ಅಂಗವಿಕಲತೆ—ಇದರ ಅಪಾಯವನ್ನು ನೀವು ಕಡಿಮೆಗೊಳಿಸಬಲ್ಲ ವಿಧ
ಹೆಚ್ಚಿನ ಸಂದರ್ಭಗಳಲ್ಲಿ ಅಂಗವಿಕಲತೆಯನ್ನು ತಡೆಗಟ್ಟಸಾಧ್ಯವಿದೆ! ಬಾಹ್ಯ ನಾಳವ್ಯೂಹ ರೋಗದಿಂದ (ಪಿವಿಡಿ) ನರಳುತ್ತಿರುವವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಹಿಂದಿನ ಲೇಖನದಲ್ಲಿ ಹೇಳಲ್ಪಟ್ಟಂತೆ, ಪಿವಿಡಿ ಮಧುಮೇಹ ರೋಗದಿಂದ ಉಂಟಾಗುತ್ತದೆ.a ಸಂತೋಷಕರವಾದ ವಿಷಯವೆಂದರೆ, ಮಧುಮೇಹ ರೋಗವನ್ನು ಅನೇಕ ವೇಳೆ ನಿಯಂತ್ರಣದಲ್ಲಿಡಸಾಧ್ಯವಿದೆ.
“ಇನ್ಸುಲಿನ್ ಔಷಧಿಯನ್ನು ತೆಗೆದುಕೊಳ್ಳುವಂತೆ ಹೇಳಿರಲಿ ಇಲ್ಲದಿರಲಿ ಮಧುಮೇಹ ರೋಗದ ಅತ್ಯಾವಶ್ಯಕ ಭಾಗವು ಡೈಯಟ್ (ಆಹಾರ ಪಥ್ಯ) ಆಗಿದೆ” ಎಂದು ದಿ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ನ್ಯೂ ಯಾರ್ಕ್ ಸಿಟಿಯಲ್ಲಿರುವ ಕಿಂಗ್ಸ್ ಕೌಂಟಿ ಆಸ್ಪತ್ರೆಯ ಡಾ. ಮೊರ್ಸಲ್ ಬಾಯೋಲ್ ಎಚ್ಚರ! ಪತ್ರಿಕೆಗೆ ಹೇಳಿದ್ದು: “ಮಧುಮೇಹ ರೋಗಿಗಳು ತಮ್ಮ ಸ್ಥಿತಿಯ ಬಗ್ಗೆ ಗಂಭೀರವಾಗಿ ಯೋಚಿಸುವಲ್ಲಿ, ತಾವು ಸೇವಿಸುವ ಆಹಾರದ ಬಗ್ಗೆ ಜಾಗರೂಕರಾಗಿರುವಲ್ಲಿ, ಮತ್ತು ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳುವಲ್ಲಿ ಕಾಲನ್ನು ಕಳೆದುಕೊಳ್ಳುವ ಅಪಾಯವನ್ನು ಕಡಿಮೆಮಾಡಸಾಧ್ಯವಿದೆ.” ಈ ಸಲಹೆಯನ್ನು ಅನುಸರಿಸುವ IIನೇ ಮಾದರಿಯ ಮಧುಮೇಹ ರೋಗಿಗಳು ತಮ್ಮ ರೋಗಲಕ್ಷಣಗಳು ಸುಧಾರಿಸುವುದನ್ನು ಸಹ ಕಂಡುಕೊಳ್ಳಬಹುದು.b
ವ್ಯಾಯಾಮ ಅತ್ಯಾವಶ್ಯಕ
ವ್ಯಾಯಾಮವು ಸಹ ಬಹಳ ಪ್ರಾಮುಖ್ಯ. ಇದು ಗ್ಲೂಕೋಸ್ ಅಥವಾ ಸಕ್ಕರೆಯ ಮಟ್ಟವನ್ನು ಸಾಮಾನ್ಯ ಮಟ್ಟದಲ್ಲಿಟ್ಟುಕೊಳ್ಳುವಂತೆ ದೇಹಕ್ಕೆ ಸಹಾಯಮಾಡುತ್ತದೆ. ಪಿವಿಡಿ ರೋಗವನ್ನು ಪತ್ತೆಹಚ್ಚುವಾಗ, ವ್ಯಾಯಾಮವನ್ನು ಮಾಡುವುದರಿಂದ ಶಕ್ತಿ, ನಮ್ಯತೆಯನ್ನು ಕಾಪಾಡಿಕೊಳ್ಳಸಾಧ್ಯವಿದೆ ಮತ್ತು ಹಾನಿಗೊಂಡ ಕ್ಷೇತ್ರಗಳಿಗೆ ರಕ್ತ ಹರಿಯುವಿಕೆಯನ್ನು ಸರಾಗಗೊಳಿಸಸಾಧ್ಯವಿದೆ. ಆಗಾಗ್ಗೆ ಮರುಕಳಿಸುವ ಕುಂಟುತನವನ್ನು—ನಡೆಯುವಾಗ ಅಥವಾ ವ್ಯಾಯಾಮಮಾಡುವಾಗ ಪಿವಿಡಿ ರೋಗಿಗಳಿಗೆ ಕಾಲಿನ ಹಿಂಭಾಗದ ಮಾಂಸಖಂಡಗಳಲ್ಲಿ ಉಂಟಾಗುವ ನೋವು—ಕಡಿಮೆಮಾಡಲು ವ್ಯಾಯಾಮವು ಸಹಾಯಮಾಡುತ್ತದೆ. ಅಂತಹವರು ತಮ್ಮ ಕಾಲುಗಳ ಮೇಲೆ ಒತ್ತಡ ಹಾಕುವ ಅಥವಾ ನರಘಾತಮಾಡುವ ವ್ಯಾಯಾಮಗಳನ್ನು ಮಾಡಬಾರದು. ನಡೆಯುವುದು, ಸೈಕ್ಲಿಂಗ್ ಮಾಡುವುದು, ದೋಣಿ ನಡೆಸುವುದು, ಈಜಾಟ, ಮತ್ತು ಜಲ ಕಸರತ್ತುಗಳು ಹೆಚ್ಚು ಸೂಕ್ತವಾದ ವ್ಯಾಯಾಮಗಳಾಗಿರುತ್ತವೆ. ಡೈಯಟಿಂಗ್ ಮಾಡುವ ಮೊದಲು ಅಥವಾ ವ್ಯಾಯಾಮದ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ಒಬ್ಬನು ಯಾವಾಗಲೂ ವೈದ್ಯನನ್ನು ಸಂಪರ್ಕಿಸುವುದು ಒಳಿತಾಗಿರುತ್ತದೆ.
ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳಲು ಇಷ್ಟಪಡುವವರೆಲ್ಲರೂ ಧೂಮಪಾನದಿಂದ ದೂರವಿರಬೇಕು. ಧೂಮಪಾನ ಮಾಡುವುದರಿಂದ ಉಂಟಾಗುವ ಅಥವಾ ಉಲ್ಬಣಿಸುವ ವೈದ್ಯಕೀಯ ಸಮಸ್ಯೆಗಳ ಉದ್ದವಾದ ಪಟ್ಟಿಯಲ್ಲಿ ಪಿವಿಡಿ ರೋಗವು ಸಹ ಒಂದಾಗಿದೆ. “ಧೂಮಪಾನ ಮಾಡುವುದು ಅಂಗಚ್ಛೇದನಗಳಲ್ಲಿ, ವಿಶೇಷವಾಗಿ ಧೂಮಪಾನಿಯು ಮಧುಮೇಹ ರೋಗಿ ಮತ್ತು ಪಿವಿಡಿ ರೋಗಿಯಾಗಿದ್ದಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತದೆ.” ಎಂದು ಡಾ. ಬಾಯೋಲ್ ಹೇಳಿದರು. ಅದು ಎಷ್ಟು ದೊಡ್ಡ ಅಂಶವಾಗಿದೆ? ಅಂಗಚ್ಛೇದನವಾದವರ ಆರೋಗ್ಯ ಸುಧಾರಣೆಯ ಕೈಪಿಡಿಯು ಹೇಳುವುದು, “ಧೂಮಪಾನಿಗಳಲ್ಲದವರಿಗಿಂತ ಧೂಮಪಾನಮಾಡುವವರ ಅಂಗಚ್ಛೇದನವಾಗುವ ಸಂಭವನೀಯತೆಯು 10 ಪಟ್ಟು ಹೆಚ್ಚಾಗಿರುತ್ತದೆ.”
ದುರ್ಬಲ ಕೈಕಾಲುಗಳ ರಕ್ಷಣೆ
ಪಿವಿಡಿ ರೋಗವು ಕಾಲುಗಳಿಗೆ ರಕ್ತಪರಿಚಲನೆಯನ್ನು ಕಡಿಮೆಗೊಳಿಸಬಲ್ಲದು. ಮತ್ತು ಇದು ನ್ಯೂರೋಪಥಿ ಎಂದು ಕರೆಯಲ್ಪಡುವ, ನರಗಳ ನಿಶ್ಚೇತನ ಅಥವಾ ಜಡತ್ವದ ಸ್ಥಿತಿಯನ್ನು ಉಂಟುಮಾಡಬಲ್ಲದು. ಅಂಗಗಳಿಗೆ ಬೇಗನೆ ಗಾಯವಾಗಬಹುದು. ಒಬ್ಬ ವ್ಯಕ್ತಿ ವಿಶ್ರಾಂತಿ ಪಡೆಯುತ್ತಾ ಮಲಗಿರುವಾಗಲೂ ಹಾನಿಗೊಳಗಾಗಬಹುದು. ಉದಾಹರಣೆಗೆ, ಅವನಿಗೆ ನೋವಾಗದೇ ಇರುವ ಕಾರಣ, ಇಲೆಕ್ಟ್ರಿಕ್ ಕಂಬಳಿ ಅಥವಾ ಶಾಖವನ್ನು ಹೆಚ್ಚಿಸುವ ಕಂಬಳಿಯು ಹೆಚ್ಚು ಬಿಸಿಯಾಗುವಾಗ, ಗಂಭೀರವಾದ ರೀತಿಯಲ್ಲಿ ಅವನು ಸುಟ್ಟುಗಾಯವನ್ನು ಪಡೆದುಕೊಳ್ಳಸಾಧ್ಯವಿದೆ! ಈ ಕಾರಣಕ್ಕಾಗಿಯೇ, ಉತ್ಪಾದಕರು ಈ ವಸ್ತುಗಳನ್ನು ಉಪಯೋಗಿಸುವಾಗ ಮಧುಮೇಹಿ ರೋಗಿಗಳು ಹುಷಾರಾಗಿರಬೇಕು ಎಂಬ ಎಚ್ಚರಿಕೆಯನ್ನು ಕೊಡುತ್ತಾರೆ.
ದುರ್ಬಲ ಕಾಲುಗಳು ಸೋಂಕುಗೊಳ್ಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಚಿಕ್ಕ ತರಚು ಗಾಯವು ಸಹ ಹುಣ್ಣುಗಳು, ಮತ್ತು ಗ್ಯಾಂಗ್ರೀನ್ (ಅಂಗಕ್ಷಯ) ಆಗಿಯೂ ಪರಿವರ್ತನೆಗೊಳ್ಳಬಲ್ಲದು. ಆದುದರಿಂದ ಪಾದಗಳ ಸಂರಕ್ಷಣೆಯು ಅತ್ಯಾವಶ್ಯಕ. ಮತ್ತು ಇದು ಆರಾಮವಾದ, ಸರಿಯಾದ ಅಳತೆಯ ಶೂಗಳನ್ನು ಧರಿಸುವುದನ್ನು ಹಾಗೂ ಕಾಲುಗಳನ್ನೂ ಪಾದಗಳನ್ನೂ ಶುದ್ಧವಾಗಿಯೂ ಶುಷ್ಕವಾಗಿಯೂ ಇಟ್ಟುಕೊಳ್ಳುವುದನ್ನು ಕೇಳಿಕೊಳ್ಳುತ್ತದೆ. ಪಾದಗಳ ಆರೈಕೆಯ ಬಗ್ಗೆ ರೋಗಿಗಳಿಗೆ ಶಿಕ್ಷಣಕೊಡಲು ಅನೇಕ ಆಸ್ಪತ್ರೆಗಳಲ್ಲಿ ಪಾದದ ಕ್ಲಿನಿಕ್ಗಳಿವೆ.
ಪಿವಿಡಿ ರೋಗವು ಉಲ್ಬಣಗೊಂಡು ಶಸ್ತ್ರಚಿಕಿತ್ಸೆಯ ಅಗತ್ಯವು ಕಂಡುಬರುವಾಗ, ಶಸ್ತ್ರಚಿಕಿತ್ಸಕರು ಸಾಮಾನ್ಯವಾಗಿ ಅಂಗಚ್ಛೇದನವನ್ನು ಮಾಡದಿರಲು ಪ್ರಯತ್ನಿಸುವರು. ಒಂದು ಬದಲಿ ಕಾರ್ಯವಿಧಾನವು ಬಲೂನ್ ಆ್ಯಂಜಿಯೋಪ್ಲಾಸ್ಟಿ ಆಗಿದೆ. ನಾಳವ್ಯೂಹದ ಸರ್ಜನ್ ಬಲೂನಿನ ತುದಿಯುಳ್ಳ ತೂರುನಳಿಕೆಯನ್ನು ಒಳತೂರಿಸುತ್ತಾನೆ. ಬಲೂನ್ ಉಬ್ಬುತ್ತದೆ, ಮತ್ತು ಇದು ಸಂಕುಚಿತಗೊಂಡಿರುವ ಅಪಧಮನಿಯನ್ನು ಹಿಗ್ಗಿಸುತ್ತದೆ. ಮತ್ತೊಂದು ಆಯ್ಕೆಯು ಬೈಪಾಸ್ ಸರ್ಜರಿಯಾಗಿರುತ್ತದೆ. ಇದು ರೋಗಪೀಡಿತ ರಕ್ತನಾಳಗಳ ಜಾಗದಲ್ಲಿ, ದೇಹದ ಮತ್ತೊಂದು ಭಾಗದಿಂದ ತೆಗೆಯಲ್ಪಟ್ಟ ನಾಳಗಳನ್ನು ಜೋಡಿಸುವುದಾಗಿದೆ.
54 ವರ್ಷ ಪ್ರಾಯದ ಬಾರ್ಬ್ರ, ನಾಲ್ಕು ವರ್ಷ ಪ್ರಾಯದಿಂದಲೇ Iನೇ ಮಾದರಿಯ ಮಧುಮೇಹ ರೋಗದಿಂದ ಬಳಲುತ್ತಿದ್ದಾಳೆ. ತನ್ನ ಮೊದಲ ಮಗುವಿಗೆ ಜನ್ಮವಿತ್ತ ಬಳಿಕ, ಅವಳ ಪಾದಕ್ಕೆ ಪಿವಿಡಿ ರೋಗವು ಉಂಟಾಯಿತು. ಕೆಲವು ವೈದ್ಯರು ಕಾಲನ್ನು ಕತ್ತರಿಸಬೇಕು ಎಂದು ಹೇಳಿದರು. ತನ್ನ ಪಾದಕ್ಕೆ ರಕ್ತಪರಿಚಲನೆಯನ್ನು ಸುಧಾರಿಸಲು ಆ್ಯಂಜಿಯೋಪ್ಲಾಸ್ಟಿ ವಿಧಾನವನ್ನು ಉಪಯೋಗಿಸುವ ಒಬ್ಬ ಪ್ರಖ್ಯಾತ ನರವ್ಯೂಹ ಸರ್ಜನ್ ಅನ್ನು ಬಾರ್ಬ್ರ ಕಂಡುಕೊಂಡಳು. ಕೆಲವು ಸಮಯದ ತನಕ ಆ್ಯಂಜಿಯೋಪ್ಲಾಸ್ಟಿ ಕಾರ್ಯಮಾಡಿತು. ಆದರೆ ಕೊನೆಗೆ ಬಾರ್ಬ್ರಳಿಗೆ ಬೈಪಾಸ್ ಸರ್ಜರಿಯನ್ನು ಮಾಡಬೇಕಾಯಿತು ಮತ್ತು ಇದು ಯಶಸ್ವಿಯಾಯಿತು. ಬಾರ್ಬ್ರ ಈಗ ತನ್ನ ಪಾದಗಳ ಕಡೆಗೆ ತೀರ ಗಮನವನ್ನು ಕೊಡುತ್ತಾಳೆ.
ಗಾಯವನ್ನು ಮಾಡಿಕೊಳ್ಳದಿರಿ
ಅಂಗವಿಕಲತೆಗೆ ಎರಡನೆಯ ಪ್ರಮುಖ ಕಾರಣವು ಗಾಯವಾಗಿದೆ. ಗಾಯವು ದೇಹದ ನಿರ್ದಿಷ್ಟ ಭಾಗಕ್ಕೆ ಬಾಧಿಸಲೇಬೇಕೆಂದಿಲ್ಲದೇ ಇರುವುದರಿಂದ, ಅದು ಯಾವುದೇ ಅಂಗವನ್ನು ನಾಶಗೊಳಿಸಬಹುದು. ಜೀವದ ಬಗ್ಗೆ ದೈವಿಕ ನೋಟವನ್ನು ಪಡೆದುಕೊಳ್ಳುವುದು, ಒಬ್ಬ ವ್ಯಕ್ತಿಗೆ ಗಾಯವಾಗುವ ಅಪಾಯವನ್ನು ಕಡಿಮೆಗೊಳಿಸಬಹುದು. ಕೆಲಸಮಾಡುತ್ತಿರಲಿ, ವಾಹನ ಚಲಾಯಿಸುತ್ತಿರಲಿ, ಅಥವಾ ಮನೋರಂಜನೆಯಲ್ಲಿಯೇ ತೊಡಗಿರಲಿ, ಕ್ರೈಸ್ತರು ತಮ್ಮ ದೇಹಗಳನ್ನು ದೇವರಿಂದ ಪಡೆದ ಕೊಡುಗೆಯಂತೆ ನೋಡಿಕೊಳ್ಳಬೇಕು. ಹೀಗೆ, ಅವರು ಎಲ್ಲ ಸುರಕ್ಷೆಯ ಎಚ್ಚರಿಕೆಗಳನ್ನು ಗೌರವಿಸಿ, ಮೂರ್ಖತನದಿಂದ ಅಪಾಯಗಳಿಗೆ ತಲೆಯೊಡ್ಡರು.—ರೋಮಾಪುರ 12:1; 2 ಕೊರಿಂಥ 7:1.
ನೆಲಸಿಡಿಮದ್ದುಗಳು ಹುದುಗಿಸಲ್ಪಟ್ಟಿರುವ ದೇಶಗಳಲ್ಲಿ ಈ ಗಾಯದ ಅಪಾಯವನ್ನು ಕಡಿಮೆಮಾಡಲು ಯಾವ ಕ್ರಮವನ್ನು ಕೈಗೊಳ್ಳಲಾಗುತ್ತಿದೆ? ಅನೇಕ ದೇಶಗಳಲ್ಲಿ ಸರಕಾರದಿಂದ ನೆಲಸಿಡಿಮದ್ದುಗಳ ಬಗ್ಗೆ ಎಚ್ಚರಿಕೆಯನ್ನು ನೀಡುವ ಕಾರ್ಯಕ್ರಮಗಳು ನಡೆಸಲ್ಪಡುತ್ತಿದೆ. ಅಮೆರಿಕದ ಸೆಕ್ರೆಟರಿ-ಜನರಲ್ರ ವರದಿಗನುಸಾರ, “ಅಪಾಯದಲ್ಲಿರುವ ಜನರಿಗೆ . . . ನೆಲಸಿಡಿಮದ್ದಿರುವ ಸ್ಥಳಗಳಲ್ಲಿ ವಾಸಿಸುತ್ತಿರುವಾಗ ಮತ್ತು ಕೆಲಸಮಾಡುತ್ತಿರುವಾಗ ಅದರ ಬಲಿಪಶುವಾಗುವ ಸಂದರ್ಭಗಳನ್ನು ಹೇಗೆ ಕಡಿಮೆಗೊಳಿಸುವುದು” ಎಂಬುದನ್ನು ಈ ಕಾರ್ಯಕ್ರಮಗಳು ಕಲಿಸುತ್ತಿವೆ.
ಖೇದಕರವಾದ ಸಂಗತಿಯೇನೆಂದರೆ, “ಜನರು ನೆಲಸಿಡಿಮದ್ದುಗಳಿಗೆ ಒಗ್ಗಿಹೋಗಿರುವುದರಿಂದ ಬೇಜವಾಬ್ದಾರಿಯುಳ್ಳವರಾಗಿ ವರ್ತಿಸುತ್ತಾರೆ” ಎಂದು ವಿಶ್ವ ಸಂಸ್ಥೆಯ ವರದಿಯು ಹೇಳುತ್ತದೆ. “ಕೆಲವೊಮ್ಮೆ ಧಾರ್ಮಿಕ ನಂಬಿಕೆಗಳು, ಅಂಶಗಳು, ಇಂತಹ ಅಪಾಯಗಳು ಅದೃಷ್ಟವಾಗಿವೆ ಎಂದು [ಜನರು] ನೆನಸುವಂತೆ ಉತ್ತೇಜಿಸುತ್ತದೆ.” ಇಂತಹ ಅದೃಷ್ಟವಾದದ ಮನೋಭಾವಕ್ಕೆ ದೇವರ ವಾಕ್ಯವು ಸಮರ್ಥನೆಯನ್ನು ಕೊಡುವುದಿಲ್ಲ. ಅದಕ್ಕೆ ಬದಲಾಗಿ, ನಾವು ಹುಷಾರಾಗಿದ್ದು, ಸುರಕ್ಷಾ ಕ್ರಮವನ್ನು ಕೈಕೊಳ್ಳುವಂತೆ ಬೈಬಲು ಉತ್ತೇಜಿಸುತ್ತದೆ.—ಧರ್ಮೋಪದೇಶಕಾಂಡ 22:8; ಪ್ರಸಂಗಿ 10:9.
ನಿಮ್ಮ ಆರೋಗ್ಯವನ್ನು ಸಂರಕ್ಷಿಸಲು ಜಾಗರೂಕರಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಅಂಗವಿಕಲತೆಯಾಗುವ ಅಪಾಯವನ್ನು ನೀವು ಕಡಿಮೆಗೊಳಿಸಸಾಧ್ಯವಿದೆ. ಈಗಾಗಲೇ ಅಂಗವಿಕಲರಾಗಿರುವವರ ಕುರಿತಾಗಿ ಏನು? ಅವರು ಈಗ ಉತ್ತಮ ಗುಣಮಟ್ಟದ ಜೀವಿತವನ್ನು ಸವಿಯಸಾಧ್ಯವೋ?
[ಅಧ್ಯಯನ ಪ್ರಶ್ನೆಗಳು]
a ವ್ಯಕ್ತಿಯೊಬ್ಬನು ಬಿಗಿಯಾದ ಉಡುಪನ್ನು ಧರಿಸುವಲ್ಲಿ ಅಥವಾ ಸರಿಯಾದ ಶೂಗಳನ್ನು ಹಾಕದೆ ಇರುವಲ್ಲಿ ಇಲ್ಲವೇ ಬಹಳ ಸಮಯದ ವರೆಗೆ (ವಿಶೇಷವಾಗಿ ಕಾಲುಗಳನ್ನು ಅಡ್ಡಡ್ಡವಾಗಿಟ್ಟುಕೊಂಡು) ಕುಳಿತುಕೊಳ್ಳುವಲ್ಲಿ, ಕಾಲುಗಳ ನಾಳವ್ಯೂಹದ ಸಮಸ್ಯೆಗಳು ಉಂಟಾಗಸಾಧ್ಯವಿದೆ ಅಥವಾ ಉಲ್ಬಣಗೊಳ್ಳಸಾಧ್ಯವಿದೆ.
b ನೇ ಮಾದರಿಯ ಮಧುಮೇಹ ರೋಗಿಗಳಿಗೆ ಪ್ರತಿದಿನ ಇನ್ಸುಲಿನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವಂತೆ ಹೇಳಲಾಗುತ್ತದೆ. IIನೇ ಮಾದರಿಯ ಮಧುಮೇಹ ರೋಗಿಗಳು (ಇನ್ಸುಲಿನ್ ಅವಲಂಬಿಗಳಲ್ಲದ ಮಧುಮೇಹ ರೋಗಿಗಳು) ತಮ್ಮ ರೋಗಸ್ಥಿತಿಯನ್ನು ಅನೇಕ ವೇಳೆ ಡೈಯಟ್ ಮತ್ತು ವ್ಯಾಯಾಮದ ಮೂಲಕ ನಿಯಂತ್ರಣದಲ್ಲಿಡಲು ಸಾಧ್ಯವಿದೆ. ಅಮೆರಿಕದಲ್ಲಿ, ಮಧುಮೇಹ ರೋಗಿಗಳಲ್ಲಿ 95 ಪ್ರತಿಶತದಷ್ಟು ರೋಗಿಗಳಿಗೆ IIನೇ ಮಾದರಿ ಮಧುಮೇಹ ರೋಗವಿದೆ.
[ಪುಟ 4 ರಲ್ಲಿರುವ ಚಿತ್ರ]
ಧೂಮಪಾನವು ಅಂಗವಿಕಲತೆಯ ಅಪಾಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ನಾಳವ್ಯೂಹ ರೋಗಿಗಳಿಗೆ
[ಪುಟ 5 ರಲ್ಲಿರುವ ಚಿತ್ರ]
ಸೂಕ್ತ ವ್ಯಾಯಾಮವನ್ನು ಮಾಡುವುದು ಮತ್ತು ಒಳ್ಳೆಯ ಆಹಾರವನ್ನು ಸೇವಿಸುವುದು ಆರೋಗ್ಯಕರ ನಾಳವ್ಯೂಹ ವ್ಯವಸ್ಥೆಯನ್ನು ಪ್ರವರ್ಧಿಸುತ್ತದೆ