‘ಮಾನಸಿಕ ಆರೋಗ್ಯದ ಅಸ್ಪಷ್ಟ ದೃಶ್ಯ’
“ಆರೋಗ್ಯ ಆರೈಕೆಯ ಅನೇಕ ಅಂಶಗಳಲ್ಲಿ ಪರಿಣಾಮಕಾರಕ ವೈದ್ಯಕೀಯ ಪ್ರಗತಿಯು ಮಾಡಲ್ಪಟ್ಟಿರುವುದಾದರೂ, ಮಾನಸಿಕ ಆರೋಗ್ಯದ ವಿಷಯದಲ್ಲಿ ಭೂವ್ಯಾಪಕವಾಗಿ ನಾವು ಒಂದು ಅಸ್ಪಷ್ಟ ದೃಶ್ಯವನ್ನು ನೋಡುತ್ತಿದ್ದೇವೆ” ಎಂದು, ಕೆನೇಡಿಯನ್ ಸೊಸೈಟಿ ಫಾರ್ ಇಂಟರ್ನ್ಯಾಷನಲ್ ಹೆಲ್ತ್ನ ಸಿನರ್ಜಿ ಎಂಬ ವಾರ್ತಾಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟ ಒಂದು ಲೇಖನವು ದಾಖಲಿಸುತ್ತದೆ.
ಲೋಕವ್ಯಾಪಕವಾಗಿ 4 ಮಂದಿಯಲ್ಲಿ ಒಬ್ಬರು ಮಾನಸಿಕ, ಭಾವನಾತ್ಮಕ, ಅಥವಾ ವರ್ತನಾ ಸಂಬಂಧಿತ ವ್ಯಾಧಿಯಿಂದ ನರಳುತ್ತಾರೆ ಎಂದು ಒಂದು ವರದಿಯು ಮುಕ್ತಾಯಗೊಳಿಸಿತು. ಪ್ರತಿ ಮೂರು ರೋಗಿಗಳಲ್ಲಿ ಒಬ್ಬರು, ಖಿನ್ನತೆ ಅಥವಾ ಚಿಂತೆಯ ಸಮಸ್ಯೆಗಳಿಂದ ಕಷ್ಟಾನುಭವಿಸುತ್ತಿರುವ ಕಾರಣದಿಂದ ಆರೋಗ್ಯ ಇಲಾಖೆಯವರ ಬಳಿಗೆ ಹೋಗುತ್ತಾರೆ ಎಂದು ಇನ್ನೊಂದು ಅಧ್ಯಯನವು ಸೂಚಿಸಿತು. ಮತ್ತು ಈ ಸಂಖ್ಯೆಗಳು ಏರುತ್ತಿವೆ ಎಂದು ಸಂಶೋಧಕರು ಹೇಳುತ್ತಾರೆ.
ಏಕೆ? ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸೋಷಿಯಲ್ ಮೆಡಿಸಿನ್ ಇಲಾಖೆಯಿಂದ ನಡೆಸಲ್ಪಟ್ಟ ಒಂದು ಅಧ್ಯಯನವು ತಿಳಿಸಿದ್ದೇನೆಂದರೆ, ಖಿನ್ನತೆ, ಸ್ಕೈಸೊಫ್ರೇನಿಯ (ಕವಲುಮನ), ಮತ್ತು ಬುದ್ಧಿಮಾಂದ್ಯತೆಗಳಂತಹ ಅನಾರೋಗ್ಯಗಳು ಅತ್ಯಧಿಕವಾಗುತ್ತಿವೆ. ಏಕೆಂದರೆ “ಹೆಚ್ಚೆಚ್ಚು ಜನರು ದೀರ್ಘ ಕಾಲದ ತನಕ ಜೀವಿಸುತ್ತಿದ್ದಾರೆ.” ಆದರೂ, ದೀರ್ಘ ಕಾಲದ ತನಕ ಜೀವಿಸುವುದು ಇದಕ್ಕಿರುವ ಏಕಮಾತ್ರ ಕಾರಣವಲ್ಲ. ಆರ್ಥಿಕ ಸಮಸ್ಯೆಗಳು ಹಾಗೂ ಆಧುನಿಕ ಜೀವನದ ಅಧಿಕಾಧಿಕ ಒತ್ತಡವು ಸಹ ಇದಕ್ಕೆ ಕಾರಣವಾಗಿದೆ.
ಈ ನಿರಾಶಾಜನಕ ಚಿತ್ರಣವನ್ನು ಹೇಗೆ ಬದಲಾಯಿಸಸಾಧ್ಯವಿದೆ? ಆರೋಗ್ಯ ಆರೈಕೆಯ ಅನೇಕ ಅಂಶಗಳನ್ನು ಗಮನಿಸುವಾಗ, ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಪರಿಣತರು ಹೇಳುತ್ತಾರೆ. ಏಕೆಂದರೆ ಇದು “ಮಾನವ ಸ್ಥಿತಿಗತಿಯನ್ನು ಸುಧಾರಿಸುವುದರಲ್ಲಿ ಕೊನೆಯ ಅಭಿವೃದ್ಧಿ ಕ್ಷೇತ್ರವಾಗಿದ್ದು, ಇನ್ನೂ ಇದರಲ್ಲಿ ಸಾಫಲ್ಯ ಪಡೆಯಲಿಕ್ಕಿದೆ.”