ಹಕ್ಕುಗಳು ಬೇಕು ಜವಾಬ್ದಾರಿಗಳು ಬೇಡವೋ?
“ಮಾನವಕುಲದ ಸಕಲ ಸದಸ್ಯರ ಅಂತರ್ಗತ ಗೌರವ, ಸಮಾನವಾದ ಘನತೆ ಮತ್ತು ಪರಭಾರೆ ಮಾಡಲಾಗದಂತಹ ಹಕ್ಕುಗಳನ್ನು ಗುರುತಿಸುವುದು, ಸ್ವತಂತ್ರ, ನ್ಯಾಯಯುತ ಹಾಗೂ ಶಾಂತಿಭರಿತ ಲೋಕವೊಂದಕ್ಕೆ ಬುನಾದಿಯಾಗಿದೆ.” ಹೀಗೆಂದು 1998ರ ಡಿಸೆಂಬರ್ ತಿಂಗಳಿನಲ್ಲಿ ತನ್ನ 50ನೆಯ ವಾರ್ಷಿಕೋತ್ಸವವನ್ನು ಆಚರಿಸಿದ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಪೀಠಿಕೆಯು ಹೇಳುತ್ತದೆ. ಇತ್ತೀಚೆಗೆ ಎಲ್ಲ ಖಂಡಗಳನ್ನು ಪ್ರತಿನಿಧಿಸಿದ, 24 ಮಾಜಿ ರಾಷ್ಟ್ರಾಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು, ಆ ಘೋಷಣೆಯ ಜೊತೆಗೆ ವಿಶ್ವಸಂಸ್ಥೆಯು ಮಾನವ ಜವಾಬ್ದಾರಿಗಳ ಸಾರ್ವತ್ರಿಕ ಘೋಷಣೆಯನ್ನು ಸಹ ಸ್ವೀಕರಿಸಬೇಕು ಎಂದು ಸಲಹೆನೀಡಿದರು. ಅಂತಹ ಒಂದು ಕಾರ್ಯಯೋಜನೆಯ ಅಗತ್ಯವಿದೆ ಎಂದು ಅನೇಕರು ಏಕೆ ನೆನಸುತ್ತಾರೆ?
“ಹಕ್ಕುಗಳು ಮತ್ತು ಜವಾಬ್ದಾರಿಗಳು, ಬೇರ್ಪಡಿಸಲಾಗದ ಅವಳಿ ಮಕ್ಕಳಿದ್ದಂತೆ. ಆದರೆ ದುಃಖಕರ ವಿಷಯವೇನೆಂದರೆ, ಅರ್ಧ ಶತಮಾನದ ಅನಂತರವೂ, ಈ ವಾಸ್ತವಾಂಶವನ್ನು ಮರೆತುಬಿಡಲಾಗಿದೆ. ಅನೇಕರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಾರೆ, ಆದರೆ ಅದಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಮರೆತುಬಿಡುತ್ತಾರೆ” ಎಂದು ಮಾನವ ಹಕ್ಕುಗಳಿಗಾಗಿರುವ ಯೂರೋಪಿಯನ್ ನಿಯೋಗದ ಸದಸ್ಯರಾದ ಪ್ರೊಫೆಸರ್ ಸಾನ್ಕ್ಲೋಡ್ ಸ್ವಾಯೇ ವಿವರಿಸುತ್ತಾರೆ. ಹೀಗೆ ಕರ್ತವ್ಯಗಳನ್ನು ಕಡೆಗಣಿಸುವುದರ ಪರಿಣಾಮವನ್ನು ಅನೇಕರು ಅನುಭವಿಸುತ್ತಾರೆ. “ಭವಿಷ್ಯತ್ತಿಗಾಗಿ ಒಂದು ಯೋಜನೆಯನ್ನು ಮತ್ತು ಈ ಲೋಕದಲ್ಲಿ ತುಂಬಿ ತುಳುಕುತ್ತಿರುವ ಲೋಭ, ಸ್ವಾರ್ಥ, ನಾನೆಂಬ ಭಾವವನ್ನು ನಿಯಂತ್ರಿಸಲು ಕೆಲವೊಂದು ಸ್ವೀಕೃತ ಮಟ್ಟಗಳಿಗಾಗಿ ವಿಶೇಷವಾಗಿ ಯುವ ಜನರು ತುಂಬ ಹಂಬಲಿಸುವುದು ಸ್ಪಷ್ಟವಾಗಿದೆ. . . . ಭೌಗೋಲಿಕ ನೈತಿಕತೆಗಾಗಿರುವ ಅಗತ್ಯದ ಬಗ್ಗೆ ಬೆಳೆದು ಹೆಮ್ಮರವಾಗುತ್ತಿರುವ ವಾಗ್ವಾದವು ಎಲ್ಲಿಯೋ ಏನೋ ಕಡಿಮೆಯಿದೆ ಎಂಬುದನ್ನು ಒಪ್ಪಿಕೊಳ್ಳುತ್ತದೆ” ಎಂದು ಪ್ಯಾರಿಸ್ನ ಇಂಟರ್ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ದಿನಪತ್ರಿಕೆಯು ಹೇಳುತ್ತದೆ. ಇದರ ಪರಿಣಾಮವಾಗಿ, ರಾಜಕಾರಣಿಗಳು, ದೇವತಾಶಾಸ್ತ್ರಜ್ಞರು, ಮತ್ತು ತತ್ತ್ವಜ್ಞಾನಿಗಳು ಯೋಜನೆಯ ಬಗ್ಗೆ ಚರ್ಚಿಸುತ್ತಿದ್ದಾರೆ. ಇದನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಘಟನೆಯು, “ಸಾರ್ವತ್ರಿಕ ನೈತಿಕ ಯೋಜನೆ” ಎಂದು ಕರೆಯುತ್ತದೆ. ಮತ್ತು ಇದು ಶೂನ್ಯವನ್ನು ತುಂಬುತ್ತದೆ ಹಾಗೂ ಮಾನವ ಜವಾಬ್ದಾರಿಗಳೇನು ಎಂಬುದನ್ನು ನಿರ್ಧರಿಸುತ್ತದೆ. ಆದರೂ, ಅವರು ಕೆಲವು ಕಷ್ಟಗಳನ್ನು ಎದುರಿಸಿದ್ದಾರೆ.
ಯಾವ ಮಾನವ ಹಕ್ಕುಗಳನ್ನು ಕಾಪಾಡಬೇಕು ಎಂಬುದು ತುಂಬ ಸುಲಭವಾಗಿರುವುದಾದರೂ, ಯಾವ ಜವಾಬ್ದಾರಿಗಳು ಸಾರ್ವತ್ರಿಕವಾಗಿ ಸ್ವೀಕರಿಸಲ್ಪಡಬೇಕು ಎಂಬುದನ್ನು ಗುರುತಿಸುವುದು ಅಷ್ಟೇನೂ ಸುಲಭವಾಗಿರುವುದಿಲ್ಲ. ಆದರೆ, ಜವಾಬ್ದಾರಿಗಳ ಕುರಿತಾಗಿ ಪ್ರಸ್ತಾಪಿಸಲ್ಪಟ್ಟ ಘೋಷಣೆಯಲ್ಲಿ ಕೆಲವೊಂದು ತುಂಬ ಮಹತ್ತ್ವದ ಮೌಲ್ಯಗಳಿವೆ. ಇವು, ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯೇಸುವಿನಿಂದ ಕೊಡಲ್ಪಟ್ಟ ಅನಂತವೂ ಸಾರ್ವತ್ರಿಕವೂ ಆದ ಸುವರ್ಣ ನಿಯಮದಿಂದ ಪ್ರೇರೇಪಿಸಲ್ಪಟ್ಟಿವೆ: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾಯ 7:12.
ಮಾನವ ಹಕ್ಕುಗಳನ್ನು ರಕ್ಷಿಸುವ ನಿಯಮಗಳ ಹಿಂದೆ ಬೈಬಲು ಯಾವಾಗಲೂ ಪ್ರೇರೇಪಣೆಯಾಗಿರುವುದಾದರೂ, ಅದು ವೈಯಕ್ತಿಕ ಜವಾಬ್ದಾರಿಯನ್ನು ಒತ್ತಿಹೇಳುತ್ತದೆ. “ಹೀಗಿರುವದರಿಂದ ಒಳ್ಳೇದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನು ಪಾಪಕ್ಕೊಳಗಾಗಿದ್ದಾನೆ” ಎಂದು ಶಿಷ್ಯನಾದ ಯಾಕೋಬನು ಘೋಷಿಸಿದನು. (ಯಾಕೋಬ 4:17) ಇತರರಿಗೆ ಒಳ್ಳೆಯದನ್ನು ಮಾಡಲಿಕ್ಕಾಗಿ ಅನೇಕ ಮಾರ್ಗಗಳನ್ನು ಯೇಸು ಹುಡುಕಿದ ಹಾಗೆ, ಸತ್ಯ ಕ್ರೈಸ್ತರು ತಮ್ಮ ಜೊತೆಮಾನವರಿಗೆ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಹಕ್ಕುಗಳಲ್ಲಿಯೇ ಸಂತುಷ್ಟರಾಗಿರದೆ, ಹಕ್ಕುಗಳ ಜೊತೆಗೆ ಜವಾಬ್ದಾರಿಗಳು ಸಹ ಇವೆ, ಹಾಗೂ ನಾವೆಲ್ಲರೂ ನಮ್ಮ ಸ್ವಂತ ಕ್ರಿಯೆಗಳಿಗಾಗಿ ದೇವರಿಗೆ ಜವಾಬ್ದಾರರಾಗಿದ್ದೇವೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ.