ಯುವ ಜನರು ಪ್ರಶ್ನಿಸುವುದು . . .
ಅಮ್ಮ ಏಕೆ ಇಷ್ಟೊಂದು ಅಸ್ವಸ್ಥರಾಗಿದ್ದಾರೆ?
ಆ್ಯಲ್ನ ತಂದೆ ಕ್ಯಾನ್ಸರ್ನಿಂದ ಮೃತರಾದರು.a ಪುನರುತ್ಥಾನದ ಕುರಿತಾದ ಬೈಬಲಿನ ವಾಗ್ದಾನವು ಆ್ಯಲ್ಗೆ ಕಲಿಸಲ್ಪಟ್ಟಿದ್ದುದರಿಂದ, ತನ್ನ ತಂದೆಯನ್ನು ಕಳೆದುಕೊಂಡ ದುಃಖವನ್ನು ಅವನು ಹೇಗೋ ಸಹಿಸಿಕೊಂಡನು. ಆದರೆ ಅವನ ತಾಯಿಗೂ ಕ್ಯಾನ್ಸರ್ ಇದೆಯೆಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಾಗ, ಚಿಂತೆ ಹಾಗೂ ಭಯದ ಘೋರ ಸ್ವಪ್ನವು ಪುನಃ ಆರಂಭವಾಯಿತು. ತಾಯಿಯನ್ನೂ ಕಳೆದುಕೊಳ್ಳುವ ಆಲೋಚನೆಯೇ ಆ್ಯಲ್ಗೆ ಭಯವನ್ನು ಉಂಟುಮಾಡುತ್ತಿತ್ತು. ‘ನನ್ನ ತಾಯಿಯೇ ಏಕೆ ಅಸ್ವಸ್ಥರಾಗಬೇಕು?’ ಎಂದು ಅವನು ತನಗೆ ತಾನೇ ತುಂಬ ಬೇಸರದಿಂದ ಪ್ರಶ್ನಿಸಿಕೊಳ್ಳುತ್ತಿದ್ದನು.
ಡಾಕ್ಟರ್ ಲೆನರ್ಡ್ ಫೆಲ್ಡರ್ ಅವರಿಗನುಸಾರ, “ಅಮೆರಿಕದ ಆರು ಕೋಟಿ ಜನರು . . . ತಮ್ಮ ಪ್ರಿಯ ಜನರ ಅಸ್ವಸ್ಥತೆ ಅಥವಾ ಶಾರೀರಿಕ ದೌರ್ಬಲ್ಯವನ್ನು ಎದುರಿಸುತ್ತಿದ್ದಾರೆ.” ಫೆಲ್ಡರ್ ಇನ್ನೂ ಹೇಳಿದ್ದು: “ಒಂದು ನಿರ್ದಿಷ್ಟ ದಿನದಲ್ಲಿ, ಅಮೆರಿಕದ ನಾಲ್ಕು ಮಂದಿ ಕೆಲಸಗಾರರಲ್ಲಿ ಸುಮಾರು ಒಬ್ಬರು, ಅಸ್ವಸ್ಥರಾಗಿರುವ ಹೆತ್ತವರನ್ನು ಅಥವಾ ಇತರ ಪ್ರಿಯ ಜನರನ್ನು ನೋಡಿಕೊಳ್ಳುವ ಹೆಚ್ಚಿನ ಜವಾಬ್ದಾರಿಯನ್ನು ಹೊರುತ್ತಾರೆ.” ನೀವು ಸಹ ಇಂತಹ ಒಂದು ಸನ್ನಿವೇಶದಲ್ಲಿ ಇರುವಲ್ಲಿ, ಹಾಗಿರುವುದು ನೀವೊಬ್ಬರೇ ಅಲ್ಲವೆಂಬುದು ಖಂಡಿತ. ಆದರೂ, ನೀವು ಪ್ರೀತಿಸುವ ಯಾರಾದರೊಬ್ಬರು ಅಸ್ವಸ್ಥರಾಗುವುದನ್ನು ನೋಡುವಾಗ, ಭಯವಾಗುತ್ತದೆ ಮತ್ತು ಮನಸ್ಸಿಗೆ ನೋವಾಗುತ್ತದೆ. ಹಾಗಾದರೆ, ನೀವು ಈ ಸನ್ನಿವೇಶವನ್ನು ಹೇಗೆ ನಿಭಾಯಿಸಸಾಧ್ಯವಿದೆ?
ನನ್ನ ಹೆತ್ತವರು ಏಕೆ ಅಸ್ವಸ್ಥರಾಗಿದ್ದಾರೆ?
“ಮನೋವ್ಯಥೆಯಿಂದ ಆತ್ಮಭಂಗ” ಎಂದು ಜ್ಞಾನೋಕ್ತಿ 15:13 ಹೇಳುತ್ತದೆ. ನಿಮ್ಮ ಹೆತ್ತವರಲ್ಲಿ ಒಬ್ಬರು ಅಸ್ವಸ್ಥರಾಗಿರುವಾಗ, ಬೇರೆ ಬೇರೆ ರೀತಿಯ ಅನಿಸಿಕೆಗಳು ನಿಮ್ಮ ಮನಸ್ಸಿಗೆ ಬರುವುದು ಸಹಜ. ಉದಾಹರಣೆಗೆ, ನಿಮ್ಮ ಹೆತ್ತವರ ಸ್ಥಿತಿಯನ್ನು ನೋಡಿ ನಿಮಗೆ ದೋಷಿ ಭಾವನೆ ಉಂಟಾಗಬಹುದು. ನಿಮ್ಮ ಹೆತ್ತವರೊಂದಿಗೆ ಹೊಂದಿಕೊಂಡು ಹೋಗುವುದು ನಿಮಗೆ ಸ್ವಲ್ಪ ಕಷ್ಟಕರವಾಗಿದ್ದಿರಬಹುದು. ಈ ಮುಂಚೆ ನಿಮ್ಮ ಮಧ್ಯೆ ತುಂಬ ದೊಡ್ಡ ವಾಗ್ವಾದಗಳೇ ಆಗಿದ್ದಿರಬಹುದು. ಆದರೆ ಕೌಟುಂಬಿಕ ಜಗಳಗಳು ಒತ್ತಡವನ್ನು ಉಂಟುಮಾಡಬಹುದಾದರೂ, ಇದರಿಂದ ಗಂಭೀರವಾದ ಅಸ್ವಸ್ಥತೆಯು ಉಂಟಾಗುವುದು ತುಂಬ ಅಪರೂಪ. ಅತ್ಯಂತ ಪ್ರೀತಿಪರ ವಾತಾವರಣವಿರುವ ಕ್ರೈಸ್ತ ಮನೆವಾರ್ತೆಗಳಲ್ಲೂ ಒತ್ತಡಗಳು ಹಾಗೂ ಚಿಕ್ಕಪುಟ್ಟ ವಾಗ್ವಾದಗಳು ಸಂಭವಿಸಸಾಧ್ಯವಿದೆ. ಆದುದರಿಂದ, ನಿಮ್ಮ ಹೆತ್ತವರ ಆರೋಗ್ಯ ಸಮಸ್ಯೆಗಳಿಗೆ ನೀವೇ ಹೊಣೆಗಾರರಾಗಿದ್ದೀರೊ ಎಂಬಂತೆ, ನೀವು ದೋಷಿ ಮನೋಭಾವವನ್ನು ತಾಳಬೇಕಾಗಿಲ್ಲ.
ಮೂಲಭೂತವಾಗಿ, ನಿಮ್ಮ ಅಮ್ಮ ಅಥವಾ ಅಪ್ಪ ಅಸ್ವಸ್ಥರಾಗುವುದಕ್ಕೆ, ನಮ್ಮ ಮೊದಲ ಹೆತ್ತವರಾದ ಆದಾಮಹವ್ವರ ಪಾಪವೇ ಕಾರಣವಾಗಿದೆ. (ರೋಮಾಪುರ 5:12) ಆ ಮೊದಲ ಪಾಪದ ಕಾರಣದಿಂದಲೇ, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ” ಇದೆ.—ರೋಮಾಪುರ 8:22.
ಮನಸ್ಸಿಗೆ ನೋವನ್ನು ಉಂಟುಮಾಡುವ ಅನಿಸಿಕೆಗಳು
ಆದರೂ, ಅದರ ಕುರಿತು ನೀವು ಚಿಂತಿಸಬಹುದು ಹಾಗೂ ಯೋಚಿಸಬಹುದು. ಟೆರೀಯ ತಾಯಿಗೆ ಲೂಪಸ್ ಎಂಬ ಚರ್ಮರೋಗವಿದ್ದು, ಇದು ತುಂಬ ಮಾರಕ ಪರಿಣಾಮಗಳನ್ನು ಉಂಟುಮಾಡುವಂತಹದ್ದಾಗಿದೆ. ಟೆರೀ ಒಪ್ಪಿಕೊಳ್ಳುವುದು: “ನಾನು ಮನೆಯಿಂದ ಹೊರಗೆ ಇರುವಾಗೆಲ್ಲ, ಅಮ್ಮ ಹೇಗಿದ್ದಾರೋ ಏನೋ ಎಂದು ಅವರ ಬಗ್ಗೆಯೇ ಚಿಂತಿಸುತ್ತಿರುತ್ತೇನೆ. ಮಾಡುತ್ತಿರುವ ಕೆಲಸದಲ್ಲಿ ಗಮನವನ್ನು ಕೇಂದ್ರೀಕರಿಸುವುದು ತುಂಬ ಕಷ್ಟಕರವಾಗುತ್ತದೆ. ಆದರೆ, ಅವರು ಕೂಡ ಚಿಂತಿಸುವುದು ನನಗೆ ಇಷ್ಟವಿಲ್ಲದ ಕಾರಣ, ನನ್ನ ಭಾವನೆಗಳನ್ನು ನಾನು ಮನಸ್ಸಿನಲ್ಲಿಯೇ ಅದುಮಿಟ್ಟುಕೊಳ್ಳುತ್ತೇನೆ.”
“ಕಳವಳವು ಮನಸ್ಸನ್ನು ಕುಗ್ಗಿಸುವದು” ಎಂದು ಜ್ಞಾನೋಕ್ತಿ 12:25 ಹೇಳುತ್ತದೆ. ಈ ಸನ್ನಿವೇಶದಲ್ಲಿರುವಾಗ, ಯುವ ಜನರ ಮಧ್ಯೆ ಖಿನ್ನತೆಯು ಸಾಮಾನ್ಯವಾಗಿರುತ್ತದೆ. ಟೆರೀಯ ತಾಯಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಅಸಮರ್ಥರಾಗಿರುವುದನ್ನು ನೋಡುವಾಗಲೆಲ್ಲ ಅವಳಿಗೆ ತುಂಬ ಮನೋವೇದನೆಯಾಗುತ್ತಿತ್ತು ಎಂದು ಅವಳು ಹೇಳುತ್ತಾಳೆ. ಈ ಭಾವನಾತ್ಮಕ ಒತ್ತಡದ ಜೊತೆಗೆ, ಯುವ ಜನರು—ಅದರಲ್ಲೂ ವಿಶೇಷವಾಗಿ ಹುಡುಗಿಯರು—ಹೆಚ್ಚಿನ ಜವಾಬ್ದಾರಿಗಳನ್ನು ಹೊರುವಂತಹ ಒತ್ತಡಕ್ಕೆ ಒಳಗಾಗುತ್ತಾರೆ. ಪ್ರೊಫೆಸರ್ ಬ್ರೂಸ್ ಕಾಂಪ್ಯಾಸ್ರಿಗನುಸಾರ, “ಮನೆಕೆಲಸಗಳನ್ನು ನೋಡಿಕೊಳ್ಳುವುದು ಮತ್ತು ಒಡಹುಟ್ಟಿದವರ ಆರೈಕೆಮಾಡುವಂತಹ ಕೌಟುಂಬಿಕ ಜವಾಬ್ದಾರಿಗಳು ಹುಡುಗಿಯರ ಮೇಲೆ ಬೀಳುತ್ತವೆ; ಇದು ಅವರ ಸಾಮರ್ಥ್ಯಕ್ಕೆ ಮೀರಿದ್ದಾಗಿದ್ದು, ಇದರಿಂದ ಒಬ್ಬ ವ್ಯಕ್ತಿಯೋಪಾದಿ ಪ್ರಗತಿಮಾಡಲು ಅಗತ್ಯವಿರುವ ಸಹಜ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ.” ಕೆಲವು ಹದಿವಯಸ್ಕರು ಒಂಟಿಯಾಗಿರಲು ಇಷ್ಟಪಡುತ್ತಾರೆ, ಮತ್ತು ನಿರಾಶೆ ಹಾಗೂ ಖಿನ್ನತೆಯನ್ನು ಉಂಟುಮಾಡುವ ಸಂಗೀತವನ್ನು ಕೇಳಿಸಿಕೊಳ್ಳುತ್ತಿರುತ್ತಾರೆ.—ಜ್ಞಾನೋಕ್ತಿ 18:1.
ಒಬ್ಬನ ಹೆತ್ತವರಲ್ಲಿ ಒಬ್ಬರು ಸಾಯಲೂಬಹುದು ಎಂಬ ಭಯವು ಸರ್ವಸಾಮಾನ್ಯವಾಗಿರುತ್ತದೆ. ಟೆರೀಯು ಏಕೈಕ ಮಗಳಾಗಿದ್ದು, ಅವಳ ತಾಯಿ ಒಬ್ಬ ಒಂಟಿಹೆತ್ತವರಾಗಿದ್ದಾರೆ. ಪ್ರತಿಸಲ ತನ್ನ ತಾಯಿಯು ಆಸ್ಪತ್ರೆಗೆ ಹೋದಾಗಲೆಲ್ಲಾ, ಅವರು ಇನ್ನೆಂದೂ ಹಿಂದಿರುಗುವುದಿಲ್ಲ ಎಂಬ ಭಯದಿಂದ ಟೆರೀ ಯಾವಾಗಲೂ ಅಳುತ್ತಿರುತ್ತಾಳೆ. ಟೆರೀ ಹೇಳಿದ್ದು: “ನಾವಿಬ್ಬರೇ ಇದ್ದೆವು. ನನ್ನ ಆತ್ಮೀಯ ಸ್ನೇಹಿತೆಯನ್ನು ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ.” ಮಾರ್ಥ ಎಂಬ ಹೆಸರಿನ ಯುವತಿಯೊಬ್ಬಳು ಒಪ್ಪಿಕೊಂಡದ್ದು: “ನಾನು ಹದಿನೆಂಟು ವರ್ಷ ಪ್ರಾಯದವಳಾಗಿದ್ದೇನೆ, ಆದರೂ ನನ್ನ ಹೆತ್ತವರನ್ನು ಕಳೆದುಕೊಳ್ಳುವ ವಿಷಯದಲ್ಲಿ ನಾನು ಇನ್ನೂ ಭಯಪಡುತ್ತೇನೆ. ಖಂಡಿತವಾಗಿಯೂ ಅದು ಒಂಟಿತನದ ಅತಿ ವಿನಾಶಕರ ಅನಿಸಿಕೆಯನ್ನು ಉಂಟುಮಾಡಸಾಧ್ಯವಿದೆ.” ಹೆತ್ತವರ ಅಸ್ವಸ್ಥತೆಯ ವಿಷಯದಲ್ಲಿ ತೋರಿಸಲ್ಪಡುವ ಸಾಮಾನ್ಯ ಪ್ರತಿಕ್ರಿಯೆಗಳು, ನಿದ್ರೆಯ ತೊಂದರೆಗಳು, ಕೆಟ್ಟ ಕನಸುಗಳು, ಮತ್ತು ತಿನ್ನುವ ಕ್ರಮರಾಹಿತ್ಯಗಳೇ.
ನೀವು ಮಾಡಸಾಧ್ಯವಿರುವ ವಿಷಯಗಳು
ಈಗ ಸಂಗತಿಗಳು ಎಷ್ಟೇ ಕಷ್ಟಕರವಾಗಿ ಕಂಡುಬರಬಹುದಾದರೂ, ನೀವು ಪರಿಸ್ಥಿತಿಯನ್ನು ನಿಭಾಯಿಸಬಲ್ಲಿರಿ! ಮೊದಲಾಗಿ, ನಿಮ್ಮ ಭಯವನ್ನು ಹಾಗೂ ಚಿಂತೆಗಳನ್ನು ನಿಮ್ಮ ಹೆತ್ತವರಿಗೆ ತಿಳಿಸಿರಿ. ನಿಮ್ಮ ಹೆತ್ತವರ ಪರಿಸ್ಥಿತಿಯು ಎಷ್ಟು ಗಂಭೀರವಾಗಿದೆ? ತಂದೆ ಅಥವಾ ತಾಯಿಯ ಗುಣಹೊಂದುವ ಸಂಭವವು ಎಷ್ಟಿದೆ? ಒಂದುವೇಳೆ ನಿಮ್ಮ ಹೆತ್ತವರಲ್ಲಿ ಒಬ್ಬರು ಗುಣಹೊಂದದಿದ್ದರೆ, ನಿಮ್ಮನ್ನು ನೋಡಿಕೊಳ್ಳಲಿಕ್ಕಾಗಿ ಯಾವ ಏರ್ಪಾಡುಗಳು ಮಾಡಲ್ಪಟ್ಟಿವೆ? ನಿಮ್ಮ ಜೀವನದಲ್ಲಿ ಮುಂದೆ ಎಂದಾದರೂ ಅದೇ ಅಸ್ವಸ್ಥತೆಯು ನಿಮಗೂ ಬರುವ ಸಾಧ್ಯತೆಗಳಿವೆಯೊ? ಇಂತಹ ವಿಷಯಗಳ ಬಗ್ಗೆ ಮಾತಾಡುವುದು ಹೆತ್ತವರಿಗೆ ಕಷ್ಟಕರವಾಗಿರುವುದಾದರೂ, ನೀವು ಶಾಂತಚಿತ್ತರಾಗಿ, ಗೌರವದಿಂದ ಅವರ ಸಹಾಯವನ್ನು ಕೇಳಿಕೊಳ್ಳುವಲ್ಲಿ, ನಿಮಗೆ ಸಹಾಯ ಮಾಡಲು ಹಾಗೂ ಬೆಂಬಲ ನೀಡಲು ಅವರು ತಮ್ಮಿಂದಾದುದೆಲ್ಲವನ್ನೂ ಮಾಡುವುದು ಸಂಭವನೀಯ.
ನಿಮ್ಮ ಅನಿಸಿಕೆಗಳನ್ನು ಸಹ ಅವರಿಗೆ ತಿಳಿಯಪಡಿಸಿರಿ. ತನ್ನ ತಾಯಿ ಕ್ಯಾನ್ಸರ್ನಿಂದ ಸಾಯುತ್ತಿದ್ದಾರೆ ಎಂಬುದು ಆ್ಯಲ್ಗೆ ತಿಳಿದುಬಂದಾಗ, ಅವರ ಬಗ್ಗೆ ತನಗಿದ್ದ ಅನಿಸಿಕೆಗಳನ್ನು ತಾನು ವ್ಯಕ್ತಪಡಿಸಲೇ ಇಲ್ಲವೆಂಬುದನ್ನು ಅವನು ಜ್ಞಾಪಿಸಿಕೊಳ್ಳುತ್ತಾನೆ. ಅವನು ಹೇಳುವುದು: “ನಾನು ತಾಯಿಯನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ಅವರಿಗೆ ಹೇಳಲೇ ಇಲ್ಲ. ನನ್ನ ತಾಯಿ ನಾನು ಹಾಗೆ ಹೇಳುವುದನ್ನು ಕೇಳಿಸಿಕೊಳ್ಳಲು ಬಯಸುತ್ತಿದ್ದರು ಎಂಬುದು ನನಗೆ ಗೊತ್ತಿತ್ತಾದರೂ, ನಾನು ಒಬ್ಬ ಹದಿವಯಸ್ಕನಾಗಿದ್ದರಿಂದ ಅಂತಹ ಅನಿಸಿಕೆಗಳನ್ನು ಅವರ ಮುಂದೆ ವ್ಯಕ್ತಪಡಿಸುವುದು ಹಾಸ್ಯಕರ ಎಂದು ನನಗನಿಸುತ್ತಿತ್ತು. ಸ್ವಲ್ಪ ಸಮಯಾನಂತರ ಅವರು ಮೃತಪಟ್ಟರು, ಮತ್ತು ನನಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶವಿದ್ದಾಗ ನಾನು ಅದರ ಸದುಪಯೋಗ ಮಾಡಿಕೊಳ್ಳಲಿಲ್ಲ, ಆದುದರಿಂದ ನನಗೆ ಈಗ ದೋಷಿ ಭಾವನೆಯಾಗುತ್ತದೆ. ಅದರ ಬಗ್ಗೆ ನಾನು ಈಗ ವಿಷಾದಪಡುತ್ತೇನೆ, ಏಕೆಂದರೆ ಅವರೇ ನನ್ನ ಜೀವಿತದಲ್ಲಿ ಅತಿ ಪ್ರಾಮುಖ್ಯ ವ್ಯಕ್ತಿಯಾಗಿದ್ದರು.” ನೀವು ನಿಮ್ಮ ಹೆತ್ತವರನ್ನು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ಅವರ ಮುಂದೆ ವ್ಯಕ್ತಪಡಿಸಲು ಹಿಂಜರಿಯಬೇಡಿ.
ಸಾಧ್ಯವಿರುವಲ್ಲಿ, ನಿಮ್ಮ ಹೆತ್ತವರ ಅಸ್ವಸ್ಥತೆಯ ಕುರಿತು ಸವಿವರವಾಗಿ ತಿಳಿದುಕೊಳ್ಳಲು ಪ್ರಯತ್ನಿಸಿರಿ. (ಜ್ಞಾನೋಕ್ತಿ 18:15) ಇದರ ಬಗ್ಗೆ ನಿಮ್ಮ ಕುಟುಂಬದ ವೈದ್ಯರು ನಿಮಗೆ ಸಹಾಯ ಮಾಡಬಹುದು. ಇದರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವುದು, ನೀವು ಹೆಚ್ಚು ಸಹಾನುಭೂತಿಯುಳ್ಳವರೂ, ಸಹನೆಯುಳ್ಳವರೂ, ಅರ್ಥಮಾಡಿಕೊಳ್ಳುವವರೂ ಆಗಿರುವಂತೆ ನಿಮಗೆ ಸಹಾಯ ಮಾಡುವುದು. ಅಷ್ಟುಮಾತ್ರವಲ್ಲದೆ, ನಿಮ್ಮ ಹೆತ್ತವರ ಶರೀರದ ಮೇಲೆ ಉಂಟಾಗುವ ಕಲೆಗಳು, ಕೂದಲು ನಷ್ಟ, ಅಥವಾ ಆಯಾಸದಂತಹ ಶಾರೀರಿಕ ಬದಲಾವಣೆಗಳನ್ನು ಅಂಗೀಕರಿಸಲು ನೀವು ಸಿದ್ಧರಾಗಿರುವಂತೆ ಸಹಾಯ ಮಾಡಬಲ್ಲದು.
ನಿಮ್ಮ ಹೆತ್ತವರು ಆಸ್ಪತ್ರೆಯಲ್ಲಿದ್ದಾರೋ? ಹಾಗಾದರೆ ನೀವು ಅವರನ್ನು ಭೇಟಿಮಾಡುವಾಗ, ನಗುನಗುತ್ತಾ ಇರಿ ಮತ್ತು ಸಕಾರಾತ್ಮಕವಾದ ಮಾತುಗಳನ್ನಾಡಿರಿ. ನಿಮ್ಮ ಸಂಭಾಷಣೆಯಲ್ಲಿ ಸಾಧ್ಯವಾದಷ್ಟು ಆಶಾವಾದವಿರಲಿ. ಶಾಲಾಕೆಲಸ ಹಾಗೂ ಕ್ರೈಸ್ತ ಚಟುವಟಿಕೆಗಳ ಕುರಿತಾದ ಸುದ್ದಿಯನ್ನು ಸಹ ಅವರೊಂದಿಗೆ ಹಂಚಿಕೊಳ್ಳಿ. (ಹೋಲಿಸಿರಿ ಜ್ಞಾನೋಕ್ತಿ 25:25.) ಒಬ್ಬ ರೋಗಿಗೆ ಅವನ ಸಂಬಂಧಿಕರೇ ಆಹಾರವನ್ನು ಒದಗಿಸುವಂತೆ ಹಾಗೂ ಆರೈಕೆಮಾಡುವಂತೆ ನಿರೀಕ್ಷಿಸುವಂತಹ ಒಂದು ದೇಶದಲ್ಲಿ ನೀವು ಜೀವಿಸುತ್ತಿರುವಲ್ಲಿ, ನಿಮ್ಮ ಪಾಲಿಗೆ ಬರುವ ಕೆಲಸವನ್ನು ಗುಣುಗುಟ್ಟದೆ ಮಾಡಿ. ಆಸ್ಪತ್ರೆಗೆ ಹೋಗುವಾಗ ನೀಟಾಗಿ ಹೋಗುವುದಾದರೆ, ಇದು ನಿಮ್ಮ ಹೆತ್ತವರನ್ನು ಸಂತೋಷಪಡಿಸುವುದು ಮಾತ್ರವಲ್ಲ, ಆಸ್ಪತ್ರೆಯ ಕೆಲಸಗಾರರು ಹಾಗೂ ವೈದ್ಯರ ಮೇಲೆಯೂ ಇದು ಒಳ್ಳೆಯ ಪ್ರಭಾವವನ್ನು ಬೀರುತ್ತದೆ. ಅಲ್ಲದೆ, ನಿಮ್ಮ ಹೆತ್ತವರಿಗೆ ದೊರಕುತ್ತಿರುವ ವೈದ್ಯಕೀಯ ಶುಶ್ರೂಷೆಯ ಗುಣಮಟ್ಟವನ್ನು ಇದು ಇನ್ನೂ ಉತ್ತಮಗೊಳಿಸಸಾಧ್ಯವಿದೆ.b
ನಿಮ್ಮ ಹೆತ್ತವರು ಮನೆಯಲ್ಲೇ ಸುಧಾರಿಸಿಕೊಳ್ಳುತ್ತಿದ್ದಾರೋ? ತಂದೆಯನ್ನು ಅಥವಾ ತಾಯಿಯನ್ನು ನೋಡಿಕೊಳ್ಳುವುದರಲ್ಲಿ ಸಹಾಯ ಮಾಡಲಿಕ್ಕಾಗಿ ನಿಮ್ಮ ಕೈಲಾದುದೆಲ್ಲವನ್ನೂ ಮಾಡಿರಿ. ಮನೆಯ ಕೆಲಸವನ್ನು ಸಾಕಷ್ಟು ಮಾಡಲು ನಿಮ್ಮನ್ನು ನೀಡಿಕೊಳ್ಳಿರಿ. ‘ಹಂಗಿಸದೆ ಉದಾರ ಮನಸ್ಸಿನಿಂದ’ ನಿಮ್ಮನ್ನು ನೀಡಿಕೊಳ್ಳುವ ಮೂಲಕ, ಯೆಹೋವನನ್ನು ಅನುಕರಿಸಲು ಪ್ರಯತ್ನಿಸಿರಿ. (ಯಾಕೋಬ 1:5) ಯಾವುದೇ ಅಪವಾದ ಹೊರಿಸದೆ, ಆಶಾವಾದಿಗಳಾಗಿದ್ದು, ಸಕಾರಾತ್ಮಕ ಮನೋಭಾವವನ್ನು ತೋರಿಸಲು ನಿಮ್ಮಿಂದ ಸಾಧ್ಯವಿರುವಷ್ಟು ಪ್ರಯತ್ನಿಸಿರಿ.
ನಿಮಗೆ ಶಾಲೆಯ ಕೆಲಸಗಳನ್ನೂ ಮಾಡಲಿಕ್ಕಿರುತ್ತದೆ ಎಂಬುದು ನಿಜ. ನಿಮ್ಮ ವಿದ್ಯಾಭ್ಯಾಸವು ಸಹ ಪ್ರಾಮುಖ್ಯವಾಗಿರುವುದರಿಂದ, ಅದಕ್ಕಾಗಿಯೂ ಸಮಯವನ್ನು ಬದಿಗಿರಿಸಲು ಪ್ರಯತ್ನಿಸಿರಿ. ಸಾಧ್ಯವಿರುವಲ್ಲಿ, ವಿಶ್ರಾಂತಿ ಹಾಗೂ ಮನೋರಂಜನೆಗೂ ಸಮಯವನ್ನು ಮಾಡಿಕೊಳ್ಳಿರಿ. (ಪ್ರಸಂಗಿ 4:6) ಇದು ನಿಮ್ಮಲ್ಲಿ ನವಚೈತನ್ಯವನ್ನುಂಟುಮಾಡಿ, ನಿಮ್ಮ ಹೆತ್ತವರಿಗೆ ಹೆಚ್ಚು ಉತ್ತಮ ಬೆಂಬಲವನ್ನು ನೀಡಲು ನಿಮಗೆ ಸಹಾಯ ಮಾಡುವುದು. ಕೊನೆಯದಾಗಿ, ಇತರರ ಸಂಪರ್ಕದಿಂದ ನಿಮ್ಮನ್ನು ಎಂದೂ ದೂರವಿರಿಸಿಕೊಳ್ಳಬೇಡಿರಿ. ಜೊತೆ ಕ್ರೈಸ್ತರ ಸಹಾಯದ ಸದುಪಯೋಗವನ್ನು ಮಾಡಿಕೊಳ್ಳಿರಿ. (ಗಲಾತ್ಯ 6:2) ಟೆರೀ ಹೇಳುವುದು: “ಸಭೆಯು ನನ್ನ ಕುಟುಂಬವಾಯಿತು. ಹಿರಿಯರು ಯಾವಾಗಲೂ ನನ್ನೊಂದಿಗೆ ಮಾತಾಡಲು ಸಿದ್ಧರಿರುತ್ತಿದ್ದರು ಹಾಗೂ ನನ್ನನ್ನು ಉತ್ತೇಜಿಸುತ್ತಿದ್ದರು. ನಾನೆಂದೂ ಇದನ್ನು ಮರೆಯಲಾರೆ.”
ಆತ್ಮಿಕ ವಿಚಾರಗಳಲ್ಲಿಯೂ ಸಮತೂಕವುಳ್ಳವರಾಗಿರಿ
ಎಲ್ಲಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ ನಿಮ್ಮ ಆತ್ಮಿಕ ಸಮತೂಕವನ್ನು ಕಾಪಾಡಿಕೊಳ್ಳಿರಿ. ಬೈಬಲನ್ನು ಅಭ್ಯಾಸಿಸುವುದು, ಕೂಟಗಳಿಗೆ ಹಾಜರಾಗುವುದು, ಮತ್ತು ಇತರರಿಗೆ ಸಾರುವಂತಹ ಆತ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ಕಾರ್ಯಮಗ್ನರಾಗಿರಿಸಿಕೊಳ್ಳಿ. (1 ಕೊರಿಂಥ 15:58) ಬೇಸಗೆಯ ತಿಂಗಳುಗಳಲ್ಲಿ, ಒಬ್ಬ ಆಕ್ಸಿಲಿಯರಿ ಪಯನೀಯರಳೋಪಾದಿ ಟೆರೀ ಸೌವಾರ್ತಿಕ ಚಟುವಟಿಕೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದಳು. ಅವಳು ಹೇಳಿದ್ದು: “ಕೂಟಗಳಿಗಾಗಿ ತಯಾರಿಮಾಡುವಂತೆ ಹಾಗೂ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹಾಜರಾಗುವಂತೆ, ಅಮ್ಮ ನನಗೆ ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ಇದು ನಮ್ಮಿಬ್ಬರಿಗೂ ಪ್ರಯೋಜನಕರವಾಗಿ ಕಂಡುಬಂತು. ಪ್ರತಿಯೊಂದು ಕೂಟಕ್ಕೆ ಹಾಜರಾಗುವುದು ಅಮ್ಮನಿಗೆ ಅಸಾಧ್ಯವಾಗಿತ್ತಾದ್ದರಿಂದ, ನಾನು ಕೂಟಗಳಲ್ಲಿ ಹೆಚ್ಚೆಚ್ಚು ಗಮನಕೊಟ್ಟು ಆಲಿಸುತ್ತಿದ್ದೆ, ಮತ್ತು ತದನಂತರ ಬಂದು ಅವರಿಗೆ ಅದರ ಬಗ್ಗೆ ಹೇಳುತ್ತಿದ್ದೆ. ಅವರಿಗೆ ಕೂಟಕ್ಕೆ ಬರಲು ಅಸಾಧ್ಯವಾದಾಗಲೆಲ್ಲ, ತಮ್ಮ ಆತ್ಮಿಕ ಆಹಾರವನ್ನು ಪಡೆದುಕೊಳ್ಳಲಿಕ್ಕಾಗಿ ನನ್ನನ್ನೇ ಅವಲಂಬಿಸಿದ್ದರು.”
“ತಮ್ಮ ಹೆತ್ತವರ ಅಸ್ವಸ್ಥತೆಯ ನೋವನ್ನು ಅನುಭವಿಸುತ್ತಿರುವುದಾದರೂ, ಅಂತಹ ಮಕ್ಕಳು ಬೆಳೆದು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಬಲ್ಲರು ಎಂಬುದನ್ನು ನೋಡಿ ಅತ್ಯಾಶ್ಚರ್ಯಪಟ್ಟಿರುವ” ಒಬ್ಬ ಸಮಾಜ ಸೇವಕಿಯ ಕುರಿತು ದ ನ್ಯೂ ಯಾರ್ಕ್ ಟೈಮ್ಸ್ನಲ್ಲಿನ ಒಂದು ಲೇಖನವು ತಿಳಿಸಿದಾಗ, ಅದು ಈ ಎಲ್ಲ ವಿಷಯವನ್ನು ಚೆನ್ನಾಗಿ ಸಾರಾಂಶಿಸಿತು. ಅವಳು ಹೇಳುವುದು: “ತಮ್ಮಲ್ಲಿವೆಯೆಂದು ಅವರಿಗೇ ಗೊತ್ತಿದ್ದಿರದಂತಹ ಕೆಲವು ಕೌಶಲಗಳನ್ನು ಅವರು ಬೆಳೆಸಿಕೊಳ್ಳುತ್ತಾರೆ . . . ಹೆತ್ತವರ ಅಸ್ವಸ್ಥತೆಯ ಈ ನೋವನ್ನು ಅವರು ನಿಭಾಯಿಸಸಾಧ್ಯವಿರುವಲ್ಲಿ, ಅವರು ಅನೇಕ ಸಮಸ್ಯೆಗಳನ್ನು ನಿಭಾಯಿಸಬಲ್ಲರು.”
ನೀವು ಸಹ ಈ ಸಂಕಷ್ಟಕರ ಕಾಲಾವಧಿಯನ್ನು ನಿಭಾಯಿಸಬಲ್ಲಿರಿ. ಉದಾಹರಣೆಗೆ, ಈಗ ಟೆರೀಯ ತಾಯಿ ತಮಗೆ ತಾವೇ ಆರೈಕೆಮಾಡಿಕೊಳ್ಳುವಷ್ಟು ಗುಣಮುಖರಾಗಿದ್ದಾರೆ. ಸಕಾಲದಲ್ಲಿ ನಿಮ್ಮ ಹೆತ್ತವರು ಸಹ ಗುಣಹೊಂದಬಹುದು. ಆದರೆ, ಈ ಮಧ್ಯೆ ನಿಮ್ಮ ಸ್ವರ್ಗೀಯ ಸ್ನೇಹಿತನಾದ ಯೆಹೋವನು ನಿಮಗೆ ಬೆಂಬಲ ನೀಡುತ್ತಾನೆ ಎಂಬುದನ್ನು ಎಂದೂ ಮರೆಯದಿರಿ. ಆತನು “ಪ್ರಾರ್ಥನೆಯನ್ನು ಕೇಳುವವ”ನಾಗಿದ್ದಾನೆ, ಮತ್ತು ಸಹಾಯಕ್ಕಾಗಿರುವ ನಿಮ್ಮ ಬೇಡಿಕೆಗಳಿಗೆ ಕಿವಿಗೊಡುವನು. (ಕೀರ್ತನೆ 65:2) ನಿಮಗೆ ಹಾಗೂ ದೇವಭಯವಿರುವ ನಿಮ್ಮ ಹೆತ್ತವರಿಗೆ ಆತನು “ಬಲಾಧಿಕ್ಯ”ವನ್ನು ಕೊಡುವನು, ಮತ್ತು ನೀವು ಈ ಪರಿಸ್ಥಿತಿಯನ್ನು ನಿಭಾಯಿಸಬಲ್ಲಿರಿ.—2 ಕೊರಿಂಥ 4:7; ಕೀರ್ತನೆ 41:3.
[ಅಧ್ಯಯನ ಪ್ರಶ್ನೆಗಳು]
a ಕೆಲವು ಹೆಸರುಗಳು ಬದಲಾಯಿಸಲ್ಪಟ್ಟಿವೆ.
b ಅವೇಕ್! ಪತ್ರಿಕೆಯ, 1991, ಮಾರ್ಚ್ 8ರ ಸಂಚಿಕೆಯಲ್ಲಿರುವ “ಒಬ್ಬ ರೋಗಿಯನ್ನು ಭೇಟಿಮಾಡುವುದು—ಸಹಾಯ ಮಾಡುವ ವಿಧ” ಎಂಬ ಲೇಖನವು, ಅನೇಕ ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತದೆ.
[ಪುಟ 23 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನಾನು ಮನೆಯಿಂದ ಹೊರಗೆ ಇರುವಾಗಲೆಲ್ಲ, ಅಮ್ಮ ಹೇಗಿದ್ದಾರೋ ಏನೋ ಎಂದು ಚಿಂತಿಸುತ್ತಿರುತ್ತೇನೆ.”
[ಪುಟ 24 ರಲ್ಲಿರುವ ಚಿತ್ರ]
ನಿಮ್ಮ ಹೆತ್ತವರ ಅಸ್ವಸ್ಥತೆಯ ಕುರಿತಾದ ವಾಸ್ತವಾಂಶಗಳನ್ನು ತಿಳಿದುಕೊಳ್ಳುವುದು, ಹೆಚ್ಚು ಉತ್ತಮವಾಗಿ ಅವರಿಗೆ ಸಹಾಯ ಮಾಡುವಂತೆ ನಿಮ್ಮನ್ನು ಸಿದ್ಧಗೊಳಿಸಬಲ್ಲದು