ವಿಮಾನವು ಹೇಗೆ ಹುಟ್ಟಿಬಂತು?
ವಾಯುವಿಗಿಂತಲೂ ಹೆಚ್ಚು ಭಾರವಾದ ಹಾರುವ ಯಂತ್ರಗಳನ್ನು ರಚಿಸುವುದರಲ್ಲಿ ವಿನ್ಯಾಸಕರು ಕೊನೆಗೂ ಯಶಸ್ವಿಯಾದದ್ದು ಹೇಗೆ? ಹಾರುವುದರಲ್ಲಿ ನಿಸ್ಸೀಮರಾಗಿರುವ ಪಕ್ಷಿಗಳ ಕಡೆಗೆ ಅವರು ತಮ್ಮ ಗಮನವನ್ನು ಹರಿಸಿದರು. 1889ರಲ್ಲಿ, ಆಟೊ ಲಿಲ್ಯಂತಾಲ್ ಎಂಬ ಹೆಸರಿನ ಜರ್ಮನ್ ಇಂಜಿನಿಯರನು, ಕೊಕ್ಕರೆಗಳ ಹಾರುವ ಅಭ್ಯಾಸಗಳಿಂದ ಸ್ಫೂರ್ತಿ ಪಡೆದುಕೊಂಡು, (“ವಾಯುಯಾನದ ಆಧಾರವಾಗಿ ಪಕ್ಷಿಗಳ ಹಾರಾಟ”) ಎಂಬ ಪುಸ್ತಕವನ್ನು ಪ್ರಕಾಶಿಸಿದನು. ಎರಡು ವರ್ಷಗಳ ಬಳಿಕ ಅವನು ತನ್ನ ಪ್ರಥಮ ಸರಳವಾದ ಗ್ಲೈಡರನ್ನು ನಿರ್ಮಿಸಿದನು. ಸುಮಾರು 2,000 ಬಾರಿ ಗ್ಲೈಡರ್‌ಗಳಲ್ಲಿ ಹಾರಿದ ಬಳಿಕ, 1896ರಲ್ಲಿ ಲಿಲ್ಯಂತಾಲ್ ಏಕಫಲಕದ ವಿಮಾನದಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿದ್ದಾಗ, ಅಪಘಾತವೊಂದರಲ್ಲಿ ಕೊಲ್ಲಲ್ಪಟ್ಟನು. ಫ್ರಾನ್ಸ್‌ನಲ್ಲಿ ಹುಟ್ಟಿದ ಅಮೆರಿಕನ್ ಇಂಜಿನಿಯರನಾದ ಆಕ್ಟೇವ್ ಶನೂಟ್, ಲಿಲ್ಯಂತಾಲ್‌ನ ವಿನ್ಯಾಸವನ್ನು ಪರಿಷ್ಕರಿಸಿ, ಎರಡು ಫಲಕಗಳುಳ್ಳ ಗ್ಲೈಡರನ್ನು ನಿರ್ಮಿಸಿದನು. ಇದು ಪುನಃ ಒಮ್ಮೆ, ವಾಯುವಿಗಿಂತ ಭಾರವಾದ ಹಾರುವ ಯಂತ್ರದ ವಿನ್ಯಾಸದಲ್ಲಿ ಒಂದು ಮಹತ್ವಪೂರ್ಣ ಪ್ರಗತಿಯಾಗಿತ್ತು.
ಆ ಸಮಯದಲ್ಲೇ ರೈಟ್ ಸಹೋದರರು ರಂಗಕ್ಕೆ ಇಳಿದರು. ಅಮೆರಿಕದ ಓಹಾಯೋವಿನ, ಡೇಟನ್‌ನಲ್ಲಿ ಒಂದು ಸೈಕಲ್ ಅಂಗಡಿಯ ಮಾಲಿಕರಾದ ಆರ್ವಿಲ್ ಮತ್ತು ವಿಲ್‌ಬರ್ ರೈಟ್ ಸಹೋದರರು, ಲಿಲ್ಯಂತಾಲ್ ಮತ್ತು ಶನುಟ್‌ರ ಸಾಧನೆಗಳನ್ನು ಆಧಾರವಾಗಿಟ್ಟುಕೊಂಡು, 1900ರಲ್ಲಿ ತಮ್ಮ ಪ್ರಥಮ ಗ್ಲೈಡಿಂಗ್ ಪ್ರಯೋಗಗಳನ್ನು ಆರಂಭಿಸಿದರು. ಮುಂದಿನ ಮೂರು ವರ್ಷಗಳಲ್ಲಿ ರೈಟ್ ಸಹೋದರರು, ನಾರ್ತ್ ಕ್ಯಾರೊಲೈನದ ಕಿಟಿ ಹಾಕ್ ಎಂಬ ಸ್ಥಳದಲ್ಲಿ ಪದೇ ಪದೇ ಪ್ರಯೋಗಾತ್ಮಕ ಹಾರಾಟಗಳನ್ನು ಮಾಡುತ್ತಾ, ನಿಧಾನವಾಗಿ ಮತ್ತು ಕ್ರಮಬದ್ಧವಾಗಿ ಕೆಲಸಮಾಡಿದರು. ಗಾಳಿ ಸುರಂಗಗಳ ಸಹಾಯದೊಂದಿಗೆ ಅವರು ಹೊಸ ವಿನ್ಯಾಸಗಳನ್ನು ರಚಿಸಿದರು. ಅವರು ತಮಗಾಗಿಯೇ ಮಾಡಿದ ಪ್ರಥಮ ಗಾಳಿ ಸುರಂಗವನ್ನು ಒಂದು ಲಾಂಡ್ರಿಯ ಗಂಜಿ ಪೆಟ್ಟಿಗೆಯಿಂದ ತಯಾರಿಸಿದರು. ಇಂಜಿನನ್ನು ಉಪಯೋಗಿಸಿ ಅವರು ಮಾಡಿದ ಪ್ರಥಮ ಹಾರಾಟಕ್ಕಾಗಿ, ಅವರು ತಮ್ಮ ಸ್ವಂತ ನಾಲ್ಕು ಸಿಲಿಂಡರಿನ, 12-ಅಶ್ವಶಕ್ತಿಯ ಇಂಜಿನನ್ನು ನಿರ್ಮಿಸಿ, ಅದನ್ನು ಒಂದು ಹೊಸ ವಿಮಾನದ ಕೆಳಗಿನ ಫಲಕದ ಮೇಲಿರಿಸಿದರು. ಆ ಇಂಜಿನು, ವಿಮಾನದ ಹಿಂಬದಿಯ ಚುಕ್ಕಾಣಿಯ ಪ್ರತಿಯೊಂದು ಬದಿಯಲ್ಲಿದ್ದ ಮರದ ಎರಡು ಚಾಲಕ ದಂಡಗಳಿಗೆ ಚಾಲಕಶಕ್ತಿಯನ್ನು ನೀಡಿದವು.
1903ರ ಡಿಸೆಂಬರ್ 14ರಂದು, ರೈಟ್ ಸಹೋದರರ ಹೊಸ ಆವಿಷ್ಕಾರವು, ಮೊತ್ತಮೊದಲ ಬಾರಿ, ಅದರ ಮರದ ಉಡಾವಣೆ ದಿಬ್ಬದಿಂದ ಮೇಲೇರಿ, ಮೂರುವರೆ ಸೆಕೆಂಡುಗಳ ವರೆಗೆ ಗಾಳಿಯಲ್ಲಿ ಹಾರಿತು! ಮೂರು ದಿನಗಳ ನಂತರ, ಅವರು ಪುನಃ ಆ ಯಂತ್ರವನ್ನು ಹಾರಿಸಿದರು. ಅದು ಒಂದು ಇಡೀ ನಿಮಿಷದ ವರೆಗೆ ಆಕಾಶದಲ್ಲಿ, 260 ಮೀಟರುಗಳಷ್ಟು ದೂರದ ವರೆಗೆ ಹಾರಿತು. ಆ ವಾಯುವಿಮಾನವು ಯಶಸ್ವಿಯಾಗಿತ್ತು.a
ಆಶ್ಚರ್ಯದ ಸಂಗತಿಯೇನೆಂದರೆ, ಈ ಎದ್ದುಕಾಣುವ ಸಾಧನೆಗೆ ಜಗತ್ತು ಯಾವುದೇ ಗಮನವನ್ನು ಕೊಡಲಿಲ್ಲ. ದ ನ್ಯೂ ಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆಯು ಕೊನೆಗೆ ಜನವರಿ 1906ರಲ್ಲಿ ರೈಟ್ ಸಹೋದರರ ಕುರಿತು ಒಂದು ಕಥೆಯನ್ನು ಪ್ರಕಟಿಸಿದಾಗ, ಅವರ “ಹಾರುವ ಯಂತ್ರವು” ತುಂಬ ಗುಪ್ತವಾಗಿ ನಿರ್ಮಿಸಲ್ಪಟ್ಟಿತೆಂದೂ, ಆ ಸಹೋದರರು 1903ರಲ್ಲಿ “ವಾಯುವಿನಲ್ಲಿ ಹಾರುವುದರಲ್ಲಿ ಕೇವಲ ಸ್ವಲ್ಪ ಮಟ್ಟಿಗಿನ ಯಶಸ್ಸನ್ನು” ಪಡೆದಿದ್ದರೆಂದೂ ಅದು ಹೇಳಿತು. ನಿಜ ಸಂಗತಿಯೇನೆಂದರೆ, ಆ ಐತಿಹಾಸಿಕ ಹಾರಾಟವನ್ನು ಮಾಡಿದ ರಾತ್ರಿಯಂದೇ ಆರ್ವಿಲ್ ತನ್ನ ತಂದೆಗೆ, ವೃತ್ತಪತ್ರಿಕೆಗಳಿಗೆ ಅದನ್ನು ತಿಳಿಸುವಂತೆ ಒಂದು ಟೆಲಿಗ್ರಾಮನ್ನು ಕಳುಹಿಸಿದ್ದನು. ಆದರೆ ಆ ಸಮಯದಲ್ಲಿ, ಅಮೆರಿಕದಲ್ಲಿ ಮೂರು ವಾರ್ತಾಪತ್ರಗಳು ಮಾತ್ರ ಆ ವಿಷಯವನ್ನು ಪ್ರಕಾಶಿಸುವ ಗೊಡವೆಗೆ ಹೋದವು.
ಹಾರುವ ಯಂತ್ರಗಳಿಗೆ ಯಾವುದೇ ವ್ಯಾಪಾರೀ ಭವಿಷ್ಯವಿಲ್ಲವೊ?
ಸಾಮಾನ್ಯ ಜಗತ್ತು, ವಾಯುಯಾನದ ಆರಂಭದ ವರ್ಷಗಳಲ್ಲಿ ಅದರ ಕುರಿತಾಗಿ ಸಂದೇಹವನ್ನು ವ್ಯಕ್ತಪಡಿಸಿತು. ವಾಯುಯಾನದ ಗಮನಾರ್ಹ ಮೂಲಕರ್ತರಲ್ಲಿ ಒಬ್ಬರಾದ ಶನೂಟ್ ಸಹ, 1910ರಲ್ಲಿ ಭವಿಷ್ಯನುಡಿದದ್ದು: “ಸಮರ್ಥ ಪರಿಣತರ ಅಭಿಪ್ರಾಯಕ್ಕನುಸಾರ, ಹಾರುವ ಯಂತ್ರಕ್ಕೆ ವ್ಯಾಪಾರೀ ಭವಿಷ್ಯವನ್ನು ನಿರೀಕ್ಷಿಸುವುದು ನಿರರ್ಥಕ. ಅದರ ಒಯ್ಯುವ ಸಾಮರ್ಥ್ಯಕ್ಕೆ ಒಂದು ಮಿತಿಯಿದೆ ಮತ್ತು ಇದು ಯಾವಾಗಲೂ ಇರುವುದು. ಮತ್ತು ಇದು, ಪ್ರಯಾಣಿಕರನ್ನು ಅಥವಾ ಸರಕನ್ನು ಒಯ್ಯುಲಿಕ್ಕಾಗಿ ಅದರ ಬಳಕೆಯನ್ನು ತಡೆಗಟ್ಟುವುದು.”
ಆದರೆ, ರೈಟ್ ಸಹೋದರರ ಆರಂಭದ ಹಾರಾಟಗಳ ನಂತರದ ವರ್ಷಗಳಲ್ಲಿ, ವಾಯುಯಾನ ತಂತ್ರಜ್ಞಾನವು ಶೀಘ್ರವಾಗಿ ಪ್ರಗತಿಯನ್ನು ಮಾಡಿತು. ಐದು ವರ್ಷಗಳೊಳಗೆ, ಆ ಸಹೋದರರು ಒಂದು ತಾಸಿನಲ್ಲಿ 71 ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣಿಸಬಲ್ಲ ಮತ್ತು 43 ಮೀಟರುಗಳ ಎತ್ತರಕ್ಕೆ ಹಾರಬಲ್ಲ, ಎರಡು ವ್ಯಕ್ತಿಗಳು ಚಲಾಯಿಸಬಲ್ಲ ದ್ವಿರೆಕ್ಕೆಯುಳ್ಳ ವಿಮಾನವನ್ನು ರಚಿಸಿದರು. 1911ರಲ್ಲಿ ಪ್ರಥಮ ಬಾರಿ ಒಂದು ವಿಮಾನವು ಅಮೆರಿಕ ಖಂಡದಾದ್ಯಂತ ಹಾರಿತು. ನ್ಯೂ ಯಾರ್ಕ್‌ನಿಂದ ಕ್ಯಾಲಿಫೋರ್ನಿಯದ ವರೆಗಿನ ಪ್ರಯಾಣಕ್ಕೆ ಸುಮಾರು 49 ದಿನಗಳು ತಗಲಿದವು! Iನೆಯ ವಿಶ್ವ ಯುದ್ಧದ ಸಮಯದಲ್ಲಿ, ವಾಯುನೌಕೆಗಳ ವೇಗವು, ಪ್ರತಿ ತಾಸಿಗೆ 100 ಕಿಲೊಮೀಟರ್‌ಗಳಿಂದ 230ಕ್ಕಿಂತಲೂ ಹೆಚ್ಚು ಕಿಲೋಮೀಟರ್‌ಗಳಿಗೆ ಏರಿತು. ಸ್ವಲ್ಪ ಸಮಯದೊಳಗೆಯೇ, ಅವು 9,000 ಮೀಟರುಗಳಷ್ಟು ಎತ್ತರದಲ್ಲಿ ಹಾರುವ ದಾಖಲೆಯನ್ನು ಮಾಡಿದವು.
ವಾಯುಯಾನದ ದಾಖಲೆಗಳು, 1920ಗಳ ವಾರ್ತಾಪತ್ರಿಕೆಗಳಲ್ಲಿ ಮುಖ್ಯ ಸಮಾಚಾರವಾಗುತ್ತಾ ಇದ್ದವು. ಕರಾವಳಿಯಿಂದ ಕರಾವಳಿಗೆ 27ಕ್ಕಿಂತಲೂ ಕಡಿಮೆ ತಾಸುಗಳಲ್ಲಿ ಪ್ರಯಾಣಿಸುತ್ತಾ, ಇಬ್ಬರು ಅಮೆರಿಕನ್ ಸೈನ್ಯಾಧಿಕಾರಿಗಳು, 1923ರಲ್ಲಿ ಎಲ್ಲಿಯೂ ನಿಲ್ಲದೆ ಅಮೆರಿಕವನ್ನು ಆವರಿಸುವ ಪ್ರಪ್ರಥಮ ವಾಯುಯಾನ ಮಾಡಿದರು. ನಾಲ್ಕು ವರ್ಷಗಳ ಬಳಿಕ, ಚಾರ್ಲ್ಸ್ ಎ. ಲಿಂಡ್‌ಬರ್ಗ್, ನ್ಯೂ ಯಾರ್ಕ್‌ನಿಂದ ಪ್ಯಾರಿಸ್ ವರೆಗೆ 33 ತಾಸುಗಳು ಮತ್ತು 20 ನಿಮಿಷಗಳ ವರೆಗೆ ಎಲ್ಲಿಯೂ ತಂಗದೆ ವಾಯುಯಾನ ಮಾಡುವ ಮೂಲಕ, ತತ್‌ಕ್ಷಣ ಪ್ರಸಿದ್ಧಿಯನ್ನು ಗಳಿಸಿದನು.
ಅಷ್ಟರೊಳಗೆ, ಚಿಕ್ಕಪುಟ್ಟ ವ್ಯಾಪಾರೀ ವಿಮಾನ ಸಂಸ್ಥೆಗಳು ಗಿರಾಕಿಗಳನ್ನು ಆಕರ್ಷಿಸಲಾರಂಭಿಸಿದ್ದವು. 1939ರ ಅಂತ್ಯದೊಳಗೆ, ವಾಯುಯಾನವು ಎಷ್ಟು ಜನಪ್ರಿಯವಾಯಿತೆಂದರೆ ಅಮೆರಿಕದ ವಿಮಾನ ಸಂಸ್ಥೆಗಳು ವಾರ್ಷಿಕವಾಗಿ ಸುಮಾರು 30 ಲಕ್ಷ ಪ್ರಯಾಣಿಕರಿಗೆ ಸೇವಾಸೌಲಭ್ಯವನ್ನು ಒದಗಿಸುತ್ತಿದ್ದವು. 1930ಗಳ ಕೊನೆಯ ಭಾಗದ ಸ್ಟ್ಯಾಂಡರ್ಡ್ ಪ್ರಯಾಣಿಕ ವಿಮಾನವಾದ ಡಿಸಿ-3, ಪ್ರತಿ ತಾಸಿಗೆ 270 ಕಿಲೋಮೀಟರ್‌ಗಳ ವೇಗದಲ್ಲಿ ಕೇವಲ 21 ಪ್ರಯಾಣಿಕರನ್ನು ಒಯ್ಯುತ್ತಿತ್ತು. ಆದರೆ IIನೆಯ ವಿಶ್ವ ಯುದ್ಧದ ಬಳಿಕ, ವ್ಯಾಪಾರೀ ವಾಯುವಿಮಾನಗಳ ಗಾತ್ರವು ಹೆಚ್ಚು ದೊಡ್ಡದಾಯಿತು ಮತ್ತು ಅವು ಪ್ರತಿ ತಾಸಿಗೆ 480ಕ್ಕಿಂತಲೂ ಹೆಚ್ಚು ಕಿಲೋಮೀಟರ್‌ಗಳ ವೇಗದಲ್ಲಿ ಹೋಗುತ್ತಾ, ಹೆಚ್ಚು ಶಕ್ತಿಶಾಲಿಯಾದವು. ಬ್ರಿಟಿಷರು 1952ರಲ್ಲಿ, ವ್ಯಾಪಾರೀ ಟರ್ಬೊಜೆಟ್ ಸೇವೆಯನ್ನು ಆರಂಭಿಸಿದರು. ಮತ್ತು 400 ಆಸನಗಳ ಬೋಯಿಂಗ್ 747ರಂತಹ ಜಂಬೊ ಜೆಟ್‌ಗಳು, ಪ್ರಥಮವಾಗಿ 1970ರಲ್ಲಿ ಆರಂಭಗೊಂಡವು.
1976ರಲ್ಲಿ, ಬ್ರಿಟಿಷ್ ಮತ್ತು ಫ್ರೆಂಚ್ ಇಂಜಿನಿಯರುಗಳ ಒಂದು ತಂಡವು, ಕಾಂಕಾರ್ಡನ್ನು ಪರಿಚಯಿಸಿದಾಗ ಇನ್ನೊಂದು ಸಾಧನೆಯು ಮಾಡಲ್ಪಟ್ಟಿತು. ಅದು, ಪ್ರತಿ ತಾಸಿಗೆ 2,300ಕ್ಕಿಂತಲೂ ಹೆಚ್ಚು ಕಿಲೋಮೀಟರುಗಳ ವೇಗದಲ್ಲಿ, ಅಂದರೆ ಧ್ವನಿಯ ವೇಗಕ್ಕಿಂತಲೂ ಎರಡು ಪಟ್ಟು ಹೆಚ್ಚಿನ ವೇಗದಲ್ಲಿ 100 ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವುಳ್ಳ, ಹಿಂದಕ್ಕೆ ಬಾಗಿರುವ ತ್ರಿಕೋನಾಕಾರದ ರೆಕ್ಕೆಗಳುಳ್ಳ ಜೆಟ್‌ಲೈನರ್ ಆಗಿತ್ತು. ಆದರೆ ವ್ಯಾಪಾರೀ ಸೂಪರ್‌ಸೋನಿಕ್ (ಧ್ವನಿವೇಗಾತೀತ) ವಿಮಾನಗಳನ್ನು ನಡೆಸಲು ತಗಲುವ ಹೆಚ್ಚಿನ ವೆಚ್ಚ, ಅವುಗಳ ವ್ಯಾಪಕ ಬಳಕೆಯನ್ನು ಸೀಮಿತಗೊಳಿಸಿದೆ.
ಜಗತ್ತಿಗೆ ಆಕಾರಕೊಡುವುದು
ನೀವು ಒಂದು ವಿಮಾನದಲ್ಲಿ ಎಂದೂ ಪ್ರಯಾಣಿಸಿರದಿದ್ದರೂ, ತಂತ್ರಜ್ಞಾನದ ಈ ತ್ವರಿತವಾದ ಪ್ರಗತಿಯಿಂದ ನಿಶ್ಚಯವಾಗಿಯೂ ನಿಮ್ಮ ಜೀವನವು ರೂಪಿಸಲ್ಪಟ್ಟಿರಬಹುದು. ವಿಮಾನಗಳ ಮೂಲಕ ಸರಕನ್ನು ರವಾನಿಸುವ ಕಾರ್ಯಾಚರಣೆಗಳು ಭೂಗೋಲವನ್ನು ವ್ಯಾಪಿಸಿವೆ. ಅನೇಕವೇಳೆ, ನಾವು ತಿನ್ನುವ ಆಹಾರ, ನಾವು ತೊಡುವ ಬಟ್ಟೆಗಳು, ಮತ್ತು ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ನಾವು ಉಪಯೋಗಿಸುವ ಮಷೀನುಗಳು ಸಾಗರದಾಚೆಯಿಂದ ಅಥವಾ ಒಂದು ಖಂಡದಾಚೆಯಿಂದ ವಿಮಾನದ ಮೂಲಕ ರವಾನಿಸಲ್ಪಡುತ್ತವೆ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಪತ್ರಗಳು ಮತ್ತು ಪೊಟ್ಟಣಗಳು, ವಿಮಾನದ (ಏರ್‌ಮೇಲ್) ಮೂಲಕ ಸಾಗಿಸಲ್ಪಡುತ್ತವೆ. ದಿನನಿತ್ಯದ ಲೇವಾದೇವಿಗಾಗಿ, ವ್ಯಾಪಾರಿಗಳು ವಿಮಾನದ ಮೂಲಕ ನಡೆಯುವ ಕುರಿಯರ್ ಸೌಲಭ್ಯದ ಮೇಲೆ ತುಂಬ ಅವಲಂಬಿಸುತ್ತಾರೆ. ನಮಗೆ ಲಭ್ಯವಿರುವ ಸರಕುಗಳು ಮತ್ತು ಸೌಲಭ್ಯಗಳು ಹಾಗೂ ಅದಕ್ಕಾಗಿ ನಾವು ತೆರುವ ಬೆಲೆಗಳು, ಇವೆಲ್ಲವುಗಳ ಮೇಲೆ, ಮನುಷ್ಯನಿಗಿರುವ ಹಾರಾಡುವ ಸಾಮರ್ಥ್ಯವು ಪ್ರಭಾವಬೀರಿದೆ.
ವಾಯುಯಾನವು ತೀವ್ರ ಸಾಮಾಜಿಕ ಬದಲಾವಣೆಗಳನ್ನೂ ಉಂಟುಮಾಡಿದೆ. ವಾಯುಯಾನದಿಂದಾಗಿ, ಲೋಕವು ಸಂಕೋಚಗೊಂಡಿದೆ. ನಿಮ್ಮ ಬಳಿ ಹಣವಿರುವಲ್ಲಿ, ಕೆಲವೇ ತಾಸುಗಳೊಳಗೆ ನೀವು ಲೋಕದ ಯಾವುದೇ ಭಾಗವನ್ನೂ ತಲಪಬಹುದು. ಸುದ್ದಿಯು ವೇಗವಾಗಿ ಸಂಚರಿಸುತ್ತದೆ, ಮತ್ತು ಜನರು ಸಹ.
ಪ್ರಗತಿಯ ಬೆಲೆ
ಆದರೆ, ಅಂತಹ ಪ್ರಗತಿಗೆ ಬೆಲೆಯನ್ನು ತೆರಬೇಕಾಗಿದೆ. ವಿಮಾನ ಸಂಚಾರವು ಹೆಚ್ಚುತ್ತಿರುವುದರಿಂದ, ಆಕಾಶವು ಹೆಚ್ಚು ಅಪಾಯಕಾರಿಯಾಗುತ್ತಿದೆ ಎಂದು ಕೆಲವರು ಭಯಪಡುತ್ತಾರೆ. ಪ್ರತಿ ವರ್ಷ, ಖಾಸಗಿ ಮತ್ತು ವ್ಯಾಪಾರೀ ವಿಮಾನಗಳನ್ನೊಳಗೊಂಡಿರುವ ಅಪಘಾತಗಳು ಅನೇಕಾನೇಕ ಜೀವಗಳನ್ನು ಬಲಿತೆಗೆದುಕೊಳ್ಳುತ್ತಿವೆ. “ವಿಮಾನ ಸಂಸ್ಥೆಗಳು ಗಿರಾಕಿಗಳಿಂದ ಹೆಚ್ಚಿನ ಖರ್ಚುಗಳಿಗಾಗುವ ಹಣವನ್ನು ಪಡೆದುಕೊಳ್ಳಲು ಸಾಧ್ಯವಿದ್ದಾಗ, ಕ್ರಮಬದ್ಧವಾಗಿ ಕಾಪಾಡಿಕೊಂಡು ಹೋಗುತ್ತಿದ್ದ ಸುರಕ್ಷೆಯ ಹೆಚ್ಚಿನ ಕ್ರಮಗಳನ್ನು ಸ್ಪರ್ಧಾತ್ಮಕ ಒತ್ತಡಗಳಿಂದಾಗಿ ಬಿಟ್ಟುಬಿಡುತ್ತಿದ್ದಾರೆ,” ಎಂದು ಫಾರ್ಚ್ಯೂನ್ ಪತ್ರಿಕೆಯು ಹೇಳುತ್ತದೆ. ಅಮೆರಿಕದಲ್ಲಿ ವಾಯು ಸುರಕ್ಷೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವಿರುವ, ಫೆಡರಲ್ ಏವಿಯೇಷನ್ ಆ್ಯಡ್‌ಮಿನಿಸ್ಟ್ರೇಷನ್‌ನ ಬಳಿ “ಸಾಕಷ್ಟು ಹಣವಿಲ್ಲ, ಸಾಕಷ್ಟು ಸಿಬ್ಬಂದಿ ಇಲ್ಲ ಮತ್ತು ನಿರ್ವಹಣೆಯು ಚೆನ್ನಾಗಿಲ್ಲ” ಎಂದು ಆ ಪತ್ರಿಕೆಯು ವರದಿಸಿತು.
ಅದೇ ಸಮಯದಲ್ಲಿ, ಹೆಚ್ಚಿನ ಜೆಟ್ ಸಂಚಾರದಿಂದಾಗಿ ಪರಿಣಮಿಸುವ, ವಾಯು ಮತ್ತು ಶಬ್ದ ಮಾಲಿನ್ಯದಿಂದಾಗಿ ಹೆಚ್ಚೆಚ್ಚು ಪರಿಸರವಾದಿಗಳು ಚಿಂತಿತರಾಗುತ್ತಿದ್ದಾರೆ. ಶಬ್ದದ ಸಮಸ್ಯೆಗಳೊಂದಿಗೆ ಸಂಬಂಧಿಸಿದ ಚಿಂತೆಗಳನ್ನು ನಿಭಾಯಿಸುವುದು, “ಲೋಕದ ಪೌರ ವಾಯುಯಾನದಲ್ಲಿರುವ ಹೆಚ್ಚು ವಿಭಾಜಕ ವಾದಾಂಶಗಳಲ್ಲಿ ಒಂದಾಗಿದೆ” ಎಂದು ವಾಯುಯಾನ ವಾರ ಮತ್ತು ಬಾಹ್ಯಾಕಾಶ ತಂತ್ರಜ್ಞಾನ (ಇಂಗ್ಲಿಷ್) ಎಂಬ ಪತ್ರಿಕೆಯು ಹೇಳಿತು.
ವಿಮಾನಗಳು ಹಳೆಯದಾಗುತ್ತಿರುವ ವಾಸ್ತವಾಂಶದಿಂದ ಈ ಸಮಸ್ಯೆಗಳು ಹೆಚ್ಚುತ್ತವೆ: 1990ರಲ್ಲಿ ಪ್ರತಿ 4 ಅಮೆರಿಕನ್ ಪ್ರಯಾಣಿಕ ವಿಮಾನಗಳಲ್ಲಿ ಒಂದು ವಿಮಾನವು 20ಕ್ಕಿಂತಲೂ ಹೆಚ್ಚು ವರ್ಷ ಹಳೆಯದ್ದೂ, ಅವುಗಳಲ್ಲಿ ಮೂರನೆಯ ಒಂದಂಶ, ಉತ್ಪಾದಕರು ಮೂಲತಃ ಇಟ್ಟಿದ್ದಂತಹ “ದೀರ್ಘ ಬಾಳಿಕೆಗಾಗಿರುವ ಉದ್ದೇಶಗಳನ್ನು” ಮೀರಿ ಉಪಯೋಗಿಸಲ್ಪಟ್ಟಿದ್ದಂಥವುಗಳೂ ಆಗಿದ್ದವೆಂದು ಕಂಡುಹಿಡಿಯಲಾಯಿತು.
ಹೀಗೆ, ವಾಯುಯಾನದ ಇಂಜಿನಿಯರುಗಳು ಈಗ ಬೃಹತ್ತಾದ ಪಂಥಾಹ್ವಾನಗಳನ್ನು ಎದುರಿಸುತ್ತಿದ್ದಾರೆ. ಬೆಲೆಗಳು ಗಗನಕ್ಕೇರುತ್ತಿರುವಾಗ ಮತ್ತು ಪರಿಸರದ ಕುರಿತಾದ ಚಿಂತೆಗಳು ಹೆಚ್ಚುತ್ತಿರುವಾಗ, ಹೆಚ್ಚು ಪ್ರಯಾಣಿಕರನ್ನು ಒಯ್ಯಲು ಅವರು ಹೆಚ್ಚು ಸುರಕ್ಷಿತ ಮತ್ತು ಕಡಿಮೆ ಬೆಲೆಯ ವಿಧಾನಗಳನ್ನು ಕಂಡುಹಿಡಿಯಬೇಕು.
ಬೆಲೆಯನ್ನು ಕಡಿಮೆಗೊಳಿಸಲಿಕ್ಕಾಗಿರುವ ಕೆಲವೊಂದು ಪರಿಹಾರಗಳು ಈಗಾಗಲೇ ಹೊರಬಂದಿವೆ. ಏಷಿಯಾವೀಕ್ ಪತ್ರಿಕೆಯಲ್ಲಿ ಬರೆಯುತ್ತಾ ಜಿಮ್ ಎರಿಕ್ಸನ್ ಹೇಳುವುದೇನೆಂದರೆ, ಆಯೆರೋಸ್ಪಾಸ್ಯಾಲ್ ಮತ್ತು ಬ್ರಿಟಿಷ್ ಏರೋಸ್ಪೇಸ್‌ನ ಫ್ರೆಂಚ್-ಬ್ರಿಟಿಷ್ ತಂಡವು, ಶಬ್ದದ ವೇಗಕ್ಕಿಂತಲೂ ಎರಡು ಪಟ್ಟು ಹೆಚ್ಚು ವೇಗದಲ್ಲಿ, ಸುಮಾರು 300 ಪ್ರಯಾಣಿಕರನ್ನು ಒಯ್ಯಬಲ್ಲ ಒಂದು ವಿಮಾನವನ್ನು ನಿರ್ಮಿಸಲು ಯೋಜಿಸುತ್ತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕನಿಗಾಗುವ ವೆಚ್ಚ ಮತ್ತು ಇಂಧನ ಬಳಕೆಯು ಕಡಿಮೆಯಾಗಿರುವುದು. ಮತ್ತು ಅನೇಕ ವಿಮಾನನಿಲ್ದಾಣಗಳಲ್ಲಿ ಆಗುತ್ತಿರುವ ತೀರ ಹೆಚ್ಚಿನ ಸಂಚಾರದಿಂದಾಗಿ, ಕೆಲವು ಉದ್ಯಮಿ ಕನಸಿಗರು, ದೈತ್ಯಾಕಾರದ ಪ್ರಯಾಣಿಕ ಹೆಲಿಕಾಪ್ಟರ್‌ಗಳ ಒಂದು ಹೊಸ ಉತ್ಪಾದನೆಯನ್ನು ಪ್ರಸ್ತಾಪಿಸಿದ್ದಾರೆ. ಪ್ರತಿಯೊಂದು ಹೆಲಿಕಾಪ್ಟರು, 100 ಪ್ರಯಾಣಿಕರನ್ನು ಒಯ್ಯಲು ಸಾಧ್ಯವಿರುವುದು. ಈ ವಾಯುನೌಕೆಗಳು, ಎಂದಾದರೂ ಒಂದು ದಿನ, ಈಗ ಸದ್ಯಕ್ಕೆ ಸಾಮಾನ್ಯವಾದ ವಾಯುವಿಮಾನಗಳು ನಡೆಸುತ್ತಿರುವ ಕಡಿಮೆ ಅಂತರದ ವಾಯು ಸಂಚಾರದಲ್ಲಿ ಹೆಚ್ಚಿನದ್ದನ್ನು ನಿರ್ವಹಿಸುವುವು.
ಬೃಹದ್ಗಾತ್ರದ ಹೆಲಿಕಾಪ್ಟರ್‌ಗಳು ಮತ್ತು ಸೂಪರ್‌ಸಾನಿಕ್ ವಿಮಾನಗಳು, ಮುಂದಿನ ವರ್ಷಗಳಲ್ಲಿ ವಿಮಾನ ಉದ್ಯಮದ ತುರ್ತಿನ ಅಗತ್ಯಗಳನ್ನು ನಿಜವಾಗಿ ಪೂರೈಸಲು ಶಕ್ತವಾಗಿರುವವೊ? ಮಾನವ ಹಾರಾಟಕ್ಕಾಗಿ ‘ಆಕಾಶಗಳನ್ನು ತೆರೆಯುವ’ ಬೆನ್ನಟ್ಟುವಿಕೆಯಲ್ಲಿ ಮನುಷ್ಯನು ಮುಂದೊತ್ತುತ್ತಾ ಇರುವಾಗ, ಸಮಯವೇ ಆ ಪ್ರಶ್ನೆಗೆ ಉತ್ತರವನ್ನು ನೀಡುವುದು.
[ಅಧ್ಯಯನ ಪ್ರಶ್ನೆಗಳು]
a ಅಮೆರಿಕದ ಕಾನೆಟಿಕಟ್‌ನಲ್ಲಿ ವಾಸಿಸುತ್ತಿದ್ದ ಒಬ್ಬ ಜರ್ಮನ್ ವಲಸಿಗನಾದ ಗಸ್ಟಾವ್ ವೈಟ್‌ಹೆಡ್ (ವೈಸ್‌ಕಾಫ್), 1901ರಲ್ಲಿ ಅವನು ರಚಿಸಿದಂತಹ ವಿಮಾನವನ್ನು ಹಾರಿಸಿದನೆಂದು ಕೆಲವರು ಹೇಳುತ್ತಾರೆ. ಆದರೆ ಈ ಪ್ರತಿಪಾದನೆಯನ್ನು ಬೆಂಬಲಿಸಲು ಯಾವುದೇ ಫೋಟೋಗಳಿಲ್ಲ.
[ಪುಟ 6 ರಲ್ಲಿರುವಚಿತ್ರಗಳು]
ಸುಮಾರು 1891ರಲ್ಲಿ, ಆಟೊ ಲಿಲ್ಯಂತಾಲ್
[ಕೃಪೆ]
Library of Congress/Corbis
[ಪುಟ 6,7 ರಲ್ಲಿರುವಚಿತ್ರಗಳು]
1927ರಲ್ಲಿ ಚಾರ್ಲ್ಸ್ ಎ. ಲಿಂಡ್‌ಬರ್ಗ್ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ಪ್ಯಾರಿಸ್‌ಗೆ ಹಾರಿದ ಬಳಿಕ, ಲಂಡನ್‌ನಲ್ಲಿ ಆಗಮಿಸುತ್ತಿರುವುದು
[ಕೃಪೆ]
Corbis-Bettmann
[ಪುಟ 7 ರಲ್ಲಿರುವಚಿತ್ರಗಳು]
ಸಾಪ್‌ವಿತ್ ಕ್ಯಾಮಲ್, 1917
[ಕೃಪೆ]
Museum of Flight/Corbis
[ಪುಟ 7 ರಲ್ಲಿರುವಚಿತ್ರಗಳು]
ಡಿಸಿ-3, 1935
[ಕೃಪೆ]
Photograph courtesy of Boeing Aircraft Company
[ಪುಟ 7 ರಲ್ಲಿರುವಚಿತ್ರಗಳು]
ಸಿಕಾರ್‌ಸ್ಕೀ S-43 ಹಾರುವ ನಾವೆ, 1937ರಲ್ಲಿ
[ಪುಟ 8 ರಲ್ಲಿರುವಚಿತ್ರಗಳು]
ಕಿನಾರೆ ಕಾವಲಿನ ರಕ್ಷಕ ಹೆಲಿಕಾಪ್ಟರ್
[ಪುಟ 8,9 ರಲ್ಲಿರುವಚಿತ್ರಗಳು]
1976ರಲ್ಲಿ ಕಾಂಕಾರ್ಡ್, ಶೆಡ್ಯೂಲ್ಡ್ ಫ್ಲೈಟ್ಸ್‌ಗಳನ್ನು ಆರಂಭಿಸಿತು
[ಪುಟ 8,9 ರಲ್ಲಿರುವಚಿತ್ರಗಳು]
ಆ್ಯಕ್ರೊಬ್ಯಾಟಿಕ್ ಪಿಟ್ಸ್, ಸಾಮ್ಸನ್ ರೆಪ್ಲಿಕಾ
[ಪುಟ 8,9 ರಲ್ಲಿರುವಚಿತ್ರಗಳು]
ಏರ್‌ಬಸ್ ಎ300
[ಪುಟ 9 ರಲ್ಲಿರುವಚಿತ್ರಗಳು]
ಭೂಮಿಯ ವಾಯುಮಂಡಲವನ್ನು ಪುನಃ ಪ್ರವೇಶಿಸಿದ ಬಳಿಕ, ಬಾಹ್ಯಾಕಾಶದ ಶಟಲ್, ಅತಿ ವೇಗದ ಗ್ಲೈಡರ್ ಆಗಿ ಪರಿಣಮಿಸುತ್ತದೆ
[ಪುಟ 9 ರಲ್ಲಿರುವಚಿತ್ರಗಳು]
1978ರಲ್ಲಿ, “ರುಟಾನ್ ವ್ಯಾರೀಈಸ್”