ಕಡಲಿನ ಸ್ವಾದಿಷ್ಟಕರ ಕ್ರೀಡಾಪಟುಗಳು
ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ
ಬಾನಲ್ಲಿನ ಬೇಟೆಗಾರ ಗಿಡುಗ ಪಕ್ಷಿಗಳಂತೆ, ಕಡಲುಗಳಲ್ಲಿ ಈ ಸೂಪರ್ ಮೀನುಗಳಿವೆ. ವೇಗವಾಗಿ ಈಜುವ ಮತ್ತು ಥಳಥಳನೆ ಹೊಳೆಯುವ ಈ ಮೀನುಗಳು, ಬಿರುಸಾದ ಬಾಣಗಳಂತೆ ಆಳವಾದ ನೀರುಗಳನ್ನು ಸೀಳಿಕೊಂಡು ಹೋಗುತ್ತವೆ. ಅವು ಸದಾ ಚಲಿಸುತ್ತಾ, ಸದಾ ಹೊಂಚುಹಾಕುತ್ತ ಇರುತ್ತವೆ. ಥನ್ನಸ್ ಥೈನ್ನಸ್ ಎಂಬ ಅವುಗಳ ವೈಜ್ಞಾನಿಕ ಹೆಸರು, “ನುಗ್ಗು” ಎಂಬರ್ಥವುಳ್ಳ ಪದದಿಂದ ಬರುತ್ತದೆ. ಇವು ಒಂದು ಪ್ರಸಿದ್ಧ ಬಳಗದ ಭಾಗವಾಗಿದ್ದು, ಇವುಗಳ ಸಂಬಂಧಿಕರಲ್ಲಿ, ಮಾರ್ಲಿನ್ ಮೀನುಗಳು, ಸ್ಪಿಯರ್ಫಿಶ್ ಮತ್ತು ಕತ್ತಿಮೀನು ಒಳಗೂಡಿರುತ್ತವೆ. ಹೌದು, ನೀವು ಈಗಾಗಲೇ ಊಹಿಸಿರದಿದ್ದರೆ, ಈ ಜಲ ಕ್ರೀಡಾಪಟುಗಳು, ಟೂನ ಮೀನಿನ ಬಳಗದಲ್ಲಿವೆ. ಇದರಲ್ಲಿ 13 ಜಾತಿಯ ಮೀನುಗಳಿವೆ.
ಈ ಕ್ರೀಡಾಪಟು ಬಳಗದ ತಾರೆಯರು, ಬ್ಲೂಫಿನ್ ಮೀನುಗಳಾಗಿವೆ. ದಕ್ಷಿಣದ ಬ್ಲೂಫಿನ್ ಮೀನು ಭೂಮಧ್ಯರೇಖೆಯ ದಕ್ಷಿಣದಲ್ಲಿದ್ದು, ಕಡಿಮೆಪಕ್ಷ 200 ಸೆಂಟಿಮೀಟರ್ ಉದ್ದ ಬೆಳೆಯುತ್ತದೆ ಮತ್ತು ಸುಮಾರು 200 ಕೆ.ಜಿ. ತೂಕವುಳ್ಳದ್ದಾಗಿರುತ್ತದೆ. ಆದರೆ ಈ ಬಳಗದ ಭಾರಿ ತೂಕದ ಮೀನುಗಳು, ದೈತ್ಯಾಕಾರದ ಉತ್ತರದ ಬ್ಲೂಫಿನ್ ಮೀನುಗಳಾಗಿವೆ. ಅವುಗಳ ಹೆಸರು ಸೂಚಿಸುವಂತೆ, ಅವುಗಳನ್ನು ಉತ್ತರ ಗೋಳಾರ್ಧದಲ್ಲಿ ಕಂಡುಕೊಳ್ಳಬಹುದು. ಅವು 270 ಸೆಂಟಿಮೀಟರ್ ಅಥವಾ ಅದಕ್ಕಿಂತಲೂ ಹೆಚ್ಚು ಉದ್ದವಾಗಿದ್ದು (ಅತಿಯಾಗಿ ಮೀನನ್ನು ಹಿಡಿಯುತ್ತಿರುವುದರಿಂದ ಈ ದಿನಗಳಲ್ಲಿ ತುಂಬ ಅಪರೂಪ), ಅವುಗಳ ತೂಕವು 700 ಕೆಜಿಗಿಂತಲೂ ಹೆಚ್ಚು ಇರಬಲ್ಲದು. ಇದರಲ್ಲಿ 75 ಪ್ರತಿಶತ ಶಕ್ತಿಯುತವಾದ ಮಾಂಸಖಂಡವಿರುತ್ತದೆ. ಆದರೆ ತಮ್ಮ ದೊಡ್ಡ ಗಾತ್ರದಿಂದಾಗಿ ಬ್ಲೂಫಿನ್ ಮೀನುಗಳ ವೇಗವು ತಗ್ಗುವುದಿಲ್ಲ. ವಾಸ್ತವವಾಗಿ ಈ ದಾಂಡಿಗ ಮೀನುಗಳು, ಟೂನ ಬಳಗದ ಕ್ಷಿಪಣಿಗಳು. ಸ್ವಲ್ಪ ದೂರದ ದೌಡುಗಳಲ್ಲಿ ಅವು ಪ್ರತಿ ತಾಸಿಗೆ ಸುಮಾರು 70-80 ಕಿಲೊಮೀಟರ್ ವೇಗವನ್ನು ತಲಪಬಲ್ಲವು.
ಅತಿವೇಗದ ಅಲ್ಪದೂರದ ಮತ್ತು ಮ್ಯಾರಥನ್ ಓಟಕ್ಕಾಗಿ ನಿರ್ಮಿತ
ಬ್ಲೂಫಿನ್ ಮೀನುಗಳು ಇಷ್ಟು ವೇಗವಾಗಿ ಈಜುವುದಾದರೂ ಹೇಗೆ? ನ್ಯಾಷನಲ್ ಜಿಯೊಗ್ರಾಫಿಕ್ ಪತ್ರಿಕೆಯು ವಿವರಿಸುವುದು: “ದೇಹ ತೂಕದಲ್ಲಿ ಮುಕ್ಕಾಲಾಂಶ ಮಾಂಸಖಂಡಗಳು, ನೀರಿನಲ್ಲಿ ಈಜಲಿಕ್ಕಾಗಿ ಸೊಗಸಾಗಿ ವಿನ್ಯಾಸಿಸಲ್ಪಟ್ಟಿರುವ ದೇಹಾಕಾರ, ಜೆಟ್ ವಿಮಾನದಲ್ಲಿರುವಂತಹ ರೀತಿಯ ವಾಯುಸಂಚಾರ, ಉಷ್ಣ ವಿನಿಮಯಕಗಳು, ಮತ್ತು ಇತರ ವಿಶೇಷ ಪ್ರಕ್ರಿಯೆಗಳೊಂದಿಗೆ ಬ್ಲೂಫಿನ್ ಮೀನು ವೇಗದಿಂದ ಈಜಲಿಕ್ಕಾಗಿ ನಿರ್ಮಿಸಲ್ಪಟ್ಟಿದೆ.” ಬ್ಲೂಫಿನ್ ಮೀನಿನ ಶಕ್ತಿಶಾಲಿ ಹೃದಯವು, ಬೇರೆ ಯಾವುದೇ ಮೀನಿನ ಹೃದಯಕ್ಕಿಂತಲೂ ಹಲವಾರು ಪಟ್ಟು ದೊಡ್ಡದ್ದಾಗಿರುತ್ತದೆ ಮತ್ತು ಅದು ಮೀನಿನ ಹೃದಯದಂತಿರದೆ ಒಂದು ಸಸ್ತನಿಯ ಹೃದಯದಂತಿರುತ್ತದೆ. ಅಷ್ಟುಮಾತ್ರವಲ್ಲದೆ ಅದರ ಹೃದಯವು ಸಾಮಾನ್ಯವಾದ ಶೀತರಕ್ತದ ಮೀನಿನ ಹೃದಯಕ್ಕೆ ಅಸದೃಶವಾಗಿ, ತುಂಬ ಬುದ್ಧಿವಂತಿಕೆಯಿಂದ ವಿನ್ಯಾಸಿಸಲ್ಪಟ್ಟಿರುವ ಅದರ ರಕ್ತ ಪರಿಚಲನಾ ವ್ಯವಸ್ಥೆಯೊಳಗೆ ಬಹುಮಟ್ಟಿಗೆ ಬಿಸಿ ರಕ್ತವನ್ನು ಪಂಪ್ ಮಾಡುತ್ತದೆ. ಬ್ಲೂಫಿನ್ ಮೀನಿನ ರಕ್ತದ ತಾಪಮಾನವು 10 ಡಿಗ್ರಿ ಸೆಲ್ಸಿಯಸ್ಗೆ ಏರುವಾಗ, ಅದರ ಮಾಂಸಖಂಡದ ಶಕ್ತಿಯು ಸುಮಾರು ಮೂರು ಪಟ್ಟು ಅಧಿಕವಾಗಿ, ಅದು ಮೀನು, ಸ್ಕ್ವಿಡ್, ಮತ್ತು ಚಿಪ್ಪುಜೀವಿಗಳಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವಾಗ ಅದು ಒಂದು ಭಯಂಕರ ಭಕ್ಷಕವಾಗುತ್ತದೆ.
ರುಚಿಕರವಾದ ಆಹಾರವು—ಉದಾಹರಣೆಗೆ ಬಂಗಡೆ—ಬ್ಲೂಫಿನ್ ಮೀನಿನ ಕಣ್ಣಿಗೆ ಬಿದ್ದಾಗ, ಅದರ ಮಚ್ಚಿನಾಕಾರದ ಬಾಲವು, ಛಂಗನೆ ಆಕ್ರಮಣಮಾಡಲಿಕ್ಕಾಗಿ ಬೇಕಾಗಿರುವ ವೇಗವನ್ನು ಅದಕ್ಕೆ ಕೊಡುತ್ತದೆ. ಎದೆಯ ಮೇಲಿನ ಮತ್ತು ಹಿಂಬದಿಯ ಈಜುರೆಕ್ಕೆಗಳು, ಆ ಮೀನಿನ ಲೋಹದಂತೆ ಗಟ್ಟಿಯಾಗಿರುವ ದೇಹದಲ್ಲಿರುವ ವಿಶೇಷವಾದ ಕಂಡಿಯೊಳಗೆ ಸೇರಿಕೊಂಡು, ನೀರಿನ ಪ್ರತಿರೋಧಶಕ್ತಿಯನ್ನು ಕಡಿಮೆಗೊಳಿಸುತ್ತವೆ. ಬಂಗಡೆಯು ಎಷ್ಟೇ ವೇಗದಿಂದ ಚಲಿಸಲಿ, ಅದು ಪಾರಾಗುವ ಸಂಭವ ತುಂಬ ಕಡಿಮೆಯಾಗಿದೆ ಯಾಕಂದರೆ, ಬ್ಲೂಫಿನ್ ಮೀನಿಗೆ ದ್ವಿನೇತ್ರೀಯ ದೃಷ್ಟಿಶಕ್ತಿ, ತುಂಬ ಸೂಕ್ಷ್ಮವಾದ ಶ್ರವಣಶಕ್ತಿ, ಮತ್ತು ನೀರನ್ನು ಪರೀಕ್ಷೆ ಮಾಡಿ ನೋಡಲು ಬೇಕಾದ ರಾಸಾಯನಿಕ ಶೋಧಕಗಳೂ ಇವೆ. ಬ್ಲೂಫಿನ್ ಮೀನು ಇನ್ನೇನು ಆಕ್ರಮಿಸಲಿರುವಾಗ, ಅದರ ಈಜುರೆಕ್ಕೆಗಳು ಪುನಃ ಒಮ್ಮೆ ಹೊರಬಂದು, ಈ ಕೊನೆಯ ಕ್ಷಣಗಳಲ್ಲಿ ಅದರ ಚಲನೆಗಳನ್ನು ನಿಷ್ಕೃಷ್ಟವಾಗಿ ನಿಯಂತ್ರಿಸುತ್ತವೆ. ಅನಂತರ ಅದರ ಕಿವಿರು ಮುಚ್ಚಳಗಳು ಮತ್ತು ಬಾಯಿ ತೆರೆದುಕೊಳ್ಳುತ್ತವೆ ಮತ್ತು ನಿಮಿಷಮಾತ್ರದಲ್ಲಿ ಬಂಗಡೆಯು ಮಾಯವಾಗುತ್ತದೆ. ಅದನ್ನು ಬಾಯೊಳಗೆ ಎಳೆದುಕೊಂಡು, ಗುಳುಂ ಎಂದು ನುಂಗಿಬಿಡಲಾಗಿದೆ!
ಟೂನ ಮೀನುಗಳಿಗೆ ಶಕ್ತಿಶಾಲಿ ಹೃದಯ, ಬಹುಮಟ್ಟಿಗೆ ಬಿಸಿ ರಕ್ತ, ಮತ್ತು ಅಸಾಮಾನ್ಯವಾದ ದೊಡ್ಡ ಕಿವಿರುಗಳಿರುವುದರಿಂದ, ಅವು ಅಂತಹ ಅಲ್ಪದೂರದ ಓಟಗಳ ನಂತರ, ಬೇರೆ ಯಾವುದೇ ಮೀನಿಗಿಂತಲೂ ಹತ್ತು ಪಟ್ಟು ಬೇಗನೆ ಚೇತರಿಸಿಕೊಳ್ಳುತ್ತವೆ. ಆದರೆ ಅವು, ‘ತಮ್ಮ ಉಸಿರು ಎಳೆದುಕೊಳ್ಳುತ್ತಿರುವಾಗ’ ಮತ್ತು ಮಲಗುತ್ತಿರುವಾಗಲೂ ಈಜಾಡುತ್ತಿರುತ್ತವೆ, ಯಾಕಂದರೆ ಅವು ನೀರಿಗಿಂತಲೂ ಭಾರವಾಗಿರುತ್ತವೆ ಮತ್ತು ಬೇರೆ ಮೀನುಗಳು ಪೂರ್ಣವಾಗಿ ನಿಂತುಕೊಳ್ಳುವಂತೆ ಸಾಧ್ಯಮಾಡುವ ಕಿವಿರು ಪಂಪುಗಳು ಇವುಗಳಿಗಿಲ್ಲ. ಹೀಗಿರುವುದರಿಂದ, ಶಾರ್ಕ್ ಮೀನುಗಳಂತೆ ಟೂನ ಮೀನುಗಳು, ತಮ್ಮ ಬಾಯಿಯನ್ನು ಅರೆ ತೆರೆದುಕೊಂಡು ಈಜಾಡುತ್ತವೆ. ಒಂದು ಟೂನ ಮೀನಿಗೆ ಸಮಾಧಿಲೇಖವನ್ನು ಬರೆಯುವಲ್ಲಿ, ಇಷ್ಟನ್ನೇ ಬರೆಯಬಹುದು: “ಜನನದಿಂದ ಮರಣದ ವರೆಗೆ ಮ್ಯಾರಥನ್ ಓಟಗಾರನಂತೆ ಓಡುತ್ತಾ ಇತ್ತು. ಆದರೆ ಮಧ್ಯೆಮಧ್ಯೆ ವೇಗಗತಿಯಲ್ಲಿ ಓಡುತ್ತಿತ್ತು.”
ಟೂನ ಬಳಗದ ಅತಿ ಸುಂದರ ಸದಸ್ಯರು, ದೈತ್ಯಾಕಾರದ ಯೆಲ್ಲೊಫಿನ್ (ಹಳದಿ ಈಜುರೆಕ್ಕೆ) ಟೂನ ಮೀನುಗಳು. ಯೆಲ್ಲೊಫಿನ್ ಮೀನುಗಳು ಸುಮಾರು 2 ಮೀಟರ್ಗಳಷ್ಟು ಉದ್ದ ಬೆಳೆಯುತ್ತವೆ ಮತ್ತು ಅವುಗಳಿಗೆ ಹಳದಿಬಣ್ಣದ ಪಟ್ಟೆಗಳು, ಹಳದಿಬಣ್ಣದ ಪುಟ್ಟ ರೆಕ್ಕೆಗಳು, ಮತ್ತು ಅಸಾಮಾನ್ಯವಾಗಿ ಉದ್ದವಾಗಿರುವ, ಹಿಂದಕ್ಕೆ ಚಾಚಿರುವ ಈಜುರೆಕ್ಕೆಗಳಿರುತ್ತವೆ. ಒಂದು ಅಲೆಯನ್ನು ಸೀಳಿಕೊಂಡು ಹೋಗುತ್ತಿರುವಾಗ ಈ ಉಜ್ವಲವಾದ ಮೀನು, ವಿಶೇಷವಾಗಿ ರಾತ್ರಿ ಸಮಯದಲ್ಲಿ, ಬೆಂಕಿಯನ್ನು ಉಗುಳುತ್ತಾ ಹೋಗುವ ಬಿರುಸಾದ ಬಾಣಗಳಂತೆ ಮಿನುಗುತ್ತವೆ. ಹವಾಯಿ ದೇಶದವರು, ಅವುಗಳನ್ನು ಆಹೀ, ಅಂದರೆ “ಬೆಂಕಿ” ಎಂದು ಕರೆಯುತ್ತಾರೆ.
ಗಂಭೀರವಾದ ಸಮಸ್ಯೆಯಲ್ಲಿ ಸಿಕ್ಕಿಬಿದ್ದಿರುವ ಕ್ರೀಡಾಪಟುಗಳು
ಟೂನ ಮೀನು ಅದರ ಪುಷ್ಕಳವಾದ ಕೆಂಪು ಬಣ್ಣದ, ಜಿಡ್ಡಾದ ಮಾಂಸದಿಂದಾಗಿ ತುಂಬ ಸ್ವಾದಿಷ್ಟವಾಗಿರುತ್ತದೆ. ಸಾಸಮೀ ಮತ್ತು ಸೂಶೀಯಂತಹ ಜಪಾನಿ ರಸಭಕ್ಷ್ಯಗಳಿಂದಾಗಿ, ಬ್ಲೂಫಿನ್ ಮೀನುಗಳು ಜಪಾನಿ ಮಾರುಕಟ್ಟೆಯಲ್ಲಿ ತುಂಬ ಬೇಡಿಕೆಯುಳ್ಳ ಮತ್ತು ದುಬಾರಿಯಾಗಿರುವ ಆಹಾರವಾಗಿವೆ. ಸೂಶೀಯನ್ನು ತಯಾರಿಸಿ ಮಾರುವ ಬಾರ್ಗಳ ಗ್ರಾಹಕರು, ಟೂನ ಮೀನಿನ ಚಿಕ್ಕ ಚಿಕ್ಕ ತುಂಡುಗಳಿಗಾಗಿ ತುಂಬ ಹಣವನ್ನು ಕೊಡುತ್ತಾರೆ. ಒಂದು ಹರಾಜಿನಲ್ಲಿ, ಗ್ರಾಹಕರು ಕೇವಲ ಒಂದು ಬ್ಲೂಫಿನ್ ಮೀನಿಗಾಗಿ ಬೆಲೆಯನ್ನು ಕೂಗಿ ಹೇಳುತ್ತಿರುವುದನ್ನು ನೀವು ಕೇಳಿಸಿಕೊಳ್ಳುವಲ್ಲಿ, ಅವರು ಒಂದು ಹೊಸ ಕಾರನ್ನು ಖರೀದಿಸಲು ಬೆಲೆಯನ್ನು ಹೇಳುತ್ತಿದ್ದಾರೆಂದು ನೀವು ನೆನಸಬಹುದು. ಸುಮಾರು 4 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ಬೆಲೆಗಳು ಸರ್ವಸಾಮಾನ್ಯವಾಗಿರುತ್ತದೆ. ಒಮ್ಮೆ, 324 ಕೆಜಿ ತೂಕದ ಒಂದು ಬ್ಲೂಫಿನ್ ಮೀನನ್ನು ಸುಮಾರು 27 ಲಕ್ಷ ರೂಪಾಯಿಗೆ ಮಾರಲಾಯಿತು! ಒಬ್ಬ ಮತ್ಸ್ಯ ಸಂರಕ್ಷಕನು ಹೇಳಿದ್ದು: “ಅದು ಪೋರ್ಷ್ ಕಾರ್ನಷ್ಟೇ ದೊಡ್ಡದು, ವೇಗವುಳ್ಳದ್ದು ಮತ್ತು ಬೆಲೆಯುಳ್ಳದ್ದು.”
ಟೂನ ಮೀನಿಗಾಗಿರುವ ಬೇಡಿಕೆಯಿಂದಾಗಿ, ಆ ಮೀನುಗಳ ಸಂಖ್ಯೆಯು ತೀಕ್ಷ್ಣವಾಗಿ ಕಡಿಮೆಯಾಗುತ್ತಾ ಇವೆ. ಅವುಗಳನ್ನು “ಮಿತಿಮೀರಿ ಹಿಡಿಯಲಾಗಿದೆ, ಅತಿರೇಕವಾಗಿ ಬಳಸಲಾಗಿದೆ, [ಮತ್ತು] ನಾಳೆಯೆಂಬುದೇ ಇಲ್ಲವೆಂಬಂತೆ ಹಣವನ್ನು ಮಾಡಲಿಕ್ಕಾಗಿ ಪೋಲುಮಾಡಲಾಗುತ್ತಿದೆ,” ಎಂದು ಸಾಲ್ಟ್ವಾಟರ್ ಗೇಮ್ಫಿಶಿಂಗ್ ಎಂಬ ಪುಸ್ತಕವು ಹೇಳುತ್ತದೆ. ವಿಮಾನದಿಂದ ಮಾಡಲ್ಪಡುವ ನಿಗಾವಣೆಯೊಂದಿಗೆ, ಆಧುನಿಕ ಕೈಗಾರಿಕಾ ಹಡಗುಗಳು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದ್ದು ದೊಡ್ಡ ದೊಡ್ಡ ಪ್ರಮಾಣಗಳಲ್ಲಿ ಮೀನುಗಳನ್ನು ಹಿಡಿಯುತ್ತವೆ. ಉದಾಹರಣೆಗಾಗಿ ಪರ್ಸ್ ಸೇನರ್ ಎಂದು ಕರೆಯಲ್ಪಡುವ ಒಂದು ಹಡಗು, ಟೂನ ಮೀನಿನ ಒಂದು ಗುಂಪನ್ನು ಪತ್ತೆಹಚ್ಚಿದೊಡನೆ, ಅದು ಒಂದು ಸಣ್ಣ ಹಗುರ ದೋಣಿಯನ್ನು ಕೆಳಗಿಳಿಸುತ್ತದೆ. ಇದು, ಮೀನು ತಪ್ಪಿಸಿಕೊಂಡುಹೋಗದಂತೆ, ಬಲೆಯ ತೆರೆಯನ್ನು, ಅಥವಾ ಬಲೆಚೀಲವನ್ನು (ಪರ್ಸ್ಸೇನ್) ಮೀನುಗಳ ಸುತ್ತಲೂ ಹಾಕಿ ಎಳೆಯುತ್ತದೆ. ಇನ್ನೊಂದು ಕಡೆ ಲಾಂಗ್ಲೈನರ್ ಹಡಗುಗಳು, ಸುಮಾರು 130 ಕಿಲೊಮೀಟರ್ಗಳಷ್ಟು ಉದ್ದವಿರಬಹುದಾದ ಒಂದು ಗಾಳದ ಹಗ್ಗವನ್ನು ಎಳೆದುಕೊಂಡು ಹೋಗುತ್ತವೆ. ಈ ದೊಡ್ಡ ಹಗ್ಗದಲ್ಲಿ 2,200 ಚಿಕ್ಕ ಹಗ್ಗಗಳಿದ್ದು, ಅವುಗಳು ಆಹಾರ ಸಿಕ್ಕಿಸಿರುವ ಕೊಕ್ಕೆಗಳಿಂದ ತುಂಬಿರುತ್ತವೆ. ಟೂನ ಮೀನುಗಳಿಗೆ ಎಂತಹ ದುಃಸ್ವಪ್ನ! ದೊಡ್ಡ ಬ್ಲೂಫಿನ್ ಮೀನುಗಳಿಂದಾಗಿ ತುಂಬ ಹಣ ಸಿಗುವುದರಿಂದ ದೋಣಿಗಳು ಮತ್ತು ಮೀನುಗಳು ಎಲ್ಲಿವೆಯೆಂದು ಪತ್ತೆಹಚ್ಚುವ ವಿಮಾನಗಳು “ಕೆಲವೇ ಬ್ಲೂಫಿನ್ ಮೀನುಗಳಿಗೋಸ್ಕರ ಅನೇಕ ವಾರಗಳ ವರೆಗೆ ಬೇಟೆಯಾಡಬಹುದು” ಎಂದು ವರ್ಲ್ಡ್ ವೈಲ್ಡ್ಲೈಫ್ ಫಂಡ್ ಸಂಸ್ಥೆಯು ಹೇಳುತ್ತದೆ.
ಕೆಲವು ದೇಶಗಳು, ತಮ್ಮ ಪ್ರಾದೇಶಿಕ ಜಲಪ್ರಾಂಗಣದಲ್ಲಿ ಎಷ್ಟು ಮೀನುಗಳನ್ನು ಹಿಡಿಯಬಹುದೆಂಬುದಕ್ಕೆ ಮಿತಿಯನ್ನಿಟ್ಟಿದ್ದಾರೆ. ಆದರೆ ಟೂನದಂತಹ ಕಡಲು ಮೀನುಗಳ ಹಿಡಿಯುವಿಕೆಯ ಮೇಲೆ ಹೇಗೆ ನಿಗಾವಣೆಯನ್ನಿಡಬಹುದು? (ಉತ್ತರದ ಒಂದು ಬ್ಲೂಫಿನ್ ಮೀನಿಗೆ ಲೋಹಪಟ್ಟಿಯನ್ನು ಬಿಗಿದು, ಜಪಾನಿನ ಹತ್ತಿರ ಕಡಲಿನಲ್ಲಿ ಬಿಡುಗಡೆಮಾಡಲಾಯಿತು, ಆದರೆ ಅದನ್ನು ತದನಂತರ ಸುಮಾರು 11,000 ಕಿಲೊಮೀಟರ್ ದೂರದಲ್ಲಿರುವ ಮೆಕ್ಸಿಕೊ ಕರಾವಳಿಯಲ್ಲಿ ಅದನ್ನು ಪುನಃ ಹಿಡಿಯಲಾಯಿತು!) ಈ ವರೆಗೆ ಸಿಕ್ಕಿರುವ ಉತ್ತರವೇನೆಂದರೆ, ಇದು ಅಸಾಧ್ಯವಾದ ಕೆಲಸ. ವಿಶ್ವ ಸಂಸ್ಥೆಯಲ್ಲಿರುವ ಸಂಘಗಳು ಮೀನುಗಳ ನಿಯಂತ್ರಿತ ಬೆಳವಣಿಗೆ ಮತ್ತು ಹಿಡಿಯುವಿಕೆಯನ್ನು ಪ್ರವರ್ಧಿಸಲು ಪ್ರಯತ್ನಿಸುತ್ತಿವೆಯಾದರೂ, ಅವುಗಳ ವಿರುದ್ಧ ಶಕ್ತಿಶಾಲಿ ಸ್ವ-ಹಿತಾಸಕ್ತರು ಎದುರು ನಿಂತಿದ್ದಾರೆ. ಕೆಲವು ದೇಶಗಳು, ಎಷ್ಟು ಮೀನುಗಳನ್ನು ಹಿಡಿಯಲಾಗುತ್ತದೆಂಬುದರ ಮೇಲೆ ನಿಗಾವನ್ನು ಇಡಲು ಪ್ರಯತ್ನಿಸಿದಾಗ, ಅದರಿಂದಾಗಿ ಹಿಂಸಾತ್ಮಕ ಘಟನೆಗಳು ಸಂಭವಿಸಿವೆ.
ಬೆಸ್ತರು, ಈಗಾಗಲೇ ಕಡಿಮೆಯಾಗಿರುವ ಮೀನುಗಳನ್ನು ಸ್ವಪ್ರಯೋಜನಕ್ಕಾಗಿ ಬಳಸುತ್ತಾ ಮುಂದುವರಿಯುವ ಮೂಲಕ ಕಡಲಿನ ಉತ್ಪನ್ನವನ್ನು ಮತ್ತು ತಮ್ಮ ಸ್ವಂತ ಭವಿಷ್ಯತ್ತಿನ ಜೀವನೋಪಾಯವನ್ನು ಏಕೆ ಅಪಾಯಕ್ಕೊಡ್ಡುತ್ತಿದ್ದಾರೆಂದು ನೀವು ಕುತೂಹಲಪಡಬಹುದು. ನ್ಯಾಷನಲ್ ಜಿಯೊಗ್ರಾಫಿಕ್ ಎಂಬ ಪುಸ್ತಕವು ಹೇಳುವುದು: “[ಮೀನಿನ ಸಂಗ್ರಹದಲ್ಲಿನ] ಅಂತಹ ಇಳಿತಗಳಿಂದಾಗಿ ಸಾಮಾನ್ಯ ಬೆಸ್ತನಾಗಲಿ, ಔದ್ಯೋಗಿಕ ಬೆಸ್ತನಾಗಲಿ, ಸ್ವಯಂ ಆಗಿ ಮೀನನ್ನು ಸಂರಕ್ಷಿಸಲು ಸಾಧ್ಯವಿಲ್ಲ, ಯಾಕಂದರೆ ಹಾಗೆ ಮಾಡುವುದರಿಂದ ಅವರಿಗೆ ಯಾವುದೇ ಲಾಭವಿಲ್ಲ. ಹಾಗೆ ಮಾಡಿದರೆ, ನೀತಿ ನಿಷ್ಠೆಗಳಿಲ್ಲದ ವ್ಯಕ್ತಿಗೆ ಆ ಮೀನುಗಳನ್ನು ಒಪ್ಪಿಸಿದಂತಾಗುತ್ತದೆ ಅಷ್ಟೇ. ಅದಕ್ಕೆ ಬದಲು, ಎಲ್ಲರೂ ಇನ್ನೂ ಹೆಚ್ಚು ಮೀನನ್ನು ಹಿಡಿಯಲು ಪ್ರಯತ್ನಿಸುತ್ತಾರೆ.”
ಲೋಹಪಟ್ಟಿ ಬಿಗಿಯುವುದು ಮತ್ತು ಸಾಕಣೆಯಿಂದಾಗಿ ಟೂನ ಮೀನು ಉಳಿಯುವುದೊ?
ದಕ್ಷಿಣದ ಬ್ಲೂಫಿನ್ ಮೀನನ್ನು ತುಂಬ ಸಂಶೋಧನೆಗೆ ಗುರಿಪಡಿಸಲಾಗಿದೆ. ಈ ಸಂಶೋಧನೆಯ ಒಂದು ಭಾಗದಲ್ಲಿ, ಟೂನ ಮೀನುಗಳ ಅಭ್ಯಾಸಗಳು ಮತ್ತು ಆರೋಗ್ಯದ ಕುರಿತಾಗಿ ಮಾಹಿತಿಯನ್ನು ಕೊಡುವ ಜಟಿಲವಾದ ಎಲೆಕ್ಟ್ರಾನಿಕ್ ಲೋಹಪಟ್ಟಿಗಳ ಬಳಕೆಯು ಸೇರಿರುತ್ತದೆ. ಈ ಮಾಹಿತಿಯು, ಎಷ್ಟು ಮೀನುಗಳನ್ನು ಹಿಡಿಯಬಹುದೆಂಬುದನ್ನು ನಿಯಂತ್ರಿಸಲು ಸಹಾಯಮಾಡುವುದು.
ಅದೇ ಸಮಯದಲ್ಲಿ ಮೀನು ಸಾಕಣೆಯು ಅನೇಕ ದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಇದರಲ್ಲಿ ಟೂನ ಮೀನಿನ ಸಾಕಣೆಯೂ ಒಳಗೂಡಿದೆ. ಸಂತಾನೋತ್ಪತಿಯ ಸಂಬಂಧದಲ್ಲಿ, ಹೆಣ್ಣು ಬ್ಲೂಫಿನ್ ಮೀನುಗಳು, ಮೀನುಸಾಕಣೆ ಮಾಡುವವನಿಗೆ ಬಹಳಷ್ಟನ್ನು ನೀಡುತ್ತವೆ—ಮೊಟ್ಟೆಯಿಡುವ ಕಾಲದಲ್ಲಿ ಅವು 1 ಲಕ್ಷ 50 ಕೋಟಿ ಮೊಟ್ಟೆಗಳನ್ನಿಡುತ್ತವೆ! ಮೀನು ಸಾಕಣೆಯು ಸಫಲವಾಗುವಲ್ಲಿ, ಕಡಲುಗಳಲ್ಲಿ ಮುಕ್ತವಾಗಿ ಈಜಾಡುವ ಅಲ್ಪ ಸಂಖ್ಯೆಯ ಟೂನ ಮೀನುಗಳ ಮೇಲೆ ಬೀಳುವ ಒತ್ತಡವು ಕಡಿಮೆ ಆಗಬಹುದು. ಇಲ್ಲದಿದ್ದಲ್ಲಿ, ಟೂನ ಮತ್ತು ವಿಶೇಷವಾಗಿ ಆ ಬಳಗದ ಸೂಪರ್ ತಾರೆಯರಾದ, ಕಣ್ಣಿಗೂ ನಾಲಿಗೆಗೂ ಹಿಡಿಸುವ ಬ್ಲೂಫಿನ್ಗಳಂತಹ ಅದ್ಭುತವಾದ ಜಲ ಕ್ರೀಡಾಪಟುಗಳು ನಿರ್ಮೂಲವಾಗುವುದು ಎಂತಹ ಒಂದು ದೊಡ್ಡ ದುರಂತವಾಗಿರುವುದು!
[ಪುಟ 18,19 ರಲ್ಲಿರುವಚಿತ್ರಗಳು]
ಯೆಲ್ಲೊಫಿನ್ ಟೂನ
[ಕೃಪೆ]
Innerspace Visions
[ಪುಟ 31 ರಲ್ಲಿರುವ ಚಿತ್ರ]
ಬ್ಲೂಫಿನ್ ಟೂನ
[ಕೃಪೆ]
Innerspace Visions