ನಸುಗೆಂಪು ಬಣ್ಣದ ಸರೋವರ!
ಸೆನಿಗಲ್‌ನಲ್ಲಿನ ಎಚ್ಚರ! ಲೇಖಕರಿಂದ
ನಸುಗೆಂಪು ಬಣ್ಣದ ಸರೋವರವೊಂದು ನಿಜವಾಗಿ ಇರಬಲ್ಲದೊ? ರೆಟ್ಬ ಸರೋವರವನ್ನು, ನಸುಗೆಂಪು ಸರೋವರ ಎಂದೂ ಕರೆಯಲಾಗುತ್ತದೆ. ಇದು ಪಶ್ಚಿಮ ಆಫ್ರಿಕದಲ್ಲಿನ ಸೆನಿಗಲ್‌ನ ಡಕಾರ್‌ನಲ್ಲಿರುವ ನಮ್ಮ ಮನೆಯಿಂದ ಕೇವಲ 30 ಕಿಲೊಮೀಟರ್ ದೂರದಲ್ಲಿರುವುದರಿಂದ, ಇದು ನಿಜವಾಗಿಯೂ ಅದರ ಹೆಸರಿಗೆ ತಕ್ಕಂತೆ ಇದೆಯೊ ಎಂದು ನೋಡಲು ನಿರ್ಣಯಿಸಿದೆವು. ನಾವು ಅಲ್ಲಿಗೆ ತಲಪಿದಾಗ, ಸೂರ್ಯನ ಕಿರಣಗಳಲ್ಲಿ ನೀರು ಫಳಫಳ ಹೊಳೆಯುವುದನ್ನು ನೋಡಿದೆವು ಮತ್ತು ನಮಗೆ ತಿಳಿಸಲ್ಪಟ್ಟಂತೆಯೇ ನಿಜವಾಗಿಯೂ ಅದರ ಬಣ್ಣ ಸೊಗಸಾದ ನಸುಗೆಂಪು ಆಗಿತ್ತು. ನೀರಿನಲ್ಲಿರುವ ಸೂಕ್ಷ್ಮಾಣುಜೀವಿಗಳೊಂದಿಗಿನ ಸೂರ್ಯಕಿರಣದ ಪ್ರಕ್ರಿಯೆಯ ಫಲವೇ ಈ ಅಸಾಮಾನ್ಯ ಬಣ್ಣವೆಂದು ನಮ್ಮ ಗೈಡ್ ಹೇಳುತ್ತಾನೆ. ಆದರೆ ಆ ಸರೋವರದ ಬಣ್ಣಕ್ಕಿಂತ ಹೆಚ್ಚು ಸಂಗತಿಗಳು ಅಲ್ಲಿ ನೋಡಲಿಕ್ಕಿವೆ.
ಆ ಸರೋವರದ ಆಳವಿಲ್ಲದ ನೀರಿನ ತಳದಲ್ಲಿ ಉಪ್ಪಿನ ಸ್ತರವಿದೆ. ಸರೋವರದ ನೀರಿನಲ್ಲಿ ಉಪ್ಪಿನ ಅಂಶ ಎಷ್ಟಿದೆಯೆಂದರೆ ಅದರ ಮೇಲೆ ಯಾವುದೇ ಘನವಸ್ತು ಸಹ ತೇಲಬಲ್ಲದು. ಆದುದರಿಂದ ಕೆಲವು ಸಂದರ್ಶಕರು, ನೀರಿನ ಮೇಲೆ ಯಾವುದೇ ಪ್ರಯಾಸವಿಲ್ಲದೆ ತೇಲುವ ಈ ಅವಕಾಶವನ್ನು ಬಿಟ್ಟುಕೊಡುವುದಿಲ್ಲ ಎಂಬುದನ್ನು ನಾವು ಗಮನಿಸಿದೆವು.
ಈ ನಸುಗೆಂಪು ಸರೋವರವು ನೂರಾರು ಜನರ ಹೊಟ್ಟೆಪಾಡಿಗಾಗಿ ಕೆಲಸವನ್ನು ಒದಗಿಸುತ್ತದೆಂಬುದು ವ್ಯಕ್ತ (1). ಸರೋವರದ ಎದುರಿನಲ್ಲಿ ಕಾರ್ಮಿಕರು ಟ್ರಕ್ಕುಗಳಲ್ಲಿ ಉಪ್ಪನ್ನು ತುಂಬಿಸುತ್ತಿದ್ದರು. ಇಲ್ಲಿನ ಸ್ಥಳಿಕ ಜನರು ಸರೋವರದಿಂದ ಉಪ್ಪನ್ನು ತೆಗೆಯುವುದನ್ನು ನೋಡಲು ನಾವು ಸ್ವಲ್ಪ ಸಮಯ ಅಲ್ಲಿ ನಿಂತೆವು. ಪುರುಷರು ಸರೋವರದಲ್ಲಿ ತಮ್ಮ ಎದೆಯ ಮಟ್ಟಿಗಿನ ನೀರಿನಲ್ಲಿ ನಿಂತಿದ್ದು, ಉದ್ದುದ್ದವಾದ ಪಿಕಾಸಿಗಳಿಂದ ಉಪ್ಪನ್ನು ತುಂಡುಮಾಡುವುದನ್ನು ನೋಡಸಾಧ್ಯವಿದೆ. ಅನಂತರ ಅದನ್ನು ಬಾಸ್ಕೆಟುಗಳಲ್ಲಿ ತುಂಬಿಸಿ, ದೋಣಿಗಳಿಗೆ ಹಾಕುತ್ತಾರೆ. ಒಂದು ಟನ್ ಉಪ್ಪನ್ನು ಶೇಖರಿಸಲು ಮೂರು ತಾಸುಗಳು ಹಿಡಿಯುತ್ತದೆಂದು ಆ ಕಾರ್ಮಿಕರಲ್ಲೊಬ್ಬನು ನಮಗೆ ಹೇಳಿದನು. ಆ ದೋಣಿಗಳು ಎಷ್ಟು ತುಂಬಿರುತ್ತವೆಂದರೆ, ಅವು ಇನ್ನೇನು ಮುಳುಗಲಿವೆಯೊ ಎಂಬಂತೆ ಕಾಣುತ್ತವೆ (2). ಆ ದೋಣಿಗಳು ದಡ ತಲಪುವಾಗ ಮುಂದಿನ ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಅವರು ಆ ಉಪ್ಪನ್ನು ಬಕೆಟುಗಳಲ್ಲಿ ತುಂಬಿಸಿ ತಮ್ಮ ತಲೆ ಮೇಲೆ ಹೊತ್ತುಕೊಂಡು ಟ್ರಕ್ಕುಗಳಿಗೆ ಸಾಗಿಸುತ್ತಾರೆ (3). ಪರಿಣಾಮಕಾರಿಯಾಗಿ ಕೆಲಸಮಾಡುವ ಒಂದು ದೊಡ್ಡ ಯಂತ್ರದಂತೆ ಅವರು ಜೊತೆಯಾಗಿ ಕೆಲಸಮಾಡುತ್ತಾರೆ.
ನಮ್ಮ ಸಂಚಾರವು ಅದ್ಭುತವಾದ ಅನುಭವವಾಗಿತ್ತು. ಈ ನಸುಗೆಂಪು ಸರೋವರವು, ನಮ್ಮ ಭೂಮಿಯನ್ನು ಯೆಹೋವನ ಅಮೂಲ್ಯ ಕೊಡುಗೆಯಾಗಿ ಮಾಡುವಂಥ ಅನೇಕ ವಿಸ್ಮಯಗಳಲ್ಲಿ ಒಂದಾಗಿದೆ.—ಕೀರ್ತನೆ 115:16. (g05 9/22)
[ಪುಟ 18ರಲ್ಲಿರುವ ಚಿತ್ರ ಕೃಪೆ]
Photo by Jacques CLEMENT, Clichy, FRANCE at http://community.webshots.com/user/pfjc