ಯುವ ಜನರು ಪ್ರಶ್ನಿಸುವುದು . . .
ನನ್ನ ಹೆತ್ತವರು ಕೊರತೆಯುಳ್ಳವರಾದರೆ ಆಗೇನು?
“ನನ್ನ ತಂದೆ ಹತ್ತು ವರುಷಗಳಿಂದ ಒಬ್ಬ ಕ್ರೈಸ್ತರಾಗಿದ್ದಾರೆ. ಅವರು ಈಗ ಅಕ್ರಿಯರು. ಅವರು ಬೈಬಲನ್ನು ಓದುವುದಿಲ್ಲ, ಮತ್ತು ಕ್ರಮವಾಗಿ ಕೂಟಗಳಿಗೆ ಹಾಜರಾಗುವುದಿಲ್ಲ. ಸಭೆಯಲ್ಲಿರುವ ತಮ್ಮ ಕ್ರೈಸ್ತ ಸಹೋದರರನ್ನು ನಿರಂತರವಾಗಿ ಅವರು ಟೀಕಸುತ್ತಿರುತ್ತಾರೆ. ಕುಲದ ಮತ್ತು ಅನೇಕ, ಅನೇಕ ಇತರ ವಿಷಯಗಳ ಮೇಲೆ ಅವರಿಗೆ ಲೌಕಿಕ ನೋಟಗಳಿವೆ. ನಾನು ಅವರನ್ನು ಅನೇಕ ಕುಂದುಗಳನ್ನು ಹೊಂದಿರುವವರೋಪಾದಿ ಪರಿಗಣಿಸುತ್ತೇನೆ.”—ಒಬ್ಬ ಹದಿವಯಸ್ಕ ಹುಡುಗಿ.
ಹೆತ್ತವರ್ಯಾರು ಪರಿಪೂರ್ಣರಲ್ಲ. “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ,” ಎಂದು ಬೈಬಲ್ ಹೇಳುತ್ತದೆ. (ರೋಮಾಪುರ 3:23) ಆದರೆ ಒಬ್ಬನ ತಾಯಿ ಅಥವಾ ತಂದೆ ಸಾರ್ವಜನಿಕವಾಗಿ ಒಬ್ಬ ಆದರ್ಶ ಕ್ರೈಸ್ತ ಪಾತ್ರವನ್ನು ವಹಿಸಿ ಏಕಾಂತದಲ್ಲಿ ಅಸಹ್ಯಕರವಾದ ಮಾರ್ಪಾಟನ್ನು ಹೊಂದುವಾಗ ಪರಿಸ್ಥಿತಿಯು ಪೂರ್ತಿ ವಿಭಿನ್ನವಾಗಿರುತ್ತದೆ. “ಇತರರ ಉಪಸ್ಥಿತಿಯಲ್ಲಿ ನನ್ನ ತಂದೆಯು ಒಳ್ಳೆಯವರು, ಆದರೆ, ಮುಚ್ಚಿರುವ ಬಾಗಿಲುಗಳ ಮರೆಯಲ್ಲಿ ಒಬ್ಬ ವಿಭಿನ್ನ ವ್ಯಕ್ತಿ—ಅವರು ಕೀಳು ಮನಸ್ಸಿನವರಾಗಿದ್ದಾರೆ! ನಾನು ಮಾಡುವ ಪ್ರತಿಯೊಂದು ವಿಷಯವನ್ನು ಅವರು ಟೀಕಿಸುತ್ತಾರೆ, ಮತ್ತು ನನ್ನ ಕುಟುಂಬದಲ್ಲಿರುವ ಪ್ರತಿಯೊಬ್ಬರನ್ನು ಅವರು ಕ್ಷೋಭೆಗೊಳಿಸುತ್ತಾರೆ. ಜೀವನದಲ್ಲಿ ಯಾವುದೇ ಆನಂದವನ್ನು ಕಂಡುಕೊಳ್ಳಲಸಾಧ್ಯವಾದ ಹಂತದಲ್ಲಿ ನಾನಿದ್ದೇನೆ. ಅವರಿಗಾಗಿರುವ ನನ್ನ ಎಲ್ಲ ಅನಿಸಿಕೆಯು ದ್ವೇಷವೇ” ಎಂದು ಒಬ್ಬ ಯುವ ಹುಡುಗಿಯು ಹೇಳುತ್ತಾಳೆ.
ಯಾರು ಗೋಪ್ಯವಾಗಿ ಅಪಪ್ರಯೋಗದ ವಿವಿಧ ರೂಪಗಳನ್ನು ಅನುಭವಿಸುತ್ತಿದ್ದಾರೋ, ಆ ಯುವಜನರ ಮಧ್ಯೆ ಕೋಪ ಮತ್ತು ತೀವ್ರ ಅಸಮಾಧಾನವು ವಿಶೇಷವಾಗಿ ತೀಕ್ಷ್ಣವಾಗಿರಬಹುದು. ಹೀಗೆ, ಒಬ್ಬ ಏಕಾಂತ ಮದ್ಯವ್ಯಸನಿಯಾದ ತನ್ನ ತಂದೆಯಿಂದ, “ಸಕಲ ವಿಧದ ಬಲಾತ್ಕಾರ, ದೂಷಣೆ, ಮತ್ತು ದುರ್ಭಾಷೆ”ಯನ್ನು ಅನುಭವಿಸಿದ ಮೇರಿ ಎಂಬ ಹೆಸರುಳ್ಳ ಒಬ್ಬ ಮಹಿಳೆಯು ಬರೆಯುತ್ತಾಳೆ. “ಜನರು ಮಕ್ಕಳಾದ ನಮ್ಮನ್ನು ಸಮೀಪಿಸಿ ಎಂಥ ಅದ್ಭುತ ತಂದೆ ನಮಗಿದ್ದಾರೆಂದು ಮತ್ತು ನಾವೆಷ್ಟು ಧನ್ಯರಾಗಿದ್ದೇವೆ ಎಂದು ಹೇಳುತ್ತಿದ್ದರು,” ಎಂದು ಆಕೆ ವ್ಯಥೆಯಿಂದ ನೆನಪು ಮಾಡಿಕೊಳ್ಳುತ್ತಾಳೆ.
ಸಕಲ ವಿಧದ ಕಪಟತನವನ್ನು ಬೈಬಲ್ ಖಂಡಿಸುತ್ತದೆ. (ಯಾಕೋಬ 3:17) ದೇವರ ಸತ್ಯ ಆರಾಧಕರ ನಡುವೆಯೂ ಕೂಡ, ಕೆಲವರು ‘ಕಪಟಿಗಳಾ’ಗಿರುವರು ಎಂದು ಅದು ನಮ್ಮನ್ನು ಎಚ್ಚರಿಸುತ್ತದೆ. (ಕೀರ್ತನೆ 26:4; ಹೋಲಿಸಿ ಯೂದ 4.) ಹಾಗಿದ್ದರೂ, ಕಪಟತನವನ್ನು ಅಭ್ಯಾಸಿಸುವವರು, ನೀವು ಪ್ರೀತಿಸಿ ಗೌರವಿಸಬೇಕಾಗಿರುವ, ನಿಮ್ಮ ಸ್ವಂತ ಹೆತ್ತವರೆಂದು ಅರಿಯುವುದು ವಿಷಯಗಳನ್ನು ಹೆಚ್ಚು ಸುಲಭವನ್ನಾಗಿ ಮಾಡದಿರಬಹುದು. ಕೆಲವು ಯುವಜನರು ಏಳುವಂಥ ಸಂಘರ್ಷದ ಭಾವನೆಗಳಿಂದ ಮುಳುಗಿಹೋಗಿರುತ್ತಾರೆ. “ನನಗೆ ಸಹಾಯದ ಅಗತ್ಯವಿದೆ” ಎಂದು ಒಬ್ಬ ಯುವ ಹುಡುಗಿಯು ಪ್ರಲಾಪಿಸುತ್ತಾಳೆ. “ಬೈಬಲ್ ಹೇಳುತ್ತದೆ ‘ನಿಮ್ಮ ತಂದೆಯನ್ನು ಸನ್ಮಾನಿಸಿರಿ,’ ಎಂದು ಆದರೆ ನನಗೆ ಅಸಾಧ್ಯ.”
ಅವರನ್ನು ಸನ್ಮಾನಿಸುವುದರ ನಿಜ ಅರ್ಥ
ಒಬ್ಬ ಹೆತ್ತವರನ್ನು ಸನ್ಮಾನಿಸಬೇಕೆಂಬ ಬೈಬಲ್ ಆಜ್ಞೆಯು, ತಮ್ಮ ಹೆತ್ತವರು ಅನರ್ಹರೆಂದು ನೆನಸುವ ಯುವಜನರಿಗೆ ಯಾವುದೇ ‘ನುಣುಚಿಕೊಳ್ಳುವ ಅಂಶ’ವನ್ನೂ ಒಳಗೊಂಡಿರುವುದಿಲ್ಲವೆಂಬುದು ನಿಜ. (ಎಫೆಸ 6:1, 2) ಹಾಗಿದ್ದರೂ, ಒಬ್ಬರ ಹೆತ್ತವನನ್ನು ಸನ್ಮಾನಿಸುವುದು ಅಂದರೆ, ಆತನ ಜೀವನಶೈಲಿಯನ್ನು ನೀವು ಒಪ್ಪುತ್ತೀರಿ ಅಥವಾ ಆತನು ನಿಮ್ಮನ್ನು ಕಾಣುವ ವಿಧದೊಂದಿಗೆ ನೀವು ಸಂತೋಷವಾಗಿದ್ದೀರಿ ಎಂಬುದನ್ನು ಅರ್ಥೈಸಬೇಕೆಂದಿಲ್ಲ.a ಬೈಬಲಿನಲ್ಲಿರುವ, “ಸನ್ಮಾನಿಸಿರಿ” ಎಂಬ ಪದವು ಸರಳವಾಗಿ ಯಥೋಕ್ತವಾಗಿ ವ್ಯವಸ್ಥಾಪಿತ ಅಧಿಕಾರವನ್ನು ಒಪ್ಪುವುದು ಎಂದು ಅರ್ಥೈಸಬಲ್ಲದು.
ದೃಷ್ಟಾಂತಕ್ಕಾಗಿ, ಕ್ರೈಸ್ತರು ‘ಅರಸನನ್ನು ಸನ್ಮಾನಿಸ’ಬೇಕೆಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 2:17) ಅರಸರು ಅನೇಕ ವೇಳೆ ಹಿಡಿಸದ ವ್ಯಕ್ತಿತ್ವಗಳಾಗಿದ್ದರೆಂದು ಪೇತ್ರನಿಗೆ ನೇರವಾಗಿ ತಿಳಿದಿತ್ತು. ಉದಾಹರಣೆಗಾಗಿ, ಅರಸನಾದ ಹೆರೋದ ಅಗ್ರಿಪ್ಪ I ಅಮಿತನೂ ಮುಂದಾಲೋಚನೆಯಿಲ್ಲದವನೂ ಆದ ಒಬ್ಬ ಮನುಷ್ಯನಾಗಿದ್ದನು. ರೋಮಿನಿಂದ ಪಲೆಸ್ತೀನದ ಅರಸನಾಗಿ ನೇಮಿಸಲ್ಪಟ್ಟ ಅನಂತರ, ಅವನು ಕ್ರೈಸ್ತರ ವಿರುದ್ಧ ಹಿಂಸೆಯನ್ನು ಎಬ್ಬಿಸಿದನು. ಅವನು “ಯೋಹಾನನ ಅಣನ್ಣಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು. ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ನೋಡಿ ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಹಿಡಿಸಿದನು.” (ಅ. ಕೃತ್ಯಗಳು 12:1-3) ಆದರೂ, ಪೇತ್ರನು ದಂಗೆಯನ್ನು ಉತ್ತೇಜಿಸಲಿಲ್ಲ. ಬದಲಿಗೆ, ಅರಸರಿಗೆ ವಿಧೇಯತೆ ತೋರಿಸುವುದನ್ನು ಆತನು ಉತ್ತೇಜಿಸಿದನು. ಸಕಾರಣದೊಂದಿಗೆ ಆತನು ಹಾಗೆ ಮಾಡಿದನು. ಐಹಿಕ ಪ್ರಭುಗಳಿಗೆ ವಿಧೇಯತೆ ತೋರಿಸುವುದು ಯೆಹೋವನ ಚಿತ್ತವಾಗಿದೆ. ಮತ್ತು ಪೇತ್ರನ ದಿನದಲ್ಲಿ ಕೆಲವು ಅರಸರು ಸಂಪೂರ್ಣ ಶಕ್ತಿ ಮತ್ತು ಅಧಿಕಾರವನ್ನು ಪಡೆದಿದ್ದರು. ಸೊಲೊಮೋನನು ಹೇಳಿದ್ದು: “ಅವನು ಇಷ್ಟಬಂದಂತೆ ಮಾಡಬಲ್ಲನಲ್ಲವೆ. ರಾಜನ ಮಾತಿಗೆ ಅಧಿಕಾರವುಂಟು; ಏನು ಮಾಡುತ್ತೀ ಎಂದು ಅವನನ್ನು ಯಾರು ತಾನೆ ಕೇಳಬಹುದು?”—ಪ್ರಸಂಗಿ 8:3, 4.
ಅದೇ ರೀತಿಯಲ್ಲಿ, ನಿಮ್ಮ ಹೆತ್ತವನು—ಆತನ ಕುಂದುಗಳು ಏನೇ ಆಗಿರಲಿ—ಇನ್ನೂ ಮೇಲ್ವಿಚಾರಣೆಯ ಸ್ಥಾನದಲ್ಲಿ ಇದ್ದಾನೆ ಮತ್ತು ನಿಮ್ಮ ಜೀವನದ ಮೇಲೆ ಗಣನೀಯವಾದ ಅಧಿಕಾರವನ್ನು ಹೊಂದಿದ್ದಾನೆ. ಆತನ ಮೇಲೆ ದಂಗೆಯೇಳುವುದು ಅಥವಾ ತಿರಸ್ಕಾರದಿಂದ ಆತನನ್ನು ಕಾಣುವುದು, ಒಂದು ವಿವೇಕಯುಕ್ತ ಕ್ರಿಯೆಯಾಗಿರುವುದಿಲ್ಲ. ಹಾಗೆ ಮಾಡುವುದು ನಿಮ್ಮ ಜೀವನವನ್ನು ಹೆಚ್ಚು ಕ್ಲಿಷ್ಟಕರವಾಗಿ ಮಾಡುವುದು ಮಾತ್ರವಲ್ಲದೆ, ದೇವರೊಂದಿಗಿನ ಅನುಗ್ರಹವನ್ನು ನೀವು ಕಳೆದುಕೊಳ್ಳವಂತೆ ಸಹ ಮಾಡಬಲ್ಲದು. (ಹೋಲಿಸಿರಿ ಜ್ಞಾನೋಕ್ತಿ 30:17; ಪ್ರಸಂಗಿ 10:4.) ಮತ್ತೊಂದು ಕಡೆ, ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಕಾರವನ್ನೀಯುವುದು, ಕಡಿಮೆ ಪಕ್ಷ ನಿಮ್ಮ ಹೆತ್ತವನೊಂದಿಗಿನ ನಿಮ್ಮ ಸಂಬಂಧದಲ್ಲಿ ಶಾಂತಿ ಮತ್ತು ಸಮಾಧಾನದ ತೋರಿಕೆಯನ್ನು ಕಾಪಾಡಲು ನಿಮಗೆ ಸಹಾಯ ಮಾಡಬಹುದು.—ಕೊಲೊಸ್ಸೆ 3:20.
ಕೋಪ ಮತ್ತು ತೀವ್ರ ಅಸಮಾಧಾನದೊಂದಿಗೆ ವ್ಯವಹರಿಸುವುದು
ನಿಮ್ಮನ್ನು ಘಾಸಿಗೊಳಿಸಿರುವ ಮತ್ತು ನಿರಾಶೆಗೊಳಿಸಿರುವ ಯಾರಾದರೊಬ್ಬರೊಂದಿಗೆ ನೀವು ಗೌರವಪೂರ್ವಕವಾಗಿ ಹೇಗೆ ವ್ಯವಹರಿಸಬಲ್ಲಿರಿ? ಇದು ಸುಲಭವಾಗಿರುವುದಿಲ್ಲ. ಆದರೆ ಆತನ ತಪ್ಪುಗಳ ಮತ್ತು ಕುಂದುಗಳ ಮೇಲೆ ನಿರಂತರ ಲಕ್ಷ್ಯವನ್ನು ಕೊಡುತ್ತಿರುವುದು, ಕೇವಲ ನಿಮ್ಮ ತೀವ್ರ ಅಸಮಾಧಾನವನ್ನು ಪೋಷಿಸುವುದು. ನಿಮ್ಮ ಹೆತ್ತವನು ಹೊಂದಿರಬಹುದಾದ ಯಾವುದೇ ಸುಗುಣಗಳಿಗೆ ಸಲ್ಲತಕ್ಕ ಪ್ರಶಂಸೆಯನ್ನು ಆತನಿಗೆ ಕೊಡುತ್ತಾ, ನೀವು ಆತನ ಕುರಿತು ಹೆಚ್ಚು ಸಕರಾತ್ಮಕ ರೀತಿಯಲ್ಲಿ ಆಲೋಚಿಸುವ ಆವಶ್ಯಕತೆ ಇದೆಯೆಂಬ ಅರ್ಥ ಇದಕ್ಕಿರಲಿಕ್ಕಿಲ್ಲವೋ?
ಜ್ಞಾನೋಕ್ತಿ 19:11 ಏನು ಹೇಳುತ್ತದೆ ಎಂಬುದನ್ನು ಅವಲೋಕಿಸಿರಿ: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ.” ನಿಮ್ಮ ಹೆತ್ತವನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು, ವಿಷಯಗಳ ಮೇಲೆ ಒಂದು ತಾಜಾ ನೋಟವನ್ನು ನಿಮಗೆ ನೀಡಬಹುದು. ಆತನು ನಿಜವಾಗಿಯೂ ದುಷ್ಟತನದಿಂದ ವರ್ತಿಸುತ್ತಿದ್ದಾನೋ? ಅಥವಾ ಅವನು ಕೇವಲ ಬಲಹೀನನು, ನಿರುತ್ತೇಜಿತನು, ಮತ್ತು ಸಹಾಯದ ಅಗತ್ಯದಲ್ಲಿರುವವನಾಗಿರಬಹುದೋ? ಆತನ ವರ್ತನೆಯು ಅಸ್ವಸ್ಥತೆ, ಖಿನ್ನತೆ, ಏಕಾಂಗಿತನ, ಅಥವಾ ಕೆಲಸದ ಒತ್ತಡದ ಫಲಿತಾಂಶವಾಗಿರಬಲ್ಲದೋ? ಹಾಗಿರುವುದಾದರೆ, ಈ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಹೆತ್ತವನೆಡೆಗೆ ಹೆಚ್ಚು ಸಹಾನುಭೂತಿಯನ್ನು ತೋರಿಸುವಂತೆ ಮತ್ತು ಪ್ರಾಯಶಃ ಕಡಿಮೆ ಕೋಪಗೊಳ್ಳುವಂತೆ ನಿಮಗೆ ಸಹಾಯವನ್ನೀಯಬಹುದು.
ವಿದ್ಯಮಾನವು ಯಾವುದೇ ಆಗಿರಲಿ, ನಿಮ್ಮ ಅನಿಸಿಕೆಗಳ ಕುರಿತು ಯಾರಾದರೊಬ್ಬರೊಂದಿಗೆ ಮಾತಾಡಲು ಇದು ಸಹಾಯವನ್ನೀಯುತ್ತದೆ. (ಜ್ಞಾನೋಕ್ತಿ 12:25) “ನನ್ನ ಪಪ್ಪ ತುಂಬ ಕುಡಿಯುತ್ತಿದ್ದರು,” ಎಂದು ಒಬ್ಬ ಹುಡುಗಿಯು ಜ್ಞಾಪಿಸಿಕೊಳ್ಳುತ್ತಾಳೆ. “ನನಗೆ ಹೇಗೆ ಅನಿಸಿತು ಎಂದು ನನ್ನ ಹೆತ್ತವರಿಗೆ ಹೇಳಲು ನನ್ನಿಂದ ಸಾಧ್ಯವಾಗಲಿಲ್ಲ, ಆದುದರಿಂದ ಅವೆಲ್ಲವನ್ನು ನಾನು ನನ್ನ ಆಂತರ್ಯದಲ್ಲೆ ಇಟ್ಟುಕೊಂಡೆ.” ಹಾಗಿದ್ದರೂ, ನೀವು ಒಬ್ಬರೇ ನೋವನ್ನು ಅನುಭವಿಸಬೇಕಾಗಿಲ್ಲ. ಹೆತ್ತವರನ್ನು ಸ್ಥಾನ ಪಲ್ಲಟಗೊಳಿಸದೆ, ಕ್ರೈಸ್ತ ಸಭೆಯಲ್ಲಿರುವ ಪ್ರೌಢ ವ್ಯಕ್ತಿಗಳು ಮನೆಯಲ್ಲಿನ ಕಾಳಜಿಯ ಯಾವುದೇ ಕೊರತೆಯನ್ನು ಸರಿದೂಗಿಸಲು ಹೆಚ್ಚನ್ನು ಮಾಡಬಲ್ಲರು. (ಮಾರ್ಕ 10:30ನ್ನು ಹೋಲಿಸಿರಿ.) ಜ್ಞಾನೋಕ್ತಿ 17:17 ಹೇಳುವುದು: “ತಮ್ಮ ಪ್ರೀತಿಯನ್ನು ಮಿತ್ರರು ಯಾವಾಗಲೂ ತೋರಿಸುತ್ತಾರೆ. ತೊಂದರೆಯಲ್ಲಿ ಪಾಲುಗಾರರಾಗದಿದ್ದರೆ ಸಹೋದರರು ಯಾತಕ್ಕಾಗಿ?”—ಟುಡೇಸ್ ಇಂಗ್ಲಿಷ್ ವರ್ಷನ್.
‘ನಾನು ಆತನನ್ನು ಬದಲಾಯಿಸಬಲ್ಲೆ’
ಜವಾಬ್ದಾರಿಯ ತಪ್ಪು ಪ್ರಜ್ಞೆಯ ಕಾರಣದಿಂದ ಕೆಲವು ಯುವಜನರು ಭಾವಾತ್ಮಕವಾಗಿ ನರಳುತ್ತಾರೆ. ಮೇರಿ, ತನ್ನ ಮತ್ತು ತನ್ನ ಸಹೋದರಸಹೋದರಿಯರ ಕುರಿತಾಗಿ ಜ್ಞಾಪಿಸಿಕೊಳ್ಳುವುದು: “ನನ್ನ ತಂದೆಯ ಕುಡಿಯುವ ಸಮಸ್ಯೆಯ ಕುರಿತು ಯಾರಾದರೂ ಕಂಡುಹಿಡಿಯುವರೋ ಎಂಬ ವಿಪರೀತವಾದ ಭಯದಲ್ಲಿ ನಾವು ಜೀವಿಸಿದೆವು.” ಇತರರು ತಮ್ಮ ಕರ್ತವ್ಯಚ್ಯುತ ಹೆತ್ತವನನ್ನು ಬದಲಾಯಿಸಲು, ವ್ಯರ್ಥ ಪ್ರಯತ್ನಗಳನ್ನು ಮಾಡುವ ಮೂಲಕ ತಾವೇ ಬಳಲಿ ಹೋಗುತ್ತಾರೆ.
ನಿಮ್ಮ ಹೆತ್ತವನಿಗಾಗಿ ನಿಮ್ಮಲ್ಲಿ ಎಷ್ಟು ಹೆಚ್ಚು ಪ್ರೀತಿ ಮತ್ತು ಕಾಳಜಿಯೇ ಇರಲಿ, ಅವನ ಕುಂದುಗಳಿಗಾಗಿ ನೀವು ಕಾರಣರೇ ಅಲ್ಲ. ಅವನು ದೇವರ ಮುಂದೆ ಜವಾಬ್ದಾರಿಯ ‘ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳುತ್ತಾನೆ.’ (ಹೋಲಿಸಿ ಗಲಾತ್ಯ 6:5; ಯಾಕೋಬ 5:14.) ನಿಮ್ಮ ಹೆತ್ತವನ ನಡತೆಯ ಕುರಿತು ಎಚ್ಚರಿಕೆ ಕೊಡುವುದು ಅಥವಾ ನಿಯಂತ್ರಿಸುವುದು ನಿಮ್ಮ ಜವಾಬ್ದಾರಿಯಾಗಿರುವುದಿಲ್ಲ. ನಿಮ್ಮ ಹೆತ್ತವನನ್ನು ನಿರಂತರವಾಗಿ ಮೂದಲಿಸುತ್ತಿರುವುದು ಅಥವಾ ಛೀಮಾರಿ ಹಾಕುತ್ತಿರುವುದು ಕೇವಲ ಆತನನ್ನು ಕ್ಷೋಭೆಗೊಳಿಸುವುದು.
ನೀವು ಮಾಡಸಾಧ್ಯವಿರುವಂಥದ್ದು ಏನೂ ಇರುವುದಿಲ್ಲ ಎಂಬುದನ್ನು ಇದು ಅರ್ಥೈಸುವುದಿಲ್ಲ. ಕೊನೆಯ ಪಕ್ಷ, ಆಂತರ್ಯವಾಗಿ ನಿಮ್ಮ ಹೆತ್ತವನು ಒಂದು ಪರಿವರ್ತನೆಯನ್ನು ಹೊಂದಲಿ ಎಂದು ನೀವು ‘ಎಡಬಿಡದೆ ಪ್ರಾರ್ಥನೆಮಾಡ’ಬಲ್ಲಿರಿ. (1 ಥೆಸಲೊನೀಕ 5:17) ಆತನಿಗಾಗಿ ಕ್ರಮವಾಗಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಮತ್ತು ಸೂಕ್ತವಾದಲ್ಲಿ, ಪ್ರಾಮಾಣಿಕವಾದ ಶ್ಲಾಘನೆಯನ್ನು ನೀಡುವುದು ಸಹ, ಆತನ ಮನೋಭಾವವನ್ನು ಮೃದುಗೊಳಿಸಲು ಸಹಾಯ ಮಾಡಬಹುದು. ಇದಕ್ಕೂ ಮೀರಿ, ನೀವು ಮಾಡಬಹುದಾದ ಏಕಮಾತ್ರ ವಿಷಯವು, ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಪರಿಸ್ಥಿತಿಯನ್ನು ತಾಳಿಕೊಳ್ಳುವುದೇ ಆಗಿದೆ.b
ನೀವು ಮತ್ತು ನಿಮ್ಮ ಹೆತ್ತವನು ಕ್ರೈಸ್ತರಾಗಿರುವುದಾದರೆ ಮತ್ತು ಆತನು ಮದ್ಯದ ದುರುಪಯೋಗ ಅಥವಾ ಕೋಪದ ಕೆರಳುವಿಕೆಯಂಥ ಗಂಭೀರವಾದ ತಪ್ಪು ಮಾಡುವಿಕೆಯಲ್ಲಿ ಒಳಗೂಡಿರುವುದಾದರೆ, ನೀವು ಸಭಾ ಹಿರಿಯರೊಂದಿಗೆ ವಿಷಯಗಳು ನಿಶ್ಚಯವಾಗಿ ಚರ್ಚಿಸಲ್ಪಡುವಂತೆ ನೋಡಿಕೊಳ್ಳುವ ಹಂಗಿನ ಅನಿಸಿಕೆಯುಳ್ಳವರಾಗುವುದು ಸ್ವಾಭಾವಿಕ. (ಯಾಕೋಬ 5:14) ಇದು ಅಪನಂಬಿಕೆಯ ಒಂದು ಕ್ರಿಯೆಯಾಗಿರಲಾರದು ಬದಲಿಗೆ, ಆತನಿಗೆ ಅಷ್ಟೊಂದು ವಿಪರೀತವಾಗಿ ಅಗತ್ಯವಿರುವ ಸಹಾಯವನ್ನು ನಿಮ್ಮ ಹೆತ್ತವನು ಪಡೆಯುವಂತೆ ನೋಡಲಿರುವ ಒಂದು ಪ್ರೀತಿಪರ ಪ್ರಯತ್ನವಾಗಿರುವುದು. ಕೆಲವು ಹೆತ್ತವರು ತಮ್ಮ ಯಾವುದೇ ತಪ್ಪು ಮಾಡುವಿಕೆಯನ್ನು ಕೋಪದಿಂದ ನಿರಾಕರಿಸಿ, ಗುಪ್ತವಾಗಿ ಶಿಕ್ಷೆಯ ಎಲ್ಲೆಯನ್ನು ದಾಟಿರುತ್ತಾರೆಂಬುದು ನಿಜವೇ ಆದರೆ ಈ ಸಂಬಂಧದಲ್ಲಿ ‘ನೀತಿಯ ನಿಮಿತ್ತವೇ ಬಾಧೆಪಡು’ವವರಾದ ಯುವಜನರಿಗೆ, ಅವರ ಎದೆಗಾರಿಕೆಯ ಪಥಕ್ಕೆ ಯೆಹೋವನು ಮನ್ನಣೆಯನ್ನು ನೀಡುವನು ಮತ್ತು ತನ್ನ ಸಕಾಲದಲ್ಲಿ, ಆತನು ಸತ್ಯವನ್ನು ಬೆಳಕಿಗೆ ತರುವನು ಎಂಬುದಾಗಿ ಆಶ್ವಾಸನೆಯನ್ನೀಯಲು ಸಾಧ್ಯವಿದೆ.—1 ಪೇತ್ರ 3:14; 1 ತಿಮೊಥೆಯ 5:24, 25.
ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುವುದು
ಸೊಲೊಮೋನನು ಹೇಳಿದ್ದು: “ಬರಿಯ ಗೋಳುಗುಟ್ಟಿಸುವಿಕೆಯು ಒಬ್ಬ ವಿವೇಕಿಯನ್ನು ಮುಟ್ಠಾಳನ ಹಾಗೆ ಕ್ರಿಯೆ ನಡೆಸುವಂತೆ ಮಾಡಬಹುದು.” (ಪ್ರಸಂಗಿ 7:7, NW) ವಿಷಾದನೀಯವಾಗಿ, ಕೆಲವು ಯುವಜನರು ತಮ್ಮ ಹೆತ್ತವರ ನಿಕೃಷ್ಟ ಉದಾಹರಣೆಯಿಂದಾಗಿ ಕಟುವಾಗಿ ಪರಿಣಮಿಸಿದ್ದಾರೆ ಮತ್ತು ಸ್ವತಃ ತಾವೇ ಅಯೋಗ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾರೆ. ಕೆಲವರು ದೇವರ ವಿರುದ್ಧವಾಗಿ ಕೂಡ ರೋಷವುಳ್ಳವರಾಗಿ ಪರಿಣಮಿಸಿ ಕ್ರೈಸ್ತ ಹಾದಿಯನ್ನು ಬಿಟ್ಟುಬಿಟ್ಟಿದ್ದಾರೆ! (ಜ್ಞಾನೋಕ್ತಿ 19:3) ಬೈಬಲ್ ಎಚ್ಚರಿಸುವುದು: “ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ವೈರತ್ವದ [ಕಾರ್ಯಗಳಿಗೆ] ನೂಕೀತು, ನೋಡಿಕೋ! ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಕ್ಕಬೇಡ.”—ಯೋಬ 36:18-21, NW.
ದೇವರೊಂದಿಗಿನ ನಿಮ್ಮ ಹೆತ್ತವರ ನಿಲುವಿನ ಕುರಿತು ಅತಿಯಾಗಿ ಚಿಂತಿಸುವ ಬದಲಾಗಿ, ನೀವು ‘ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳುವ’ ಅಗತ್ಯವಿದೆ. (ಫಿಲಿಪ್ಪಿ 2:12) ಪುರಾತನ ಸಮಯಗಳಲ್ಲಿ, ಹಿಜ್ಕೀಯನೆಂಬ ಹೆಸರುಳ್ಳ ಒಬ್ಬ ಯುವ ರಾಜಕುವರನು, ತದ್ರೀತಿಯ ಸಂದರ್ಭಗಳಲ್ಲಿ ಹಾಗೆಯೇ ಮಾಡಿದನು. ಆತನ ತಂದೆ, ರಾಜನಾದ ಆಹಾಜನು ಯೆಹೋವನ ಆರಾಧಕನಾಗಿದ್ದನೆಂದು ಹೇಳಿಕೊಂಡನು. (ಯೆಶಾಯ 7:10-12) ಆತನು ನಿಜವಾಗಿಯೂ ಕ್ಷುದ್ರಧರ್ಮಿ ದೇವತೆಗಳ ಒಬ್ಬ ಆರಾಧಕನಾಗಿದ್ದನು, ತನ್ನ ಸ್ವಂತ ಪುತ್ರರಲ್ಲಿ ಒಬ್ಬನನ್ನು ಮಾನವ ಬಲಿಯೋಪಾದಿ ಅರ್ಪಿಸಿದನು ಕೂಡ! (2 ಅರಸು 16:1-4) ಯುವ ಹಿಜ್ಕೀಯನಿಗೆ ಈ ಚಾಲ್ತಿಯಲ್ಲಿದ್ದ ಸ್ವಧರ್ಮಪರಿತ್ಯಾಗವು ಎಷ್ಟೊಂದು ಕಡು ಬೇಗೆಯಾಗಿದ್ದಿರಬೇಕು ಎಂಬುದನ್ನು ಕಲ್ಪಿಸಿಕೊಳ್ಳಿರಿ! ಕೆಲವರು ಈ ಯುವ ರಾಜಕುವರನು ಬರೆದಿದ್ದನೆಂದು ನಂಬುವ ಕೀರ್ತನೆ 119:28, (NW) ಹೇಳುವುದು: “ಮನೋವ್ಯಥೆಯಿಂದ ಕಣ್ಣೀರುಸುರಿಸುತ್ತೇನೆ; ನಿನ್ನ ವಾಕ್ಯಕ್ಕನುಸಾರವಾಗಿ ನನ್ನನ್ನು ಬಲಪಡಿಸು.”
ಯೆಹೋವನು ನಿಖರವಾಗಿ ಅದನ್ನೇ ಮಾಡಿದನು! ಹಿಜ್ಕೀಯನು ತನ್ನನ್ನು ಪ್ರಾರ್ಥನೆಯಲ್ಲಿ ಮತ್ತು ದೇವರ ವಾಕ್ಯವನ್ನು ಅಧ್ಯಯನಿಸುವುದರಲ್ಲಿ ಮೀಸಲಾಗಿರಿಸಿದ ಹಾಗೆ, ತನ್ನ ಸುತ್ತಮುತ್ತಲಿನ ವಿಷಯಗಳ ಹೊರತೂ ಆತನ ಸ್ವಂತ ಆತ್ಮಿಕತೆಯು ವೃದ್ಧಿಸಿತು. (ಕೀರ್ತನೆ 119:97) ಆತನು ತನ್ನ ಒಡನಾಟವನ್ನು ಸಹ ಜಾಗರೂಕನಾಗಿ ಕಾಪಾಡಿಕೊಂಡನು. (ಕೀರ್ತನೆ 119:63) ಫಲಿತಾಂಶವೇನಾಯಿತು? ತನ್ನ ಕಪಟಿಯಾದ ತಂದೆಯು ಇಟ್ಟ ದುಃಖಕರವಾದ ಉದಾಹರಣೆಯ ಹೊರತೂ, ಹಿಜ್ಕೀಯನು ಸ್ವತಃ “ಯೆಹೋವನಲ್ಲಿ ಅಂಟಿಕೊಂಡನು.”(2 ಅರಸು 18:6) ನೀವೂ ಹಾಗೆ ಮಾಡಬಲ್ಲಿರಿ! ನಿಮ್ಮ ಹೆತ್ತವನು ಕಪಟತನದಿಂದ ವರ್ತಿಸುತ್ತಿರಬಹುದು, ಆದರೆ ಅವರ ಮಾದರಿಯನ್ನು ನೀವು ಅನುಸರಿಸಬೇಕೆಂಬ ಯಾವ ಅಗತ್ಯವೂ ಇರುವುದಿಲ್ಲ. ಯೆಹೋವನಲ್ಲಿ ಅಂಟಿಕೊಳ್ಳುತ್ತಾ ಇರ್ರಿ, ಮತ್ತು ನಿಮ್ಮ ವಿಶ್ವಾಸಪೂರ್ಣವಾದ ಸೌಮ್ಯ ಮಾದರಿಯು, ಒಂದು ದಿನ ನಿಮ್ಮ ಹೆತ್ತವನನ್ನು ಬದಲಾಗುವಂತೆ ಪ್ರಚೋದಿಸುಬಹುದು.
[ಅಧ್ಯಯನ ಪ್ರಶ್ನೆಗಳು]
a ಸರಳತೆಯ ಸಲುವಾಗಿ, ಹೆತ್ತವರನ್ನು ನಾವು ಪುಲ್ಲಿಂಗದಲ್ಲಿ ಉಲ್ಲೇಖಿಸುವೆವು.
b ಒಬ್ಬ ಯುವ ವ್ಯಕ್ತಿಯು ಶಾರೀರಿಕ ಅಥವಾ ಲೈಂಗಿಕ ದುರುಪಯೋಗವನ್ನು ಸಹಿಸಿಕೊಳ್ಳತಕ್ಕದ್ದೆಂದು ಇದು ಅರ್ಥೈಸುವುದಿಲ್ಲ. ಅಂಥ ಒಂದು ಪರಿಸ್ಥಿತಿಯಲ್ಲಿರುವ ಒಬ್ಬ ಯುವ ವ್ಯಕ್ತಿಯು ಸಹಾಯವನ್ನು ಅರಸಬೇಕು, ಅದನ್ನು ಪಡೆಯಲು ಕುಟುಂಬದಿಂದ ಹೊರಗೆ ಹೋಗಬೇಕಾದರೂ ಕೂಡ.
[ಪುಟ 34 ರಲ್ಲಿರುವ ಚಿತ್ರಗಳು]
ನಿಮ್ಮ ಹೆತ್ತವರು ಕೊರತೆಯುಳ್ಳವರಾಗಿರುವ ಕಾರಣದಿಂದ ನೀವೂ ಹಾಗೆ ಮಾಡಬೇಕಾಗಿಲ್ಲ