ಏಣಿಗಳ ಉಪಯೋಗ—ಸುರಕ್ಷೆಗಾಗಿ ಅವುಗಳನ್ನು ನೀವು ಪರೀಕ್ಷಿಸುತ್ತೀರೊ?
ಐರ್ಲಂಡ್ನ ಎಚ್ಚರ! ಸುದ್ದಿಗಾರರಿಂದ
ತನ್ನ ಮನೆಯ ಹೊರಗಿನ ಲೈಟ್ ಬಲ್ಬನ್ನು ಪಾಲ್ ಬದಲಾಯಿಸಬೇಕಾಗಿತ್ತು. ಅಷ್ಟುಮಾತ್ರವಲ್ಲ, ಮಹಡಿಯ ಮೇಲಿನ ಕಿಟಕಿಗಳನ್ನು ಸಹ ಅವನು ಹೊರಗಿನಿಂದ ಸ್ವಚ್ಛಗೊಳಿಸಬೇಕಾಗಿತ್ತು. ಇದರ ಬಗ್ಗೆ ಅವನ ಪತ್ನಿಯು ಈಗಾಗಲೇ ಅನೇಕಬಾರಿ ಜ್ಞಾಪಿಸಿದ್ದಳು. ಆದರೆ ಪಾಲ್ ಈ ಕೆಲಸಗಳನ್ನು ಮುಂದೂಡುತ್ತಾ ಇದ್ದನು. ಏಕೆ? ಏಕೆಂದರೆ ಅವನು ಒಂದು ಏಣಿಯನ್ನು ಉಪಯೋಗಿಸಬೇಕಾಗಿತ್ತು.
ಅವನ ಭಯ ಸಹಜವಾದದ್ದಾಗಿತ್ತು. ಏಣಿಗಳ ಉಪಯೋಗದಿಂದ ಉಂಟಾಗುವ ಅಪಘಾತಗಳು, ಗಂಭೀರವಾದ ಮತ್ತು ಮಾರಕವಾದ ಗಾಯಗಳನ್ನು ಮಾಡಬಲ್ಲವು ಎಂಬುದು ಅವನಿಗೆ ಗೊತ್ತಿತ್ತು. ಕೆಲವೊಮ್ಮೆ ಇದು ಸಂಭವಿಸುವುದು, ಏಕೆಂದರೆ ಒಂದು ಏಣಿಯನ್ನು ಹೇಗೆ ಸರಿಯಾಗಿ ಉಪಯೋಗಿಸಬೇಕು ಎಂಬುದರ ಬಗ್ಗೆ ಕೆಲಸಗಾರನು ಸಾಕಷ್ಟು ಯೋಚಿಸಿರುವುದಿಲ್ಲ.
ಈ ಕೆಲಸಗಳಿಗೆ ಕೈಹಾಕುವುದಕ್ಕೆ ಮುಂಚೆ, ಏಣಿಗಳ ಕುರಿತು ಪಾಲ್ ಯಾವ ಅಂಶಗಳನ್ನು ಪರಿಗಣಿಸಬೇಕಾಗಿತ್ತು? ಕೆಲಸವನ್ನು ಹೆಚ್ಚು ಸುರಕ್ಷಿತವಾಗಿ ನಿರ್ವಹಿಸಲು ಅವನಿಗೆ ಸಹಾಯಮಾಡಿದಂತಹ ಹತ್ತು ಸಲಹೆಗಳು ಇಲ್ಲಿ ಕೊಡಲ್ಪಟ್ಟಿವೆ.
ಏಣಿಯು ಸುರಕ್ಷಿತವಾಗಿದೆಯೋ?
1 ಸರಿಯಾದ ಅಳತೆಯ ಏಣಿಯನ್ನು ಬಳಸಿರಿ. ಏಣಿಯು ತುಂಬ ಚಿಕ್ಕದಾಗಿರುವಲ್ಲಿ, ಮೇಲಕ್ಕೆ ಎಟುಕಿಸಿಕೊಳ್ಳಲು ನೀವು ಹೆಣಗಾಡಬೇಕಾಗಬಹುದು. ಏಣಿಯು ತುಂಬ ಉದ್ದವಾಗಿರುವಲ್ಲಿ, ನೀವು ಅದನ್ನು ಅಪಾಯಕರವಾದಂತಹ ಕೋನದಲ್ಲಿ ಇಡಬೇಕಾಗಬಹುದು. ಅಟ್ಟದ ಮೇಲೆ ಹೋಗಲಿಕ್ಕಾಗಿ ಕವಲು ಏಣಿ (ಮಡಚುವ ಏಣಿ)ಯನ್ನು ಉಪಯೋಗಿಸಬೇಡಿ. ನಿಮ್ಮ ಅಟ್ಟದಲ್ಲೇ ಖಾಯಂ ಆಗಿ ಜೋಡಿಸಸಾಧ್ಯವಿರುವ ಏಣಿಯನ್ನು, ಅಥವಾ ಒರಗಿಸಿಡಸಾಧ್ಯವಿರುವ ಏಣಿಯನ್ನು ಉಪಯೋಗಿಸಿರಿ.
2 ನಿಮ್ಮ ಏಣಿಯನ್ನು ಜಾಗ್ರತೆಯಿಂದ ಪರೀಕ್ಷಿಸಿರಿ. ಏಣಿಯು ಸದಾ ಮನೆಯ ಹೊರಗೆ ಇಡಲ್ಪಟ್ಟದ್ದಾಗಿದೆಯೋ? ಮರದ ಏಣಿಗಳು ನೀರಿನಲ್ಲಿ ನೆನೆದಾಗ ಹಿಗ್ಗುತ್ತವೆ ಮತ್ತು ಒಣಗಿದ್ದಾಗ ಕುಗ್ಗುತ್ತವೆ. ಕಾಲಕ್ರಮೇಣ, ಏಣಿಯ ಮೆಟ್ಟಲು (ಅಡ್ಡಪಟ್ಟಿ)ಗಳು ಸಡಿಲವಾಗಿ, ಏಣಿಯು ಸರಿಯಾಗಿ ನಿಲ್ಲದಂತೆ ಮಾಡುತ್ತವೆ. ಮರದ ಮೆಟ್ಟಲುಗಳಲ್ಲಿ ಸೀಳುಗಳೇನಾದರೂ ಉಂಟಾಗಿವೆಯೋ, ಅಥವಾ ಅವು ಲೊಡ್ಡಾಗುತ್ತಿರುವ ಹಾಗೆ ಕಾಣುತ್ತವೋ? ಕೆಲವೊಮ್ಮೆ, ಮರದ ಪ್ರತಿಯೊಂದು ಮೆಟ್ಟಲುಗಳ ಕೆಳಗೆ ಒಂದು ಲೋಹದ ಸರಳು ಇರುತ್ತದೆ. ಈ ಸರಳು ಸರಿಯಾದ ಸ್ಥಳದಲ್ಲಿದೆಯೋ ಮತ್ತು ಭದ್ರವಾಗಿ ಸಿಕ್ಕಿಸಲ್ಪಟ್ಟಿದೆಯೊ? ಏಣಿಯ ಕಂಬಗಳಿಗೆ ಈ ಲೋಹದ ಸರಳುಗಳನ್ನು ಭದ್ರಪಡಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿರುವ ಸ್ಕ್ರೂಗಳು ಹಾಗೂ ಮೊಳೆಗಳು ಬಿದ್ದುಹೋಗಿವೆಯೋ ಅಥವಾ ತುಕ್ಕುಹಿಡಿದಿವೆಯೊ? ಹೆಚ್ಚು ಎತ್ತರಕ್ಕೆ ಲಂಬಿಸಸಾಧ್ಯವಿರುವಂತಹ ಏಣಿಗಳಿಗೆ ರಾಟೆಗಳು ಮತ್ತು ಹಗ್ಗಗಳಿರುತ್ತವೆ. ರಾಟೆಗಳು ಸಲೀಸಾಗಿ ಕೆಲಸಮಾಡುತ್ತವೋ? ಹಗ್ಗಗಳು ಸವೆದುಹೋಗಿರುವ ಹಾಗೆ ಕಾಣುತ್ತವೋ, ಮತ್ತು ಅದು ಸಾಕಷ್ಟು ಉದ್ದವಿದೆಯೋ? ಎಂಬುದನ್ನು ನೋಡಿರಿ. ಹಾಗಿರುವಲ್ಲಿ, ಎಲ್ಲ ರಿಪೇರಿಯನ್ನು ಹಾಗೂ ಬದಲಾಯಿಸುವಿಕೆಗಳನ್ನು ಒಡನೆಯೇ ಮಾಡಿರಿ.
ಕೆಲವೊಮ್ಮೆ ನಮ್ಮ ಕಾಲುಜಾರದಂತೆ ಏಣಿಯ ಮೆಟ್ಟಲುಗಳ ಮೇಲೆ ಕೊರೆದ ತೋಡುಗಳಿರುತ್ತವೆ. ಈ ತೋಡುಗಳಲ್ಲಿ ಸಂಗ್ರಹವಾಗಿರಬಹುದಾದ ಯಾವುದೇ ಕಸವನ್ನು ತೆಗೆದುಹಾಕಲು ಮರೆಯಬೇಡಿ. ಎಲ್ಲ ಏಣಿಗಳಿಗೆ ತಳಭಾಗದಲ್ಲಿ ಜಾರದಂತೆ ತಡೆಯುವ ಒತ್ತಿಗೆ (ಆ್ಯಂಟಿಸ್ಲಿಪ್ ಪ್ಯಾಡ್) ಇರಬೇಕು. ಅಂತಹ ಪ್ಯಾಡ್ಗಳು ಇವೆಯೋ ಇಲ್ಲವೋ ಎಂಬುದನ್ನು ಮತ್ತು ಅವು ತುಂಬ ಸವೆದಿಲ್ಲ ಎಂಬುದನ್ನು ಪರೀಕ್ಷಿಸಿ ನೋಡಿರಿ.
3 ಏಣಿಗಳನ್ನು ಸುರಕ್ಷಿತವಾಗಿ ರವಾನಿಸಿರಿ. ಒಂದು ವಾಹನದ ಮೇಲೆ ಏಣಿಯನ್ನು ರವಾನಿಸುವಾಗ, ಅದನ್ನು ವಾಹನದ ಚೌಕಟ್ಟಿಗೆ ಗಟ್ಟಿಯಾಗಿ ಕಟ್ಟಿರಿ, ಅಥವಾ ಒಂದು ಟ್ರೇಲರ್ ಕಾರಿನಲ್ಲಿ ಅದನ್ನು ಎರಡು ಕಡೆಗಳಲ್ಲಾದರೂ ಭದ್ರವಾಗಿ ಕಟ್ಟಿರಿ. ಉದ್ದವಾಗಿರುವ ಒಂದು ಏಣಿಯು ವಾಹನದ ಹಿಂದೆ ತುಂಬ ದೂರದ ವರೆಗೆ ಚಾಚಿಕೊಂಡಿರಬಹುದು, ಆದುದರಿಂದ ಹಿಂದೆ ಬರುತ್ತಿರುವವರು ಅದನ್ನು ಸುಲಭವಾಗಿ ನೋಡಸಾಧ್ಯವಾಗುವಂತೆ ಅದರ ತುದಿಗೆ ಒಂದು ಎಚ್ಚರಿಸುವ ಬಾವುಟವನ್ನು ಕಟ್ಟಿರಿ.
ಉದ್ದವಾಗಿರುವ ಒಂದು ಏಣಿಯನ್ನು ಇಬ್ಬರು ವ್ಯಕ್ತಿಗಳು ಕೊಂಡೊಯ್ಯವುದು ತುಂಬ ಸುರಕ್ಷಿತ. ಆದರೆ ನೀವು ಒಬ್ಬರೇ ಅದನ್ನು ಕೊಂಡೊಯ್ಯಬೇಕಾಗಿರುವಲ್ಲಿ, ಮತ್ತು ನೀವು ಅದನ್ನು ಹೆಗಲಮೇಲೆ ಸಮತಲವಾಗಿ ಕೊಂಡೊಯ್ಯಲು ಇಷ್ಟಪಡುವಲ್ಲಿ, ಏಣಿಯ ಮಧ್ಯಭಾಗದಲ್ಲಿ ನಿಮ್ಮ ಕೈಯನ್ನು ಹಾಕಿ ಅದನ್ನು ಹೆಗಲ ಮೇಲೆ ಇರಿಸಿಕೊಂಡು, ಸಮತೂಕವನ್ನು ಕಾಪಾಡಿಕೊಳ್ಳಲಿಕ್ಕಾಗಿ ಇನ್ನೊಂದು ಕೈಯಿಂದ ಅದನ್ನು ಹಿಡಿಯಿರಿ. ಏಣಿಯು ಯಾರಿಗೂ ಬಡಿಯದಂತೆ, ಅದರ ಮುಂಭಾಗವನ್ನು ತಲೆಯ ಎತ್ತರಕ್ಕಿಂತಲೂ ಸ್ವಲ್ಪ ಮೇಲಕ್ಕೆ ಹಿಡಿಯಿರಿ. ಆದರೂ, ನಿಮ್ಮ ಮುಂದೆ ಏಣಿಯು ಎಷ್ಟು ಉದ್ದವಿದೆಯೋ ಅದು ಹಿಂದೆಯೂ ಅಷ್ಟೇ ಉದ್ದವಿದೆ ಎಂಬುದನ್ನು ಮಾತ್ರ ಮರೆಯಬೇಡಿ! ಹಾಸ್ಯನಾಟಕಗಳು, ಜನರಿಗೆ ಏಣಿಯು ಬಡಿದಾಗ ಅದು ತುಂಬ ವಿನೋದಕರವಾಗಿ ಕಾಣುವಂತೆ ಮಾಡುತ್ತವೆ. ನೈಜ ಜಗತ್ತಿನಲ್ಲಾದರೋ, ಇದು ಖಂಡಿತವಾಗಿಯೂ ವಿನೋದಕರವಾಗಿರುವುದಿಲ್ಲ—ಅದರಲ್ಲೂ ವಿಶೇಷವಾಗಿ ನಿಮಗೆ ಏಟು ತಗುಲಿರುವುದಾದರೆ.
ನೀವು ಏಣಿಯನ್ನು ನಿಲ್ಲಿಸಿಕೊಂಡು ಕೊಂಡೊಯ್ಯುತ್ತಿರುವಾಗ, ನಿಮ್ಮ ದೇಹದ ಮೇಲ್ಭಾಗದ ಮೇಲೆ ಹೆಚ್ಚು ಭಾರವನ್ನು ಹಾಕಿರಿ. ಅಂದರೆ ಒಂದು ಕೈಯಲ್ಲಿ ಅದನ್ನು ಎತ್ತಿಹಿಡಿಯಿರಿ, ಮತ್ತು ಇನ್ನೊಂದು ಕೈಯನ್ನು ಹೆಗಲಿಗಿಂತ ಸ್ವಲ್ಪ ಮೇಲಕ್ಕೆ ಎತ್ತಿ ಏಣಿಯನ್ನು ಸಮತೂಕವಾಗಿರಿಸಿ. ತಲೆಯ ಮೇಲಿರುವ ವೈರ್ಗಳು, ಲೈಟ್ ಹೋಲ್ಡರ್ಗಳು, ಮತ್ತು ಬೋರ್ಡ್ಗಳ ವಿಷಯದಲ್ಲಿ ಜಾಗ್ರತೆ!
4 ಏಣಿಯನ್ನು ಸರಿಯಾಗಿ ನಿಲ್ಲಿಸಿರಿ. ಸುರಕ್ಷೆಗಾಗಿ, ಏಣಿಯನ್ನು ಓರೆಯಾಗಿಡಬಾರದು ಮತ್ತು ನೆಲದಿಂದ ಸುಮಾರು 75 ಡಿಗ್ರಿಯ ಕೋನದಲ್ಲಿ ಅದನ್ನು ಇರಿಸಬೇಕು.
5 ಏಣಿಯ ಮೇಲೆ ಹಾಗೂ ಕೆಳಭಾಗದಲ್ಲಿ ಆಧಾರವನ್ನು ಕೊಡಿರಿ. ಏಣಿಯ ಮೇಲಿನ ತುದಿಯನ್ನು ಎಲ್ಲಿಗೆ ಒರಗಿಸುತ್ತೀರಿ ಎಂಬ ವಿಷಯದಲ್ಲಿ ಜಾಗ್ರತೆ ವಹಿಸಿರಿ. ಏಣಿಯು ಯಾವುದರ ಮೇಲೆ ಒರಗಿಸಲ್ಪಡುತ್ತದೋ ಅದರ ಮೇಲ್ಮೈ ಗಟ್ಟಿಯಾಗಿದೆ ಮತ್ತು ಜಾರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಏಣಿಯನ್ನು ಎಂದೂ ಗಾಜು ಅಥವಾ ಪ್ಲ್ಯಾಸ್ಟಿಕ್ನ ಮೇಲೆ ಒರಗಿಸಬೇಡಿರಿ. ಸಾಧ್ಯವಿರುವಲ್ಲಿ, ಅದನ್ನು ಯಾವುದಕ್ಕಾದರೂ ಗಟ್ಟಿಯಾಗಿ ಕಟ್ಟಿರಿ; ಆದರೆ ಗೋಡೆಯ ಮೇಲೆ ಏಣಿಯು ಎಲ್ಲಿ ತಾಗುತ್ತದೋ ಅಲ್ಲಿಂದ ಏಣಿಯ ತುದಿ ಭಾಗವು ಒಂದು ಮೀಟರ್ ಎತ್ತರದಲ್ಲಿದ್ದರೆ ಒಳ್ಳೇದು.
ಏಣಿಯನ್ನು ಕಟ್ಟಲಿಕ್ಕಾಗಿ ನೀವು ಹತ್ತುವಾಗ, ಅದರ ಮೇಲಿನ ತುದಿಭಾಗವನ್ನು ಕಟ್ಟುವ ವಿಷಯದಲ್ಲಿ ವಿಶೇಷವಾಗಿ ಜಾಗ್ರತೆ ವಹಿಸಿರಿ. ಏಣಿಯನ್ನು ಕಟ್ಟಲಿಕ್ಕಾಗಿ ಹತ್ತುವುದು ಮತ್ತು ಕಟ್ಟನ್ನು ಬಿಚ್ಚಿ ಕೆಳಗಿಳಿಯುವುದು ಸುರಕ್ಷಿತವಾಗಿರುವುದಿಲ್ಲ. ಇದನ್ನು ಸುರಕ್ಷಿತಗೊಳಿಸಲಿಕ್ಕಾಗಿ, ಏಣಿಯ ಕೆಳಭಾಗವನ್ನು ಒಬ್ಬರು ಗಟ್ಟಿಯಾಗಿ ಹಿಡಿದುಕೊಳ್ಳುವಂತೆ ನೋಡಿಕೊಳ್ಳಿ. ಆದರೂ, ಇಂತಹ ಕ್ರಮವು, ಏಣಿಯು ಸುಮಾರು ಐದು ಮೀಟರ್ಗಳಿಗಿಂತ ಹೆಚ್ಚು ಉದ್ದವಿಲ್ಲದಿರುವಾಗ ಮಾತ್ರ ಸಹಾಯಕಾರಿಯಾಗಿರುತ್ತದೆ.
ಕಟ್ಟಡದ ಸ್ಥಳದಿಂದ ಏಣಿ ಇಡುವ ಸ್ಥಳದ ನಡುವೆ ಇಳಿಜಾರು ಇರುವಲ್ಲಿ, ಏಣಿಯ ತಳಭಾಗದಲ್ಲಿ ಭಾರವಾದ ಯಾವುದಾದರೂ ವಸ್ತುವನ್ನು ಇಡಿರಿ ಅಥವಾ ಏಣಿಯ ಕೆಳಗಿನ ಮೆಟ್ಟಲನ್ನು ಒಂದು ಭದ್ರವಾದ ವಸ್ತುವಿಗೆ ಕಟ್ಟಿರಿ. ಒಂದುವೇಳೆ ನೆಲವು ಉಬ್ಬುತಗ್ಗುಗಳುಳ್ಳದ್ದಾಗಿ ಇರುವುದಾದರೂ, ತುಂಬ ಗಟ್ಟಿಯಾಗಿರುವಲ್ಲಿ, ಸಮತಟ್ಟಾದ ಬೆಣೆಯಾಕಾರದ ವಸ್ತುವನ್ನು ಉಪಯೋಗಿಸಿರಿ. ನೆಲವು ತುಂಬ ಮೃದುವಾಗಿರುವಲ್ಲಿ, ತಳಭಾಗವನ್ನು ಗಟ್ಟಿಗೊಳಿಸಲು ಮರದ ಹಲಗೆಯನ್ನೋ ಅಥವಾ ಅದರಂತಹ ಇನ್ನಾವುದೇ ವಸ್ತುವನ್ನೋ ಉಪಯೋಗಿಸಿರಿ.
ನೀವು ಮಡಚುವ ಏಣಿಯನ್ನು ಉಪಯೋಗಿಸುವಲ್ಲಿ, ಎಲ್ಲ ನಾಲ್ಕು ಕಾಲುಗಳು ನೆಲದ ಮೇಲೆ ಭದ್ರವಾಗಿ ಊರಲ್ಪಟ್ಟಿವೆ, ಅದರ ಎರಡೂ ಭಾಗಗಳು ಸರಿಯಾಗಿ ಇಡಲ್ಪಟ್ಟಿವೆ ಮತ್ತು ಸುರಕ್ಷತೆಗಾಗಿರುವ ಕೊಕ್ಕೆಗಳು ಸರಿಯಾದ ಸ್ಥಳದಲ್ಲಿ ಲಾಕ್ಮಾಡಲ್ಪಟ್ಟಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ.
ನೀವು ಸುರಕ್ಷಿತರಾಗಿದ್ದೀರೊ?
6 ನಿಮ್ಮ ಪಾದರಕ್ಷೆಗಳನ್ನು ಪರೀಕ್ಷಿಸಿರಿ. ನೀವು ಒಂದು ಏಣಿಯನ್ನು ಹತ್ತುವುದಕ್ಕೆ ಮೊದಲು, ನಿಮ್ಮ ಪಾದರಕ್ಷೆಗಳ ತಳಭಾಗವು ಒದ್ದೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಕೆಸರಿನಂತಹ ಏನಾದರೂ ಅದಕ್ಕೆ ಅಂಟಿಕೊಂಡಿರುವಲ್ಲಿ ಅದನ್ನು ತೆಗೆಯಿರಿ, ಇಲ್ಲದಿದ್ದರೆ ಅದು ನಿಮ್ಮನ್ನು ಜಾರುವಂತೆ ಮಾಡಬಹುದು.
7 ವಸ್ತುಗಳನ್ನು ಜಾಗರೂಕತೆಯಿಂದ ಮೇಲೆ ಕೊಂಡೊಯ್ಯಿರಿ. ಸಾಧ್ಯವಿರುವಲ್ಲಿ, ನೀವು ಎರಡೂ ಕೈಗಳನ್ನು ಉಪಯೋಗಿಸಿ ಏಣಿಯನ್ನು ಹತ್ತಲಿಕ್ಕಾಗಿ, ನಿಮ್ಮ ಬೆಲ್ಟ್ಗೆ ಸಿಕ್ಕಿಸಲ್ಪಟ್ಟಿರುವ ಹೋಲ್ಡರ್ನಲ್ಲಿ ಸಾಮಾನುಗಳನ್ನು ಕೊಂಡೊಯ್ಯಿರಿ. ಕಷ್ಟಕರವಾದ ವಸ್ತುಗಳನ್ನು ಮೇಲೆ ಕೊಂಡೊಯ್ಯುವಾಗ, ಅವುಗಳನ್ನು ಮೇಲೆ ಒಯ್ಯಲು ಸಾಧ್ಯವಿರುವ ಯಾವುದೇ ಬದಲಿ ವಿಧಾನಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. ಒಂದುವೇಳೆ ನೀವು ಏಣಿಯನ್ನೇ ಉಪಯೋಗಿಸಬೇಕಾಗಿರುವಲ್ಲಿ, ಒಂದು ಕೈಯನ್ನು ಯಾವಾಗಲೂ ಏಣಿಯ ಮೇಲೆ ಇಟ್ಟಿರಿ ಮತ್ತು ಹತ್ತುವಾಗ ಹಾಗೂ ಇಳಿಯುವಾಗ ಅದನ್ನು ಹಿಡಿದುಕೊಂಡೇ ಇರಿ. ನಿಧಾನವಾಗಿ ಹಾಗೂ ಒಂದೊಂದೇ ಮೆಟ್ಟಲನ್ನು ಕ್ರಮಬದ್ಧವಾಗಿ ಹತ್ತಿರಿ, ಅವಸರಪಡಬೇಡಿ.
ವಿದ್ಯುಚ್ಛಕ್ತಿಯ ಸಹಾಯದಿಂದ ಕೆಲಸಮಾಡುವ ಉಪಕರಣಗಳನ್ನು ನೀವು ಉಪಯೋಗಿಸುವಲ್ಲಿ, ಅವುಗಳನ್ನು ಆಪರೇಟ್ಮಾಡಲು ಎರಡೂ ಕೈಗಳನ್ನು ಬಳಸಬೇಡಿರಿ. ಉದಾಹರಣೆಗೆ, ಒಂದು ಡ್ರಿಲ್ ಯಂತ್ರವು ಇದ್ದಕ್ಕಿದ್ದಂತೆ ಕೆಲಸಮಾಡುವುದನ್ನು ನಿಲ್ಲಿಸಿಬಿಡಬಹುದು ಅಥವಾ ಅದು ಕೆಳಗೆ ಬೀಳಬಹುದು, ಇದರಿಂದಾಗಿ ನೀವು ಸಹ ಆಯತಪ್ಪಿ ಬೀಳಬಹುದು. ಅಂತಹ ಉಪಕರಣಗಳನ್ನು ಆನ್ಮಾಡಿ ಇಡಬೇಡಿ; ಏಕೆಂದರೆ ಅದು ಇನ್ನೂ ಕೆಲಸಮಾಡುತ್ತಿರುವಾಗಲೇ ಕೆಳಗೆ ಬಿದ್ದುಬಿಡಬಹುದು.
8 ಇತರರಿಗೆ ಪರಿಗಣನೆ ತೋರಿಸಿರಿ. ನೀವು ಒಂದು ಸಾರ್ವಜನಿಕ ಸ್ಥಳದಲ್ಲಿ ಕೆಲಸಮಾಡುತ್ತಿರುವಲ್ಲಿ, ಏಣಿಯು ಸುಲಭವಾಗಿ ಎಲ್ಲರಿಗೂ ಕಾಣಿಸುವಂತೆ ಇಡಿರಿ, ಮತ್ತು ಸಾಧ್ಯವಿರುವಲ್ಲಿ, ಅದರ ನಾಲ್ಕೂ ಕಡೆಗಳಲ್ಲಿ ಹಗ್ಗದಿಂದ ಬೇಲಿಯನ್ನು ಹಾಕಿರಿ. ಏಣಿಯನ್ನು ನೀವು ಒಂದು ಮೂಲೆಗೆ ಸಾಗಿಸಬೇಕಾಗಿರುವಲ್ಲಿ, ಬೇರೆಯವರು ಇದನ್ನು ನಿರೀಕ್ಷಿಸುತ್ತಿರುವುದಿಲ್ಲ ಎಂಬುದು ನಿಮಗೆ ಗೊತ್ತಿರಲಿ. ಸ್ನೇಹಪರ ರೀತಿಯಲ್ಲಿ ಅವರಿಗೆ ಕೂಗಿ ಹೇಳಿರಿ, ಮತ್ತು ದಾರಿಯಲ್ಲಿ ಯಾವುದೇ ವಸ್ತುವು ಅಡ್ಡವಿಲ್ಲ ಎಂಬುದನ್ನು ಪರೀಕ್ಷಿಸಿರಿ.
ಏಣಿಯ ಮೇಲಿರುವಾಗ ನಿಮ್ಮ ಬಳಿ ಉಪಕರಣಗಳಿರುವಲ್ಲಿ, ತುಂಬ ಎತ್ತರದಿಂದ ಒಂದು ಚಿಕ್ಕ ಸ್ಕ್ರೂಡ್ರೈವರ್ ಕೆಳಗೆ ಬೀಳುವುದಾದರೂ ಅದು ಗಾಯವನ್ನು ಉಂಟುಮಾಡಬಲ್ಲದು ಎಂಬುದನ್ನು ಮರೆಯಬೇಡಿ. ಯಾವುದೋ ಕಾರಣದಿಂದ ನೀವು ಅಲ್ಲಿಂದ ಹೋಗಬೇಕಾಗಿರುವಲ್ಲಿ ಮತ್ತು ನೀವು ಏಣಿಯನ್ನು ಭದ್ರವಾಗಿ ಕಟ್ಟಲು ಅಸಮರ್ಥರಾಗಿರುವಲ್ಲಿ, ಏಣಿಯ ಬಳಿಯೇ ಯಾರನ್ನಾದರೂ ನಿಲ್ಲಿಸಿರಿ ಅಥವಾ ನೀವು ಹಿಂದಿರುಗಿ ಬರುವ ತನಕ ಏಣಿಯನ್ನು ಕೆಳಗೆ ಮಲಗಿಸಿರಿ. ಏಣಿಯನ್ನು ಹಾಗೇ ಬಿಟ್ಟುಹೋಗಬೇಡಿ.
9 ನಿಮ್ಮ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿರಿ. ಏಣಿಯನ್ನು ಸಮತೂಕದಿಂದ ಮತ್ತು ತಾಳಬದ್ಧವಾಗಿ ಹತ್ತಬೇಕಾಗಿರುವುದರಿಂದ, ನೀವು ಅಸ್ವಸ್ಥರಾಗಿರುವಲ್ಲಿ ಅಥವಾ ನಿಮಗೆ ಪಿತ್ತೋದ್ರೇಕವಿರುವಲ್ಲಿ ಇಲ್ಲವೆ ನಿಮಗೆ ತಲೆಸುತ್ತು ಬರುತ್ತಿರುವಲ್ಲಿ ಮೇಲೆ ಹತ್ತಬೇಡಿರಿ.
10 ಸುರಕ್ಷಿತವಾಗಿ ಮೇಲೆ ಹತ್ತಿರಿ. ಎಲ್ಲ ಸಮಯಗಳಲ್ಲಿ ಸುರಕ್ಷತಾ ಪ್ರಜ್ಞೆಯುಳ್ಳವರಾಗಿರಿ. ಏಕಕಾಲದಲ್ಲಿ ಇಬ್ಬರು ಅಥವಾ ಮೂವರನ್ನು ಒಂದೇ ಏಣಿಯ ಮೇಲೆ ಹತ್ತಲು ಎಂದೂ ಬಿಡಬೇಡಿ. ಜೋರಾಗಿ, ಅಂದರೆ ರಭಸವಾಗಿ ಗಾಳಿಯು ಬೀಸುವಾಗ ಏಣಿಯನ್ನು ಹತ್ತಬೇಡಿ. ಮಡಚುವ ಏಣಿಯ ಮೊದಲ ಮೆಟ್ಟಲಿನ ಮೇಲೆ ಅಥವಾ ಉದ್ದವಾದ ಏಣಿಯ ಮೇಲಿನಿಂದ ನಾಲ್ಕನೆಯ ಮೆಟ್ಟಲಿನ ಮೇಲೆ ಎಂದೂ ನಿಲ್ಲಬೇಡಿ. ಲಂಬಿಸಸಾಧ್ಯವಿರುವಂತಹ ಏಣಿಗಳನ್ನು ತುಂಬ ಮೇಲಕ್ಕೆ ಎತ್ತಲು ಹೋಗಬೇಡಿ; ಕೆಳಗಿನಿಂದ ಕಡಿಮೆಪಕ್ಷ ಮೂರು ಮೆಟ್ಟಲುಗಳು ಉಳಿಯುವಂತೆ ಬಿಡಿ. ತುಂಬ ಮೇಲಕ್ಕೆ ಎಟುಕಿಸಿಕೊಳ್ಳಲು ಪ್ರಯತ್ನಿಸಬೇಡಿ. ಒಂದು ಏಣಿಯ ಮೇಲೆ ನಿಂತುಕೊಂಡಿರುವಾಗ ನೀವು ತುಂಬ ಮುಂದಕ್ಕೆ ಬಗ್ಗುವಲ್ಲಿ, ಸುಲಭವಾಗಿ ಆಯತಪ್ಪಿ ಕೆಳಗೆ ಬೀಳಬಲ್ಲಿರಿ. ಅಪಾಯವನ್ನು ಕೈಬೀಸಿ ಕರೆಯುವುದಕ್ಕೆ ಬದಲಿಗೆ, ಏಣಿಯನ್ನು ಮುಂದಕ್ಕೆ ಕೊಂಡೊಯ್ಯಿರಿ—ಇದಕ್ಕೆ ಬಹಳ ಸಮಯವು ತಗಲುವುದಾದರೂ ಕೂಡ. ಮೇಲೆ ಹತ್ತುತ್ತಿರುವಾಗ, ನೇರವಾಗಿ ಮೇಲೆ ನೋಡಿರಿ.
ನೀವು ಎಷ್ಟೇ ಮುಂಜಾಗ್ರತೆಗಳನ್ನು ತೆಗೆದುಕೊಳ್ಳುವುದಾದರೂ, ಒಂದು ಏಣಿಯನ್ನು ಉಪಯೋಗಿಸುವಾಗ ಅಪಾಯಗಳು ಇದ್ದೇ ಇರುತ್ತವೆ. ಆದರೆ ಈ ಸಲಹೆಗಳು ಅಂತಹ ಅಪಾಯಗಳನ್ನು ಕಡಿಮೆಮಾಡಲು ನಿಮಗೆ ಸಹಾಯ ಮಾಡಸಾಧ್ಯವಿದೆ. ಇವೇ ಸಲಹೆಗಳು ಪಾಲ್ನಿಗೂ ಸಹಾಯ ಮಾಡಿದವು. ಇವುಗಳನ್ನು ಅನುಸರಿಸುವ ಮೂಲಕ, ಅವನು ತನ್ನ ಮನೆಯ ಹೊರಗಿನ ಲೈಟ್ ಹೋಲ್ಡರ್ಗೆ ಸುರಕ್ಷಿತವಾಗಿ ಹೊಸ ಬಲ್ಬನ್ನು ಸಿಕ್ಕಿಸಲು ಶಕ್ತನಾದನು. ಮತ್ತು ಕಿಟಕಿಗಳನ್ನು ಸ್ವಚ್ಛಗೊಳಿಸುವುದರ ಕುರಿತಾಗಿ ಏನು? ಅದನ್ನು ಅವನು ಇನ್ನೊಮ್ಮೆ ಯಾವಾಗಲಾದರೂ . . . ಮಾಡಬಹುದು!
[ಪುಟ 26,27 ರಲ್ಲಿರುವಚಿತ್ರ]
1 ಸರಿಯಾದ ಅಳತೆಯ ಏಣಿಯನ್ನು ಬಳಸಿರಿ
2 ನಿಮ್ಮ ಏಣಿಯನ್ನು ಜಾಗ್ರತೆಯಿಂದ ಪರೀಕ್ಷಿಸಿರಿ
3 ಏಣಿಗಳನ್ನು ಸುರಕ್ಷಿತವಾಗಿ ರವಾನಿಸಿರಿ
4 ಏಣಿಯನ್ನು ಸರಿಯಾಗಿ ನಿಲ್ಲಿಸಿರಿ
5 ಏಣಿಯ ಮೇಲೆ ಹಾಗೂ ಕೆಳಭಾಗದಲ್ಲಿ ಆಧಾರವನ್ನು ಕೊಡಿರಿ
6 ನಿಮ್ಮ ಪಾದರಕ್ಷೆಗಳನ್ನು ಪರೀಕ್ಷಿಸಿರಿ
7 ವಸ್ತುಗಳನ್ನು ಜಾಗರೂಕತೆಯಿಂದ ಮೇಲೆ ಕೊಂಡೊಯ್ಯಿರಿ
8 ಇತರರಿಗೆ ಪರಿಗಣನೆ ತೋರಿಸಿರಿ
9 ನಿಮ್ಮ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿರಿ
10 ಸುರಕ್ಷಿತವಾಗಿ ಮೇಲೆ ಹತ್ತಿರಿ