ನನ್ನ ಪರವಾಗಿ ನನ್ನ ನಾಯಿ ಕೇಳಿಸಿಕೊಳ್ಳುತ್ತದೆ!
ಬ್ರಿಟನ್ನ ಎಚ್ಚರ! ಸುದ್ದಿಗಾರರಿಂದ
“ನನ್ನ ಮುದ್ದಿನ ನಾಯಿ ಇಲ್ಲದಿರುತ್ತಿದ್ದರೆ ನಾನೇನು ಮಾಡುತ್ತಿದ್ದೆನೋ ನಾನರಿಯೆ!” ತಮ್ಮ ಕುರ್ಚಿಯ ಕೆಳಗೆ ಸಂತೃಪ್ತಿಯಿಂದ ಬಿದ್ದುಕೊಂಡಿದ್ದ, ಜ್ಯಾಕ್ ರಸಲ್ ಟೆರಿಯರ್ ಜಾತಿಗೆ ಸೇರಿದ ಬಿಳಿ ಮತ್ತು ಕಂದುಬಣ್ಣದ ಮಿಶ್ರತಳಿಯ ಪುಟ್ಟ ನಾಯಿಯತ್ತ ಮಮತೆಯಿಂದ ನೋಡುತ್ತಾ, ಡಾರತಿಯವರು ಹೀಗೆ ಉದ್ಗರಿಸಿದರು. “ಟ್ವಿಂಕೀ ಕೆಲವೇ ತಿಂಗಳುಗಳಿಂದ ನನ್ನ ಬಳಿಯಿದೆ, ಆದರೆ ಈಗಾಗಲೇ ಅದು ನನ್ನ ಜೀವನಮಟ್ಟವನ್ನು ಉತ್ತಮಗೊಳಿಸಿದೆ.”
ನಾನು ಇನ್ನೂ ಹತ್ತಿರ ಹೋಗಿ ನೋಡಿದಾಗ, ಟ್ವಿಂಕೀ ಹಳದಿಬಣ್ಣದ ಒಂದು ಬಿಗಿಯಾದ ರಕ್ಷಾಕವಚವನ್ನು ಧರಿಸಿಕೊಂಡಿದ್ದು, ಅದರ ಮೇಲೆ “ಕಿವುಡರ ಪರವಾಗಿ ಕೇಳಿಸಿಕೊಳ್ಳುವ ನಾಯಿ” ಎಂದು ದಪ್ಪ ಅಕ್ಷರಗಳಲ್ಲಿ ಬರೆದಿರುವುದನ್ನು ನೋಡಿದೆ. ‘ಎಷ್ಟು ಅಸಾಧಾರಣ ಪ್ರಾಣಿ!’ ಎಂದು ನನ್ನಷ್ಟಕ್ಕೇ ನಾನು ಆಲೋಚಿಸಲಾರಂಭಿಸಿದೆ. ‘ಇದು ಏನು ಮಾಡಬಲ್ಲದು?’
ಕಳೆದ ಜುಲೈ ತಿಂಗಳಿನಲ್ಲಿ, ಇಂಗ್ಲೆಂಡ್ನ ಲಂಡನ್ನಲ್ಲಿ ನಡೆದ ಯೆಹೋವನ ಸಾಕ್ಷಿಗಳ “ದೇವರ ಜೀವನಮಾರ್ಗ” ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಿದ್ದ 44,000 ಜನರ ನಡುವೆ ನಾವು ಅನಿರೀಕ್ಷಿತವಾಗಿ ಭೇಟಿಯಾಗಿದ್ದೆವು. ಡಾರತಿಯವರು ಧ್ವನಿವರ್ಧಕದ ಸಮೀಪವೇ ಕುಳಿತುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಕೇಳಿಸಿಕೊಳ್ಳಶಕ್ತರಾಗಿದ್ದರು. ಹಾಗಾದರೆ ಇವರಿಗೆ ಕೇಳಿಸಿಕೊಳ್ಳುವ ನಾಯಿ ಏಕೆ ಬೇಕು? ಮಧ್ಯಾಹ್ನ ಊಟದ ಸಮಯದಲ್ಲಿ ನಾವು ಮಾತಾಡುತ್ತಾ ಕುಳಿತಿರುವಾಗ, ಡಾರತಿಯವರು ನನಗೆ ತಮ್ಮ ಕಥೆಯನ್ನು ಹೇಳಿದರು.
ಟ್ವಿಂಕೀಯ ಪಾತ್ರ
ಮೂರು ವರ್ಷ ಪ್ರಾಯದವರಾಗಿದ್ದಾಗ ಡಾರತಿಯವರಿಗೆ ಸಂಧಿವಾತ ಜ್ವರ ಬಂದಿದ್ದುದರ ಫಲಿತಾಂಶವಾಗಿ ಅವರು ಸಂಪೂರ್ಣ ಕಿವುಡರಾದರು. ಸುಮಾರು 23 ವರ್ಷಗಳ ಹಿಂದೆ ಅವರ ಪತಿ ಮರಣಪಟ್ಟಂದಿನಿಂದ, ಅವರು ಒಬ್ಬರೇ ಇದ್ದರೂ ತನಗೆ ವಯಸ್ಸಾಗುತ್ತಿದ್ದುದರಿಂದ, ಕೇವಲ ಒಡನಾಟಕ್ಕಿಂತಲೂ ಹೆಚ್ಚಿನದ್ದರ ಅಗತ್ಯ ತನಗಿತ್ತು ಎಂದು ಡಾರತಿ ವಿವರಿಸಿದರು. ಅವರು ಹೇಳಿದ್ದು: “ನನ್ನ ಪ್ರಾಯದಲ್ಲಿ ಕಿವುಡರಿಗೆ ತುಂಬ ಅಸುರಕ್ಷಿತ ಭಾವನೆಯುಂಟಾಗಸಾಧ್ಯವಿದೆ. ನನಗೆ ಈಗ 74 ವರ್ಷ ಪ್ರಾಯ ಮತ್ತು ನಾನು ಒಬ್ಬ ವಾರ್ಡನ್ ನೋಡಿಕೊಳ್ಳುವ ಒಂದು ಕಟ್ಟಡದಲ್ಲಿ ವಾಸಿಸುತ್ತಿದ್ದೇನೆ. ಆದರೆ ಮನೆಯಾಳು ನನ್ನನ್ನು ಭೇಟಿಯಾಗಲು ಬರುವಾಗ, ನನಗೆ ಕರೆಗಂಟೆಯ ಶಬ್ದವು ಕೇಳಿಸುವುದೇ ಇಲ್ಲ. ನನಗೆ ಸೌಖ್ಯವಿಲ್ಲವೋ ಏನೋ ಎಂದು ಭಾವಿಸಿ, ನನಗೆ ಗೊತ್ತಿಲ್ಲದೆ ಅವನು ಕೆಲವೊಮ್ಮೆ ಸೀದಾ ಮನೆಯೊಳಗೆ ಬಂದಿರುವುದನ್ನು ನೋಡಿ ನಾನು ಅನೇಕಬಾರಿ ಬೆಚ್ಚಿಬಿದ್ದಿದ್ದೇನೆ. ಆದರೆ ಈಗ ಟ್ವಿಂಕೀ ಕರೆಗಂಟೆಯ ಶಬ್ದವನ್ನು ಕೇಳಿಸಿಕೊಳ್ಳುತ್ತದೆ, ಬಂದು ನನ್ನ ಕಾಲನ್ನು ತಟ್ಟುತ್ತದೆ, ಮತ್ತು ಮುಂಬಾಗಿಲಿನ ಕಡೆಗೆ ನನ್ನನ್ನು ಕರೆದುಕೊಂಡು ಹೋಗುತ್ತದೆ. ತದ್ರೀತಿಯಲ್ಲಿ, ನನ್ನ ಅವನ್ ಒಲೆಯ ಟೈಮರ್ ಸಿಳ್ಳುಹಾಕುವಾಗ, ಟ್ವಿಂಕೀ ಅದನ್ನು ಕೇಳಿಸಿಕೊಂಡು ನನ್ನ ಬಳಿಗೆ ಓಡಿಬರುತ್ತದೆ ಮತ್ತು ನಾನು ಅದರ ಹಿಂದೆ ಹೋಗುತ್ತೇನೆ. ಬೆಂಕಿಯ ಎಚ್ಚರಿಕೆಯನ್ನು ಕೊಡಬೇಕಾದ ಸಂದರ್ಭದಲ್ಲಿ, ನನ್ನ ಗಮನವನ್ನು ಆಕರ್ಷಿಸಿ, ಆಮೇಲೆ ಮುಂದೆ ಸಂಭವಿಸಲಿರುವ ಅಪಾಯವನ್ನು ಸೂಚಿಸಲಿಕ್ಕಾಗಿ ನೆಲದ ಮೇಲೆ ಬಿದ್ದುಕೊಳ್ಳುವಂತೆ ಟ್ವಿಂಕೀಗೆ ತರಬೇತಿ ನೀಡಲಾಗಿದೆ. ಪ್ರತಿಸಲ ಅದು ನನಗೆ ಸಹಾಯ ಮಾಡಿದಾಗ, ಬಹುಮಾನವಾಗಿ ರುಚಿಕರವಾದ ಒಂದು ತಿಂಡಿಯನ್ನು ಕೊಡುವ ಮೂಲಕ ನಾನು ಅದನ್ನು ಸತ್ಕರಿಸುತ್ತೇನೆ.”
ಕೌಶಲಪೂರ್ಣವಾಗಿ ತರಬೇತಿ ನೀಡುವುದು
ನನ್ನ ಆಸಕ್ತಿ ಇನ್ನೂ ಕೆರಳಿತು. “ನಿಮ್ಮ ನಾಯಿ ನಿಮಗೆ ಹೇಗೆ ಸಿಕ್ಕಿತು, ಮತ್ತು ಅದಕ್ಕೆ ಯಾರು ತರಬೇತಿ ನೀಡಿದರು?” ಎಂದು ನಾನು ಕೇಳಿದೆ. ಬ್ರಿಟನ್ನಲ್ಲಿರುವ ಕಿವುಡ ಜನರು ಹೆಚ್ಚಿನ ಸ್ವಾತಂತ್ರ್ಯವನ್ನು ಸಾಧಿಸಿಕೊಂಡು, ತಮ್ಮ ಜೀವನಮಟ್ಟವನ್ನು ಉತ್ತಮಗೊಳಿಸುವಂತೆ ಮಾಡುವುದು ಯಾವ ಸಂಸ್ಥೆಯ ಉದ್ದೇಶವಾಗಿದೆಯೋ ಆ “ಕಿವುಡರ ಪರವಾಗಿ ಕೇಳಿಸಿಕೊಳ್ಳುವ ನಾಯಿಗಳ” ಸಂಸ್ಥೆಯ ಬಗ್ಗೆ ಡಾರತಿಯವರು ನನಗೆ ಹೇಳುವಂತೆ ಇದು ಸುಳಿವು ಕೊಟ್ಟಿತು. 1982ರಿಂದ ಈ ಸಂಸ್ಥೆಯು, ಬ್ರಿಟನ್ನಲ್ಲಿರುವ ಕಿವುಡ ವ್ಯಕ್ತಿಗಳಿಗೆ ನೂರಾರು ನಾಯಿಗಳನ್ನು ಕೊಟ್ಟಿದೆ. ಒಂದು ನಾಯಿಗೆ ಚೆನ್ನಾಗಿ ತರಬೇತಿ ಕೊಟ್ಟ ಬಳಿಕ, ದತ್ತುಕೊಡುವ ಮೂಲಕ ಆ ನಾಯಿಯನ್ನು ಅದರ ಹೊಸ ಒಡೆಯನಿಗೆ ಕಳುಹಿಸಲಾಗುತ್ತದೆ—ಅದು ಕೂಡ ಉಚಿತವಾಗಿ.
ಇದಕ್ಕಾಗಿ ಆಯ್ಕೆಯಾಗುವ ನಾಯಿಗಳು ಸಾಮಾನ್ಯವಾಗಿ ಬೀದಿನಾಯಿಗಳಾಗಿದ್ದು, ಪರಿಹಾರ ಕೇಂದ್ರಗಳಿಂದ ತೆಗೆದುಕೊಳ್ಳಲ್ಪಟ್ಟಿರುತ್ತವೆ, ಮತ್ತು ಇನ್ನೂ ಕೆಲವು ನಾಯಿಗಳು, ನಾಯಿಯ ತಳಿಗಾರರಿಂದ ದಾನವಾಗಿ ಕೊಡಲ್ಪಟ್ಟಿರುತ್ತವೆ. ಒಂದು ನಾಯಿಗೆ ತರಬೇತಿ ನೀಡಲು ಸುಮಾರು 12 ತಿಂಗಳುಗಳು ಹಿಡಿಯುತ್ತವೆ. ಒಬ್ಬ ಪ್ರಾಯೋಜಕರು, ಅಥವಾ ಒಂದು ಕಂಪೆನಿ ಇಲ್ಲವೆ ಚಿಕ್ಕಪುಟ್ಟ ಕಾಣಿಕೆಗಳನ್ನು ಒಟ್ಟುಗೂಡಿಸಿಕೊಡುವ ಜನರ ಒಂದು ಗುಂಪು ಅನೇಕವೇಳೆ ಇದರ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತದೆ. ತೆಳ್ಳನೆಯ ಮೈಕಟ್ಟಿಗಾಗಿ ವ್ಯಾಯಾಮ ಮಾಡಿಸುವ ಒಂದು ಸ್ಲಿಮ್ಮಿಂಗ್ ಕ್ಲಬ್ ಟ್ವಿಂಕೀಯ ಪ್ರಾಯೋಜಕವಾಗಿದೆ ಎಂದು ಡಾರತಿ ನನಗೆ ಹೇಳಿದರು.
ನಾಯಿಯನ್ನು ಆರಿಸಿಕೊಂಡ ಬಳಿಕ, ಕೇಳಿಸಿಕೊಳ್ಳುವ ಸಂಭವನೀಯತೆಯಿರುವ ಪ್ರತಿಯೊಂದು ನಾಯಿಗೆ—ಏಳು ವಾರಗಳ ನಾಯಿಯಿಂದ ಹಿಡಿದು ಮೂರು ವರ್ಷಗಳ ನಾಯಿಯ ವರೆಗೆ—ನಿರ್ದಿಷ್ಟ ಧ್ವನಿಗಳಿಗೆ ಪ್ರತಿಕ್ರಿಯಿಸುವಂತೆ ತರಬೇತಿ ನೀಡಲಾಗುತ್ತದೆ. ಆದರೂ ಮೊದಲು ಈ ನಾಯಿಯನ್ನು, ಸಮಾಜದಲ್ಲಿ ಜೀವಿಸಲು ಯೋಗ್ಯವನ್ನಾಗಿ ಮಾಡಿಸುವ ಒಬ್ಬ ಸ್ವಯಂಸೇವಕನಿಗೆ ನೇಮಿಸಲಾಗುತ್ತದೆ; ನಾಯಿಯ ವಯಸ್ಸು ಹಾಗೂ ಅನುಭವದ ಮೇಲೆ ಹೊಂದಿಕೊಂಡು, ಅವನು ಆ ನಾಯಿಯನ್ನು ಎರಡರಿಂದ ಎಂಟು ತಿಂಗಳುಗಳ ವರೆಗೆ ಮನೆಯಲ್ಲಿರಿಸಿಕೊಳ್ಳುತ್ತಾನೆ. ಸಮಾಜದಲ್ಲಿ ಜೀವಿಸಲು ಯೋಗ್ಯವನ್ನಾಗಿ ಮಾಡುವುದರಲ್ಲಿ, ನಾಯಿಯು ಮನೆಯೊಳಗೆ ಮೂತ್ರಮಾಡದಂತೆ ಇಲ್ಲವೆ ಪೀಠೋಪಕರಣಗಳನ್ನು ಹಾಳುಮಾಡದಂತೆ ತರಬೇತಿನೀಡುವುದು ಒಳಗೂಡಿದೆ. ಆದರೆ ಮುಖ್ಯ ಗುರಿಯು ಏನೆಂದರೆ, ಸಾರ್ವಜನಿಕ ಸ್ಥಳಗಳು ಹಾಗೂ ವಾಹನಗಳಿಗೆ ನಾಯಿಯು ಚಿರಪರಿಚಿತವಾಗುವಂತೆ ಮಾಡುವುದು, ಮತ್ತು ಮಕ್ಕಳು ಹಾಗೂ ಶಿಶುಗಳನ್ನು ಒಳಗೊಂಡು, ಎಲ್ಲ ವಯಸ್ಸಿನ ಜನರೊಂದಿಗೆ ಬೇರೆ ಬೇರೆ ರೀತಿಯ ಅನುಭವಗಳನ್ನು ಪಡೆದುಕೊಳ್ಳುವಂತೆ ಮಾಡುವುದೇ ಆಗಿದೆ. ಕಾಲಕ್ರಮೇಣ ಅದು ಯಾವ ಮನೆಯನ್ನು ಸೇರುತ್ತದೋ ಅಲ್ಲಿನ ಯಾವುದೇ ಪರಿಸ್ಥಿತಿಯ ಕೆಳಗೆ ಯೋಗ್ಯವಾದ ರೀತಿಯಲ್ಲಿ ವರ್ತಿಸುವಂತೆ ನಾಯಿಗೆ ತರಬೇತಿ ನೀಡುವುದೇ ಪ್ರಾಮುಖ್ಯವಾದ ಗುರಿಯಾಗಿದೆ.
ಅಷ್ಟುಮಾತ್ರವಲ್ಲ, ವಿಶೇಷ ಆವಶ್ಯಕತೆಗಳಿರುವ ಜನರಿಗೆ ಸಹಾಯ ಮಾಡಲಿಕ್ಕಾಗಿ ಬೇರೆ ಸಂಸ್ಥೆಗಳು ನಾಯಿಗಳನ್ನು ಉಪಯೋಗಿಸುತ್ತವೆ ಎಂಬುದು ನನಗೆ ಗೊತ್ತಾಯಿತು. ಕೆಲವೊಂದು ಆಜ್ಞೆಗಳನ್ನು ಪಾಲಿಸಲು ತರಬೇತಿ ನೀಡಲ್ಪಟ್ಟಿರುವ ಈ ನಾಯಿಗಳನ್ನು, ನಿರ್ದಿಷ್ಟ ದೃಶ್ಯಗಳು ಹಾಗೂ ವಾಸನೆಗಳಿಗೆ ಒಡ್ಡಲಾಗುತ್ತದೆ. ಸದಾ ಗಾಲಿಕುರ್ಚಿಯಲ್ಲೇ ಇರುವ ಸ್ತ್ರೀಯೊಬ್ಬಳನ್ನು ನೋಡಿಕೊಳ್ಳುವ ಒಂದು ನಾಯಿಯು, ಅವಳ ಟೆಲಿಫೋನ್ ಎತ್ತಲು ಹಾಗೂ ಪತ್ರಗಳನ್ನು ಪಡೆದುಕೊಳ್ಳಲು ಮತ್ತು ಸ್ಟ್ಯಾಂಪ್ಗಳನ್ನು ನಾಲಿಗೆಯಿಂದ ನೆಕ್ಕಿ ಪತ್ರಗಳಿಗೆ ಅಂಟಿಸಲು ಕಲಿತುಕೊಂಡಿದೆ! ಇನ್ನೊಂದು ನಾಯಿ 120 ಆಜ್ಞೆಗಳಿಗೆ ಪ್ರತಿಕ್ರಿಯಿಸುತ್ತದೆ, ಮತ್ತು ಸೂಪರ್ಮಾರ್ಕೆಟ್ನ ಕಪಾಟುಗಳಲ್ಲಿರುವ ಡಬ್ಬಗಳು ಹಾಗೂ ಪ್ಯಾಕೆಟ್ಗಳನ್ನು ತೆಗೆದುಕೊಡುತ್ತದೆ. ಅದರ ಅಶಕ್ತ ಒಡೆಯನು, ಲೇಸರ್ ಲೈಟ್ ಇರುವ ಒಂದು ಪಾಯಿಂಟರನ್ನು ಉಪಯೋಗಿಸಿ ತನಗೆ ಬೇಕಾಗಿರುವ ವಸ್ತುವನ್ನು ಗುರುತಿಸುತ್ತಾನೆ, ಮತ್ತು ಅವನ ನಾಯಿ ಆ ವಸ್ತುಗಳನ್ನು ಅವನಿಗೆ ತಂದುಕೊಡುತ್ತದೆ.
ಒಂದು ಸಂತೋಷಕರ ಸಹಭಾಗಿತ್ವ
“ಎಲ್ಲರೂ ಟ್ವಿಂಕೀಯ ಸೇವೆಯನ್ನು ಗಣ್ಯಮಾಡುತ್ತಾರೋ?” ಎಂದು ನಾನು ಕೇಳಿದೆ. “ಅಂಗಡಿಯ ಮಾಲಿಕನೊಬ್ಬನು ನನ್ನ ನಾಯಿಯನ್ನು ಅಂಗಡಿಯೊಳಗೆ ಬಿಡಲಿಲ್ಲ. ಅವನು ಕೆಲವು ಆಹಾರಪದಾರ್ಥಗಳನ್ನು ಇಟ್ಟುಕೊಂಡಿದ್ದರಿಂದಲೇ ಹಾಗೆ ಮಾಡಿರಬೇಕು, ಆದರೆ ನಿಜವಾಗಿಯೂ ಅವನ ನಡವಳಿಕೆ ವಿಚಿತ್ರವಾಗಿತ್ತು, ಏಕೆಂದರೆ ನನಗೆ ಟ್ವಿಂಕೀಯ ಅಗತ್ಯ ಏಕಿದೆ ಎಂಬುದನ್ನು ಅವನು ಅರ್ಥಮಾಡಿಕೊಳ್ಳಲಿಲ್ಲ.”
ಕೇಳಿಸಿಕೊಳ್ಳುವ ಒಂದು ನಾಯಿ ಮನೆಯಲ್ಲಿರುವುದರ ಮೌಲ್ಯವು ನನಗೆ ಈಗ ಅರ್ಥವಾಯಿತಾದರೂ, ನನ್ನ ಮನಸ್ಸಿನಲ್ಲಿ ಇನ್ನೂ ಒಂದು ಪ್ರಶ್ನೆಯಿತ್ತು. ಅನೇಕ ಜೊತೆ ಕ್ರೈಸ್ತರೊಂದಿಗೆ ಸಂತೋಷದಿಂದ ಸಹವಾಸಮಾಡುತ್ತಿರುವ ಡಾರತಿಗೆ ಟ್ವಿಂಕೀಯಿಂದ ಯಾವ ಪ್ರಯೋಜನವಿದೆ? “ಮಾತಾಡುತ್ತಿರುವ ವ್ಯಕ್ತಿಯ ತುಟಿಯ ಚಲನೆಗಳಿಂದ ನಾನು ಅವರ ಮಾತನ್ನು ಅರ್ಥಮಾಡಿಕೊಳ್ಳಬಲ್ಲೆ, ಮತ್ತು ಅವರೊಂದಿಗೆ ಸಂಭಾಷಿಸುವಂತೆ ನನ್ನ ಶ್ರವಣಸಾಧನವು ನನಗೆ ಸಹಾಯ ಮಾಡುತ್ತದೆ” ಎಂದು ಡಾರತಿ ವಿವರಿಸಿದರು. “ಜನರು ಟ್ವಿಂಕೀಯ ಹಳದಿ ಬಣ್ಣದ ರಕ್ಷಾಕವಚವನ್ನು ನೋಡಿದಾಗ, ತತ್ಕ್ಷಣವೇ ಅವರಿಗೆ ನಾನು ಕಿವುಡಿಯೆಂದು ಗೊತ್ತಾಗುತ್ತದೆ. ಆಗ ಅವರು ನೇರವಾಗಿ ಮತ್ತು ತಮ್ಮಿಂದಾದಷ್ಟು ಸ್ಪಷ್ಟವಾಗಿ ನನ್ನೊಂದಿಗೆ ಮಾತಾಡಲು ಪ್ರಯತ್ನಿಸುತ್ತಾರೆ. ಹೀಗೆ, ನನ್ನ ದೌರ್ಬಲ್ಯದ ಬಗ್ಗೆ ನಾನು ಅವರಿಗೆ ವಿವರಿಸಬೇಕಾದ ಅಗತ್ಯವಿರುವುದಿಲ್ಲ, ಮತ್ತು ಇದರಿಂದ ನನ್ನ ಜೀವನವು ಹೆಚ್ಚು ಸುಗಮವಾಗಿದೆ.”
ಅಧಿವೇಶನದ ಸೆಷನ್ಗಳು ಇನ್ನೇನು ಆರಂಭಗೊಳ್ಳಲಿಕ್ಕಿದ್ದವು, ಮತ್ತು ಮಧ್ಯಾಹ್ನದ ಕಾರ್ಯಕ್ರಮವು ಪ್ರಾರಂಭವಾಗುವ ಮುಂಚೆ ಟ್ವಿಂಕೀಯನ್ನು ವಾಕಿಂಗ್ಗೆ ಕರೆದೊಯ್ಯಬೇಕಿತ್ತು. ನಾನು ಅಲ್ಲಿಂದ ಹೊರಡುವುದಕ್ಕೆ ಮೊದಲು, ಟ್ವಿಂಕೀಯನ್ನು ಮುದ್ದಿಸಲಿಕ್ಕಾಗಿ ಕೆಳಗೆ ಬಾಗಿದೆ. ಟ್ವಿಂಕೀ ತನ್ನ ಹೊಳೆಯುವ ಕಣ್ಣುಗಳನ್ನು ತೆರೆದು, ಡಾರತಿಯ ಕಡೆಗೆ ನೋಡಿ ಬಾಲವನ್ನು ಅಲ್ಲಾಡಿಸಿತು. ಎಂತಹ ವಿಧೇಯ, ಉಪಯುಕ್ತ ಪುಟ್ಟ ಗೆಳತಿ—ಮತ್ತು ಅವರ ವಿಶ್ವಾಸದ ಸಂಬಂಧವು ಸಮಗ್ರವಾಗಿತ್ತು!
[ಪುಟ 26 ರಲ್ಲಿರುವ ಚಿತ್ರ]
ಅಧಿವೇಶನಗಳಲ್ಲಿ ಟ್ವಿಂಕೀಯ ಸಹಾಯವು ಅತ್ಯಮೂಲ್ಯ