ವಿಕ್ಟೋರಿಯ ಸರೋವರ—ಆಫ್ರಿಕದ ಒಳನಾಡಿನ ದೊಡ್ಡ ಕಡಲು
ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಇಸವಿ 1858ರಲ್ಲಿ, ಆಫ್ರಿಕ ದೇಶದ ಕೇಂದ್ರಭಾಗದಲ್ಲಿರುವ ಅತಿ ಒಳಗಣ ಪ್ರದೇಶದಲ್ಲಿ, ಏಕಾಂಗಿಯಾದ ಆಂಗ್ಲನೊಬ್ಬನು, ಕಾಡಿನ ಮೂಲಕ ಹಾಗೂ ಅಪರಿಶೋಧಿತ ನಾಡಿನ ಮೂಲಕ ಪ್ರಯಾಣಿಸಿದನು. ಆಫ್ರಿಕದ ಕೆಲವೇ ಮಂದಿ ಕೂಲಿಯಾಳುಗಳೊಂದಿಗೆ ಪ್ರಯಾಣಿಸುತ್ತಾ, ಅನಾರೋಗ್ಯ, ಬಳಲಿಕೆ, ಹಾಗೂ ಸಂದಿಗ್ಧತೆಯಿಂದ ಚಿಂತಿತನಾಗಿದ್ದ ಈ ಆಂಗ್ಲನು, ತನ್ನ ಜೊತೆಯಲ್ಲಿದ್ದ ಜನರನ್ನು ಮುಂದುವರಿಯುವಂತೆ ಹುರಿದುಂಬಿಸುತ್ತಾ ಇದ್ದನು. ಜಾನ್ ಹ್ಯಾನಿಂಗ್ ಸ್ಪೀಕ್ ಎಂಬುದು ಆ ವ್ಯಕ್ತಿಯ ಹೆಸರಾಗಿತ್ತು. ಅವನು ಕಂಡುಕೊಳ್ಳಲು ಕಷ್ಟಕರವಾದಂತಹ ಒಂದು ಅಪೇಕ್ಷಣೀಯ ಸ್ಥಳದ ಹುಡುಕಾಟದಲ್ಲಿದ್ದನು, ಅಂದರೆ ಅವನು ನೈಲ್ ನದಿಯ ಮೂಲವನ್ನು ಹುಡುಕುತ್ತಿದ್ದನು.
ಅರಬ್ ಗುಲಾಮ ವ್ಯಾಪಾರಿಗಳು ಯಾವುದನ್ನು ಯೂಕ್ರೀವ್ ಎಂದು ಕರೆಯುತ್ತಿದ್ದರೋ ಆ ಒಳನಾಡಿನ ಅತಿ ದೊಡ್ಡ ಜಲಸಮೂಹದ ಬಗ್ಗೆ ಕೇಳಿಸಿಕೊಂಡ ಕಥೆಗಳಿಂದ ಪ್ರಚೋದಿತನಾದ ಸ್ಪೀಕ್, ಕೊನೆಮೊದಲಿಲ್ಲದಂತೆ ತೋರುತ್ತಿದ್ದ ಪೊದೆಗಾಡುಗಳ ಮೂಲಕ ಪ್ರಯಾಣಿಸಲು ತುಂಬ ಹೆಣಗಾಡಿದನು. ಕಟ್ಟಕಡೆಗೆ, ಸುಮಾರು 25 ದಿನಗಳ ವರೆಗೆ ನಡೆದ ಬಳಿಕ, ಅತ್ಯಂತ ಮನೋಹರವಾದ ಒಂದು ದೃಶ್ಯವು ಈ ಚಿಕ್ಕ ಪ್ರಯಾಣಿಕರ ಗುಂಪಿನ ದೃಷ್ಟಿಗೆ ಬಿತ್ತು. ದೃಷ್ಟಿಹಾಯಿಸುವ ವರೆಗೂ ಚಾಚಿಕೊಂಡಿರುವ ಒಳನಾಡಿನ ಅತಿ ದೊಡ್ಡ ಸಿಹಿನೀರಿನ ಸರೋವರವು ಅವರ ಮುಂದಿತ್ತು. ತದನಂತರ ಸ್ಪೀಕ್ ಬರೆದುದು: “ನನ್ನ ಕಾಲಬುಡದಲ್ಲಿರುವ ಈ ಸರೋವರವೇ, ಇಷ್ಟರ ವರೆಗೆ ಅನೇಕ ಊಹಾಪೋಹಗಳಿಗೆ ಗುರಿಯಾಗಿದ್ದ ಮತ್ತು ಅನೇಕ ಪರಿಶೋಧಕರ ಅನ್ವೇಷಣೆಯ ಮೂಲವಾಗಿದ್ದ ಆ ಕುತೂಹಲಜನಕ ನೈಲ್ ನದಿಯ ಉಗಮವಾಗಿದೆ ಎಂಬ ವಿಷಯದಲ್ಲಿ ನನಗೆ ಯಾವುದೇ ಸಂಶಯವು ಉಳಿಯಲಿಲ್ಲ.” ಆಗ ಇಂಗ್ಲೆಂಡನ್ನು ಆಳುತ್ತಿದ್ದ ರಾಣಿಯಾದ ವಿಕ್ಟೋರಿಯಳ ಗೌರವಾರ್ಥವಾಗಿ, ತಾನು ಅನ್ವೇಷಿಸಿದ್ದ ಸ್ಥಳಕ್ಕೆ ಅವನು ಅವಳ ಹೆಸರನ್ನೇ ಇಟ್ಟನು.
ನೈಲ್ ನದಿಯ ಉಗಮಸ್ಥಾನ
ಇಂದು ಆ ಸರೋವರಕ್ಕೆ ಅದೇ ಹೆಸರಿದ್ದು, ವಿಶ್ವದಲ್ಲೇ ಇರುವ ಎರಡನೆಯ ಅತಿ ದೊಡ್ಡ ಸಿಹಿನೀರಿನ ಸರೋವರವೆಂದು ಪ್ರಸಿದ್ಧವಾಗಿದೆ. ಉತ್ತರ ಅಮೆರಿಕದಲ್ಲಿರುವ ಲೇಕ್ ಸುಪೀರಿಯರ್ ಮಾತ್ರ ಗಾತ್ರದಲ್ಲಿ ಹೆಚ್ಚು ದೊಡ್ಡದಿದೆ. ಬೃಹತ್ ಗಾತ್ರದ ಕನ್ನಡಿಯಂತಿದ್ದು, ಸಮಭಾಜಕ ವೃತ್ತದ ಸೂರ್ಯಪ್ರಕಾಶದಲ್ಲಿ ಹೊಳೆಯುತ್ತಿರುವ ವಿಕ್ಟೋರಿಯ ಸರೋವರದ ಚಪ್ಪಟೆಯಾದ ಗಾಜಿನಂತಹ ಪಾರದರ್ಶಕ ಮೇಲ್ಮೈಯು, 69,484 ಚದರ ಕಿಲೊಮೀಟರುಗಳಷ್ಟು ಉದ್ದಕ್ಕೂ ಚಾಚಿಕೊಂಡಿದೆ. ಅದರ ಉತ್ತರ ಭಾಗದ ತುದಿಯಲ್ಲಿ ಸಮಭಾಜಕವೃತ್ತವು ಹಾದುಹೋಗಿದೆ; ಈ ಸರೋವರವು ಗ್ರೇಟ್ ರಿಫ್ಟ್ ಕಣಿವೆಯ ಪೂರ್ವ ಮತ್ತು ಪಶ್ಚಿಮ ಶಾಖೆಗಳ ಮೇಲೆ ನೆಲೆಸಿದ್ದು, ಅದರ ಭಾಗಗಳು ಟಾನ್ಸೇನಿಯ ಮತ್ತು ಯುಗಾಂಡದ ಮೂಲಕ ಹಾದುಹೋಗುತ್ತವೆ ಹಾಗೂ ಅದು ಕೆನ್ಯದ ಗಡಿಪ್ರದೇಶದ ವರೆಗೂ ವಿಸ್ತರಿಸಿದೆ.
ಟಾನ್ಸೇನಿಯದಲ್ಲಿರುವ ಕಾಗೆರ ನದಿಯು, ಆ ಸರೋವರದ ಪ್ರಮುಖ ಪ್ರವೇಶದ್ವಾರವಾಗಿದೆ. ಈ ನದಿಯು ರುಆಂಡದ ಪರ್ವತಗಳಿಂದ ನೀರನ್ನು ಶೇಖರಿಸುತ್ತದೆ. ಇದಲ್ಲದೆ, ವಿಕ್ಟೋರಿಯ ಸರೋವರಕ್ಕೆ ಹರಿದುಬರುವ ಅಧಿಕಾಂಶ ನೀರು, ಸುತ್ತಮುತ್ತಲಿರುವ 2,00,000 ಚದರ ಕಿಲೊಮೀಟರುಗಳಿಗಿಂತ ಹೆಚ್ಚು ಭೂಪ್ರದೇಶದಷ್ಟು ಅಗಲವಿರುವ ಜಲಾಶಯ ಕ್ಷೇತ್ರದಲ್ಲಿ ಶೇಖರವಾಗುವ ಮಳೆನೀರಾಗಿದೆ. ಯುಗಾಂಡದಲ್ಲಿರುವ ಜಿಂಜದಲ್ಲಿ ಈ ಸರೋವರದ ಏಕಮಾತ್ರ ಹೊರದ್ವಾರವಿದೆ. ಆ ಸ್ಥಳದಲ್ಲೇ ನೀರು ಉತ್ತರಾಭಿಮುಖವಾಗಿ ರಭಸದಿಂದ ಹರಿಯುತ್ತದೆ ಮತ್ತು ವೈಟ್ ನೈಲ್ ನದಿಯ ಉಗಮವು ಅದೇ ಆಗಿದೆ. ವಿಕ್ಟೋರಿಯ ಸರೋವರವು ನೈಲ್ ನದಿಯ ಏಕಮಾತ್ರ ಮೂಲವಾಗಿರುವುದಿಲ್ಲವಾದರೂ, ಅದು ಒಂದು ದೊಡ್ಡ ಜಲಾಶಯದೋಪಾದಿ ಕಾರ್ಯನಡಿಸುತ್ತದೆ ಮತ್ತು ಅದರಲ್ಲಿ ಸಿಹಿನೀರು ಸತತವಾಗಿ ಹರಿಯುತ್ತಾ ಇದ್ದು, ಈಜಿಪ್ಟಿನುದ್ದಕ್ಕೂ ಇರುವ ಜನರನ್ನೂ ಜೀವರಾಶಿಗಳನ್ನೂ ಸಂರಕ್ಷಿಸುತ್ತದೆ.
ಕಡಲಂಚಿನ ಜೀವನ
ನೀರಿನ ಮೇಲೆ ಒಂದು ದೋಣಿಯು ತೇಲುತ್ತಿದೆ; ರಭಸದಿಂದ ತೂಗಾಡುತ್ತಿರುವ ಅದರ ಬಿಳಿಯ ನೌಕಾಪಟವು, ಚಿಟ್ಟೆಯ ಲಂಬವಾದ ರೆಕ್ಕೆಯನ್ನು ಹೋಲುತ್ತಿದ್ದು, ಅದು ಸರೋವರದ ಮೇಲೆ ನಿಧಾನವಾಗಿ ಸಾಗುತ್ತಿದೆ. ಪ್ರತಿ ದಿನ ಸುತ್ತಮುತ್ತಲ ಪ್ರದೇಶದಿಂದ ಬೀಸುವ ಬಿರುಸಾದ ಗಾಳಿಯಿಂದ ಕೊಂಡೊಯ್ಯಲ್ಪಟ್ಟು, ಈ ಚಿಕ್ಕ ದೋಣಿಯು ಸರೋವರದ ಮಧ್ಯಭಾಗಕ್ಕೆ ಸಾಗುತ್ತದೆ. ಮಧ್ಯಾಹ್ನದಷ್ಟಕ್ಕೆ, ಗಾಳಿಯ ದಿಕ್ಕು ಬದಲಾಗಿ, ದೋಣಿಯು ಎಲ್ಲಿಂದ ಬಂದಿತ್ತೋ ಅದೇ ಜಾಗಕ್ಕೆ ಪುನಃ ಹಿಂದಿರುಗುತ್ತದೆ. ಸರೋವರದ ಬಳಿ ವಾಸಿಸುವ ಮೀನುಗಾರರು, ಸಾವಿರಾರು ವರ್ಷಗಳಿಂದ ಇದೇ ರೀತಿಯ ನಿಯತಕ್ರಮವನ್ನು ಅನುಸರಿಸಿಕೊಂಡು ಬಂದಿದ್ದಾರೆ.
ಹುಲ್ಲಿನ ಛಾವಣಿಗಳಿರುವ ಮನೆಗಳಿಂದ ಕೂಡಿದ ಹಳ್ಳಿಗಳು ಹಾಗೂ ಕೊಪ್ಪಲುಗಳು, ವಿಕ್ಟೋರಿಯ ಸರೋವರದ ಸುತ್ತಲೂ ಇವೆ. ನೈಲ್ ಪ್ರಾಂತದ ನಿವಾಸಿಗಳಿಗೆ ಮೀನು ವ್ಯಾಪಾರದ ಮುಖ್ಯ ಕಚ್ಚಾವಸ್ತುವಾಗಿದೆ, ಮತ್ತು ತಮ್ಮ ದೈನಂದಿನ ಪೋಷಣೆಗಾಗಿ ಅವರು ಈ ಸರೋವರದ ಮೇಲೆ ಅವಲಂಬಿಸಿಕೊಂಡಿದ್ದಾರೆ. ಮೀನುಗಾರರ ದಿನವು ಸೂರ್ಯೋದಯಕ್ಕೆ ಮೊದಲೇ ಆರಂಭವಾಗುತ್ತದೆ. ಗಂಡಸರು ತಮ್ಮ ಸೋರುವ ದೋಣಿಗಳಿಂದ ನೀರನ್ನು ಮೊಗೆದು ಹೊರಗೆ ಚೆಲ್ಲಿ, ಮಂಜುಗವಿದ ವಾತಾವರಣದಲ್ಲಿ ಪ್ರಯಾಣವನ್ನು ಆರಂಭಿಸುತ್ತಾರೆ. ಅವರು ಒಂದೇ ರೀತಿಯ ಶ್ರುತಿಯಿಂದ ಹಾಡುತ್ತಾ, ಆಳವಾದ ನೀರಿಗೆ ಹುಟ್ಟುಹಾಕುತ್ತಾ, ಹರಕಲು ನೌಕಾಪಟವನ್ನು ಹಾರಿಸುತ್ತಾ ಮುಂದೆ ಸಾಗುತ್ತಾರೆ. ಈ ಚಿಕ್ಕ ದೋಣಿಗಳು ಬಾನಂಚಿನತ್ತ ಸಾಗುತ್ತಿರುವಾಗ, ಹೆಂಗಸರು ಕಡಲಂಚಿನಿಂದ ನೋಡುತ್ತಾ ನಿಂತಿರುತ್ತಾರೆ. ತತ್ಕ್ಷಣವೇ ಹೆಂಗಸರು ಅಲ್ಲಿಂದ ತೆರಳುತ್ತಾರೆ, ಏಕೆಂದರೆ ಅವರಿಗೆ ಇನ್ನೂ ತುಂಬ ಕೆಲಸ ಮಾಡಲಿಕ್ಕಿರುತ್ತದೆ.
ಹೆಚ್ಚು ಆಳವಿಲ್ಲದ ನೀರಿನಲ್ಲಿ ಮಕ್ಕಳು ನೀರನ್ನು ಎರಚಿಕೊಂಡು ಆಟವಾಡುತ್ತಿರುವಾಗ, ಹೆಂಗಸರು ಬಟ್ಟೆಗಳನ್ನು ಒಗೆದು, ಸರೋವರದಿಂದ ಕುಡಿಯುವ ನೀರನ್ನು ಮಣ್ಣಿನ ಕೊಡಗಳಲ್ಲಿ ತುಂಬಿಸಿಡುತ್ತಾರೆ. ಹೀಗೆ ನೀರಿನ ಬಳಿಯ ಕೆಲಸವನ್ನು ಅವರು ಮುಗಿಸುತ್ತಾರೆ. ತಲೆಗಳ ಮೇಲೆ ಒಂದರಮೇಲೊಂದು ಮಣ್ಣಿನ ಕೊಡಗಳನ್ನು ಇಟ್ಟುಕೊಂಡು, ಚಿಕ್ಕ ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು, ಎರಡೂ ಕೈಗಳಲ್ಲಿ ಒಗೆದ ಬಟ್ಟೆಗಳ ಬುಟ್ಟಿಗಳನ್ನು ಹಿಡಿದುಕೊಂಡು, ಹೆಂಗಸರು ನಿಧಾನವಾಗಿ ಮನೆಯ ದಾರಿ ಹಿಡಿಯುತ್ತಾರೆ. ಅಲ್ಲಿ, ಹಿತ್ತಲಿನಲ್ಲಿರುವ ಕಾಳುಗಳು ಹಾಗೂ ಧಾನ್ಯಗಳ ಗಿಡಗಳ ಆರೈಕೆಮಾಡಿ, ಸೌದೆಯನ್ನು ಒಟ್ಟುಗೂಡಿಸಿ, ಮಣ್ಣಿನಿಂದ ಕಟ್ಟಿದ ಮನೆಗಳನ್ನು ಬೂದಿ ಹಾಗೂ ಸೆಗಣಿಯ ಮಿಶ್ರಣದಿಂದ ಸಾರಿಸುತ್ತಾರೆ. ಕಡಲಂಚಿನ ಉದ್ದಕ್ಕೂ ಮುಂದೆ ಸಾಗುವುದಾದರೆ, ಹೆಂಗಸರು ಕತ್ತಾಳೆ ಗಿಡದ ನಾರುಗಳನ್ನು ಒಟ್ಟಾಗಿ ಹೆಣೆದು, ಗಟ್ಟಿಯಾದ ಹಗ್ಗಗಳನ್ನು ಮಾಡಿ, ಸುಂದರವಾದ ಬುಟ್ಟಿಗಳನ್ನು ತಯಾರಿಸುತ್ತಾರೆ. ಕೆಲವು ಗಂಡಸರು ಒಂದು ದೊಡ್ಡ ಮರದ ದಿಮ್ಮಿಯನ್ನು ತೆಗೆದುಕೊಂಡು, ಅದರಿಂದ ದೋಣಿಯನ್ನು ತಯಾರಿಸಲಿಕ್ಕಾಗಿ ಅದನ್ನು ಕಡಿಯುವಾಗ, ಕೊಡಲಿಯಿಂದ ಕೊಚ್ಚುವ ಶಬ್ದವು ಗಾಳಿಯಲ್ಲಿ ಮಾರ್ದನಿಸುತ್ತದೆ.
ಸಾಯಂಕಾಲವಾಗತೊಡಗುವಾಗ, ಸಿಹಿನೀರಿನ ಈ ವಿಶಾಲ ಕಡಲ ಉದ್ದಕ್ಕೂ ಹೆಂಗಸರು ಪುನಃ ದೃಷ್ಟಿ ಹರಿಸುತ್ತಾರೆ. ಬಹಳ ದೂರದಲ್ಲಿ ಕಾಣುತ್ತಿರುವ ಬಿಳಿಯ ನೌಕಾಪಟಗಳ ತುದಿಗಳು, ಅವರ ಗಂಡಸರ ಹಿಂದಿರುಗುವಿಕೆಯ ಸೂಚನೆಗಳನ್ನು ಕೊಡುವವು. ಈ ಹೆಂಗಸರು ಅವರ ಬರುವಿಕೆಯನ್ನು ಬಹಳ ಆತುರದಿಂದ ಎದುರುನೋಡುವರು; ತಮ್ಮ ಗಂಡಂದಿರನ್ನು ಹಾಗೂ ಅವರು ತರುವ ಮೀನುಗಳ ರಾಶಿಯನ್ನು ನೋಡಲು ಅವರು ಕಾತುರದಿಂದಿರುವರು.
ಸರೋವರದ ದಡಗಳು ಹಾಗೂ ದ್ವೀಪಗಳ ಉದ್ದಕ್ಕೂ ಇರುವ ಈ ಚಿಕ್ಕ ಸಮುದಾಯಗಳಿಗೆ, ಶಾಂತಿಯ ಸಂದೇಶವನ್ನು ಹೊತ್ತುತರುವ ಅನೇಕ ಸಂದರ್ಶಕರು ಭೇಟಿನೀಡುತ್ತಾ ಇರುವರು. ಕಾಲ್ನಡಿಗೆಯ ಮೂಲಕ ಹಾಗೂ ದೋಣಿಯ ಮೂಲಕ ಪ್ರತಿಯೊಂದು ಹಳ್ಳಿ ಹಾಗೂ ಕೊಪ್ಪಲುಗಳನ್ನು ತಲಪಲಾಗುತ್ತದೆ. ಅಲ್ಲಿನ ಜನರು ದೀನಭಾವದವರಾಗಿದ್ದು, ಶಾಂತಿಯ ಸಂದೇಶಕ್ಕೆ ಆತುರದಿಂದ ಕಿವಿಗೊಡುತ್ತಾರೆ. ತಮ್ಮ ಸ್ವಂತ ನೈಲ್ ಪ್ರಾಂತೀಯ ಭಾಷೆಯಲ್ಲಿ ಹಾಗೂ ಬಾಂಟೂ ಭಾಷೆಯಲ್ಲಿ ಮುದ್ರಿತವಾಗಿರುವ ಬೈಬಲ್ ಸಾಹಿತ್ಯವನ್ನು ಓದಿ ಅವರು ಇನ್ನೂ ರೋಮಾಂಚಿತರಾಗುತ್ತಾರೆ.
ನೀರಿನಲ್ಲಿರುವ ವನ್ಯಜೀವಿಗಳು
ವಿಕ್ಟೋರಿಯ ಸರೋವರದಲ್ಲಿ 400ಕ್ಕಿಂತಲೂ ಹೆಚ್ಚು ಜಾತಿಯ ಮೀನುಗಳು ಇವೆ. ಈ ಮೀನುಗಳಲ್ಲಿ ಕೆಲವು, ಜಗತ್ತಿನ ಯಾವ ಭಾಗದಲ್ಲಿಯೂ ಕಂಡುಬರುವುದಿಲ್ಲ. ಸಿಕ್ಲಿಡ್ ಎಂಬ ಜಾತಿಯ ಮೀನು ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇದೆ. ಈ ವರ್ಣರಂಜಿತ ಚಿಕ್ಕ ಮೀನುಗಳಿಗೆ, ಫ್ಲೇಮ್ಬ್ಯಾಕ್, ಪಿಂಕ್ ಫ್ಲಷ್, ಮತ್ತು ಕಿಸುಮು ಫ್ರಾಗ್ಮೌತ್ ಎಂಬಂತಹ ವರ್ಣನಾತ್ಮಕ ಹೆಸರುಗಳಿವೆ. ಕೆಲವು ಸಿಕ್ಲಿಡ್ ಮೀನುಗಳು ತಮ್ಮ ಮರಿಗಳನ್ನು ಅಸಾಮಾನ್ಯವಾದ ರೀತಿಯಲ್ಲಿ ಸಂರಕ್ಷಿಸುತ್ತವೆ. ಹೇಗೆಂದರೆ, ಅಪಾಯದ ಸುಳಿವು ಸಿಕ್ಕಿದ ಕೂಡಲೆ, ತಾಯಿ ಮೀನು ತನ್ನ ಬಾಯಿಯನ್ನು ಅಗಲವಾಗಿ ತೆರೆಯುತ್ತದೆ ಮತ್ತು ಅದರ ಚಿಕ್ಕ ಮರಿಗಳು ತನ್ನ ತಾಯಿಯ ಟೊಳ್ಳು ಭಾಗದೊಳಗೆ ಹೋಗಿ ರಕ್ಷಣೆಯನ್ನು ಪಡೆದುಕೊಳ್ಳುತ್ತವೆ. ಅಪಾಯವು ಕಳೆದ ಬಳಿಕ, ತಾಯಿ ಮೀನು ಅವುಗಳನ್ನು ಪುನಃ ಹೊರಗೆ ಉಗುಳುತ್ತದೆ, ಆಗ ಅವು ಸಹಜ ಸ್ಥಿತಿಗೆ ಮರಳುತ್ತವೆ.
ವಿಕ್ಟೋರಿಯ ಸರೋವರವು, ತುಂಬ ಮನೋಹರವಾಗಿರುವ ಬೇರೆ ಬೇರೆ ಕಡಲ ಪಕ್ಷಿಗಳಿಗೆ ವಾಸಸ್ಥಾನವಾಗಿದೆ. ಗ್ರೀಬ್ ಹಕ್ಕಿ, ನೀರುಕಾಗೆಗಳು, ಮತ್ತು ಮೀಂಚುಳ್ಳಿಗಳು ನೀರಿನ ಕೆಳಗೆ ಮುಳುಗಿ, ತಮ್ಮ ಚೂಪಾದ ಕೊಕ್ಕುಗಳಿಂದ ಮೀನುಗಳನ್ನು ಚಾತುರ್ಯದಿಂದ ಹಿಡಿಯುತ್ತವೆ. ಕೊಕ್ಕರೆಗಳು, ಕ್ರೌಂಚಪಕ್ಷಿಗಳು, ಬಕಪಕ್ಷಿಗಳು, ಮತ್ತು ಸ್ಪೂನ್ಬಿಲ್ ಪಕ್ಷಿಗಳು, ಹೆಚ್ಚು ಆಳವಿಲ್ಲದ ನೀರಿನಲ್ಲಿ ಸಂಚರಿಸುತ್ತಿರುತ್ತವೆ; ಅವು ಒಂದು ಕಾಲನ್ನು ಮೇಲೆತ್ತಿಕೊಂಡು, ಯಾವುದೇ ಸಂದೇಹವಿಲ್ಲದೆ ಮೀನುಗಳು ಸಮೀಪದಲ್ಲೇ ಈಜುವ ಸಮಯದ ವರೆಗೆ ತಾಳ್ಮೆಯಿಂದ ಕಾಯುತ್ತಿರುತ್ತವೆ. ಸ್ವಲ್ಪ ಮೇಲೆ, ಪೆಲಿಕನ್ (ನೀರುಕೋಳಿ)ಗಳು, ದೊಡ್ಡ ಹೊಟ್ಟೆಯ ಗ್ಲೈಡರ್ ವಿಮಾನಗಳಂತೆ ಕಡಲ ಮೇಲೆ ಗುಂಪಾಗಿ ಹಾರಾಡುತ್ತಿರುತ್ತವೆ. ನಂತರ ಅವು ಗುಂಪಾಗಿ ಈಜುತ್ತಿರುವಾಗ, ಮೀನುಗಳ ಗುಂಪನ್ನು ಸುತ್ತುವರಿದು, ತಮ್ಮ ದೊಡ್ಡ ಬುಟ್ಟಿಯಂತಹ ಕೊಕ್ಕುಗಳಲ್ಲಿ ಆ ಮೀನುಗಳನ್ನು ಗೋರುತ್ತವೆ. ಫಿಷ್ ಈಗಲ್ ಎಂಬ ಹದ್ದುಗಳಿಗೆ ತುಂಬ ಬಲಿಷ್ಠವಾದ ರೆಕ್ಕೆಗಳಿರುವುದರಿಂದ, ಆಕಾಶಕ್ಕೆ ಅದು ಒಡೆಯನೋ ಎಂಬಂತೆ ತೋರುತ್ತದೆ. ನೀರಿನಿಂದ ತುಂಬ ಮೇಲ್ಭಾಗದಲ್ಲಿರುವ ಒಂದು ಮರದ ಕೊಂಬೆಯಿಂದ ಆರಂಭಿಸಿ, ಫಕ್ಕನೆ ಅದು ಕೆಳಮುಖವಾಗಿ ಹಾರತೊಡಗುತ್ತದೆ; ಹೀಗೆ ಹಾರುತ್ತಿರುವಾಗ ಅದರ ಬಲಿಷ್ಠವಾದ ರೆಕ್ಕೆಗಳಿಗೆ ಗಾಳಿಯು ಬಡಿಯುವ ಶಬ್ದ ಕೇಳಿಸುತ್ತದೆ. ಇದೇ ರೀತಿ ಹಾರುತ್ತಾ ಹೋಗಿ, ಸರೋವರದಿಂದ ಒಂದು ಮೀನನ್ನು ಸಲೀಸಾಗಿ ಹಿಡಿಯುತ್ತದೆ. ರಂಗುರಂಗಿನ ಬಣ್ಣಗಳಿಂದ ಕೂಡಿದ ಗೀಜಗ ಹಕ್ಕಿಗಳು, ಸರೋವರದ ಸುತ್ತಲೂ ಇರುವ ಜಂಬುಸಸ್ಯದ ದಟ್ಟವಾದ ಪೊದೆಗಳಲ್ಲಿ ಗೂಡುಕಟ್ಟುತ್ತವೆ, ಮತ್ತು ಹಾರ್ನ್ಬಿಲ್ ಪಕ್ಷಿಯ ದುಃಖಸೂಚಕ ಕೂಗು, ತುಂಬ ದೂರದ ವರೆಗೆ, ಅಂದರೆ ಅಕೇಷ ಮರಗಾಡುಗಳ ವರೆಗೂ ಕೇಳಿಬರುತ್ತದೆ.
ಬೆಳಗ್ಗೆ ಹಾಗೂ ಸಾಯಂಕಾಲಗಳಲ್ಲಿ, ಪ್ರಶಾಂತವಾದ ಸರೋವರದಿಂದ ನೀರಾನೆಗಳ ಊಳಿಡುವಿಕೆಯ ಧ್ವನಿಯು ಕೇಳಿಸುತ್ತದೆ. ಮಧ್ಯಾಹ್ನದಷ್ಟಕ್ಕೆ, ಅವು ದಡದುದ್ದಕ್ಕೂ ಮಲಗುತ್ತವೆ; ಹೆಚ್ಚು ಆಳವಿಲ್ಲದ ನೀರಿನಲ್ಲಿ ಅರ್ಧ ಮುಳುಗಿರುವ ನೀರಾನೆಗಳು, ನುಣುಪಾದ ಬೂದುಬಣ್ಣದ ಬಂಡೆಯಂತೆ ಕಾಣುತ್ತವೆ. ಸರೋವರದ ಬಳಿ ವಾಸಿಸುವ ಜನರು, ಅಪಾಯಕರವಾದ ನೈಲ್ ಮೊಸಳೆಗಳ ವಿಷಯದಲ್ಲಿ ತುಂಬ ಜಾಗರೂಕರಾಗಿರುತ್ತಾರೆ. ಭಯಂಕರವಾದ ಈ ಸರೀಸೃಪಗಳಲ್ಲಿ ಹೆಚ್ಚಿನವನ್ನು ಮನುಷ್ಯರು ನಿರ್ಮೂಲಮಾಡಿರುವುದಾದರೂ, ಇವುಗಳಲ್ಲಿ ಕೆಲವು ಇನ್ನೂ ವಿಕ್ಟೋರಿಯ ಸರೋವರದ ಮೂಲೆಗಳಲ್ಲಿ ವಾಸಿಸುತ್ತಿವೆ.
ಸರೋವರವು ತೊಂದರೆಗೊಳಗಾಗಿದೆ
ಮೊತ್ತಮೊದಲ ಬಾರಿಗೆ ಜಾನ್ ಸ್ಪೀಕ್ ವಿಕ್ಟೋರಿಯ ಸರೋವರವನ್ನು ನೋಡಿದಾಗಿನ ದಿನಗಳಿಗಿಂತಲೂ, ಇಂದು ಆಫ್ರಿಕದ ಜನಸಂಖ್ಯೆಯು ಅತಿ ಹೆಚ್ಚು ಪ್ರಮಾಣದಲ್ಲಿ ಏರಿದೆ. ಇಂದು ಸರೋವರದ ದಡದ ಗಡಿಯೊಳಗೆ ವಾಸಿಸುತ್ತಿರುವ 3 ಕೋಟಿ ಜನರು, ತಮ್ಮ ಪೋಷಣೆಗಾಗಿ ಈ ಸಿಹಿನೀರಿನ ಮೇಲೆ ಆತುಕೊಂಡಿದ್ದಾರೆ. ಗತ ಸಮಯಗಳಲ್ಲಿ, ಸ್ಥಳಿಯ ಮೀನುಗಾರರು ಮೀನುಹಿಡಿಯಲು ಸಾಂಪ್ರದಾಯಿಕ ವಿಧಾನಗಳನ್ನು ಉಪಯೋಗಿಸುತ್ತಿದ್ದರು. ಹೆಣೆಯಲ್ಪಟ್ಟ ಬಲೆಗಳು, ಜಂಬುಹುಲ್ಲಿನ ಬಲೆಗಳು, ಗಾಳಗಳು, ಮತ್ತು ಈಟಿಗಳನ್ನು ಉಪಯೋಗಿಸಿ, ತಮಗೆ ಬೇಕಾದ ಮೀನುಗಳನ್ನು ಹಿಡಿಯುತ್ತಿದ್ದರು. ಆದರೆ ಇಂದು, ಆಳವಾದ ನೀರಿರುವ ಕಡೆ ಬಹಳ ದೂರದ ವರೆಗೆ ಬಲೆಯನ್ನು ಹರಡಿ, ಟನ್ನುಗಟ್ಟಲೆ ಮೀನುಗಳನ್ನು ಹಿಡಿಯಸಾಧ್ಯವಿರುವ, ಬಲೆ ಎಳೆಯುವ ದೋಣಿಗಳು ಹಾಗೂ ನೈಲಾನ್ ಗಿಲ್ನೆಟ್ ಕಿವಿರುಬಲೆಗಳು ಉಪಯೋಗಕ್ಕೆ ಬಂದಿವೆ. ಆದುದರಿಂದ, ವಿಪರೀತ ಮೀನುಹಿಡಿಯುವಿಕೆಯು ಈ ಸರೋವರದ ಪರಿಸರೀಯ ಸ್ಥಿತಿಗೆ ಬೆದರಿಕೆಯನ್ನೊಡ್ಡುತ್ತಿದೆ.
ವಿದೇಶೀಯ ಮೀನು ಜಾತಿಗಳು ಈ ಸರೋವರವನ್ನು ಪ್ರವೇಶಿಸಿರುವುದು, ಪರಿಸರೀಯ ಅಸಮತೋಲನವನ್ನು ಉಂಟುಮಾಡಿ, ಸ್ಥಳಿಕ ಮೀನುಗಾರಿಕೆಗೆ ಸಹ ಅಡ್ಡಿಯನ್ನು ತಂದಿದೆ. ನೀರಿನ ಮೇಲೆ ತೇಲುವ ಸುಂದರವಾದ ನೇರಳೆ ಬಣ್ಣದ ಹೂವುಗಳನ್ನು ಬಿಡುವ ಹಯಸಿಂತ್ ಎಂಬ ಕಳೆಸಸ್ಯವು, ಸರೋವರಕ್ಕೆ ಇನ್ನೂ ಹೆಚ್ಚಿನ ವಿಪತ್ತನ್ನು ಉಂಟುಮಾಡುತ್ತದೆ. ಮೂಲತಃ ದಕ್ಷಿಣ ಅಮೆರಿಕದ್ದಾಗಿರುವ ಈ ಕಳೆಸಸ್ಯವು ಎಷ್ಟು ಬೇಗ ಹಬ್ಬುತ್ತದೆಂದರೆ, ಸರೋವರದ ತೀರಗಳು ಹಾಗೂ ಪ್ರವೇಶದ್ವಾರಗಳ ಬಳಿಯಿರುವ ಸ್ಥಳವನ್ನು ಸಂಪೂರ್ಣವಾಗಿ ಆವರಿಸಿ, ಆ ದಾರಿಗಳಲ್ಲಿ ಅಡಚಣೆಯನ್ನು ಉಂಟುಮಾಡಿದೆ. ಇದರಿಂದಾಗಿ, ಕಾರ್ಗೋ ಹಡಗುಗಳು, ಪ್ರಯಾಣಿಕ ದೋಣಿಗಳು, ಮತ್ತು ಚಿಕ್ಕ ದೋಣಿಗಳಲ್ಲಿ ಸ್ಥಳಿಕ ಮೀನುಗಾರರು ಕಡಲತೀರಗಳಿಗೆ ಹಾಗೂ ಹಡಗಿನ ಇಳಿದಾಣಗಳಿಗೆ ಪ್ರಯಾಣಿಸುವ ಮಾರ್ಗಗಳಿಗೆ ತಡೆಯುಂಟಾಗಿದೆ. ಸರೋವರದ ಜಲಾಶಯ ಪ್ರದೇಶಗಳ ಅರಣ್ಯನಾಶ, ಹೊಲಸು ಪದಾರ್ಥಗಳು ಸರೋವರಕ್ಕೆ ಸುರಿಯಲ್ಪಡುವುದು, ಹಾಗೂ ಕೈಗಾರಿಕೋದ್ಯಮದಿಂದಾಗಿ ಸರೋವರದ ಭವಿಷ್ಯತ್ತು ಅಪಾಯಕ್ಕೊಳಗಾಗಿದೆ.
ವಿಕ್ಟೋರಿಯ ಸರೋವರವು ಈ ಅಪಾಯದಿಂದ ಪಾರಾಗುವುದೊ? ಈ ಪ್ರಶ್ನೆಯು ಈಗ ಚರ್ಚಿಸಲ್ಪಡುತ್ತಿದೆ, ಮತ್ತು ಅದರ ಅನೇಕ ಸಮಸ್ಯೆಗಳು ಹೇಗೆ ಬಗೆಹರಿಸಲ್ಪಡುವವು ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ, ವಿಕ್ಟೋರಿಯ ಸರೋವರವು ಒಂದು ನೈಸರ್ಗಿಕ ವೈಶಿಷ್ಟ್ಯವಾಗಿದೆ. ಮತ್ತು ದೇವರ ರಾಜ್ಯವು “ಲೋಕನಾಶಕರನ್ನು” ನಾಶಮಾಡಿದ ಬಳಿಕವೂ ಅದು ಭೂಮಿಯಲ್ಲಿ ಅಸ್ತಿತ್ವದಲ್ಲಿರುವುದು.—ಪ್ರಕಟನೆ 11:18.
[ಪುಟ 35 ರಲ್ಲಿರುವ ಚೌಕ/ಚಿತ್ರಗಳು]
ಸರೋವರವನ್ನು ನುಂಗಿಹಾಕುತ್ತಿರುವ ಮೀನು
ಒಂದು ಮೀನು ಎಣ್ಣೆಯಿಂದ ಕೂಡಿದೆ, ಅದಕ್ಕೆ ಬಕಾಸುರನಂತೆ ಹಸಿವಾಗುತ್ತದೆ, ಅತಿ ಬೇಗನೆ ಸಂತಾನಾಭಿವೃದ್ಧಿಮಾಡುತ್ತದೆ ಮತ್ತು ಆರು ಅಡಿಗಳಷ್ಟು ಉದ್ದ ಬೆಳೆಯುತ್ತದೆ. ಅದು ಯಾವ ಮೀನು ಗೊತ್ತೊ? ಲೇಟ್ಸ್ ನೈಲೊಟಿಕಸ್! ಸಾಮಾನ್ಯವಾಗಿ ಇದು ನೈಲ್ ಪರ್ಚ್ ಎಂದು ಪ್ರಸಿದ್ಧವಾಗಿದೆ. 1950ಗಳಲ್ಲಿ ವಿಕ್ಟೋರಿಯ ಸರೋವರಕ್ಕೆ ತರಲ್ಪಟ್ಟ ಈ ಬೃಹದಾಕಾರದ ಹೊಟ್ಟೆಬಾಕ ಮೀನು, ಪರಿಸರೀಯ ಅವನತಿಗೆ ಕಾರಣವಾಗಿ ಪರಿಣಮಿಸಿದೆ. 40 ವರ್ಷಗಳೊಳಗೆ ಇದು, ಸರೋವರದಲ್ಲಿರುವ 400 ಸ್ಥಳಿಯ ಮೀನು ಜಾತಿಗಳಲ್ಲಿ ಸುಮಾರು ಅರ್ಧದಷ್ಟನ್ನು ತಿಂದುಹಾಕಿದೆ. ಈ ಸಾಮೂಹಿಕ ನಿರ್ಮೂಲನವು, ಅಲ್ಲಿ ವಾಸಿಸುವ ಲಕ್ಷಾಂತರ ಜನರ ಆಹಾರದ ಮೂಲಕ್ಕೇ ಬೆದರಿಕೆಯನ್ನು ತಂದೊಡ್ಡಿದೆ. ಏಕೆಂದರೆ ತಮ್ಮ ಕುಟುಂಬಗಳ ಜೀವನೋಪಾಯಕ್ಕಾಗಿ ಆ ಜನರು ಚಿಕ್ಕ ಟಿಲಪಿಯ ಮೀನು, ಸಿಕ್ಲಿಡ್ ಮೀನು, ಹಾಗೂ ಸ್ಥಳಿಕವಾಗಿ ದೊರಕುವ ಇನ್ನಿತರ ಮೀನುಗಳ ಮೇಲೆ ಅವಲಂಬಿಸಿದ್ದಾರೆ. ಈ ಚಿಕ್ಕ ಮೀನುಗಳು, ಸರೋವರದ ಒಳಿತಿಗೂ ಕಾರಣವಾಗಿವೆ. ಈ ಮೀನುಗಳಲ್ಲಿ ಕೆಲವು, ಭೀಕರವಾದ ಚಪ್ಪಟೆಹುಳುಗಳ ರೋಗವನ್ನು ಉಂಟುಮಾಡುವಂತಹ ಬಸವನಹುಳುಗಳನ್ನು ತಿಂದುಹಾಕುತ್ತವೆ; ಹೀಗೆ ಮಾಡುವ ಮೂಲಕ ಅವು ಚಪ್ಪಟೆಹುಳುಗಳ ರೋಗದ ಸಂಭವನೀಯತೆಯನ್ನು ಕಡಿಮೆಮಾಡಲು ನೆರವಾಗುತ್ತವೆ. ಇನ್ನಿತರ ಮೀನುಗಳು, ಬಹಳವಾಗಿ ಬೆಳೆಯುತ್ತಿರುವ ಪಾಚಿಯನ್ನು ಹಾಗೂ ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು ತಿಂದುಹಾಕುತ್ತವೆ. ನಿಯಂತ್ರಣವಿಲ್ಲದೆ ಬೆಳೆದಿರುವ ಈ ಸಸ್ಯಗಳು, ಯೂಟ್ರಾಫಿಕೇಷನ್—ಕೊಳೆಯುತ್ತಿರುವ ಜಲಸಸ್ಯಗಳು, ನೀರಿನಲ್ಲಿನ ಆಮ್ಲಜನಕವನ್ನು ಖಾಲಿಮಾಡುವ ಕ್ರಿಯೆ—ಎಂದು ಕರೆಯಲ್ಪಡುವ ಒಂದು ಸ್ಥಿತಿಯನ್ನು ಉಂಟುಮಾಡಿವೆ. ಈ ಗಲೀಜನ್ನು ಸ್ವಚ್ಛಮಾಡಲು ಸ್ವಲ್ಪವೇ ಸ್ಥಳಿಯ ಮೀನುಗಳಿರುವುದರಿಂದ, “ಮೃತ ಪ್ರದೇಶಗಳು,” ಅಂದರೆ ಆಮ್ಮಜನಕವಿಲ್ಲದ ಜಲಪ್ರದೇಶಗಳು ಅತ್ಯಧಿಕವಾಗಿವೆ ಮತ್ತು ಇನ್ನೂ ಹೆಚ್ಚು ಮೀನುಗಳನ್ನು ಕೊಂದುಹಾಕುತ್ತಿವೆ. ನೈಲ್ ಪರ್ಚ್ ಮೀನಿಗೆ ತಿನ್ನಲು ಹೆಚ್ಚು ಮೀನುಗಳು ಸಿಗುತ್ತಿಲ್ಲವಾದ ಕಾರಣ, ಅದು ಒಂದು ಹೊಸ ಆಹಾರದ ಮೂಲವನ್ನು ಕಂಡುಕೊಂಡಿದೆ. ಅದೇನೆಂದರೆ, ತನ್ನ ಸ್ವಂತ ಮರಿಗಳನ್ನೇ ಅದು ತಿಂದುಹಾಕುತ್ತಿದೆ! ಸರೋವರವನ್ನು ನುಂಗಿಹಾಕುತ್ತಿರುವ ಈ ಮೀನು, ಈಗ ತನ್ನನ್ನೇ ನುಂಗಿಹಾಕುವ ಬೆದರಿಕೆಯನ್ನು ಒಡ್ಡುತ್ತಿದೆ!
[ಪುಟ 21ರಲ್ಲಿರುವಚಿತ್ರ]
(For fully formatted text, see publication)
ಯುಗಾಂಡ
ಕೆನ್ಯ
ಟಾನ್ಸೇನಿಯ
ವಿಕ್ಟೋರಿಯ ಸರೋವರ
[ಪುಟ 21 ರಲ್ಲಿರುವ ಚಿತ್ರ]
ವಿಕ್ಟೋರಿಯ ಸರೋವರದ ತೀರಪ್ರದೇಶಗಳಲ್ಲಿ ಸಾಕ್ಷಿನೀಡುತ್ತಿರುವುದು
[ಪುಟ 22 ರಲ್ಲಿರುವ ಚಿತ್ರ]
ಗೀಜಗಹಕ್ಕಿ
[ಪುಟ 22 ರಲ್ಲಿರುವ ಚಿತ್ರ]
ಪೆಲಿಕನ್ಗಳು
[ಪುಟ 23 ರಲ್ಲಿರುವ ಚಿತ್ರ]
ಬೆಳ್ಳಕ್ಕಿ
[ಪುಟ 23 ರಲ್ಲಿರುವ ಚಿತ್ರ]
ನೈಲ್ ಮೊಸಳೆ
[ಪುಟ 23 ರಲ್ಲಿರುವ ಚಿತ್ರ]
ನೀರಾನೆಯ ಮೇಲೆ ನಿಂತಿರುವ ಕ್ರೌಂಚಪಕ್ಷಿ