ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g99 5/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ತಾಯಿಯ ಹಾಲೇ ಸರ್ವೋತ್ತಮ
  • ನಿದ್ರಿಸುವ ವಾಹನ ಚಾಲಕರು
  • ದಾರಿದ್ರ್ಯ—ಬಡ ಮತ್ತು ಶ್ರೀಮಂತ ದೇಶಗಳನ್ನು ಬಾಧಿಸುತ್ತದೆ
  • ಮಕ್ಕಳು—ಯುದ್ಧದ ಬಲಿಪಶುಗಳು
  • ಅಸ್ವಸ್ಥರಾಗಿರುವುದೇ ವಾಸಿ
  • ಎಷ್ಟು ಬ್ಯಾಕ್ಟೀರಿಯಗಳು?
  • ಚಟವನ್ನು ಬಿಟ್ಟುಬಿಡಲು ಇನ್ನೂ ಕಾಲ ಮೀರಿಲ್ಲ
  • ವಿಜಯ ಮತ್ತು ವಿಷಾದಾಂತ
    ಎಚ್ಚರ!—1998
  • ಕ್ಷಯರೋಗದ—ಹೋರಾಟದಲ್ಲಿ ಒಂದು ನವೀನ ನಿರೋಧಕ
    ಎಚ್ಚರ!—1999
  • ಒಂದು ಮಾರಕ ಮೈತ್ರಿ
    ಎಚ್ಚರ!—1998
  • ಕ್ಷಯರೋಗವು ಪುನರಾಕ್ರಮಿಸುತ್ತದೆ!
    ಎಚ್ಚರ!—1996
ಇನ್ನಷ್ಟು
ಎಚ್ಚರ!—1999
g99 5/8 ಪು. 28-29

ಜಗತ್ತನ್ನು ಗಮನಿಸುವುದು

ತಾಯಿಯ ಹಾಲೇ ಸರ್ವೋತ್ತಮ

“ತಾಯಿಯ ಹಾಲೇ ದಿವ್ಯೌಷಧ” ಎಂದು ನ್ಯೂಸ್‌ವೀಕ್‌ ಹೇಳುತ್ತದೆ. “ತಾಯಿಯ ಹಾಲನ್ನು ಕುಡಿಯುವ ಶಿಶುಗಳು ಮೆದುಳಿನ ಬೆಳವಣಿಗೆಗಾಗಿ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳುತ್ತವೆ. ಮತ್ತು ಇದು ಅಲರ್ಜಿ, ಸಾಂಕ್ರಾಮಿಕಗಳಿಂದ ಹಿಡಿದು ಭೇದಿ, ಇಸಬು ಮತ್ತು ನ್ಯೂಮೋನಿಯದ ವರೆಗಿನ ರೋಗವನ್ನು ಕಡಿಮೆಮಾಡುತ್ತದೆ.” ತಾಯಂದಿರು ತಮ್ಮ ನವಜಾತ ಶಿಶುಗಳಿಗೆ ಕಡಿಮೆಪಕ್ಷ ಒಂದು ವರ್ಷದ ತನಕವಾದರೂ ಮೊಲೆಹಾಲುಣಿಸಬೇಕೆಂದು, ಶಿಶುರೋಗ ತಜ್ಞರ ಅಮೆರಿಕದ ಸಂಸ್ಥೆ ಹಾಗೂ ಅಮೆರಿಕದ ಆಹಾರದ ಒಕ್ಕೂಟವು ಪ್ರೋತ್ಸಾಹಿಸುತ್ತದೆ. “ಆದರೂ ಈ ವಿಶೇಷವಾದ ಸಂಪನ್ಮೂಲವನ್ನು ಉಪಯೋಗಿಸುವುದೇ ವಿರಳ” ಎಂದು ನ್ಯೂಸ್‌ವೀಕ್‌ ಹೇಳುತ್ತದೆ. ಏಕೆ? ಅನೇಕ ವೇಳೆ, ತಪ್ಪುಕಲ್ಪನೆಯೇ ಇದಕ್ಕೆ ಕಾರಣವಾಗಿದೆ. ತಮ್ಮ ಮಕ್ಕಳ ಆರೋಗ್ಯವನ್ನು ಕಾಪಾಡುವಷ್ಟು ಹಾಲನ್ನು ತಾವು ಉತ್ಪಾದಿಸುವುದಿಲ್ಲವೆಂದು ಕೆಲವು ತಾಯಂದಿರು ಚಿಂತಿಸುತ್ತಾರೆ. ಎಳೆಯ ವಯಸ್ಸಿನಲ್ಲೇ ಇತರ ಶಿಶು ಆಹಾರಗಳನ್ನು ಕೊಡಬೇಕೆಂದು ಕೆಲವರು ನೆನಸುತ್ತಾರೆ. “ಗಟ್ಟಿಯಾದ ಆಹಾರವನ್ನು ಕ್ರಮೇಣವಾಗಿ ಕೂಡಿಸುತ್ತಾ, 6 ತಿಂಗಳುಗಳ ವರೆಗೆ ಮಕ್ಕಳಿಗೆ ಬೇಕಾದ ಪೌಷ್ಟಿಕಾಂಶಗಳನ್ನು ಹೆಚ್ಚಿನ ತಾಯಂದಿರು ಒದಗಿಸಸಾಧ್ಯವಿದೆ” ಎಂದು ಆ ಲೇಖನವು ತಿಳಿಸುತ್ತದೆ. “ಅವುಗಳು ಇನ್ನಾವ ಆಹಾರವನ್ನೇ ಸೇವಿಸಲಿ, 2 ವರ್ಷ ಪ್ರಾಯದ ಮಕ್ಕಳು ತಾಯಿಯ ಹಾಲಿನಲ್ಲಿರುವ ಪ್ರತಿವಿಷ ಮತ್ತು ಕೊಬ್ಬಿನಾಂಶವುಳ್ಳ ಆಮ್ಲಗಳಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ.” ತಾಯಂದಿರಿಗೂ ಪ್ರಯೋಜನವಿದೆ: ಮೊಲೆಯುಣಿಸುವುದು ಸ್ತನದ ಕ್ಯಾನ್ಸರನ್ನು ಕಡಿಮೆಮಾಡಿ, ಪ್ರಸವದ ಅನಂತರದ ತೂಕನಷ್ಟವನ್ನು ತ್ವರೆಗೊಳಿಸುತ್ತದೆ.

ನಿದ್ರಿಸುವ ವಾಹನ ಚಾಲಕರು

“ನಿದ್ರೆಯ ಮಂಪರಿನಲ್ಲಿರುವ ಚಾಲಕರು ಅಮಲೇರಿದ ಚಾಲಕರಷ್ಟೇ ಅಪಾಯಕಾರಿಗಳಾಗಿದ್ದಾರೆ ಎಂದು ಕೆಲವು ಪರಿಣತರು ಹೇಳುತ್ತಾರೆ” ಎಂದು ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ವರದಿಸುತ್ತದೆ. “[ಮೋಟಾರು ವಾಹನಗಳ] ಅಪಘಾತಗಳಲ್ಲಿ ನಿದ್ರೆಯು ವಹಿಸುವ ಪಾತ್ರವನ್ನು ತೀರ ಅಲ್ಪವೆಂದು ಎಣಿಸಲಾಗುತ್ತದೆ, ಮತ್ತು ನಿದ್ರೆಯ ಮಂಪರಿನಲ್ಲಿರುವ ಚಾಲಕರು ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯವನ್ನು ಉಂಟುಮಾಡುವವರಾಗಿದ್ದಾರೆ.” ಟೊರಾಂಟೊ ಸ್ಟಾರ್‌ಗೆ ಅನುಸಾರ, ಜನರಿಗೆ ತಾವು ಯಾವಾಗ ನಿದ್ರೆಯ ವಶವಾಗುತ್ತೇವೆ ಅಥವಾ ತಾವು ಎಷ್ಟು ನಿದ್ರಿಸುತ್ತೇವೆಂಬುದನ್ನು ಕಂಡುಹಿಡಿಯಲಿಕ್ಕೆ ಆಗುವುದಿಲ್ಲ ಎಂದು ಅಧ್ಯಯನಗಳು ಕಂಡುಕೊಂಡಿವೆ. “ಹಸಿವು ಮತ್ತು ಉಸಿರಾಟದಂತೆ ನಿದ್ರೆಯು ಆವಶ್ಯಕ” ಎಂದು ಟ್ರ್ಯಾಫಿಕ್‌ ಸುರಕ್ಷತೆಗಾಗಿರುವ ಅಮೆರಿಕನ್‌ ಆಟೋಮೊಬೈಲ್‌ ಅಸೋಸಿಯೇಷನ್‌ ಫೌಂಡೇಷನ್‌ ಪ್ರತಿನಿಧಿಯಾದ ಸ್ಟೆಫನೀ ಫಾಲ್‌ ಹೇಳುತ್ತಾರೆ. “ನಿಮ್ಮ ದೇಹಕ್ಕೆ ನಿದ್ರೆಯು ಆವಶ್ಯಕವಾದಾಗ, ನೀವು ತಟ್ಟನೇ ನಿದ್ರಾವಶರಾಗುತ್ತೀರಿ.” ವಾಹನವನ್ನು ಚಲಾಯಿಸುತ್ತಿರುವಾಗ ಪದೇ ಪದೇ ಆಕಳಿಸುತ್ತಿರುವುದಾದರೆ ಅಥವಾ ಕಣ್ಣುಗಳು ಮುಚ್ಚಿಕೊಳ್ಳುತ್ತಿರುವುದಾದರೆ ಇಲ್ಲವೇ ಕಾರು ಅಡ್ಡಾದಿಡ್ಡಿಯಾಗಿ ಹೋಗುವುದಾದರೆ ಏನು ಮಾಡಬೇಕು? “ಎಚ್ಚರದಿಂದಿರಲು, ಕಾರಿನ ಕಿಟಕಿಯ ಗಾಜನ್ನು ಇಳಿಸುವುದು ಅಥವಾ ರೆಡಿಯೋವಿನ ಧ್ವನಿಯನ್ನು ಎತ್ತರಿಸುವುದು ಸಾಕಾಗದು” ಎಂದು ದ ಟೊರಾಂಟೋ ಸ್ಟಾರ್‌ ಹೇಳುತ್ತದೆ. “ಕ್ಯಾಫೀನ್‌ ಸ್ವಲ್ಪ ಸಮಯದ ವರೆಗೆ ಎಚ್ಚರದಿಂದಿರುವಂತೆ ಸಹಾಯಮಾಡುವುದಾದರೂ, ಶರೀರ ವೈಜ್ಞಾನಿಕವಾಗಿರುವ ನಿದ್ರೆಯ ಆವಶ್ಯಕತೆಯನ್ನು ಅದು ಕಡಿಮೆ ಮಾಡುವುದಿಲ್ಲ.” ಚಾಲಕರಿಗೆ ನಿದ್ರೆ ಬರುವುದಾದರೆ, ಸುರಕ್ಷಿತ ಸ್ಥಳದಲ್ಲಿ ವಾಹನವನ್ನು ನಿಲ್ಲಿಸಿ, ನಸುನಿದ್ದೆಯನ್ನು ಮಾಡಬೇಕು ಎಂದು ಸಲಹೆ ನೀಡಲಾಗುತ್ತದೆ.

ದಾರಿದ್ರ್ಯ—ಬಡ ಮತ್ತು ಶ್ರೀಮಂತ ದೇಶಗಳನ್ನು ಬಾಧಿಸುತ್ತದೆ

ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ಗನುಸಾರ, ವಿಶ್ವದ ಅತ್ಯಂತ ಶ್ರೀಮಂತ ದೇಶಗಳಲ್ಲಿಯೂ ದಾರಿದ್ರ್ಯವು ಹೆಚ್ಚಾಗುತ್ತಿದೆ ಎಂದು ಇತ್ತಿಚೀನ ಅಮೆರಿಕದ ವರದಿಯು ಬಹಿರಂಗಪಡಿಸುತ್ತದೆ. ಔದ್ಯೋಗಿಕರಣವಾದ ದೇಶಗಳಲ್ಲಿ ಅನೇಕ ಜನರು, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯಾರೈಕೆಯಂತಹ “ಮಾನವನ ಮೂಲಭೂತ ಅಗತ್ಯ”ಗಳಿಂದ ವಂಚಿತರಾಗಿದ್ದಾರೆ. ವರದಿಗೆ ಅನುಸಾರವಾಗಿ, ಅಮೆರಿಕದ ಸುಮಾರು 16.5 ಪ್ರತಿಶತ ಜನರು ದಾರಿದ್ರ್ಯದಲ್ಲಿ ಜೀವಿಸುತ್ತಾರೆ. ಬ್ರಿಟನಿನಲ್ಲಿ, 15 ಪ್ರತಿಶತ ಜನರು ದಾರಿದ್ರ್ಯವನ್ನು ಅನುಭವಿಸುತ್ತಾರೆ. ಔದ್ಯೋಗೀಕರಣದ ಒಂದು ಲೋಕದಲ್ಲಿ, 10 ಕೋಟಿಗಳಷ್ಟು ಜನರು ನಿರ್ಗತಿಕರಾಗಿದ್ದಾರೆ, 3.7 ಕೋಟಿಗಳಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ, ಮತ್ತು ಹೆಚ್ಚುಕಡಿಮೆ 20 ಕೋಟಿಗಳಷ್ಟು ಜನರು “60ಕ್ಕಿಂತಲೂ ಕಡಿಮೆ ಆಯುಷ್ಯವನ್ನು” ಹೊಂದಿದ್ದಾರೆ.

ಮಕ್ಕಳು—ಯುದ್ಧದ ಬಲಿಪಶುಗಳು

ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾದ ಓಲಾರಾ ಓಟೂನೂ ಅವರಿಗನುಸಾರ, ಕಳೆದ ದಶಕದಲ್ಲಿ, ಯುದ್ಧ ಮತ್ತು ಸಂಘರ್ಷಣಗಳು ಸುಮಾರು 20 ಲಕ್ಷ ಮಕ್ಕಳ ಜೀವವನ್ನು ಬಲಿತೆಗೆದುಕೊಂಡವು. 10 ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳನ್ನು ಅನಾಥರನ್ನಾಗಿ ಮಾಡಿದವು, ಮತ್ತು ಯುದ್ಧದಿಂದ 60 ಲಕ್ಷ ಮಕ್ಕಳು ಗಂಭೀರ ರೀತಿಯಲ್ಲಿ ಗಾಯಗೊಂಡರು ಇಲ್ಲವೇ ಅಂಗವಿಕಲರಾದರು ಎಂದು ಜರ್ಮನಿಯ ನ್ಯೂಸ್‌ಪೇಪರಾದ ಗ್ರೀವೆನ ಟ್ಸೈಟುಂಗ್‌ ವರದಿಸುತ್ತದೆ. ಮಕ್ಕಳನ್ನು ಗುರಿಹಲಗೆಗಳಾಗಿ ಮಾಡುವುದನ್ನು ಅಮೆರಿಕದ ಸೆಕ್ಯೂರಿಟಿ ಆಡಳಿತ ಮಂಡಳಿಯು ಖಂಡಿಸಿದೆ. ಇನ್ನೂ ಹೆಚ್ಚಾಗಿ ಚಿಂತೆಗೀಡುಮಾಡುವ ವಿಷಯವು, ಲೋಕದಾದ್ಯಂತ 3,00,000ಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಸೈನಿಕರನ್ನಾಗಿ ಮಾಡಲಾಗುತ್ತಿದೆ ಎಂಬುದೇ. ಇವರಲ್ಲಿ ಅನೇಕರನ್ನು ಮಿಲಿಟರಿ ಸೇವೆಗೆ ಬಲವಂತವಾಗಿ ಸೇರಿಸಿಕೊಳ್ಳಲಾಗುತ್ತಿದೆ ಮತ್ತು ಇವರಲ್ಲಿ ಮೂರನೇ ಒಂದು ಭಾಗ ಹುಡುಗಿಯರಾಗಿದ್ದಾರೆ. ಬಾಲ ಸೈನಿಕರು ಸೂಸೈಡ್‌ ಸ್ಕ್ವಾಡ್‌ಗಳಾಗಿ ಉಪಯೋಗಿಸಲ್ಪಡುತ್ತಾರೆ. ಸರಕಾರೇತರ ಸಂಘಟನೆಗಳಿಂದ ಹೊಸದಾಗಿ ಸ್ಥಾಪಿಸಲ್ಪಟ್ಟ ಒಕ್ಕೂಟವು, ಸೈನಿಕರಾಗಲು ಕನಿಷ್ಟ ವಯಸ್ಸನ್ನು 18ಕ್ಕೆ ಏರಿಸುವಂತೆ, ಅಂತಾರಾಷ್ಟ್ರೀಯ ನಿಯಮಗಳ ಬೇಡಿಕೆಯನ್ನು ಹಾಕಿದೆ.

ಅಸ್ವಸ್ಥರಾಗಿರುವುದೇ ವಾಸಿ

“ಟಿಬಿ, ವಿಶ್ವದ ನಂ. 1 ಹಂತಕನಾಗಿಯೇ ಉಳಿದಿದೆ” ಎಂದು ಕೇಪ್‌ ಟೈಮ್ಸ್‌ ನ್ಯೂಸ್‌ಪೇಪರ್‌ ವರದಿಮಾಡುತ್ತದೆ. ದಕ್ಷಿಣ ಆಫ್ರಿಕದಲ್ಲಿ ತೀರ ಬಡವರಾಗಿರುವ ಜನರನ್ನು ಇದು ಬಾಧಿಸುತ್ತಿದೆ. ಮತ್ತು ಇದು ಪ್ರತಿ ವರ್ಷ 13,000ಕ್ಕಿಂತಲೂ ಹೆಚ್ಚಿನ ಜನರನ್ನು ಕೊಲ್ಲುತ್ತದೆ ಹಾಗೂ ಅನೇಕರನ್ನು ತೀರ ನಿಶ್ಶಕ್ತರನ್ನಾಗಿ ಮಾಡುತ್ತದೆ. ನಿಶ್ಶಕ್ತರಿಗಾಗಿ, ಸರಕಾರವು ಭತ್ಯವನ್ನು ಕೊಟ್ಟಿದೆ ಮತ್ತು ಟಿಬಿ ಚಿಕಿತ್ಸೆಗಳು ಲಭ್ಯವಿವೆ. ಆದರೆ ಕೆಲಸವು ವಿರಳವಾಗಿದ್ದು, ಅದರಿಂದ ತೀರ ಕಡಿಮೆ ಹಣವು ಸಿಗುವುದರಿಂದ, ಸರಕಾರವು ಕೊಡುವ ಭತ್ಯೆಯನ್ನು ನಿರಂತರವಾಗಿ ಪಡೆದುಕೊಳ್ಳಲಿಕ್ಕಾಗಿ, ಕೆಲವು ರೋಗಿಗಳು ಟಿಬಿ ಚಿಕಿತ್ಸೆಯನ್ನು ನಿಲ್ಲಿಸಿಬಿಡುತ್ತಾರೆ. “ಸಣ್ಣಪುಟ್ಟ ಕೆಲಸಗಳಲ್ಲಿ ಪಡೆದುಕೊಳ್ಳುತ್ತಿದ್ದ ಹಣಕ್ಕಿಂತ ಇದು 10 ಪಟ್ಟು ಹೆಚ್ಚಾಗಿದೆ” ಎಂದು ದಕ್ಷಿಣ ಆಫ್ರಿಕದ ಟಿಬಿ ಆರೈಕೆಯ ಸಂಘಟನೆಯ ಡೈರೆಕ್ಟರರಾದ, ರೀಯ ಗ್ರ್ಯಾಂಟ್‌ ವಿವರಿಸುತ್ತಾರೆ. “ಇಷ್ಟೊಂದು ಹಣವನ್ನು ನೋಡಿದಾಕ್ಷಣ, ರೋಗಿಗಳು ತಾವು ಸ್ವಸ್ಥರಾಗಿರುವುದಕ್ಕಿಂತಲೂ ಅಸ್ವಸ್ಥರಾಗಿರುವುದೇ ಉತ್ತಮವೆಂದು ನೆನಸುತ್ತಾರೆ.”

ಎಷ್ಟು ಬ್ಯಾಕ್ಟೀರಿಯಗಳು?

ಬ್ಯಾಕ್ಟೀರಿಯಗಳು ಭೂಮಿಯ ಮೇಲಿರುವ ಸಾಮಾನ್ಯ ಜೀವರೂಪಗಳಾಗಿವೆ. ಅವುಗಳು ಆಳವಾದ ಸಾಗರದ ತಳದಲ್ಲಿ ಮತ್ತು ವಾಯುಮಂಡಲದಲ್ಲಿ 60 ಕಿಲೊಮೀಟರುಗಳ ಎತ್ತರದಲ್ಲಿಯೂ ಇವೆ. ಅವುಗಳ ಮೊತ್ತವು ಇತರ ಯಾವುದೇ ಜೀವಿಗಳಿಗಿಂತ ಹೆಚ್ಚಾಗಿದೆ. ಅವುಗಳ ಸಂಖ್ಯೆಯನ್ನು ಅಂದಾಜುಮಾಡಲಿಕ್ಕಾಗಿ ಮೊದಲ ಬಾರಿಗೆ ಬಹಳ ಶ್ರದ್ಧಾಪೂರ್ವಕವಾಗಿ ಮಾಡಿರಬಹುದಾದ ಪ್ರಯತ್ನವನ್ನು, ಈಗ ಅಮೆರಿಕದ ಜಾರ್ಜಿಯ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಪ್ರಕಾಶಿಸಿದ್ದಾರೆ. ಅವರ ಅಂದಾಜು, ಐದು ಸಂಖ್ಯೆಯ ಅನಂತರ 30 ಸೊನ್ನೆಗಳಾಗಿರುತ್ತವೆ. “ಬ್ಯಾಕ್ಟೀರಿಯ ರೋಗಗಳನ್ನು ಉಂಟುಮಾಡುತ್ತದೆ ಎಂದು ಜನರು ನೆನಸುತ್ತಾರೆ. ಆದರೆ ಕೇವಲ ಸಣ್ಣ ಭಾಗವು ರೋಗವನ್ನು ಉಂಟುಮಾಡುತ್ತದೆ. ಅನೇಕ ಬ್ಯಾಕ್ಟೀರಿಯಗಳು ನಿರಪಾಯಿಗಳು ಮಾತ್ರವಲ್ಲ ಬಹಳ ಪ್ರಾಮುಖ್ಯವಾದದ್ದಾಗಿವೆ, ಏಕೆಂದರೆ ಇವುಗಳು ಪಚನಕ್ರಿಯೆಯಂತಹ ಚಟುವಟಿಕೆಗಳಿಗೆ ಸಹಾಯವನ್ನು ನೀಡುತ್ತವೆ” ಎಂದು ಲಂಡನಿನ ದ ಟೈಮ್ಸ್‌ ಹೇಳುತ್ತದೆ. ಆಶ್ಚರ್ಯಕರವಾಗಿ, 92ರಿಂದ 94 ಪ್ರತಿಶತ ಬ್ಯಾಕ್ಟೀರಿಯಗಳು ಸಮುದ್ರ ತಳದಲ್ಲಿ 10 ಸೆಂಟಿಮೀಟರ್‌ಗಿಂತಲೂ ಕೆಳಗೆ ಮಡ್ಡಿಯಲ್ಲಿ ಮತ್ತು 9 ಮೀಟರುಗಳಿಗಿಂತ ಆಳವಾದ ನೆಲದಲ್ಲಿ ಕಂಡುಬರುತ್ತವೆ. ಈ ಕ್ಷೇತ್ರಗಳಲ್ಲಿ ಜೀವವಿಲ್ಲ ಎಂದು ಮೊದಲು ನೆನಸಲಾಗಿತ್ತು. ಬ್ಯಾಕ್ಟೀರಿಯದ ಶುಷ್ಕ ತೂಕದ ಸುಮಾರು ಅರ್ಧಾಂಶವು, ಜೀವಕ್ಕೆ ಆವಶ್ಯಕ ಘಟಕವಾದ ಕಾರ್ಬನ್‌ ಅನ್ನು ಒಳಗೊಂಡಿದೆ. “ಬ್ಯಾಕ್ಟೀರಿಯದಲ್ಲಿರುವ ಕಾರ್ಬನಿನ ಪ್ರಮಾಣವು ವಿಶ್ವದಲ್ಲಿರುವ ಎಲ್ಲ ಸಸ್ಯಗಳಲ್ಲಿರುವ ಕಾರ್ಬನಿಗೆ ಸಮವಾಗಿದೆ” ಎಂದು ದ ಟೈಮ್ಸ್‌ ಹೇಳುತ್ತದೆ.

ಚಟವನ್ನು ಬಿಟ್ಟುಬಿಡಲು ಇನ್ನೂ ಕಾಲ ಮೀರಿಲ್ಲ

60ರ ಪ್ರಾಯದಲ್ಲಿ ಸಹ ಧೂಮಪಾನಮಾಡುವುದನ್ನು ಬಿಟ್ಟುಬಿಡುವ ಜನರು ಕ್ಯಾನ್ಸರ್‌ ರೋಗದ ಅಪಾಯವನ್ನು ಮಹತ್ತರವಾಗಿ ಕಡಿಮೆಮಾಡುತ್ತಾರೆ ಎಂಬುದನ್ನು 40 ವರ್ಷಗಳ ಒಂದು ಅಧ್ಯಯನವು ಕಂಡುಕೊಂಡಿತೆಂದು ಬ್ರಿಟನಿನ ಡೇಲಿ ಟೆಲಿಗ್ರ್ಯಾಫ್‌ ವರದಿಸುತ್ತದೆ. ಇಂಗ್ಲೆಂಡಿನ ಸಟನ್‌ನಲ್ಲಿರುವ, ಕ್ಯಾನ್ಸರ್‌ ಸಂಶೋಧನಾ ಸಂಸ್ಥೆಯ ಪ್ರೊಫೆಸರ್‌ ಜೂಲ್ಯನ್‌ ಪೀಟೋ ಹೇಳುವುದು: “ಧೂಮಪಾನವು ಎಷ್ಟು ಹಾನಿಯನ್ನು ಉಂಟುಮಾಡುತ್ತದೆ ಎಂಬುದನ್ನು ನಾವು ಕಳೆದ ವರ್ಷವಷ್ಟೇ ತಿಳಿದುಕೊಂಡೆವು. ಈ ಹಿಂದೆ ನಾವು ನೆನಸಿದ್ದಂತೆ ಕಾಲಂಶವಲ್ಲ, ಅರ್ಧಾಂಶ ಧೂಮಪಾನಿಗಳನ್ನು ಕೊಲ್ಲುತ್ತದೆ ಮತ್ತು ವೃದ್ಧಾಪ್ಯದಲ್ಲೂ [ಧೂಮಪಾನವನ್ನು] ಬಿಟ್ಟುಬಿಡುವುದು ನಿಜವಾಗಿಯೂ ಪ್ರಯೋಜನಕಾರಿಯಾಗಿದೆ ಎಂಬುದು ತಿಳಿದುಬಂತು.” ಧೂಮಪಾನದಿಂದ ಉಂಟಾಗುವ ಅಪಾಯದ ಕುರಿತು ಮಕ್ಕಳಿಗೆ ಕ್ರಮವಾಗಿ ಎಚ್ಚರಿಕೆಯನ್ನು ನೀಡಲಾಗುತ್ತಿದೆ. ಆದರೆ ಹೊಗೆಸೊಪ್ಪು ಸೇವನೆಯನ್ನು ಬಿಟ್ಟುಬಿಡುವುದು ಶ್ವಾಸಕೋಶದ ಕ್ಯಾನ್ಸರನ್ನು ಮಹತ್ತರವಾಗಿ ಕಡಿಮೆಮಾಡಸಾಧ್ಯವಿದೆ ಎಂಬುದನ್ನು ವೃದ್ಧ ಜನರು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಪೀಟೋ ಹೇಳುತ್ತಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ