ಧಾರ್ಮಿಕ ಸ್ವಾತಂತ್ರ್ಯ—ಆಶೀರ್ವಾದವೋ ಶಾಪವೋ?
ಕ್ರೈಸ್ತಪ್ರಪಂಚದಲ್ಲಿ ಮಹಾ ಪ್ರಸವ ವೇದನೆಯಾದ ಅನಂತರ, ಧಾರ್ಮಿಕ ಸ್ವಾತಂತ್ರ್ಯದ ಕಲ್ಪನೆಯು ಜನನವಾಯಿತು. ಅದು ಶಾಸ್ತ್ರಾಂಧತೆ, ಪೂರ್ವಕಲ್ಪಿತ ಅಭಿಪ್ರಾಯ ಮತ್ತು ಅಸಹಿಷ್ಣುತೆಯ ವಿರುದ್ಧವಾದ ಹೋರಾಟವಾಗಿತ್ತು. ರಕ್ತಮಯವಾದ ಧಾರ್ಮಿಕ ಸಂಘರ್ಷಗಳು ಸಾವಿರಾರು ಜೀವಗಳನ್ನು ಕಬಳಿಸಿಬಿಟ್ಟವು. ಹೃದಯವಿದ್ರಾವಕವಾದ ಈ ಇತಿಹಾಸವು ನಮಗೆ ಏನನ್ನು ಕಲಿಸುತ್ತದೆ?
“ಕ್ರೈಸ್ತ ಇತಿಹಾಸದಲ್ಲಿ ಹಿಂಸೆಯು ಅಚ್ಚಳಿಯದೇ ಉಳಿದಿದೆ” ಎಂದು ವಿಧರ್ಮಿಗಳು ಮತ್ತು ಕ್ರೈಸ್ತರು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ರಾಬಿನ್ ಲೇನ್ ಫಾಕ್ಸ್ ಬರೆಯುತ್ತಾರೆ. ಆರಂಭದ ಕ್ರೈಸ್ತರು ಒಂದು ಪಂಥವೆಂದು ಮತ್ತು ಸಾರ್ವಜನಿಕ ವ್ಯವಸ್ಥೆಗೆ ಅಪಾಯವನ್ನು ತರುವವರೆಂದು ದೋಷಾರೋಪಿಸಲ್ಪಟ್ಟರು. (ಅ. ಕೃತ್ಯಗಳು 16:20, 21; 24:5, 14; 28:22) ಇದರ ಪರಿಣಾಮವಾಗಿ, ಕೆಲವರು ಚಿತ್ರಹಿಂಸೆಯನ್ನು ಸಹಿಸಿಕೊಂಡರು ಮತ್ತು ರೋಮನ್ ಅಖಾಡಗಳಲ್ಲಿ ಕ್ರೂರ ಮೃಗಗಳಿಂದ ಕೊಲ್ಲಲ್ಪಟ್ಟರು. ಅಂತಹ ಒಂದು ತೀವ್ರ ಹಿಂಸೆಯ ಎದುರಿನಲ್ಲೂ, ಮತಧರ್ಮ ಶಾಸ್ತ್ರಜ್ಞನಾದ ಟೆರ್ಟ್ಯೂಲ್ಯನನಂತೆ (8ನೆಯ ಪುಟದಲ್ಲಿರುವ ಚಿತ್ತವನ್ನು ನೋಡಿರಿ) ಕೆಲವರು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಟೆರ್ಟ್ಯೂಲ್ಯನು ಸಾ.ಶ. 212ರಲ್ಲಿ ಬರೆದುದು: “ಅದು ಮಾನವನ ಮೂಲಭೂತ ಹಕ್ಕು, ಪ್ರತಿಯೊಬ್ಬ ಮನುಷ್ಯನು ತನ್ನ ಸ್ವಂತ ನಂಬಿಕೆಗಳಿಗನುಸಾರ ಆರಾಧಿಸಬೇಕೆಂಬುದು ಸಹಜವಾಗಿ ಪಡೆದುಕೊಂಡಂತಹ ಒಂದು ಸುಯೋಗವಾಗಿದೆ.”
ಸಾ.ಶ. 313ರಲ್ಲಿ ಕಾನ್ಸ್ಟೆಂಟೀನ್ನ ಕೆಳಗೆ ರೋಮನ್ ಆಳ್ವಿಕೆಯು, ಕ್ರೈಸ್ತರ ಮೇಲಾಗುತ್ತಿದ್ದ ಹಿಂಸೆಯನ್ನು ತಡೆಯಿತು. ಕ್ರೈಸ್ತರಿಗೂ ವಿಧರ್ಮಿಗಳಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ತಂದುಕೊಟ್ಟ ಮಿಲನ್ ಆಜ್ಞೆಯನ್ನು ಆಗ ಜಾರಿಗೆ ತರಲಾಯಿತು. ರೋಮನ್ ಸಾಮ್ರಾಜ್ಯದಲ್ಲಿ “ಕ್ರೈಸ್ತತ್ವ”ವು ಕಾನೂನುಬದ್ಧವಾಗುವ ಮೂಲಕ ಕ್ರೈಸ್ತರ ಮೇಲಾಗುತ್ತಿದ್ದ ಹಿಂಸೆಯು ಕೊನೆಗೊಂಡಿತು. ಆದರೂ, ಸುಮಾರು ಸಾ.ಶ. 340ರಲ್ಲಿ, ಕ್ರೈಸ್ತನೆಂದು ಹೇಳಿಕೊಂಡ ಲೇಖಕನೊಬ್ಬನು ವಿಧರ್ಮಿಗಳನ್ನು ಹಿಂಸಿಸುವುದಕ್ಕೆ ಕರೆಕೊಟ್ಟನು. ಕೊನೆಗೆ, ಸಾ.ಶ. 392ರಲ್ಲಿ ಕಾನ್ಸ್ಟ್ಯಾಂಟಿನೋಪಲ್ನ ಆಜ್ಞೆಗನುಸಾರ, ಸಾಮ್ರಾಟನಾದ Iನೆಯ ತಿಯೊಡಸ್ಯಸ್ ತನ್ನ ಸಾಮ್ರಾಜ್ಯದಲ್ಲಿ ವಿಧರ್ಮಿ ನಂಬಿಕೆಗಳನ್ನು ನಿಷೇಧಿಸಿಬಿಟ್ಟನು. ಹೀಗೆ ಧಾರ್ಮಿಕ ಸ್ವಾತಂತ್ರ್ಯವೆಂಬ ಹೂವು ಅರಳುವ ಮುನ್ನವೇ ನಲುಗಿಹೋಯಿತು. ರೋಮನ್ “ಕ್ರೈಸ್ತತ್ವ”ವು ರಾಜ್ಯ ಧರ್ಮವಾಗಿ ಪರಿಣಮಿಸಿತು. ಚರ್ಚು ಮತ್ತು ಸರಕಾರವು ಶತಮಾನಗಳ ವರೆಗೆ ಹಿಂಸೆಯ ಚಳುವಳಿಯನ್ನು ಮುಂದುವರಿಸಿದವು. ಅದು 11ನೇ ಶತಮಾನದಿಂದ 13ನೇ ಶತಮಾನದ ವರೆಗೆ ರಕ್ತಮಯ ಧರ್ಮಯುದ್ಧಗಳಲ್ಲಿ, ಮತ್ತು 12ನೇ ಶತಮಾನದಲ್ಲಿ ಆರಂಭವಾದ ಮಠೀಯ ನ್ಯಾಯಸ್ಥಾನಗಳ ಕ್ರೂರತೆಯಲ್ಲಿ ಉತ್ತುಂಗಕ್ಕೇರಿತು. ಈಗಾಗಲೇ ಸ್ಥಾಪಿಸಲ್ಪಟ್ಟಿದ್ದ ಆರ್ತೊಡಾಕ್ಸ್ ಧರ್ಮದ ಬಗ್ಗೆ ಇಲ್ಲವೇ ಮತ ತತ್ತ್ವದ ಏಕಸ್ವಾಮ್ಯತೆಯ ಬಗ್ಗೆ ಚಕಾರವನ್ನೆತ್ತಲು ಸಾಹಸಮಾಡಿದವರನ್ನು ಅಸಂಪ್ರದಾಯಿಗಳೆಂದು ನಿಂದಿಸಲಾಗುತ್ತಿತ್ತು ಮತ್ತು ಅವರು ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಹುಡುಕಿ ಕೊಲ್ಲಲಾಗುತ್ತಿತ್ತು. ಈ ಬರ್ಬರ ಕೃತ್ಯಗಳ ಹಿಂದೆ ಏನು ಅಡಗಿತ್ತು?
ಧಾರ್ಮಿಕ ಐಕ್ಯತೆಯು ದೇಶಕ್ಕೆ ಅತ್ಯಂತ ದೃಢವಾದ ಅಡಿಪಾಯವನ್ನು ಹಾಕುತ್ತದೆ, ಮತ್ತು ಧಾರ್ಮಿಕ ಭಿನ್ನತೆಗಳು ಸಾರ್ವಜನಿಕ ವ್ಯವಸ್ಥೆಗೆ ಬೆದರಿಕೆಯನ್ನೊಡ್ಡುತ್ತವೆ ಎಂಬ ಆಧಾರದ ಮೇಲೆ ಧಾರ್ಮಿಕ ಅಸಹಿಷ್ಣುತೆಯನ್ನು ಮನ್ನಿಸಲಾಯಿತು. 1602ರಲ್ಲಿ ಇಂಗ್ಲೆಂಡಿನ ರಾಣಿ ಎಲಿಸಬೇತಳ ಮಂತ್ರಿಗಳಲ್ಲಿ ಒಬ್ಬನು ವಾದಮಾಡಿದ್ದು: “ಎರಡು ವಿಭಿನ್ನ ಧರ್ಮಗಳಿಗೆ ಸಹಿಷ್ಣುತೆಯನ್ನು ತೋರುವ ದೇಶವು ಎಂದೂ ಸುರಕ್ಷಿತವಾಗಿರುವುದಿಲ್ಲ.” ವಾಸ್ತವದಲ್ಲಿ ಧರ್ಮಗಳು, ದೇಶಕ್ಕೆ ಇಲ್ಲವೇ ಸ್ಥಾಪಿತ ಧರ್ಮಕ್ಕೆ ನಿಜವಾಗಿಯೂ ಬೆದರಿಕೆಯನ್ನೊಡ್ಡಿದವೋ ಇಲ್ಲವೋ ಎಂಬುದನ್ನು ಕಂಡುಹಿಡಿಯುವುದಕ್ಕಿಂತ, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ನಿಷೇಧಿಸುವುದು ತುಂಬ ಸುಲಭವಾಗಿತ್ತು. ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಸರಕಾರಿ ಇಲ್ಲವೇ ಧಾರ್ಮಿಕ ಅಧಿಕಾರಿಗಳಿಗೆ, ಅಪಾಯಕರ ಹಾಗೂ ಅಪಾಯಕರವಲ್ಲದ ಅಸಂಪ್ರದಾಯಗಳ ನಡುವೆ ಕೊಂಚವೂ ವ್ಯತ್ಯಾಸ ಕಾಣಲಿಲ್ಲ.” ಆದರೂ, ಬದಲಾವಣೆಯು ಶೀಘ್ರವೇ ಬರಲಿಕ್ಕಿತ್ತು.
ಸಹಿಷ್ಣುತೆಯ ವೇದನಾಮಯ ಜನನ
ಪ್ರಾಟಸ್ಟೆಂಟರಿಂದ ಎಬ್ಬಿಸಲ್ಪಟ್ಟ ಅಶಾಂತಿಯ ಅಲೆಯು, ಯೂರೋಪಿನಲ್ಲಿ ಬದಲಾವಣೆಯನ್ನು ಉಂಟುಮಾಡುವುದಕ್ಕೆ ಕಾರಣವಾಯಿತು. ಪಂಥಾಭಿಮಾನವು ಅಳಿದುಹೋಗಲಿಲ್ಲ. ಬಹಳ ತೀವ್ರತೆಯಿಂದ, ಧರ್ಮದ ಮೇಲಾಧಾರಿಸಿದ್ದ ಪ್ರಾಟಸ್ಟೆಂಟ್ ಸುಧಾರಣೆಯು ಯೂರೋಪನ್ನು ಇಬ್ಭಾಗ ಮಾಡಿತು. ಮತ್ತು ಇದು ಮನಸ್ಸಾಕ್ಷಿಯ ಸ್ವಾತಂತ್ರ್ಯದ ಕಲ್ಪನೆಯನ್ನು ಸೃಷ್ಟಿಸಿತು. ಉದಾಹರಣೆಗೆ, ಪ್ರಸಿದ್ಧ ಸುಧಾರಕನಾದ ಮಾರ್ಟಿನ್ ಲೂಥರ್, 1521ರಲ್ಲಿ ಹೀಗೆ ಹೇಳುವ ಮೂಲಕ ತನ್ನ ಅಭಿಪ್ರಾಯಗಳನ್ನು ಸಮರ್ಥಿಸಿಕೊಂಡನು: “ನನ್ನ ಮನಸ್ಸಾಕ್ಷಿಯು ದೇವರ ವಾಕ್ಯಕ್ಕೆ ನಿರ್ಬಂಧಿಸಲ್ಪಟ್ಟಿದೆ.” ಈ ವಿಭಜನೆಯು, ಯೂರೋಪನ್ನು ಸಂಪೂರ್ಣವಾಗಿ ನಾಶಮಾಡಿದ, ಕ್ರೂರ ಧಾರ್ಮಿಕ ಯುದ್ಧಗಳ ಸರಣಿಯಾದ ಮೂವತ್ತು ವರ್ಷಗಳ ಯುದ್ಧವನ್ನು (1618-48) ಸಹ ಹೊತ್ತಿಸಿತು.
ಆದರೆ ಯುದ್ಧವು ನಡೆಯುತ್ತಿರುವಾಗ, ಸಂಘರ್ಷಣೆಯ ಕಾರಣ ತಾವು ಪ್ರಗತಿಯ ಪಥದಲ್ಲಿ ಮುಂದುವರಿಯುತ್ತಿಲ್ಲವೆಂಬುದನ್ನು ಅನೇಕ ಜನರು ಗ್ರಹಿಸಿದರು. ಹೀಗೆ ಫ್ರಾನ್ಸಿನಲ್ಲಿ (1598) ಮಾಡಿದ ನಾಂತೆಯ ಶಾಸನದಂತಹ ಶಾಸನಗಳ ಸರಣಿಯು, ಯುದ್ಧದಿಂದ ಛಿದ್ರಗೊಂಡಿದ್ದ ಯೂರೋಪಿನಲ್ಲಿ ಶಾಂತಿಯನ್ನು ತರುವುದರಲ್ಲಿ ಅಸಫಲವಾದವು. ಈ ಶಾಸನಗಳಿಂದಲೇ ಆಧುನಿಕ ದಿನದ ಸಹಿಷ್ಣುತೆಯ ಕಲ್ಪನೆಯು ಕ್ರಮೇಣವಾಗಿ ಹೊರಬಂತು. ಮೊದಮೊದಲು, “ಸಹಿಷ್ಣುತೆ” ಎಂಬುದು ನಕಾರಾತ್ಮಕ ಅರ್ಥಗಳನ್ನು ಒಳಗೊಂಡಿತ್ತು. “ಕೆಲವೊಂದು ಸಂದರ್ಭಗಳಲ್ಲಿ ನಾವು ಪಂಥಗಳನ್ನು ಸಹಿಸಿಕೊಳ್ಳಬೇಕಾದಲ್ಲಿ . . . ಅದು ನಿಸ್ಸಂದೇಹವಾಗಿಯೂ ಕೆಟ್ಟದ್ದಾಗಿರುವುದು—ನಿಜವಾಗಿಯೂ ಅದೊಂದು ಗಂಭೀರವಾದ ಪಾಪವಾಗಿರುವುದು—ಆದರೂ ಯುದ್ಧದಷ್ಟು ಕೆಟ್ಟದ್ದಾಗಿರುವುದಿಲ್ಲ” ಎಂದು 1530ರಲ್ಲಿ ಪ್ರಸಿದ್ಧ ಮಾನವಶಾಸ್ತ್ರದ ವಿದ್ವಾಂಸನಾದ ಇರ್ಯಾಸ್ಮಸ್ ಬರೆದನು. ಈ ನಕಾರಾತ್ಮಕ ಅರ್ಥದಿಂದ, 1561ರಲ್ಲಿ ಫ್ರಾನ್ಸಿನ ಪಾಲ್ ಡೆ ಫ್ವ ಅವರಂತೆ ಕೆಲವರು “ಸಹಿಷ್ಣುತೆ”ಗಿಂತ “ಧಾರ್ಮಿಕ ಸ್ವಾತಂತ್ರ್ಯ”ದ ಕುರಿತು ಮಾತಾಡಲು ಇಷ್ಟಪಟ್ಟರು.
ಸಮಯವು ಗತಿಸಿದಂತೆ ಸಹಿಷ್ಣುತೆಯನ್ನು ಕೆಟ್ಟದ್ದಾಗಿ ವೀಕ್ಷಿಸಲಿಲ್ಲ, ಬದಲಿಗೆ ಸ್ವಾತಂತ್ರ್ಯಗಳ ಸಂರಕ್ಷಕನೋಪಾದಿ ಅದನ್ನು ನೋಡಲಾಯಿತು. ಅದನ್ನು ಬಲಹೀನತೆಗಳಿಗೆ ಒಂದು ರಿಯಾಯಿತಿಯಾಗಿ ಅಲ್ಲ, ಬದಲಿಗೆ ಒಂದು ಖಾತ್ರಿಯನ್ನಾಗಿ ಪರಿಗಣಿಸಲಾಯಿತು. ನಂಬಿಕೆಯ ವೈವಿಧ್ಯವು ಮತ್ತು ವಿಭಿನ್ನವಾಗಿ ಆಲೋಚಿಸುವ ಹಕ್ಕು, ಆಧುನಿಕ ಸಮಾಜದ ಆಧಾರವೆಂದು ಹೇಳುತ್ತಾ ಅದನ್ನು ಸಮರ್ಥಿಸಲು ಆರಂಭಿಸಿದಾಗ, ಉನ್ಮತ್ತಾಭಿಮಾನವು ಹಿಮ್ಮೆಟ್ಟಲೇಬೇಕಾಯಿತು.
18ನೇ ಶತಮಾನದ ಅಂತ್ಯದಲ್ಲಿ, ಸಹಿಷ್ಣುತೆಯು ಸ್ವಾತಂತ್ರ್ಯಕ್ಕೆ ಮತ್ತು ಸರಿಸಮಾನತೆಗೆ ಜೋಡಿಸಲ್ಪಟ್ಟಿತು. ಇದು ಫ್ರಾನ್ಸಿನಲ್ಲಿ (1789) ಮಾಡಲ್ಪಟ್ಟ ಪ್ರಸಿದ್ಧ ಮಾನವನ ಮತ್ತು ನಾಗರಿಕನ ಹಕ್ಕುಗಳ ಅಥವಾ ಅಮೆರಿಕದಲ್ಲಿ (1791) ಮಾಡಲ್ಪಟ್ಟ ಮಸೂದೆಯ ಹಕ್ಕುಗಳ ಘೋಷಣೆಯಂತಹ, ನಿಯಮಗಳ ಮತ್ತು ಘೋಷಣೆಗಳ ವಿಧದಲ್ಲಿ ವ್ಯಕ್ತಪಡಿಸಲ್ಪಟ್ಟಿತು. ಈ ಶಾಸನಗಳು 19ನೇ ಶತಮಾನದಿಂದ ಸ್ವತಂತ್ರವಾಗಿ ಆಲೋಚಿಸುವುದನ್ನು ಪ್ರಭಾವಿಸಲು ಆರಂಭಿಸಿದಾಗ, ಸಹಿಷ್ಣುತೆ ಮತ್ತು ಸ್ವಾತಂತ್ರ್ಯವು ಶಾಪದೋಪಾದಿಯಲ್ಲ ಬದಲಿಗೆ ಒಂದು ಆಶೀರ್ವಾದದೋಪಾದಿ ಪರಿಗಣಿಸಲ್ಪಟ್ಟವು.
ಸಂಬಂಧಾರ್ಥಕ ಸ್ವಾತಂತ್ರ್ಯ
ಸ್ವಾತಂತ್ರ್ಯವು ಅಮೂಲ್ಯವಾಗಿರುವುದಾದರೂ, ಕೇವಲ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಹೆಚ್ಚಿನ ಸ್ವಾತಂತ್ರ್ಯದ ಹೆಸರಿನಲ್ಲಿ, ಕೆಲವು ವೈಯಕ್ತಿಕ ಸ್ವಾತಂತ್ರ್ಯಗಳನ್ನು ಸೀಮಿತಗೊಳಿಸಲು ಸರಕಾರವು ನಿಯಮಗಳನ್ನು ಜಾರಿಗೆ ತರುತ್ತದೆ. ಈಗ ಅನೇಕ ಯೂರೋಪಿಯನ್ ದೇಶಗಳಲ್ಲಿ, ವಾಗ್ವಾದದಲ್ಲಿರುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಕೆಲವೊಂದು ವಿವಾದಾಂಶಗಳು ಈ ಕೆಳಗಿನಂತಿವೆ: ಸರಕಾರಿ ಶಾಸನವು ಖಾಸಗಿ ಜೀವನದಲ್ಲಿ ಎಷ್ಟರ ಮಟ್ಟಿಗೆ ಕೈ ಹಾಕಬಹುದು? ಅದು ಎಷ್ಟರ ಮಟ್ಟಿಗೆ ಪ್ರಭಾವಕಾರಿಯಾಗಿದೆ? ಅದು ಸ್ವಾತಂತ್ರ್ಯವನ್ನು ಹೇಗೆ ಪ್ರಭಾವಿಸುತ್ತದೆ?
ಸಾರ್ವಜನಿಕ ಮತ್ತು ಖಾಸಗಿ ಸ್ವಾತಂತ್ರ್ಯದ ಕುರಿತಾದ ವಾಗ್ವಾದವನ್ನು ವಾರ್ತಾಮಾಧ್ಯಮವು ಮುಂದೆ ತಂದಿದೆ. ಒಬ್ಬನ ತಲೆಕೆಡಿಸುವುದು, ಹಣ ಸುಲಿಗೆಮಾಡುವುದು, ಮಕ್ಕಳ ಮೇಲಿನ ದೌರ್ಜನ್ಯ, ಮತ್ತು ಇತರ ಅಪರಾಧಗಳಂತಹ ಅನೇಕ ಆರೋಪಗಳು, ಯಾವುದೇ ನಿಜವಾದ ಪುರಾವೆಯಿಲ್ಲದೆ, ಕೆಲವೊಂದು ಧಾರ್ಮಿಕ ಗುಂಪುಗಳ ಮೇಲೆ ಹೊರಿಸಲ್ಪಟ್ಟಿವೆ. ಅಲ್ಪಸಂಖ್ಯಾತರ ಧಾರ್ಮಿಕ ಗುಂಪುಗಳನ್ನು ಒಳಗೊಂಡ ಬಹು ವ್ಯಾಪಕ ವಾರ್ತಾ ಲೇಖನಗಳನ್ನು ಮಾಧ್ಯಮವು ಹೊರತಂದಿದೆ. “ಕುಪಂಥ” ಅಥವಾ “ಪಂಥ” ಎಂಬಂತಹ ಕಳಂಕ ತರುವಂತಹ ಹೆಸರುಪಟ್ಟಿಗಳು ಇಂದು ಪ್ರತಿದಿನದ ಬಳಕೆಯಾಗಿವೆ. ಜನರ ಅಭಿಪ್ರಾಯದ ಒತ್ತಾಯದ ಮೇರೆಗೆ, ಕೆಲವೊಮ್ಮೆ ಸರಕಾರಗಳು ಇಂಥಿಂಥ ಕುಪಂಥಗಳು ಅಪಾಯಕಾರಿಯಾಗಿವೆ ಎಂದು ಸಹ ಪಟ್ಟಿಮಾಡಿವೆ.
ಸಹಿಷ್ಣುತೆಯ ಸಂಪ್ರದಾಯದ ಬಗ್ಗೆ, ಮತ್ತು ಧರ್ಮ ಬೇರೆ ಹಾಗೂ ಸರಕಾರವು ಬೇರೆ ಎಂಬ ವಿಷಯದ ಬಗ್ಗೆ ಹೆಮ್ಮೆಪಟ್ಟುಕೊಳ್ಳುವಂತಹ ದೇಶವು ಫ್ರಾನ್ಸ್ ಆಗಿದೆ. ತನ್ನ ದೇಶವು, “ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ”ದ ಒಂದು ದೇಶವಾಗಿದೆ ಎಂದು ಅದು ಹೆಮ್ಮೆಪಟ್ಟುಕೊಳ್ಳುತ್ತದೆ. ಆದರೂ ಧರ್ಮ ಮತ್ತು ನಂಬಿಕೆಯ ಸ್ವಾತಂತ್ರ್ಯ—ಒಂದು ವಿಶ್ವ ವರದಿ (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, ಆ ದೇಶದಲ್ಲಿ “ಹೊಸ ಧಾರ್ಮಿಕ ಕಾರ್ಯಾಚರಣೆಗಳನ್ನು ತಿರಸ್ಕರಿಸುವಂತೆ ಅಲ್ಲಿನ ಶಾಲೆಗಳಲ್ಲಿ ಕಲಿಸಿಕೊಡುವ” ಶಿಫಾರಸ್ಸನ್ನು ಮಾಡಲಾಗಿದೆ. ಆದರೂ, ಈ ರೀತಿಯ ಕ್ರಮವು ಧಾರ್ಮಿಕ ಸ್ವಾತಂತ್ರ್ಯಕ್ಕೆ ನಿಜವಾಗಿಯೂ ಬೆದರಿಕೆಯನ್ನೊಡ್ಡುತ್ತದೆ ಎಂದು ಅನೇಕ ಜನರು ನೆನಸುತ್ತಾರೆ. ಆದರೆ ಅದು ಹೇಗೆ?
ಧಾರ್ಮಿಕ ಸ್ವಾತಂತ್ರ್ಯಕ್ಕಿರುವ ಬೆದರಿಕೆಗಳು
ಕಾನೂನಿಗೆ ಗೌರವವನ್ನೂ ವಿಧೇಯತೆಯನ್ನೂ ತೋರಿಸುವ ಸರ್ವ ಧರ್ಮಗಳನ್ನೂ ಸರಕಾರವು ಸಮಾನ ರೀತಿಯಲ್ಲಿ ವೀಕ್ಷಿಸುವಾಗ ಮಾತ್ರ, ನಿಜವಾದ ಧಾರ್ಮಿಕ ಸ್ವಾತಂತ್ರ್ಯವು ಇರಸಾಧ್ಯವಿದೆ. ಆದರೆ ಸರಕಾರ ಸ್ವೇಚ್ಛೆಯಿಂದ, ಧಾರ್ಮಿಕ ಪಂಗಡಗಳಲ್ಲಿ ಯಾವುದು ಮನ್ನಣೆ ಪಡೆದಿರುವ ಧರ್ಮವೆಂದು ನಿರ್ಣಯಿಸಿ, ಅದಕ್ಕೆ ಕೆಲವು ಸರಕಾರೀ ಪ್ರಯೋಜನಗಳನ್ನು ಕೊಡುವಲ್ಲಿ ಧಾರ್ಮಿಕ ಸ್ವಾತಂತ್ರ್ಯವು ನಿಂತುಹೋಗುತ್ತದೆ. ಹೀಗೆ ಸರಕಾರವು ಇತರ ಧರ್ಮಗಳಿಗೆ ಕೊಡುವ ಸವಲತ್ತುಗಳನ್ನು ಇದಕ್ಕೆ ಕೊಡುವುದಿಲ್ಲ. “ಸರಕಾರವು ವಾಹನ ಚಾಲಕರಿಗೆ ಲೈಸನ್ಸ್ಗಳನ್ನು ಕೊಡುವಂತಹ ರೀತಿಯಲ್ಲಿ ಧರ್ಮಗಳಿಗೆ ಮನ್ನಣೆ ಕೊಡುವಂತಹ ಅಧಿಕಾರವನ್ನು ಕೈಗೆತ್ತಿಕೊಳ್ಳುವಾಗ, ಧಾರ್ಮಿಕ ಸ್ವಾತಂತ್ರ್ಯವೆಂಬ ಪ್ರಾಮುಖ್ಯವಾದ ವಿಷಯವು ಪೊಳ್ಳಾಗಿ ಪರಿಣಮಿಸುತ್ತದೆ” ಎಂದು 1997ರಲ್ಲಿ ಟೈಮ್ ಪತ್ರಿಕೆಯು ಹೇಳಿತು. ಈ ರೀತಿಯಲ್ಲಿ ಮಾಡುವುದು “ಗೊತ್ತಿದ್ದೋ ಗೊತ್ತಿಲ್ಲದೆಯೋ ನಿರಂಕುಶಾಧಿಕಾರಕ್ಕೆ ನಡೆಸುತ್ತದೆ” ಎಂದು ಫ್ರೆಂಚ್ ಅಪೀಲ್ ನ್ಯಾಯಾಲಯವು ಇತ್ತೀಚೆಗೆ ಹೇಳಿತು.
ಒಂದು ಧರ್ಮವು ಮಾಧ್ಯಮದ ಮೇಲೆ ಸಂಪೂರ್ಣಾಧಿಕಾರವನ್ನು ಹೊಂದಿರುವಾಗಲೂ ಮೂಲಭೂತ ಸ್ವಾತಂತ್ರ್ಯಗಳು ಬೆದರಿಕೆಗೊಳಗಾಗುತ್ತವೆ. ದುಃಖದ ಸಂಗತಿಯೇನೆಂದರೆ, ಈ ಪರಿಸ್ಥಿತಿಯು ಅನೇಕ ದೇಶಗಳಲ್ಲಿ ಹೆಚ್ಚುತ್ತಿದೆ. ಉದಾಹರಣೆಗೆ, ಧಾರ್ಮಿಕವಾಗಿ ಯಾವುದು ಸರಿ ಎಂಬುದನ್ನು ತಿಳಿಸುವ ಪ್ರಯತ್ನದಲ್ಲಿ, ಕುಪಂಥ ವಿರೋಧಿ ಸಂಘಟನೆಗಳು ತಮ್ಮನ್ನು ವಕೀಲನಾಗಿ, ನ್ಯಾಯಾಧೀಶನಾಗಿ, ಮತ್ತು ನ್ಯಾಯದರ್ಶಿ ಮಂಡಲಿಯೋಪಾದಿ ಮಾಡಿಕೊಂಡಿವೆ ಮತ್ತು ಅನಂತರ ತಮ್ಮ ಪಕ್ಷಪಾತದ ದೃಷ್ಟಿಕೋನಗಳನ್ನು ವಾರ್ತಾಮಾಧ್ಯಮದ ಮುಖಾಂತರ ಜನರ ಮೇಲೆ ಹೇರಲು ಪ್ರಯತ್ನಿಸಿವೆ. ಆದರೆ, ಹೀಗೆ ಮಾಡುವುದರಿಂದ ಇಂತಹ ಸಂಘಟನೆಗಳು ಕೆಲವೊಮ್ಮೆ “ಅವು ಯಾವುದರ ವಿರುದ್ಧ ಹೋರಾಡುತ್ತಿವೆಯೋ ಅದೇ ಪಂಥಾಭಿಮಾನವನ್ನು” ತೋರಿಸುತ್ತಿವೆ ಮತ್ತು “‘ಸುಮ್ಮನೇ ಕಿರುಕುಳ’ದ ವಾತಾವರಣವನ್ನು ಸೃಷ್ಟಿಸುವ ಮೂಲಕ ಗಂಡಾಂತರವನ್ನು” ಉಂಟುಮಾಡುತ್ತಿವೆ ಎಂದು ಫ್ರೆಂಚ್ ವಾರ್ತಾಪತ್ರಿಕೆಯಾದ ಲೆ ಮೊಂಡ್ ಹೇಳಿತು. ಆ ವಾರ್ತಾಪತ್ರಿಕೆಯು ಕೇಳಿದ್ದು: “ಅಲ್ಪಸಂಖ್ಯಾತರ ಗುಂಪುಗಳ ಮೇಲೆ ಸಾಮಾಜಿಕ ಕಳಂಕ ಹಚ್ಚುವುದು . . . ಮುಖ್ಯವಾದ ಸ್ವಾತಂತ್ರ್ಯಗಳಿಗೆ ಬೆದರಿಕೆ ಹಾಕಲಿಲ್ಲವೋ?” ಸೈಟ್ಸ್ಕ್ರಿಫ್ಟ್ ಫೂರ್ ರೇಲೀಜ್ಯೋನ್ಸ್ಸ್ಯೂಕೋಲೋಜೀ (ಧರ್ಮದ ಮನಶಾಸ್ತ್ರಕ್ಕಾಗಿ ಪತ್ರಿಕೆ) ಎಂಬ ಪತ್ರಿಕೆಯಲ್ಲಿ ಮಾರ್ಟಿನ್ ಕ್ರೈಲೆ ಹೇಳುವುದು: “ಪಂಥಗಳನ್ನು ಬೆನ್ನಟ್ಟಿ ಹೋಗುವುದು ಚಿಂತೆಗೀಡುಮಾಡುವಂತಹ ವಿಷಯವಾಗಿದೆ. ಸರಳವಾಗಿ ಹೇಳುವುದಾದರೆ: ಕಾನೂನನ್ನು ಮೀರಿಹೋಗದ ನಾಗರಿಕರನ್ನು ಅವರ ಪಾಡಿಗೆ ಬಿಟ್ಟುಬಿಡುವುದೇ ಒಳ್ಳೆಯದು. ಧರ್ಮ ಮತ್ತು ಭಾವನಾಶಾಸ್ತ್ರವು ಸ್ವತಂತ್ರವಾಗಿರಬೇಕು ಮತ್ತು ಹಾಗೆಯೇ ಉಳಿಯಬೇಕು. ಇದು ಜರ್ಮನಿಗೂ ಅನ್ವಯಿಸುತ್ತದೆ.” ಒಂದು ಉದಾಹರಣೆಯನ್ನು ನೋಡೋಣ.
“ಅತ್ಯಂತ ನಿಷ್ಠಾವಂತ ನಾಗರಿಕರನ್ನು ಅಪಾಯಕಾರಿ” ಎಂದು ಆರೋಪಿಸಲಾಗಿದೆ
ಕ್ಯಾತೊಲಿಕ್ ಪಾದ್ರಿಗಳ ಅಭಿಪ್ರಾಯವನ್ನು ಉದ್ಧರಿಸಿದ ಸ್ಪೇನಿನ ಜನಪ್ರಿಯವಾದ ಎಬಿಸಿ ವಾರ್ತಾಪತ್ರಿಕೆಯಲ್ಲಿ, ಯಾವ ಧಾರ್ಮಿಕ ಗುಂಪನ್ನು “ಸರ್ವ ಪಂಥಗಳಲ್ಲಿಯೇ ಅತ್ಯಂತ ಅಪಾಯಕಾರಿ” ಪಂಥವೆಂದು ಹೇಳಲಾಯಿತು? ಎಬಿಸಿ ಯೆಹೋವನ ಸಾಕ್ಷಿಗಳ ಬಗ್ಗೆ ಮಾತಾಡುತ್ತಿತ್ತು ಎಂಬುದನ್ನು ತಿಳಿದುಕೊಳ್ಳುವಾಗ ನಿಮಗೆ ಆಶ್ಚರ್ಯವಾಗಬಹುದು. ಅವರ ವಿರುದ್ಧ ಮಾಡಲ್ಪಟ್ಟ ಆಪಾದನೆಗಳು ನಿಷ್ಪಕ್ಷಪಾತವೂ ವಾಸ್ತವವೂ ಆಗಿದ್ದವೋ? ಇತರ ಮೂಲಗಳಿಂದ ಬಂದಂತಹ ಈ ಕೆಳಕಂಡ ಹೇಳಿಕೆಗಳನ್ನು ಗಮನಿಸಿರಿ:
“ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಮಾಡಬೇಕು, ಯುದ್ಧಗಳಲ್ಲಿ ಭಾಗವಹಿಸಬಾರದು ಇಲ್ಲವೇ ಯುದ್ಧಕ್ಕಾಗಿ ತಯಾರಿಮಾಡಬಾರದು, ಕಳ್ಳತನಮಾಡಬಾರದು ಮತ್ತು ಪ್ರಜಾ ಗುಂಪು ಬಾಳುವೆಯ ಮಟ್ಟಗಳಲ್ಲಿ ಸುಧಾರಣೆಯನ್ನು ಮಾಡುವ ಜೀವನಶೈಲಿಯನ್ನು ಅನುಸರಿಸಬೇಕೆಂದು ಯೆಹೋವನ ಸಾಕ್ಷಿಗಳು ಜನರಿಗೆ ಕಲಿಸುತ್ತಾರೆ.”—ಸರ್ಜಿಯೊ ಆ್ಯಲ್ಬೆಸೆನೊ, ಟ್ಯಾಲೆಂಟೊ, ನವೆಂಬರ್-ಡಿಸೆಂಬರ್ 1996.
“[ಯೆಹೋವನ ಸಾಕ್ಷಿಗಳ] ಮೇಲೆ ಅಪವಾದಗಳು ಹೊರಿಸಲ್ಪಟ್ಟಿರುವುದಾದರೂ, ಇವರು ಸರಕಾರಕ್ಕೆ ಒಂದಿನಿತೂ ಅಪಾಯಕಾರಿಗಳಾಗಿಲ್ಲ. ಇವರು ಶಾಂತಿಪ್ರಿಯರೂ, ಮನಸ್ಸಾಕ್ಷಿಗನುಸಾರ ನಡೆಯುವವರೂ, ಮತ್ತು ಅಧಿಕಾರಿಗಳಿಗೆ ಗೌರವವನ್ನು ತೋರಿಸುವ ನಾಗರಿಕರೂ ಆಗಿದ್ದಾರೆ.”—ಬೆಲ್ಜಿಯಮ್ನ ಪಾರ್ಲಿಮೆಂಟರಿ ಡೆಪ್ಯೂಟಿ.
“ಜರ್ಮನಿಯಲ್ಲಿರುವ ಅತ್ಯಂತ ಪ್ರಾಮಾಣಿಕ ಜನರೆಂದರೆ ಯೆಹೋವನ ಸಾಕ್ಷಿಗಳೇ.”—ಜರ್ಮನ್ ವಾರ್ತಾಪತ್ರಿಕೆಯಾದ ಸಿಂಡಲ್ಫಿಂಗರ್ ಟ್ಸೈಟುಂಗ್.
“ನೀವು [ಯೆಹೋವನ ಸಾಕ್ಷಿಗಳನ್ನು] ಆದರ್ಶ ನಾಗರಿಕರೋಪಾದಿ ಗೌರವಿಸಬಹುದು. ಅವರು ತಪ್ಪದೇ ತೆರಿಗೆಗಳನ್ನು ಪಾವತಿ ಮಾಡುತ್ತಾರೆ, ರೋಗಿಗಳ ಉಪಚಾರವನ್ನು ಮಾಡುತ್ತಾರೆ, ಅನಕ್ಷರಸ್ಥತೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ.”—ಅಮೆರಿಕದ ವಾರ್ತಾಪತ್ರಿಕೆಯಾದ ಸಾನ್ ಫ್ರ್ಯಾನ್ಸಿಸ್ಕೋ ಎಕ್ಸಾಮಿನರ್.
“ಸ್ಥಿರವಾದ ವೈವಾಹಿಕ ಬಂಧಗಳನ್ನು ಕಾಪಾಡಿಕೊಂಡು ಹೋಗುವುದರಲ್ಲಿ ಇತರ ಪಂಗಡಗಳ ಸದಸ್ಯರಿಗಿಂತಲೂ ಯೆಹೋವನ ಸಾಕ್ಷಿಗಳು ಹೆಚ್ಚು ಸಫಲರಾಗಿದ್ದಾರೆ.”—ಅಮೆರಿಕನ್ ಎತ್ನೊಲಾಜಿಸ್ಟ್.
“ಇವರು ಆಫ್ರಿಕನ್ ದೇಶಗಳ ನಾಗರಿಕರಲ್ಲಿಯೇ ಅತ್ಯಂತ ಪ್ರಾಮಾಣಿಕರೂ ಕಾರ್ಯನಿಷ್ಠರೂ ಆಗಿದ್ದಾರೆ.”—ಡಾ. ಬ್ರೈನ್ ವಿಲ್ಸನ್, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ.
“ಈ ನಂಬಿಕೆಯ ಸದಸ್ಯರು, ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ವಿಸ್ತರಿಸುವುದರಲ್ಲಿ ದಶಕಗಳಿಂದ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.”—ನ್ಯಾಟ್ ಹೆಂಟಫ್, ವಾಕ್ ಸ್ವಾತಂತ್ರ್ಯ ನನಗೆ—ನಿನಗಲ್ಲ (ಇಂಗ್ಲಿಷ್).
“ನಮ್ಮ ಪ್ರಜಾಪ್ರಭುತ್ವದ ಅತ್ಯಂತ ಅಮೂಲ್ಯ ವಿಷಯಗಳಲ್ಲಿ ಕೆಲವನ್ನು ಕಾಪಾಡುವುದರಲ್ಲಿ ಅವರು . . . ನಿಜವಾಗಿಯೂ ನೆರವನ್ನು ನೀಡಿದ್ದಾರೆ.”—ಪ್ರೊಫೆಸರ್ ಸಿ. ಎಸ್. ಬ್ರೇಡನ್, ಇವರು ಸಹ ನಂಬುತ್ತಾರೆ (ಇಂಗ್ಲಿಷ್).
ಯೆಹೋವನ ಸಾಕ್ಷಿಗಳು ಆದರ್ಶಪ್ರಾಯ ನಾಗರಿಕರೆಂದು ಲೋಕದಾದ್ಯಂತ ಗುರುತಿಸಲ್ಪಟ್ಟಿದ್ದಾರೆ ಎಂಬುದನ್ನು ಮೇಲ್ಕಂಡ ಹೇಳಿಕೆಗಳು ಸ್ಪಷ್ಟಪಡಿಸುತ್ತವೆ. ಅಷ್ಟುಮಾತ್ರವಲ್ಲದೆ, ಅವರು ತಮ್ಮ ಉಚಿತ ಬೈಬಲ್ ಶಿಕ್ಷಣದ ಕಾರ್ಯಕ್ಕಾಗಿ ಮತ್ತು ಕುಟುಂಬ ಮೌಲ್ಯಗಳಿಗೆ ಒತ್ತಾಸೆಕೊಡುವ ವಿಷಯಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಅವರ ಸಾಕ್ಷರತಾ ತರಗತಿಗಳು ನೂರಾರು ಸಾವಿರ ಜನರಿಗೆ ಸಹಾಯಮಾಡಿವೆ ಮತ್ತು ಮಾನವ ಕಲ್ಯಾಣಕ್ಕಾಗಿ ಅವರು ಮಾಡಿರುವ ಕಾರ್ಯಗಳು ದಶಕಗಳಿಂದ ಸಾವಿರಾರು ಜನರಿಗೆ, ವಿಶೇಷವಾಗಿ ಆಫ್ರಿಕದಲ್ಲಿರುವವರಿಗೆ ಸಹಾಯಮಾಡಿದೆ.
ಪ್ರಾಮಾಣಿಕತೆಯ ಮಹತ್ವ
ಮುಗ್ಧ ಜನರನ್ನು ಬಲಿತೆಗೆದುಕೊಳ್ಳುವ ನಿರ್ಲಜ್ಜ ಜನರಿಂದ ಈ ಸಮಾಜವು ತುಂಬಿದೆ. ಆದುದರಿಂದ, ಧರ್ಮದ ಕುರಿತಾದ ಪ್ರತಿಪಾದನೆಗಳ ಸಂಬಂಧದಲ್ಲಿ ಜಾಗರೂಕರಾಗಿರುವುದು ನಿಜವಾಗಿಯೂ ಅಗತ್ಯವಾಗಿದೆ. ಆದರೆ ಕೆಲವು ಪತ್ರಕರ್ತರು, ಪ್ರಾಮಾಣಿಕ ಪರಿಣತರನ್ನು ಸಂಪರ್ಕಿಸುವ ಬದಲು, ಎಲ್ಲಿ ಸಂಖ್ಯೆಗಳು ಕ್ಷೀಣಿಸುತ್ತಿವೆಯೋ ಅಂತಹ ಚರ್ಚುಗಳಿಂದ ಮತ್ತು ಸರಿಯಾದ ಪ್ರಮಾಣವಿಲ್ಲದ ಪಂಥ ವಿರೋಧಿ ಸಂಘಟನೆಗಳಿಂದ ಮಾಹಿತಿಯನ್ನು ತೆಗೆದುಕೊಳ್ಳುವಾಗ, ಅದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಎಷ್ಟರ ಮಟ್ಟಿಗೆ ಪ್ರಾಮಾಣಿಕವೂ ಸಹಾಯಕಾರಿಯೂ ಆದ ವಿಷಯವಾಗಿದೆ? ಉದಾಹರಣೆಗೆ, ಯೆಹೋವನ ಸಾಕ್ಷಿಗಳನ್ನು “ಸರ್ವ ಪಂಥಗಳಲ್ಲಿಯೇ ಅತ್ಯಂತ ಅಪಾಯಕಾರಿ” ಪಂಥವೆಂದು ಹೇಳಿದ ವಾರ್ತಾಪತ್ರಿಕೆಯು, ಅದರ ಹೇಳಿಕೆಗಳು “[ಕ್ಯಾತೊಲಿಕ್] ಚರ್ಚಿನ ಪರಿಣಿತರ” ಹೇಳಿಕೆಗಳ ಮೇಲಾಧಾರಿತವಾಗಿದ್ದವು ಎಂಬುದನ್ನು ಒಪ್ಪಿಕೊಂಡಿತು. ಅಷ್ಟುಮಾತ್ರವಲ್ಲದೆ, ಕೆಲವೊಂದು ಪಂಥಗಳ ಬಗ್ಗೆ ಬಂದ ಅಧಿಕಾಂಶ ಲೇಖನಗಳು, ಪಂಥಕ್ಕೆ ವಿರುದ್ಧವಾಗಿರುವ ಸಂಘಟನೆಗಳಿಂದ ಬಂದ ಲೇಖನಗಳಾಗಿದ್ದವು ಎಂದು ಒಂದು ಫ್ರೆಂಚ್ ಪತ್ರಿಕೆಯು ಗಮನಿಸಿತು. ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಇದು ಅತ್ಯಂತ ನಿಷ್ಪಕ್ಷಪಾತವಾದ ವಿಧವೆಂದು ನಿಮಗೆ ಅನಿಸುತ್ತದೋ?
ಮೂಲಭೂತ ಮಾನವ ಹಕ್ಕುಗಳ ಕುರಿತಾಗಿ ಆಸ್ಥೆವಹಿಸಿರುವ ವಿಶ್ವಸಂಸ್ಥೆಯಂತಹ, ಅಂತಾರಾಷ್ಟ್ರೀಯ ಕೋರ್ಟುಗಳು ಮತ್ತು ಸಂಘಟನೆಗಳು, “ಒಂದು ಧರ್ಮ ಹಾಗೂ ಪಂಥದ ನಡುವೆ ಪಂಥ ವಿರೋಧಿ ಸಂಘಟನೆಗಳಿಂದ ಮಾಡಲ್ಪಟ್ಟ ವ್ಯತ್ಯಾಸವನ್ನು ಅಂಗೀಕರಿಸುವುದು ತೀರ ಅಸಹಜವಾದ ವಿಷಯವಾಗಿದೆ” ಎಂದು ಹೇಳುತ್ತವೆ. ಹಾಗಾದರೆ, ಕೆಲವರು “ಪಂಥ” ಎಂಬ ಈ ನಕಾರಾತ್ಮಕ ಪದವನ್ನು ಬಳಸಲು ಏಕೆ ಅಷ್ಟೊಂದು ಇಷ್ಟಪಡುತ್ತಾರೆ? ಧಾರ್ಮಿಕ ಸ್ವಾತಂತ್ರ್ಯವು ಬೆದರಿಕೆಗೊಳಪಟ್ಟಿದೆ ಎಂಬುದಕ್ಕೆ ಇದು ಇನ್ನೊಂದು ಪುರಾವೆಯಾಗಿದೆ. ಈ ಪ್ರಾಮುಖ್ಯವಾದ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಸಾಧ್ಯವಿದೆ?
[ಪುಟ 8ರಲ್ಲಿರುವಚೌಕ]
ಧಾರ್ಮಿಕ ಸ್ವಾತಂತ್ರ್ಯದ ಸಮರ್ಥಕರು
16ನೆಯ ಶತಮಾನದಲ್ಲಿ ಯೂರೋಪಿನಲ್ಲಾದ ಧಾರ್ಮಿಕ ಯುದ್ಧದ ಕಗ್ಗೊಲೆಯಿಂದ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಪ್ರಬಲವಾದ ಕರೆಯು ನೀಡಲ್ಪಟ್ಟಿತು. ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಮಾಡುವುದಕ್ಕೆ ಈ ಮನವಿಗಳು ಈಗಲೂ ಪ್ರಸಕ್ತವಾಗಿವೆ.
ಸೇಬಾಸ್ಟ್ಯನ್ ಶಟೇಯನ್ (1515-63): “ಅಸಂಪ್ರದಾಯಿ ಎಂದರೇನು? ನನಗೆ ತಿಳಿದಿರುವ ಮಟ್ಟಿಗೆ, ನಮ್ಮ ಅಭಿಪ್ರಾಯಕ್ಕೆ ಸಮ್ಮತಿಸಿದೇ ಹೋಗುವವರೆಲ್ಲರನ್ನೂ ನಾವು ಅಸಂಪ್ರದಾಯಿಗಳೆಂದು ಎಣಿಸುತ್ತೇವೆ, ಇದನ್ನು ಬಿಟ್ಟು ಇನ್ಯಾವುದೇ ಕಾರಣವನ್ನು ನಾನು ಕಂಡುಕೊಳ್ಳುವುದಿಲ್ಲ. . . . ಈ ನಗರದಲ್ಲಿ ಇಲ್ಲವೇ ಪ್ರಾಂತದಲ್ಲಿ ನಿಮ್ಮನ್ನು ಒಬ್ಬ ಸಾಚಾ ನಂಬಿಗಸ್ತನು ಎಂದು ಪರಿಗಣಿಸಬಹುದು, ಆದರೆ ಅದೇ ಇನ್ನೊಂದು ಕಡೆ ನಿಮ್ಮನ್ನು ಒಬ್ಬ ಅಸಂಪ್ರದಾಯಿಯೆಂದು ತಿಳಿಯಬಹುದು.” ಧಾರ್ಮಿಕ ಸ್ವಾತಂತ್ರ್ಯದ ವಾಗ್ವಾದದಲ್ಲಿರುವ ಮುಖ್ಯ ಅಂಶಗಳಲ್ಲಿ ಒಂದನ್ನು, ಪ್ರಸಿದ್ಧ ಫ್ರೆಂಚ್ ಬೈಬಲ್ ಭಾಷಾಂತರಕಾರನೂ ಸಹಿಷ್ಣುತೆಯ ಉತ್ಸಾಹಿ ಸಮರ್ಥಕನೂ ಆದ ಶಟೇಯನ್ ಕೇಳಿದ್ದು: ಯಾರು ಅಸಂಪ್ರದಾಯಿ ಎಂಬುದನ್ನು ಯಾರು ಅರ್ಥನಿರೂಪಿಸುತ್ತಾರೆ?
ಡರ್ಕ್ ವಾಲ್ಕರ್ಟ್ಸನ್ ಕೋರ್ನ್ಹರ್ಟ್ (1522-90): “ಯೆರೂಸಲೇಮಿನಲ್ಲಿ ಸ್ವತಃ ಕ್ರಿಸ್ತನು ಮತ್ತು ಯೂರೋಪಿನಲ್ಲಿ ಅನೇಕ ಹುತಾತ್ಮರು . . . ತಮ್ಮ ಸತ್ಯದ ನುಡಿಗಳಿಂದ [ಸಮಾಜ]ವನ್ನು ಕದಡಿದ್ದಾರೆ . . . ಎಂದು ನಾವು ಹಿಂದೆ ಓದಿದ್ದೇವೆ.” ‘ಕದಡಿದ್ದಾರೆ’ ಎಂಬ ಪದದ ಅರ್ಥವನ್ನು ನಿಷ್ಕೃಷ್ಟವಾಗಿ ಮತ್ತು ಸ್ಪಷ್ಟವಾಗಿ ನಿರೂಪಿಸುವುದು ಅಗತ್ಯವಾಗಿದೆ. “ಧಾರ್ಮಿಕ ಭಿನ್ನತೆಯನ್ನು, ಸಾರ್ವಜನಿಕ ವ್ಯವಸ್ಥೆಯ ಕದಡುವಿಕೆಯೊಂದಿಗೆ ಸರಿಗಟ್ಟಬಾರದು ಎಂಬುದಾಗಿ ಕೋರ್ನ್ಹರ್ಟ್ ವಾದಿಸಿದನು. ಅವನು ಕೇಳಿದ್ದು: ನಿಯಮಕ್ಕೆ ನಿಷ್ಠೆಯಿಂದ ವಿಧೇಯತೆಯನ್ನು ಮತ್ತು ಗೌರವವನ್ನು ತೋರಿಸುವವರು ನಿಜವಾಗಿಯೂ ಸಾರ್ವಜನಿಕ ವ್ಯವಸ್ಥೆಗೆ ಬೆದರಿಕೆಯಾಗಿದ್ದಾರೋ?
ಪೈರೆ ಡೆ ಬೆಲ್ವಾ (1540-1611): “ಧರ್ಮದ ವೈವಿಧ್ಯತೆಯು ದೇಶದಲ್ಲಿ ಅಶಾಂತಿಯನ್ನು ತಂದು, ಅವ್ಯವಸ್ಥೆಯನ್ನು ಪೋಷಿಸುತ್ತದೆ ಎಂಬ ವಿಷಯವನ್ನು ನಂಬುವುದು ಅಜ್ಞಾನ”ವಾಗಿದೆ. ಧಾರ್ಮಿಕ ಯುದ್ಧಗಳ ಸಮಯದಲ್ಲಿ ಬರೆಯುತ್ತಿದ್ದ ಒಬ್ಬ ಫ್ರೆಂಚ್ ವಕೀಲನಾದ ಬೆಲ್ವಾ ವಾದಿಸಿದ್ದೇನೆಂದರೆ, ದೇಶದ ಹೊಂದಾಣಿಕೆಯು ಧಾರ್ಮಿಕ ಏಕರೂಪತೆಯ ಮೇಲೆ ಆಧಾರಿಸಿರುವುದಿಲ್ಲ, ಆದರೆ ಸರಕಾರವು ಧಾರ್ಮಿಕ ಒತ್ತಡಗಳ ಅಧೀನದಲ್ಲಿದ್ದರೆ ವಿಷಯವು ಭಿನ್ನವಾಗಿರುವುದು.
ಥಾಮಸ್ ಹೆಲ್ವಿಸ್ (ಸುಮಾರು 1550-ಸುಮಾರು 1616): “ಅವನ [ರಾಜನ] ಜನರು ಎಲ್ಲ ಮಾನವ ನಿಯಮಗಳಿಗೆ ವಿಧೇಯರೂ ನಂಬಿಗಸ್ತರೂ ಆದ ಪ್ರಜೆಗಳಾಗಿರುವಲ್ಲಿ, ಅವನು ಅವರಿಂದ ಇನ್ನೇನನ್ನೂ ಕೇಳಿಕೊಳ್ಳುವ ಅಗತ್ಯವಿಲ್ಲ.” ಇಂಗ್ಲಿಷ್ ಬ್ಯಾಪ್ಟಿಸ್ಟ್ನ ಸ್ಥಾಪಕರಲ್ಲಿ ಒಬ್ಬನಾದ ಹೆಲ್ವಿಸ್, ಎಲ್ಲ ಚರ್ಚುಗಳಿಗೂ ಪಂಥಗಳಿಗೂ ರಾಜನು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಬೇಕು ಮತ್ತು ಜನರ ಹಾಗೂ ಸ್ವತ್ತುಗಳ ಮೇಲೆ ಪ್ರಜಾಶಕ್ತಿಯ ಅಧಿಕಾರವನ್ನು ಪ್ರಯೋಗಿಸುವುದರಲ್ಲಿ ಸಂತುಷ್ಟನಾಗಿರಬೇಕೆಂದು ಹೇಳುತ್ತಾ, ಚರ್ಚನ್ನು ಸರಕಾರದಿಂದ ಬೇರೆಮಾಡುವ ಪರವಾಗಿ ಬರೆದನು. ಜನರ ಆತ್ಮಿಕ ವಿಚಾರಗಳಲ್ಲಿ ಸರಕಾರವು ಎಷ್ಟರ ಮಟ್ಟಿಗೆ ಹಸ್ತಕ್ಷೇಪ ಮಾಡಬೇಕು? ಎಂಬ ಸದ್ಯದ ಪ್ರಶ್ನೆಯನ್ನು ಅವನ ಬರವಣಿಗೆಗಳು ಕೇಳಿದವು.
ಅಜ್ಞಾತ ಲೇಖಕ, (1564): “ಮನಸ್ಸಾಕ್ಷಿಯ ಸ್ವಾತಂತ್ರ್ಯವನ್ನು ನೀಡಬೇಕಾದಲ್ಲಿ, ವ್ಯಕ್ತಿಗೆ ತಾನು ಇಷ್ಟಪಡದಂತಹ ಧರ್ಮವನ್ನು ಆಚರಿಸುವುದರಿಂದ ವಿನಾಯಿತಿಯನ್ನು ನೀಡುವುದು ಮಾತ್ರವಲ್ಲ, ಅವನು ಇಷ್ಟಪಡುವಂತಹ ಧರ್ಮವನ್ನು ಪಾಲಿಸುವುದಕ್ಕೆ ಅನುಮತಿಯನ್ನೂ ನೀಡಬೇಕು.”
[ಚಿತ್ರ]
ಟೆರ್ಟ್ಯೂಲ್ಯನ್
ಶಟೇಯನ್
ಡೆ ಬೆಲ್ವಾ
[ಕೃಪೆ]
All photos: © Cliché Bibliothèque Nationale de France, Paris