ಯುವ ಜನರು ಪ್ರಶ್ನಿಸುವುದು . . .
ಕೃಶಕಾಯಳಾಗುವ ಹುಚ್ಚು ನನಗೇಕೆ?
“ನನ್ನ ಮನಸ್ಸಿನಲ್ಲಿ ಭಾರಿ ತುಮುಲವು ಎದ್ದಿದೆ. ಮನಸ್ಸಿನ ಒಂದು ಭಾಗದಲ್ಲಿ ತಿನ್ನಬೇಕೆಂಬ ಬಲವಾದ ಆಕಾಂಕ್ಷೆಯಿದೆ. ಆದರೆ ಅದೇ ಸಮಯದಲ್ಲಿ ಇನ್ನೊಂದು ಮನಸ್ಸು ಬೇಡ ಬೇಡವೆಂದು ಹೇಳುತ್ತಿದೆ. ಏಕೆಂದರೆ ನಾನು ತುಂಬ ದಪ್ಪಗಾಗುತ್ತೇನೆಂಬ ಹೆದರಿಕೆ ನನಗಿದೆ.”—ಜೇಮೀ.
ಯಾವುದು ನಿಮಗೆ ಎಲ್ಲದಕ್ಕಿಂತ ಹೆಚ್ಚು ಭಯ ಹುಟ್ಟಿಸುತ್ತದೆ? ಅನೇಕ ಹುಡುಗಿಯರು, ಸ್ವಲ್ಪವೂ ಸಂದೇಹಿಸದೆ, ದಪ್ಪಗಾಗುವುದೇ ಎಂದು ಉತ್ತರಿಸುತ್ತಾರೆ. ವಾಸ್ತವದಲ್ಲಿ, ಇಂದಿನ ಯುವತಿಯರಿಗೆ, ನ್ಯೂಕ್ಲಿಯರ್ ಯುದ್ಧ, ಕ್ಯಾನ್ಸರ್ ಅಥವಾ ಹೆತ್ತವರನ್ನು ಕಳೆದುಕೊಳ್ಳುವ ಭಯಕ್ಕಿಂತಲೂ ದಪ್ಪಗಾಗುವುದೇ ಹೆಚ್ಚು ಭಯವನ್ನುಂಟುಮಾಡುತ್ತದೆ ಎಂದು ಸಮೀಕ್ಷೆಯು ಹೊರಗೆಡಹಿತು!
ಕೆಲವೊಮ್ಮೆ ದಪ್ಪಗಾಗುತ್ತೇವೆಂಬ ಚಿಂತೆಗಳು ತೀರ ಎಳೆಯ ವಯಸ್ಸಿನಲ್ಲೇ ಪ್ರಾರಂಭವಾಗುತ್ತದೆ. ಹದಿಹರೆಯಕ್ಕೆ ಕಾಲಿಡುವ ಮುಂಚೆ, ಅನೇಕ ಹುಡುಗಿಯರು “ಸ್ಥೂಲ ಮಾತುಕತೆ”ಗೆ ಕೂಡಿಬರುತ್ತಾರೆ ಎಂದು ಕ್ಯಾಥ್ರನ್ ಸೈನರ್-ಅಡ್ಯಾರ್ ಬರೆಯುತ್ತಾರೆ. ಅಂದರೆ ಅವರು ತಮ್ಮ ಶರೀರಗಳ ನ್ಯೂನತೆಗಳ ಬಗ್ಗೆ ಕೀಳಾಗಿ ಮಾತಾಡಿಕೊಳ್ಳುತ್ತಾರೆ. ಅದು ಕೇವಲ ಮಾತಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡುತ್ತದೆ. 2,379 ಹುಡುಗಿಯರ ಒಂದು ಸಮೀಕ್ಷೆಯಲ್ಲಿ, ಶೇಕಡ 40ರಷ್ಟು ಹುಡುಗಿಯರು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮತ್ತು ಇವರು ಕೇವಲ ಒಂಬತ್ತು ಮತ್ತು ಹತ್ತು ವರ್ಷ ಪ್ರಾಯದವರಾಗಿದ್ದರು!
ಈ ಯುವತಿಯರಲ್ಲಿ ಅನೇಕರು ಸಕಾಲದಲ್ಲಿ, ಗೀಳಿನ ಡೈಯಟ್‌ಗಳಿಗೆ ಬಲಿಬೀಳಬಹುದು. ಕೆಲವರು 20 ವರ್ಷ ಪ್ರಾಯದ ಜೆನಳ ರೀತಿಯಲ್ಲಿ ದುಃಖಾಂತವನ್ನು ಹೊಂದಬಹುದು. 160 ಸೆಂಟಿಮೀಟರುಗಳಷ್ಟು ಎತ್ತರದ, ಈ ಯುವತಿಯು ಕೇವಲ 40 ಕಿಲೋಗ್ರ್ಯಾಮ್‌ಗಳಷ್ಟಿದ್ದಾಳೆ! “ನನಗೆ ಊಟ ಮಾಡಲು ಇಷ್ಟವಿಲ್ಲ ಅಷ್ಟೇ. ಏಕೆಂದರೆ, ತೂಕವನ್ನು ಕಳೆದುಕೊಳ್ಳಲು ಮೂರು ವರ್ಷಗಳು ತಗಲಿದವು, ಆದರೆ ದಪ್ಪಗಾಗಲು ಒಂದೇ ಒಂದು ತಿಂಗಳು ಸಾಕು, ಇದೇ ನನಗೆ ಒಂದು ದೊಡ್ಡ ಚಿಂತೆಯಾಗಿದೆ” ಎಂದು ಜೆನ ಹೇಳುತ್ತಾಳೆ.
ಜೆನಳ ಭಾವನೆಗಳನ್ನು ನೀವು ಸಹ ಅರ್ಥಮಾಡಿಕೊಳ್ಳಸಾಧ್ಯವಿದೆ. ಸುಂದರವಾಗಿ ಕಾಣಿಸಿಕೊಳ್ಳಲಿಕ್ಕಾಗಿ ನೀವು ಸಹ ಕೃಶಕಾಯರಾಗಲು ಇಷ್ಟಪಟ್ಟಿದ್ದಿರಬಹುದು. ನೀವು ಹೇಗೆ ಕಾಣಿಸುತ್ತೀರೆಂಬುದುರ ಬಗ್ಗೆ ಚಿಂತಿತರಾಗುವುದು ನಿಜವಾಗಿಯೂ ತಪ್ಪಲ್ಲ. ಆದರೆ ಜೆನಳ ವಿಷಯದಲ್ಲಿಯಾದರೊ ಅದು ಬೇರೆಯೇ ಆಗಿತ್ತು. ಕೃಶಕಾಯಳಾಗುವ ಹುಚ್ಚು, ಹೆಚ್ಚುಕಡಿಮೆ ಅವಳ ಜೀವಕ್ಕೆ ಅಪಾಯವನ್ನು ತಂದೊಡ್ಡಿತು. ಹೇಗೆ?
ಹೊಟ್ಟೆಗಿಲ್ಲದೆ ಸಾಯುವುದು
ಜೆನ ಆ್ಯನರೆಕ್ಸಿಯಾ ನರ್ವೋಸ (ಆಹಾರಮಾಂದ್ಯ) ಎಂಬ ಅಪಾಯಕಾರಿ ಆಹಾರ ವ್ಯಾಧಿಯಿಂದ ಬಳಲುತ್ತಿದ್ದಾಳೆ. ಮೇಲೆ ತಿಳಿಸಿದ ಜೇಮೀ ಕೂಡ ಇದೇ ವ್ಯಾಧಿಯನ್ನು ಹೊಂದಿದ್ದಾಳೆ. ಸ್ವಲ್ಪ ಸಮಯದ ವರೆಗೆ, ಈ ಹುಡುಗಿಯರು ಅಕ್ಷರಾರ್ಥವಾಗಿ ಆಹಾರವನ್ನು ಸೇವಿಸದೇ ಇದ್ದರು. ಮತ್ತು ಈ ರೀತಿಯ ಸ್ಥಿತಿಯಲ್ಲಿ ಇನ್ನೂ ಅನೇಕರು ಇದ್ದಾರೆ. 100ರಲ್ಲಿ ಒಬ್ಬ ಹುಡುಗಿಯು ಆಹಾರಮಾಂದ್ಯದಿಂದ ಬಳಲುತ್ತಿರುತ್ತಾಳೆ ಎಂದು ಅಂದಾಜುಮಾಡಲಾಗುತ್ತದೆ. ಅಂದರೆ, ಕೋಟ್ಯಂತರ ಯುವತಿಯರು—ಪ್ರಾಯಶಃ ನಿಮಗೆ ಪರಿಚಯವಿರುವ ಒಬ್ಬರು ಸಹ—ಇದರಿಂದ ಬಳಲುತ್ತಿದ್ದಾರೆ!a
ಆಹಾರಮಾಂದ್ಯವು ತಿಳಿಯದೇ ಬರಬಲ್ಲದು. ಒಂದೆರಡು ಕಿಲೊಗ್ರ್ಯಾಮ್‌ಗಳ ತೂಕವನ್ನು ಕಳೆದುಕೊಳ್ಳಲಿಕ್ಕಾಗಿ ಒಬ್ಬ ಹುಡುಗಿಯು ಅಪಾಯವಿಲ್ಲದಿರುವ ರೀತಿಯಲ್ಲಿ ಡೈಯಟಿಂಗ್ ಮಾಡಬಹುದು. ಆದರೆ, ಅವಳು ತೂಕವನ್ನು ಕಳೆದುಕೊಂಡ ಅನಂತರವೂ ತೃಪ್ತಳಾಗುವುದಿಲ್ಲ. ಕನ್ನಡಿಯ ಮುಂದೆ ನಿಂತು ನೋಡುವಾಗ, “ಓಹ್, ನಾನು ಇನ್ನೂ ದಪ್ಪವಾಗಿಯೇ ಇದ್ದೇನೆ!” ಎಂದು ಅಸಮ್ಮತಿಯಿಂದ ಅವಳು ಉದ್ಗರಿಸುತ್ತಾಳೆ. ಆದುದರಿಂದ ಇನ್ನೂ ಸ್ವಲ್ಪ ತೂಕವನ್ನು ಇಳಿಸಲು ನಿರ್ಣಯಿಸುತ್ತಾಳೆ. ಇನ್ನೂ ಸ್ವಲ್ಪ ತೂಕ ಇಳಿಸೋಣ ಎಂಬ ವಿಷಯವು ಹೀಗೆ ಮುಂದುವರಿಯುತ್ತಾ ಹೋಗುತ್ತದೆ. ಆಗ ಆಹಾರಮಾಂದ್ಯ ರೋಗವು ಉಂಟಾಗುತ್ತದೆ.
ಡೈಯಟ್ ಮಾಡುವವರೆಲ್ಲರೂ ಆಹಾರಮಾಂದ್ಯ ರೋಗಿಗಳಾಗಿದ್ದಾರೆ ಎಂಬುದು ಇದರ ಅರ್ಥವಲ್ಲ. ಕೆಲವರಿಗೆ ತೂಕ ಕಡಿಮೆ ಮಾಡುವುದು ನ್ಯಾಯವಾದ ಚಿಂತೆಯಾಗಿರುತ್ತದೆ ಮತ್ತು ಅಂತಹವರು ಕೆಲವೊಂದು ಕಿಲೋಗ್ರ್ಯಾಮ್‌ಗಳನ್ನು ಕಡಿಮೆಮಾಡುವುದು ಒಳ್ಳೆಯದು. ಆದರೆ ಅನೇಕ ಹುಡುಗಿಯರಿಗೆ ತಮ್ಮ ಶರೀರದ ಬಗ್ಗೆ ತಪ್ಪು ಕಲ್ಪನೆಯಿರುತ್ತದೆ. ಎಫ್‌ಡಿಏ ಕನ್ಸ್ಯೂಮರ್ ಶರೀರದ ಕುರಿತಾಗಿರುವ ತಪ್ಪು ಕಲ್ಪನೆಯನ್ನು ಸೊಟ್ಟಗನ್ನಡಿಯಲ್ಲಿ ನೋಡುವುದಕ್ಕೆ ಹೋಲಿಸುತ್ತದೆ. “ನೀವು ನಿಮ್ಮನ್ನು ತುಂಬ ದಪ್ಪಗಿರುವವರಂತೆ ನೋಡುತ್ತೀರಿ” ಎಂದು ಆ ಪತ್ರಿಕೆಯು ಹೇಳುತ್ತದೆ.
ಹೀಗೆ, ಆಹಾರಮಾಂದ್ಯ ರೋಗಿಗೆ, ಅವಳು ಕಡ್ಡಿಯಂತೆ ತೆಳ್ಳಗಾಗಿರುವುದಾದರೂ, ತೂಕವನ್ನು ಗಳಿಸಿಕೊಳ್ಳುವ ಭಯವನ್ನು ಹುಟ್ಟಿಸುತ್ತದೆ. ತೂಕವನ್ನು ಪಡೆದುಕೊಳ್ಳದೇ ಇರುವುದಕ್ಕಾಗಿ ಅವಳು ವ್ಯಾಯಾಮ ಮಾಡಲು ತನ್ನನ್ನು ನಿರ್ಬಂಧಿಸಿಕೊಳ್ಳಬಹುದು. “ಪುನಃ ತೂಕವನ್ನು ಹೆಚ್ಚಿಸಿಕೊಂಡಿಲ್ಲ” ಎಂಬುದನ್ನು ಖಚಿತಪಡಿಸಿಕೊಳ್ಳಲು ಅವಳು ದಿನವೊಂದರಲ್ಲಿ ಹಲವಾರು ಬಾರಿ ತೂಕದ ತ್ರಾಸನ್ನು ಹತ್ತಬಹುದು. ಅವಳು ತಿನ್ನುವಾಗ, ಕೇವಲ ಸ್ವಲ್ಪವೇ ತೆಗೆದುಕೊಳ್ಳಬಹುದು ಇಲ್ಲವೇ ತಿನ್ನದೇ ಇರಬಹುದು. “ನನ್ನ ತಾಯಿಯು ಕೊಡುತ್ತಿದ್ದ ಟಿಫನ್ ಕ್ಯಾರಿಯರ್ ಅನ್ನು ನಾನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದೆ, ಆದರೆ ಊಟವನ್ನು ತಿನ್ನದೇ ಅದನ್ನು ಹಾಗೆಯೇ ಚೆಲ್ಲಿಬಿಡುತ್ತಿದ್ದೆ” ಎಂದು ಹೆದರ್ ಹೇಳುತ್ತಾಳೆ. “ಊಟಮಾಡದೇ ಇರುವುದಕ್ಕೆ ನಾನು ಎಷ್ಟು ಒಗ್ಗಿಕೊಂಡುಬಿಟ್ಟೆನೆಂದರೆ, ನನಗೆ ತಿನ್ನಬೇಕು ಅನಿಸಿದರೂ ತಿನ್ನಲಿಕ್ಕೆ ಆಗುತ್ತಿರಲಿಲ್ಲ. ನನಗೆ ಹಸಿವೆಯೇ ಆಗುತ್ತಿರಲಿಲ್ಲ.”
ಮೊದಮೊದಲು, ಹೆದರ್‌ನಂತಹ ಆಹಾರಮಾಂದ್ಯ ರೋಗಿಗಳು ತೂಕವನ್ನು ಕಳೆದುಕೊಂಡಿರುವುದಕ್ಕಾಗಿ ಬೀಗುತ್ತಾರೆ. ಆದರೆ ಸರಿಯಾದ ಪೌಷ್ಟಿಕಾಂಶಗಳು ಸಿಗದೆ ಹೋಗುವಾಗ ಅದು ದುಷ್ಪರಿಣಾಮವನ್ನು ಬೀರುತ್ತದೆ. ಆಹಾರಮಾಂದ್ಯ ರೋಗಿಗಳು ಆಲಸ್ಯರೂ ಉತ್ಸಾಹಶೂನ್ಯರೂ ಆಗುತ್ತಾರೆ. ಇದು ಅವಳ ಶಾಲೆಯ ಕೆಲಸದ ಮೇಲೆ ಪರಿಣಾಮವನ್ನು ಬೀರುತ್ತದೆ. ಅವಳ ಋತುಚಕ್ರವು ನಿಂತುಹೋಗಬಹುದು.b ಹೀಗೆ ಅವಳ ಹೃದಯದ ಬಡಿತ ಮತ್ತು ರಕ್ತದೊತ್ತಡವು ಅಪಾಯಕಾರಿಯಾದ ಮಟ್ಟಕ್ಕೆ ಕೆಳಗಿಳಿಯಬಹುದು. ಇಷ್ಟೆಲ್ಲ ಆದರೂ, ಆಹಾರಮಾಂದ್ಯ ರೋಗಿಗೆ ಇದು ಅಪಾಯವೆನಿಸುವುದಿಲ್ಲ. ಅವಳ ಮನಸ್ಸಿನಲ್ಲಿ ಮೂಡಿಬರುವ ಒಂದೇ ಒಂದು ಅಪಾಯದ ವಿಷಯವೇನೆಂದರೆ, ಕಳೆದುಕೊಂಡ ತೂಕವನ್ನು ಪುನಃ ಪಡೆದುಕೊಳ್ಳುವುದೇ. ಮತ್ತು ಇದು ಒಂದು ಕಿಲೋಗ್ರ್ಯಾಮ್ ಆಗಿದ್ದರೂ ಸರಿ.
ಆದರೆ ಆಹಾರಮಾಂದ್ಯವು ಒಂದೇ ಖಾದ್ಯ ಕಾಯಿಲೆಯಾಗಿ ಇರುವುದಿಲ್ಲ ಅಥವಾ ಅತಿ ವ್ಯಾಪಕವಾಗಿ ಇರುವಂತಹದ್ದೂ ಅಲ್ಲ. ಬ್ಯೂಲಿಮಿಯ ನರ್ವೋಸ (ಹಸಿವು ಜಾಡ್ಯ) ಎಂಬ ರೋಗವು, ಹುಡುಗಿಯರನ್ನು ಆಹಾರಮಾಂದ್ಯಕ್ಕಿಂತ ಮೂರು ಪಟ್ಟು ಹೆಚ್ಚು ಕಾಡುತ್ತದೆ. ಹಸಿವು ಜಾಡ್ಯದಂತಹದ್ದೇ ಆದ ಇನ್ನೊಂದು ರೋಗವು, ಕಂಪಲ್ಸಿವ್ ಓವರ್‌ಈಟಿಂಗ್ (ಅಂತರ್ನಿರ್ಬಂಧ ಹೊಟ್ಟೆಬಾಕತನ) ಆಗಿದೆ. ಈ ವ್ಯಾಧಿಗಳ ಒಂದು ನಿಕಟ ನೋಟವನ್ನು ತೆಗೆದುಕೊಳ್ಳೋಣ.
ಮಾರ್ಮಿಕ ವ್ಯಾಧಿ
“ನನ್ನ ಸ್ನೇಹಿತೆಯೊಬ್ಬಳು ತಾನು ಕದ್ದುಮುಚ್ಚಿ ತಿನ್ನುತ್ತೇನೆಂದು ಇತ್ತೀಚೆಗೆ ನನಗೆ ಹೇಳಿದಳು. ಅನಂತರ ಅವಳು ವಾಂತಿಮಾಡಿಕೊಳ್ಳುತ್ತಾಳೆ. ಇದನ್ನು ಅವಳು ಸುಮಾರು ಎರಡು ವರ್ಷಗಳಿಂದ ಮಾಡುತ್ತಿದ್ದಾಳೆಂದು ಹೇಳಿದಳು.” ಹಸಿವು ಜಾಡ್ಯದ ರೋಗಲಕ್ಷಣಗಳನ್ನು ವರ್ಣಿಸುವ, ಪತ್ರಿಕೆಯೊಂದರ ಸಲಹಾ ಅಂಕಣಕ್ಕೆ ಒಬ್ಬ ಯುವತಿಯು ಹೀಗೆ ಬರೆದಳು.
ಹಸಿವು ಜಾಡ್ಯ ವ್ಯಕ್ತಿಯು, ಅಲ್ಪಾವಧಿಯಲ್ಲಿ ಆಹಾರವನ್ನು ಸೇವಿಸುತ್ತಾಳೆ. ಅನಂತರ ಅವಳು ಬಾಯೊಳಗೆ ಕೈಹಾಕಿ ವಾಂತಿಮಾಡಿಕೊಳ್ಳುತ್ತಾಳೆ.c ಈ ರೀತಿಯಲ್ಲಿ ಹೊಟ್ಟೆಯನ್ನು ಖಾಲಿಮಾಡುವುದು ಅಸಹ್ಯ ಎಂಬುದು ಒಪ್ಪತಕ್ಕ ವಿಷಯವೇ. ಆದರೆ, ಸಮಾಜ ಸೇವಕಿಯಾದ ನ್ಯಾನ್ಸೀ ಜೆ. ಕಾಲಾಡ್ನೀ ಬರೆಯುವುದು: “ತುಂಬ ತಿಂದು, ಅನಂತರ ಅದನ್ನು ಹೊರಹಾಕುವಾಗ, ನಿಮಗೆ ಒಂದು ರೀತಿಯ ಸಮಾಧಾನವಾಗುತ್ತದೆ. ನಿಮಗೆ ಮೊದಲಿದ್ದ ಹೇವರಿಕೆ ಅಥವಾ ಭಯದಂತಹ ಅನಿಸಿಕೆಗಳು, ಬೇಗನೇ ಈ ಹಸಿವು ಜಾಡ್ಯ ವಿಧಾನಗಳನ್ನು ಪುನಃ ಪುನಃ ಮಾಡುವುದರ ಮೂಲಕ ಸ್ಥಾನಪಲ್ಲಪಟಗೊಳ್ಳುತ್ತವೆ.”
ಆಹಾರಮಾಂದ್ಯ ರೋಗ ಮತ್ತು ಹಸಿವು ಜಾಡ್ಯ “ಒಂದೇ ನಾಣ್ಯದ ಎರಡು ಮುಖಗಳು” ಎಂದು ಹೇಳಲಾಗಿದೆ. ಎರಡೂ ವ್ಯಾಧಿಗಳ ರೋಗಲಕ್ಷಣಗಳು ಬೇರೆ ಬೇರೆಯಾಗಿರುವುದಾದರೂ, ಇವೆರಡರ ವ್ಯಾಧಿಗಳು ಆಹಾರದ ಗೀಳಿನಿಂದ ಉದ್ಧೀಪಿಸಲ್ಪಡುತ್ತದೆ.d ಆಹಾರಮಾಂದ್ಯಕ್ಕೆ ಅಸದೃಶವಾಗಿ, ಹಸಿವು ಜಾಡ್ಯವನ್ನು ಬಹಳ ಗುಪ್ತವಾಗಿಡಸಾಧ್ಯವಿದೆ. ವಿಪರೀತವಾಗಿ ತಿನ್ನುವುದು ತೂಕವನ್ನು ಕಳೆದುಕೊಳ್ಳುವುದರಿಂದಲೂ, ಅದನ್ನು ಹೊರಹಾಕುವುದು ತೂಕವನ್ನು ಗಳಿಸಿಕೊಳ್ಳುವುದರಿಂದಲೂ ಅವಳನ್ನು ತಡೆಯುತ್ತದೆ. ಹೀಗೆ, ಹಸಿವು ಜಾಡ್ಯ ವ್ಯಕ್ತಿಗಳು ತುಂಬ ದಪ್ಪವೂ ಆಗಿರುವುದಿಲ್ಲ ಇಲ್ಲವೇ ತುಂಬ ಕೃಶಕಾಯರೂ ಆಗಿರುವುದಿಲ್ಲ. ಮತ್ತು ಬೇರೆ ಜನರ ಮುಂದೆ ಅವರ ಆಹಾರ ಸೇವನೆಯ ಕ್ರಮಗಳು ಸಾಮಾನ್ಯವಾದ ರೀತಿಯಲ್ಲಿಯೇ ಇರುತ್ತವೆ. “ನಾನು ಒಂಬತ್ತು ವರ್ಷಗಳ ತನಕ ವಿಪರೀತವಾಗಿ ತಿನ್ನುತ್ತಿದ್ದೆ ಮತ್ತು ಅನಂತರ ವಾಂತಿಮಾಡಿಕೊಳ್ಳುತ್ತಿದ್ದೆ. ಮತ್ತು ಇದನ್ನು ದಿನಾಲೂ ನಾಲ್ಕೈದು ಬಾರಿ ಮಾಡುತ್ತಿದ್ದೆ. . . . ನನಗೆ ಹಸಿವು ಜಾಡ್ಯವಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಏಕೆಂದರೆ, ತೃಪ್ತಿ, ಸಂತೋಷ, ಮತ್ತು ಸರಿಯಾದ ತೂಕದ ಮರೆಯಲ್ಲಿ ಈ ರೋಗವನ್ನು ನಾನು ಗುಪ್ತವಾಗಿಟ್ಟೆ” ಎಂದು ಲಿನ್ಸೀ ಎಂಬ ಸ್ತ್ರೀಯು ಹೇಳುತ್ತಾಳೆ.
ಆದರೆ ಅಂತರ್ನಿರ್ಬಂಧ ಹೊಟ್ಟೆಬಾಕತನದಿಂದ ಬಳಲುವ ವ್ಯಕ್ತಿಗಳು ಇದಕ್ಕೆ ಭಿನ್ನವಾಗಿರುತ್ತಾರೆ. ಹಸಿವು ಜಾಡ್ಯವುಳ್ಳ ವ್ಯಕ್ತಿಗಳಂತೆ ಇವರು ಒಮ್ಮೆಗೆ, ತುಂಬ ಆಹಾರವನ್ನು ಸೇವಿಸುತ್ತಾರೆ. ದ ನ್ಯೂ ಟೀನೇಜ್ ಬಾಡಿ ಬುಕ್ ಹೇಳುವುದು: “ಈ ವಿಪರೀತ ಸೇವನೆಯು ಭೇದಿಯಾಗದೆ ನಡೆಯುವುದರಿಂದ, ಇಂತಹ ಅಂತರ್ನಿರ್ಬಂಧ ರೋಗಿಗಳು ತುಸು ತೂಕದಿಂದ ಹಿಡಿದು ಗಮನಾರ್ಹವಾದ ಹೆಚ್ಚು ತೂಕದ ಅಥವಾ ಬೊಜ್ಜಿನ ವರೆಗೆ ಬಳಲಬಹುದು.”
ಆರೋಗ್ಯ ಅಪಾಯಗಳು
ಈ ಮೂರು ಖಾದ್ಯ ಕಾಯಿಲೆಗಳು ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಸಾಧ್ಯವಿದೆ. ಆಹಾರಮಾಂದ್ಯ ರೋಗವು ತೀರ ಅನ್ಯೂನಪೋಷಣೆಯನ್ನು ಉಂಟುಮಾಡಸಾಧ್ಯವಿದೆ. ಅನೇಕ ಸಂದರ್ಭಗಳಲ್ಲಿ ಇದು ಜೀವಕ್ಕೆ ಅಪಾಯವನ್ನು ತಂದೊಡ್ಡಸಾಧ್ಯವಿದೆ. ಇದರ ಸಂಭವನೀಯತೆಯು ಶೇಕಡ 15ರಷ್ಟಿದೆ ಎಂದು ಕೆಲವರು ಅಂದಾಜುಮಾಡುತ್ತಾರೆ. ಭೇದಿಯಾಗಲಿ, ಆಗದಿರಲಿ, ವಿಪರೀತ ತಿನ್ನುವಿಕೆ ಆರೋಗ್ಯಕ್ಕೆ ಹಾನಿಕರ. ಸಕಾಲದಲ್ಲಿ, ಈ ಬೊಜ್ಜು ಜೀವಾಪಾಯಕಾರಿಯಾದ ಹೃದಯಬೇನೆ, ಮಧುಮೂತ್ರ ವ್ಯಾಧಿ, ಮತ್ತು ಕೆಲವೊಂದು ಕ್ಯಾನ್ಸರುಗಳಿಗೆ ಎಡೆಮಾಡಿಕೊಡುತ್ತದೆ. ಬಾಯೊಳಗೆ ಕೈಹಾಕಿ ವಾಂತಿಮಾಡಿಕೊಳ್ಳುವುದು ಅನ್ನನಾಳವನ್ನು ಹರಿದುಹಾಕಸಾಧ್ಯವಿದೆ. ಮತ್ತು ಭೇದಿಯೌಷಧ ಹಾಗೂ ಮೂತ್ರವರ್ಧಕ ಔಷಧಗಳನ್ನು ದುರುಪಯೋಗಿಸುವಾಗ, ವಿಪರೀತ ಪರಿಸ್ಥಿತಿಗಳಲ್ಲಿ ಹೃದಯ ಸ್ತಂಭನಗೊಳ್ಳುವ ಸಾಧ್ಯತೆಯಿದೆ.
ಆಹಾರ ವ್ಯಾಧಿಗಳ ಮತ್ತೊಂದು ಅಂಶವನ್ನು ನಾವು ಪರಿಗಣಿಸಬೇಕಾದ ಅಗತ್ಯವಿದೆ. ಆಹಾರಮಾಂದ್ಯ ರೋಗ, ಹಸಿವು ಜಾಡ್ಯ ಮತ್ತು ಅಂತರ್ನಿರ್ಬಂಧ ಹೊಟ್ಟೆಬಾಕತನದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಅಸಂತುಷ್ಟರಾಗಿರುತ್ತಾರೆ. ಅವರಿಗೆ ಕಡಿಮೆ ಸ್ವಗೌರವವಿರುತ್ತದೆ ಮತ್ತು ಚಿಂತೆ ಹಾಗೂ ಖಿನ್ನತೆಯಿಂದ ಬಳಲುವ ಸಾಧ್ಯತೆಯಿರುತ್ತದೆ. ನಿಜವಾಗಿಯೂ ಅವರಿಗೆ ಸಹಾಯದ ಅಗತ್ಯವಿದೆ. ಈ ತೂಕದ ಹುಚ್ಚಿನಿಂದ ಖಾದ್ಯ ಕಾಯಿಲೆಯುಳ್ಳವರನ್ನು ಅದರಿಂದ ಬಿಡಿಸಲು ಹೇಗೆ ಸಹಾಯಮಾಡಸಾಧ್ಯವಿದೆ? ಈ ಪ್ರಶ್ನೆಯು ಈ ಲೇಖನಮಾಲೆಯ ಮುಂದಿನ ಸಂಚಿಕೆಯಲ್ಲಿ ಹೊರತರಲಾಗುವುದು.
[ಅಧ್ಯಯನ ಪ್ರಶ್ನೆಗಳು]
a ಆಹಾರಮಾಂದ್ಯವು ಪುರುಷರನ್ನು ಸಹ ಬಾಧಿಸುತ್ತದೆ. ಆದರೆ ಹುಡುಗಿಯರೇ ಹೆಚ್ಚು ಆಹಾರಮಾಂದ್ಯ ರೋಗಿಗಳಾಗಿರುವುದರಿಂದ, ನಾವು ಸ್ತ್ರೀಲಿಂಗವನ್ನು ಉಪಯೋಗಿಸುವೆವು.
b ಸ್ತ್ರೀಯೊಬ್ಬಳ ತೂಕವು ಸಾಮಾನ್ಯ ತೂಕಕ್ಕಿಂತಲೂ ಶೇಕಡ 15ರಷ್ಟು ಕಡಿಮೆಯಾಗಿರುವುದಾದರೆ ಮತ್ತು ಅವಳಿಗೆ ಮೂರು ಅಥವಾ ಅದಕ್ಕಿಂತಲೂ ಹೆಚ್ಚಿನ ತಿಂಗಳುಗಳಿಂದ ಋತುಚಕ್ರವಾಗದಿರುವುದಾದರೆ, ಅವಳಿಗೆ ಆಹಾರಮಾಂದ್ಯ ರೋಗವಿದೆ ಎಂದು ಹೇಳಲಾಗುತ್ತದೆ.
c ಆಹಾರವನ್ನು ಹೊರಹಾಕುವ ಇತರ ವಿಧಾನಗಳಲ್ಲಿ ಭೇದಿಯೌಷಧ ಅಥವಾ ಮೂತ್ರವರ್ಧಕ ಔಷಧದ ಉಪಯೋಗವೂ ಸೇರಿದೆ.
d ಅನೇಕ ರೋಗಿಗಳು, ಆಹಾರಮಾಂದ್ಯ ಮತ್ತು ಹಸಿವು ಜಾಡ್ಯವೆಂಬ ಖಾದ್ಯ ಕಾಯಿಲೆಗಳಿಂದ ಪರ್ಯಾಯವಾಗಿ ಬಳಲುತ್ತಾರೆ.
[ಪುಟ 21 ರಲ್ಲಿರುವ ಚೌಕ]
ಶರೀರದ ಬಗ್ಗೆ ತಪ್ಪಾದ ಕಲ್ಪನೆ
ತಮ್ಮ ತೂಕದಿಂದ ಚಿಂತಿತರಾಗಿರುವ ಅನೇಕ ಹುಡುಗಿಯರು, ಅದಕ್ಕಾಗಿ ತೀರ ಚಿಂತಿಸುವ ಅಗತ್ಯವಿಲ್ಲ. ಒಂದು ಅಧ್ಯಯನದಲ್ಲಿ, 5 ಮತ್ತು 17ರ ವಯಸ್ಸಿನ ನಡುವಿರುವ ಹುಡುಗಿಯರಲ್ಲಿ 58 ಪ್ರತಿಶತ ಮಂದಿ, ತಾವು ತುಂಬ ದಪ್ಪಗಿದ್ದೇವೆಂದು ನೆನಸಿದರು. ವಾಸ್ತವದಲ್ಲಿ, ಅವರಲ್ಲಿ 17 ಪ್ರತಿಶತ ಮಾತ್ರ ದಪ್ಪಗಿದ್ದರು. ಮತ್ತೊಂದು ಅಧ್ಯಯನದಲ್ಲಿ, ಸ್ತ್ರೀಯರಲ್ಲಿ 45 ಪ್ರತಿಶತ ತೀರ ಕಡಿಮೆತೂಕವುಳ್ಳವರಾಗಿದ್ದರು. ಆದರೆ, ಅವರು ತಾವು ತುಂಬ ದಪ್ಪಗಿದ್ದೇವೆ ಎಂದು ನೆನಸಿದರು! ಕೆನಡದಲ್ಲಿ 70 ಪ್ರತಿಶತ ಮಹಿಳೆಯರು ತಮ್ಮ ತೂಕದ ಬಗ್ಗೆ ತೀರ ಚಿಂತಿತರಾಗಿದ್ದಾರೆ, ಮತ್ತು 40 ಪ್ರತಿಶತ ಯೋ-ಯೋ ಡೈಯಟಿಂಗ್‌ನಲ್ಲಿ, ಅಂದರೆ ತೂಕ ಕಳೆದುಕೊಂಡ ಮೇಲೆ ಅದನ್ನು ಮತ್ತೆ ಪಡೆಯುವ ಒಂದು ವಿಧಾನದಲ್ಲಿ ಒಳಗೊಂಡಿದ್ದಾರೆ ಎಂದು ಆ ಸಮೀಕ್ಷೆಯು ಕಂಡುಕೊಂಡಿತು.
ಶರೀರದ ಕುರಿತಾದ ತಪ್ಪಾದ ಕಲ್ಪನೆಯು, ಕೆಲವು ಹುಡುಗಿಯರನ್ನು, ನಿಜವಾಗಿಯೂ ಒಂದು ಸಮಸ್ಯೆಯಾಗಿರದ ವಿಷಯದ ಬಗ್ಗೆ, ಅವರು ತುಂಬ ಚಿಂತಿತರಾಗುವಂತೆ ಮಾಡುತ್ತದೆ ಎಂಬುದು ಸ್ಪಷ್ಟ. “ನನ್ನ ಸ್ನೇಹಿತೆಯೊಬ್ಬಳು ತುಂಬ ಡೈಯಟ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾಳೆ ಮತ್ತು ಆಹಾರಮಾಂದ್ಯವಿರುವ ಕೆಲವು ಹುಡುಗಿಯರನ್ನು ನಾನು ಬಲ್ಲೆ” ಎಂದು ಕ್ರಿಸ್ಟಿನ್ ಎಂಬ 16 ವರ್ಷದ ಹುಡುಗಿಯೊಬ್ಬಳು ಹೇಳುತ್ತಾಳೆ. ಅವಳು ಕೂಡಿಸುವುದು: “ಆದರೆ ವಾಸ್ತವದಲ್ಲಿ, ಅವರಲ್ಲಿ ಒಬ್ಬರೂ ಕೂಡ ದಪ್ಪಗಿಲ್ಲ.”
ಎಫ್‌ಡಿಏ ಕನ್ಸ್ಯೂಮರ್ ಸದುದ್ದೇಶದಿಂದ ಶಿಫಾರಸ್ಸುಮಾಡುವುದು: “‘ಪ್ರತಿಯೊಬ್ಬರು’ ಡೈಯಟಿಂಗ್ ಮಾಡುತ್ತಿದ್ದಾರೆ ಅಥವಾ ನೀವು ಇಷ್ಟಪಡುವಷ್ಟು ಕೃಶಕಾಯರಾಗಿಲ್ಲ ಎಂಬ ಕಾರಣಕ್ಕೆ ಡೈಯಟಿಂಗ್ ಮಾಡುವ ಬದಲು, ನಿಮ್ಮ ವಯಸ್ಸಿಗೆ ಮತ್ತು ಎತ್ತರಕ್ಕೆ ಅನುಗುಣವಾಗಿ ನೀವು ತುಂಬ ದಪ್ಪಗಿದ್ದೀರೋ ಅಥವಾ ನಿಮ್ಮ ದೇಹದಲ್ಲಿ ತುಂಬ ಕೊಬ್ಬಿನಂಶವಿದೆಯೋ ಎಂಬುದನ್ನು ತಿಳಿದುಕೊಳ್ಳಲು ಮೊದಲು ವೈದರನ್ನು ಅಥವಾ ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿರಿ.”
[ಪುಟ 22 ರಲ್ಲಿರುವ ಚಿತ್ರ]
ತಮ್ಮ ತೂಕದಿಂದ ಚಿಂತಿತರಾಗಿರುವ ಅನೇಕ ಹುಡುಗಿಯರು ಹಾಗಿರುವ ಅಗತ್ಯವಿಲ್ಲ