ಅಂಗರಹಿತರಾಗಿಯೂ ಗುಣಮಟ್ಟದ ಜೀವನವನ್ನು ನಡೆಸುವುದು
“ಪರ್ವತಾರೋಹಿಯು ಮತ್ತೆ ಶಿಖರವನ್ನೇರಿದ್ದಾನೆ.” ಹೀಗೆಂದು ಒಂದು ನ್ಯೂಸ್ಪೇಪರ್, ಟಾಮ್ ವಿಟಕರ್ ಮೌಂಟ್ ಎವರೆಸ್ಟ್ ಶಿಖರವನ್ನು ಮುಟ್ಟಿದಾಗ ಹೇಳಿತು. ಈ ಹಿಂದೆ, ಆ ತುತ್ತತುದಿಯನ್ನು ಅನೇಕರು ಮುಟ್ಟಿದ್ದರೂ, ಟಾಮ್ ವಿಟಕರ್ ಅಲ್ಲಿಗೆ ಹೋಗುವುದರಲ್ಲಿ ಮೊದಲನೇ ಅಂಗಚ್ಛೇದಿತ ವ್ಯಕ್ತಿಯಾಗಿದ್ದರು! ವಿಟಕರ್ ವಾಹನ ಅಪಘಾತದಲ್ಲಿ ತಮ್ಮ ಕಾಲನ್ನು ಕಳೆದುಕೊಂಡಿದ್ದರು. ಆದರೆ, ಒಂದು ಕೃತಕ ಕಾಲು (ಪ್ರಾಸ್ತೀಸಿಸ್) ಪುನಃ ಪರ್ವತಾರೋಹಣ ಮಾಡುವಂತೆ ಅವನಿಗೆ ಸಾಧ್ಯಮಾಡಿತು. ಇಂತಹ ಸಾಧನಗಳು, ಇತರ ಸಾವಿರಾರು ಅಂಗಚ್ಛೇದಿತರು ಉತ್ತಮ ಗುಣಮಟ್ಟದ ಜೀವಿತವನ್ನು ಅನುಭವಿಸುವಂತೆ ಸಹಾಯಮಾಡುತ್ತಿವೆ. ವಾಸ್ತವದಲ್ಲಿ, ಅಂಗಚ್ಛೇದಿತರು ವೇಗವಾಗಿ ಓಡುವುದು, ಬಾಸ್ಕೆಟ್ಬಾಲ್ ಆಟವನ್ನಾಡುವುದು ಅಥವಾ ಸೈಕಲ್ ಸವಾರಿಮಾಡುವುದನ್ನು ನೋಡುವುದು ಅಸಾಮಾನ್ಯವಾದ ವಿಷಯವಾಗಿರುವುದಿಲ್ಲ.
ಹಿಂದೆ ಇದ್ದ ಕೃತಕ ಕಾಲುಗಳು ಮತ್ತು ಕೈಗಳು, ಒರಟಾದ ಮರದ ಗೂಟಗಳು ಮತ್ತು ಕಬ್ಬಿಣದ ಕೊಂಡಿಗಳಾಗಿದ್ದವು. ಆದರೆ ಯುದ್ಧಗಳ ಕಾರಣದಿಂದಾಗಿ ಸಾವಿರಾರು ಜನರು ಅಂಗವಿಕಲರಾದಾಗ ಸುಧಾರಣೆಗಳು ಕಂಡುಬಂದವು. ಮೊದಲ ಬಾರಿಗೆ ಒಳ್ಳೆಯ ಮರದ ಕಾಲನ್ನು ತಯಾರುಮಾಡಿದ, 16ನೇ ಶತಮಾನದ ಫ್ರಾನ್ಸ್ ದೇಶದ ಆ್ಯಂಬ್ರ್ವಾಸ್ ಪಾರೇಗೆ ಪ್ರಶಂಸೆಯು ಸಲ್ಲುತ್ತದೆ. ಇವನು ಸೇನೆಯಲ್ಲಿ ಒಬ್ಬ ಸರ್ಜನ್ ಆಗಿದ್ದನು. ಇಂದಿನ ಕೃತಕ ಸಾಧನಗಳಾದ ಹೈಡ್ರಾಲಿಕ್ಗಳು, ತೀರ ಜಟಿಲವಾದ ಮೊಣಕಾಲಿನ ಕೀಲುಗಳು, ಬಗ್ಗಿಸಬಹುದಾದ ಕಾರ್ಬನ್ ಫೈಬರಿನಿಂದ ಮಾಡಿದ ಪಾದಗಳು, ಸಿಲಿಕಾನ್ ಪ್ಲ್ಯಾಸ್ಟಿಕ್ಗಳು, ಮತ್ತು ಇತರ ವೈಜ್ಞಾನಿಕ ತಾಂತ್ರಿಕ ಉತ್ಪಾದನೆಗಳು ಅನೇಕ ಜನರಿಗೆ ನಡೆಯಲು ಮತ್ತು ಸಹಜವಾದ ರೀತಿಯಲ್ಲಿ ಓಡಾಡಲು, ಮಾತ್ರವಲ್ಲದೆ ಕನಸಿನಲ್ಲಿಯೂ ನೆನಸದ ರೀತಿಯಲ್ಲಿ ಆರಾಮವಾಗಿರಲು ಸಹಾಯಮಾಡಿದೆ. ಮೈಕ್ರೋಇಲೆಕ್ಟ್ರಾನಿಕ್ಸ್ನಲ್ಲಿ ಆಗಿರುವ ಪ್ರಗತಿಯು, ಕೃತಕ ತೋಳುಗಳು ಮತ್ತು ಕೈಗಳನ್ನು ಹೆಚ್ಚು ಸಹಜ ರೀತಿಯಲ್ಲಿ ಉಪಯೋಗಿಸುವಂತೆ ಸಹಾಯಮಾಡಿದೆ. ಕೃತಕ ಕಾಲುಗಳು ತೋರಿಕೆಯಲ್ಲಿ ಸಹ ಅಭಿವೃದ್ಧಿಹೊಂದಿದೆ. ಆಧುನಿಕ ಕೃತಕ ಕೈಕಾಲುಗಳು, ಕೈಬೆರಳುಗಳು ಹಾಗೂ ಕಾಲ್ಬೆರಳುಗಳನ್ನು ಸಹ ಹೊಂದಿರುತ್ತದೆ. ಮತ್ತು ಕೆಲವು ಕೃತಕ ಕೈಕಾಲುಗಳಲ್ಲಿ ನರಗಳನ್ನು ಸಹ ನೋಡಬಹುದು. ವಾಸ್ತವದಲ್ಲಿ, ಒಬ್ಬ ರೂಪದರ್ಶಿ ಕ್ಯಾನ್ಸರಿನಿಂದಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡಳು. ಆದರೆ, ಅವಳಿಗೆ ಒಂದು ಕೃತಕ ಕಾಲನ್ನು ಜೋಡಿಸಲಾಯಿತು ಮತ್ತು ಅದು ಎಷ್ಟು ಸಹಜವಾದ ಕಾಲಿನೋಪಾದಿ ತೋರಿತೆಂದರೆ, ಅವಳು ತನ್ನ ಮಾಡೆಲಿಂಗ್ ವೃತ್ತಿಯನ್ನು ಮುಂದುವರಿಸಲು ಶಕ್ತಳಾದಳು.
ಮಾನಸಿಕ ಮನೋವೃತ್ತಿಯು ಅತ್ಯಾವಶ್ಯಕ
ಮಾನಸಿಕಾರೋಗ್ಯ ಪರಿಣತೆಯಾದ ಎಲನ್ ವಿಂಚಲ್ ಎಚ್ಚರಿಸುವುದು: “ಅಂಗಚ್ಛೇದನವನ್ನು ವೈಯಕ್ತಿಕವಾಗಿ ಅನುಭವಿಸುವಾಗ, ಎಲ್ಲ ವಿಧದಲ್ಲಿಯೂ, ಶಾರೀರಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ, ಮತ್ತು ಆತ್ಮಿಕವಾಗಿ ನಿಮ್ಮ ತಾಳ್ಮೆಯು ಪರೀಕ್ಷಿಸಲ್ಪಡುತ್ತದೆ.” ಗಾಯವು ಗ್ಯಾಂಗ್ರೀನ್ (ಅಂಗಕ್ಷಯ) ಆದ ಪರಿಣಾಮವಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡ ವಿಲ್ಯಮ್ ಅನ್ನು ತೆಗೆದುಕೊಳ್ಳಿರಿ. ಅವನು ಹೇಳುವುದು: “ಜೀವಿತದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಜಯಿಸಲಿಕ್ಕಾಗಿರುವ ಕೀಲಿಕೈಗಳಲ್ಲಿ ಒಂದು ಮಾನಸಿಕ ಮನೋವೃತ್ತಿಯಾಗಿದೆ. ನನ್ನ ದೌರ್ಬಲ್ಯವನ್ನು ನಾನೆಂದೂ ಒಂದು ನೂನ್ಯತೆಯಾಗಿ ವೀಕ್ಷಿಸಿಲ್ಲ. ಅದಕ್ಕೆ ಬದಲಾಗಿ, ನಾನು ಅಪಘಾತಕ್ಕೀಡಾದ ಸಮಯದಿಂದಲೂ ಯಾವುದೇ ಅಪಜಯಗಳ ಕುರಿತಾಗಿ ಒಂದು ಸಕಾರಾತ್ಮಕ ಹೊರನೋಟವನ್ನು ಕಾಪಾಡಿಕೊಂಡಿದ್ದೇನೆ.” ಸ್ವತಃ ಅಂಗಚ್ಛೇದಿತೆಯಾದ ಎಲೆನ್ ವಿಂಚೆಲ್, ಅಂಗನಷ್ಟಕ್ಕೆ, ನಿರಾಶಾವಾದಿಗಳಿಗಿಂತಲೂ ಸಕಾರಾತ್ಮಕ ಹೊರನೋಟವುಳ್ಳವರು ಹೆಚ್ಚಾಗಿ ಹೊಂದಿಕೊಳ್ಳುತ್ತಾರೆ ಎಂದು ಸಮ್ಮತಿಸುತ್ತಾರೆ. ಬೈಬಲು ಹೇಳುವಂತೆ, “ಹರ್ಷಹೃದಯವು ಒಳ್ಳೇ ಔಷಧ”ವಾಗಿದೆ.—ಜ್ಞಾನೋಕ್ತಿ 17:22.
ಅಂಗನಷ್ಟಕ್ಕೆ ಒಗ್ಗಿಕೊಂಡಿರುವ ಅನೇಕ ಕ್ರೈಸ್ತರೊಂದಿಗೆ ಎಚ್ಚರ! ಪತ್ರಿಕೆಯು ಸಂದರ್ಶನವನ್ನು ಮಾಡಿತು. ಅಂಗಹೀನರಾಗಿರುವವರು ತಮ್ಮ ಬಗ್ಗೆ ತುಂಬ ಯೋಚಿಸುತ್ತಾ ಇರಬಾರದು ಅಥವಾ ತಮ್ಮ ದೌರ್ಬಲ್ಯಗಳ ಬಗ್ಗೆ ಗೌಪ್ಯವಾಗಿರಬಾರದು ಎಂದು ಅನೇಕರು ಹೇಳಿದರು. “ಅಂಗನಷ್ಟವು ಮಾತಾಡಬಾರದ ವಿಷಯವೆಂದು ಇತರರು ನೆನಸುವಲ್ಲಿ ನನಗೆ ಹೆಚ್ಚು ಚಿಂತೆಯಾಗುತ್ತದೆ. ಹಾಗೆ ಮಾತಾಡದೆ ಇರುವುದು ಎಲ್ಲರಿಗೆ ಕಳವಳವನ್ನು ತರುತ್ತದೆ” ಎಂದು ಎಡಗಾಲಿನ ಮಂಡಿಯಿಂದ ಕೆಳಗೆ ಕಾಲನ್ನು ಕಳೆದುಕೊಂಡಿರುವ ಡೆಲ್ ಹೇಳಿದನು. ನಿಮಗೆ ಬಲಗೈಯಿಲ್ಲದಿದ್ದು, ಯಾರಾದರೂ ನಿಮ್ಮ ಕೈಕುಲುಕಲು ಬರುವಾಗ ನೀವು ಎಡದ ಕೈಯಿಂದ ಕೈಕುಲುಕಬೇಕು ಎಂದು ಕೆಲವು ಪರಿಣತರು ಶಿಫಾರಸ್ಸುಮಾಡುತ್ತಾರೆ. ನಿಮ್ಮ ಕೃತಕ ಕಾಲಿನ ಬಗ್ಗೆ ಯಾರಾದರೂ ಕೇಳಿದರೆ, ಅವರಿಗೆ ಅದರ ಬಗ್ಗೆ ಹೇಳಿರಿ. ನೀವು ಅದನ್ನು ಹೇಳಲು ನಾಚಿಕೆ ಪಡದಿದ್ದರೆ ಕೇಳುತ್ತಿರುವ ವ್ಯಕ್ತಿಗೆ ಸಹ ಹಾಯೆನಿಸುತ್ತದೆ. ಮತ್ತು ಸಾಮಾನ್ಯವಾಗಿ ಸಂಭಾಷಣೆ ಬೇರೆ ವಿಷಯಕ್ಕೆ ತಿರುಗುತ್ತದೆ.
“ನಗುವ ಸಮಯ” ಒಂದಿದೆ. (ಪ್ರಸಂಗಿ 3:4ಬಿ) ತನ್ನ ಕೈಯನ್ನು ಕಳೆದುಕೊಂಡ ಒಬ್ಬ ಸ್ತ್ರೀಯು ಹೇಳುವುದು: ‘ಎಲ್ಲಕ್ಕಿಂತ ಹೆಚ್ಚಾಗಿ ಹಾಸ್ಯಪ್ರವೃತ್ತಿಯನ್ನು ಇಟ್ಟುಕೊಳ್ಳಿರಿ! ಲೋಕವು ನಮ್ಮನ್ನು ಯಾವ ದೃಷ್ಟಿಯಲ್ಲಿ ನೋಡುತ್ತದೆ ಎಂಬುದು, ನಾವು ನಮ್ಮನ್ನು ಹೇಗೆ ದೃಷ್ಟಿಸುತ್ತೇವೆ ಎಂಬುದರ ಮೇಲೆ ಹೊಂದಿಕೊಂಡಿದೆ ಅನ್ನುವುದನ್ನು ಸದಾ ಜ್ಞಾಪಕದಲ್ಲಿಡಬೇಕು.’
“ಅಳುವ ಸಮಯ”
ತನ್ನ ಕಾಲನ್ನು ಕಳೆದುಕೊಂಡ ಮೇಲೆ, ಡೆಲ್ ಮೊದಮೊದಲು ತನಗೆ ಹೀಗೆ ಹೇಳಿಕೊಂಡನು, “ಜೀವನದಲ್ಲಿ ಇನ್ನೇನೂ ಉಳಿದಿಲ್ಲ. ಎಲ್ಲವೂ ಮಗಿದುಹೋಯಿತು.” ಫ್ಲೋರಿಂಡೂ ಮತ್ತು ಫ್ಲೋರ್ಯಾನೂ ಇಬ್ಬರೂ ಅಂಗೋಲದಲ್ಲಿ ನೆಲಸಿಡಿಮದ್ದಿನಿಂದ ಕಾಲುಗಳನ್ನು ಕಳೆದುಕೊಂಡರು. ಮೂರು ದಿನ ಹಗಲೂರಾತ್ರಿ ದುಃಖದಿಂದ ಕಣ್ಣೀರ ಧಾರೆಯನ್ನು ಹರಿಸಿದೆನು ಎಂದು ಫ್ಲೋರಿಂಡೂ ಹೇಳುತ್ತಾನೆ. ಫ್ಲೋರ್ಯಾನೂ ಅದೇ ರೀತಿಯ ಭಾವನಾತ್ಮಕ ಸಮಸ್ಯೆಯನ್ನು ಹೊಂದಿದ್ದನು. “ನನ್ನ ವಯಸ್ಸು ಕೇವಲ 25 ಆಗಿತ್ತು. ಇಷ್ಟು ದಿನಗಳ ತನಕ ನನ್ನಿಂದ ಪ್ರತಿಯೊಂದು ವಿಷಯವನ್ನು ಮಾಡಲಿಕ್ಕಾಗುತ್ತಿತ್ತು, ಆದರೆ ಈಗ ನನಗೆ ನಿಂತುಕೊಳ್ಳಲು ಸಹ ಆಗುತ್ತಿರಲಿಲ್ಲ. ನಾನು ಬಹಳ ಖಿನ್ನನೂ ಹತಾಶನೂ ಆಗಿದ್ದೆ” ಎಂದು ಅವನು ಬರೆಯುತ್ತಾನೆ.
“ಅಳುವ ಸಮಯ”ವು ಸಹ ಇದೆ. (ಪ್ರಸಂಗಿ 3:4ಎ) ನೀವು ಗಂಭೀರವಾದ ರೀತಿಯಲ್ಲಿ ಕಷ್ಟನಷ್ಟವನ್ನು ಅನುಭವಿಸಿರುವಾಗ, ಸ್ವಲ್ಪ ಸಮಯದ ವರೆಗೆ ದುಃಖಿಸುವುದು ಸಹಜವೇ. (ನ್ಯಾಯಸ್ಥಾಪಕರು 11:37ನ್ನು ಹೋಲಿಸಿರಿ; ಪ್ರಸಂಗಿ 7:1-3.) “ದುಃಖವನ್ನು ಜಯಿಸುವ ಏಕೈಕ ವಿಧವು, ಅದನ್ನು ತಾಳಿಕೊಳ್ಳುವುದೇ ಆಗಿದೆ” ಎಂದು ಎಲೆನ್ ವಿಂಚೆಲ್ ಬರೆಯುತ್ತಾರೆ. ಸಹಾನುಭೂತಿಯಿಂದ ಕೇಳಿಸಿಕೊಳ್ಳುವ ವ್ಯಕ್ತಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹೊರಚೆಲ್ಲುವುದು ಕೆಲವೊಮ್ಮೆ ನಿಜವಾಗಿಯೂ ಸಹಾಯಕಾರಿಯಾಗಿರುತ್ತದೆ. (ಜ್ಞಾನೋಕ್ತಿ 12:25) ಆದರೆ, ಯಾರೂ ಸದಾಕಾಲ ದುಃಖಿಸುತ್ತಾ ಇರುವುದಿಲ್ಲ. ಅಂಗನಷ್ಟಗೊಂಡ ಬಳಿಕ ಕೆಲವು ಜನರು ಸ್ವಲ್ಪ ಸಮಯದ ತನಕ, ಭಾವನಾತ್ಮಕವಾಗಿ ಬಹಳ ಅಸ್ಥಿರರು, ಟೀಕಾತ್ಮರು, ವ್ಯಾಕುಲಿತರು, ಅಥವಾ ಅಂತರ್ಮುಖಿಗಳು ಆಗುತ್ತಾರೆ. ಆದರೆ, ಇಂತಹ ಭಾವನೆಗಳು ಸಾಮಾನ್ಯವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಈ ರೀತಿಯಾಗದಿದ್ದಲ್ಲಿ, ಖಿನ್ನತೆಗೆ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ಈ ರೋಗಕ್ಕೆ ವೈದ್ಯಕೀಯ ಚಿಕಿತ್ಸೆಯು ಅಗತ್ಯ. ಇಂತಹ ಸಹಾಯದ ಅಗತ್ಯದಲ್ಲಿರುವ ಪ್ರಿಯ ಜನರ ಯಾವುದೇ ರೋಗಲಕ್ಷಣಗಳಿಗೆ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸದಾ ಎಚ್ಚರದಿಂದಿರಬೇಕು.a
ಎರಡೂ ಕಾಲಿಗೆ ಲಕ್ವ ಹೊಡೆದಿರುವ, ಡಬ್ಲ್ಯೂ. ಮಿಚೆಲ್ ಬರೆಯುವುದು: “ನಮ್ಮ ಬಗ್ಗೆ ಕಾಳಜಿ ವಹಿಸುವ ಜನರ ಅಗತ್ಯ ನಮ್ಮೆಲ್ಲರಿಗಿದೆ. ಒಬ್ಬನಿಗೆ ತನ್ನ ಅಕ್ಕಪಕ್ಕದಲ್ಲಿ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿದ್ದಾರೆ ಎಂದು ಅನಿಸುವಲ್ಲಿ ಅವನು ಏನನ್ನಾದರೂ ಸಹಿಸಿಕೊಳ್ಳಸಾಧ್ಯವಿದೆ. ಆದರೆ, ಅದೇ ಒಬ್ಬನು ಏಕಾಂಗಿಯಾಗಿ ಸಂಘರ್ಷಿಸುತ್ತಿರುವಲ್ಲಿ, ಜೀವನದಲ್ಲಿ ಸ್ವಲ್ಪ ಏರುಪೇರಾದರೂ ಎಡವಿಬೀಳಸಾಧ್ಯವಿದೆ. ಮತ್ತು ಸ್ನೇಹವು ತನ್ನಿಂದ ತಾನೇ ಉಂಟಾಗುವುದಿಲ್ಲ, ಅದನ್ನು ಆರಂಭಿಸಬೇಕು ಮತ್ತು ಯಾವಾಗಲೂ ಕಾಪಾಡಿಕೊಳ್ಳಬೇಕು, ಇಲ್ಲದಿದ್ದರೆ ಅದು ಮುದುಡಿ ಬಾಡಿಹೋಗುತ್ತದೆ.”—ಜ್ಞಾನೋಕ್ತಿ 18:24ನ್ನು ಹೋಲಿಸಿರಿ.
ಅಂಗರಹಿತರಾಗಿದ್ದರೂ ಗುಣಮಟ್ಟದ ಜೀವನ
ತಮ್ಮ ದೌರ್ಬಲ್ಯದ ಮಧ್ಯೆಯೂ ಅನೇಕ ಅಂಗವಿಕಲರು ಗುಣಮಟ್ಟದ ಜೀವಿತಗಳನ್ನು ನಡೆಸುತ್ತಾರೆ. ಉದಾಹರಣೆಗೆ, ರಸಲ್ ಹುಟ್ಟಿದಾಗ, ಅವನಿಗೆ ಎಡಗಾಲಿನ ಮೇಲ್ಭಾಗ ಮಾತ್ರ ಇತ್ತು. ಈಗ 78 ವರ್ಷ ಪ್ರಾಯದಲ್ಲಿಯೂ ಅವನು ಕ್ರಮವಾಗಿ ವ್ಯಾಯಾಮಮಾಡುತ್ತಾನೆ ಮತ್ತು ಜೀವಿತವನ್ನು ಸಂಪೂರ್ಣವಾಗಿ ಅನುಭವಿಸುತ್ತಿದ್ದಾನೆ. ಆದರೆ, ಈಗ ಅವನು ಊರುಗೋಲನ್ನು ಹಿಡಿದು ನಡೆಯುತ್ತಾನೆ ಅಷ್ಟೇ. ಸ್ವಭಾವತಃ ಉಲ್ಲಾಸಿತನಾಗಿರುವ ರಸಲ್, ತನ್ನ ಖಾಯಂ ಅಡ್ಡಹೆಸರು ಹ್ಯಾಪಿ ಎಂದು ಹೇಳುತ್ತಾನೆ.
IIನೇ ವಿಶ್ವ ಯುದ್ಧದಲ್ಲಿ ತನ್ನ ಕಾಲನ್ನು ಕಳೆದುಕೊಂಡ ಡಗ್ಲಸ್, ಆಧುನಿಕ ಕೃತಕ ಕಾಲಿನ ಸಹಾಯದಿಂದ ನಡೆಯುತ್ತಾನೆ. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿರುವ, ಅವನು ಪೂರ್ಣಸಮಯದ ಸೌವಾರ್ತಿಕನೋಪಾದಿ ಅಂದರೆ, ರೆಗ್ಯುಲರ್ ಪಯನೀಯರ್ ಆಗಿ ಸುಮಾರು ಆರು ವರ್ಷಗಳ ವರೆಗೆ ಸೇವೆಸಲ್ಲಿಸುವುದರಲ್ಲಿ ಆನಂದಿಸಿದ್ದಾನೆ. ತನ್ನ ಕಾಲನ್ನು ಕಳೆದುಕೊಂಡಾಗ ತನ್ನ ಜೀವಿತವೇ ಮುಗಿದುಹೋಯಿತು ಎಂದು ನೆನಸಿದ ಡೆಲ್ನ ಬಗ್ಗೆ ನಿಮಗೆ ಜ್ಞಾಪಕವಿದೆಯೋ? ಅವನು ಸಹ ಒಬ್ಬ ಪಯನೀಯರನೋಪಾದಿ ಸಂತುಷ್ಟ ಜೀವಿತವನ್ನು ಅನುಭವಿಸುತ್ತಿದ್ದಾನೆ. ಮತ್ತು ಅವನು ತನ್ನನ್ನು ತಾನೇ ಪರಾಮರಿಸಿಕೊಳ್ಳುತ್ತಾನೆ.
ಬಡ ದೇಶಗಳಲ್ಲಿ ಅಥವಾ ಯುದ್ಧಪೀಡಿತ ದೇಶಗಳಲ್ಲಿ ಅಂಗನಷ್ಟಪಟ್ಟವರು ಹೇಗೆ ಜೀವನವನ್ನು ಸಾಗಿಸುತ್ತಾರೆ? ಲೋಕಾರೋಗ್ಯ ಸಂಸ್ಥೆಯು ಹೇಳುವುದು: “ಇಂದು ಕೇವಲ ಕೆಲವೇ ಜನರಿಗೆ ದೌರ್ಬಲ್ಯಗಳಿಗಾಗಿ ನೆರವು ಸಿಗುತ್ತದೆ ಎಂಬುದು ಸತ್ಯ ಸಂಗತಿಯಾಗಿದೆ.” ಅನೇಕರು ನಡೆದಾಡಲು ಕೇವಲ ಬೆತ್ತಗಳು ಮತ್ತು ಕಂಕುಳುಗೋಲುಗಳ ಮೇಲೆ ಅವಲಂಬಿತರಾಗಬೇಕಾಗುತ್ತದೆ. ಆದರೂ, ಕೆಲವೊಮ್ಮೆ ಸಹಾಯವು ಸಿಗುತ್ತದೆ. ಅಂಗೋಲದ ನೆಲಸಿಡಿಮದ್ದಿನ ಬಲಿಪಶುಗಳಾದ ಫ್ಲೋರ್ಯಾನು ಮತ್ತು ಫ್ಲೋ, ಇಬ್ಬರೂ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಮತ್ತು ಸ್ವಿಸ್ ಸರಕಾರದಿಂದ ಕೃತಕ ಕಾಲುಗಳನ್ನು ಪಡೆದುಕೊಂಡರು. ಫ್ಲೋರ್ಯಾನೂ ಈಗ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಒಬ್ಬ ಶುಶ್ರೂಷಕ ಸೇವಕನೋಪಾದಿ ಮತ್ತು ಫ್ಲೋರಿಂಡೂ ಹಿರಿಯನೂ ಪೂರ್ಣಸಮಯದ ಸೌವಾರ್ತಿಕನೂ ಆಗಿ ಸೇವೆಯನ್ನು ಸಲ್ಲಿಸುತ್ತಾರೆ.
ದುರ್ಬಲರನ್ನು ನೋಡಿಕೊಳ್ಳುವ ಒಂದು ಸಂಸ್ಥೆಯು ಇದನ್ನು ಬಹಳ ಸೊಗಸಾಗಿ ಹೇಳುತ್ತದೆ: “ಎದೆಗುಂದಿದವರೇ ಅಂಗವಿಕಲರು!” ಆಸಕ್ತಿಕರವಾದ ವಿಷಯವೆಂದರೆ, ದುರ್ಬಲರಿಗೆ ಧೈರ್ಯವನ್ನು ಕೊಡುವುದರಲ್ಲಿ ಬೈಬಲು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. “ನಾನು ಚೇತರಿಸಿಕೊಳ್ಳುತ್ತಿದ್ದಾಗ ಬೈಬಲಿನ ಸತ್ಯವನ್ನು ಕಲಿತುಕೊಳ್ಳುವುದು ನನಗೆ ಬಹಳ ಸಹಾಯವನ್ನು ಮಾಡಿತು” ಎಂದು ಡೆಲ್ ಹೇಳುತ್ತಾರೆ. ಅದೇ ರೀತಿಯಲ್ಲಿ ರಸಲ್ ಹೇಳುವುದು: “ನನ್ನ ಕಷ್ಟದುಃಖಗಳ ಸಮಯಗಳಲ್ಲಿ ಬೈಬಲ್ ಆಧಾರಿತ ನಂಬಿಕೆಯು ನನಗೆ ಯಾವಾಗಲೂ ಸಹಾಯವನ್ನು ನೀಡಿದೆ.” ದುರ್ಬಲರಿಗೆ ಯಾವ ನಿರೀಕ್ಷೆಯನ್ನು ಬೈಬಲು ನೀಡುತ್ತದೆ?
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬರುಜು ಪತ್ರಿಕೆಯ ಮಾರ್ಚ್ 15, 1990ರ (ಇಂಗ್ಲಿಷ್) ಸಂಚಿಕೆಯಲ್ಲಿರುವ “ಖಿನ್ನರು ಪುನಃ ಹರ್ಷೋಲ್ಲಾಸಿತರಾಗಲು ಸಹಾಯ ಮಾಡುವ ವಿಧ” ಎಂಬ ಲೇಖನವನ್ನು ನೋಡಿರಿ.
[ಪುಟ 9 ರಲ್ಲಿರುವ ಚೌಕ]
ಭ್ರಮೆಯ ನೋವು
ಭ್ರಮೆಯ ಅಂಗಸಂವೇದನೆಯು, ಕಳೆದುಕೊಂಡ ಅಂಗವು ಇನ್ನೂ ಇದೆ ಎಂಬ ನಿಶ್ಚಿತ ಭಾವನೆಯನ್ನು ಸೂಚಿಸುತ್ತದೆ. ಶಸ್ತ್ರಚಿಕಿತ್ಸೆಯಾದ ಬಳಿಕ ಅಂಗಚ್ಛೇದಿತರಿಗೆ ಈ ಸಾಮಾನ್ಯ ಅನಿಸಿಕೆಯಾಗುತ್ತದೆ. ಅದು ಎಷ್ಟು ನಿಜವಾಗಿ ಅನಿಸುತ್ತದೆ ಅಂದರೆ, ಅಂಗಚ್ಛೇದಿತರಿಗಾಗಿರುವ ಒಂದು ಪುಸ್ತಿಕೆಯು ಹೇಳುವುದು: “ಕೃತಕ ಮರದ ಕಾಲುಗಳಿಲ್ಲದೆ, ಹಾಸಿಗೆ ಅಥವಾ ಕುರ್ಚಿಯಿಂದ ಎದ್ದೇಳುವಾಗ ಭ್ರಮೆಯ ಸಂವೇದನೆಯ ಬಗ್ಗೆ ಜಾಗರೂಕರಾಗಿರಿ. ನಿಮಗೆ ಕಾಲಿಲ್ಲ ಎಂಬುದರ ಜ್ಞಾಪಕಹುಟ್ಟಿಸಲು ಯಾವಾಗಲೂ ಕೆಳಗೆ ನೋಡಿರಿ.” ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ರೋಗಿಯೊಬ್ಬಳು ತನ್ನ ವೈದ್ಯರ ಕೈಯನ್ನು ಕುಲುಕಲು ಎದ್ದುನಿಂತುಕೊಳ್ಳಲು ಪ್ರಯತ್ನಿಸಿದಾಗ, ನೆಲದ ಮೇಲೆ ಬಿದ್ದುಬಿಟ್ಟಳು!
ಮತ್ತೊಂದು ಸಮಸ್ಯೆಯು ಭ್ರಮೆಯ ನೋವಾಗಿದೆ. ಕತ್ತರಿಸಲ್ಪಟ್ಟ ಅಂಗದಿಂದ ನೋವು ಉಂಟಾಗುತ್ತಿದೆ ಎಂದು ನೆನಸಲಾಗುತ್ತದೆ. ಭ್ರಮೆಯ ನೋವಿನ ತೀವ್ರತೆ, ವಿಧ ಮತ್ತು ಸಮಯವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಆದರೆ ಸಂತೋಷಕರವಾದ ವಿಷಯವೆಂದರೆ, ಭ್ರಮೆಯ ಸಂವೇದನೆ ಮತ್ತು ಭ್ರಮೆಯ ನೋವು ಸಾಮಾನ್ಯವಾಗಿ ಕಾಲ ಸರಿದಂತೆ ಕಡಿಮೆಯಾಗುತ್ತದೆ.
[ಪುಟ 6 ರಲ್ಲಿರುವ ಚಿತ್ರ]
ಅನೇಕ ಅಂಗವಿಕಲರಿಗೆ ಆಧುನಿಕ ಕೃತಕ ಮರದ ಕಾಲುಗಳು ಜೀವನವನ್ನು ಹೆಚ್ಚು ಆನಂದದಾಯಕವನ್ನಾಗಿ ಮಾಡುತ್ತದೆ
[ಕೃಪೆ]
Photo courtesy of RGP Prosthetics
[ಪುಟ 7 ರಲ್ಲಿರುವ ಚಿತ್ರ]
ಗಂಭೀರವಾದ ನಷ್ಟಕ್ಕಾಗಿ ದುಃಖಿಸುವುದು ಸಾಮಾನ್ಯವಾದ ಪ್ರತಿಕ್ರಿಯೆಯಾಗಿದೆ
[ಪುಟ 8 ರಲ್ಲಿರುವ ಚಿತ್ರ]
ಅನೇಕ ಅಂಗವಿಕಲರು ಉತ್ತಮ ಗುಣಮಟ್ಟದ ಜೀವನವನ್ನು ಅನುಭವಿಸುತ್ತಾರೆ