ಅಂಗವಿಕಲತೆ—ನಿಮಗೂ ಸಂಭವಿಸಬಹುದೋ?
ಸಾರಯೆವೊ ನಗರದ ಎಳೆಬಿಸಿಲಿನ ಆಹ್ಲಾದತೆಯನ್ನು ಬೆಂಜಮಿನ್ ಸವಿಯುತ್ತಿದ್ದಾಗ, ಅವನು ಹುದುಗಿದ್ದ ನೆಲಸಿಡಿಮದ್ದಿನ ಮೇಲೆ ಕಾಲಿಟ್ಟನು. ಅವನ ಎಡಗಾಲು ಛಿದ್ರಗೊಂಡಿತು. “ನಾನು ಎದ್ದು ನಿಲ್ಲಲು ಪ್ರಯತ್ನಿಸಿದೆನಾದರೂ, ನನಗೆ ಆಗಲಿಲ್ಲ” ಎಂದು ಬೆಂಜಮಿನ್ ಜ್ಞಾಪಿಸಿಕೊಳ್ಳುತ್ತಾನೆ. ವರ್ಷವೊಂದರಲ್ಲಿ, ನೆಲಸಿಡಿಮದ್ದುಗಳಿಂದಾಗಿ ಅಸುನೀಗುವ ಅಥವಾ ಅಂಗವಿಕಲರಾಗುವ 20,000 ಜನರಲ್ಲಿ ಬೆಂಜಮಿನ್ ಕೇವಲ ಒಬ್ಬ ವ್ಯಕ್ತಿ.
ಸುಮಾರು 1.5 ಕೋಟಿಗಳಷ್ಟು ನೆಲಸಿಡಿಮದ್ದುಗಳನ್ನು ಅಂಗೋಲದಲ್ಲಿ ಹುದುಗಿಸಲಾಗಿದೆ. ಅಂದರೆ, ಆ ದೇಶದಲ್ಲಿರುವ ಪ್ರತಿಯೊಬ್ಬ ಸ್ತ್ರೀಪುರುಷ ಮಕ್ಕಳಾದಿ ಎಲ್ಲರಿಗೂ ಒಂದಕ್ಕಿಂತಲೂ ಹೆಚ್ಚಿನ ನೆಲಸಿಡಿಮದ್ದು. ಅಂಗವಿಕಲರಾಗಿರುವ ಸುಮಾರು 70,000 ಜನರು ಅಂಗೋಲದಲ್ಲಿದ್ದಾರೆ. ಎಂಬತ್ತು ಲಕ್ಷಗಳಿಂದ ಒಂದು ಕೋಟಿಯ ವರೆಗೆ ನೆಲಸಿಡಿಮದ್ದುಗಳು ಕಂಬೋಡಿಯದಲ್ಲಿ ಹುದುಗಿವೆ. ಮತ್ತು ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಅಂಗವಿಕಲರಿರುವ ದೇಶವಾಗಿದೆ. ಅಂದರೆ ಪ್ರತಿ 236 ವ್ಯಕ್ತಿಗಳಲ್ಲಿ ಒಬ್ಬ ವ್ಯಕ್ತಿಯು ಅಂಗವಿಕಲನಾಗಿದ್ದಾನೆ. ಬಾಸ್ನಿಯ ಮತ್ತು ಹರ್ಸಗೋವೀನದಲ್ಲಿ ಸುಮಾರು ಮೂವತ್ತು ಲಕ್ಷ ಸಿಡಿಮದ್ದುಗಳಿವೆ ಎಂದು ವರದಿಸಲಾಗಿದೆ. ಅಂದರೆ, ಒಂದು ಚದರ ಕಿಲೋಮೀಟರಿಗೆ 59 ನೆಲಸಿಡಿಮದ್ದುಗಳು.
ಆದರೆ, ಇದು ಯುದ್ಧಪೀಡಿತ ದೇಶಗಳಲ್ಲಿ ಮಾತ್ರ ಜನರು ಅಂಗವಿಕಲರಾಗಿದ್ದಾರೆಂದಲ್ಲ. ಉದಾಹರಣೆಗೆ, ಅಮೆರಿಕದಲ್ಲಿ ಸುಮಾರು 4,00,000 ಜನರು ಅಂಗವಿಕಲರಾಗಿದ್ದಾರೆ. ಆ ಸಂಖ್ಯೆಯಲ್ಲಿ ಒಳಗೂಡಿರುವ ಹೆಚ್ಚಿನ ವಯಸ್ಕರು “ಬಾಹ್ಯ ನಾಳವ್ಯೂಹ ರೋಗ” ಅಥವಾ ಪಿವಿಡಿ ಎಂಬ ಅಸ್ಥಿಗತ ರೋಗದ ಕಾರಣದಿಂದ ಅಂಗವಿಕಲರಾಗಿದ್ದಾರೆ. ಅನೇಕ ಕಾಯಿಲೆಗಳಿಗೆ ಈ ಪದವನ್ನು ಉಪಯೋಗಿಸಲಾಗುತ್ತದೆ. ಟೇಬರ್ಸ್ ಸೈಕ್ಲೊಪೆಡಿಕ್ ಮೆಡಿಕಲ್ ಡಿಕ್ಷನೆರಿ ಈ ರೀತಿಯ ಅರ್ಥನಿರೂಪಣೆಯನ್ನು ಕೊಡುತ್ತದೆ. ಅದು ಹೇಳುವುದು, “ಕೈಕಾಲುಗಳ ಅಪಧಮನಿಗಳ ಮತ್ತು ಅಭಿದಮನಿಗಳ ರೋಗಕ್ಕೆ ವಿಶೇಷವಾಗಿ, ಕೈಕಾಲುಗಳಿಗೆ ಅಥವಾ ಕೈಕಾಲುಗಳಿಂದ ಸಾಕಷ್ಟು ರಕ್ತ ಹರಿಯದೇ ಇರುವ ಸ್ಥಿತಿಗಳಿಗೆ” ಸಾಮಾನ್ಯವಾಗಿ ಪಿವಿಡಿ ಪದವನ್ನು ಉಪಯೋಗಿಸಲಾಗುತ್ತದೆ. ಪಿವಿಡಿ ಉಂಟಾಗುವುದಕ್ಕೆ ಮುಖ್ಯ ಕಾರಣವು ಮಧುಮೇಹ ರೋಗವಾಗಿದೆ. ವರ್ಲ್ಡ್ ಹೆಲ್ತ್ ರಿಪೋರ್ಟ್ 1998ಕ್ಕನುಸಾರ, “ವಯಸ್ಕರಲ್ಲಿ ಮಧುಮೇಹ ರೋಗವು, 1997ರ ಪ್ರಾರಂಭದಲ್ಲಿದ್ದ 14.3 ಕೋಟಿಯಿಂದ 2025ರಷ್ಟರೊಳಗೆ 30 ಕೋಟಿಗಳಷ್ಟು ಇಮ್ಮಡಿಯಾಗುವುದು.”
ಅಮೆರಿಕದಲ್ಲಿ ವಾಹನ, ಯಂತ್ರಗಳು, ವಿದ್ಯುತ್ ಸಾಧನಗಳು, ಬಂದೂಕುಗಳಿಂದ ಉಂಟಾಗುವ ಅಪಘಾತಗಳನ್ನು ಒಳಗೊಂಡು ಈ ಕ್ಲೇಶವು ಅಂಗವಿಕಲತೆಗೆ ಎರಡನೇ ಮುಖ್ಯ ಕಾರಣವಾಗಿದೆ. ಸುಮಾರು 20ರಿಂದ 30 ಪ್ರತಿಶತದಷ್ಟು ಅಂಗಚ್ಛೇದನಗಳು ಈ ಮೇಲಿನ ಕಾರಣದಿಂದ ಆಗಿರುತ್ತವೆ. ಅಂಗವಿಕಲತೆಗೆ ಇನ್ನೊಂದು ಕಾರಣವು, ಗೆಡ್ಡೆಗಳು (ಸುಮಾರು 6 ಪ್ರತಿಶತ) ಮತ್ತು ಜನನ ದೋಷಗಳು (ಸುಮಾರು 4 ಪ್ರತಿಶತ) ಆಗಿರುತ್ತದೆ.
ಅಮೂಲ್ಯವಾದ ಅಂಗವನ್ನು ಕಳೆದುಕೊಳ್ಳುವುದು ನಿಜವಾಗಿಯೂ ಭೀತಿಯನ್ನು ಉಂಟುಮಾಡುವ ವಿಷಯವಾಗಿರುತ್ತದೆ. ಇದನ್ನು ಯಾವ ರೀತಿಯಲ್ಲಿಯಾದರೂ ಕಡಿಮೆಮಾಡಸಾಧ್ಯವೋ? ಮತ್ತು ಈಗಾಗಲೇ ನೀವು ಯಾವುದಾದರೊಂದು ಅಂಗವನ್ನು ಕಳೆದುಕೊಂಡಿರುವಲ್ಲಿ, ನೀವು ಉತ್ತಮ ಗುಣಮಟ್ಟದ ಜೀವಿತವನ್ನು ಹೇಗೆ ಸವಿಯಸಾಧ್ಯವಿದೆ? ಇವುಗಳನ್ನು ಮತ್ತು ಇತರ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಚರ್ಚಿಸುವುವು.