ಅವು ಹಾರುತ್ತಾ ಇರುವಂತೆ ಮಾಡಲು ಏನೆಲ್ಲ ಆವಶ್ಯಕ?
“ಮಹಿಳೆಯರೇ, ಮಹನೀಯರೇ, ನ್ಯೂ ಯಾರ್ಕ್ ನಗರದ ಜಾನ್ ಎಫ್. ಕೆನಡಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸುಸ್ವಾಗತ.” ಆಗಮಿಸುತ್ತಿರುವ ಪ್ರಯಾಣಿಕರಿಗಾಗಿ ಮಾಡಲ್ಪಡುವ ಈ ಘೋಷಣೆಯು, ಅವರು ವಿಮಾನದಿಂದ ಕೆಳಗಿಳಿದು ಬರುತ್ತಿರುವಾಗ ವಿಮಾನದ ಒಳಗೂ ಸುತ್ತಮುತ್ತಲೂ ಬಿರುಸಿನ ಕಾರ್ಯಾಚರಣೆಯನ್ನು ಆರಂಭಿಸುತ್ತದೆ. ಈ ಹಂತದಲ್ಲಿ ವಿಮಾನಕ್ಕೆ ಏನು ಸಂಭವಿಸುತ್ತದೆಂದು ನೀವು ಎಂದಾದರೂ ತಿಳಿಯಲು ಕುತೂಹಲಪಟ್ಟಿದ್ದೀರೊ?
ವ್ಯಾಪಾರಿ ಉದ್ದೇಶವುಳ್ಳ ವಿಮಾನಗಳು, ನೆಲದ ಮೇಲೆ ಸುಮ್ಮನೆ ನಿಂತುಕೊಂಡಿರುವಾಗ ಅಲ್ಲ, ಪ್ರಯಾಣಿಕರನ್ನು ಅಥವಾ ಸರಕನ್ನು ರವಾನಿಸುತ್ತಾ ಹಾರುತ್ತಿರುವಾಗ ಮಾತ್ರ ಹಣವನ್ನು ಗಳಿಸುತ್ತವೆ. ಆದುದರಿಂದ ವಿಮಾನಸಂಸ್ಥೆಗಳು, ತಮ್ಮ ಬಳಿ ಇರುವ ವಿಮಾನಗಳನ್ನು ಸಾಧ್ಯವಿರುವಷ್ಟು ಹೆಚ್ಚು ಮಟ್ಟಿಗೆ ಬಳಸುವ ಗುರಿಯನ್ನಿಡುತ್ತವೆ. ಪ್ರಯಾಣಿಕರು ತಮ್ಮ ಸಾಮಾನು ಸರಂಜಾಮಿಗಾಗಿ ಕಾಯುತ್ತಿರುವಾಗ, ವಿಮಾನವನ್ನು ಮುಂದಿನ ಹಾರಾಟಕ್ಕಾಗಿ ಬೇಗಬೇಗನೇ ಸಿದ್ಧಗೊಳಿಸಲಾಗುತ್ತದೆ. ಇದಕ್ಕೆ ಮುಂಚೆ ವಿಮಾನದಲ್ಲಿದ್ದ ಚಾಲಕ ತಂಡವು ಗಮನಿಸಿರುವ ಯಾವುದೇ ಯಾಂತ್ರಿಕ ಸಮಸ್ಯೆಗಳನ್ನು ಕಂಡುಹಿಡಿಯಲಿಕ್ಕಾಗಿ ಯಂತ್ರಿಗರು (ಮೆಕ್ಯಾನಿಕ್ಸ್) ವಿಮಾನದಲ್ಲಿರುವ ಯಾನ ದಾಖಲೆಯನ್ನು ನೋಡುವ ಮೂಲಕ ಕೆಲಸವನ್ನು ಆರಂಭಿಸುತ್ತಾರೆ. ವಿಮಾನವು ಸುರಕ್ಷಿತವಾಗಿ ಹಾರುವುದನ್ನು ತಡೆಯುವ, ತೊಂದರೆಗಳಿರುವ (ನೋ-ಗೋ ಐಟಮ್ಗಳೆಂದು ಸಹ ಕರೆಯಲಾಗುವ) ಯಾವುದೇ ಐಟಮ್ಗಳಿರುವಲ್ಲಿ ಅದನ್ನು ಸರಿಪಡಿಸಲಾಗುತ್ತದೆ.
ವಿಮಾನದ ಚಕ್ರಗಳು, ಟಯರುಗಳು, ಬ್ರೇಕ್ಗಳು, ಮತ್ತು ಇಂಜಿನ್ ಆಯಿಲ್ನ ಮಟ್ಟಗಳನ್ನು ಪರೀಕ್ಷಿಸಲಾಗುತ್ತದೆ. ಶುಚಿಮಾಡುವ ತಂಡಗಳು ಪ್ರಯಾಣಿಕರ ಕ್ಯಾಬಿನ್ ಅನ್ನು ಸ್ವಚ್ಛಗೊಳಿಸುತ್ತವೆ. ಅಡಿಗೆಕೋಣೆಯಲ್ಲಿ ಪುನಃ ಹೆಚ್ಚಿನ ಆಹಾರ ಮತ್ತು ಪಾನೀಯಗಳನ್ನು ತುಂಬಿಸಿಡಲಾಗುತ್ತದೆ. ವಿಮಾನದ ರೆಕ್ಕೆಗಳಲ್ಲಿರುವ ಟ್ಯಾಂಕುಗಳಲ್ಲಿ ಇಂಧನವನ್ನು ತುಂಬಿಸಲಾಗುತ್ತದೆ. ವಿಮಾನವು ಪುನಃ ಒಮ್ಮೆ ಹೊರಡಲು ಸಿದ್ಧವಾಗುವ ಮುಂಚೆ, ಚಾಲಕ ತಂಡವು ವಿಮಾನದ ಸುತ್ತಲೂ ಒಂದು ಸುತ್ತು ಹಾಕಿ, ಸುರಕ್ಷೆಯನ್ನು ಬಾಧಿಸಬಹುದಾದ ಯಾವುದೇ ವಿಷಯವಿದೆಯೊ ಎಂಬುದನ್ನು ಪರೀಕ್ಷಿಸಿ ನೋಡುತ್ತದೆ.
ಪ್ರತಿದಿನ ಸಾವಿರಾರು ವಿಮಾನಗಳಿಗೆ ಈ ರೀತಿಯ ಸರ್ವಿಸಿಂಗ್ ಮತ್ತು ತತ್ಕ್ಷಣದ ದುರಸ್ತಾಗಿಡುವಿಕೆಯನ್ನು (ಮೇಂಟೆನನ್ಸ್) ಮಾಡಲಾಗುತ್ತದೆ. ಆದರೆ ಒಂದು ದೊಡ್ಡ ಪ್ರಯಾಣಿಕ ವಿಮಾನವನ್ನು ಹಾರಲು ಸುರಕ್ಷಿತವಾಗಿರಿಸುವಂತೆ ಮಾಡಬೇಕಾದ ಕೆಲಸದಲ್ಲಿ ಇದು ಕೇವಲ ಒಂದು ಸಣ್ಣ ಅಂಶವಾಗಿದೆ. ವಾಹನಗಳನ್ನು ಆಗಿಂದಾಗ್ಗೆ ದುರಸ್ತು ಮಾಡಬೇಕಾಗಿರುವಂತೆಯೇ, ವಿಮಾನಗಳಿಗೂ ಕ್ರಮವಾಗಿ ವಿಸ್ತಾರವಾದ ಮತ್ತು ದುಬಾರಿಯಾದ ಮೇಂಟೆನನ್ಸ್ ಪರೀಕ್ಷೆಗಳ ಸರಮಾಲೆಯು ಅತ್ಯಾವಶ್ಯಕ. ವಿಮಾನದ ಮೇಂಟೆನನ್ಸ್ ಕೆಲಸಗಳನ್ನು ಯಾರು ಮಾಡುತ್ತಾರೆ? ಅದನ್ನು ಹೇಗೆ ಮಾಡಲಾಗುತ್ತದೆ?
ವಿಮಾನಗಳು ಯಾನಕ್ಕಾಗಿ ಯೋಗ್ಯವಾಗಿಡಲ್ಪಡುವ ವಿಧ
ಅಮೆರಿಕದ ವಿಮಾನ ಸಾರಿಗೆ ಸಂಘಕ್ಕನುಸಾರ, ಅದರ ಸದಸ್ಯ ವಿಮಾನ ಸಂಸ್ಥೆಗಳು ಅಮೆರಿಕದಲ್ಲಿ ಪ್ರಯಾಣಿಕರನ್ನು ಮತ್ತು ಸರಕನ್ನು ರವಾನಿಸುತ್ತಾ, ಮೊತ್ತ ಆಕಾಶಯಾನ ಸಂಚಾರದಲ್ಲಿ 95 ಪ್ರತಿಶತವನ್ನು ಆವರಿಸುತ್ತವೆ. 1997ರಲ್ಲಿ, ಸುಮಾರು 65,500 ವಿಮಾನ ಯಂತ್ರಿಗರು ಆ ವಿಮಾನ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿದ್ದರು. ಇಂಜಿನೀಯರುಗಳು ಮತ್ತು ಮೇಂಟೆನನ್ಸ್ನ ಇತರ ಸಿಬ್ಬಂದಿಯೊಂದಿಗೆ, ವಿಮಾನದ ಯಂತ್ರಿಗರ ಕೆಲಸವು, ವಿಮಾನವನ್ನು ಯಾನಕ್ಕಾಗಿ ಯೋಗ್ಯ ಸ್ಥಿತಿಯಲ್ಲಿಡುವುದು ಮತ್ತು ಪ್ರಯಾಣವು ಸುಖಕರವಾಗಿರುವಂತೆ ಖಚಿತಪಡಿಸಿಕೊಳ್ಳುವುದೇ ಆಗಿದೆ. ಅದಕ್ಕಾಗಿ, ವಿಮಾನವನ್ನು ಹಾರುವಂತೆ ಮಾಡುವ ವಿಶೇಷವಾದ ಭಾಗಗಳ ಸಮೂಹವನ್ನೇ, ಅಂದರೆ ವಿಮಾನದ ಯಂತ್ರದೊಳಗಿನ ಯಂತ್ರಗಳನ್ನು ಅವರು ಪರೀಕ್ಷಿಸಬೇಕು, ರಿಪೇರಿ ಮಾಡಬೇಕು ಮತ್ತು ಕಳಚಿ ಶೋಧನೆಮಾಡಬೇಕು.a ಶೆಡ್ಯೂಲ್ ಮಾಡಲ್ಪಟ್ಟಿರುವ ಅಂತಹ ಮೇಂಟೆನನ್ಸ್ ಕೆಲಸದಲ್ಲಿ, ನಾಲ್ಕು ಟನ್ಗಿಂತಲೂ ಹೆಚ್ಚು ತೂಕದ ಜೆಟ್ ಇಂಜಿನ್ಗಳನ್ನು ಕಳಚಿ ಶೋಧಿಸುವುದರಿಂದ ಹಿಡಿದು, ಕ್ಯಾಬಿನ್ನ ಜೀರ್ಣವಾಗಿರುವ ರತ್ನಗಂಬಳಿಗಳನ್ನು ಬದಲಾಯಿಸುವುದರ ವರೆಗೆ ಎಲ್ಲ ಕೆಲಸವೂ ಒಳಗೂಡಿದೆ.
ಹೆಚ್ಚಿನ ಯಂತ್ರ ಸಮಸ್ಯೆಗಳಿಗೆ ತತ್ಕ್ಷಣವೇ ಗಮನವನ್ನು ಕೊಡಲಾಗುತ್ತದೆ. ಆದರೆ, ವಿಮಾನ ಮೇಂಟೆನನ್ಸ್ ಕಾರ್ಯಯೋಜನೆಯು, ವಿಮಾನವು ಎಷ್ಟು ಮೈಲಿ ದೂರದ ವರೆಗೆ ಹಾರಿದೆಯೆಂಬುದರ ಮೇಲಲ್ಲ, ಅದನ್ನು ಎಷ್ಟು ತಿಂಗಳುಗಳ ವರೆಗೆ ಉಪಯೋಗಿಸಲಾಗಿತ್ತು ಅಥವಾ ಅದು ಎಷ್ಟು ಆವರ್ತಗಳನ್ನುb ಮಾಡಿದೆ ಎಂಬ ಆಧಾರದ ಮೇಲೆ ಬೇರೆಲ್ಲ ಮೇಂಟೆನನ್ಸ್ ಕೆಲಸಗಳನ್ನು ಮಾಡುವ ಸಮಯ ತಖ್ತೆಯನ್ನು ತಯಾರಿಸುತ್ತದೆ. ವಿಮಾನದ ತಯಾರಕ ಸಂಸ್ಥೆಯು ವಿಮಾನ ಚಾಲಕ ಸಂಸ್ಥೆಗೆ ಮೇಂಟೆನನ್ಸ್ ಸೂಚನೆಗಳನ್ನು ಕೊಡುವುದರೊಂದಿಗೆ ಈ ಕಾರ್ಯಯೋಜನೆಯು ಆರಂಭಗೊಳ್ಳುತ್ತದೆ. ಈ ಸೂಚನೆಗಳು, ಸರಕಾರೀ ವಾಯುಯಾನ ಅಧಿಕಾರಿಗಳಿಗೆ ಸ್ವೀಕೃತವಾಗಿರಬೇಕು. ಪ್ರತಿಯೊಂದು ವಿಮಾನಕ್ಕೆ ಸರಿಹೊಂದುವ ಪ್ರತ್ಯೇಕವಾದ ಮೇಂಟೆನನ್ಸ್ ಕಾರ್ಯಕ್ರಮವು ಇರುತ್ತದೆ. ಇದರಲ್ಲಿ ಅಲ್ಪಸ್ವಲ್ಪ ಪರಿಶೀಲನೆಯಿಂದ ಹಿಡಿದು, ಸಾಧಾರಣವಾದ ಮತ್ತು ಬೃಹತ್ ಪರಿಶೀಲನೆಗಳು ಸೇರಿರುತ್ತವೆ. ಈ ಪರಿಶೀಲನೆಗಳಿಗೆ ಎ, ಬಿ, ಸಿ, ಡಿ, ಎಲ್ ಅಥವಾ ಕ್ಯೂ ಎಂಬ ಅಕ್ಷರಗಳನ್ನು ಕೊಡಲಾಗಿದೆ.
ಒಂದು 747-200 ವಿಮಾನಕ್ಕೆ, 36,000 ತಾಸುಗಳ ಹಾರಾಟದ ಸಮಯವನ್ನು ಪೂರೈಸಲು ಸುಮಾರು ಎಂಟು ವರ್ಷಗಳು ತಗಲಿದವು. ಅದು ಪೂರೈಸಲ್ಪಟ್ಟಾಗ, ಕೆಲವೊಮ್ಮೆ ಡಿ ಚೆಕ್ ಎಂದು ಕರೆಯಲ್ಪಡುವ ಒಂದು ಬೃಹತ್ ಪರಿಶೀಲನೆಗಾಗಿ ಅದು ವಿಮಾನಖಾನೆಗೆ ಹೋಗಬೇಕಾಯಿತು. ಈ ಜಟಿಲವಾದ ಮತ್ತು ಸಮಯ ಕಬಳಿಸುವ ಪರೀಕ್ಷಣೆಯ ಕುರಿತಾಗಿ ತಿಳಿಸುತ್ತಾ, ದುರಸ್ತಿಗಾಗಿ ಓವರ್ಹಾಲ್ ಮತ್ತು ಮೇಂಟೆನನ್ಸ್ (ಇಂಗ್ಲಿಷ್) ಎಂಬ ವಾಯುಯಾನ ನಿರ್ವಹಣೆಯ ಪತ್ರಿಕೆಯು ಹೇಳಿದ್ದು: “ಸಾಧ್ಯವಿರುವಷ್ಟರ ಮಟ್ಟಿಗೆ, ಇಡೀ ವಿಮಾನದ ಒಡಲನ್ನು ಅದರ ಮೂಲ ಸ್ಥಿತಿಗೆ ತರುವುದೇ . . . ಇದರ ಗುರಿಯಾಗಿರುತ್ತದೆ. . . . ಡಿ ಚೆಕ್ ಮಾಡಲಿಕ್ಕಾಗಿ 15,000ದಿಂದ 35,000 ತಾಸುಗಳ ಶ್ರಮ ಆವಶ್ಯಕ ಮತ್ತು ಇದರಿಂದ ಒಂದು ವಿಮಾನವು 15ರಿಂದ 30 ಅಥವಾ ಅದಕ್ಕಿಂತಲೂ ಹೆಚ್ಚು ದಿನಗಳ ವರೆಗೆ ಕೆಲಸಮಾಡದಿರಬಹುದು. ಪೂರ್ಣ ವೆಚ್ಚವು ಸರಾಸರಿ, ಸುಮಾರು 10 ಲಕ್ಷದಿಂದ ಹಿಡಿದು 20 ಲಕ್ಷಗಳ ವರೆಗಿನ ಡಾಲರುಗಳಾಗಿರಬಹುದು.” “ಒಂದು ಸಾಮಾನ್ಯ ಡಿ ಚೆಕ್ಗಾಗಿ 70% ಕೆಲಸಗಾರರು ಮತ್ತು 30% ಸಾಮಾನು ಬೇಕಾಗಿರುತ್ತದೆ,” ಎಂದು ಅಂತರಿಕ್ಷ ಯಾನ ನಿರ್ವಹಣೆಯ ಸಲಹಾ ಸಂಸ್ಥೆಯಾಗಿರುವ ದ ಕೇನಾನ್ ಗ್ರೂಪ್ನಲ್ಲಿ ಕೆಲಸಮಾಡುವ ಹ್ಯಾಲ್ ಕ್ರಿಸ್ಮನ್ ಹೇಳಿದರು. ಆ ವೆಚ್ಚದಲ್ಲಿ ಸ್ವಲ್ಪ ಭಾಗವನ್ನು ಖಂಡಿತವಾಗಿಯೂ ನಿಮ್ಮ ವಿಮಾನದ ಟಿಕೇಟಿನಲ್ಲಿ ಸೇರಿಸಲಾಗುತ್ತದೆ.
ಡಿ ಚೆಕ್ನಲ್ಲಿ ಏನೆಲ್ಲಾ ಒಳಗೂಡಿದೆ?
ವಿಮಾನವನ್ನು ವಿಮಾನಖಾನೆಯೊಳಗೆ ಬಿಟ್ಟ ನಂತರ ಮೇಂಟೆನನ್ಸ್ ತಂಡವು ಕೆಲಸವನ್ನು ಆರಂಭಿಸುತ್ತದೆ. ಈ ವಿಮಾನಖಾನೆಯಲ್ಲಿ, ವಿಮಾನದ ಸರ್ವಿಸಿಂಗ್ ಕ್ಷೇತ್ರಗಳು, ಮೇಂಟೆನನ್ಸ್ ತಂಡಗಳಿಗೆ ಬಿಡಿಭಾಗಗಳನ್ನು ಮತ್ತು ಸೇವಾಸೌಕರ್ಯಗಳನ್ನು ಒದಗಿಸುವ ಇಲಾಖೆಗಳು, ಮತ್ತು ಸಾಮಾನು ಮಳಿಗೆಗಳು ಇವೆ. ವಿಮಾನದ ಕೆಲವೊಂದು ತಲಪಲಾಗದ ಜಾಗಗಳಲ್ಲಿ ಕೆಲಸಮಾಡಲಿಕ್ಕಾಗಿ ಮೇಜುಗಳು, ವೇದಿಕೆಗಳು, ಮತ್ತು ಅಟ್ಟಣೆಗಳನ್ನು ಬೇಕಾಗಿರುವಂತಹ ಸ್ಥಾನಗಳಲ್ಲಿ ತಂದಿರಿಸಲಾಗುತ್ತದೆ. ಸೂಕ್ಷ್ಮವಾದ ಪರಿಶೀಲನೆಯನ್ನು ಸಾಧ್ಯಗೊಳಿಸಲು, ವಿಮಾನದ ಆಸನಗಳು, ನೆಲಹಾಸುಗಳು, ಗೋಡೆಗಳು, ಚಾವಣಿಹಾಸುಗಳು, ಅಡಿಗೆಕೋಣೆಗಳು, ಶೌಚಾಲಯಗಳು, ಮತ್ತು ಬೇರೆಲ್ಲ ಸಲಕರಣೆಗಳನ್ನು ವಿಮಾನದಿಂದ ತೆಗೆದಿರಿಸಲಾಗುತ್ತದೆ. ಹೆಚ್ಚುಕಡಿಮೆ ವಿಮಾನದ ಎಲ್ಲ ಒಳಭಾಗಗಳನ್ನು ಹೊರತೆಗೆಯಲಾಗುತ್ತದೆ. ಕೆಲಸಮಾಡುತ್ತಿರುವವರು ಹಂತಹಂತವಾಗಿ ಸೂಚನೆಗಳನ್ನು ಅನುಸರಿಸುತ್ತಾ, ಲೋಹದಲ್ಲಿ ಯಾವುದೇ ಬಿರುಕುಗಳಿವೆಯೊ ಅಥವಾ ಅದಕ್ಕೆ ಕಿಲುಬುಹಿಡಿದಿದೆಯೊ ಎಂಬ ಗುರುತುಗಳಿಗಾಗಿ ವಿಮಾನವನ್ನು ಪರೀಕ್ಷಿಸುತ್ತಾರೆ. ವಿಮಾನದ ಇಡೀ ಅವರೋಹಣ ಗೇರುಗಳು, ದ್ರವ ಚಾಲಿತ ವ್ಯವಸ್ಥೆಗಳು, ಮತ್ತು ಇಂಜಿನುಗಳು ಸಹ ಬದಲಾಯಿಸಲ್ಪಡಬಹುದು. ಡಿ ಚೆಕ್ಗಾಗಿ ಇಂಜಿನಿಯರುಗಳು, ಟೆಕ್ನಿಕಲ್ ರೈಟರ್ಗಳು, ಗುಣ ನಿಯಂತ್ರಣ ಪರಿವೀಕ್ಷಕರು, ಏವಿಯಾನಿಕ್ಸ್ ಟೆಕ್ನಿಷಿಯನರು,c ಷೀಟ್-ಮೆಟಲ್ ಕಾರ್ಮಿಕರು, ಮತ್ತು ವಿಮಾನದ ಒಡಲು ಹಾಗೂ ಪವರ್ ಪ್ಲ್ಯಾಂಟ್ ಯಂತ್ರಿಗರd ಕೌಶಲಗಳು ಆವಶ್ಯಕವಾಗಿರುತ್ತವೆ. ಇವರಲ್ಲಿ ಹೆಚ್ಚಿನವರು ಸರಕಾರದಿಂದ ಪರವಾನಗಿ ಪಡೆದವರಾಗಿದ್ದಾರೆ. ಇವರೊಂದಿಗೆ, ಕ್ಯಾಬಿನ್ ಸಲಕರಣೆಯ ಯಂತ್ರಿಗರು, ಪೆಯಿಂಟರ್ಗಳು, ಮತ್ತು ಕ್ಲೀನರ್ಗಳನ್ನು ಕೂಡಿಸುವಾಗ, ಮೇಂಟೆನನ್ಸ್ ಸಿಬ್ಬಂದಿಯ ಸಂಖ್ಯೆಯು ಒಂದು ದಿನದಲ್ಲಿ 100ಕ್ಕಿಂತಲೂ ಹೆಚ್ಚಾಗಿರುತ್ತದೆ. ಇತರ ಅನೇಕ ಮಂದಿ, ಅವಶ್ಯವಿರುವ ಸಲಕರಣೆಗಳು, ಬಿಡಿಭಾಗಗಳು, ಮತ್ತು ಈ ಕಾರ್ಯಯೋಜನೆಯ ಇತರ ವಿವರಗಳನ್ನು ನೋಡಿಕೊಳ್ಳುತ್ತಾರೆ.
ಸಮಯ ಗತಿಸಿದಂತೆ, ಹಾರಾಟದ ಸಮಯದಲ್ಲಿನ ಕಂಪನಗಳು, ವಿಮಾನದ ಮೈಕಟ್ಟಿನಲ್ಲಿನ ಒತ್ತಡೀಕರಣದ ಆವರ್ತಗಳು ಮತ್ತು ವಿಮಾನವು ಸಾವಿರಾರು ಸಲ ಮೇಲೇರುವಾಗ ಮತ್ತು ಕೆಳಗಿಳಿಯುವಾಗ ಆಗುವ ಕುಲುಕಾಟವು, ವಿಮಾನದ ರಚನೆಯಲ್ಲಿ ಬಿರುಕುಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ಬಗೆಹರಿಸಲು ವಾಯುಯಾನ ವಿದ್ಯೆಯು, ವೈದ್ಯಕೀಯ ಕ್ಷೇತ್ರದಲ್ಲಿ ರೋಗವನ್ನು ಪತ್ತೆಹಚ್ಚಲು ಉಪಯೋಗಿಸಲ್ಪಡುವಂತಹ ರೀತಿಯ ಸೂತ್ರಗಳನ್ನೇ ಬಳಸುತ್ತದೆ. ಈ ಎರಡೂ ಕ್ಷೇತ್ರಗಳಲ್ಲಿ, ಮಾನವನ ಕಣ್ಣಿಗೆ ಕಾಣದಂತಹ ಅತಿಸೂಕ್ಷ್ಮ ವಿಷಯಗಳನ್ನು ಪತ್ತೆಹಚ್ಚಲು, ರೇಡಿಯಾಲಜಿ, ಅಲ್ಟ್ರಾಸಾನಿಕ್ಸ್, ಮತ್ತು ಎಂಡಾಸ್ಕಪಿಯಂತಹ ಸಾಧನಗಳನ್ನು ಉಪಯೋಗಿಸಲಾಗುತ್ತದೆ.
ಒಂದು ಸಾಮಾನ್ಯ ವೈದ್ಯಕೀಯ ಎಕ್ಸ್-ರೇಗಾಗಿ, ರೋಗಿಯನ್ನು ಫೋಟೊ ಫಿಲ್ಮ್ನ ಒಂದು ಹಾಳೆ ಮತ್ತು ಎಕ್ಸ್-ರೇ ಕಿರಣದ ನಡುವೆ ಮಲಗಿಸಲಾಗುತ್ತದೆ. ಅವರೋಹಣದ ಗೇರುಗಳು, ರೆಕ್ಕೆಗಳು ಮತ್ತು ಇಂಜಿನುಗಳ ಎಕ್ಸ್-ರೇ ತೆಗೆಯಲು, ಮೇಂಟೆನನ್ಸ್ ಇನ್ಸ್ಪೆಕ್ಟರರು ಅಂತಹ ವಿಧಾನಗಳನ್ನೇ ಉಪಯೋಗಿಸುತ್ತಾರೆ. ಉದಾಹರಣೆಗಾಗಿ, ಎಕ್ಸ್-ರೇ ಫಿಲ್ಮ್ನ ಒಂದು ಹಾಳೆಯನ್ನು, ಇಂಜಿನನ ಹೊರಭಾಗದಲ್ಲಿ ಎಲ್ಲಿ ಅಗತ್ಯವಿದೆಯೋ ಆ ಸ್ಥಳದಲ್ಲಿರಿಸಲಾಗುತ್ತದೆ. ಅನಂತರ, ಇಂಜಿನಿನ ಉದ್ದಕ್ಕೂ ಇರುವ ಒಂದು ಟೊಳ್ಳಾದ ಕೊಳವೆಯೊಳಗೆ ಒಂದು ಉದ್ದವಾದ ಲೋಹದ ಟ್ಯೂಬನ್ನು ಇರಿಸಲಾಗುತ್ತದೆ. ಕೊನೆಗೆ, ಆ ಎಕ್ಸ್-ರೇ ಫಿಲ್ಮನ್ನು ಬೆಳಕಿಗೆ ಒಡ್ಡಲು, ಒಂದು ಶಕ್ತಿಶಾಲಿ ಸಮಸ್ಥಾನಿ (ಐಸಟೋಪ್)ಯಾಗಿರುವ, ವಿದ್ಯುತ್ವಿಕಿರಣ ಇರಿಡಿಯಮ್ 192ರ ಒಂದು ಗುಳಿಗೆಯನ್ನು—ಒಂದು ಪೆನ್ಸಿಲ್ ರಬ್ಬರಿಗಿಂತ ಚಿಕ್ಕದು—ಆ ಟ್ಯೂಬ್ನೊಳಗೆ ಸೇರಿಸಲಾಗುತ್ತದೆ. ಡೆವಲಪ್ ಮಾಡಲ್ಪಟ್ಟ ಆ ಚಿತ್ರಗಳು, ಇಂಜಿನಿನಲ್ಲಿ ಏನನ್ನು ರಿಪೇರಿ ಮಾಡಬೇಕು ಅಥವಾ ಆ ಇಂಜಿನನ್ನು ಬದಲಿಮಾಡುವಂತೆ ಅವಶ್ಯಪಡಿಸಬಹುದಾದ ಬಿರುಕುಗಳು ಮತ್ತು ಇನ್ನಿತರ ದೋಷಗಳು ಯಾವುವು ಎಂಬುದನ್ನು ತೋರಿಸಲು ಸಹಾಯಮಾಡುತ್ತವೆ.
ಡಿ ಚೆಕ್ ನಡೆಯುತ್ತಿರುವಾಗ, ವಿಮಾನದ ಇಂಧನ ಮತ್ತು ದ್ರವೀಯ ಪದಾರ್ಥಗಳ ಸ್ಯಾಂಪಲ್ಗಳನ್ನು ಪರೀಕ್ಷಿಸಲಿಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಇಂಧನದ ಈ ಸ್ಯಾಂಪಲ್ಗಳಲ್ಲಿ ಸೂಕ್ಷ್ಮಜೀವಿಗಳು ಕಂಡುಬರುವಲ್ಲಿ, ಜೀವಿನಾಶಕಗಳನ್ನು ಬಳಸಲಾಗುತ್ತದೆ. ಜೆಟ್ ಇಂಧನದಲ್ಲಿರುವ ಸೂಕ್ಷ್ಮಜೀವಿಗಳನ್ನು, ಅಂದರೆ ಗಾಳಿ, ನೀರು ಮತ್ತು ಇಂಧನದ ಮೂಲಕ ಇಂಧನದ ಟ್ಯಾಂಕುಗಳೊಳಗೆ ಸೇರಿಕೊಳ್ಳುವ ಬೂಷ್ಟು ಮತ್ತು ಏಕಾಣುಜೀವಿಗಳನ್ನು ಕೊಲ್ಲಲಿಕ್ಕಾಗಿ, ಟ್ಯಾಂಕುಗಳನ್ನು ಬೈಯೊಸೈಡ್ ಎಂಬ ಒಂದು ರೀತಿಯ ಜೀವಿನಾಶಕದೊಂದಿಗೆ ಸಂಸ್ಕರಿಸಲಾಗುತ್ತದೆ. ಈ ರೀತಿಯ ಸಂಸ್ಕರಣೆಯು ಪ್ರಾಮುಖ್ಯವಾಗಿದೆ ಏಕೆಂದರೆ ಸೂಕ್ಷ್ಮಜೀವಿಯ ಬೆಳವಣಿಗೆಯಿಂದಾಗುವ ಉಪೋತ್ಪನ್ನಗಳಿಂದಾಗಿ, ಟ್ಯಾಂಕುಗಳ ಮೇಲ್ಮೈಯಲ್ಲಿರುವ ಸಂರಕ್ಷಕ ಲೇಪಗಳು ಸವೆದುಹೋಗಬಲ್ಲವು. ಟ್ಯಾಂಕುಗಳಲ್ಲಿರುವ ಇಂಧನ ಅನ್ವೇಷಕಗಳು ಸಹ ಬಾಧಿಸಲ್ಪಟ್ಟು, ಇದರಿಂದ ವಿಮಾನ ಚಾಲಕರಿಗೆ ತಪ್ಪಾದ ಇಂಧನ ಮಾಪಕ ಅಳತೆಗಳು ಸಿಗುವಂತಾಗುತ್ತದೆ.
ಸಾಮಾನ್ಯವಾಗಿ ನಡೆಯುವ ಸವೆತ, ಕಂಪನಗಳು, ಮತ್ತು ಒಳಗಿನ ಸೀಲ್ ಹಾನಿಯಿಂದಾಗಿ, ಇಂಧನ ಟ್ಯಾಂಕುಗಳಲ್ಲಿ ತೂತುಗಳಾಗಿ ಸೋರಲು ಆರಂಭವಾಗಬಹುದು. “ಯಾರು ‘ಮುಳುಕ’ (ಡೈವರ್)ನಾಗುವನು?” ಎಂದು ಒಟ್ಟುಗೂಡಿದ ಡಿ ಚೆಕ್ ತಂಡಕ್ಕೆ ಸೂಪರ್ವೈಸರ್ ಕೇಳುತ್ತಾನೆ. ಹರ್ಷದಾಯಕವಲ್ಲದಿದ್ದರೂ, ತುಂಬ ಆವಶ್ಯಕವಾದ ಈ ಕೆಲಸವನ್ನು ಜಾನ್ ಎಂಬವನಿಗೆ ನೇಮಿಸಲಾಗುತ್ತದೆ. ಫ್ಲಿಪರ್ಗಳಿಲ್ಲದ ಸ್ಕ್ಯೂಬ ಡೈವರ್ನಂತೆ ತೋರುತ್ತಾ, ಅವನು ವಿಶೇಷ ರೀತಿಯ, ಹತ್ತಿಯಿಂದ ತಯಾರಿಸಲ್ಪಟ್ಟಿರುವ ಆಳುದ್ದದ ಉಡುಪನ್ನು ಧರಿಸುತ್ತಾನೆ, ತಾಜಾ ಗಾಳಿಯ ಸರಬರಾಯಿಯನ್ನು ಒದಗಿಸುವ ಶ್ವಾಸಶೋಧಕ ಸಲಕರಣೆಯನ್ನು ಸಿಕ್ಕಿಸಿಕೊಳ್ಳುತ್ತಾನೆ, ಮತ್ತು ತನ್ನೊಂದಿಗೆ ಉಪಕರಣಗಳನ್ನು, ಸೀಲ್ ಮಾಡುವ ಪದಾರ್ಥ, ಮತ್ತು ಒಂದು ಸೇಫ್ಟಿ ಲೈಟ್ ಅನ್ನು ತೆಗೆದುಕೊಂಡು ಹೋಗುತ್ತಾನೆ. ರೆಕ್ಕೆಯ ಕೆಳಭಾಗದಲ್ಲಿರುವ ಒಂದು ಚಿಕ್ಕ ತೆರಪಿನ ಮೂಲಕ, ಖಾಲಿಮಾಡಲ್ಪಟ್ಟಿರುವ ಟ್ಯಾಂಕಿನೊಳಗೆ ಅವನು ನುಸುಳುತ್ತಾನೆ. ಒಳಗೆ ಸೇರಿದ ಬಳಿಕ, ಟ್ಯಾಂಕಿನಲ್ಲಿ ಎಲ್ಲಿ ತೂತಾಗಿದೆಯೆಂಬುದನ್ನು ಕಂಡುಹಿಡಿದು, ಅದನ್ನು ಮುಚ್ಚಿಗೆಯಿಂದ ಮುಚ್ಚಿಬಿಡುತ್ತಾನೆ.
ಒಂದು 747 ವಿಮಾನದ ಟ್ಯಾಂಕುಗಳು ಅದರ ರೆಕ್ಕೆಗಳಲ್ಲಿದ್ದು, ಅವು ಚಿಕ್ಕದ್ದಾದ ತೆರಪುಗಳ ಮೂಲಕ ಜೋಡಿಸಲ್ಪಟ್ಟಿರುವ, ಗೋಡೆಗಳಿರುವ ಕಂಪಾರ್ಟ್ಮೆಂಟ್ಗಳ ದಿಗ್ಭ್ರಮೆಹಿಡಿಸುವ ಜಾಲವಾಗಿದೆ. ಕಿರಿದಾದ ಸ್ಥಳಗಳ ಬಗ್ಗೆ ವಿಪರೀತ ಭಯವಿರುವ ಜನರು ಈ ಇಂಧನದ ಟ್ಯಾಂಕುಗಳೊಳಗೆ ಹೋಗಲಾರರು. ಒಂದು 747-400 ವಿಮಾನದ ಟ್ಯಾಂಕುಗಳು 57,000ಕ್ಕಿಂತಲೂ ಹೆಚ್ಚು ಗ್ಯಾಲನ್ ಇಂಧನವನ್ನು ಹಿಡಿಯಬಲ್ಲವು. ಇಷ್ಟು ಇಂಧನವನ್ನು ಹಿಡಿದುಕೊಳ್ಳುವ ಸಾಮರ್ಥ್ಯದಿಂದಾಗಿಯೇ, ಅದು ಸ್ಯಾನ್ ಫ್ರಾನ್ಸಿಸ್ಕೊ, ಕ್ಯಾಲಿಫೋರ್ನಿಯ, ಅಮೆರಿಕದಿಂದ ಆಸ್ಟ್ರೇಲಿಯದ ಸಿಡ್ನಿಯಷ್ಟು ದೂರ, ಅಂದರೆ 12,000 ಕಿಲೋಮೀಟರ್ಗಳಷ್ಟು ದೂರದ ವರೆಗೆ ತುಂಬ ದೀರ್ಘ ಸಮಯದ ವರೆಗೆ ಎಲ್ಲಿಯೂ ತಂಗದೆ ಹಾರಬಲ್ಲದು.
ನೆಲಮಟ್ಟದಿಂದ ಸುಮಾರು ಮೂರು ಮಳಿಗೆಗಳಷ್ಟು ಎತ್ತರದಲ್ಲಿರುವ, ವಿಮಾನ ಚಾಲಕರ ಸ್ಥಳದಲ್ಲಿ ಒಬ್ಬ ಏವಿಯಾನಿಕ್ಸ್ ಯಂತ್ರಿಗನು, ಟಿವಿಯಂತೆ ಕಾಣುವ ಹವಾಮಾನ ರೇಡಾರ್ ಸೂಚಕ ಪರದೆಯ ಮೇಲೆ ಅಂತರ್ನಿವಿಷ್ಟ ಟೆಸ್ಟ್ ಪ್ಯಾಟರ್ನ್ ಡಿಸ್ಪ್ಲೇಯನ್ನು ಪರೀಕ್ಷಿಸುತ್ತಾನೆ. ವಿಮಾನ ಚಾಲಕರು ಈ ಸಲಕರಣೆಯನ್ನು, ವಿಮಾನದಿಂದ 500 ಕಿಲೊಮೀಟರ್ಗಳಷ್ಟು ದೂರದಲ್ಲಿರಬಹುದಾದ ಗುಡುಗುಮಿಂಚುಗಳ ಚಂಡಮಾರುತಗಳನ್ನು ಮತ್ತು ಪ್ರಕ್ಷುಬ್ಧ ವಾತಾವರಣವನ್ನು ಪತ್ತೆಹಚ್ಚಲು ಉಪಯೋಗಿಸುತ್ತಾರೆ. ಆದುದರಿಂದ ವಿಮಾನ ಚಾಲಕನು, “ಆಸನಪಟ್ಟಿಯನ್ನು ಬಿಗಿದುಕೊಳ್ಳಿರಿ” ಎಂಬ ಸೂಚನಾಫಲಕವನ್ನು ಆನ್ ಮಾಡುವಾಗ, ಅವನು ತನ್ನ ರೇಡಾರ್ ಪರದೆಯ ಮೇಲೆ ಪ್ರಕ್ಷುಬ್ಧ ವಾತಾವರಣವನ್ನು ನೋಡಿದ್ದಾನೆಂದು ಇದರರ್ಥವಾಗಿದೆ. ಆದರೆ ಯಾವುದೇ ರೀತಿಯ ಹಾನಿಯನ್ನು ತಪ್ಪಿಸಲು, ಅನೇಕ ವಿಮಾನ ಸಂಸ್ಥೆಗಳು ಪ್ರಯಾಣಿಕರಲ್ಲಿ ವಿನಂತಿಸುವುದೇನೆಂದರೆ, ಕ್ಯಾಪ್ಟನನು ಸೂಚನಾಫಲಕವನ್ನು ಆನ್ ಮಾಡಿರದ ಸಮಯದಲ್ಲೂ ಅವರು ತಮ್ಮ ಆಸನ ಪಟ್ಟಿಗಳನ್ನು ಯಾವಾಗಲೂ ಬಿಗಿದುಕೊಂಡಿರಬೇಕು. ಮೋಡವಿಲ್ಲದ ಪ್ರದೇಶಗಳಲ್ಲಿ ತೀವ್ರವಾದ ಪ್ರಕ್ಷುಬ್ಧತೆಯ ರೂಪದಲ್ಲಿ ಒಮ್ಮಿಂದೊಮ್ಮೆ ವಾತಾವರಣದಲ್ಲಾಗುವ ಬದಲಾವಣೆಗಳು ಅನೇಕವೇಳೆ ಎಷ್ಟು ಬೇಗನೆ ಆಗುತ್ತವೆಂದರೆ, ವಿಮಾನಚಾಲಕರಿಗೆ ಆ ಸೂಚನಾಫಲಕವನ್ನು ಆನ್ ಮಾಡುವದಕ್ಕೆ ಸಹ ಸಮಯವಿರುವುದಿಲ್ಲ.
ಡಿ ಚೆಕ್ ಮಾಡುವ ಸಮಯದಲ್ಲಿ, ತೇಲು ಕವಚಗಳು ಮತ್ತು ಎಮರ್ಜನ್ಸಿ ಲೈಟಿಂಗ್ನಂತಹ ಸುರಕ್ಷೆಯ ಸಲಕರಣೆಗಳನ್ನು ಪರಿಶೀಲಿಸಲಾಗುತ್ತದೆ ಅಥವಾ ಬದಲಾಯಿಸಲಾಗುತ್ತದೆ. ಪ್ರಯಾಣಿಕರಿಗಾಗಿರುವ ಎಮರ್ಜನ್ಸಿ ಆಮ್ಲಜನಕ ವ್ಯವಸ್ಥೆಯ ಪರೀಕ್ಷೆ ನಡೆಯುತ್ತಿರುವಾಗ, ಆಕ್ಸಿಜನ್ ಮಾಸ್ಕ್ಗಳು, ರೆಂಬೆಗಳಲ್ಲಿರುವ ಕಿತ್ತಳೆಹಣ್ಣುಗಳಂತೆ ತೂಗುತ್ತವೆ. ಜೆಟ್ ವಿಮಾನಗಳು ಸಾಮಾನ್ಯವಾಗಿ ಭೂಮಿಯಿಂದ 6ರಿಂದ 11 ಕಿಲೊಮೀಟರ್ಗಳ ಎತ್ತರದಲ್ಲಿ ಹಾರುತ್ತವೆ. ಅಲ್ಲಿ, ಆಮ್ಲಜನಕದ ಪರಿಮಾಣ ಮತ್ತು ವಾತಾವರಣದ ಒತ್ತಡವು ಕಡಿಮೆಯಾಗಿದ್ದು, ಜೀವವನ್ನು ಪೋಷಿಸಲು ಸಾಕಾಗುವುದಿಲ್ಲ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಾಗುತ್ತದೆ? ವಿಮಾನದ ಒತ್ತಡೀಕರಣ ವ್ಯವಸ್ಥೆಯು, ಹೊರಗಿನ ಗಾಳಿಯನ್ನು ಸೆಳೆದು ಅನಂತರ ಅದನ್ನು ಸಂಪೀಡಿಸುತ್ತದೆ. ಈ ಗಾಳಿಯನ್ನು ಕೊನೆಯಲ್ಲಿ, ಯೋಗ್ಯ ತಾಪಮಾನದಲ್ಲಿ ಕ್ಯಾಬಿನ್ನೊಳಗೆ ಬಿಡಲಾಗುತ್ತದೆ. ಕ್ಯಾಬಿನ್ನಲ್ಲಿರುವ ಗಾಳಿಯ ಒತ್ತಡವು, ಸುರಕ್ಷಿತವಾಗಿರುವ ಮಟ್ಟಗಳಿಗಿಂತ ಕಡಿಮೆಯಾಗುವಲ್ಲಿ, ಮೇಲಿರುವ ಕಂಪಾರ್ಟ್ಮೆಂಟ್ಗಳಿಂದ ಆಕ್ಸಿಜನ್ ಮಾಸ್ಕ್ಗಳು ತಮ್ಮಷ್ಟಕ್ಕೇ ಹೊರಬರುತ್ತವೆ. ಎಲ್ಲಿ ಎಮರ್ಜನ್ಸಿ ಆಮ್ಲಜನಕವು ಇನ್ನು ಮುಂದೆ ಆವಶ್ಯಕವಾಗಿರುವುದಿಲ್ಲವೊ ಆ ಮಟ್ಟಕ್ಕೆ ವಿಮಾನವು ಇಳಿಯುವ ವರೆಗೆ ಪ್ರಯಾಣಿಕರಿಗೆ ಎಮರ್ಜನ್ಸಿ ಆಮ್ಲಜನಕವನ್ನು ಒದಗಿಸಲಾಗುತ್ತದೆ. ಕೆಲವೊಂದು ವಿಮಾನಗಳಲ್ಲಿ, ಆಕ್ಸಿಜನ್ ಮಾಸ್ಕ್ಗಳನ್ನು ಮೇಲಿರುವ ಕಂಪಾರ್ಟ್ಮೆಂಟ್ಗಳಲ್ಲಿ ಅಲ್ಲ, ಬದಲಾಗಿ ಪ್ರಯಾಣಿಕರ ಆಸನದ ಹಿಂದಿನ ಕಂಪಾರ್ಟ್ಮೆಂಟ್ನಲ್ಲಿ ಇಡಲಾಗುತ್ತದೆ. ಈ ಕಾರಣದಿಂದಲೇ, ಆಕ್ಸಿಜನ್ ಮಾಸ್ಕ್ಗಳನ್ನು ಎಲ್ಲಿಡಲಾಗಿವೆಯೆಂದು ತಿಳಿಸಲಾಗುವ, ಯಾನದ ಮುಂಚೆ ಕೊಡಲ್ಪಡುವ ಸೂಚನೆಗಳಿಗೆ ಗಮನಕೊಡುವುದು ಪ್ರಾಮುಖ್ಯವಾಗಿದೆ.
ಒಂದು ಬೃಹತ್ ಮೇಂಟೆನನ್ಸ್ ಚೆಕ್ ಮಾಡಲ್ಪಡುವಾಗ, ಕ್ಯಾಬಿನ್ಗೆ ಹೊಸ ಪ್ಲಾಸ್ಟಿಕ್ ಗೋಡೆಗಳು ಮತ್ತು ಚಾವಣಿ ಹಾಸುಗಳನ್ನು ಹಾಕಲಾಗುತ್ತದೆ ಮತ್ತು ರತ್ನಗಂಬಳಿಗಳು, ಪರದೆಗಳು ಮತ್ತು ಆಸನದ ದಿಂಬಿನ ಹೊದಿಕೆಗಳನ್ನು ಬದಲಾಯಿಸಲಾಗುತ್ತದೆ. ಅಡಿಗೆಕೋಣೆಯ ಸಲಕರಣೆಗಳನ್ನು ಕಳಚಿ, ಶುಚೀಕರಿಸಿ, ನಿರ್ಮಲೀಕರಣ (ಸ್ಯಾನಿಟೈಸ್) ಮಾಡಲಾಗುತ್ತದೆ.
ಹಾರಲು ಸಿದ್ಧ
ಐವತ್ತಾರು ದಿನಗಳ ಪರೀಕ್ಷೆಗಳು, ಪರಿವೀಕ್ಷಣೆಗಳು, ರಿಪೇರಿಗಳು ಮತ್ತು ಮೇಂಟೆನನ್ಸ್ ಬಳಿಕ ವಿಮಾನವು ಈಗ ವಿಮಾನಖಾನೆಯಿಂದ ಹೊರಹೋಗಿ, ಪ್ರಯಾಣಿಕರನ್ನು ಮತ್ತು ಸಾಮಾನುಗಳನ್ನು ರವಾನಿಸಲು ಸಿದ್ಧವಾಗುತ್ತದೆ. ಮೇಂಟೆನನ್ಸ್ ಕಾರ್ಯಾಚರಣೆಗಳ ಸ್ವಲ್ಪ ಅಂಶವನ್ನು ಮಾತ್ರ ಇಲ್ಲಿ ತಿಳಿಸಲಾಗಿದೆ. ಆದರೆ ವಿಮಾನವು ಪುನಃ ಹಾರುವ ಮುಂಚೆ, ಅದರ ಎಲ್ಲ ವ್ಯವಸ್ಥೆಗಳು ಚೆನ್ನಾಗಿ ನಡೆಯುತ್ತವೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಒಂದು ವಿಶೇಷ ತಂಡವು ಅದನ್ನು ಪರೀಕ್ಷಿಸಲು ಒಂದು ಸಲ ಹಾರಿಸುತ್ತದೆ. ನಾವು ಪ್ರಯಾಣಿಸುವಂತಹ ವಿಮಾನದ ಯಂತ್ರಗಳನ್ನು ಸುಸ್ಥಿತಿಯಲ್ಲಿಡಲಿಕ್ಕಾಗಿ ಎಷ್ಟೊಂದು ಪರಿಣತಿ ಮತ್ತು ತಾಂತ್ರಿಕತೆಯನ್ನು ಬಳಸಲಾಗುತ್ತದೆಂಬುದನ್ನು ಸಂಕ್ಷಿಪ್ತವಾಗಿ ಪರಿಗಣಿಸುವುದು, ಧೈರ್ಯ ತುಂಬುವಂತಹದ್ದಾಗಿದೆ.
ಆದರೆ, ವಿಮಾನದ ಮೇಂಟೆನನ್ಸ್ನಲ್ಲಿ ಅತ್ಯುತ್ತಮವಾದ ಏಕಮಾತ್ರ ಸಾಧನವು, ಮಾನವ ಅಂಶವಾಗಿದೆ—ತೀಕ್ಷ್ಣವಾದ ದೃಷ್ಟಿ ಮತ್ತು ಜಾಗೃತ ಮನಸ್ಸುಗಳು. ತರಬೇತುಹೊಂದಿರುವ ಸಿಬ್ಬಂದಿ ವರ್ಗವು ತಮ್ಮ ಕೆಲಸಗಳನ್ನು ತುಂಬ ಗಂಭೀರವಾಗಿ ಪರಿಗಣಿಸುತ್ತದೆ. ನ್ಯೂನ ಮೇಂಟೆನನ್ಸ್ನಿಂದಾಗಿ ದೊಡ್ಡ ಅನಾಹುತಗಳು ಉಂಟಾಗಬಹುದೆಂದು ಅವರಿಗೆ ಗೊತ್ತಿದೆ. ನಿಮ್ಮ ಪ್ರವಾಸವು ಸುರಕ್ಷಿತವೂ ಸುಖಕರವೂ ಆಗಿದ್ದು, ನಿಮ್ಮನ್ನು ನಿಮ್ಮ ಗಮ್ಯಸ್ಥಾನಕ್ಕೆ ಬೇಗನೆ ತಲಪಿಸುವ ಭರವಸಾರ್ಹವಾದ ವಿಮಾನವನ್ನು ಒದಗಿಸುವುದೇ ಅವರ ಗುರಿಯಾಗಿದೆ.—ಅಮೆರಿಕದ ವಾಯುಯಾನ ಸುರಕ್ಷತೆಯ ಒಬ್ಬ ಇನ್ಸ್ಪೆಕ್ಟರರ ದತ್ತಲೇಖನ.
[ಅಧ್ಯಯನ ಪ್ರಶ್ನೆಗಳು]
a ಒಂದು 747-400 ವಿಮಾನಕ್ಕೆ 60 ಕೋಟಿ ಭಾಗಗಳಿವೆ. ಅದರಲ್ಲಿ ಅರ್ಧ ಭಾಗವು ಬಂಧನಿಗಳಾದ ರಿವೆಟ್ಸ್ ಮತ್ತು ಬೋಲ್ಟ್ಸ್ ಹಾಗೂ 275 ಕಿಲೊಮೀಟರ್ನಷ್ಟು ದೂರದ ವರೆಗಿನ ವಿದ್ಯುತ್ ತಂತಿಯ ವ್ಯವಸ್ಥೆಯಾಗಿರುತ್ತದೆ.
b ಒಂದು ಆವರ್ತವೆಂದರೆ, ಒಮ್ಮೆ ಮೇಲೇರುವುದು ಮತ್ತು ಒಮ್ಮೆ ಕೆಳಗಿಳಿಯುವುದು (ಟೇಕ್-ಆಫ್ ಮತ್ತು ಲ್ಯಾಂಡಿಂಗ್) ಆಗಿದೆ.
c “ಏವಿಯಾನಿಕ್ಸ್” ಎಂಬ ಪದವು, ವಾಯುಯಾನ ಇಲೆಕ್ಟ್ರಾನಿಕ್ಸ್ನ ಸಂಕ್ಷಿಪ್ತ ಪದವಾಗಿದೆ.
d ಒಬ್ಬ ಮೆಕ್ಯಾನಿಕನು ಅಥವಾ ಮೆಕ್ಯಾನಿಕಳು ವಿಮಾನದ ರಚನೆಯಲ್ಲಿ, ವ್ಯವಸ್ಥೆಗಳಲ್ಲಿ ಅಥವಾ ಇಂಜಿನುಗಳಲ್ಲಿ ಯಾವುದೇ ಕೆಲಸವನ್ನು ಮಾಡಿರುವಲ್ಲಿ, ಅದನ್ನು ವಿಮಾನದ ಒಡಲು ಮತ್ತು ಪವರ್ಪ್ಲ್ಯಾಂಟ್ ಸರ್ಟಿಫಿಕೆಟ್ನಲ್ಲಿ ಅನುಮೋದಿಸುವರು.
[ಪುಟ 12 ರಲ್ಲಿರುವ ಚಿತ್ರ ಕೃಪೆ]
Courtesy of Pan Am Historical Foundation
Archives and Special Collections, University of Miami Library
[ಪುಟ 13 ರಲ್ಲಿರುವ ಚಿತ್ರ ಕೃಪೆ]
Courtesy of United Airlines
Courtesy of United Airlines
Courtesy of United Airlines