ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಹಾಡು
“ಶಾಲೆಯಲ್ಲಿದ್ದಾಗ ನಾನು, ‘ತನ್ನ ಮಹಿಮೆಯಲ್ಲಿ ಆಸನಾರೂಢನಾಗಿರುವ ಮಹಾ ಯೆಹೋವನು’ ಎಂಬ ಪದಗಳೊಂದಿಗೆ ಸ್ತೋತ್ರಗೀತೆಯನ್ನು ಹಾಡುತ್ತಿದ್ದೆ. ‘ಈ ಯೆಹೋವನು ಯಾರು?’ ಎಂದು ನಾನು ಅನೇಕವೇಳೆ ಕುತೂಹಲಪಡುತ್ತಿದ್ದೆ.”
ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಗ್ವೆನ್ ಗೂಚ್ರವರ ಈ ಹೇಳಿಕೆಯು, ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟಿದ್ದ ಅವರ ಜೀವನ ಕಥೆಯಲ್ಲಿತ್ತು.a ಇದು ಕಡಿಮೆ ಪಕ್ಷ ಒಬ್ಬ ವಾಚಕರ ಮನವನ್ನಾದರೂ ಮುಟ್ಟಿತು. ಅಮೆರಿಕದ ವಾಷಿಂಗ್ಟನ್ನಲ್ಲಿರುವ ಸಿಆ್ಯಟಲ್ನ ವಿರ ಎಂಬ ಮಹಿಳೆಯು ಜ್ಞಾಪಿಸಿಕೊಳ್ಳುವುದು: “ಪ್ರೌಢ ಶಾಲೆಯಲ್ಲಿ ನನಗೂ ಇದೇ ರೀತಿಯ ಅನುಭವವಾಯಿತು.”
ಒಂದು ನಿರ್ದಿಷ್ಟ ಗೀತೆಯನ್ನು ಕೇಳಿದ ನಂತರ, ಗ್ವೆನ್ರಂತೆಯೇ ವಿರ ಸಹ ಈ ಯೆಹೋವನು ಯಾರಾಗಿರಬಹುದೆಂಬುದರ ಕುರಿತು ತುಂಬ ಕುತೂಹಲಪಟ್ಟರು. 1949ರಲ್ಲಿ ಅವರ ಸಹೋದರನು ಪ್ರಥಮ ಬಾರಿ ಯೆಹೋವನ ಕುರಿತಾಗಿ ತಿಳಿಸಿದಾಗ ಅವರ ಈ ಕುತೂಹಲವು ತಣಿಸಲ್ಪಟ್ಟಿತು. ಅದು ಬೈಬಲಿನಲ್ಲಿ ಕೊಡಲ್ಪಟ್ಟಿರುವ ದೇವರ ವೈಯಕ್ತಿಕ ಹೆಸರಾಗಿದೆಯೆಂದು ಅವನು ಹೇಳಿದ್ದನು.
ವಿರ ಈಗ ಸುಮಾರು ಐವತ್ತು ವರ್ಷಗಳಿಂದ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದಾರೆ. ಆದರೆ ಪ್ರೌಢ ಶಾಲೆಯಲ್ಲಿದ್ದಾಗ ತಾವು ಕಲಿತಿದ್ದ ಆ ದೇವರ ಸ್ತುತಿಗೀತೆಯನ್ನು ಅವರು ಮರೆತುಬಿಡಲಿಲ್ಲ. “ಆ ಗೀತೆಯು ಎಲ್ಲಿಂದ ಬಂತೆಂಬುದನ್ನು ನಾನು ಎಷ್ಟೋ ವರ್ಷಗಳಿಂದ ಪತ್ತೆಹಚ್ಚಲು ಪ್ರಯತ್ನಿಸಿದೆ” ಅನ್ನುತ್ತಾರವರು. ಕೊನೆಗೆ, ಒಂದು ಸಂಗೀತ ಅಂಗಡಿಯ ಸಹಾಯದಿಂದ ಅವರು ಅದನ್ನು ಕಂಡುಹಿಡಿದರು. ಆ ಗೀತೆಯು, ಫ್ರಾಂಟ್ಸ್ ಶೂಬರ್ಟ್ರವರ 1825ರ ಸಂಗೀತಕೃತಿಯಿಂದ ತೆಗೆಯಲ್ಪಟ್ಟಿತ್ತು. ಆ ಸಂಗೀತದೊಂದಿಗೆ ಜೊತೆಗೂಡಿರುವ ಪದಗಳು ಖಂಡಿತವಾಗಿಯೂ ಯೆಹೋವನನ್ನು ಸ್ತುತಿಸುತ್ತವೆ. ಉದಾಹರಣೆಗಾಗಿ ಆ ಗೀತೆಯ ಕೆಲವೊಂದು ಸಾಲುಗಳು ಹೀಗಿವೆ:
“ಪ್ರಭುವಾದ ಯೆಹೋವ ಮಹೋನ್ನತನು! ಭೂಮ್ಯಾಕಾಶ ಘೋಷಿಸುತೆ ಆತನ ಅದ್ಭುತಕರ ಶಕ್ತಿಯನು. . . . ಪ್ರಚಂಡ, ರಭಸದ ಬಿರುಗಾಳಿಯಲಿ, ಹೊಳೆಯ ಅಬ್ಬರಿಸುವ ಕರೆಯ ಗರ್ಜನೆಯಲಿ . . . ವನ, ಕಾಡುಗಳ ಮರ್ಮರ ಧ್ವನಿಯಲಿ ಕೇಳುತ್ತೀರಿ ನೀವದನು, ಹೊಂಬಣ್ಣದ ಜೋಳವು ತಲೆಯಾಡಿಸುತ್ತಿರುವಾಗ, ಸುಗಂಧದ ಹೂವುಗಳ ಕಾಂತಿಮಯ ಸಾಲಿನಲಿ, ನೀಲಿ ಬಾನಿನಲ್ಲಿ ತುಂಬಿರುವ ತಾರೆಗಳಲ್ಲಿ ನೋಡುತ್ತೀರಿ ನೀವದನು . . . ಆತನ ಗುಡುಗುಗಳು ಹೊರಡಿಸುತ್ತವೆ ಭಯಗೊಳಿಸುವ ಧ್ವನಿಗಳನು, ಆತನ ಮಿಂಚುಗಳ ಜ್ವಾಲೆಗಳು ಓಡಾಡುತ್ತವೆ ಬೆಳಗಿಸುತ್ತ ಆಕಾಶವನು. ಆದರೆ ಇವೆಲ್ಲವುಗಳಿಗಿಂತ ಹೆಚ್ಚಾಗಿ, ಬಡಿಯುತ್ತಿರುವ ನಿಮ್ಮ ಹೃದಯವು ಈಗಲೂ ಘೋಷಿಸುತೆ ಯೆಹೋವನ ಶಕ್ತಿಯನು . . . ನಿತ್ಯನಾದ ದೇವಪ್ರಭುವನು ಉನ್ನತದಿ ನೋಡಿ, ನಿರೀಕ್ಷಿಸಿ ಆತನ ಕೃಪಾದಯೆಯನು . . . ಪ್ರಭುವಾದ ಯೆಹೋವ ಮಹೋನ್ನತನು!”
ವಿರ ಗಮನಿಸುವುದು: “ಹತ್ತೊಂಬತ್ತನೆಯ ಶತಮಾನದಲ್ಲಿ ದೇವರ ಹೆಸರನ್ನು ತಿಳಿದು, ಆತನನ್ನು ಸ್ತುತಿಸುವವರೂ ಇದ್ದರೆಂಬುದನ್ನು ಜನರಿಗೆ ತೋರಿಸಲು ನಾನು ಕೆಲವೊಮ್ಮೆ ಈ ಹಾಡಿನ ಪದಗಳನ್ನು ಉಪಯೋಗಿಸಿದ್ದೇನೆ.” ಸತ್ಯ ಸಂಗತಿಯೇನೆಂದರೆ, ಪ್ರಾಚೀನ ಸಮಯದಿಂದಲೂ ನಂಬಿಕೆಯುಳ್ಳ ಸ್ತ್ರೀಪುರುಷರು ಯೆಹೋವನನ್ನು ಹಾಡುಗಳೊಂದಿಗೆ ಸ್ತುತಿಸುವಂತೆ ಪ್ರಚೋದಿಸಲ್ಪಟ್ಟಿದ್ದಾರೆ. ಇದು ಸದಾಕಾಲಕ್ಕೆ ಮುಂದುವರಿಯುವ ಒಂದು ರೂಢಿಯಾಗಿದೆ, ಯಾಕೆಂದರೆ ಭೂಮ್ಯಾಕಾಶಗಳ ಸೃಷ್ಟಿಕರ್ತನನ್ನು ಸ್ತುತಿಸಲಿಕ್ಕಾಗಿರುವ ಕಾರಣಗಳಿಗೆ ಅಂತ್ಯವೇ ಇಲ್ಲ.
[ಪಾದಟಿಪ್ಪಣಿಗಳು]
a ಮಾರ್ಚ್ 1, 1998ರ ಕಾವಲಿನಬುರುಜು ಪತ್ರಿಕೆಯನ್ನು ನೋಡಿರಿ.
[ಪುಟ 13ರಲ್ಲಿರುವ ಚಿತ್ರ]
ವಿರ