಂದೊಂದು ಕಿರುಹಾದಿಯನ್ನು ಕೂಡಿಸಸಾಧ್ಯವಾಗುವಂತೆ ಅದು ವಿನ್ಯಾಸಿಸಲ್ಪಟ್ಟಿತು. ಒಂದು ತಾಸಿಗೆ 100 ಕಿಲೊಮೀಟರ್ಗಳಷ್ಟು ವೇಗದ ಪರಿಮಿತಿಯಲ್ಲಿ ವಾಹನ ಸಂಚಾರವು ಬೇಗನೆ ನಡೆಯುವುದೆಂದು ನಿರೀಕ್ಷಿಸಲಾಗಿದೆ.
ಸೇತುವೆಯನ್ನು ದಾಟುವುದು
ಮಾಂಟೀಹೊನಲ್ಲಿ, ಅಂದರೆ ದಕ್ಷಿಣದ ಕಡೆಯಿಂದ ನಾವು ಸೇತುವೆಯನ್ನು ಪ್ರವೇಶಿಸುವಾಗ ನಮ್ಮೊಂದಿಗೆ ಜೊತೆಗೂಡಿ. ಭೂಪ್ರದೇಶ ಹಾಗೂ ಜೌಗು ಪ್ರದೇಶವನ್ನು ಬಿಟ್ಟು, ಈಗ ನಾವು 10 ಕಿಲೊಮೀಟರ್ಗಳಷ್ಟು ಉದ್ದವಿರುವ ಟಾಗಸ್ ನದಿಯ ಮೇಲಿದ್ದೇವೆ. ಇದು ಪೂರ್ಣ ಉಬ್ಬರದ ಸಮಯವಾಗಿದೆ, ಮತ್ತು ನಮ್ಮ ಸುತ್ತಲು ನಾಲ್ಕೂ ಕಡೆಗಳಲ್ಲಿ ನೀರು ಆವರಿಸಿದೆ. ಜಾರದಂತೆ ರಚಿಸಲ್ಪಟ್ಟಿರುವ ಕಾಲುದಾರಿಗಳು, ಹಾಗೂ ಈ ಸೇತುವೆಯ ಉದ್ದಕ್ಕೂ ಆಧಾರವಾಗಿರುವ 1,500 ಕಂಬಗಳು, ಭದ್ರವಾದ ಅನಿಸಿಕೆಯನ್ನು ಉಂಟುಮಾಡುತ್ತವೆ.
ಈಗ ನಾವು ತಂತಿಗಳಿಂದ ತೂಗುಹಾಕಲ್ಪಟ್ಟಿರುವ ತೂಗುಸೇತುವೆಯ ವಿಭಾಗದ ಕಡೆಗೆ ಬರುತ್ತೇವೆ. ಇದು ಬಿಗಿಯಾದ ತಂತಿಗಳಿಂದ ಆಧಾರಿಸಲ್ಪಟ್ಟಿದೆ; ಈ ತಂತಿಗಳು, 150 ಮೀಟರ್ಗಳಷ್ಟು ಎತ್ತರವಿರುವ ಗೋಪುರಗಳ ತುದಿಯಿಂದ ಹರಡಿಕೊಂಡಿರುವ ನೌಕಾಪಟಗಳಂತೆ ಕಂಡುಬರುತ್ತವೆ. ಆಧಾರವಾಗಿ ಕೊಡಲ್ಪಟ್ಟಿರುವ ಕಂಬಗಳ ತಳಪಾಯಗಳು, ನದೀತಳದಲ್ಲಿ ಸುಮಾರು 50ರಿಂದ 65 ಮೀಟರ್ಗಳಷ್ಟು ಆಳದಲ್ಲಿ ಕಟ್ಟಲ್ಪಟ್ಟಿವೆ. ಇನ್ನೂ ಹೆಚ್ಚಿನ ಭದ್ರತೆಗಾಗಿ, ಒಂದು ತಾಸಿಗೆ 220 ಕಿಲೊಮೀಟರುಗಳಿಗಿಂತಲೂ ಹೆಚ್ಚು ವೇಗದ ಬಿರುಗಾಳಿಯ ಹೊಡೆತಗಳನ್ನು ಹಾಗೂ 1755ರಲ್ಲಿ ಲಿಸ್ಬನ್ ಪಟ್ಟಣದ ಹೆಚ್ಚಿನ ಭಾಗವನ್ನು ಧ್ವಂಸಮಾಡಿದ ಭೂಕಂಪಕ್ಕಿಂತಲೂ ನಾಲ್ಕೂವರೆ ಪಟ್ಟು ಹೆಚ್ಚು ದೊಡ್ಡ ಭೂಕಂಪದ ಆಘಾತಗಳನ್ನು ತಡೆದುಕೊಳ್ಳುವಷ್ಟು ಗಟ್ಟಿಯಾಗಿ ಈ ಸೇತುವೆಯು ಕಟ್ಟಲ್ಪಟ್ಟಿದೆ.
ನಾವು ವಾಸ್ಕೋಡಿಗಾಮ ಸೇತುವೆಯ ತುದಿಯನ್ನು ತಲಪುವಾಗ, ಲಿಸ್ಬನ್ನ ಈಶಾನ್ಯ ಭಾಗವು, ತಾಳೆಮರಗಳಿಂದ ನಮ್ಮನ್ನು ಸ್ವಾಗತಿಸುತ್ತದೆ. ನಮಗೆ ಇಷ್ಟವಿರುವಲ್ಲಿ, ದೇಶದ ಉತ್ತರ ಭಾಗಕ್ಕೆ ನಮ್ಮನ್ನು ಕೊಂಡೊಯ್ಯುವ ಸೂಪರ್ಹೈವೇಯ ಕಡೆಗೆ ನಾವು ಹೋಗಸಾಧ್ಯವಿದೆ. ದಕ್ಷಿಣದಲ್ಲಿರುವ ಆಲ್ಗಾರ್ವ್ನಿಂದ ಉತ್ತರದಲ್ಲಿರುವ ಮೆನ್ಯೂ ಪ್ರಾಂತಕ್ಕೆ, ಒಂದು ಉತ್ತಮ ಹೆದ್ದಾರಿಯ ಮೇಲೆ ಪ್ರಯಾಣಿಸುವಂತೆ ಈ ಹೊಸ ಸೇತುವೆಯು ಸಹಾಯ ಮಾಡುತ್ತದೆ. ಈ ಹೆದ್ದಾರಿಯಲ್ಲಿ ಪ್ರಯಾಣಿಸುವುದಾದರೆ, ಲಿಸ್ಬನ್ನ ಅವ್ಯವಸ್ಥಿತ ವಾಹನ ಸಂಚಾರದ ಮೂಲಕ ಹಾದುಹೋಗಲು ಹೆಣಗಾಡುವ ಅಗತ್ಯವಿಲ್ಲ!
ಭದ್ರತಾ ಕ್ರಮಗಳು
ಈ ಸೇತುವೆಯನ್ನು ಕಟ್ಟುವಾಗ, ಸುರಕ್ಷತಾ ಕ್ರಮಗಳನ್ನು ಕೈಕೊಳ್ಳುವುದರ ಕಡೆಗೆ ವಿಶೇಷ ಗಮನವು ಕೊಡಲ್ಪಟ್ಟಿತು. ಬರೀ ಒಂದು ಕಾರು ಕೆಟ್ಟುಹೋದರೆ, ಅದು ವಾಹನಗಳ ದೊಡ್ಡ ನೂಕುನುಗ್ಗಲನ್ನೇ ಉಂಟುಮಾಡಸಾಧ್ಯವಿದೆ. ಈ ಕಾರಣದಿಂದ, ಸೇತುವೆಯ ಮೇಲೆ ಹಾಗೂ ಹಾದಿಯುದ್ದಕ್ಕೂ 87 ವಿಡಿಯೊ ಕ್ಯಾಮರಗಳು ಇಡಲ್ಪಟ್ಟಿವೆ. ವಾಹನ ಸಂಚಾರದಲ್ಲಿ ಉಂಟಾಗುವ ಎಲ್ಲ ತಡೆಗಟ್ಟುಗಳು, ಪೋಲಿಸ್ ಠಾಣೆಯಲ್ಲಿ ಹಾಗೂ ಟ್ರ್ಯಾಫಿಕ್ ಕಂಟ್ರೋಲ್ ಕೇಂದ್ರಗಳಲ್ಲಿ ಇಡಲ್ಪಟ್ಟಿರುವ ಮಾನಿಟರ್ಗಳ ಮೇಲೆ ಪ್ರಸಾರವಾಗುತ್ತವೆ. ಒಂದು ವಾಹನವು ನಿಂತುಹೋಗುವಲ್ಲಿ, ಕಂಟ್ರೋಲ್ ರೂಮಿನಲ್ಲಿ ಒಂದು ಅಲಾರ್ಮ್ ಧ್ವನಿಯಾಗುತ್ತದೆ.
ಇದಲ್ಲದೆ, ಸಹಾಯವನ್ನು ಪಡೆಯಲಿಕ್ಕಾಗಿ 36 ಜೋಡಿ ಎಸ್ಓಎಸ್ ಫೋನ್ಗಳು ಸಹ ಇವೆ. ಈ ಫೋನ್ಗಳನ್ನು, 17 ಕಿಲೊಮೀಟರ್ಗಳಷ್ಟು ಉದ್ದವಿರುವ ಈ ಸೇತುವೆಯ ಪ್ರತಿ 400 ಮೀಟರ್ಗಳ ಅಂತರದಲ್ಲಿ ಒಂದರಂತೆ ಇಡಲಾಗಿದೆ. ಈ ತುರ್ತು ವ್ಯವಸ್ಥೆಯು ಹೇಗೆ ಕಾರ್ಯನಡಿಸುತ್ತದೆ? ಬೆಂಕಿಯನ್ನು ಆರಿಸುವುದು ಮತ್ತು ವಾಹನವನ್ನು ಎಳೆದುಕೊಂಡು ಹೋಗುವಂತಹ ಸಮಸ್ಯೆಯನ್ನು ಒಳಗೊಂಡು, ಇನ್ನಿತರ ಯಾವುದೇ ಸಮಸ್ಯೆಗಳನ್ನು ನೋಡಿಕೊಳ್ಳಲಿಕ್ಕಾಗಿ, ವಿಶೇಷ ವಾಹನಗಳು ಯಾವಾಗಲೂ ಸೇತುವೆಯ ಮೇಲೆ ಓಡಾಡುತ್ತಿರುತ್ತವೆ.
ಹವಾಮಾನದಲ್ಲಿ ಇದ್ದಕ್ಕಿದ್ದಂತೆ ಉಂಟಾಗುವ ಬದಲಾವಣೆಗಳ ಕುರಿತಾಗಿ ಏನು? ವಾಯುಲಕ್ಷಣಗಳನ್ನು ಮುನ್ಸೂಚಿಸುವ ಎರಡು ಕೇಂದ್ರಗಳು, ಗಾಳಿಯ ವೇಗ, ತೀವ್ರತೆ, ಹಾಗೂ ದಿಕ್ಕನ್ನು ಅಳೆಯುತ್ತವೆ. ಮತ್ತು ವಾಯುಗುಣದ ಸ್ಥಿತಿಗತಿಗನುಸಾರ, ಹವಾಮಾನ ಹಾಗೂ ರಸ್ತೆಯ ಅವಸ್ಥೆಗಳು, ಮತ್ತು ವೇಗದ ಪರಿಮಿತಿಯ ಹೊಂದಾಣಿಕೆಯ ಬಗ್ಗೆ ಎಚ್ಚರಿಕೆ ಕೊಡುತ್ತವೆ.
ಸೇತುವೆಯ ಮೇಲೆ ಕಂಡುಬರುವ ಸಮರೂಪದ ಸಾಲುಗಳು, ಸ್ಕೇಲಿನಿಂದ ಎಳೆಯಲ್ಪಟ್ಟಿವೆಯೋ ಎಂಬಂತೆ ಕಾಣುತ್ತವೆ, ರಾತ್ರಿಯ ಬೆಳಕಿನಲ್ಲಿ ಇವುಗಳ ಸೌಂದರ್ಯವು ಇನ್ನೂ ಹೆಚ್ಚು ಎದ್ದುಕಾಣುತ್ತದೆ; ಸೇತುವೆಯ ಉದ್ದಕ್ಕೂ 1,200 ಹೆದ್ದಾರಿ ದೀಪಗಳಿವೆ.
ಪರಿಸರಸಂಬಂಧಿತ ಪಂಥಾಹ್ವಾನಗಳು
ಹೊಸ ಸೇತುವೆಯ ಸ್ಥಳದ ಅಂತಿಮ ತೀರ್ಮಾನವು ಸುಲಭದ ಕೆಲಸವಾಗಿರಲಿಲ್ಲ. ಅದಕ್ಕಾಗಿ ಯಾವ ಅಂಶಗಳನ್ನು ಪರಿಗಣಿಸಬೇಕಾಗಿತ್ತು?
ಪರಿಸರದ ವಿಷಯದಲ್ಲಿ ನೋಡುವುದಾದರೆ, ಆ ಸ್ಥಳವು ದೊಡ್ಡ ಪಂಥಾಹ್ವಾನವನ್ನು ಒಡ್ಡಿತು. ಇದಕ್ಕೆ ಕಾರಣವೇನೆಂದರೆ, ಪಕ್ಷಿಗಳಿಗಾಗಿ ರಚಿಸಲ್ಪಟ್ಟಿರುವ ಒಂದು ನೈಸರ್ಗಿಕ ಪಕ್ಷಿಧಾಮದ ಮೂಲಕ ಈ ಸೇತುವೆಯು ಹಾದುಹೋಗುತ್ತದೆ; ಪಶ್ಚಿಮ ಯೂರೋಪಿನಲ್ಲಿರುವ ಅತಿ ದೊಡ್ಡ ನದೀಮುಖದ ಬಳಿ ಈ ಪಕ್ಷಿಧಾಮವಿದೆ. ಸಸ್ಯಸಂಪತ್ತು, ಮೀನುಗಳು, ಪಕ್ಷಿಗಳು, ಪುರಾತನ ಶೋಧನಾ ಶಾಸ್ತ್ರದ ಕಂಡುಹಿಡಿತಗಳು, ನೀರು ಹಾಗೂ ಗಾಳಿಯ ಗುಣಮಟ್ಟ, ಮತ್ತು ನೂರಾರು ಎಕರೆಗಳಷ್ಟಿರುವ ಉಪ್ಪಿನ ಕೊಪ್ಪರಿಕೆಗಳ ಸಂರಕ್ಷಣೆಗಾಗಿ ಬಹಳಷ್ಟು ಅಧ್ಯಯನಗಳನ್ನು ಮಾಡಬೇಕಾಯಿತು. ಈ ವನ್ಯಜೀವಿಗಳಿಗೆ ಟಾಗಸ್ ನದೀಮುಖವೇ ಏಕೆ ಇಷ್ಟು ಆಕರ್ಷಿತವಾಗಿದೆ? ಇದು ಪೋರ್ಚುಗಲ್ ಹಾಗೂ ಯೂರೋಪಿನ ಅತ್ಯಂತ ಪ್ರಮುಖ ಆರ್ದ್ರ ಪ್ರದೇಶಗಳಲ್ಲಿ ಒಂದಾಗಿದ್ದು, ಅಂತಾರಾಷ್ಟ್ರೀಯವಾಗಿ ಸಂರಕ್ಷಿಸಲ್ಪಟ್ಟಿರುವ ವಲಸೆಹೋಗುವ ಪಕ್ಷಿಗಳಿಗೆ ಸಂತಾನಾಭಿವೃದ್ಧಿಮಾಡಲು ಯೋಗ್ಯವಾದ ಸ್ಥಳವಾಗಿ ಪರಿಣಮಿಸಿದೆ. ಅಂತಹ ಪಕ್ಷಿಗಳಲ್ಲಿ ಕೆಲವು ಯಾವುವೆಂದರೆ, ಕಪ್ಪು ರೆಕ್ಕೆಯ ಸ್ಟಿಲ್ಟ್ ಹಕ್ಕಿ, ಕೆಂಟಿಷ್ ಪ್ಲೋವರ್ ಹಕ್ಕಿ, ಮತ್ತು ಸಮುದ್ರದ ಚಿಕ್ಕ ಹಕ್ಕಿಯೇ. ಶರತ್ಕಾಲ ಹಾಗೂ ಚಳಿಗಾಲಗಳಲ್ಲಿ, ನೀರಿನ ಪೂರ್ಣಉಬ್ಬರವಿದ್ದಾಗ, ಸಾವಿರಾರು ಪಕ್ಷಿಗಳು ಈ ಉಪ್ಪು ನೀರಿನ ಪ್ರದೇಶವನ್ನು ಆಶ್ರಯಸ್ಥಾನವಾಗಿ ಉಪಯೋಗಿಸುತ್ತವೆ.
ದೀರ್ಘ ಸಮಯದಿಂದ ಅಸ್ತಿತ್ವದಲ್ಲಿರುವ ಮೀನು ಸಾಕುವ ಕೇಂದ್ರಗಳಿಗೆ ಹೆಚ್ಚು ಗಮನಕೊಡಬೇಕಾಗಿತ್ತು. ಅಂದರೆ, ಮೀನುಗಳಿಗೆ ಹೆಚ್ಚು ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕಾಗಿತ್ತು. ಮೀನು ಸಾಕುವ ಕೇಂದ್ರಗಳ ಮೇಲೆ ನಿಗವಿಡುವ ಸಲುವಾಗಿ, ಸುಮಾರು ಮೂರು ಸಾವಿರ ಮೀನುಗಳಿಗೆ—ಅವುಗಳಲ್ಲಿ ಹೆಚ್ಚಾಗಿ ಸೋಲ್ ಮೀನುಗಳು ಹಾಗೂ ಸೀ ಬಾಸ್ ಮೀನುಗಳಿದ್ದವು—ಗುರುತನ್ನು ಹಾಕಲಾಗಿತ್ತು.
ಅನಿರೀಕ್ಷಿತವಾಗಿ, ಈ ಪ್ರಶಾಂತವಾದ ನೈಸರ್ಗಿಕ ಇರುನೆಲೆಯು, ನಗರಕ್ಕೆ ಸಮೀಪವಾಗಿ ತರಲ್ಪಟ್ಟಿದೆ. ಎಷ್ಟರ ಮಟ್ಟಿಗೆ ಈ ನೈಸರ್ಗಿಕ ಪರಿಸರವು ದುಷ್ಪರಿಣಾಮಕ್ಕೊಳಗಾಗುವುದು? ಅಮೂಲ್ಯವಾದ ದಕ್ಷಿಣ ತೀರವನ್ನು ಸಂರಕ್ಷಿಸಲಿಕ್ಕಾಗಿ ಕೈಕೊಳ್ಳಲ್ಪಟ್ಟಿರುವ ಸೂಕ್ತಕ್ರಮಗಳು, ಪಕ್ಷಿಧಾಮದ ನೈಸರ್ಗಿಕ ಸಂಪನ್ಮೂಲಗಳನ್ನು ಸಾಕಷ್ಟು ಮಟ್ಟಿಗೆ ಸಂರಕ್ಷಿಸುವುದೆಂದು ನಿರೀಕ್ಷಿಸಲಾಗಿದೆ.
ವಾಸ್ಕೋಡಿಗಾಮ ಸೇತುವೆಯು, ತಾಂತ್ರಿಕತೆಯ ಪ್ರಗತಿ, ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಸೌಂದರ್ಯ, ಹಾಗೂ ಪರಸ್ಪರ ಅನುರೂಪತೆಯಲ್ಲಿ ನಿಜವಾಗಿಯೂ ಒಂದು ದೊಡ್ಡ ಸಾಧನೆಯಾಗಿದೆ. ವಾಸ್ಕೋಡಿಗಾಮನ ಹೆಸರಿನಲ್ಲಿ ಕಟ್ಟಲ್ಪಟ್ಟಿರುವ ಸೇತುವೆಯ ವಿಷಯದಲ್ಲಿ ಪೋರ್ಚುಗಲ್ ಖಂಡಿತವಾಗಿಯೂ ಹೆಮ್ಮೆಪಡಸಾಧ್ಯವಿದೆ!
[ಪುಟ 15ರಲ್ಲಿರುವಚಿತ್ರ]
(For fully formatted text, see publication)
ಪೋರ್ಚುಗಲ್
ಸ್ಪೆಯ್ನ್
[ಭೂಪಟ]
ಪೋರ್ಚುಗಲ್
ಲಿಸ್ಬನ್
ಮಾಂಟೀಹೊ
ವಾಸ್ಕೋಡಿಗಾಮ ಸೇತುವೆ
[ಕೃಪೆ]
Courtesy of Lusoponte/Sonomage