ಯುವ ಜನರು ಪ್ರಶ್ನಿಸುವುದು . . .
ಕೃಶಕಾಯಳಾಗುವ ಹುಚ್ಚನ್ನು ನಾನು ಹೇಗೆ ಜಯಿಸಬಲ್ಲೆ?
“ನನ್ನ ಸ್ಯಾಂಡ್ವಿಚ್ನ ಮೇಲೆ ಮೇಅನೇಸ್a ಅನ್ನು ಹಾಕಬೇಕೋ ಬೇಡವೋ ಎಂಬುದೇ ನನ್ನ ಜೀವಿತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ. ಮೇಅನೇಸ್ ಅಂದರೆ ಪ್ರಾಣಬಿಡುವ ನಾನು ಬೇರೆ ವಿಷಯಗಳ ಕಡೆಗೆ ಹೇಗೆ ಏಕಾಗ್ರತೆಯನ್ನು ಕೊಡಬಲ್ಲೆ? ಅಂತಿಮ ನಿರ್ಣಯವೇನು? ಮೇಅನೇಸನ್ನು ಹಾಕಕೂಡದು—ಅದರಲ್ಲಿ ತುಂಬ ಕ್ಯಾಲೊರಿಗಳಿವೆ. ಪುನಃ ಆ್ಯನರೆಕ್ಸಿಯಾ (ಆಹಾರಮಾಂದ್ಯ) ಗೆಲ್ಲುತ್ತದೆ. ನಾನು ಸೋಲುತ್ತೇನೆ.”—ಜೇಮೀ.
ಆಹಾರ ವ್ಯಾಧಿಯು ಯುವಜನರಲ್ಲಿ ಲಕ್ಷಾಂತರ ಜನರನ್ನು ಬಾಧಿಸುತ್ತದೆ.b ಇವರಲ್ಲಿ ಅನೇಕರು, ಆಹಾರ ಸೇವಿಸದಿರುವ (ಆಹಾರಮಾಂದ್ಯ) ಅಥವಾ ಅತಿಯಾದ ಆಹಾರವನ್ನು ಸೇವಿಸಿ, ಅದನ್ನು ವಾಂತಿಮಾಡಿಕೊಳ್ಳುವುದನ್ನು (ಬೂಲಿಮಿಯ) ವಿಕಸಿಸಿಕೊಳ್ಳುವ ಉದ್ದೇಶದಿಂದ ಅದನ್ನು ಪ್ರಾರಂಭಿಸಲಿಲ್ಲ. ಅದಕ್ಕೆ ಬದಲಾಗಿ, ಅನೇಕರು ಕೆಲವೊಂದು ಪೌಂಡುಗಳ ತೂಕವನ್ನು ಇಳಿಸಿಕೊಳ್ಳುವ ಗುರಿಯೊಂದಿಗೆ ಪ್ರಾರಂಭಿಸಿದರು. ಆದರೆ, ಅವರ ಅರಿವಿಗೆ ಬರುವ ಮುನ್ನವೇ, ಹೊಟ್ಟೆಗಿಲ್ಲದೆ ಅಥವಾ ಅತಿಯಾಗಿ ಆಹಾರವನ್ನು ಸೇವಿಸುವ ಒಂದು ವಿಲಕ್ಷಣ ಆವರ್ತನೆಯಲ್ಲಿ ಅವರು ಸಿಲುಕಿಕೊಂಡಿದ್ದರು. “ನನ್ನ ತೂಕವನ್ನು ನಿಯಂತ್ರಣದಲ್ಲಿಡಲು ಈ ರೀತಿಯ ಡೈಯಟಿಂಗನ್ನು ಆರಂಭಿಸಿದೆ, ಆದರೆ ಅದು ಈಗ ನನ್ನನ್ನು ನಿಯಂತ್ರಿಸುತ್ತಿದೆ” ಎಂದು ಜೇಮೀ ಹೇಳುತ್ತಾಳೆ.
ನೀವು ಸೇವಿಸುವ ಆಹಾರ ಮತ್ತು ಅದು ನಿಮ್ಮ ತೂಕದ ಮೇಲೆ ಬೀರುವ ಪರಿಣಾಮಗಳ ಕುರಿತು ಚಿಂತಿತರಾಗಿರುವಲ್ಲಿ, ನೀವೇನು ಮಾಡಸಾಧ್ಯವಿದೆ? ಇತರ ಅನೇಕ ಯುವ ಜನರು ಆಹಾರ ವ್ಯಾಧಿಗಳೊಂದಿಗೆ ಹೋರಾಡಿದ್ದಾರೆ ಮತ್ತು ಅದನ್ನು ಜಯಿಸಿದ್ದಾರೆ ಎಂಬುದನ್ನು ಮೊದಲಾಗಿ ತಿಳಿದುಕೊಳ್ಳಿರಿ. ಆದರೆ ಹೇಗೆ?
ಕನ್ನಡಿಯಲ್ಲಿ ಬಿಂಬವನ್ನು ನೋಡುವುದು
ನಿಮ್ಮ ತೋರಿಕೆಯ ಕುರಿತಾಗಿ ನಿಜತ್ವವನ್ನು ಒಪ್ಪಿಕೊಳ್ಳುವುದು, ಆಹಾರ ವ್ಯಾಧಿಯನ್ನು ಜಯಿಸುವುದರಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. “ಆಹಾರ ವ್ಯಾಧಿಗಳಿಂದ ಬಳಲುತ್ತಿರುವ ಅನೇಕ ಜನರು, ತಮ್ಮ ಕುರಿತಾಗಿ ವಿಕೃತ ನೋಟವನ್ನು ಹೊಂದಿದ್ದಾರೆ” ಎಂದು ಬದಲಾಗುತ್ತಿರುವ ತೋರ್ಕೆ, ಬದಲಾಗುತ್ತಿರುವ ಜೀವನಶೈಲಿ (ಇಂಗ್ಲಿಷ್) ಎಂಬ ಪುಸ್ತಕವು ಹೇಳುತ್ತದೆ. “ಅವರು ತಮ್ಮ ಶರೀರಗಳ ಬಗ್ಗೆ ವಾಸ್ತವಿಕವಾಗಿ ಅರಿತುಕೊಳ್ಳುವುದಿಲ್ಲ ಮತ್ತು ತಮ್ಮ ಬಗ್ಗೆ, ವಿಶೇಷವಾಗಿ ತಮ್ಮ ತೋರಿಕೆಯ ಬಗ್ಗೆ ತೀರ ಟೀಕಾತ್ಮಕರಾಗಿರುತ್ತಾರೆ.”
ಕೆಲವು ಹದಿವಯಸ್ಕರು ತಮ್ಮ ಇಡೀ ವ್ಯಕ್ತಿತ್ವವನ್ನು ತಮ್ಮ ಶಾರೀರಿಕ ರೂಪದ ಮೇಲೆ ಆಧಾರಿಸುತ್ತಾರೆ; ಯಾವುದೇ ದೋಷವಿರುವುದಾದರೂ ಅದು ಒಂದು ದೊಡ್ಡ ಕೇಡು ಎಂಬಂತೆ ನೋಡುತ್ತಾರೆ. “ನಾನು ಎಷ್ಟು ದಪ್ಪಗಿದ್ದೇನೆಂದರೆ ನನಗೆ ನನ್ನ ಮೇಲೆ ತೀರ ಜಿಗುಪ್ಸೆಯಾಗುತ್ತದೆ. ನನ್ನ ಸೊಂಟವು ಎಷ್ಟು ದಪ್ಪಗಿದೆಯೆಂದರೆ, ಇನ್ಶರ್ಟ್ ಮಾಡುವಂತಹ ಯಾವುದೇ ಉಡುಗೆಯನ್ನೂ ನನಗೆ ತೊಡಲಾಗುವುದಿಲ್ಲ” ಎಂದು 17 ವರ್ಷ ಪ್ರಾಯದ ವಿಕೀ ಹೇಳುತ್ತಾಳೆ. ಹತ್ತು ಕಿಲೊಗ್ರ್ಯಾಮ್ಗಳ ತೂಕವನ್ನು ಕಳೆದುಕೊಂಡ ಅನಂತರವೂ ವಿಕೀಗೆ ಸಮಾಧಾನವಾಗಲಿಲ್ಲ. ಒಂದೋ ಅವಳು ತಿನ್ನುತ್ತಿರಲಿಲ್ಲ ಇಲ್ಲವೆ ಗಬಗಬನೇ ತಿಂದು, ಅನಂತರ ತಿಂದದ್ದನ್ನು ವಾಂತಿಮಾಡಿಬಿಡುತ್ತಿದ್ದಳು.
ನೀವು ಹೇಗೆ ಕಾಣುತ್ತೀರಿ ಎಂಬುದರ ಬಗ್ಗೆ ಒಂದಷ್ಟರ ಮಟ್ಟಿಗೆ ಚಿಂತಿತರಾಗಿರುವುದು ನಿಶ್ಚಯವಾಗಿಯೂ ತಪ್ಪಾಗಿರುವುದಿಲ್ಲ. ಈ ಸಂಬಂಧದಲ್ಲಿ, ಸಾರ, ರಾಹೇಲ, ಯೋಸೇಫ, ದಾವೀದ ಮತ್ತು ಅಬಿಗೈಲರನ್ನು ಸೇರಿಸಿ, ಅನೇಕ ಸ್ತ್ರೀಪುರುಷರ ಶಾರೀರಿಕ ರಚನೆ ಮತ್ತು ತೋರಿಕೆಯ ಬಗ್ಗೆ ಬೈಬಲ್ ಒಳ್ಳೆಯ ಹೇಳಿಕೆಗಳನ್ನು ಕೊಟ್ಟಿರುವುದನ್ನು ನೋಡುವುದು ಆಸಕ್ತಿಕರವಾದ ವಿಷಯವಾಗಿದೆ.c ದಾವೀದನ ದಾದಿಯಾದ ಅಬೀಷಗ್ “ಬಹು ಸುಂದರಿ”ಯಾಗಿದ್ದಳು ಎಂದು ಸಹ ಬೈಬಲು ಹೇಳುತ್ತದೆ.—1 ಅರಸು 1:4.
ನಿಜವಾದ ಸೌಂದರ್ಯದ ಅರ್ಥನಿರೂಪಣೆ
ಒಬ್ಬರ ಶಾರೀರಿಕ ತೋರಿಕೆ ಅಥವಾ ದೇಹದ ಆಕಾರದ ಮೇಲೆ ಬೈಬಲು ಪ್ರಾಮುಖ್ಯ ಒತ್ತನ್ನು ಕೊಡುವುದಿಲ್ಲ. ಅದಕ್ಕೆ ಬದಲಾಗಿ ಅದು “ಒಳಗಣ ಭೂಷಣ”ವನ್ನು ಹೊಗಳುತ್ತದೆ. (1 ಪೇತ್ರ 3:4) ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಒಂದೋ ಆಕರ್ಷಣೀಯವಾಗಿ ಇಲ್ಲವೆ ಅಸಹ್ಯಕರವಾಗಿಯಾಗಲಿ ಮಾಡುವಂತಹದ್ದು ಆಂತರಿಕ ವ್ಯಕ್ತಿಯೇ ಆಗಿದೆ.—ಜ್ಞಾನೋಕ್ತಿ 11:20, 22.
ರಾಜ ದಾವೀದನ ಪುತ್ರನಾದ ಅಬ್ಷಾಲೋಮನನ್ನು ಪರಿಗಣಿಸಿರಿ. “ಸೌಂದರ್ಯದಲ್ಲಿ ಅಬ್ಷಾಲೋಮನಂತೆ ಹೆಸರುಗೊಂಡ ಪುರುಷನು ಇಸ್ರಾಯೇಲ್ಯರಲ್ಲಿ ಒಬ್ಬನೂ ಇರಲಿಲ್ಲ” ಎಂದು ಬೈಬಲು ಹೇಳುತ್ತದೆ. (2 ಸಮುವೇಲ 14:25) ಆದರೂ, ಈ ಯೌವನಸ್ಥನು ವಿಶ್ವಾಸಘಾತುಕನಾಗಿದ್ದನು. ಗರ್ವ ಮತ್ತು ಮಹತ್ವಾಕಾಂಕ್ಷೆಯು ಯೆಹೋವನ ನಿಯಮಿತ ರಾಜನ ಸ್ಥಾನವನ್ನು ಆಕ್ರಮಿಸಿಕೊಳ್ಳುವಂತೆ ಅವನನ್ನು ಪ್ರಚೋದಿಸಿತು. ಆದುದರಿಂದ, ಬೈಬಲು ಅಬ್ಷಾಲೋಮನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಕೊಡುವುದಿಲ್ಲ. ಅದಕ್ಕೆ ಬದಲಾಗಿ, ಅವನನ್ನು ವಿಶ್ವಾಸಘಾತುಕನೂ ಭಯಂಕರ ದ್ವೇಷವನ್ನು ಹೊಂದಿದ್ದವನೂ ಆದ ಒಬ್ಬ ವ್ಯಕ್ತಿಯಾಗಿ ಚಿತ್ರಿಸುತ್ತದೆ.
ಒಬ್ಬರ ನಿಜವಾದ ಸೌಂದರ್ಯ ಅಥವಾ ಚೆಲುವು, ಶಾರೀರಿಕ ರೂಪದ ಮೇಲೆ ಅವಲಂಬಿತವಾಗಿರುವುದಿಲ್ಲ. ಸಕಾರಣದಿಂದಲೇ, ಬೈಬಲು ಹೇಳುವುದು: “ಜ್ಞಾನವನ್ನು ಪಡೆಯಬೇಕೆಂಬದೇ ಜ್ಞಾನಬೋಧೆಯ ಪ್ರಥಮಪಾಠ; ನಿನ್ನ ಎಲ್ಲಾ ಸಂಪತ್ತಿನಿಂದಲೂ ವಿವೇಕವನ್ನು ಪಡೆ. ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನಿಟ್ಟು ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.”—ಜ್ಞಾನೋಕ್ತಿ 4:7, 9.
ಆಹಾರ ವ್ಯಾಧಿಗಳು ಒಬ್ಬರ ತೋರಿಕೆಯ ಬಗ್ಗೆ ಅಸಂತೃಪ್ತಿಯನ್ನು ಹೊಂದಿರುವುದಕ್ಕಿಂತಲೂ ಹೆಚ್ಚಿನ ವಿಷಯದಿಂದ ಪ್ರೇರಿಸಲ್ಪಡುತ್ತದೆ ಎಂಬುದು ಒಪ್ಪತಕ್ಕ ವಿಷಯವೇ. ಕೃತಿಯೊಂದು ಹೇಳುವುದು: “ಆಹಾರದ ಬಗ್ಗೆ ಹೆಚ್ಚು ಚಿಂತಿಸುವ ಮತ್ತು ಆ್ಯನರೆಕ್ಸಿಯಾ ನರ್ವೋಸ, ಬುಲಿಮಿಯ ಮತ್ತು ವಿಪರೀತ ಸೇವನೆಯಂತಹ ಆಹಾರ ವ್ಯಾಧಿಗಳಿಗೆ ಬಲಿಬೀಳುವ ಜನರಿಗೆ ತೀರ ಕಡಿಮೆ ಆತ್ಮಗೌರವವಿರುತ್ತದೆ. ಅವರಿಗೆ ತಮ್ಮ ಬಗ್ಗೆ ಕೀಳು ಭಾವನೆಯಿರುತ್ತದೆ ಇಲ್ಲವೇ ಇತರರು ತಮ್ಮನ್ನು ಕೀಳಾಗಿ ನೋಡುತ್ತಾರೆ ಎಂಬ ಭಾವನೆಯಿರುತ್ತದೆ.”
ಕಡಿಮೆ ಆತ್ಮಗೌರವದ ಭಾವನೆಗಳಿಗೆ ಇನ್ನೂ ಕೂಡಿಸುವಂತಹ ಅನೇಕ ಅಂಶಗಳಿವೆ. ಉದಾಹರಣೆಗೆ, ಪ್ರಾಯಕ್ಕೆ ಬರುವಾಗ ನೀವು ಅನಿಶ್ಚಿತತೆಯ ಅನಿಸಿಕೆಯ ಪ್ರವಾಹದಲ್ಲಿ ಮುಳುಗಿಹೋಗಬಲ್ಲಿರಿ. ಇದು ವಿಶೇಷವಾಗಿ ನಿಮ್ಮ ಸಮಾನಸ್ಥರಿಗಿಂತ ಮೊದಲು ಋತುಮತಿಯಾಗುವಾಗ ಹೀಗಾಗುತ್ತದೆ. ಮತ್ತು ಕೆಲವರು ಸದಾ ಸಂಕ್ಷೋಭೆಯಿರುವ, ಪ್ರಾಯಶಃ ಶಾರೀರಿಕ ಅಥವಾ ಲೈಂಗಿಕವಾಗಿ ದುರುಪಯೋಗಿಸಲ್ಪಡುವ ಮನೆಗಳಲ್ಲಿ ಬೆಳೆಸಲ್ಪಡುತ್ತಾರೆ. ಕಾರಣವು ಏನೇ ಆಗಿರಲಿ, ನಿಷ್ಪ್ರಯೋಜಕ ಭಾವನೆಗಳನ್ನು ಕೆರಳಿಸುತ್ತಿರುವ ವಿಷಯಗಳನ್ನು ತಿಳಿದುಕೊಳ್ಳುವುದು ಸಾಮಾನ್ಯವಾಗಿ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದು ಒಬ್ಬ ವ್ಯಕ್ತಿಯೋಪಾದಿ ನೀವು ಏನಾಗಿದ್ದೀರಿ ಎಂಬುದರ ನಿಜ ಮೌಲ್ಯವನ್ನು ಗುರುತಿಸುವುದೇ ಆಗಿದೆ. ಖಂಡಿತವಾಗಿಯೂ, ಪ್ರತಿಯೊಬ್ಬರೂ ಕಡಿಮೆಪಕ್ಷ ಕೆಲವೊಂದು ಶ್ಲಾಘನೀಯ ಗುಣಗಳನ್ನು ಹೊಂದಿದ್ದಾರೆ. (1 ಕೊರಿಂಥ 12:14-18ನ್ನು ಹೋಲಿಸಿರಿ.) ನಿಮ್ಮಲ್ಲಿರುವ ಈ ಗುಣಗಳನ್ನು ನೀವು ಸ್ವತಃ ನೋಡದೆ ಇರಬಹುದು, ಆದರೆ, ಪ್ರೌಢ ಸ್ನೇಹಿತರೊಬ್ಬರು ಇವುಗಳನ್ನು ಗುರುತಿಸಸಾಧ್ಯವಿದೆ.
ಯೋಗ್ಯವಾದ ಆರೋಗ್ಯ ಕಾರಣಗಳಿಗಾಗಿ ತೂಕವನ್ನು ಕಳೆದುಕೊಳ್ಳುವುದು ನಿಜವಾಗಿಯೂ ಅಗತ್ಯವಿರುವುದಾದರೆ ಆಗೇನು? ನಾವು “ಮಿತಸ್ವಭಾವಿಗಳು” ಆಗಿರಬೇಕು ಎಂದು ಬೈಬಲು ಶಿಫಾರಸ್ಸುಮಾಡುತ್ತದೆ. (1 ತಿಮೊಥೆಯ 3:11) ಆದುದರಿಂದ, ವಿಪರೀತ ಡೈಯಟಿಂಗ್ ಮಾಡುವುದು ಅಥವಾ ಶೀಘ್ರದಲ್ಲಿ ತೂಕವನ್ನು ಕಳೆದುಕೊಳ್ಳುವ ಕ್ರಮಗಳಿಗೆ ಬಲಿಬೀಳುವುದರಿಂದ ದೂರವಿರುವುದು ಅತ್ಯುತ್ತಮವಾದ ವಿಷಯವಾಗಿರುತ್ತದೆ. ಅಗತ್ಯವಿಲ್ಲದ ಪೌಂಡುಗಳನ್ನು ಕಳೆದುಕೊಳ್ಳುವುದಕ್ಕೆ ಒಂದು ಉತ್ತಮ ವಿಧವು, ಆರೋಗ್ಯಕರವಾದ ಆಹಾರವನ್ನು ತಿಂದು, ಸಮಂಜಸವಾದ ವ್ಯಾಯಾಮವನ್ನು ಮಾಡುವುದಾಗಿರಬಹುದು. “ಎಲ್ಲದಕ್ಕಿಂತಲೂ ಮಿಗಿಲಾಗಿ, ತೂಕವನ್ನು ಕಳೆದುಕೊಳ್ಳಲು ಸರಿಯಾದ ವಿಧ ಮತ್ತು ತಪ್ಪಾದ ವಿಧವಿದೆ. ಆಹಾರವನ್ನು ಸೇವಿಸದೇ ಇರುವುದು, ಬ್ರೆಡ್ ಮತ್ತು ನೀರನ್ನು ಮಾತ್ರ ಸೇವಿಸುವುದು, ಡೈಯಟ್ ಮಾತ್ರೆಗಳನ್ನು ತೆಗೆದುಕೊಳ್ಳುವುದು, ಅಥವಾ ವಾಂತಿಮಾಡಿಕೊಳ್ಳುವುದು ತಪ್ಪಾದ ವಿಧವಾಗಿದೆ” ಎಂದು ಎಫ್ಡಿಏ ಕನ್ಸ್ಯೂಮರ್ ಪತ್ರಿಕೆಯು ಹೇಳುತ್ತದೆ.
ಯಾರಾದರೊಬ್ಬರಲ್ಲಿ ಅಂತರಂಗವನ್ನು ತೋಡಿಕೊಳ್ಳುವುದು
ಸಮಾಜ ಕಾರ್ಯಕರ್ತೆಯಾದ ನ್ಯಾನ್ಸೀ ಕಾಲಾಡ್ನೀ, ಆಹಾರ ವ್ಯಾಧಿಯನ್ನು “ಯಾವುದೇ ನಕ್ಷೆ ಅಥವಾ ದಿಕ್ಸೂಚಿಯಿಲ್ಲದೆ, ಸ್ಥಳದ ಅರಿವಿಲ್ಲದೆ ಮತ್ತು ದಾರಿಯನ್ನು ಯಾವಾಗ ಕಂಡುಕೊಳ್ಳುವಿರಿ ಅಥವಾ ಕಂಡುಕೊಳ್ಳುವಿರೋ ಇಲ್ಲವೊ ಎಂಬುದರ ಅರಿವಿಲ್ಲದೆ, ಒಂಟಿಯಾಗಿ ತೊಳಸುಬಳಸಿನ ಹಾದಿಯೊಳಗೆ ಪ್ರವೇಶಿಸುವುದಕ್ಕೆ . . .” ಹೋಲಿಸುತ್ತಾರೆ. “ಅದರೊಳಗೆ ಇದ್ದಷ್ಟೂ ಅದು ನಿಮ್ಮನ್ನು ಇನ್ನೂ ಹೆಚ್ಚು ಗೊಂದಲಗೊಳಿಸುತ್ತದೆ ಮತ್ತು ಅದರಿಂದ ಹೊರಬರಲು ನೀವು ಪ್ರಯತ್ನಿಸುವಾಗ ಅದು ಇನ್ನೂ ಹೆಚ್ಚು ಆಶಾಭಂಗಗೊಳಿಸುತ್ತದೆ.” ಆದುದರಿಂದ, ನಿಮಗೆ ಆ್ಯನರೆಕ್ಸಿಯಾ ಮತ್ತು ಬುಲಿಮಿಯದ ರೋಗಲಕ್ಷಣಗಳು ಕಾಣಿಸಿಕೊಳ್ಳುವಲ್ಲಿ, ನಿಮಗೆ ನಿಜವಾಗಿಯೂ ಸಹಾಯದ ಅಗತ್ಯವಿದೆ. ಆ “ತೊಳಸುಬಳಸು ಹಾದಿ”ಯಿಂದ ನೀವು ಹೊರಬರಲಾರಿರಿ. ಆದುದರಿಂದ ಹೆತ್ತವರೊಂದಿಗೆ ಇಲ್ಲವೇ ಬೇರೊಬ್ಬ ನಂಬಿಗಸ್ತ ವಯಸ್ಕರೊಂದಿಗೆ ಅಂತರಂಗವನ್ನು ತೋಡಿಕೊಳ್ಳಿರಿ. ಬೈಬಲಿನ ಜ್ಞಾನೋಕ್ತಿಯು ಹೇಳುವುದು: “[“ನಿಜ,” NW] ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.”—ಜ್ಞಾನೋಕ್ತಿ 17:17.
ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಇಂತಹ ನಂಬಿಗಸ್ತ ಮಿತ್ರರನ್ನು ಕ್ರೈಸ್ತ ಸಭೆಯಲ್ಲಿರುವ ಹಿರಿಯರ ಮಧ್ಯೆ ಕಂಡುಕೊಳ್ಳುತ್ತಾರೆ. ಖಂಡಿತವಾಗಿಯೂ, ಹಿರಿಯರು ವೈದ್ಯರಾಗಿರುವುದಿಲ್ಲ ಮತ್ತು ಅವರು ನೀಡುವ ಸಹಾಯವು ವೈದ್ಯಕೀಯ ಸಹಾಯದ ಸ್ಥಾನವನ್ನು ತೆಗೆದುಕೊಳ್ಳುವುದಿಲ್ಲ. ಆದರೂ, ಕ್ರೈಸ್ತ ಮೇಲ್ವಿಚಾರಕರು, “ಬಡವನ ಮೊರೆಗೆ” ಕಿವಿಮುಚ್ಚಿಕೊಳ್ಳುವವರಾಗಿ ಇರುವುದಿಲ್ಲ ಮತ್ತು ಅವರು ನೀಡುವ ಸಲಹೆ, ಮಾಡುವ ಪ್ರಾರ್ಥನೆ “ರೋಗಿಯನ್ನು” ಆತ್ಮಿಕವಾಗಿ “ರಕ್ಷಿಸುವದು.”—ಜ್ಞಾನೋಕ್ತಿ 21:13; ಯಾಕೋಬ 5:13-15.
ಯಾರಾದರೊಬ್ಬರೊಂದಿಗೆ ಮುಖಾಮುಖಿಯಾಗಿ ಅಂತರಂಗವನ್ನು ತೋಡಿಕೊಳ್ಳಲು ನಿಮಗೆ ಇರುಸುಮುರುಸಾಗುವುದಾದರೆ, ನಿಮ್ಮ ಮನಸ್ಸಿನ ಭಾವನೆಗಳನ್ನು ಒಂದು ಪತ್ರದಲ್ಲಿ ಬರೆಯಿರಿ. ಮತ್ತು ಅದಕ್ಕೆ ಉತ್ತರವನ್ನು ಕೊಡುವಂತೆ ಅವರಿಗೆ ಕೇಳಿಕೊಳ್ಳಿರಿ. ಇಲ್ಲಿ ಮುಖ್ಯವಾದ ವಿಷಯವು ವಿಷಯಗಳನ್ನು ಬಹಿರಂಗಗೊಳಿಸುವುದಾಗಿರುವುದಿಲ್ಲ. “ಸಮಸ್ಯೆಯೊಂದಿಗೆ ಇನ್ನೂ ಹೋರಾಡಸಾಧ್ಯವಿಲ್ಲ ಎಂದು ನಿಮಗೆ ತೋರುವಾಗ, ಅದರಿಂದ ಹೊರಬರಲಿಕ್ಕಾಗಿ ಯಾರಾದರೊಬ್ಬರ ಸಹಾಯಹಸ್ತಕ್ಕಾಗಿ ಕೈಚಾಚುತ್ತೀರಿ” ಎಂದು ನ್ಯಾನ್ಸೀ ಕಾಲಾಡ್ನೀ ಬರೆಯುತ್ತಾರೆ. ಅವರು ಕೂಡಿಸುವುದು: “ಈ ರೀತಿ ಯೋಚಿಸಿ, ಕ್ರಿಯೆಗೈಯುವುದು ನಿಮಗೆ ಕಷ್ಟಕರವಾಗಿ ತೋರಬಹುದು, ಆದರೆ ಅವುಗಳು ಕಾರ್ಯಸಾಧಕವಾದವುಗಳು, ಆ ತೊಳಸುಬಳಸು ಹಾದಿಯಿಂದ ಹೊರಬರಲಿಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡುವಂತಹವುಗಳು ಆಗಿವೆ.”
ಕ್ರೈಸ್ತ ಯುವ ಜನರಿಗೆ ಇನ್ನೊಂದು ಹೆಚ್ಚು ಶಕ್ತಿಶಾಲಿಯಾದ ಸಂಪನ್ಮೂಲವಿದೆ, ಅದು ಪ್ರಾರ್ಥನೆಯಾಗಿದೆ. ದೇವರಿಗೆ ಪ್ರಾರ್ಥಿಸುವುದು ಮಾನಸಿಕವಾಗಿ ಶಾಂತಿಯಿಂದಿರುವಂತೆ ಸಹಾಯಮಾಡುವಂತಹ ವಿಷಯವಾಗಿರುವುದಿಲ್ಲ. ಅದಕ್ಕೆ ಬದಲಾಗಿ ನಿಮಗಿಂತಲೂ ಹೆಚ್ಚು ಅರ್ಥಮಾಡಿಕೊಳ್ಳುವ ಸೃಷ್ಟಿಕರ್ತನೊಂದಿಗೆ, ನಿಜವಾದ ಮತ್ತು ಅತಿ ಪ್ರಾಮುಖ್ಯವಾದ ಸಂವಾದವಾಗಿದೆ! (1 ಯೋಹಾನ 3:19, 20) ಆದಕಾರಣ, ಎಲ್ಲ ಅಸ್ವಸ್ಥತೆಗಳನ್ನು ತೆಗೆದುಹಾಕಲು ಇದು ಯೆಹೋವನ ತಕ್ಕ ಕಾಲವಾಗಿರದ ಕಾರಣ, ನೀವು ತತ್ತರಿಸದಂತೆ ಹೆಜ್ಜೆಗಳನ್ನು ಸರಿಯಾಗಿ ಹಾಕುವಂತೆ ನಿಮಗೆ ನಮ್ಮ ಪ್ರೀತಿಪರ ದೇವರು ಸಹಾಯಮಾಡುವನು. (ಕೀರ್ತನೆ 55:22) ಕೀರ್ತನೆಗಾರನಾದ ದಾವೀದನು ತನ್ನ ಸ್ವಂತ ಅನುಭವದಿಂದ ಬರೆದದ್ದು: “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು. ಕಷ್ಟದಲ್ಲಿದ್ದ ಈ ಮನುಷ್ಯನು ಮೊರೆಯಿಡಲು ಯೆಹೋವನು ಕೇಳಿ ಎಲ್ಲಾ ಬಾಧೆಗಳಿಂದ ಬಿಡಿಸಿದನು.”—ಕೀರ್ತನೆ 34:4, 6.
ಹಾಗಾದರೆ, ಯಾರ ಬಳಿಯಲ್ಲಿಯೂ ತೋಡಿಕೊಳ್ಳಲಿಕ್ಕಾಗದ ನಿಮ್ಮ ಭಾವನೆಗಳನ್ನು ಯೆಹೋವ ದೇವರಿಗೆ ಹೇಳಿರಿ. “ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎಂದು ಅಪೊಸ್ತಲ ಪೇತ್ರನು ಬರೆಯುತ್ತಾನೆ. (1 ಪೇತ್ರ 5:7) ಯೆಹೋವನ ಪ್ರೀತಿಪರ ಕರುಣೆಗೆ ಗಣ್ಯತೆಯನ್ನು ಬೆಳೆಸಿಕೊಳ್ಳಲು, ಕೀರ್ತನೆ 34, 77, 86, 103, ಮತ್ತು 139ನ್ನು ಜಾಗರೂಕವಾಗಿ ಏಕೆ ಓದಬಾರದು? ಈ ಕೀರ್ತನೆಗಳ ಕುರಿತು ಮನನಮಾಡುವುದು, ಯೆಹೋವನು ನಿಷ್ಠೆಯುಳ್ಳವನಾಗಿದ್ದಾನೆ ಮತ್ತು ನೀವು ಸಫಲಗೊಳ್ಳುವಂತೆ ಬಯಸುತ್ತಾನೆ ಎಂಬ ನಿಮ್ಮ ನಿಶ್ಚಿತಾಭಿಪ್ರಾಯವನ್ನು ಬಲಗೊಳಿಸುವುದು. ಆತನ ವಾಕ್ಯವನ್ನು ಓದುವ ಮೂಲಕ, ಹೀಗೆ ಬರೆದ ದಾವೀದನಂತೆ ನಿಮಗೂ ಅನಿಸುವುದು: “ವ್ಯಾಕುಲಗೊಂಡು, ಚಿಂತಿಸುವಾಗಲೆಲ್ಲ, ನೀನು ನನ್ನನ್ನು ಸಂತೈಸುತ್ತೀ ಮತ್ತು ನನ್ನನ್ನು ಸಂತೋಷಗೊಳಿಸುತ್ತೀ.”—ಕೀರ್ತನೆ 94:19, ಟುಡೇಸ್ ಇಂಗ್ಲಿಷ್ ವರ್ಷನ್.
ತಾಳ್ಮೆಯಿಂದಿರಿ—ಕ್ರಮೇಣವಾಗಿ ಚೇತರಿಸಿಕೊಳ್ಳುವಿರಿ
ಆಹಾರದ ವ್ಯಾಧಿಯಿಂದ ಬಳಲುತ್ತಿರುವವರು ಸಹಾಯವನ್ನು ಪಡೆದುಕೊಳ್ಳುತ್ತಿರುವಾಗ, ಅವರು ತಕ್ಷಣವೇ ಚೇತರಿಸಿಕೊಳ್ಳುವುದಿಲ್ಲ. ಆರಂಭದಲ್ಲಿ ಉಲ್ಲೇಖಿಸಿದ ಜೇಮೀಯನ್ನು ತೆಗೆದುಕೊಳ್ಳಿರಿ. ಸಹಾಯವನ್ನು ಪಡೆದುಕೊಳ್ಳಲು ಪ್ರಾರಂಭಿಸಿದ ಅನಂತರವೂ, ಒಂದು ಬಟ್ಟಲು ಕಾರ್ನ್ಫ್ಲೇಕ್ಸನ್ನು ತಿನ್ನಲು ಸಹ ಅವಳಿಗೆ ಕಷ್ಟವಾಗುತ್ತಿತ್ತು. “ಇದು ನನ್ನ ಆರೋಗ್ಯಕ್ಕೆ ಒಳ್ಳೆಯದು ಮತ್ತು ಜೀವಿಸಲಿಕ್ಕಾಗಿ ಆಹಾರವು ಅತ್ಯಾವಶ್ಯಕ ಎಂದು ನನಗೆ ನಾನೇ ಹೇಳಿಕೊಳ್ಳಬೇಕಾಗಿತ್ತು. ನಾನು ತಿನ್ನುತ್ತಿದ್ದ ಒಂದು ಚಮಚ ಕಾರ್ನ್ಫ್ಲೇಕ್ಸ್ ನನಗೆ ಸಾವಿರ ಪೌಂಡುಗಳ ಭಾರದಂತಿದೆ” ಎಂದು ಅವಳು ಹೇಳುತ್ತಾಳೆ.
ಒಮ್ಮೆ ಅವಳು ಮೃತ್ಯುವಿಗೆ ತೀರ ಸಮೀಪವಾಗಿದ್ದರೂ, ಅವಳು ಆಹಾರದ ಕುರಿತಾಗಿರುವ ಅವಳ ಚಿಂತೆಯನ್ನು ಜಯಿಸಲು ನಿರ್ಣಯವನ್ನು ಮಾಡಿದಳು. “ನಾನು ಸಾಯುವುದಿಲ್ಲ. ನಾನು ಇದರೊಂದಿಗೆ ಹೋರಾಡಿ, ಜಯಿಸುತ್ತೇನೆ. ನಾನು ಆ್ಯನರೆಕ್ಸಿಯಾವನ್ನು ಹೊಡೆದೋಡಿಸುತ್ತೇನೆ. ಇದು ಕಷ್ಟಕರವೇ, ಆದರೆ ಏನೇ ಆಗಲಿ ನಾನು ಬಿಟ್ಟುಕೊಡುವುದಿಲ್ಲ” ಎಂದು ಅವಳು ಹೇಳಿದಳು. ಮತ್ತು ನೀವು ಸಹ ಜಯಿಸಬಲ್ಲಿರಿ!
[ಅಧ್ಯಯನ ಪ್ರಶ್ನೆಗಳು]
a ಮೊಟ್ಟೆಯ ಹಳದಿ ಭಾಗ, ತರಕಾರಿಗಳ ಎಣ್ಣೆ, ವಿನಿಗರ್ ಹುಳಿ ಅಥವಾ ನಿಂಬೆಯ ರಸದ ಮಿಶ್ರಣವೇ ಮೇಅನೇಸ್ ಆಗಿರುತ್ತದೆ.
b ಮೇ 8, 1999ರ ಎಚ್ಚರ! ಪತ್ರಿಕೆಯ, 20-22ನೇ ಪುಟಗಳನ್ನು ನೋಡಿರಿ.
c ಆದಿಕಾಂಡ 12:11; 29:17; 39:6; 1 ಸಮುವೇಲ 17:42; 25:3ನ್ನು ನೋಡಿರಿ.
[ಪುಟ 26 ರಲ್ಲಿರುವ ಚಿತ್ರ]
ಸಮತೂಕವುಳ್ಳ ಆಹಾರ ಮತ್ತು ಸಮಂಜಸವಾದ ವ್ಯಾಯಾಮ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯಮಾಡಸಾಧ್ಯವಿದೆ