ಏಡ್ಸ್—ಯಾವುದಾದರೂ ನಿರೀಕ್ಷೆಯಿದೆಯೆ?
ಏಚ್ಐವಿ ಸೋಂಕುರೋಗವನ್ನು ವಾಸಿಮಾಡಲು ಅಥವಾ ತಡೆಗಟ್ಟಲು ಔಷಧದ ಕೊರತೆಯಿರುವುದರೊಂದಿಗೆ, ಈ ರೋಗವನ್ನು ನಿಗ್ರಹಿಸುವುದನ್ನು ಇನ್ನಿತರ ಅಂಶಗಳು ತಡೆಯುತ್ತವೆ. ಈ ಅಂಶಗಳಲ್ಲಿ ಒಂದು ಯಾವುದೆಂದರೆ, ಅನೇಕರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಇಷ್ಟಪಡುವುದಿಲ್ಲ, ಬದಲಾಗಿ ಆ ರೋಗವನ್ನು ತಗಲಿಸಿಕೊಳ್ಳುವ ಅಪಾಯವನ್ನು ಎದುರಿಸಲು ಸಿದ್ಧರಾಗಿದ್ದಾರೆ. ಉದಾಹರಣೆಗಾಗಿ, ಅಮೆರಿಕದಲ್ಲಿ, ಪೂರ್ತಿ ವಿಕಾಸಗೊಂಡ ಏಡ್ಸ್ ರೋಗಿಗಳ ಸಂಖ್ಯೆಯಲ್ಲಿ ಇಳಿತವಿರುವುದಾದರೂ, ಏಚ್ಐವಿಯಿಂದ ಸೋಂಕಿತರಾದವರ ಪ್ರಮಾಣವು ಸ್ಥಿರವಾಗಿ ಉಳಿದಿದೆ. ಇದಕ್ಕೆ ಕಾರಣವೇನೆಂದರೆ, “ತಡೆಗಟ್ಟುವಿಕೆಯ ಕುರಿತಾಗಿ ಕೊಡಲ್ಪಟ್ಟ ಎಚ್ಚರಿಕೆಗೆ ಅನೇಕರು ಕಿವಿಗೊಡುತ್ತಿಲ್ಲ” ಎಂದು ಅಸೋಸಿಯೇಟೆಡ್ ಪ್ರೆಸ್ ಸೂಚಿಸಿತು.
ವರದಿಗನುಸಾರ, ಲೋಕದ ಅಭಿವೃದ್ಧಿಹೊಂದುತ್ತಿರುವ ದೇಶಗಳಲ್ಲಿ, ಅಂದರೆ ಏಚ್ಐವಿಯಿಂದ ಸೋಂಕಿತರಾಗಿರುವವರಲ್ಲಿ ಸುಮಾರು 93 ಪ್ರತಿಶತ ಮಂದಿ ಎಲ್ಲಿ ಜೀವಿಸುತ್ತಿದ್ದಾರೋ ಅಲ್ಲಿ, ಈ ರೋಗವನ್ನು ನಿಗ್ರಹಿಸಲು ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ದೇಶಗಳಲ್ಲಿ ಅನೇಕ ದೇಶಗಳು, ಮೂಲಭೂತ ಆರೋಗ್ಯ ಸೇವೆಗಳನ್ನು ಸಹ ಒದಗಿಸಲು ಅಸಾಧ್ಯವಾಗಿರುವಷ್ಟು ಬಡತನದಲ್ಲಿವೆ. ವಾಸ್ತವದಲ್ಲಿ, ಈ ದೇಶಗಳಲ್ಲಿ ಹೊಸ ಔಷಧಗಳು ಹೆಚ್ಚಾಗಿ ದೊರಕುತ್ತಿಲ್ಲ. ಒಂದುವೇಳೆ ದೊರಕುವುದಾದರೂ ಒಂದು ವರ್ಷದ ಚಿಕಿತ್ಸೆಯ ಬೆಲೆಯು ಎಷ್ಟಾಗುತ್ತದೆಂದರೆ, ಅದು ಅಧಿಕಾಂಶ ಜನರು ತಮ್ಮ ಜೀವಮಾನಕಾಲವೆಲ್ಲ ದುಡಿಯುವ ಹಣಕ್ಕಿಂತಲೂ ಅತ್ಯಧಿಕವಾಗಿರುತ್ತದೆ!
ಆದರೂ, ಈ ರೋಗವನ್ನು ನಿಜವಾಗಿಯೂ ಗುಣಪಡಿಸುವಂತಹ ಒಂದು ಅಗ್ಗವಾದ ಹೊಸ ಔಷಧವು ಮಾರುಕಟ್ಟೆಯಲ್ಲಿ ದೊರಕುತ್ತಿದೆಯೆಂದು ನಾವು ಭಾವಿಸೋಣ. ಅಂತಹ ಔಷಧವು ಅದರ ಅಗತ್ಯವಿರುವವರೆಲ್ಲರಿಗೂ ದೊರಕುತ್ತದೊ? ಬಹುಶಃ ಇಲ್ಲ. ವಿಶ್ವಸಂಸ್ಥೆಯ ಮಕ್ಕಳ ನಿಧಿಗನುಸಾರ, ಅಗ್ಗವಾದ, ಲಭ್ಯವಿರುವ ಲಸಿಕೆಗಳಿಂದ ತಡೆಗಟ್ಟಸಾಧ್ಯವಿರುವ ಐದು ರೋಗಗಳಿಂದ, ಪ್ರತಿ ವರ್ಷ ಸುಮಾರು ನಲ್ವತ್ತು ಲಕ್ಷ ಮಕ್ಕಳು ಸಾಯುತ್ತಾರೆ.
ಯಾವ ದೇಶಗಳಲ್ಲಿ ಸೋಂಕಿತರಾದ ಜನರಿಗೆ ಚಿಕಿತ್ಸೆಗಾಗಿ ಔಷಧಗಳು ಲಭ್ಯವಿಲ್ಲವೋ ಅಂತಹ ದೇಶಗಳಲ್ಲಿ ಜೀವಿಸುತ್ತಿರುವ ಜನರ ಕುರಿತಾಗಿ ಏನು? ಕ್ಯಾಲಿಫೊರ್ನಿಯದ ಸ್ಯಾಂಟ ಕ್ರುಸ್ನಲ್ಲಿರುವ ಇಂಟರ್ನ್ಯಾಷನಲ್ ಹೆಲ್ತ್ ಪ್ರೋಗ್ರ್ಯಾಮ್ಸ್ ಸಂಸ್ಥೆಯ ರೂತ್ ಮೋಟ ಅವರು, ಅಭಿವೃದ್ಧಿಹೊಂದುತ್ತಿರುವ ಅನೇಕ ದೇಶಗಳಲ್ಲಿ ಏಚ್ಐವಿಯನ್ನು ತಡೆಗಟ್ಟುವ ಹಾಗೂ ಜಾಗ್ರತೆ ವಹಿಸುವ ಕಾರ್ಯಕ್ರಮಗಳನ್ನು ವ್ಯವಸ್ಥಾಪಿಸಲು ಸಹಾಯ ಮಾಡಿದ್ದಾರೆ. ಅವರು ಹೇಳುವುದು: “ನನ್ನ ಸ್ವಂತ ಅನುಭವದಿಂದ ಹೇಳುವುದಾದರೆ, ಔಷಧಗಳನ್ನು ಪಡೆದುಕೊಳ್ಳುವ ಮಾರ್ಗವು ಎಷ್ಟು ಪ್ರಾಮುಖ್ಯವೋ ಒಂದು ಸಕಾರಾತ್ಮಕವಾದ ಮನೋಭಾವವನ್ನು ಪಡೆದುಕೊಳ್ಳುವುದೂ ಅಷ್ಟೇ ಪ್ರಾಮುಖ್ಯವಾಗಿದೆ. 10ರಿಂದ 15 ವರ್ಷಗಳ ವರೆಗೆ ಏಚ್ಐವಿ ವೈರಸನ್ನು ಸೋಂಕಿಸಿಕೊಂಡಿದ್ದು, ಎಂದೂ ಔಷಧವನ್ನೇ ತೆಗೆದುಕೊಂಡಿಲ್ಲದ ಜನರ ಬಗ್ಗೆ ನನಗೆ ಗೊತ್ತು. ಔಷಧಗಳು ಪ್ರಯೋಜನಕರವಾಗಿವೆ, ಆದರೆ ಗುಣವಾಗುವುದರಲ್ಲಿ ಕೇವಲ ರಾಸಾಯನಿಕಗಳನ್ನು ನಿಮ್ಮ ದೇಹದೊಳಕ್ಕೆ ಸೇರಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಮನೋಭಾವ, ಸಾಮಾಜಿಕ ಬೆಂಬಲ, ಆತ್ಮಿಕತೆ, ಹಾಗೂ ಆರೈಕೆಯು ಸಹ ಇದರಲ್ಲಿ ಒಳಗೂಡಿದೆ.”
ಖಂಡಿತ ಒಂದು ಪರಿಹಾರವಿರುವುದು
ಒಂದು ದಿನ ಏಡ್ಸ್ ರೋಗವು ಸಂಪೂರ್ಣವಾಗಿ ಇಲ್ಲವಾಗಿಸಲ್ಪಡುವುದು ಎಂದು ನಂಬಲು ಯಾವುದಾದರೂ ಕಾರಣವಿದೆಯೆ? ಖಂಡಿತವಾಗಿಯೂ ಇದೆ. ಅನೇಕರು ಯಾವುದನ್ನು ಕರ್ತನ ಪ್ರಾರ್ಥನೆ (ದೈವ ಪ್ರಾರ್ಥನೆ) ಎಂದು ಕರೆಯುತ್ತಾರೋ ಆ ಪ್ರಾರ್ಥನೆಯ ನುಡಿಗಳಲ್ಲಿ ಅತ್ಯುತ್ತಮ ನಿರೀಕ್ಷೆಯು ಒಳಗೂಡಿದೆ. ಬೈಬಲಿನ ಮತ್ತಾಯ ಪುಸ್ತಕದಲ್ಲಿ ದಾಖಲೆಯಾಗಿರುವ ಆ ಪ್ರಾರ್ಥನೆಯಲ್ಲಿ, ದೇವರ ಚಿತ್ತವು ಪರಲೋಕದಲ್ಲಿ ನೆರವೇರುತ್ತಿರುವ ಪ್ರಕಾರವೇ ಭೂಮಿಯಲ್ಲೂ ನೆರವೇರುವಂತೆ ನಾವು ಬೇಡಿಕೊಳ್ಳುತ್ತೇವೆ. (ಮತ್ತಾಯ 6:9.10) ಮಾನವರು ಸದಾಕಾಲಕ್ಕೂ ಅನಾರೋಗ್ಯದಿಂದ ನರಳುವುದು ದೇವರ ಚಿತ್ತವಲ್ಲ. ದೇವರು ಆ ಪ್ರಾರ್ಥನೆಗೆ ಉತ್ತರಿಸುವನು. ಹಾಗೆ ಮಾಡುವ ಮೂಲಕ, ಆತನು ಏಡ್ಸ್ ರೋಗವನ್ನು ಮಾತ್ರವಲ್ಲ, ಮಾನವಕುಲವನ್ನು ಬಾಧಿಸುತ್ತಿರುವ ಇನ್ನಿತರ ಎಲ್ಲ ರೋಗಗಳನ್ನು ಸಂಪೂರ್ಣವಾಗಿ ಕೊನೆಗೊಳಿಸುವನು. ಆಗ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”—ಯೆಶಾಯ 33:24.
ಅಷ್ಟರ ತನಕ, ರೋಗವನ್ನು ತಡೆಗಟ್ಟುವುದೇ ಅತ್ಯುತ್ತಮ ಉಪಾಯವಾಗಿದೆ. ಅನೇಕ ರೋಗಗಳ ವಿಷಯದಲ್ಲಿ ಎರಡು ಆಯ್ಕೆಗಳಿವೆ: ನೀವು ಅವುಗಳನ್ನು ತಡೆಗಟ್ಟಸಾಧ್ಯವಿದೆ ಅಥವಾ ಅವುಗಳನ್ನು ಗುಣಪಡಿಸಬಹುದು. ಏಚ್ಐವಿಯ ವಿಷಯದಲ್ಲಾದರೋ ಅಂತಹ ಆಯ್ಕೆಯೇ ಇಲ್ಲ. ಇದನ್ನು ತಡೆಗಟ್ಟಸಾಧ್ಯವಿದೆ, ಆದರೆ ಸದ್ಯಕ್ಕೆ ಇದನ್ನು ಗುಣಪಡಿಸಲು ಸಾಧ್ಯವೇ ಇಲ್ಲ. ನಿಮ್ಮ ಜೀವಿತವನ್ನೇ ಹಾಳುಮಾಡುವ ಅಪಾಯಗಳನ್ನು ಏಕೆ ಬರಮಾಡಿಕೊಳ್ಳಬೇಕು? ರೋಗಕ್ಕೆ ಮದ್ದೇ ಇಲ್ಲದಿರುವಾಗ, ಖಂಡಿತವಾಗಿಯೂ ಅದನ್ನು ತಡೆಗಟ್ಟುವುದೇ ಲೇಸು.
[ಪುಟ 9 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಗುಣವಾಗುವುದರಲ್ಲಿ ಕೇವಲ ರಾಸಾಯನಿಕಗಳನ್ನು ನಿಮ್ಮ ದೇಹದೊಳಕ್ಕೆ ಸೇರಿಸುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಮನೋಭಾವ, ಸಾಮಾಜಿಕ ಬೆಂಬಲ, ಆತ್ಮಿಕತೆ, ಹಾಗೂ ಆರೈಕೆಯು ಸಹ ಇದರಲ್ಲಿ ಒಳಗೂಡಿದೆ.”—ರೂತ್ ಮೋಟ
[ಪುಟ 9 ರಲ್ಲಿರುವ ಚೌಕ/ಚಿತ್ರಗಳು]
“ಸಭೆಯು ತುಂಬ ಸಹಾಯ ಮಾಡಿತು”
ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗೆ ಉತ್ತೇಜಿಸಿದ್ದು: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10) ಕ್ಯಾರನ್ ಹಾಗೂ ಬಿಲ್ ಏಚ್ಐವಿಯಿಂದ ನರಳುತ್ತಿದ್ದಾರೆ ಎಂಬುದು ಸ್ಥಳಿಕ ಯೆಹೋವನ ಸಾಕ್ಷಿಗಳ ಸಭೆಗೆ ತಿಳಿದುಬಂದಾಗ, ಸಭೆಯವರು ಹೇಗೆ ಪ್ರತಿಕ್ರಿಯಿಸಿದರೆಂಬುದನ್ನು, ಮೊದಲನೇ ಲೇಖನದಲ್ಲಿ ಯಾರ ಬಗ್ಗೆ ಪ್ರಸ್ತಾಪಿಸಲಾಗಿತ್ತೋ ಆ ಕ್ಯಾರನ್ಳ ತಾಯಿ ವಿವರಿಸುತ್ತಾರೆ. ಅವರು ಹೇಳುವುದು: “ಸಭೆಯು ತುಂಬ ಸಹಾಯ ಮಾಡಿತು. ಬಿಲ್ಗೆ ನ್ಯುಮೋನಿಯ ಬಂದಾಗ, ಕ್ಯಾರನ್ ಸಹ ಅಸ್ವಸ್ಥಳಿದ್ದಳು. ಅಷ್ಟುಮಾತ್ರವಲ್ಲ ಬಿಲ್ನನ್ನು ಹಾಗೂ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಅವಳು ತುಂಬ ಕಷ್ಟಪಡುತ್ತಿದ್ದಳು. ಸಹೋದರರು ಅವರ ಮನೆಯನ್ನು ಸ್ವಚ್ಛಗೊಳಿಸಿದರು, ಅವರ ಕಾರನ್ನು ರಿಪೇರಿಮಾಡಿದರು, ಮತ್ತು ಅವರ ಬಟ್ಟೆಗಳನ್ನು ಒಗೆದರು. ಶಾಸನಸಮ್ಮತವಾದ ಕೆಲಸಗಳನ್ನು ಮಾಡಲು ಹಾಗೂ ಅವರ ಮನೆಯನ್ನು ಬದಲಾಯಿಸಲು ಸಹ ಅವರು ಸಹಾಯ ಮಾಡಿದರು. ಅವರೇ ಪದಾರ್ಥಗಳನ್ನು ಖರೀದಿಸಿ, ಅಡುಗೆಯನ್ನೂ ಮಾಡಿ ಬಡಿಸಿದರು. ನಿಜವಾಗಿಯೂ ಭಾವನಾತ್ಮಕ, ಆತ್ಮಿಕ, ಹಾಗೂ ಭೌತಿಕ ಬೆಂಬಲವು ಧಾರಾಳವಾಗಿ ಅವರಿಗೆ ಕೊಡಲ್ಪಟ್ಟಿತ್ತು.”
[ಪುಟ 8 ರಲ್ಲಿರುವ ಚಿತ್ರ]
ವೈವಾಹಿಕ ನಿಷ್ಠೆಯು ಏಚ್ಐವಿ ಸೋಂಕನ್ನು ತಡೆಗಟ್ಟಬಹುದು