ಅಸಮಾನತೆಯೆಂಬ ಪ್ರಚಲಿತ ಪಿಡುಗು
“ಎಲ್ಲ ಮನುಷ್ಯರೂ ಸಮಾನರಾಗಿ ಸೃಷ್ಟಿಸಲ್ಪಟ್ಟಿದ್ದಾರೆ. ಅವರಿಗೆ ತಮ್ಮ ಸೃಷ್ಟಿಕರ್ತನಿಂದ ಕೆಲವು ಹಸ್ತಾಂತರಗೊಳಿಸಲಾಗದ ಹಕ್ಕುಗಳು ಅನುಗ್ರಹಿಸಲ್ಪಟ್ಟಿವೆ, ಮತ್ತು ಅವುಗಳಲ್ಲಿ ಜೀವಿತದ, ಸ್ವಾತಂತ್ರ್ಯದ ಮತ್ತು ಸಂತೋಷದ ಬೆನ್ನಟ್ಟುವಿಕೆ ಎಂಬ ಹಕ್ಕುಗಳು ಸೇರಿವೆ. ಈ ನಿಜತ್ವಗಳು ಸ್ವಯಂ ವ್ಯಕ್ತವೆಂದು (ತೀರ ಸ್ಪಷ್ಟವಾದವುಗಳೆಂದು) ನಾವು ನಂಬುತ್ತೇವೆ.” —1776ರಲ್ಲಿ ಅಮೆರಿಕ ದೇಶವು ಅಂಗೀಕರಿಸಿದ ಸ್ವಾತಂತ್ರ್ಯ ಘೋಷಣೆ.
“ಎಲ್ಲ ಮನುಷ್ಯರೂ ಸ್ವತಂತ್ರರಾಗಿ ಜನಿಸಿದ್ದು, ಸಮಾನ ಹಕ್ಕುಗಳುಳ್ಳವರಾಗಿದ್ದಾರೆ.” —1789ರಲ್ಲಿ ಫ್ರಾನ್ಸಿನ ರಾಷ್ಟ್ರೀಯ ಸಭೆಯಿಂದ ಅಂಗೀಕರಿಸಲ್ಪಟ್ಟ, ಮಾನವ ಹಾಗೂ ಪೌರ ಹಕ್ಕುಗಳ ಘೋಷಣೆ.
“ಎಲ್ಲ ಮಾನವ ಜೀವಿಗಳು ಸ್ವತಂತ್ರರಾಗಿ ಜನಿಸಿದ್ದು, ಘನತೆ ಹಾಗೂ ಹಕ್ಕುಗಳಲ್ಲಿ ಸಮಾನರು.”—1948ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ (ಜನರಲ್ ಅಸೆಂಬ್ಲಿ)ಯಿಂದ ಅಂಗೀಕರಿಸಲ್ಪಟ್ಟ, ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ.
ಈವಿಷಯದಲ್ಲಿ ಯಾವ ಸಂದೇಹವೂ ಇಲ್ಲ. ಮಾನವರಲ್ಲಿ ಸಮಾನತೆಗಾಗಿರುವ ಅಪೇಕ್ಷೆ ಸಾರ್ವತ್ರಿಕ. ಆದರೆ ವಿಷಾದಕರವಾಗಿ, ಮಾನವ ಸಮಾನತೆಯನ್ನು ಪದೇ ಪದೇ ಪುನರಾವರ್ತಿಸಬೇಕಾಗಿರುವ ಸಂಗತಿಯು ತಾನೇ, ಇಲ್ಲಿಯ ವರೆಗೂ ಅದು ಮಾನವಕುಲದ ಹಿಡಿತದಿಂದ ತಪ್ಪಿಸಿಕೊಂಡಿದೆ ಎಂಬುದನ್ನು ರುಜುಪಡಿಸುತ್ತದೆ.
ಈ ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಪರಿಸ್ಥಿತಿಗಳು ಸುಧಾರಿಸಿವೆ ಎಂದು ಯಾರಾದರೂ ಗಂಭೀರವಾಗಿ ವಾದಿಸಬಲ್ಲರೊ? ಅಮೆರಿಕ ಹಾಗೂ ಫ್ರಾನ್ಸಿನ ಎಲ್ಲ ಪ್ರಜೆಗಳು, ಅಥವಾ ವಿಶ್ವ ಸಂಸ್ಥೆಯ ಸದಸ್ಯರಾಗಿರುವ 185 ದೇಶಗಳಲ್ಲಿ ಯಾವುದಾದರೂ ಒಂದು ದೇಶದ ಪ್ರಜೆಗಳು, ತಾವು ಜನಿಸಿದಾಗ ಹೊಂದಿದ್ದೆವೆಂದು ನೆನಸುವ ಸಮಾನತೆಯ ಹಕ್ಕುಗಳನ್ನು ನಿಜವಾಗಿಯೂ ಅನುಭವಿಸುತ್ತಿದ್ದಾರೊ?
ಎಲ್ಲ ಮನುಷ್ಯರು ಸಮಾನರೆಂಬ ವಿಚಾರವು “ಸ್ವಯಂ ವ್ಯಕ್ತ”ವಾಗಿರಬಹುದಾದರೂ, “ಜೀವಿತದ, ಸ್ವಾತಂತ್ರ್ಯದ ಮತ್ತು ಸಂತೋಷದ ಬೆನ್ನಟ್ಟುವಿಕೆ”ಯ ಹಕ್ಕುಗಳು ಎಲ್ಲ ಜನರಿಗೂ ಸಮಾನವಾಗಿರುವುದಿಲ್ಲ. ಉದಾಹರಣೆಗೆ, ಆಫ್ರಿಕದಲ್ಲಿರುವ ಒಂದು ಮಗುವು, ಒಬ್ಬ ವೈದ್ಯನನ್ನು ಇತರ 2,569 ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವಾಗ, ಯೂರೋಪಿನ ಮಗುವು ಒಬ್ಬ ವೈದ್ಯನನ್ನು ಕೇವಲ 289 ಜನರೊಂದಿಗೆ ಹಂಚಿಕೊಳ್ಳುತ್ತದೆ. ಹೀಗಿರುವಾಗ, ಜೀವಿತದ ಹಕ್ಕಿನ ವಿಷಯದಲ್ಲಿ ಯಾವ ರೀತಿಯ ಸಮಾನತೆಯ ಕುರಿತು ನಾವು ಮಾತಾಡಸಾಧ್ಯವಿದೆ? ಭಾರತದಲ್ಲಿರುವ ಮೂವರು ಹುಡುಗರಲ್ಲಿ ಒಬ್ಬನು ಮತ್ತು ಮೂವರು ಹುಡುಗಿಯರಲ್ಲಿ ಇಬ್ಬರು ಅನಕ್ಷರಸ್ಥರಾಗಿರುವಾಗ, ಜಪಾನ್, ಜರ್ಮನಿ, ಮತ್ತು ಬ್ರಿಟನ್ನಂತಹ ದೇಶಗಳಲ್ಲಿ ಕಾರ್ಯತಃ ಪ್ರತಿಯೊಂದು ಮಗುವಿಗೆ ಶಿಕ್ಷಣದ ಖಾತರಿಯಿದೆ. ಹೀಗಿರುವಾಗ, ಸ್ವಾತಂತ್ರ್ಯ ಹಾಗೂ ಸಂತೋಷದ ಬೆನ್ನಟ್ಟುವಿಕೆಯ ಹಕ್ಕುಗಳ ವಿಷಯಗಳಲ್ಲಿ ಯಾವ ಸಮಾನತೆಯನ್ನು ನಾವು ಕಾಣಸಾಧ್ಯವಿದೆ?
ಮಧ್ಯ ಅಮೆರಿಕದ ದೇಶಗಳಲ್ಲಿ 1,380 ಡಾಲರುಗಳಷ್ಟು ವಾರ್ಷಿಕ ಆದಾಯವನ್ನು ಪಡೆದುಕೊಳ್ಳುವ ಜನರು, 24,990 ಡಾಲರುಗಳಷ್ಟು ವಾರ್ಷಿಕ ಆದಾಯವನ್ನು ಪಡೆಯುವ ಫ್ರಾನ್ಸಿನ ಜನರ ರೀತಿಯದ್ದೇ ಆದ “ಘನತೆ ಹಾಗೂ ಹಕ್ಕು”ಗಳನ್ನು ಅನುಭವಿಸಸಾಧ್ಯವಿದೆಯೊ? 56 ವರ್ಷಗಳ ಸರಾಸರಿ ಆಯುಷ್ಯವುಳ್ಳ ಆಫ್ರಿಕದ ನವಜನಿತ ಹೆಣ್ಣು ಮಗುವನ್ನು, 79 ವರ್ಷಗಳ ಸರಾಸರಿ ಆಯುಷ್ಯವುಳ್ಳ ಉತ್ತರ ಅಮೆರಿಕದ ಹೆಣ್ಣು ಮಗುವಿನೊಂದಿಗೆ ಹೋಲಿಸುವಾಗ, ಆಫ್ರಿಕದ ಮಗುವು ಯಾವ ರೀತಿಯ ಸಮಾನತೆಯನ್ನು ಅನುಭವಿಸುತ್ತಿದೆ?
ಅಸಮಾನತೆಗೆ ಅನೇಕ ಮುಖಗಳಿವೆ, ಆದರೆ ಅವೆಲ್ಲವೂ ವಿಕಾರವಾದ ಮುಖಗಳೇ. ಅಸಮಾನತೆಯ ಉದಾಹರಣೆಗಳಲ್ಲಿ, ಜೀವಿತದ ಮಟ್ಟಗಳು, ಆರೋಗ್ಯದಾರೈಕೆ ಹಾಗೂ ಶಿಕ್ಷಣದ ಅವಕಾಶಗಳು ಕೇವಲ ಕೆಲವೇ ಆಗಿವೆ. ಕೆಲವೊಮ್ಮೆ ಜನರ ಘನತೆ ಹಾಗೂ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದರಲ್ಲಿ, ರಾಜಕೀಯ, ಕುಲಸಂಬಂಧಿತ ಇಲ್ಲವೆ ಧಾರ್ಮಿಕ ಭಿನ್ನತೆಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಸಮಾನತೆಯ ಬಗ್ಗೆ ದೊಡ್ಡದೊಡ್ಡ ಮಾತುಕತೆಗಳು ನಡೆದರೂ, ನಾವು ಅಸಮಾನತೆಯ ಲೋಕದಲ್ಲಿ ಜೀವಿಸುತ್ತಿರುವುದೇನೊ ನಿಜ. “ವ್ಯಾಪಕವಾದ ಇಲ್ಲವೆ ಮಹಾ ವ್ಯಥೆಯ ಕಾರಣ” ಎಂಬುದಾಗಿ ವ್ಯಾಖ್ಯಾನಿಸಲ್ಪಟ್ಟಿರುವ ಪಿಡುಗು ಎಂಬ ಪದದ ಅರ್ಥದಂತೆ, ಅಸಮಾನತೆಯು ಮಾನವ ಸಮಾಜದ ಪ್ರತಿಯೊಂದು ಮಟ್ಟದಲ್ಲಿ ಹರಡಿಕೊಂಡಿದೆ. ಮತ್ತು ಬಡತನ, ಅನಾರೋಗ್ಯ, ಅಜ್ಞಾನ, ನಿರುದ್ಯೋಗ, ಮತ್ತು ಭೇದಭಾವದ ರೂಪದಲ್ಲಿ ಅದು ಉಂಟುಮಾಡುವ ವೇದನೆಯು, ಹೃದಯವನ್ನು ಬಹು ಆಳವಾಗಿ ಗಾಯಗೊಳಿಸುತ್ತದೆ.
“ಎಲ್ಲ ಮನುಷ್ಯರೂ ಸಮಾನರಾಗಿ ಸೃಷ್ಟಿಸಲ್ಪಟ್ಟಿದ್ದಾರೆ.” ಇದು ಎಂತಹ ಸೊಗಸಾದ ವಿಚಾರ! ಆದರೂ, ವಾಸ್ತವಿಕತೆಯು ತೀರ ವ್ಯತಿರಿಕ್ತವಾಗಿರುವುದು ಒಂದು ದುರಂತವೇ ಸರಿ!
[ಪುಟ 3 ರಲ್ಲಿರುವ ಚಿತ್ರ ಕೃಪೆ]
UN PHOTO 152113/SHELLEY ROTNER