ಸೇತುವೆಗಳು—ಅವು ಇಲ್ಲದಿದ್ದರೆ ನಾವೇನು ಮಾಡುತ್ತಿದ್ದೆವು?
“ನಿಮಗೆ ದಾಟಲು ಸಹಾಯ ಮಾಡಿದ ಸೇತುವೆಯನ್ನು ಪ್ರಶಂಸಿಸಿರಿ.”—ಜಾರ್ಜ್ ಕಾಲ್ಮನ್, 19ನೆಯ ಶತಮಾನದ ಇಂಗ್ಲಿಷ್ ನಾಟಕಕಾರ.
ಕೊನೆಯ ಬಾರಿ ನೀವು ಸೇತುವೆಯನ್ನು ದಾಟಿದ್ದು ಯಾವಾಗ? ನೀವು ಆ ಸೇತುವೆಯನ್ನು ಸರಿಯಾಗಿ ಗಮನಿಸಿದಿರೊ? ಪ್ರತಿ ದಿನ ಲಕ್ಷಗಟ್ಟಲೆ ಜನರು ಸೇತುವೆಗಳನ್ನು ದಾಟುತ್ತಾರೆ. ಆದರೆ ನಾವು ಅವುಗಳ ಬಗ್ಗೆ ಯೋಚಿಸುವುದೇ ಇಲ್ಲ. ನಾವು ಆ ಸೇತುವೆಗಳ ಮೇಲೆ ಅಥವಾ ಅವುಗಳ ಕೆಳಗೆ ನಡೆಯುತ್ತೇವೆ, ಸವಾರಿಮಾಡುತ್ತೇವೆ, ಅಥವಾ ವಾಹನಗಳನ್ನು ನಡೆಸುತ್ತೇವಾದರೂ, ಅವುಗಳ ಬಗ್ಗೆ ಸ್ವಲ್ಪವೂ ಗಮನ ಕೊಡುವುದೇ ಇಲ್ಲ. ಆದರೆ ಅವು ಇಲ್ಲದಿದ್ದರೆ ಏನಾಗುತ್ತಿತ್ತು?
ಸಾವಿರಾರು ವರ್ಷಗಳಿಂದ, ಮನುಷ್ಯ ಹಾಗೂ ಪ್ರಾಣಿಗಳು, ಎಲ್ಲ ರೀತಿಯ ಸೇತುವೆಗಳ ಸಹಾಯದಿಂದ, ಒಂದು ನದಿ, ದೊಡ್ಡ ಹಳ್ಳ, ಅಥವಾ ಕಮರಿಯ ಮಧ್ಯೆಯಿರುವ ಅಂತರಗಳನ್ನು ದಾಟಲು ಶಕ್ತವಾಗಿವೆ. ಕೈರೊ, ನ್ಯೂ ಯಾರ್ಕ್, ಮಾಸ್ಕೊ, ಲಂಡನ್, ಸಿಡ್ನಿ ಹಾಗೂ ಇನ್ನಿತರ ನಗರಗಳನ್ನು, ಅವುಗಳ ಸೇತುವೆಗಳಿಲ್ಲದೆ ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಹೌದು, ಸೇತುವೆಗಳಿಗೆ ಬಹಳ ಪುರಾತನ ಇತಿಹಾಸವಿದೆ.
ಪುರಾತನ ಕಾಲದ ಸೇತುವೆಗಳು
ಸುಮಾರು 2,500 ವರ್ಷಗಳ ಹಿಂದೆ, ಬಾಬೆಲಿನ ರಾಣಿ ನಿಟೊಕ್ರಿಸ್, ಯೂಫ್ರೇಟೀಸ್ ನದಿಗೆ ಸೇತುವೆಯನ್ನು ಕಟ್ಟಿಸಿದಳು. ಏಕೆ? ಗ್ರೀಕ್ ಇತಿಹಾಸಕಾರ ಹೆರೊಡೊಟಸ್ ಉತ್ತರಿಸುವುದು: “ಈ ನದಿಯು [ಬಾಬೆಲನ್ನು] ಎರಡು ಪ್ರತ್ಯೇಕ ಭಾಗಗಳನ್ನಾಗಿ ವಿಂಗಡಿಸಿತ್ತು. ಹಿಂದಿನ ಅರಸರು ಆಳುತ್ತಿದ್ದ ಸಮಯದಲ್ಲಿ, ಒಬ್ಬ ಮನುಷ್ಯನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಬಯಸುವಲ್ಲಿ, ಅವನು ದೋಣಿಯಲ್ಲಿ ನದಿಯನ್ನು ದಾಟಬೇಕಾಗಿತ್ತು; ಇದು ನನ್ನ ಎಣಿಕೆಯಲ್ಲಿ ತುಂಬ ತೊಂದರೆದಾಯಕವಾಗಿತ್ತೆಂದು ಅನಿಸುತ್ತದೆ.” ಸೇತುವೆಯ ನಿರ್ಮಾಣಕ್ಕಾಗಿ, ಮರದ ತೊಲೆಗಳು, ಸುಟ್ಟ ಇಟ್ಟಿಗೆಗಳು, ಹಾಗೂ ಕಲ್ಲಿನ ಚಪ್ಪಡಿಗಳನ್ನು ಮತ್ತು ಗಾರೆಹಾಕಲಿಕ್ಕಾಗಿ ಉಕ್ಕು ಹಾಗೂ ಸೀಸವನ್ನು ಉಪಯೋಗಿಸುತ್ತಾ, ಪುರಾತನ ಸಮಯದ ಅತ್ಯಂತ ಪ್ರಸಿದ್ಧ ನದಿಗಳಲ್ಲಿ ಒಂದಾದ ಯೂಫ್ರೇಟೀಸ್ ನದಿಯ ಮೇಲೆ ನಿಟೊಕ್ರಿಸಳು ಸೇತುವೆಯನ್ನು ಕಟ್ಟಿಸಿದಳು.
ಕೆಲವೊಮ್ಮೆ ಸೇತುವೆಗಳು ಇತಿಹಾಸದ ದಿಕ್ಕನ್ನೇ ಬದಲಾಯಿಸಿವೆ. ಪಾರಸಿಯ ಅರಸನಾದ ಮಹಾ ದಾರ್ಯಾವೆಷನು, ಸಿಥಿಯನರ ವಿರುದ್ಧ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದಾಗ, ಏಷಿಯದಿಂದ ಯೂರೋಪಿಗೆ ಹೋಗುವ ಶೀಘ್ರದಲ್ಲಿ ತಲಪುವ ಭೂಮಾರ್ಗದಲ್ಲಿ ಪ್ರಯಾಣಿಸಲು ಬಯಸಿದನು. ಅಂದರೆ, ಅವನ 6,00,000 ಸೈನಿಕರಿದ್ದ ಸೇನೆಯು ಬಾಸ್ಪೊರಸ್ ಜಲಸಂಧಿಯನ್ನು ದಾಟಿಹೋಗಬೇಕಿತ್ತು. ದೋಣಿಯ ಮೂಲಕ ಆ ಜಲಸಂಧಿಯನ್ನು ದಾಟುವುದು ಅಪಾಯಕರವಾಗಿತ್ತು, ಏಕೆಂದರೆ ಭಾರಿ ಮಂಜು ಬೀಳುವ ಹಾಗೂ ಅಪಾಯಕರ ಪ್ರವಾಹಗಳ ಸಮಸ್ಯೆಯಿತ್ತು. ಆದುದರಿಂದ ದಾರ್ಯಾವೆಷನು ದೋಣಿಗಳನ್ನು ಒಟ್ಟುಗೂಡಿಸಿ, ಬಿಗಿಯಾಗಿ ಕಟ್ಟಿ, 900 ಮೀಟರುಗಳಷ್ಟು ಉದ್ದದ ದೋಣಿಸೇತುವೆಯನ್ನು ನಿರ್ಮಿಸಿದನು. ಆ ಕಾಲದಲ್ಲಿ ದಾರ್ಯಾವೆಷನು ಜಲಸಂಧಿಯನ್ನು ದಾಟಲಿಕ್ಕಾಗಿ ಕಷ್ಟಪಟ್ಟ ಹಾಗೆ ನಾವು ಇಂದು ಕಷ್ಟಪಡಬೇಕಾಗಿಲ್ಲ. ಟರ್ಕಿಯ ಇಸ್ತಾನ್ಬುಲ್ನಲ್ಲಿರುವ ಬಾಸ್ಪೊರಸ್ ಸೇತುವೆಗಳನ್ನು ನೀವು ಉಪಯೋಗಿಸುವಲ್ಲಿ, ಒಂದು ಮೋಟಾರು ವಾಹನದ ಮೂಲಕ ನೀವು ಕೇವಲ ಎರಡೇ ನಿಮಿಷಗಳಲ್ಲಿ ಆ ಪ್ರಯಾಣವನ್ನು ಮುಗಿಸಸಾಧ್ಯವಿದೆ.
ನೀವು ಒಬ್ಬ ಬೈಬಲ್ ವಿದ್ಯಾರ್ಥಿಯಾಗಿರುವಲ್ಲಿ, ಒಂದು ಸೇತುವೆಯು ಇಲ್ಲವಾದುದರಿಂದ, ಅದು ಇತಿಹಾಸದ ದಿಕ್ಕನೇ ಬದಲಾಯಿಸಿದ ಸಂದರ್ಭವನ್ನು ನೀವು ಜ್ಞಾಪಿಸಿಕೊಳ್ಳಬಹುದು. ಬಾಬೆಲಿನ ರಾಜ ನೆಬೂಕದ್ನೆಚ್ಚರನು, ತೂರ್ ಪಟ್ಟಣದ ದ್ವೀಪನಗರಕ್ಕೆ ಮುತ್ತಿಗೆಹಾಕಿದಾಗ ಏನು ಸಂಭವಿಸಿತೆಂಬುದನ್ನು ನೆನಪಿಸಿಕೊಳ್ಳಿರಿ. ಸುಮಾರು 13 ವರ್ಷಗಳ ವರೆಗೆ ಅವನು ಆ ನಗರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ಅವನು ಅದನ್ನು ವಶಪಡಿಸಿಕೊಳ್ಳಲು ಅಸಮರ್ಥನಾಗಿದ್ದನು. ಅದಕ್ಕೆ ಕಾರಣವೇನೆಂದರೆ, ಆ ದ್ವೀಪಕ್ಕೂ ವಿಸ್ತಾರವಾದ ಭೂಭಾಗಕ್ಕೂ ನಡುವೆ ಯಾವುದೇ ಸೇತುವೆಯಿರಲಿಲ್ಲ. (ಯೆಹೆಜ್ಕೇಲ 29:17-20) ಮಹಾ ಅಲೆಕ್ಸಾಂಡರನು ವಿಸ್ತಾರವಾದ ಭೂಭಾಗದಿಂದ ಆ ದ್ವೀಪಕ್ಕೆ ಒಂದು ಕಾಲುಹಾದಿಯನ್ನು ಕಟ್ಟಿಸುವ ವರೆಗೆ, ಅಂದರೆ ಮುನ್ನೂರು ವರ್ಷಗಳ ವರೆಗೆ ಆ ದ್ವೀಪ ನಗರವನ್ನು ವಶಪಡಿಸಿಕೊಳ್ಳಲಾಗಲಿಲ್ಲ.
ಪ್ರಥಮ ಶತಮಾನದಷ್ಟಕ್ಕೆ, ‘ಎಲ್ಲ ರಸ್ತೆಗಳೂ ರೋಮ್ ಸೇರುತ್ತವೆ’ ಎಂಬ ಹೇಳಿಕೆಯು ತುಂಬ ಜನಪ್ರಿಯವಾಯಿತು, ಆದರೆ ರೋಮನರು ತಮ್ಮ ಚಕ್ರಾಧಿಪತ್ಯವನ್ನು ಐಕ್ಯವಾಗಿರಿಸಲಿಕ್ಕಾಗಿ, ಸೇತುವೆಗಳನ್ನು ಹಾಗೂ ರಸ್ತೆಗಳನ್ನು ನಿರ್ಮಿಸುವ ಅಗತ್ಯವಿತ್ತು. ಎಂಟೆಂಟು ಟನ್ನುಗಳಷ್ಟಿರುವ ಕಲ್ಲುಗಳನ್ನು ಉಪಯೋಗಿಸಿ, ರೋಮನ್ ಇಂಜಿನಿಯರುಗಳು ಕಮಾನು ಸೇತುವೆಗಳನ್ನು ಕಟ್ಟಿದರು. ಈ ಕಮಾನು ಸೇತುವೆಗಳು ಎಷ್ಟು ಕೌಶಲಭರಿತವಾಗಿ ವಿನ್ಯಾಸಿಸಲ್ಪಟ್ಟಿದ್ದವೆಂದರೆ, ಅವುಗಳಲ್ಲಿ ಕೆಲವು ಸುಮಾರು ಎರಡು ಸಾವಿರ ವರ್ಷಗಳ ಬಳಿಕ ಇನ್ನೂ ಅಸ್ತಿತ್ವದಲ್ಲಿವೆ. ಅವರು ಸೇತುವೆಯ ರೂಪದಲ್ಲಿ ನೀರಿನ ಕಾಲುವೆಗಳನ್ನು ಹಾಗೂ ರಸ್ತೆ ಕಾಲುವೆಗಳನ್ನು ಸಹ ಕಟ್ಟಿದರು.
ಮಧ್ಯಯುಗಗಳಲ್ಲಿ, ಸೇತುವೆಗಳು ಕೆಲವೊಮ್ಮೆ ರಕ್ಷಣಾ ದುರ್ಗಗಳಾಗಿ ಕಾರ್ಯನಡಿಸಿದವು. ಸಾ.ಶ. 944ರಲ್ಲಿ, ಡೇನರಿಂದ ಬಂದ ಆಕ್ರಮಣದಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಸ್ಯಾಕ್ಸನರು ಲಂಡನಿನಲ್ಲಿರುವ ಥೇಮ್ಸ್ ನದಿಗೆ ಒಂದು ಮರದ ಸೇತುವೆಯನ್ನು ಕಟ್ಟಿದರು. ಸುಮಾರು ಮುನ್ನೂರು ವರ್ಷಗಳ ಬಳಿಕ, ಈ ಮರದ ಸೇತುವೆಗೆ ಬದಲಾಗಿ ಓಲ್ಡ್ ಲಂಡನ್ ಬ್ರಿಡ್ಜ್ ಎಂಬ ಸೇತುವೆಯು ಕಟ್ಟಲ್ಪಟ್ಟಿತು. ಈ ಸೇತುವೆಯು ಇತಿಹಾಸ ಪ್ರಸಿದ್ಧವಾಗಿದೆ ಮತ್ತು ಮಕ್ಕಳ ಪದ್ಯದಲ್ಲೂ ಒಳಗೂಡಿಸಲ್ಪಟ್ಟಿದೆ.
ಒಂದನೆಯ ರಾಣಿ ಎಲಿಸಬೆತ್ ಇಂಗ್ಲೆಂಡನ್ನು ಆಳಲು ಆರಂಭಿಸಿದ ಸಮಯದಷ್ಟಕ್ಕೆ, ಓಲ್ಡ್ ಲಂಡನ್ ಬ್ರಿಡ್ಜ್ ಕೇವಲ ಒಂದು ಕಲ್ಲಿನ ಕೋಟೆಯಾಗಿ ಉಳಿಯಲಿಲ್ಲ. ಆ ಸೇತುವೆಯ ಮೇಲೆಯೇ ಕಟ್ಟಡಗಳು ಕಟ್ಟಲ್ಪಟ್ಟವು. ಕೆಳಗಿನ ಮಹಡಿಯಲ್ಲಿ ಅಂಗಡಿಗಳಿದ್ದವು. ಮೇಲಿನ ಮಹಡಿಗಳ ಕುರಿತೇನು? ಶ್ರೀಮಂತ ವ್ಯಾಪಾರಿಗಳಿಗೆ ಮತ್ತು ರಾಜ ಮನೆತನದ ಸದಸ್ಯರಿಗೆ ಸಹ ಇವು ವಾಸದ ಬೀಡುಗಳಾಗಿದ್ದವು. ಲಂಡನ್ ಬ್ರಿಡ್ಜ್, ಲಂಡನಿನ ಸಾಮಾಜಿಕ ಜೀವನದ ಕೇಂದ್ರ ಸ್ಥಾನವಾಗಿ ಪರಿಣಮಿಸಿತ್ತು. ಅಂಗಡಿಗಳು ಹಾಗೂ ನಿವಾಸಗಳಿಂದ ಸಂಗ್ರಹಿಸಲ್ಪಟ್ಟ ಬಾಡಿಗೆಗಳಿಂದ, ಈ ಸೇತುವೆಯ ದುರಸ್ತಿಗಾಗಿ ಹಣವನ್ನು ತೆರಲು ಸಾಧ್ಯವಾಗುತ್ತಿತ್ತು. ಹೌದು, ಲಂಡನ್ ಬ್ರಿಡ್ಜ್ ಸುಂಕಕೊಡುವ ಒಂದು ಸೇತುವೆಯಾಗಿತ್ತು!
ಐರೋಪ್ಯರು ಮರದ ಹಲಗೆಗಳಿಂದ ಹಾಗೂ ಕಲ್ಲುಗಳಿಂದ ಸೇತುವೆಗಳನ್ನು ಕಟ್ಟುವುದರಲ್ಲಿ ತೊಡಗಿದ್ದಾಗ, ದಕ್ಷಿಣ ಅಮೆರಿಕದ ಇಂಕರು, ಹಗ್ಗಗಳಿಂದ ಸೇತುವೆಯನ್ನು ಕಟ್ಟುತ್ತಿದ್ದರು. ಪ್ರಸಿದ್ಧವಾದ ಒಂದು ಉದಾಹರಣೆಯು ಯಾವುದೆಂದರೆ, ಸಾನ್ ಲೂಇಸ್ ರೇ ಸೇತುವೆಯಾಗಿದೆ. ಇದು ಪೆರೂವಿನಲ್ಲಿರುವ ಅಪೂರಿಮ್ಯಾಕ್ ನದಿಗೆ ಕಟ್ಟಲ್ಪಟ್ಟ ಸೇತುವೆಯಾಗಿದೆ. ಇಂಕರು ಸಸ್ಯಗಳ ನಾರುಗಳನ್ನು ಸಂಗ್ರಹಿಸಿ, ಅವುಗಳನ್ನು ಒಟ್ಟಿಗೆ ಹೆಣೆದು, ಒಬ್ಬ ಮನುಷ್ಯನ ದೇಹದಷ್ಟು ದಪ್ಪವಾದ ಹಗ್ಗಗಳನ್ನು ತಯಾರಿಸಿದರು. ಅವರು ಆ ದಪ್ಪ ಹಗ್ಗಗಳನ್ನು ನದಿಯ ಎರಡೂ ಬದಿಯಲ್ಲಿರುವ ಕಲ್ಲಿನ ಕಂಬಗಳಿಗೆ ಕಟ್ಟಿದರು ಮತ್ತು ಇನ್ನೂ ಕೆಲವು ಹಗ್ಗಗಳನ್ನು ನದಿಯ ಉದ್ದಕ್ಕೂ ಇಳಿಬಿಟ್ಟರು. ಹಗ್ಗಗಳನ್ನು ಎರಡೂ ಬದಿಗೆ ಕಟ್ಟಿದ ಬಳಿಕ, ಆ ಇಳಿಬಿಟ್ಟ ಹಗ್ಗಗಳಿಗೆ ಮರದ ಹಲಗೆಗಳನ್ನು ಕಟ್ಟುವ ಮೂಲಕ ಒಂದು ಕಾಲುಹಾದಿಯನ್ನು ರಚಿಸಿದರು. ಎರಡು ವರ್ಷಗಳಿಗೊಮ್ಮೆ ರಿಪೇರಿಮಾಡುವ ತಂಡವು ಬಂದು ಆ ಹಗ್ಗಗಳನ್ನು ಬದಲಾಯಿಸುತ್ತಿತ್ತು. ಈ ಸೇತುವೆಯು ತುಂಬ ಕುಶಲವಾಗಿ ಕಟ್ಟಲ್ಪಟ್ಟು, ಎಷ್ಟು ಚೆನ್ನಾಗಿ ನೋಡಿಕೊಳ್ಳಲ್ಪಟ್ಟಿತೆಂದರೆ, ಅದು ಸುಮಾರು ಐನೂರು ವರ್ಷಗಳ ವರೆಗೆ ಉಳಿಯಿತು!
ಸೇತುವೆಗಳು ಹಾಗೂ ನಮ್ಮ ಬದಲಾಗುತ್ತಿರುವ ಆವಶ್ಯಕತೆಗಳು
ಸೇತುವೆಗಳು ಯಾವಾಗಲೂ, ಭೂಕಂಪಗಳು, ಬಲವಾದ ಬಿರುಗಾಳಿ, ಹಾಗೂ ಉಷ್ಣತೆಯ ಬದಲಾವಣೆಗಳನ್ನು ತಡೆಗಟ್ಟಿ ನಿಲ್ಲಲು ಶಕ್ತವಾಗಿರಬೇಕು. ಈಗ ನಾವು ನೋಡಿರುವಂತೆ, ಇತ್ತೀಚಿನ ವರೆಗೆ ಇಂಜಿನಿಯರುಗಳು ಸೇತುವೆಯ ನಿರ್ಮಾಣ ಕಾರ್ಯದಲ್ಲಿ, ಮರದ ಹಲಗೆ, ಇಟ್ಟಿಗೆ, ಅಥವಾ ಕಲ್ಲುಗಳನ್ನು ಉಪಯೋಗಿಸುತ್ತಿದ್ದರು. 19ನೆಯ ಶತಮಾನದ ಕೊನೆಯಷ್ಟಕ್ಕೆ ಮೋಟಾರು ವಾಹನಗಳ ಬಳಕೆಯು ಆರಂಭವಾದಾಗ, ಭಾರಿ ವಾಹನ ಸಂಚಾರಕ್ಕೆ ಸ್ಥಳಾವಕಾಶವನ್ನು ಒದಗಿಸಲಿಕ್ಕಾಗಿ, ಈಗಾಗಲೇ ಇದ್ದಂತಹ ಸೇತುವೆಗಳನ್ನು ಸರಿಪಡಿಸಿ, ಅವುಗಳನ್ನು ಅಗಲಮಾಡಬೇಕಾಗಿತ್ತು.
ಆ ಬಳಿಕ ಸ್ಟೀಮ್ ಇಂಜಿನ್ಗಳನ್ನು ಕಂಡುಹಿಡಿಯಲಾಯಿತು. ಇದರಿಂದಾಗಿ ಸೇತುವೆಯ ನಿರ್ಮಾಣ ಹಾಗೂ ವಿನ್ಯಾಸಕ್ಕೆ ಹೆಚ್ಚು ಪ್ರಚೋದನೆ ದೊರಕಿತು. ಅತ್ಯಂತ ಅನುಕೂಲಕರವಾದ ರೈಲು ಮಾರ್ಗಗಳು, ಹೆಚ್ಚಾಗಿ ದೊಡ್ಡ ನಾಲೆ ಇಲ್ಲವೆ ಆಳವಾದ ಕಣಿವೆಯ ಮೂಲಕ ಹಾದುಹೋಗುತ್ತಿದ್ದವು. ಇಂತಹ ತಡೆಗಟ್ಟುಗಳನ್ನು ಎದುರಿಸಿ, ಪ್ರತಿಯೊಂದು ರೈಲ್ ಇಂಜಿನ್ ಅತ್ಯಧಿಕ ಭಾರವಾದ ಸರಕುಪೆಟ್ಟಿಗೆಗಳನ್ನು ಕೊಂಡೊಯ್ಯಸಾಧ್ಯವಾಗುವಂತೆ ಮಾಡುವ ಸೇತುವೆಯನ್ನು ಕಟ್ಟಸಾಧ್ಯವಿತ್ತೊ? ಸ್ವಲ್ಪ ಸಮಯದ ವರೆಗೆ, ಬೀಡುಕಬ್ಬಿಣದ ಸೇತುವೆಗಳು ಈ ಆವಶ್ಯಕತೆಯನ್ನು ಪೂರೈಸಿದವು. 19ನೆಯ ಶತಮಾನದ ಆರಂಭದಲ್ಲಿದ್ದ ಅತಿ ಪ್ರಸಿದ್ಧ ಸೇತುವೆಗಳಲ್ಲಿ ಒಂದು, ಉತ್ತರ ವೇಲ್ಸ್ನಲ್ಲಿರುವ ಮಿನಾಯ್ ಜಲಸಂಧಿಯ ಮೇಲಿರುವ ತೂಗುಸೇತುವೆಯಾಗಿದೆ. ಸ್ಕಾಟಿಷ್ ಇಂಜಿನಿಯರನಾದ ಥೊಮಸ್ ಟೆಲ್ಫರ್ಡ್ ಇದನ್ನು ವಿನ್ಯಾಸಿಸಿ, 1826ರಲ್ಲಿ ಅದನ್ನು ಪೂರ್ಣಗೊಳಿಸಿದನು. ಅದು 176 ಮೀಟರ್ಗಳಷ್ಟು ಉದ್ದವಿದ್ದು, ಇನ್ನೂ ಉಪಯೋಗಿಸಲ್ಪಡುತ್ತಿದೆ! ಆದರೆ ಬೀಡುಕಬ್ಬಿಣವು ಬೇಗ ಮುರಿಯುವಂತಹ ಲೋಹವಾಗಿದೆ, ಇದರಿಂದಾಗಿ ಸೇತುವೆಗಳ ಕುಸಿತವು ಸರ್ವಸಾಮಾನ್ಯವಾಗಿತ್ತು. ಕಟ್ಟಕಡೆಗೆ, 1800ಗಳ ಕೊನೆಯ ಭಾಗದಲ್ಲಿ, ಉಕ್ಕಿನ ತಯಾರಿಯು ಆರಂಭವಾಯಿತು. ತುಂಬ ಉದ್ದವಾದ, ಹೆಚ್ಚು ಬಾಳಿಕೆಬರುವ ಸೇತುವೆಗಳನ್ನು ಕಟ್ಟುವುದಕ್ಕಾಗಿ ಉಪಯೋಗಿಸಲು ಸೂಕ್ತ ಗುಣಗಳು ಈ ಲೋಹಕ್ಕಿದ್ದವು.
ವಿವಿಧ ರೀತಿಯ ಸೇತುವೆ ವಿನ್ಯಾಸಗಳು
ಏಳು ರೀತಿಯ ಪ್ರಮುಖವಾದ ಸೇತುವೆ ವಿನ್ಯಾಸಗಳಿವೆ. (ಮೇಲಿರುವ ರೇಖಾಚೌಕವನ್ನು ನೋಡಿ.) ನಾವು ಅವುಗಳಲ್ಲಿ ಎರಡನ್ನು ಈಗ ಸಂಕ್ಷಿಪ್ತವಾಗಿ ಚರ್ಚಿಸುವೆವು.
ಕ್ಯಾಂಟಿಲಿವರ್ ಸೇತುವೆಗಳಿಗೆ ನದಿಯ ಎರಡೂ ಬದಿಯಲ್ಲಿ ಬಹಳ ದಪ್ಪವಾದ ಎರಡು ಕಂಬಗಳಿರುತ್ತವೆ. ಒಂದು ಈಜುಕೊಳದ ತುದಿಗೆ ಡೈವಿಂಗ್ ಬೋರ್ಡ್ (ಧುಮುಕು ಹಲಗೆ) ಹೇಗೆ ಕಟ್ಟಲ್ಪಟ್ಟಿರುತ್ತದೋ ಹಾಗೆ ಪ್ರತಿಯೊಂದು ಕಂಬಕ್ಕೆ ಅಡ್ಡತೊಲೆಗಳು ಭದ್ರವಾಗಿ ಬಿಗಿಯಲ್ಪಟ್ಟಿರುತ್ತವೆ. ಸೇತುವೆಯನ್ನು ಪೂರ್ಣಗೊಳಿಸಲು, ಆ ಎರಡೂ ಕಂಬಕ್ಕೆ ಬಿಗಿಯಲ್ಪಟ್ಟಿರುವ ಅಡ್ಡತೊಲೆಗಳನ್ನು, ಮಧ್ಯದಲ್ಲಿರುವ ಆಸರೆಕಟ್ಟಿನಂತಹ ಉಕ್ಕಿನ ತೊಲೆಯಿಂದ ಜೊತೆಗೂಡಿಸಲಾಗುತ್ತದೆ.
ನದಿಯು ಅತಿ ರಭಸವಾಗಿ ಹರಿಯುತ್ತಿರುವಲ್ಲಿ ಅಥವಾ ನದೀತಳವು ತುಂಬ ಮೆತ್ತಗಾಗಿರುವಾಗ, ಕ್ಯಾಂಟಿಲಿವರ್ ಸೇತುವೆಯ ನಿರ್ಮಾಣವು ಹೆಚ್ಚು ಅನುಕೂಲಕರ. ಏಕೆಂದರೆ ನದೀತಳದ ಮಧ್ಯಭಾಗದಲ್ಲಿ ಕಂಬಗಳನ್ನು ನೆಡುವ ಅಗತ್ಯವಿರುವುದಿಲ್ಲ. ಕ್ಯಾಂಟಿಲಿವರ್ ಸೇತುವೆಗಳು ಬಳುಕದ ಕಾರಣ, ರೈಲುಮಾರ್ಗಗಳಂತಹ ಭಾರಿ ಸಂಚಾರಮಾರ್ಗಗಳನ್ನು ನಿರ್ಮಿಸಲು ಅವು ಅತ್ಯುತ್ತಮವಾದ ಸೇತುವೆಗಳಾಗಿವೆ.
ಒಂದು ಸರ್ಕಸ್ನಲ್ಲಿ ಒಬ್ಬ ದೊಂಬರಾಟದ ವ್ಯಕ್ತಿಯು ಬಿಗಿಯಾಗಿ ಕಟ್ಟಲ್ಪಟ್ಟಿರುವ ಒಂದು ಹಗ್ಗದ ಮೇಲೆ ನಡೆಯುವುದನ್ನು ನೀವು ನೋಡಿರಬಹುದು. ಅವನು ನಿಜವಾಗಿ ಒಂದು ಸೇತುವೆಯನ್ನು, ಅಂದರೆ ತೂಗುಸೇತುವೆಯನ್ನು ದಾಟುತ್ತಿದ್ದಾನೆ ಎಂಬುದು ನಿಮಗೆ ಗೊತ್ತಿತ್ತೊ? ಇಂದು ಉಪಯೋಗಿಸಲ್ಪಡುತ್ತಿರುವ ಕೆಲವು ತೂಗುಸೇತುವೆಗಳು, ದೊಂಬರಾಟದವನು ನಡೆಯುವ ಬಿಗಿಯಾಗಿ ಕಟ್ಟಲ್ಪಟ್ಟಿರುವ ಹಗ್ಗದಂತೆಯೇ ಇವೆ. ಈ ಸೇತುವೆಗಳು ಹೇಗಿರುತ್ತವೆಂದರೆ, ನದಿಯ ಎರಡೂ ತುದಿಯಲ್ಲಿರುವ ಕಂಬಗಳಿಗೆ ಹಗ್ಗವು ಬಿಗಿಯಲ್ಪಟ್ಟಿದ್ದು, ಆ ಹಗ್ಗಕ್ಕೆ ಒಂದು ಬುಟ್ಟಿಯು ಕಟ್ಟಲ್ಪಟ್ಟಿರುತ್ತದೆ. ಪ್ರಯಾಣಿಕನು ಆ ಬುಟ್ಟಿಯೊಳಗೆ ಕುಳಿತುಕೊಂಡು, ಮೇಲಿನ ಹಗ್ಗವನ್ನು ಹಿಡಿದುಕೊಂಡು, ಸ್ವಲ್ಪ ಕೆಳಮುಖವಾಗಿ ಆ ಬುಟ್ಟಿಯನ್ನು ತಳ್ಳುತ್ತಾನೆ. ಹೀಗೆ ತಳ್ಳುತ್ತಾ ತಳ್ಳುತ್ತಾ ಆಚೆಯ ದಡವನ್ನು ತಲಪುತ್ತಾನೆ. ಲೋಕದಾದ್ಯಂತ ಇರುವ ಜನರು ಯಾವಾಗಲೂ ಸರಳ ರೀತಿಯ ಹಗ್ಗದ ಸೇತುವೆಗಳನ್ನು ಉಪಯೋಗಿಸುತ್ತಾರೆ.
ಹಗ್ಗದಿಂದ ಮಾಡಲ್ಪಟ್ಟಿರುವ ಒಂದು ಸೇತುವೆಯ ಮೇಲೆ ಮೋಟಾರು ವಾಹನವು ಸಂಚರಿಸುವುದನ್ನು ನೀವು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದು ಗೊತ್ತಿರುವ ವಿಷಯವೇ. ಉಕ್ಕಿನ ಸಂಕೋಲೆಗಳು ಹಾಗೂ ಕಬ್ಬಿಣದ ತಂತಿಗಳು ಕಂಡುಹಿಡಿಯಲ್ಪಟ್ಟ ಬಳಿಕ, ಭಾರವಾದ ಲೋಡ್ಗಳನ್ನು ಹೊರಸಾಧ್ಯವಿರುವ ತೂಗುಸೇತುವೆಗಳನ್ನು ಕಟ್ಟಲು ಸಾಧ್ಯವಾಯಿತು. ಆಧುನಿಕ ತೂಗುಸೇತುವೆಗಳ ಮೇಲಿನ ಗೋಪುರಗಳ ನಡುವಿನ ಉದ್ದವು, 1,200 ಕಿಲೊಮೀಟರ್ಗಳು ಅಥವಾ ಅದಕ್ಕಿಂತಲೂ ಹೆಚ್ಚಿರಬಹುದು. ಒಂದು ತೂಗುಸೇತುವೆಯು ಸಾಮಾನ್ಯವಾಗಿ ಎರಡು ಉಕ್ಕಿನ ಕಂಬಗಳಿಂದ ರಚಿತವಾಗಿರುತ್ತದೆ, ಪ್ರತಿಯೊಂದು ಕಂಬದ ಮೇಲೆ ಒಂದೊಂದು ಗೋಪುರವಿರುತ್ತದೆ. ಉಕ್ಕಿನ ದಪ್ಪ ಕೇಬಲ್ಗಳು—ಪ್ರತಿಯೊಂದು ಕೇಬಲ್ ಸಾವಿರಾರು ವೈರುಗಳಿಂದ ಮಾಡಲ್ಪಟ್ಟಿರುತ್ತದೆ—ಮೇಲಿರುವ ಗೋಪುರಗಳಿಗೆ ಹಾಗೂ ಕೆಳಗಿರುವ ರಸ್ತೆಯ ಆಸರೆಕಟ್ಟುಗಳಿಗೆ ಭದ್ರವಾಗಿ ಕಟ್ಟಲ್ಪಟ್ಟಿರುತ್ತವೆ. ಈ ದಪ್ಪ ಕೇಬಲ್ಗಳು, ವಾಹನ ಸಂಚಾರ ಹಾಗೂ ರಸ್ತೆಮಾರ್ಗಗಳ ಭಾರವನ್ನು ಹೊರುವ ಮುಖ್ಯ ಆಧಾರಗಳಾಗಿವೆ. ತೂಗುಸೇತುವೆಯು ಸರಿಯಾಗಿ ಕಟ್ಟಲ್ಪಡುವಲ್ಲಿ, ಅದು ಜಗತ್ತಿನಲ್ಲೇ ಇರುವ ಅತಿ ಸುರಕ್ಷಿತ ಸೇತುವೆಗಳಲ್ಲಿ ಒಂದಾಗಿದೆ.
ಇಷ್ಟರ ವರೆಗೆ ನೀವು ಸೇತುವೆಗಳ ಬಗ್ಗೆ ಇಷ್ಟೊಂದು ಗಂಭೀರವಾಗಿ ಆಲೋಚಿಸಿರಲಿಕ್ಕಿಲ್ಲ, ಅಲ್ಲವೆ? ಆದರೆ ಮುಂದಿನ ಬಾರಿ ನಿಮಗೆ ಚಿರಪರಿಚಿತವಾಗಿರುವ ಒಂದು ಸೇತುವೆಯನ್ನು ನೀವು ದಾಟುತ್ತಿರುವಾಗ, ‘ಈ ಸೇತುವೆಯ ಬಗ್ಗೆ ನನಗೆ ಏನು ಗೊತ್ತಿದೆ? ಇದು ಯಾವಾಗ ಕಟ್ಟಲ್ಪಟ್ಟಿತು? ಎಂದು ನೀವು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ. ಅದನ್ನು ಗಮನವಿಟ್ಟು ನೋಡಿರಿ. ಅದು ಕ್ಯಾಂಟಿಲಿವರ್ ಸೇತುವೆಯೊ, ತೂಗುಸೇತುವೆಯೊ, ಅಥವಾ ಬೇರೊಂದು ವಿಧದ ಸೇತುವೆಯೊ? ಈ ವಿನ್ಯಾಸದ ಸೇತುವೆಯನ್ನೇ ಏಕೆ ಆಯ್ಕೆಮಾಡಲಾಗಿದೆ?
ತದನಂತರ, ನೀವು ಸೇತುವೆಯನ್ನು ದಾಟುತ್ತಿರುವಾಗ, ಕೆಳಗೆ ನೋಡುತ್ತಾ, ‘ಈ ಸೇತುವೆ ಇಲ್ಲದಿರುತ್ತಿದ್ದರೆ ನಾನೇನು ಮಾಡುತ್ತಿದ್ದೆ?’ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿರಿ.
[ಪುಟ 12 ರಲ್ಲಿರುವ ಚೌಕ/ಚಿತ್ರಗಳು]
ಸೇತುವೆ ವಿನ್ಯಾಸಗಳು
1. ಗರ್ಡರ್ ಸೇತುವೆಗಳು ಅನೇಕವೇಳೆ ಹೆದ್ದಾರಿಗಳಲ್ಲಿ ಉಪಯೋಗಿಸಲ್ಪಡುತ್ತವೆ. ಗರ್ಡರ್ಗಳು ಸಾಮಾನ್ಯವಾಗಿ ಅಡ್ಡಕಂಬಗಳ ಮೇಲೆ ಅಥವಾ ಆಧಾರಕಟ್ಟುಗಳ ಮೇಲೆ ಕಟ್ಟಲ್ಪಟ್ಟಿರುತ್ತವೆ. ಈ ಸೇತುವೆಗಳ ಉದ್ದವು, ಸುಮಾರು 300 ಮೀಟರುಗಳಷ್ಟು ಇರಸಾಧ್ಯವಿದೆ.
2. ಟ್ರಸ್ ಸೇತುವೆಗಳು ತ್ರಿಕೋನಾಕಾರದ ಆಸರೆಕಟ್ಟುಗಳಿಂದ ಆಧಾರವನ್ನು ಪಡೆಯುತ್ತವೆ. ಅನೇಕವೇಳೆ ಈ ಸೇತುವೆಗಳು ರೈಲುಮಾರ್ಗಗಳಿಗಾಗಿ ಉಪಯೋಗಿಸಲ್ಪಡುತ್ತವೆ, ಮತ್ತು ಇವು ಕಮರಿಗಳು, ನದಿಗಳು ಹಾಗೂ ಇತರ ಅಡೆತಡೆಗಳ ಮೇಲೆ ಕಟ್ಟಲ್ಪಟ್ಟಿರುತ್ತವೆ.
3. ಕಮಾನು ಸೇತುವೆಗಳಲ್ಲಿ, ಪ್ರತಿಯೊಂದು ಆಧಾರಸ್ತಂಭದ ನಡುವಿನ ಉದ್ದವು ಒಂದು ಕಮಾನನ್ನು ರಚಿಸುತ್ತದೆ. ಇದು ಅತ್ಯಂತ ಪುರಾತನ ರೀತಿಯ ಸೇತುವೆಗಳಲ್ಲಿ ಒಂದಾಗಿದೆ. ರೋಮನರು ಈ ರೀತಿಯ ಕಮಾನನ್ನು ತಮ್ಮ ನೀರುಕಾಲುವೆ ಹಾಗೂ ರಸ್ತೆಕಾಲುವೆಗಳಲ್ಲಿ ಕಟ್ಟಿದರು ಮತ್ತು ಈ ಕಮಾನನ್ನು ಭದ್ರಪಡಿಸಲಿಕ್ಕಾಗಿ ತಲೆಗಲ್ಲನ್ನು ಉಪಯೋಗಿಸಿದರು. ಅನೇಕ ಕಮಾನು ಸೇತುವೆಗಳು ಇಂದಿಗೂ ಅಸ್ತಿತ್ವದಲ್ಲಿವೆ.
4. ಕೇಬಲ್-ಸ್ಟೇಯ್ಡ್ ಸೇತುವೆಗಳು, ತೂಗುಸೇತುವೆಗಳಂತೆಯೇ ಇರುತ್ತವೆ, ಆದರೆ ಅದರ ದಪ್ಪ ಕೇಬಲ್ಗಳು ನೇರವಾಗಿ ಗೋಪುರಗಳಿಗೇ ಕಟ್ಟಲ್ಪಟ್ಟಿರುತ್ತವೆ.
5. ಸಾಗಣೆಯೋಗ್ಯ ಸೇತುವೆಗಳು. ಹಡಗುಗಳು ಹಾದುಹೋಗುವಾಗ ಈ ಸೇತುವೆಗಳನ್ನು ಮೇಲೆತ್ತಸಾಧ್ಯವಿದೆ ಅಥವಾ ಪಕ್ಕಕ್ಕೆ ಸರಿಸಸಾಧ್ಯವಿದೆ. ಲಂಡನಿನ ಟವರ್ ಬ್ರಿಡ್ಜ್ ಈ ರೀತಿಯ ಸೇತುವೆಗೆ ಒಂದು ಉತ್ತಮ ಉದಾಹರಣೆಯಾಗಿದೆ.
6. ಕ್ಯಾಂಟಿಲಿವರ್ ಸೇತುವೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
7. ತೂಗುಸೇತುವೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.—ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ, 1994.
[ಪುಟ 13 ರಲ್ಲಿರುವ ಚಿತ್ರ]
ಕೆಲವು ಪ್ರಸಿದ್ಧ ಸೇತುವೆಗಳು
ತೂಗುಸೇತುವೆ
ಸ್ಟೋರ್ಬೆಲ್ಟ್ ಡೆನ್ಮಾರ್ಕ್ 1,624 ಮೀಟರ್ಗಳು
ಬ್ರೂಕ್ಲಿನ್ ಅಮೆರಿಕ 486 ಮೀಟರ್ಗಳು
ಗೋಲ್ಡನ್ ಗೇಟ್ ಅಮೆರಿಕ 1,280 ಮೀಟರ್ಗಳು
ಜೀಯಾಂಗ್ಯಿನ್ ಯಾಂಗ್ಟ್ಸೆ ಚೀನಾ 1,385 ಮೀಟರ್ಗಳು
ಕ್ಯಾಂಟಿಲಿವರ್
ಫೋರ್ಥ್ (ಎರಡು ಸ್ಪ್ಯಾನ್ಗಳು) ಸ್ಕಾಟ್ಲೆಂಡ್ ಪ್ರತಿಯೊಂದು 521 ಮೀಟರ್
ಕ್ವಿಬೆಕ್ ಕೆನಡ 549 ಮೀಟರ್ಗಳು
ಹೌರಾ ಭಾರತ 457 ಮೀಟರ್ಗಳು
ಸ್ಟೀಲ್ ಆರ್ಕ್
ಸಿಡ್ನಿ ಹಾರ್ಬರ್ ಆಸ್ಟ್ರೇಲಿಯ 500 ಮೀಟರ್ಗಳು
ಬರ್ಚನಫ್ ಸಿಂಬಾಬ್ವೆ 329 ಮೀಟರ್ಗಳು
ಕೇಬಲ್-ಸ್ಟೇಯ್ಡ್
ಪಾನ್ ಡೆ ನಾರ್ಮಾಂಡೀ ಫ್ರಾನ್ಸ್ 856 ಮೀಟರ್ಗಳು
ಸ್ಕಾರ್ನ್ಸನ ನಾರ್ವೆ 530 ಮೀಟರ್ಗಳು
[ಪುಟ 10 ರಲ್ಲಿರುವ ಚಿತ್ರ]
ಸ್ಪೆಯ್ನ್ನ ಆ್ಯಲ್ಮೇರಿಯದಲ್ಲಿ ಪುರಾತನ ಕಮಾನು ಸೇತುವೆಯ ಮೇಲಿರುವ ಆಧುನಿಕ ಗರ್ಡರ್ ಸೇತುವೆ
[ಪುಟ 13 ರಲ್ಲಿರುವ ಚಿತ್ರ]
ಬ್ರೂಕ್ಲಿನ್ ಬ್ರಿಡ್ಜ್, ನ್ಯೂ ಯಾರ್ಕ್, ಅಮೆರಿಕ (ತೂಗುಸೇತುವೆ)
[ಪುಟ 13 ರಲ್ಲಿರುವ ಚಿತ್ರ]
ಟವರ್ ಬ್ರಿಡ್ಜ್, ಲಂಡನ್, ಇಂಗ್ಲೆಂಡ್ (ಸಾಗಣೆಯೋಗ್ಯ ಸೇತುವೆ)
[ಪುಟ 13 ರಲ್ಲಿರುವ ಚಿತ್ರ]
ಸಿಡ್ನಿ ಹಾರ್ಬರ್ ಬ್ರಿಡ್ಜ್, ಆಸ್ಟ್ರೇಲಿಯ (ಕಮಾನು ಸೇತುವೆ)
[ಪುಟ 13 ರಲ್ಲಿರುವ ಚಿತ್ರ]
ಸೆಟೊ ಒಹಾಶಿ, ಜಪಾನ್ (ಕೇಬಲ್-ಸ್ಟೇಯ್ಡ್)