ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 7/06 ಪು. 24-27
  • ರೇಷ್ಮೆ “ನೂಲುಗಳ ರಾಣಿ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರೇಷ್ಮೆ “ನೂಲುಗಳ ರಾಣಿ”
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರೇಷ್ಮೆಯ ಗುಟ್ಟು
  • ಮೌನ ನೇಕಾರರು
  • ರೇಷ್ಮೆಬಟ್ಟೆಯನ್ನು ಮಾಡಲಾಗುವ ವಿಧ
  • ಜೇಡ-ರೇಷ್ಮೆ
    ಎಚ್ಚರ!—2008
  • ಪ್ರಕೃತಿಯಲ್ಲಿರುವ ವಿನ್ಯಾಸಗಳಿಂದ ಕಲಿತುಕೊಳ್ಳುವುದು
    ಎಚ್ಚರ!—2000
  • ರಸ್ತೆಗಳು—ನಾಗರಿಕತೆಯ ಅಪಧಮನಿಗಳು
    ಎಚ್ಚರ!—1999
  • ವಿಕಾಸವಾದ ತರ್ಕಬದ್ಧವಾಗಿದೆಯೇ?
    ಎಚ್ಚರ!—2000
ಇನ್ನಷ್ಟು
ಎಚ್ಚರ!—2006
g 7/06 ಪು. 24-27

ರೇಷ್ಮೆ “ನೂಲುಗಳ ರಾಣಿ”

ಜಪಾನ್‌ನ ಎಚ್ಚರ! ಲೇಖಕರಿಂದ

ಜಗತ್ತಿನ ಅತ್ಯಂತ ಸೊಗಸಾದ ಕೆಲವು ಉಡುಪುಗಳು, ಅಂದರೆ ಜಪಾನಿನ ಕಿಮೋನೊ, ಭಾರತದ ಸೀರೆ, ಕೊರಿಯದ ಹಾನ್‌ಬಾಕ್‌​—⁠ಇವುಗಳನ್ನು ಸಾಮಾನ್ಯವಾಗಿ ಒಂದೇ ರೀತಿಯ ಬಟ್ಟೆಯಿಂದ ತಯಾರಿಸಲಾಗುತ್ತದೆ. ಅದು ಅನೇಕವೇಳೆ, ನೂಲುಗಳ ರಾಣಿಯೆಂದು ಕರೆಯಲ್ಪಡುವ ಹೊಳಪುಳ್ಳ ಬಟ್ಟೆಯಾದ ರೇಷ್ಮೆಯಿಂದ ಮಾಡಲಾಗುತ್ತದೆ. ಪೂರ್ವದ ರಾಜ ಮನೆತನದಿಂದ ಹಿಡಿದು ಇಂದಿನ ಜನಸಾಮಾನ್ಯರ ವರೆಗೆ ಲೋಕದ ಎಲ್ಲೆಡೆಯೂ ಜನರು ರೇಷ್ಮೆಯ ಸೊಗಸಿಗೆ ಮಾರುಹೋಗಿದ್ದಾರೆ. ಆದರೆ ರೇಷ್ಮೆಯು ಯಾವಾಗಲೂ ಇಷ್ಟು ವ್ಯಾಪಕವಾಗಿ ಸಿಗುತ್ತಿರಲಿಲ್ಲ.

ಹಿಂದಿನ ಕಾಲಗಳಲ್ಲಿ, ರೇಷ್ಮೆಯನ್ನು ಕೇವಲ ಚೀನಾ ದೇಶದಲ್ಲಿ ಮಾತ್ರ ಉತ್ಪಾದಿಸಲಾಗುತ್ತಿತ್ತು. ಅದನ್ನು ಉತ್ಪಾದಿಸುವುದು ಹೇಗೆಂದು ಬೇರೆ ಯಾರಿಗೂ ತಿಳಿದಿರಲಿಲ್ಲ. ಮತ್ತು ಚೀನಾದಲ್ಲಿ ಯಾವನಾದರೂ ರೇಷ್ಮೆಹುಳುವಿನ ರಹಸ್ಯವನ್ನು ಹೊರಗೆಡಹುವಲ್ಲಿ ಅವನನ್ನು ದೇಶದ್ರೋಹಿಯಾಗಿ ವಧಿಸುವ ಸಾಧ್ಯತೆಯಿತ್ತು. ರೇಷ್ಮೆ ತಯಾರಿಯಲ್ಲಿ ಚೀನಾಕ್ಕಿದ್ದ ಈ ಏಕಸ್ವಾಮ್ಯದಿಂದಾಗಿ ರೇಷ್ಮೆಯು ತೀರ ದುಬಾರಿಯಾಗಿದುದು ಆಶ್ಚರ್ಯಕರವಲ್ಲ. ಉದಾಹರಣೆಗೆ, ರೋಮನ್‌ ಸಾಮ್ರಾಜ್ಯದಲ್ಲೆಲ್ಲ ರೇಷ್ಮೆ ಬಹಳ ಬೆಲೆಬಾಳುವಂಥದ್ದಾಗಿತ್ತು.

ಸಮಯಾನಂತರ, ಚೀನಾದಿಂದ ಬರುತ್ತಿದ್ದ ರೇಷ್ಮೆಯನ್ನೆಲ್ಲ ಪರ್ಶಿಯ ದೇಶವು ನಿಯಂತ್ರಿಸಿತು. ಆದರೆ ಬೆಲೆ ಆಗಲೂ ದುಬಾರಿಯಾಗಿತ್ತು ಮತ್ತು ಪರ್ಶಿಯದ ವ್ಯಾಪಾರಿಗಳಿಂದ ತಪ್ಪಿಸಿಕೊಂಡು ಕೊಂಡೊಯ್ಯಲು ಮಾಡಲ್ಪಟ್ಟ ಪ್ರಯತ್ನಗಳು ನಿರರ್ಥಕವಾಗಿದ್ದವು. ಆಗ, ಬಸ್ಯಾಂಟಿಯನ್‌ ಚಕ್ರವರ್ತಿ ಜಸ್ಟಿನೀಯನ್‌ ಒಂದು ಸಂಚನ್ನು ಹೂಡಿದನು. ಸುಮಾರು ಸಾ.ಶ. 550ರಲ್ಲಿ, ಅವನು ಇಬ್ಬರು ಕ್ರೈಸ್ತ ಸಂನ್ಯಾಸಿಗಳನ್ನು ಒಂದು ಗುಪ್ತ ಉದ್ದೇಶಕ್ಕಾಗಿ ಚೀನಾಕ್ಕೆ ಕಳುಹಿಸಿದನು. ಎರಡು ವರ್ಷಗಳ ಬಳಿಕ ಅವರು ಹಿಂದಿರುಗಿ ಬಂದರು. ಅವರ ಬಿದಿರಿನ ಊರುಗೋಲುಗಳಲ್ಲಿ, ದೀರ್ಘಕಾಲದಿಂದ ಎದುರುನೋಡಲಾಗಿದ್ದ ನಿಧಿಯಾದ ರೇಷ್ಮೆಹುಳುವಿನ ಮೊಟ್ಟೆಗಳಿದ್ದವು. ಆಗ ರೇಷ್ಮೆಯ ಗುಟ್ಟು ರಟ್ಟಾಯಿತು. ಹೀಗೆ ರೇಷ್ಮೆಯ ಏಕಸ್ವಾಮ್ಯವು ಕೊನೆಗೊಂಡಿತು.

ರೇಷ್ಮೆಯ ಗುಟ್ಟು

ರೇಷ್ಮೆಹುಳುಗಳು, ಅಂದರೆ ರೇಷ್ಮೆಹುಳು ಕೀಟದ ಮರಿಗಳು ರೇಷ್ಮೆಯನ್ನು ಉತ್ಪಾದಿಸುತ್ತವೆ. ನೂರಾರು ಬಗೆಯ ರೇಷ್ಮೆಹುಳುಗಳಿರುವುದಾದರೂ ಶ್ರೇಷ್ಠ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸುವ ಹುಳುವಿನ ವೈಜ್ಞಾನಿಕ ಹೆಸರು ಬಾಂಬಿಕ್ಸ್‌ ಮೋರಿ ಎಂದಾಗಿದೆ. ರೇಷ್ಮೆ ಬಟ್ಟೆಯನ್ನು ತಯಾರಿಸಲು ತುಂಬ ರೇಷ್ಮೆಹುಳುಗಳು ಅಗತ್ಯ. ಇದು ರೇಷ್ಮೆಗಾರಿಕೆ (ಸೆರಿಕಲ್ಚರ್‌), ರೇಷ್ಮೆಹುಳುಗಳ ಸಾಕಣೆಯ ವಿಕಾಸಕ್ಕೆ ನಡೆಸಿದೆ. ಜಪಾನ್‌ನ ಗುಮ್ಮಾ ಜಿಲ್ಲೆಯಲ್ಲಿ ವಾಸಿಸುತ್ತಿರುವ ಷೋಯೀಚೀ ಕಾವಾಹಾರಾಡಾ ಕುಟುಂಬವು ಈ ದೇಶದಲ್ಲಿ ಇನ್ನೂ ಈ ಶ್ರಮಭರಿತ ಕೆಲಸದಲ್ಲಿ ತೊಡಗಿರುವ ಸುಮಾರು 2,000 ಮನೆತನಗಳಲ್ಲಿ ಒಂದಾಗಿದೆ. ರೇಷ್ಮೆ ಸಾಕಣೆಗೆ ತಕ್ಕದಾಗಿ ಕಟ್ಟಲ್ಪಟ್ಟಿರುವ ಅವರ ಎರಡು ಮಾಳಿಗೆಗಳ ಮನೆಯು, ಉಪ್ಪುನೇರಳೆ (ಮಲ್ಬೆರಿ) ಮರಗಳ ತೋಟದ ದೃಶ್ಯವು ಕಾಣುವ ಒಂದು ಬೆಟ್ಟದ ಮಗ್ಗುಲಲ್ಲಿದೆ (1).

ಹೆಣ್ಣು ರೇಷ್ಮೆಹುಳು ಸೂಜಿತಲೆ ಗಾತ್ರದ ಸುಮಾರು 500 ಮೊಟ್ಟೆಗಳನ್ನು ಇಡುತ್ತದೆ (2). ಸುಮಾರು 20 ದಿನಗಳ ಬಳಿಕ ಆ ಮೊಟ್ಟೆಗಳು ಒಡೆಯುತ್ತವೆ. ಆ ಚಿಕ್ಕ ಮರಿಗಳ ಹಸಿವು ತಣಿಸಲಾಗದಂಥದ್ದು. ಅವು ರಾತ್ರಿಹಗಲೂ ಬರೀ ಉಪ್ಪುನೇರಳೆ ಎಲೆಗಳನ್ನು ಮಾತ್ರ ತಿನ್ನುತ್ತಿರುತ್ತವೆ (3, 4). ಮತ್ತು ಕೇವಲ 18 ದಿನಗಳಲ್ಲಿ, ಈ ಹುಳುಗಳು ತಮ್ಮ ಆರಂಭದ ಗಾತ್ರಕ್ಕಿಂತ 70 ಪಟ್ಟು ದೊಡ್ಡದಾಗಿ ಬೆಳೆದು, ಆ ಅವಧಿಯೊಳಗೆ ನಾಲ್ಕು ಬಾರಿ ತಮ್ಮ ಚರ್ಮವನ್ನು ಕಳಚಿಹಾಕಿರುತ್ತವೆ.

ಶ್ರೀ. ಕಾಮಾಹಾರಾಡಾರ ಫಾರ್ಮ್‌ನಲ್ಲಿ ಸುಮಾರು 1,20,000 ರೇಷ್ಮೆಹುಳುಗಳನ್ನು ಬೆಳೆಸಲಾಗುತ್ತದೆ. ಅವುಗಳು ಎಲೆಗಳನ್ನು ತಿನ್ನುವಾಗ ಕೇಳಿಬರುವ ಸದ್ದು, ಎಲೆಗಳ ಮೇಲೆ ದೊಡ್ಡ ಮಳೆಹನಿಗಳು ಬೀಳುವ ಸದ್ದಿನಂತೆ ಇರುತ್ತದೆ. ಒಂದು ರೇಷ್ಮೆಹುಳು ಬೆಳೆದಾಗ, ಅದರ ತೂಕವು ಅದರ ಆರಂಭದ ತೂಕಕ್ಕಿಂತ 10,000 ಪಾಲು ಹೆಚ್ಚಾಗಿರುತ್ತದೆ! ಈಗ ಅದು ರೇಷ್ಮೆಗೂಡು ಹೆಣೆದುಕೊಳ್ಳಲು ಸಿದ್ಧವಾಗಿರುತ್ತದೆ.

ಮೌನ ನೇಕಾರರು

ರೇಷ್ಮೆಹುಳುವಿನ ದೇಹವು ಪೂರ್ಣ ಬೆಳೆದು ಪಾರದರ್ಶಕವಾಗಿ ಮಾರ್ಪಟ್ಟಾಗ ಹೆಣಿಕೆಯ ಸಮಯ ಆರಂಭವಾಯಿತೆಂದು ತೋರಿಸುತ್ತದೆ. ರೇಷ್ಮೆಹುಳುಗಳು ಚಡಪಡಿಸಲಾರಂಭಿಸಿ, ತಮ್ಮ ಗೂಡುಗಳನ್ನು ಹೆಣೆಯಲು ಸ್ಥಳವನ್ನು ಹುಡುಕಲಾರಂಭಿಸುವಾಗ, ಅನೇಕ ಚಚ್ಚೌಕದ ರಂಧ್ರಗಳಂಥ ಅಂಕಣಗಳಿರುವ ದೊಡ್ಡ ಪೆಟ್ಟಿಗೆಯಲ್ಲಿ ಇಡಲ್ಪಡಲು ಅವು ಸಿದ್ಧವಾಗಿರುತ್ತವೆ. ಅಲ್ಲಿ ಅವು ತಮ್ಮ ಸೂಕ್ಷ್ಮ ಬಿಳಿ ದಾರವನ್ನು ವಿಸರ್ಜಿಸುತ್ತಾ, (5), ರೇಷ್ಮೆಯಲ್ಲಿ ತಮ್ಮನ್ನು ಸುತ್ತುವರಿಸುತ್ತವೆ.

ಇದು ಶ್ರೀ. ಕಾವಾಹಾರಾಡಾರಿಗೆ ಅತಿ ಹೆಚ್ಚು ಕೆಲಸದ ಸಮಯ. ಏಕೆಂದರೆ 1,20,000 ರೇಷ್ಮೆಹುಳುಗಳೂ ಹೆಚ್ಚುಕಡಮೆ ಒಂದೇ ಸಮಯದಲ್ಲಿ ತಮ್ಮ ರೇಷ್ಮೆಯನ್ನು ಹೆಣೆಯಲಾರಂಭಿಸುತ್ತವೆ. ಅವರ ಮನೆಯ ಎರಡನೆಯ ಮಾಳಿಗೆಯ ತಂಪಾದ, ಗಾಳಿಕಂಡಿಗಳಿರುವ ಕೋಣೆಯಲ್ಲಿ ಆ ಪೆಟ್ಟಿಗೆಗಳು ಸಾಲುಸಾಲಾಗಿ ನೇತುಹಾಕಲ್ಪಟ್ಟಿರುತ್ತವೆ (6).

ಈಮಧ್ಯೆ, ರೇಷ್ಮೆಹುಳುವಿನೊಳಗೆ ಒಂದು ಬೆರಗಾಗಿಸುವ ಬದಲಾವಣೆ ಸಂಭವಿಸುತ್ತಿರುತ್ತದೆ. ಜೀರ್ಣಿಸಲ್ಪಟ್ಟಿರುವ ಉಪ್ಪುನೇರಳೆ ಎಲೆಗಳು ಫೈಬ್ರಾಯ್ನ್‌ ಆಗಿ, ಅಂದರೆ ಮರಿಹುಳುವಿನ ಉದ್ದಕ್ಕೂ ಇರುವ ಒಂದು ಜೊತೆ ಗ್ರಂಥಿಗಳಲ್ಲಿ ಒಂದು ರೀತಿಯ ಪ್ರೋಟೀನ್‌ ಆಗಿ ಮಾರ್ಪಟ್ಟಿರುತ್ತವೆ. ಈ ಫೈಬ್ರಾಯ್ನ್‌, ಗ್ರಂಥಿಗಳ ಮೂಲಕ ಹಾದುಹೋಗುವಾಗ ಅವಕ್ಕೆ ಸೆರಿಸಿನ್‌ ಎಂದು ಕರೆಯಲ್ಪಡುವ ಅಂಟು ಪದಾರ್ಥ ಲೇಪಿತವಾಗುತ್ತದೆ. ಆ ಹುಳುವಿನ ಬಾಯಲ್ಲಿರುವ ಸ್ಪಿನರೆಟ್‌ ಎಂಬ ಅವಯವದಿಂದ ಹೊರಬರುವ ಮೊದಲು ಆ ಎರಡು ಫೈಬ್ರಾಯ್ನ್‌ ನಾರುಗಳು ಸೆರಿಸಿನ್‌ನಿಂದ ಅಂಟಿಸಲ್ಪಡುತ್ತವೆ. ಹೊರಗೆ ಬರುತ್ತಾ ಅವು ಗಾಳಿಗೆ ಒಡ್ಡಲ್ಪಟ್ಟಾಗ, ಈ ದ್ರವರೂಪದ ರೇಷ್ಮೆಯು ಒಂದು ಎಳೆಯಾಗಿ ಗಟ್ಟಿಯಾಗುತ್ತದೆ.

ಈ ಹುಳು ಒಮ್ಮೆ ರೇಷ್ಮೆಯನ್ನು ಉತ್ಪಾದಿಸಲು ತೊಡಗಿತೆಂದರೆ, ಆ ದ್ರವ ಮುಗಿದುಹೋಗುವ ವರೆಗೆ ಅದನ್ನು ನಿಲ್ಲಿಸುವಂತಿಲ್ಲ. ಒಂದು ನಿಮಿಷಕ್ಕೆ 30ರಿಂದ 40 ಸೆಂಟಿಮೀಟರ್‌ ವೇಗದಲ್ಲಿ ರೇಷ್ಮೆ ದ್ರವವನ್ನು ಹೊಸೆಯುತ್ತಾ ಆ ಹುಳು ತನ್ನ ತಲೆಯನ್ನು ಓಲಾಡಿಸುತ್ತಿರುತ್ತದೆ. ಒಂದು ಲೇಖನ ಅಂದಾಜು ಮಾಡುವಂತೆ, ತನ್ನ ಗೂಡನ್ನು ಮುಗಿಸುವುದರೊಳಗೆ ಆ ಹುಳು ತನ್ನ ತಲೆಯನ್ನು ಒಂದೂವರೆ ಲಕ್ಷ ಬಾರಿ ಓಲಾಡಿಸಿರುತ್ತದೆ. ಹೀಗೆ ಎರಡು ದಿನ ಹಗಲೂರಾತ್ರಿ ಗಿರಕಿಹೊಡೆದ ಮೇಲೆ, ಆ ರೇಷ್ಮೆಹುಳು 1,500 ಮೀಟರ್‌ಗಳಷ್ಟು ಉದ್ದದ ಒಂದು ಎಳೆಯನ್ನು ಉತ್ಪಾದಿಸುತ್ತದೆ. ಇದು ಒಂದು ಎತ್ತರದ ಗಗನಚುಂಬಿ ಕಟ್ಟಡದ ಸುಮಾರು ನಾಲ್ಕು ಪಟ್ಟು ಉದ್ದವಾಗಿರುತ್ತದೆ!

ಒಂದೇ ವಾರದಲ್ಲಿ, ಶ್ರೀ. ಕಾವಾಹಾರಾಡಾ 1,20,000 ರೇಷ್ಮೆಗೂಡುಗಳನ್ನು ಒಟ್ಟುಗೂಡಿಸಿರುವರು. ಆ ಬಳಿಕ ಇದನ್ನು ಸಂಸ್ಕರಿಸಲಿಕ್ಕಾಗಿ ಕಳುಹಿಸಲಾಗುತ್ತದೆ. ಜಪಾನಿನ ಒಂದು ಕಿಮೋನೋ ಉಡುಪನ್ನು ತಯಾರಿಸಲು 9,000 ರೇಷ್ಮೆಗೂಡುಗಳು, ಒಂದು ನೆಕ್‌ಟೈ ಮಾಡಲು 140 ಗೂಡುಗಳು, ಮತ್ತು ರೇಷ್ಮೆಯ ಕಂಠವಸ್ತ್ರವನ್ನು ತಯಾರಿಸಲು 100ಕ್ಕೂ ಹೆಚ್ಚು ಗೂಡುಗಳ ಅಗತ್ಯಬೀಳುತ್ತದೆ!

ರೇಷ್ಮೆಬಟ್ಟೆಯನ್ನು ಮಾಡಲಾಗುವ ವಿಧ

ಒಂದು ಗೂಡಿನಿಂದ ರೇಷ್ಮೆಯನ್ನು ಬಿಚ್ಚಿ ರಾಟೆಗೆ ಸುತ್ತುವುದಕ್ಕೆ ರೀಲಿಂಗ್‌ ಎಂದು ಕರೆಯಲಾಗುತ್ತದೆ. ಹಾಗಾದರೆ ಈ ರೇಷ್ಮೆಯನ್ನು ಉರುಳೆಗೆ ಸುತ್ತುವುದು ಹೇಗೆ ಆರಂಭಗೊಂಡಿತು? ಇದರ ಬಗ್ಗೆ ಅನೇಕ ಮಿಥ್ಯೆಗಳು ಮತ್ತು ಕಾಲ್ಪನಿಕ ಕಥೆಗಳಿವೆ. ಒಂದು ಕಥೆ ಹೀಗಿದೆ: ಚೀನಾ ದೇಶದ ಚಕ್ರವರ್ತಿನಿ ಷೀ ಲಿಂಗ್‌ಷೀ, ತನ್ನ ಚಹಾ ಕಪ್ಪಿನೊಳಗೆ ಉಪ್ಪುನೇರಳೆ ಮರದಿಂದ ಒಂದು ರೇಷ್ಮೆಗೂಡು ಬಿದ್ದಿರುವುದನ್ನು ನೋಡಿದಳು. ಅದನ್ನು ತೆಗೆಯುತ್ತಿದ್ದಾಗ, ಅದರೊಂದಿಗೆ ನುಣುಪಾದ ರೇಷ್ಮೆದಾರ ಬರುವುದನ್ನು ಆಕೆ ನೋಡಿದಳು. ಇದರಿಂದ ಉರುಳೆ ಸುತ್ತುವುದು ಆರಂಭವಾಯಿತಂತೆ. ಇಂದು ಇದನ್ನು ಯಂತ್ರಗಳು ಸುತ್ತುತ್ತವೆ.

ರೇಷ್ಮೆಗೂಡುಗಳಿಗೆ ಬೆಲೆಬರಬೇಕಾದರೆ ಅವುಗಳ ಒಳಗಿರುವ ಗೂಡುಹುಳುಗಳು (ಪ್ಯೂಪ) ಮೊಟ್ಟೆಯೊಡೆದು ಹೊರಬರುವ ಮೊದಲು ಕೊಲ್ಲಲ್ಪಡಬೇಕು. ಈ ವಿಕಾರವಾದ ಕೆಲಸವನ್ನು ಮಾಡಲು ಶಾಖವನ್ನು ಬಳಸಲಾಗುತ್ತದೆ. ದೋಷವುಳ್ಳ ಗೂಡುಗಳನ್ನು ಪ್ರತ್ಯೇಕಿಸಿ, ಉಳಿದದ್ದು ಸಂಸ್ಕರಣೆಗೆ ಸಿದ್ಧವಾಗಿರುತ್ತದೆ. ಪ್ರಥಮವಾಗಿ, ಎಳೆಗಳನ್ನು ಸಡಿಲಿಸಲು ಗೂಡುಗಳನ್ನು ಬಿಸಿನೀರಲ್ಲಿ ಹಾಕಲಾಗುತ್ತದೆ ಇಲ್ಲವೆ ಅವನ್ನು ಆವಿಯಲ್ಲಿ ಹಾಯಿಸಲಾಗುತ್ತದೆ. ಬಳಿಕ, ಎಳೆಯ ತುದಿಯನ್ನು ತಿರುಗುಬ್ರಷ್‌ಗಳು ಹಿಡಿಯುತ್ತವೆ (7). ಬೇಕಾಗಿರುವ ದಪ್ಪದ ಮೇಲೆ ಹೊಂದಿಕೊಂಡು, ಎರಡು ಅಥವಾ ಮೂರು ಗೂಡುಗಳ ಎಳೆಗಳನ್ನು ಒಂದೇ ದಾರವಾಗಿ ಸಂಯೋಜಿಸಬಹುದು. ಆ ದಾರವು ರಾಟೆಗೆ ಸುತ್ತಲ್ಪಡುವಾಗ ಒಣಗಿಸಲ್ಪಡುತ್ತದೆ. ಬಳಿಕ ಆ ಹಸಿ ರೇಷ್ಮೆಯನ್ನು ಪುನಃ ಒಂದು ದೊಡ್ಡ ರಾಟೆಗೆ ಸುತ್ತಲಾಗುತ್ತದೆ. ಇದು ಅಪೇಕ್ಷಿತ ಉದ್ದ ಮತ್ತು ಭಾರವುಳ್ಳ ಲಡಿ (ಸ್ಕೇನ್‌)ಯನ್ನು ಉಂಟುಮಾಡುತ್ತದೆ (8, 9).

ರೇಷ್ಮೆ ಬಟ್ಟೆಯು ನಯವಾಗಿಯೂ ನಮ್ಯವಾಗಿಯೂ ಇರುವುದರಿಂದ ಅದನ್ನು ನೀವು ಬಹುಮಟ್ಟಿಗೆ ನಿಮ್ಮ ಕೆನ್ನೆಗೆ ಒತ್ತಿಕೊಳ್ಳಲು ಬಯಸಿರಬಹುದು. ಅದರ ಈ ವಿಶಿಷ್ಟ ರಚನೆಗೆ ಕಾರಣವೇನು? ಇದಕ್ಕಿರುವ ಒಂದು ಕಾರಣವು ಫೈಬ್ರಾಯ್ನ್‌ ಮೇಲೆ ಲೇಪಿತವಾಗಿರುವ ಸೆರಿಸಿನ್‌ ಅಂಟಿನ ತೊಲಗಿಸುವಿಕೆಯೇ. ಅಂಟು ತೆಗೆಯದಿರುವ ರೇಷ್ಮೆ ನಯವಾಗಿರುವುದಿಲ್ಲ ಮತ್ತು ಅದಕ್ಕೆ ರಂಗು ಕೊಡುವುದು ಕಷ್ಟಕರ. ಷಿಫಾನ್‌ ಬಟ್ಟೆ ನಯವಾಗಿಲ್ಲದಿರುವುದಕ್ಕೆ ಕಾರಣ ಅದರಲ್ಲಿ ಸ್ವಲ್ಪ ಸೆರಿಸಿನ್‌ ಇನ್ನೂ ಉಳಿದಿರುವದರಿಂದಲೇ.

ರೇಷ್ಮೆಯ ನಯವಾದ ರಚನೆಗೆ ಇನ್ನೊಂದು ಕಾರಣವು ಆ ನೂಲು ಎಷ್ಟರ ಮಟ್ಟಿಗೆ ತಿರುಚಿದ ಸ್ಥಿತಿಗೆ ಒಳಗಾಗುತ್ತದೆ ಎಂಬುದೇ. ಜಪಾನಿನ ಹಾಬುಟಾಏ ಬಟ್ಟೆಯು ಮುಟ್ಟಿನೋಡಲು ನಯನಾಜೂಕಾಗಿರುತ್ತದೆ. ಏಕೆಂದರೆ ಅದರಲ್ಲಿ ಹೊಸೆತ ಕಡಮೆ, ಅಥವಾ ತಿರುಚೇ ಇಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಕ್ರೇಪ್‌ ಬಟ್ಟೆ ಸುಕ್ಕುಸುಕ್ಕಾಗಿರುತ್ತದೆ. ಅದು ಬಲವಾಗಿ ತಿರುಚಲ್ಪಟ್ಟಿರುತ್ತದೆ.

ರಂಗು ಹಾಕುವುದು ಇನ್ನೊಂದು ಪ್ರಮುಖ ಕಾರ್ಯವಿಧಾನ. ರೇಷ್ಮೆಗೆ ರಂಗುಹಾಕುವುದು ಸುಲಭ. ಫೈಬ್ರಾಯ್ನ್‌ನ ರಚನೆಯಿಂದಾಗಿ ರಂಗು ಆಳವಾಗಿ ತೂರಿ ಹೋಗುವುದರಿಂದ ಮಾಸಿಹೋಗದ ಉತ್ತಮ ಬಣ್ಣವಾಗಿ ಪರಿಣಮಿಸುತ್ತದೆ. ಇದಲ್ಲದೆ, ಮಾನವನಿರ್ಮಿತ ನೂಲಿಗೆ ವ್ಯತಿರಿಕ್ತವಾಗಿ, ರೇಷ್ಮೆಯಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಯಾನ್‌ಗಳಿವೆ, ಅಂದರೆ ಅದಕ್ಕೆ ಯಾವುದೇ ರಂಗನ್ನು ಸೇರಿಸುವಲ್ಲಿ ಫಲಿತಾಂಶವು ಉತ್ತಮವಾಗಿರುತ್ತದೆ. ಯಂತ್ರದಲ್ಲಿ ನೇಯುವ ಮೊದಲೇ ಅಂದರೆ ರೇಷ್ಮೆಯು ನೂಲಾಗಿರುವಾಗಲೇ ರಂಗು ಹಾಕಸಾಧ್ಯವಿದೆ, (10) ಅಥವಾ ನೆಯ್ದ ಬಳಿಕವೂ ಬಟ್ಟೆಗೆ ರಂಗುಹಾಕಸಾಧ್ಯವಿದೆ. ಕಿಮೋನೋಗಳಿಗೆ ಪ್ರಸಿದ್ಧವಾದ ಯೂಸೆನ್‌ ವಿಧಾನದಲ್ಲಿ ರಂಗುಹಾಕುವಾಗ, ರೇಷ್ಮೆ ಹೆಣೆಯಲ್ಪಟ್ಟ ಬಳಿಕ ಬಟ್ಟೆಯ ಮೇಲೆ ಸುಂದರವಾದ ಕಲಾಕೃತಿಗಳನ್ನು ರೇಖಿಸಿ, ಅದಕ್ಕೆ ಕೈಯಿಂದಲೇ ರಂಗುಹಾಕಲಾಗುತ್ತದೆ.

ಈಗ ಹೆಚ್ಚಿನ ರೇಷ್ಮೆ ಉತ್ಪಾದನೆಯು ಚೀನಾ ಮತ್ತು ಭಾರತದಂತಹ ದೇಶಗಳಲ್ಲಿ ಮಾಡಲ್ಪಡುತ್ತದಾದರೂ, ಫ್ರಾನ್ಸ್‌ನ ಓಟ್‌ ಕೂಟ್ಯಿಅರ್‌ (ಫ್ಯಾಷನ್‌ ವಿನ್ಯಾಸಕರು) ಮತ್ತು ಇಟೆಲಿಯ ಫ್ಯಾಷನ್‌ ವಿನ್ಯಾಸಕರು ಲೋಕದಲ್ಲಿ ರೇಷ್ಮೆ ವಿನ್ಯಾಸಗಳನ್ನು ಮಾಡುವುದರಲ್ಲಿ ಈಗಲೂ ಪ್ರಮುಖರಾಗಿದ್ದಾರೆ. ಇಂದು, ರೇಆನ್‌ ಮತ್ತು ನೈಲಾನ್‌ನಂತಹ ಕೃತಕನೂಲುಗಳು ಅನೇಕ ಅಲ್ಪವ್ಯಯದ ಬಟ್ಟೆಗಳನ್ನು ಉಡುಪಿನ ಮಾರುಕಟ್ಟೆಗೆ ಒದಗಿಸುತ್ತದೆಂಬುದು ನಿಜವಾದರೂ, ಇನ್ನೂ ರೇಷ್ಮೆಬಟ್ಟೆಗೆ ಸರಿಸಮಾನವಾಗಿರುವ ಬಟ್ಟೆಯು ಇರುವುದಿಲ್ಲ. ಜಪಾನಿನ ಯೋಕೋಹಾಮಾದ ಸಿಲ್ಕ್‌ ಮ್ಯೂಸಿಯಮ್‌ನ ಆಡಳಿತಗಾರನು ಹೇಳುವುದು: “ವಿಜ್ಞಾನದ ಆಧುನಿಕ ಪ್ರಗತಿಯ ಹೊರತೂ ರೇಷ್ಮೆಯನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗುವುದಿಲ್ಲ. ಅದರ ಆಣ್ವಿಕತೆಯ ಸೂತ್ರದಿಂದ ಹಿಡಿದು ಅದರ ರಚನೆಯ ವಿಷಯದಲ್ಲಿ ನಮಗೆ ಸಕಲವೂ ತಿಳಿದದೆಯಾದರೂ ನಮಗೆ ಅದನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಇದನ್ನೇ ನಾನು ರೇಷ್ಮೆಯ ಗುಟ್ಟೆಂದು ಹೇಳುತ್ತೇನೆ.” (g 6/06)

[ಪುಟ 26ರಲ್ಲಿರುವ ಚೌಕ/ಚಿತ್ರ]

ರೇಷ್ಮೆಯ ಗುಣಲಕ್ಷಣಗಳು

ಗಡುಸು: ರೇಷ್ಮೆಯ ಒಂದು ಎಳೆಯು ಸಮಾನಗಾತ್ರದ ಉಕ್ಕಿನ ಎಳೆಯಷ್ಟೇ ಗಡುಸಾಗಿದೆ.

ಹೊಳಪು: ಮುತ್ತಿಗಿರುವ ಸೊಗಸಾದ ಹೊಳಪು ರೇಷ್ಮೆಗೂ ಇದೆ. ಈ ಹೊಳಪಿಗೆ ಕಾರಣ, ಬೆಳಕನ್ನು ಚೆದರಿಸುವ ಫೈಬ್ರಾಯ್ನ್‌ನ ಬಹುಪದರಗಳಿರುವ ಅಶ್ರಗಸದೃಶ ರಚನೆಯೇ.

ಚರ್ಮಕ್ಕೆ ಮೃದು: ರೇಷ್ಮೆಯಲ್ಲಿರುವ ಅಮೀನೋ ಆ್ಯಸಿಡ್‌ಗಳು ಚರ್ಮಕ್ಕೆ ಮೃದುವಾಗಿವೆ. ರೇಷ್ಮೆಯು ಚರ್ಮಸಂಬಂಧಿತ ರೋಗಗಳನ್ನು ತಡೆಯುತ್ತದೆಂದು ಹೇಳಲಾಗುತ್ತದೆ. ಕೆಲವು ಪ್ರಸಾಧನ ವಸ್ತುಗಳನ್ನು ರೇಷ್ಮೆ ಪುಡಿಯಿಂದ ತಯಾರಿಸಲಾಗುತ್ತದೆ.

ತೇವ ಚೂಷಕ: ಅಮೀನೋ ಆ್ಯಸಿಡ್‌ಗಳು ಮತ್ತು ಸಿಲ್ಕ್‌ ನೂಲಿನಲ್ಲಿರುವ ಚಿಕ್ಕ ಶೂನ್ಯಎಡೆಗಳು ಗಣನೀಯ ಪ್ರಮಾಣದಲ್ಲಿ ಬೆವರನ್ನು ಹೀರಿಕೊಂಡು ಬೇಸಗೆಯಲ್ಲಿ ನಿಮ್ಮನ್ನು ಶುಷ್ಕವಾಗಿಯೂ ತಣ್ಣಗಾಗಿಯೂ ಇಡುತ್ತವೆ.

ಶಾಖ ನಿರೋಧಕ: ರೇಷ್ಮೆಯು ಬೇಗನೆ ಸುಡುವುದಿಲ್ಲ ಮತ್ತು ಒಂದು ವೇಳೆ ಬೆಂಕಿ ತಗುಲಿದರೆ ವಿಷಕಾರಕ ಅನಿಲವನ್ನು ಹೊರಡಿಸುವುದಿಲ್ಲ.

ಸಂರಕ್ಷಕ: ರೇಷ್ಮೆಯು ನೇರಳಾತೀತ ಕಿರಣಗಳನ್ನು ಹೀರಿ, ಚರ್ಮವನ್ನು ರಕ್ಷಿಸುತ್ತದೆ.

ಸ್ಥಾಯೀ ವಿದ್ಯುತ್‌ ಉಳಿಯುವುದಿಲ್ಲ: ರೇಷ್ಮೆಯಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಆಯಾನ್‌ಗಳಿರುವುದರಿಂದ ಮತ್ತು ತೇವ ಚೂಷಕವಾಗಿರುವುದರಿಂದ, ಕೆಲವು ಇತರ ಬಟ್ಟೆಗಳಂತೆ ಇದರಲ್ಲಿ ಬೇಗನೆ ಸ್ಥಾಯಿ ವಿದ್ಯುತ್‌ ಉಂಟಾಗುವುದಿಲ್ಲ.

ರೇಷ್ಮೆಯ ಆರೈಕೆ

ಒಗೆಯುವುದು: ರೇಷ್ಮೆ ಬಟ್ಟೆಗಳನ್ನು ಡ್ರೈಕ್ಲೀನ್‌ ಮಾಡುವುದೇ ಒಳ್ಳೇದು. ಒಂದುವೇಳೆ ಮನೆಯಲ್ಲೇ ಒಗೆಯುತ್ತೀರಾದರೆ, ಬೆಚ್ಚಗಿರುವ ನೀರಿನಲ್ಲಿ (ಸುಮಾರು 30 ಡಿಗ್ರಿ ಸೆಲ್ಸಿಯಸ್‌) ಆ್ಯಸಿಡ್‌ಗಳಿಲ್ಲದ ಡಿಟರ್ಜೆಂಟ್‌ ಹಾಕಿ ಒಗೆಯಿರಿ. ಸೌಮ್ಯವಾಗಿ ಒಗೆಯಿರಿ, ಬಟ್ಟೆಯನ್ನು ತೀಡಬೇಡಿ ಇಲ್ಲವೆ ಹಿಂಡಬೇಡಿರಿ. ಗಾಳಿಯಲ್ಲಿ ಒಣಗಿಸಿರಿ.

ಇಸ್ತ್ರಿಮಾಡುವುದು: ರೇಷ್ಮೆಯ ಮೇಲೆ ಒಂದು ಬಟ್ಟೆಹಾಕಿ ಇಸ್ತ್ರಿಮಾಡಿ. ಬಟ್ಟೆಯಲ್ಲಿನ ನೂಲುಗಳು ಯಾವ ದಿಕ್ಕಿನಲ್ಲಿವೆಯೊ ಆ ದಿಕ್ಕಿನಲ್ಲಿ 130 ಡಿಗ್ರಿ ಸೆಲ್ಸಿಯಸ್‌ ತಾಪದಲ್ಲಿ ಇಸ್ತ್ರಿಮಾಡಲು ಪ್ರಯತ್ನಿಸಿರಿ. ಅವಶ್ಯಬಿದ್ದರೆ ಕೇವಲ ಸ್ವಲ್ಪ ಪ್ರಮಾಣದಲ್ಲಿ ಹಬೆಯನ್ನು ಬಳಸಿರಿ.

ಕಲೆಗಳನ್ನು ತೆಗೆಯುವುದು: ಯಾವುದಾದರೂ ಕಲೆಯನ್ನು ಕೂಡಲೇ ತೆಗೆಯಬೇಕಾಗಿರುವಲ್ಲಿ, ಆ ರೇಷ್ಮೆ ಬಟ್ಟೆಯನ್ನು ಕೆಳಮುಖವಾಗಿ ಒಂದು ಒಣಗಿದ ಬಟ್ಟೆಯ ಮೇಲೆ ಇಡಿ. ಹಿಂದಿನಭಾಗದಿಂದ ಸ್ವಲ್ಪ ತೇವವಿರುವ ಒಂದು ಬಟ್ಟೆಯಿಂದ ಹೊಡೆಯಿರಿ, ಆದರೆ ಉಜ್ಜಬೇಡಿ. ನಂತರ ಅದನ್ನು ಡ್ರೈಕ್ಲೀನಿಂಗ್‌ಗೆ ಕೊಡಿ.

ಇಡುವ ರೀತಿ: ತೇವಾಂಶದಿಂದ, ನುಸಿಗಳಿಂದ ಮತ್ತು ಬೆಳಕಿನಿಂದ ದೂರವಿಡಿ. ಸ್ಪಂಜ್‌ಪ್ಯಾಡ್‌ಗಳಿರುವ ಹ್ಯಾಂಗರ್‌ಗಳನ್ನು ಬಳಸಿ ಇಲ್ಲವೆ, ಸಾಧ್ಯವಿರುವಷ್ಟು ಕಡಿಮೆ ಮಡಿಸಿ, ಚಪ್ಪಟ್ಟೆಯಾದ ಮೇಲ್ಮೆ ಮೇಲಿರಿಸಿ.

[ಪುಟ 25ರಲ್ಲಿರುವ ಚಿತ್ರ]

ರೇಷ್ಮೆ ಗೂಡುಗಳು

[ಪುಟ 26ರಲ್ಲಿರುವ ಚಿತ್ರ ಕೃಪೆ]

ಫೋಟೋಗಳು 7-9: Matsuida Machi, Annaka City, Gumma Prefecture, Japan; 10 ಮತ್ತು ಕ್ಲೋಸಪ್‌ ವಿನ್ಯಾಸ: Kiryu City, Gumma Prefecture, Japan

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ