ಸಕಲ ದೌರ್ಬಲ್ಯಗಳು ಕಣ್ಮರೆಯಾಗುವಾಗ
ಲಕ್ವದಿಂದ ಪೀಡಿತಳಾಗಿದ್ದ ಒಬ್ಬಾಕೆ ಒಮ್ಮೆ ಹೇಳಿದ್ದು, ಹೆಚ್ಚಿನ ಜನರಿಗೆ ಕೇವಲ “ತಾತ್ಕಾಲಿಕವಾಗಿ ಗಟ್ಟಿಮುಟ್ಟಾದ ದೇಹಗಳಿವೆ.” ಇದು ಎಷ್ಟು ಸತ್ಯವಾಗಿದೆ. ಏಕೆಂದರೆ, ಇಂದಲ್ಲ ನಾಳೆ ನಮಗೆ ಶಾರೀರಿಕ ದೋಷಗಳು ಕಾಣಿಸಿಕೊಳ್ಳುತ್ತವೆ! ಆದುದರಿಂದ, ಕನ್ನಡಕಗಳು, ಕಾಂಟ್ಯಾಕ್ಟ್ ಲೆನ್ಸ್ಗಳು, ಕೃತಕ ದಂತಪಂಕ್ತಿಗಳು, ಶ್ರವಣ ಸಾಧನಗಳು, ಇಲೆಕ್ಟ್ರಾನಿಕ್ ಹೃದಯಬಡಿತ ಸಹಾಯಕ ಸಾಧನ ಮತ್ತು ಮೊಣಕಾಲಿನ ಅಂತರ್ನಿವಿಷ್ಟಗಳಿಗೆ ಬೇಡಿಕೆಯು ಹೆಚ್ಚಾಗುತ್ತಿದೆ. ರೋಮಾಪುರ 8:22 ಹೇಳುವಂತೆ, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.”
ಆದಕಾರಣ, ನೀತಿವಂತ “ನೂತನಭೂಮಂಡಲ”ದಲ್ಲಿ ಎಲ್ಲ ವಿಧೇಯ ಮಾನವಕುಲಕ್ಕೆ ಪರಿಪೂರ್ಣ ಆರೋಗ್ಯವನ್ನು ಪುನಸ್ಸ್ಥಾಪಿಸುವ ದೇವರ ವಾಗ್ದಾನದಿಂದ ನಾವೆಲ್ಲರೂ ಸಾಂತ್ವನವನ್ನು ಕಂಡುಕೊಳ್ಳಸಾಧ್ಯವಿದೆ. (2 ಪೇತ್ರ 3:13; ಪ್ರಕಟನೆ 21:3, 4) ಯೆಶಾಯ 35:5, 6 ಹೇಳುವುದು: “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು; . . . ”
“ಮಹಾ ಸಮೂಹವು” ಸದ್ಯದ ಈ ದುಷ್ಟ ವ್ಯವಸ್ಥೆಯ ನಾಶನದಿಂದ ಪಾರಾಗುವುದು ಎಂದು ಬೈಬಲು ಮುಂತಿಳಿಸುತ್ತದೆ. (ಪ್ರಕಟನೆ 7:9, 14; ಕೀರ್ತನೆ 37:10, 11, 29) ನಾಶನದ ಅನಂತರ ಬೇಗನೆ, ಗಂಭೀರವಾದ ದೌರ್ಬಲ್ಯಗಳನ್ನು ಮತ್ತು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ತಮ್ಮ ಅಂಗವಿಕಲತೆಯ ತತ್ಕ್ಷಣ ವಾಸಿಯನ್ನು ಅನುಭವಿಸುವರು ಎಂಬುದು ನಿಸ್ಸಂದೇಹ! (ಯೆಶಾಯ 22:24) ದೇವರ ನೂತನಭೂಮಂಡಲದಲ್ಲಿ ಆಗುವ ಗುಣಪಡಿಸುವಿಕೆಯ ಮುನ್ನೋಟವನ್ನು ನೀಡಲಿಕ್ಕಾಗಿ, ಯೇಸು ಭೂಮಿಯಲ್ಲಿದ್ದಾಗ ಅಂತಹದ್ದೇ ಕೆಲವೊಂದು ಗುಣಪಡಿಸುವಿಕೆಗಳನ್ನು ಮಾಡಿ ತೋರಿಸಿದನು. (ಮಾರ್ಕ 5:25-29ನ್ನು ಹೋಲಿಸಿರಿ; 7:33-35.) ಅಂಗವಿಕಲರು ಕೃತಕ ಕಾಲುಗಳನ್ನು, ಊರುಗೋಲುಗಳನ್ನು, ಮತ್ತು ಗಾಲಿಕುರ್ಚಿಗಳನ್ನು ಎಸೆದುಬಿಡುವಾಗ ಆಗುವ ಸಂಭ್ರಮೋಲ್ಲಾಸ ಹಾಗೂ ಸುರಿಯುವ ಆನಂದಬಾಷ್ಪವನ್ನು ವರ್ಣಿಸಲಸಾಧ್ಯ! ಸ್ವಸ್ಥ ದೇಹವುಳ್ಳವರಾಗಿ, ಅವರು ಭೂಮಿಯನ್ನು ಪ್ರಮೋದವನವನ್ನಾಗಿ ಪರಿವರ್ತಿಸುವುದರಲ್ಲಿ ದೇವದತ್ತ ನೇಮಕವನ್ನು ಪೂರೈಸಲು ಶಕ್ತರಾಗಿರುವರು.—ಲೂಕ 23:43.
ಅಷ್ಟರ ತನಕ, ಇಂದು ನಮ್ಮ ಮಧ್ಯದಲ್ಲಿರುವ ಅಶಕ್ತರು ದೌರ್ಬಲ್ಯಗಳಿಂದ ನೋವನ್ನು ಅನುಭವಿಸಬೇಕಾಗಿರುತ್ತದೆ. ಕೆನಡದ ಒಬ್ಬ ಅಂಗವಿಕಲನಾದ ನೆಲ್ಸನ್ ಹೇಳುವುದು: “ನನ್ನ ಬಗ್ಗೆ ನನಗೆ ತುಂಬ ದುಃಖವಾಗುವಾಗ, ನಾನು ತಕ್ಷಣ ಮತ್ತಾಯ 24:13ರಲ್ಲಿರುವ ಯೇಸುವಿನ ನುಡಿಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ಅದು ಹೇಳುವುದು, ‘ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು.’” ತಮ್ಮ ಅಶಕ್ತತೆಗಳ ಎದುರಿನಲ್ಲೂ, ಕ್ರೈಸ್ತ ನಂಬಿಕೆಯಲ್ಲಿ ತಾಳಿಕೊಳ್ಳುವ ಮೂಲಕ, ಅವರು ಆತ್ಮಿಕ ಸ್ಥಿತಿಯಲ್ಲಿ ಸಂಪೂರ್ಣರೂ ಆರೋಗ್ಯವಂತರೂ ಆಗಿರಸಾಧ್ಯವಿದೆ. ಇದೇ ಅತ್ಯಂತ ಮುಖ್ಯವಾದ ಸಂಗತಿಯಾಗಿದೆ.—ಯಾಕೋಬ 1:3, 4.
ಈ ನಂಬಿಕೆಯನ್ನು ತಮ್ಮದಾಗಿಸಿಕೊಳ್ಳುವಂತೆ ಲಕ್ಷಾಂತರ ಜನರಿಗೆ ಯೆಹೋವನ ಸಾಕ್ಷಿಗಳು ಸಹಾಯಮಾಡಿದ್ದಾರೆ. ಹಿಂದಿನ ಲೇಖನದಲ್ಲಿ ಉಲ್ಲೇಖಿಸಲ್ಪಟ್ಟ ಅಂಗವಿಕಲ ವ್ಯಕ್ತಿಯಾದ ಡೆಲ್ ಹೇಳುವುದು: “ನನಗಿರುವಂತಹ ಶಾರೀರಿಕ ಸಮಸ್ಯೆಗಳು ಕೇವಲ ಕ್ಷಣಿಕ ಎಂಬುದನ್ನು ತಿಳಿದುಕೊಂಡಾಗ ನನಗಾದ ಆನಂದವನ್ನು ವರ್ಣಿಸಲಾರೆ.” ಹೌದು, ಅಂತಹ ಆಶಾಕಿರಣದಿಂದ ಬಲಹೊಂದಿರುವ, ಡೆಲ್ ಮತ್ತು ಅವನಂತಹ ಇನ್ನಿತರ ಅನೇಕ ಜನರನ್ನು ಅಂಗವಿಕಲರಲ್ಲವೆಂದೇ ಹೇಳಸಾಧ್ಯವಿದೆ.
[ಪುಟ 21 ರಲ್ಲಿರುವ ಚಿತ್ರ]
ಬರಲಿರುವ ನಾಶನದಲ್ಲಿ ಪಾರಾಗುವವರು ತಮ್ಮ ಅಶಕ್ತತೆಗಳ ಅದ್ಭುತ ಗುಣಪಡಿಸುವಿಕೆಯಲ್ಲಿ ಆನಂದಿಸುವರು