ರಸ್ತೆಗಳು—ನಾಗರಿಕತೆಯ ಅಪಧಮನಿಗಳು
ನೆನಪಿಗೆ ಬಾರದಷ್ಟು ಹಿಂದಿನ ಕಾಲದಿಂದ, ಜನರು ಪರಸ್ಪರರೊಂದಿಗೆ, ಕಾಲುದಾರಿ, ರಸ್ತೆ, ಹಾಗೂ ಹೆದ್ದಾರಿಗಳ ಒಂದು ವಿಶಾಲವಾದ ಮಾಧ್ಯಮದ ಮೂಲಕ ಸಂಪರ್ಕವನ್ನು ಹೊಂದಿದ್ದಾರೆ. ಇವುಗಳು ಪ್ರಯಾಣಮಾಡಲು, ವ್ಯಾಪಾರಮಾಡಲು ಮತ್ತು ಯುದ್ಧಮಾಡಿ, ರಾಜ್ಯಗಳನ್ನು ಕಟ್ಟಲು ಸಹ ಮನುಷ್ಯನಿಗಿರುವ ಅಭಿಲಾಷೆಯನ್ನು ಪ್ರಮಾಣೀಕರಿಸುತ್ತವೆ. ಹೌದು, ಮಾನವನ ಸ್ವಭಾವದ ಕರಾಳ ಮುಖವನ್ನು ಸಹ ಇವು ಬಯಲುಮಾಡುತ್ತವೆ.
ಮನುಷ್ಯರು ಮತ್ತು ಪ್ರಾಣಿಗಳು ಮೊದಲು ನಡೆದಾಡಿದ ಜಾಡುಗಳಿಂದ ಹಿಡಿದು, ಈಗ ನಮ್ಮ ಆಧುನಿಕ ಬಹುಮಾರ್ಗದ ವೇಗದ ಹೆದ್ದಾರಿಗಳ ವರೆಗಿನ ರಸ್ತೆಗಳ ಇತಿಹಾಸವನ್ನು ತಿಳಿದುಕೊಳ್ಳುವುದು ಕೇವಲ ಮನಚಿತ್ರವಾಗಿರುವುದಿಲ್ಲ, ಬದಲಿಗೆ ಇದು ಒಂದು ವಾಸ್ತವಿಕ ವಿಷಯವಾಗಿದೆ. ಇದು ಮನುಷ್ಯನ ಸ್ವಭಾವದ ಅಧ್ಯಯನವೂ ಆಗಿದೆ.
ಆರಂಭದ ರಸ್ತೆಗಳು
“ತುಂಬ ಶ್ರದ್ಧಾಪೂರ್ವಕದಿಂದ ರಸ್ತೆಯನ್ನು ನಿರ್ಮಿಸಿದವರಲ್ಲಿ ಮೆಸೊಪೊಟೊಮಿಯರು ಮೊದಲಿಗರಾಗಿದ್ದಿರಬಹುದು” ಎಂದು ದ ನ್ಯೂ ಎನ್ಸೈಕ್ಲೊಪಿಡೀಯ ಬ್ರಿಟ್ಯಾನಿಕ ಹೇಳುತ್ತದೆ. ಈ ಜನರು ಟೈಗ್ರಿಸ್ ಮತ್ತು ಯೂಫ್ರೇಟೀಸ್ ನದಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅವರ ಮೆರವಣಿಗೆಯ ರಸ್ತೆಗಳು, “ಸುಟ್ಟ ಇಟ್ಟಿಗೆ ಮತ್ತು ಕಲ್ಲನ್ನು ಟಾರಿನ ಗಾರೆಯಲ್ಲಿ ಇಟ್ಟು ಹಾಸಲ್ಪಟ್ಟಿದ್ದವು” ಎಂದು ಈ ಮೂಲವು ಹೇಳುತ್ತದೆ. ಹಿಂದೆ ನಿರ್ಮಾಣದ ಸಾಮಗ್ರಿಗಳ ಬಗ್ಗೆ ಬೈಬಲು ಏನು ಹೇಳುತ್ತದೋ ಅದನ್ನು ಈ ವರ್ಣನೆಯು ನಮಗೆ ನೆನಪು ಹುಟ್ಟಿಸುತ್ತದೆ. ಅದು ಹೇಳುವುದು: “ಇಟ್ಟಿಗೆಯು ಅವರಿಗೆ ಕಲ್ಲಾಗಿತ್ತು, ಆದರೆ ಟಾರು ಗಾರೆಯಾಗಿತ್ತು.”—ಆದಿಕಾಂಡ 11:3, NW.
ಪುರಾತನ ಇಸ್ರಾಯೇಲ್ಯರಿಗೆ ತಮ್ಮ ಧಾರ್ಮಿಕ ಕಟ್ಟುಪಾಡುಗಳನ್ನು ನಿರ್ವಹಿಸಲು ರಸ್ತೆಗಳು ತುಂಬ ಪ್ರಾಮುಖ್ಯವಾಗಿದ್ದವು. ಯೇಸು ಕ್ರಿಸ್ತನು ಹುಟ್ಟುವುದಕ್ಕಿಂತ ಸುಮಾರು 1,500 ವರ್ಷಗಳ ಮುಂಚೆಯೇ ಇಸ್ರಾಯೇಲ್ಯರು ಹೀಗೆ ಆಜ್ಞಾಪಿಸಲ್ಪಟ್ಟಿದ್ದರು: “ವರುಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ [ಆತ್ಮಿಕ ಹಬ್ಬವನ್ನು ಆಚರಿಸಲು] ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು.” (ಧರ್ಮೋಪದೇಶಕಾಂಡ 16:16) ಆ ಸ್ಥಳವು ಯೆರೂಸಲೇಮ್ ಎಂದು ಕರೆಯಲ್ಪಟ್ಟಿತು ಮತ್ತು ಆಗಾಗ್ಗೆ ಇಡೀ ಕುಟುಂಬಗಳು ಈ ಆನಂದದಾಯಕ ಸಂದರ್ಭಗಳಿಗೆ ಹೋಗುತ್ತಿದ್ದವು. ಇದಕ್ಕಾಗಿ ಉತ್ತಮ ರಸ್ತೆಗಳು ತುಂಬ ಆವಶ್ಯಕವಾಗಿದ್ದವು!
ಪ್ರಮುಖ ರಸ್ತೆಗಳು ಸುಸ್ಥಿತಿಯಲ್ಲಿದ್ದವು ಎಂಬುದು ಸ್ಪಷ್ಟ. ಕ್ರಿಸ್ತನು ಹುಟ್ಟುವುದಕ್ಕಿಂತಲೂ ಸಾವಿರ ವರ್ಷಗಳ ಮುಂಚೆ ಆಳ್ವಿಕೆ ನಡೆಸಿದ ಸೊಲೊಮೋನನ ಬಗ್ಗೆ ಯೆಹೂದಿ ಇತಿಹಾಸಕಾರನಾದ ಫ್ಲೇವೀಯಸ್ ಜೋಸಿಫಸ್ ಹೇಳಿದ್ದು: “ಅವನು ರಸ್ತೆಗಳನ್ನು ಸುಸ್ಥಿತಿಯಲ್ಲಿಟ್ಟನು ಮತ್ತು ಯೆರೂಸಲೇಮಿಗೆ ನಡೆಸುವ ಮಾರ್ಗದಲ್ಲಿ ದಾರಿಯುದ್ದಕ್ಕೂ ಕಪ್ಪುಕಲ್ಲಿನ ಹೆದ್ದಾರಿಯನ್ನು ಮಾಡಿದನು.”
ಆಕಸ್ಮಿಕವಾಗಿ ಕೊಲೆಮಾಡಿದವರಿಗಾಗಿ ರಕ್ಷಣೆಯನ್ನು ನೀಡಿದ ಆರು ಆಶ್ರಯ ನಗರಗಳಿದ್ದವು. ಈ ನಗರಗಳ ರಸ್ತೆಗಳು ತುಂಬ ಒಳ್ಳೆಯ ಸ್ಥಿತಿಯಲ್ಲಿದ್ದವು. ಪ್ರತಿಯೊಂದು ಅಡ್ಡದಾರಿಯಲ್ಲಿ ಸೂಚಕಫಲಕಗಳನ್ನು ಇರಿಸಲಾಗಿತ್ತು ಮತ್ತು ಇದು ಹತ್ತಿರದಲ್ಲಿರುವ ಆಶ್ರಯ ನಗರದ ಮಾಹಿತಿಯನ್ನು ನೀಡಿತು ಎಂದು ಯೆಹೂದಿ ಸಂಪ್ರದಾಯವು ತೋರಿಸುತ್ತದೆ.—ಅರಣ್ಯಕಾಂಡ 35:6; 11:34.
ವಾಣಿಜ್ಯದ ಹಬ್ಬುವಿಕೆಗೆ ರಸ್ತೆಗಳು ಪ್ರಮುಖ ಪಾತ್ರವನ್ನು ವಹಿಸಿದವು ಮತ್ತು ಪುರಾತನ ಸಮಯಗಳಲ್ಲಿ ಅತ್ಯಂತ ಬೇಡಿಕೆಯಲ್ಲಿದ್ದ ಪದಾರ್ಥಗಳಲ್ಲಿ ಒಂದು ರೇಷ್ಮೆಯಾಗಿತ್ತು. ಇಸ್ರಾಯೇಲ್ಯರು ಒಂದು ಜನಾಂಗವಾಗಿ ಪರಿಣಮಿಸುವ ತುಂಬ ಸಮಯದ ಹಿಂದೆಯೇ, ರೇಷ್ಮೆಹುಳು ಹೆಣೆಯುವ ದಾರದಿಂದ ರೇಷ್ಮೆ ಬಟ್ಟೆಯನ್ನು ತಯಾರಿಸುವುದು ಹೇಗೆಂಬುದನ್ನು ಚೀನಾದವರು ಕಂಡುಹಿಡಿದರು. ಆದರೆ ಕ್ರಿಸ್ತನು ಹುಟ್ಟುವ ತನಕವೂ ಅದನ್ನು ತಯಾರಿಸುವ ವಿಧವನ್ನು ಅವರು ರಹಸ್ಯವಾಗಿಟ್ಟರು. ಕ್ರಿಸ್ತನು ಹುಟ್ಟುವ ಮುಂಚೆಯೂ ರೇಷ್ಮೆಯು ಪಾಶ್ಚಾತ್ಯ ದೇಶದಲ್ಲಿ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ, ಜೆಫ್ರೀ ಹಿಂಡ್ಲೀಯ ರಸ್ತೆಗಳ ಒಂದು ಇತಿಹಾಸ (ಇಂಗ್ಲಿಷ್)ಕ್ಕನುಸಾರ, “ಪುರುಷರು ಅದನ್ನು ಉಪಯೋಗಿಸಬಾರದೆಂದು” ಆಜ್ಞೆಗಳು ನೀಡಲ್ಪಟ್ಟವು, ಏಕೆಂದರೆ ಅದನ್ನು ಉಪಯೋಗಿಸುವುದು “ಹೆಣ್ಣಿಗತನವೆಂದು ಪರಿಗಣಿಸಲಾಗುತ್ತಿತ್ತು.”
ರೇಷ್ಮೆಯನ್ನು ಚೀನಾದಿಂದ ಸಾಗಿಸುತ್ತಿದ್ದ ವ್ಯಾಪಾರ ಮಾರ್ಗವನ್ನು ರೇಷ್ಮೆ ರಸ್ತೆಯೆಂದು ಕರೆಯಲಾಗುತ್ತಿತ್ತು. ಸಾ.ಶ. 13ನೇ ಶತಮಾನದ ಅಂತ್ಯಭಾಗದಲ್ಲಿ ಮಾರ್ಕೋ ಪೋಲೋ ಚೀನಾಗೆ ಆ ಮಾರ್ಗವಾಗಿ ಪ್ರಯಾಣಿಸುವ ಸಮಯದಲ್ಲಿ, ಇದು ಈ ಮೊದಲೇ 1,400 ವರ್ಷಗಳ ಹಿಂದೆಯಿಂದಲೇ ಉಪಯೋಗದಲ್ಲಿತ್ತು. 2,000 ವರ್ಷಗಳ ತನಕ, ಆ ರೇಷ್ಮೆ ರಸ್ತೆಯು ವಿಶ್ವದಲ್ಲಿಯೇ ಅತ್ಯಂತ ಉದ್ದವಾದ ರಸ್ತೆಯಾಗಿತ್ತು. ಆ ಮಾರ್ಗದ ಅಂತರವು, ರೇಷ್ಮೆಯ ತವರೂರಾದ ಚೀನಾದ ಶೆಂಗೈದಿಂದ ಸ್ಪೇನಿನ ಗ್ಯಾಡಿಸ್ (ಆಧುನಿಕ ದಿನದ ಕಾಡಿಸ್)ಗೆ ಸುಮಾರು 12,800 ಕಿಲೊಮೀಟರುಗಳಾಗಿತ್ತು.
ಮಿಲಿಟರಿ ಪ್ರಾಮುಖ್ಯತೆ
ಸಾಮ್ರಾಜ್ಯಕ್ಕಾಗಿ ಬಲವಾದ ಅಪೇಕ್ಷೆಯಿದ್ದುದರಿಂದಲೇ ರಸ್ತೆಯನ್ನು ನಿರ್ಮಿಸುವುದರಲ್ಲಿ ತುಂಬ ಪ್ರಗತಿಯುಂಟಾಯಿತು. ಕೈಸರನ ಕೆಳಗಿದ್ದ ರೋಮನ್ ಸಾಮ್ರಾಜ್ಯದ ರಸ್ತೆಯು, ಉದಾಹರಣೆಗೆ ಸುಮಾರು 80,000 ಕಿಲೊಮೀಟರುಗಳಷ್ಟು ದೂರದ ಯೂರೋಪ್, ಉತ್ತರ ಆಫ್ರಿಕ ಮತ್ತು ಮಧ್ಯ ಪೂರ್ವಕ್ಕೆ ಹಬ್ಬಿತು. ರೋಮನ್ ಸೈನಿಕರು ಯುದ್ಧಗಳಲ್ಲಿ ಭಾಗವಹಿಸದಿರುತ್ತಿರುವಾಗ, ರಸ್ತೆಗಳನ್ನು ನಿರ್ಮಿಸಲು ಹಾಗೂ ಅದನ್ನು ದುರಸ್ತಿಪಡಿಸಲು ಅವರನ್ನು ನೇಮಿಸಲಾಗುತ್ತಿತ್ತು.
ವಿಜಯದಲ್ಲಿ ಸಹ ರಸ್ತೆಗಳ ಪ್ರಾಮುಖ್ಯತೆಯ ಉದಾಹರಣೆಯನ್ನು ಇತ್ತೀಚಿನ ಸಮಯಗಳಲ್ಲಿ ನೋಡಸಾಧ್ಯವಿದೆ. 1934ರಲ್ಲಿ ಮೋಟಾರು ಹೆದ್ದಾರಿಗಳನ್ನು ನಿರ್ಮಿಸುವುದರ ಆ್ಯಡಾಲ್ಫ್ ಹಿಟ್ಲರ್ನ ಕಾರ್ಯಕ್ರಮದಿಂದ, ಇತರ ಜನರ ಮೇಲೆ ದಬ್ಬಾಳಿಕೆ ನಡೆಸುವುದರ ಅವನ ಅನ್ವೇಷಣೆಯು ವ್ಯಾಪಕವಾಗಿ ಹೆಚ್ಚಾಯಿತು. ಇತಿಹಾಸಕರನಾದ ಹಿಂಡ್ಲೀಗನುಸಾರ, ಈ ಕಾರ್ಯಕ್ರಮವು “ವಿಶ್ವದಲ್ಲಿಯೇ ಪ್ರಥಮ ಮೋಟಾರು ಹೆದ್ದಾರಿಗಳನ್ನು” ಜರ್ಮನಿಯು ಹೊಂದುವಂತೆ ಅನುಮತಿಸಿತು.
ರಸ್ತೆ ನಿರ್ಮಾಣ—ಒಂದು ವಿಜ್ಞಾನ
ರೋಮನ್ ಸಮೀಕ್ಷೆಗಾರರು ಗ್ರೋಮ ಎಂದು ಕರೆಯಲ್ಪಡುವ ಒಂದು ಉಪಕರಣವನ್ನು ಉಪಯೋಗಿಸುತ್ತಾ, ಅಂಬುಗಳಂತೆ ನೇರವಾದ ರಸ್ತೆಗಳನ್ನು ನಿರ್ಮಿಸಿದರು. ಕಟ್ಟಡಗಾರರು ನಾಜೂಕಿನ ಕಲಾಸೌಂದರ್ಯವುಳ್ಳ ಮೈಲಿಗಲ್ಲುಗಳನ್ನು ಕೆತ್ತಿದರು ಮತ್ತು ಶಿಲ್ಪಿಗಳು ಎಷ್ಟು ಭಾರದ ಸರಕನ್ನು ತೆಗೆದುಕೊಂಡುಹೋಗಬಹುದು ಎಂಬುದರ ಮೇಲೆ ಮಿತಿಯನ್ನು ಹಾಕಿದರು. ರಸ್ತೆಗಳು ಗಟ್ಟಿನೆಲ ಹಾಗೂ ಬಾಳುವಂತಹ ಮೇಲ್ಮೈಯನ್ನು ಹೊಂದಿದ್ದವು. ಆದರೆ ಅವುಗಳು ದೀರ್ಘಕಾಲದ ವರೆಗೆ ಸುಸ್ಥಿತಿಯಲ್ಲಿದ್ದುದಕ್ಕೆ ಮುಖ್ಯ ಕಾರಣವು, ಸ್ವಲ್ಪವೇ ವಕ್ರಾಕೃತಿ ಕೊಟ್ಟು ಏರಿಸಿದ ಅತ್ಯುತ್ತಮವಾದ ಚರಂಡಿ ವ್ಯವಸ್ಥೆ, ಹಾಗೂ ಸುತ್ತಮುತ್ತಲಿರುವ ಪ್ರದೇಶಗಳಿಗಿಂತ ಮೇಲಿದ್ದ ರಸ್ತೆಯ ಎತ್ತರವೇ ಆಗಿತ್ತು. ಆದುದರಿಂದ “ಹೈವೇ” ಎಂಬ ಹೆಸರನ್ನು ಕಂಡುಹಿಡಿಯಲಾಯಿತು. ಅಂಗಡಿಗಳು ರಸ್ತೆ ನಕ್ಷೆಗಳನ್ನು ಸಹ ಮಾರಾಟಮಾಡಿದವು.
“ರಸ್ತೆ ನಿರ್ಮಾಣಿಕರಾದ ರೋಮನ್ನರ ಸಾಧನೆ ಎಷ್ಟೊಂದು ಅಮೋಘವಾಗಿದೆ ಎಂದರೆ, ಒಬ್ಬ ಲೇಖಕನಿಗೆ ಅವರನ್ನು ಹೊಗಳದೇ ಬೇರೆ ಮಾರ್ಗವೇ ಇಲ್ಲ. ಹಾಗೂ ಇಟಲಿಯ ಅತ್ಯುತ್ತಮ ರಸ್ತೆಗಳನ್ನು ನೋಡುವಾಗ, ಮಾನವನ ಗತಕಾಲದಲ್ಲಿ ಇಂತಹ ಒಂದು ಸ್ಮಾರಕವನ್ನು ಕಂಡುಕೊಳ್ಳುವುದೇ ಸಂದೇಹ” ಎಂದು ಒಬ್ಬ ಇತಿಹಾಸಕಾರನು ಹೇಳುತ್ತಾನೆ.
ರಸ್ತೆಗಳ ಒಂದು ಇತಿಹಾಸ ಎಂಬ ಪುಸ್ತಕಕ್ಕನುಸಾರ, ರೋಮಿನಿಂದ ದಕ್ಷಿಣಕ್ಕೆ ಹೋಗುವ ಅಪೀಯನ್ ಮಾರ್ಗವು “ಪಾಶ್ಚಾತ್ಯ ಮಾನವನ ಇತಿಹಾಸದಲ್ಲಿಯೇ ಅತ್ಯಂತ ಉದ್ದವಾದ ರಸ್ತೆಗಳಲ್ಲಿ ಇದೇ ಮೊದಲನೆಯದ್ದಾಗಿದೆ.” ಈ ಪ್ರಖ್ಯಾತ ಹೆದ್ದಾರಿಯು ಅಗಲದಲ್ಲಿ ಸರಾಸರಿ 6 ಮೀಟರುಗಳಾಗಿದ್ದು, ದೊಡ್ಡ ದೊಡ್ಡ ಶಿಲಾಬಂಡೆಗಳಿಂದ ಹಾಸಲ್ಪಟ್ಟಿತ್ತು. ಅಪೊಸ್ತಲ ಪೌಲನು ಒಬ್ಬ ಸೆರೆವಾಸಿಯಾಗಿ ರೋಮಿಗೆ ಹೋಗುವಾಗ, ಅದೇ ರಸ್ತೆಯಲ್ಲಿ ಹಾದುಹೋದನು. ಅವುಗಳಲ್ಲಿ ಕೆಲವನ್ನು ಈಗಲೂ ಉಪಯೋಗಿಸಲಾಗುತ್ತಿದೆ.—ಅ. ಕೃತ್ಯಗಳು 28:15, 16.
ಆದಿ ದಕ್ಷಿಣ ಅಮೆರಿಕದ ಇಂಡಿಯನ್ನರ ರಸ್ತೆ ನಿರ್ಮಾಣದ ಕುಶಲತೆಗಳನ್ನು ಸಹ ಬೆರಗುಗೊಳಿಸುವಂತಹದ್ದಾಗಿ ಅನೇಕರು ಕಂಡುಕೊಳ್ಳುತ್ತಾರೆ. 1200ಗಳಿಂದ 1500ಗಳ ವರೆಗೆ, ಇವರು 16,000 ಕಿಲೊಮೀಟರುಗಳ ರಸ್ತೆಗಳನ್ನು ನಿರ್ಮಿಸಿದರು ಮತ್ತು ಇದು ಹತ್ತಿರ ಹತ್ತಿರ 1,00,00,000ದಷ್ಟು ಜನರ ಒಂದು ರಾಷ್ಟ್ರವನ್ನು ಒಟ್ಟುಗೂಡಿಸಿತು. ಈ ರಸ್ತೆಗಳು, ಮರುಭೂಮಿ, ಮಳೆಗಾಡು, ಪೆರೂವಿನ ಭವ್ಯ ಆ್ಯಂಡೀಸನ್ನೂ ಅಡ್ಡಹಾಯ್ದು, ಅಪಾಯಕರವಾದ ಮತ್ತು ಊಹಿಸಲೂ ಅಸಾಧ್ಯವಾದ ಒಡ್ಡೊಡ್ಡಾದ ಕೆಲವೊಂದು ಭೂಪ್ರದೇಶವನ್ನು ಹಾಯ್ದುಹೋದವು!
ಒಂದು ರಸ್ತೆಯ ಬಗ್ಗೆ, ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ವರದಿಸುವುದು: “ಆ್ಯಂಡೀಸ್ ಮಾರ್ಗವು ತುಂಬ ಅಮೋಘವಾಗಿತ್ತು. ಆ ರಸ್ತೆಮಾರ್ಗವು 7.5 ಮೀಟರುಗಳಷ್ಟು ಅಗಲವಾಗಿದ್ದು, ಎತ್ತರದ ಪರ್ವತ ಪ್ರದೇಶಗಳ ತಿರುವುಮುರುವುಗಳಲ್ಲಿ ಮತ್ತು ಇಳಿಜಾರುಗಳಲ್ಲಿ ಹಾಯ್ದುಹೋಯಿತು. ಕಲ್ಲುಬಂಡೆಯನ್ನು ಒಡೆದು ಕಿರುದಾರಿಗಳನ್ನು ಮಾಡಲಾಯಿತು. ಅಲ್ಲಲ್ಲಿ ದೊಡ್ಡ ಕಮರಿಗಳು ಕಂಡುಬಂದಾಗ ರಸ್ತೆಮಾರ್ಗಕ್ಕೆ ಆಧಾರ ಕೊಡಲು ಕೆಳಗಿನಿಂದ ನೂರಾರು ಅಡಿಗಳ ಗೋಡೆಗಳು ಕಟ್ಟಲ್ಪಟ್ಟವು. ಹಳ್ಳದಿಣ್ಣೆಗಳು ಎದುರಾದಾಗ ಅವುಗಳು ಕಲ್ಲುಗಳಿಂದ ತುಂಬಿಸಲ್ಪಟ್ಟವು ಮತ್ತು ಪರ್ವತದ ಮಧ್ಯೆ ದೊಡ್ಡ ದೊಡ್ಡ ತೊರೆಗಳು ಇದ್ದಾಗ ಉಣ್ಣೆ ಹಾಗೂ ನಾರಿನ ತಂತಿಗಳಿಂದ ತೂಗುಸೇತುವೆಗಳು ಕಟ್ಟಲ್ಪಟ್ಟವು. ಅನೇಕ ಸ್ಥಳಗಳಲ್ಲಿ ಮೇಲ್ಮೈಯು ಕಲ್ಲಿನದ್ದಾಗಿತ್ತು ಮತ್ತು ಕಲ್ಲರಗಿನ ಜಲ್ಲಿಗಳು ತುಂಬ ಉಪಯೋಗಿಸಲ್ಪಟ್ಟವು.”
ಈ ಇಂಡಿಯನ್ನರಿಗೆ ಕುದುರೆಯ ಬಗ್ಗೆ ಗೊತ್ತಿರಲಿಲ್ಲ, ಆದರೆ ಅವರ ರಸ್ತೆಗಳ ನಿರ್ಮಾಣವು “ರಾಜವಂಶದ ದೂತರಿಗಾಗಿ ನಿಜವಾಗಿಯೂ ಓಡುವ ಪಥ”ವನ್ನು ಒದಗಿಸಿತು. ಒಬ್ಬ ಇತಿಹಾಸಕಾರನು ಹೇಳಿದ್ದು: “ಸುಮಾರು 2 ಕಿಲೊಮೀಟರುಗಳ ಅಂತರದಲ್ಲಿ ದಾರಿಯುದ್ದಕ್ಕೂ ವಿಶ್ರಮಿಸಿಕೊಳ್ಳಲು ನಿಲ್ದಾಣಗಳಿದ್ದವು. ಒಂದೊಂದು ನಿಲ್ದಾಣದಲ್ಲಿ ಚಿಕ್ಕ ರಕ್ಷಣಾ ಸೈನ್ಯ ಮತ್ತು ವೃತ್ತಿಪರ ಓಟಗಾರರ ತಂಡವಿತ್ತು. ಇದು ವೇಗವಾಗಿ ಓಡಿ ತಲಪುವಷ್ಟು ಅಂತರದಲ್ಲಿತ್ತು. ಹಗಲೂರಾತ್ರಿ ಕಾರ್ಯಮಾಡುತ್ತಾ, 2,000 ಕಿಲೊಮೀಟರುಗಳಷ್ಟು ದೂರದ ಕೂಸ್ಕೋ ರಾಜಧಾನಿಯಿಂದ ಕೀಟೋ ನಗರಕ್ಕೆ, ಐದು ದಿನಗಳಲ್ಲಿ ಸಂದೇಶವನ್ನು ಒಯ್ಯುತ್ತಿತ್ತು. ಅಷ್ಟುಮಾತ್ರವಲ್ಲದೆ, ಇದು ಸಮುದ್ರ ಮಟ್ಟಕ್ಕಿಂತ 4,000 ಮೀಟರುಗಳಿಗಿಂತಲೂ ಎತ್ತರದಲ್ಲಿತ್ತು. ಅಂದರೆ, ಇದು ಪ್ರತಿ ತಾಸಿಗೆ ಸರಾಸರಿ 15 ಕಿಲೊಮೀಟರುಗಳ ಕ್ರಮಿಸುವಿಕೆಯಾಗಿತ್ತು. ರೋಮನ್ ಸಾಮ್ರಾಜ್ಯದ ಅಂಚೆರವಾನೆ ವ್ಯವಸ್ಥೆಯು ಸಹ ಎಂದೂ ಸಾಧಿಸದಿರುವಂಥ ಒಂದು ವೇಗ!”
ದುರಂತಗಳ ಮೂಲ
ಮಾನವ ದೇಹದ ಅಪಧಮನಿಗಳಲ್ಲಿ ಅಡಚಣೆಗಳಾಗಸಾಧ್ಯವಿದೆ ಮತ್ತು ಇದು ಗಂಭೀರವಾದ ಪರಿಣಾಮಗಳನ್ನು ಉಂಟುಮಾಡಬಲ್ಲದು. ಹಾಗೆಯೇ, ಜೀವಿತದ ಗುಣಮಟ್ಟವನ್ನು ಸುಧಾರಿಸಲು ಸಹಾಯಮಾಡಿರುವ ರಸ್ತೆಗಳು ಸಹ ಅಡಚಣೆಯನ್ನು ತಂದು, ಜೀವಿತದ ಗುಣಮಟ್ಟವನ್ನು ಕಡಿಮೆಮಾಡಸಾಧ್ಯವಿದೆ. ಮಳೆಗಾಡು, ಅರಣ್ಯ, ಪೊದೆ ಮತ್ತು ನ್ಯಾಷನಲ್ ಪಾರ್ಕ್ಗಳ ಮಧ್ಯದಲ್ಲಿರುವ ರಸ್ತೆಗಳು ಅರಣ್ಯಜೀವಿಗಳಿಗೆ ಹಾನಿಯನ್ನು ತರುತ್ತವೆ. ಮತ್ತು ಅನೇಕ ವೇಳೆ ಅಲ್ಲಿನ ಜನರು ಮತ್ತು ಅವರ ಅರಣ್ಯ ಮನೆಗಳು ಸಹ ಬಾಧಿಸಲ್ಪಡುತ್ತವೆ. ನಾವು ರಸ್ತೆಗಳನ್ನು ನಿರ್ಮಾಣಮಾಡುವ ವಿಧ ಎಂಬ ಪುಸ್ತಕವು ಹೇಳುವುದು: “ಟ್ರ್ಯಾನ್ಸ್-ಆ್ಯಮಸೋನಿಯನ್ ಹೆದ್ದಾರಿಯು, ಪ್ರಗತಿಯ ಹೆಸರಿನಲ್ಲಿ ಕೈಗೆತ್ತಿಕ್ಕೊಳ್ಳಲ್ಪಟ್ಟರೂ, ಮಳೆಗಾಡಿನ ಅನೇಕ ಪ್ರದೇಶಗಳನ್ನು ನಾಶಮಾಡಿತು ಮತ್ತು ಅರಣ್ಯದಲ್ಲಿ ವಾಸಿಸುತ್ತಿದ್ದ ಅನೇಕ ಜನರಿಗೆ ಇದು ಒಂದು ವಿಪತ್ತಾಗಿತ್ತು, ಏಕೆಂದರೆ ಇದು ಅವರ ಜೀವಿತವನ್ನೇ ಹಾಳುಮಾಡಿತು.”
ಪಟ್ಟಣದ ಮಾರ್ಗಗಳಲ್ಲಿ ಪ್ರತಿ ವರ್ಷವೂ ಹೆಚ್ಚೆಚ್ಚು ವಾಹನಗಳು ತುಂಬುತ್ತಿರುವುದರಿಂದ ನಗರಗಳು ಕೂಡ ವಿಪರೀತ ಬಾಧಕ ಪರಿಸ್ಥಿತಿಯನ್ನು ಅನುಭವಿಸುತ್ತಿವೆ. ನಿಧಿಗಳು ಸಿಗುವುದಾದರೆ, ಮೋಟಾರುದಾರಿಯನ್ನು ನಿರ್ಮಿಸಲಾಗುತ್ತದೆ. ಆದರೆ ಅನಂತರ ಈ ದಾರಿಗಳು ಹೆಚ್ಚು ಟ್ರ್ಯಾಫಿಕನ್ನು ಉಂಟುಮಾಡುವುದು, ಮತ್ತು ಇದು ಮಾಲಿನ್ಯತೆಯನ್ನು ಹೆಚ್ಚಿಸುತ್ತಾ ಕೋಟ್ಯಂತರ ಜನರನ್ನು ಅಸ್ವಸ್ಥಗೊಳಿಸುತ್ತಿದೆ. ಇನ್ನೂ ಹೆಚ್ಚಾಗಿ, ಸುಮಾರು 5,00,000 ಜನರು ವಾರ್ಷಿಕವಾಗಿ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ. ಅಷ್ಟುಮಾತ್ರವಲ್ಲದೆ ಇನ್ನೂ ಒಂದು ಕೋಟಿ ಇಪ್ಪತ್ತು ಲಕ್ಷ ಜನರು ಗಾಯಗೊಳ್ಳುತ್ತಾರೆ, ಕೆಲವರಂತೂ ತೀರ ಗಂಭೀರ ಸ್ಥಿತಿಯಲ್ಲಿ ಗಾಯಗೊಳ್ಳುತ್ತಾರೆ. ಇದನ್ನು ಹೋಲಿಸುವಾಗ, ನೇ ಲೋಕಯುದ್ಧವು, ರಣರಂಗದಲ್ಲಿದ್ದ ಸುಮಾರು ತೊಂಬತ್ತು ಲಕ್ಷ ಜೀವಗಳನ್ನು ಬಲಿತೆಗೆದುಕೊಂಡಿತು. ಅನಂತರ ಆ ಯುದ್ಧವು ನಿಂತುಹೋಯಿತು. ಆದರೆ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಮರಣವು, ಕಂತಿನಲ್ಲಿ ಸಾಯುವುದಾಗಿರುತ್ತದೆ, ಅಂದರೆ ದಿನವೊಂದಕ್ಕೆ 1,000ಕ್ಕಿಂತಲೂ ಹೆಚ್ಚು ಮರಣಗಳು ಸಂಭವಿಸುತ್ತವೆ, ಮತ್ತು ಇದು ಹೀಗೆಯೇ ದಿನದಿನವೂ ಮುಂದುವರಿಯುತ್ತದೆ.
ಹೌದು, ಅನೇಕ ವಿಧಗಳಲ್ಲಿ ನಮ್ಮ ರಸ್ತೆಗಳು ನಮ್ಮ ಕುರಿತಾಗಿ ತಿಳಿಸುತ್ತವೆ. ನಮ್ಮ ಸಾಮರ್ಥ್ಯ, ನಮ್ಮ ಬಲಹೀನತೆಗಳನ್ನು ತೋರಿಸುತ್ತಾ ನಮ್ಮ ನಡತೆಯನ್ನು ತಿಳಿಯಪಡಿಸುತ್ತವೆ. ನಮ್ಮ ಪರಾಮರಿಕೆಗೆ ನೀಡಲ್ಪಟ್ಟಿರುವ ಈ ಭವ್ಯ ಗ್ರಹವನ್ನು ನಾವು ಹೇಗೆ ವೀಕ್ಷಿಸುತ್ತೇವೆ ಎಂಬುದನ್ನು ಸಹ ಅವುಗಳು ತಿಳಿಸುತ್ತವೆ.
[ಪುಟ 36 ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನು ಹಾದುಹೋದ ಅಪೀಯನ್ ಮಾರ್ಗವನ್ನು ಈಗಲೂ ಉಪಯೋಗಿಸಲಾಗುತ್ತಿದೆ
[ಪುಟ 37 ರಲ್ಲಿರುವ ಚಿತ್ರ]
ಪ್ರತಿ ವರ್ಷ ಸುಮಾರು 5,00,000 ಜನರು ಲೋಕದಾದ್ಯಂತ ರಸ್ತೆ ಅಪಘಾತಗಳಲ್ಲಿ ಸಾಯುತ್ತಾರೆ