ಆಧುನಿಕ ಔಷಧಶಾಸ್ತ್ರ—ಅದು ಎಷ್ಟು ಎತ್ತರಕ್ಕೆ ಎಟುಕಬಲ್ಲದು?
ಅನೇಕ ಮಕ್ಕಳು ಇದನ್ನು ಚಿಕ್ಕ ಪ್ರಾಯದಲ್ಲೇ ಕಲಿಯುತ್ತಾರೆ: ತಮಗೆ ಎಟುಕಲಾರದಷ್ಟು ಎತ್ತರದಲ್ಲಿ ಒಂದು ಸೀಬೆಹಣ್ಣು ಇರುವಲ್ಲಿ, ಅವರು ಒಬ್ಬ ಆಟದ ಸಂಗಾತಿಯ ಹೆಗಲಿನ ಮೇಲೆ ಹತ್ತುತ್ತಾರೆ. ಔಷಧದ ಕ್ಷೇತ್ರದಲ್ಲೂ ಇಂತಹದ್ದೇ ವಿಷಯವು ಸಂಭವಿಸಿದೆ. ವೈದ್ಯಕೀಯ ಸಂಶೋಧಕರು ಗತಕಾಲದ ಪ್ರಖ್ಯಾತ ವೈದ್ಯರ ಹೆಗಲಿನ ಮೇಲೆ ನಿಂತುಕೊಳ್ಳುವುದರ ಮೂಲಕ ಸಾಧನೆಯೆಂಬ ಅಳತೆಗೋಲಿನಲ್ಲಿ ಎತ್ತರದಿಂದ ಎತ್ತರಕ್ಕೆ ಮುಟ್ಟಿದ್ದಾರೆ.
ಆ ಆರಂಭದ ಗುಣಪಡಿಸುವವರಲ್ಲಿ, ಹಿಪೊಕ್ರೇಟೀಸ್ ಮತ್ತು ಪ್ಯಾಶ್ಚರ್ ಎಂಬ ಪ್ರಸಿದ್ಧಿ ಪಡೆದಿದ್ದ ಪುರುಷರೂ ಇದ್ದರು. ಅವರೊಂದಿಗೆ ವಸೇಲಿಯಸ್ ಮತ್ತು ವಿಲಿಯಮ್ ಮಾರ್ಟನ್ ಎಂಬ ಪುರುಷರೂ ಇದ್ದರು. ಆದರೆ ಈ ಹೆಸರುಗಳು ಅನೇಕರಿಗೆ ಪರಿಚಯವಿಲ್ಲದ ಹೆಸರುಗಳಾಗಿವೆ. ಆಧುನಿಕ ಔಷಧಶಾಸ್ತ್ರಕ್ಕೆ ಈ ಪುರುಷರ ಕಾಣಿಕೆಯೇನು?
ಪ್ರಾಚೀನ ಕಾಲಗಳಲ್ಲಿ ವೈದ್ಯಕೀಯಶಾಸ್ತ್ರವು ಅನೇಕವೇಳೆ ಒಂದು ವೈಜ್ಞಾನಿಕ ವೃತ್ತಿಯಾಗಿರದೆ, ಪ್ರಧಾನವಾಗಿ ಮೂಢನಂಬಿಕೆ ಮತ್ತು ಧಾರ್ಮಿಕ ಪದ್ಧತಿಯ ವಿಷಯವಾಗಿತ್ತು. ಡಾ. ಫೀಲಿಕ್ಸ್ ಮಾರ್ಟೀ-ಈಬಾನ್ಸಸ್ನಿಂದ ಸಂಪಾದಿತ ಔಷಧದ ಕುರಿತ ಮಹಾಕಾವ್ಯ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ರೋಗದೊಂದಿಗೆ ಹೋರಾಡಲು . . . , ಮೆಸಪೊಟಾಮ್ಯದವರು ಔಷಧ ಮತ್ತು ಧರ್ಮದ ಮಿಶ್ರಣಕ್ಕೆ ಮೊರೆಹೋದರು, ಏಕೆಂದರೆ ರೋಗವು ತಮಗೆ ದೇವರುಗಳಿಂದ ಬರುವ ಶಿಕ್ಷೆ ಎಂದು ಅವರು ನಂಬಿದರು.” ಬೇಗನೆ ಹಿಂಬಾಲಿಸಿ ಬಂದ ಐಗುಪ್ತದ ಔಷಧಶಾಸ್ತ್ರ, ತದ್ರೀತಿಯಲ್ಲೇ ಧರ್ಮದಲ್ಲಿ ಬೇರೂರಿತ್ತು. ಹೀಗೆ ಅತ್ಯಾರಂಭದಿಂದಲೇ, ಗುಣಪಡಿಸುವವನನ್ನು ಧಾರ್ಮಿಕ ಮೆಚ್ಚುಗೆಯ ಭಾವನೆಯಿಂದ ವೀಕ್ಷಿಸಲಾಗುತ್ತಿತ್ತು.
ಮಣ್ಣಿನ ಆಧಾರಪೀಠ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ, ಡಾ. ಥಾಮಸ್ ಎ. ಪ್ರೆಸ್ಟನ್ ಗಮನಿಸುವುದು: “ಪ್ರಾಚೀನ ಜನರ ಅನೇಕ ನಂಬಿಕೆಗಳು ಔಷಧ ವೃತ್ತಿಯ ಮೇಲೆ ಬಿಟ್ಟುಹೋಗಿರುವ ಪ್ರಭಾವವು ಇಂದಿನ ತನಕ ಉಳಿದಿದೆ. ಅಂತಹ ನಂಬಿಕೆಗಳಲ್ಲಿ ಒಂದು, ರೋಗವು ರೋಗಿಯ ನಿಯಂತ್ರಣಕ್ಕೆ ಮೀರಿದ ವಿಷಯವಾಗಿದೆ, ಮತ್ತು ವೈದ್ಯನ ಮಂತ್ರಶಕ್ತಿಯ ಮೂಲಕ ಮಾತ್ರವೇ ರೋಗಿಯು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂಬುದೇ.”
ಅಸ್ತಿವಾರಗಳನ್ನು ಹಾಕುವುದು
ಆದರೂ, ಸಮಯ ಕಳೆದಂತೆ, ವೈದ್ಯಕೀಯ ವೃತ್ತಿಯು ಗುಣಪಡಿಸುವಿಕೆಯಲ್ಲಿ ಹೆಚ್ಚೆಚ್ಚು ವೈಜ್ಞಾನಿಕವಾಗಿ ಪರಿಣಮಿಸಿತು. ಪ್ರಾಚೀನಕಾಲದಲ್ಲಿ ವೈಜ್ಞಾನಿಕವಾಗಿ ಗುಣಪಡಿಸಿದವರಲ್ಲಿ ಪ್ರಧಾನನು ಹಿಪೊಕ್ರೇಟೀಸ್ ಆಗಿದ್ದನು. ಸುಮಾರು ಸಾ.ಶ.ಪೂ. 460ರಲ್ಲಿ ಕಾಸ್ ಎಂಬ ಗ್ರೀಕ್ ದ್ವೀಪದಲ್ಲಿ ಇವನು ಜನಿಸಿದನು ಮತ್ತು ಪಾಶ್ಚಾತ್ಯ ಔಷಧದ ಮೂಲಪುರುಷ ಎಂದು ಅನೇಕರಿಂದ ಮಾನ್ಯಮಾಡಲ್ಪಟ್ಟಿದ್ದಾನೆ. ಹಿಪೊಕ್ರೇಟೀಸ್ ಔಷಧಶಾಸ್ತ್ರವನ್ನು ತರ್ಕಸಮ್ಮತವಾಗಿ ವೀಕ್ಷಿಸಲು ಅಸ್ತಿವಾರವನ್ನು ಹಾಕಿದನು. ರೋಗಕ್ಕೆ ನೈಸರ್ಗಿಕವಾದ ಕಾರಣವಿತ್ತು ಎಂದು ವಾದಿಸುತ್ತಾ, ಅದು ದೈವದಿಂದ ಬರುವ ಒಂದು ಶಿಕ್ಷೆ ಎಂಬ ಭಾವನೆಯನ್ನು ಅವನು ತಳ್ಳಿಹಾಕಿದನು. ಉದಾಹರಣೆಗೆ, ಮೂರ್ಛೆರೋಗವನ್ನು ದೇವತೆಗಳು ಮಾತ್ರ ಗುಣಪಡಿಸಶಕ್ತರೆಂಬ ನಂಬಿಕೆಯ ಕಾರಣ, ಬಹಳ ಸಮಯದಿಂದ ಅದನ್ನು ಪವಿತ್ರ ರೋಗವೆಂದು ಕರೆಯಲಾಗುತ್ತಿತ್ತು. ಆದರೆ ಹಿಪೊಕ್ರೇಟೀಸ್ ಬರೆದದ್ದು: “ಪವಿತ್ರ ಎಂದು ಕರೆಯಲ್ಪಟ್ಟ ರೋಗದ ಸಂಬಂಧದಲ್ಲಿ: ಅದು ಬೇರೆ ರೋಗಗಳಿಗಿಂತ ಯಾವುದೇ ರೀತಿಯಲ್ಲಿ ಹೆಚ್ಚು ದೈವಿಕವಾದದ್ದು ಅಥವಾ ಹೆಚ್ಚು ಪವಿತ್ರವಾದದ್ದೆಂದು ನನಗೆ ತೋರುವುದಿಲ್ಲ, ಅದರ ಬದಲು ಅದಕ್ಕೆ ಒಂದು ನೈಸರ್ಗಿಕ ಕಾರಣವಿದೆ.” ಅನೇಕ ರೋಗಗಳ ಲಕ್ಷಣಗಳನ್ನು ಗಮನಿಸಿ ಅವುಗಳನ್ನು ಭವಿಷ್ಯದ ಪರಿಶೀಲನೆಗಾಗಿ ದಾಖಲಿಸಿಟ್ಟ ಜ್ಞಾತ ವೈದ್ಯರಲ್ಲಿ ಹಿಪೊಕ್ರೇಟೀಸ್ ಮೊದಲಿಗನು.
ಶತಮಾನಗಳ ನಂತರ, ಸಾ.ಶ. 129ರಲ್ಲಿ ಜನಿಸಿದ ಗೇಲನ್ ಎಂಬ ಗ್ರೀಕ್ ವೈದ್ಯನು ಕೂಡ ಬದಲಾವಣೆತರುವಂಥ ವೈಜ್ಞಾನಿಕ ಸಂಶೋಧನೆ ಮಾಡಿದನು. ಮಾನವರ ಮತ್ತು ಪ್ರಾಣಿಗಳ ಅಂಗವಿಚ್ಛೇದನದ ಮೇಲಾಧಾರಿಸಿ, ಅಂಗರಚನಶಾಸ್ತ್ರದ ಕುರಿತಾದ ಒಂದು ಪಠ್ಯಪುಸ್ತಕವನ್ನು ಅವನು ಸಿದ್ಧಪಡಿಸಿದನು ಮತ್ತು ಇದನ್ನು ವೈದ್ಯರು ಅನೇಕ ಶತಮಾನಗಳ ವರೆಗೆ ಉಪಯೋಗಿಸಿದರು! ಆದರೆ, ಬ್ರಸಲ್ಸ್ನಲ್ಲಿ 1514ರಲ್ಲಿ ಹುಟ್ಟಿದ ಆ್ಯಂಡ್ರೇಯಸ್ ವೆಸೇಲಿಯಸ್ ಎಂಬವನು ಮಾನವ ದೇಹರಚನೆಯ ಕುರಿತು (ಇಂಗ್ಲಿಷ್) ಎಂಬ ಪುಸ್ತಕವನ್ನು ಬರೆದನು. ಅದು ಗೇಲನ್ನ ಅನೇಕ ತರ್ಕಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿ ಹೋದುದರಿಂದ ವಿರೋಧವನ್ನು ಎದುರಿಸಬೇಕಾಯಿತಾದರೂ, ಅದು ಆಧುನಿಕ ಅಂಗರಚನಾಶಾಸ್ತ್ರಕ್ಕೆ ಅಸ್ತಿವಾರವನ್ನೊದಗಿಸಿತು. ಹೀಗೆ, ಡೀ ಗ್ರೋಸನ್ (ಮಹಾನ್ ವ್ಯಕ್ತಿಗಳು) ಎಂಬ ಪುಸ್ತಕಕ್ಕನುಸಾರ, ವೆಸೇಲಿಯಸ್ “ಎಲ್ಲಾ ಜನರಲ್ಲಿ ಮತ್ತು ಎಲ್ಲಾ ಕಾಲಗಳಲ್ಲಿ ಅತಿ ಪ್ರಾಮುಖ್ಯರಾಗಿದ್ದ ವೈದ್ಯಕೀಯ ಸಂಶೋಧಕರಲ್ಲಿ ಒಬ್ಬನಾದನು.”
ಹೃದಯ ಮತ್ತು ರಕ್ತಪರಿಚಲನೆಯ ಕುರಿತಾದ ಗೇಲನ್ನ ತತ್ತ್ವನಿರೂಪಣೆಗಳು ಸಹ ಕಾಲಾನಂತರ ರದ್ದುಗೊಳಿಸಲ್ಪಟ್ಟವು.a ಆಂಗ್ಲ ವೈದ್ಯನಾದ ವಿಲ್ಯಮ್ ಹಾರ್ವೀ, ಪ್ರಾಣಿಗಳ ಮತ್ತು ಪಕ್ಷಿಗಳ ಅಂಗವಿಚ್ಛೇದನ ಮಾಡುವುದರಲ್ಲಿ ಅನೇಕ ವರ್ಷಗಳನ್ನು ಕಳೆದನು. ಅವನು ಹೃದಯದ ಕವಾಟಗಳ ಕಾರ್ಯಾಚರಣೆಯನ್ನು ಗಮನಿಸಿದನು, ಪ್ರತಿಯೊಂದು ಹೃತ್ಕುಕ್ಷಿಯಲ್ಲಿರುವ ರಕ್ತದ ಪ್ರಮಾಣವನ್ನು ಅಳೆದನು, ಮತ್ತು ದೇಹದಲ್ಲಿರುವ ಒಟ್ಟು ರಕ್ತದ ಮೊತ್ತವನ್ನು ಅಂದಾಜುಮಾಡಿದನು. 1628ರಲ್ಲಿ ಪ್ರಾಣಿಗಳ ಹೃದಯದ ಮತ್ತು ರಕ್ತದ ಚಲನೆಯ ಕುರಿತು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಹಾರ್ವೀ ತನ್ನ ಕಂಡುಹಿಡಿತಗಳನ್ನು ಪ್ರಕಟಿಸಿದನು. ಅವನು ಟೀಕೆ, ವಿರೋಧ, ಆಕ್ರಮಣ ಮತ್ತು ಅವಮಾನಗಳನ್ನು ಎದುರಿಸಬೇಕಾಯಿತು. ಆದರೆ ಅವನ ಕೃತಿಯು ಔಷಧಶಾಸ್ತ್ರದಲ್ಲಿ ಒಂದು ತಿರುಗು ಬಿಂದುವಾಗಿತ್ತು—ದೇಹದ ರಕ್ತಪರಿಚಲನ ವ್ಯವಸ್ಥೆಯು ಕಂಡುಹಿಡಿಯಲ್ಪಟ್ಟಿತ್ತು!
ಕ್ಷೌರಿಕ ಕೆಲಸದಿಂದ ಶಸ್ತ್ರಚಿಕಿತ್ಸೆಗೆ
ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಕೂಡ ದೊಡ್ಡ ಬದಲಾವಣೆಗಳು ಮಾಡಲ್ಪಟ್ಟವು. ಮಧ್ಯ ಯುಗದಲ್ಲಿ, ಶಸ್ತ್ರಚಿಕಿತ್ಸೆಯು ಅನೇಕಬಾರಿ ಕ್ಷೌರಿಕರ ಕೆಲಸವಾಗಿರುತ್ತಿತ್ತು. 16ನೇ ಶತಮಾನದ ಆಂಬ್ರಾಸ್ ಪಾರೇ ಎಂಬ ಫ್ರೆಂಚ್ ವ್ಯಕ್ತಿಯನ್ನು ಆಧುನಿಕ ಶಸ್ತ್ರಚಿಕಿತ್ಸೆಯ ಮೂಲಪುರುಷ ಎಂದು ಕೆಲವರು ಹೇಳುವುದು ಆಶ್ಚರ್ಯಗೊಳಿಸುವ ಸಂಗತಿಯಲ್ಲ. ಮೊದಲ ಕ್ಷೌರಿಕ-ಶಸ್ತ್ರಚಿಕಿತ್ಸಕನಾಗಿದ್ದ ಇವನು ಫ್ರಾನ್ಸ್ನ ನಾಲ್ಕು ರಾಜರುಗಳ ಸೇವೆಯನ್ನೂ ಮಾಡಿದನು. ಪಾರೇ ಅನೇಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನೂ ಕಂಡುಹಿಡಿದನು.
ಹತ್ತೊಂಬತ್ತನೆಯ ಶತಮಾನದಲ್ಲಿ ಶಸ್ತ್ರಚಿಕಿತ್ಸಕರು ಇನ್ನೂ ಎದುರಿಸುತ್ತಿದ್ದ ದೊಡ್ಡ ಸಮಸ್ಯೆಗಳಲ್ಲಿ ಒಂದು, ಶಸ್ತ್ರಚಿಕಿತ್ಸೆಯ ನಂತರದ ನೋವನ್ನು ಮಂದಗೊಳಿಸಲು ಅಶಕ್ತರಾಗಿರುವುದೇ. ಆದರೆ 1846ರಲ್ಲಿ ವಿಲಿಯಮ್ ಮಾರ್ಟನ್ ಎಂಬ ದಂತಚಿಕಿತ್ಸಕನು ಶಸ್ತ್ರಚಿಕಿತ್ಸೆಯಲ್ಲಿ ಅನೆಸ್ತಿಟಿಕ್ಸ್ನ ವ್ಯಾಪಕವಾದ ಬಳಕೆಗೆ ದಾರಿಯನ್ನು ತೆರೆದನು.b
ಇಸವಿ 1895ರಲ್ಲಿ, ವಿಲ್ಹೆಲ್ಮ್ ರಾಂಟ್ಗೆನ್ ಎಂಬ ಜರ್ಮನ್ ವೈದ್ಯನು ವಿದ್ಯುಚ್ಛಕ್ತಿಯ ಸಂಬಂಧದಲ್ಲಿ ಸಂಶೋಧನೆ ಮಾಡುತ್ತಿದ್ದಾಗ, ಕಿರಣಗಳು ಮಾಂಸವನ್ನು ಪ್ರವೇಶಿಸುತ್ತಿರುವುದಾದರೂ ಎಲುಬನ್ನು ಪ್ರವೇಶಿಸದೇ ಇರುವುದನ್ನು ನೋಡಿದನು. ಈ ಕಿರಣಗಳ ಮೂಲವು ಅವನಿಗೆ ಗೊತ್ತಿರಲಿಲ್ಲವಾದುದರಿಂದ ಅದನ್ನು ಅವನು ಎಕ್ಸ್-ಕಿರಣಗಳು ಎಂದು ಕರೆದನು ಮತ್ತು ಆ ಹೆಸರು ಆಂಗ್ಲ ಭಾಷೆಯನ್ನಾಡುವ ಲೋಕದಲ್ಲಿ ಅಂಟಿಕೊಂಡಿದೆ. (ಜರ್ಮನರು ಇದನ್ನು ರಾಂಟ್ಗೆನ್ಸ್ಟ್ರಾಲನ್ ಎಂದು ಕರೆಯುತ್ತಾರೆ.) ಡೀ ಗ್ರೋಸನ್ ಡಾಯ್ಚೆನ್ (ಮಹಾ ಜರ್ಮನರು) ಎಂಬ ಪುಸ್ತಕಕ್ಕನುಸಾರ, ರಾಂಟ್ಗೆನ್ ತನ್ನ ಪತ್ನಿಗೆ ಹೇಳಿದ್ದು: “‘ರಾಂಟ್ಗೆನ್ಗೆ ಹುಚ್ಚು ಹಿಡಿದಿದೆ’ ಎಂದು ಜನರು ಹೇಳುವರು.” ಮತ್ತು ಕೆಲವರು ಹಾಗೆಯೇ ಹೇಳಿದರು. ಆದರೆ ಅವನ ಕಂಡುಹಿಡಿತವು ಶಸ್ತ್ರಚಿಕಿತ್ಸೆಯನ್ನು ಕ್ರಾಂತಿಕಾರಕವಾಗಿ ಬದಲಾಯಿಸಿತು. ಈಗ ಶಸ್ತ್ರಚಿಕಿತ್ಸಕರು ದೇಹವನ್ನು ಕತ್ತರಿಸಿ ತೆರೆಯದೆಯೇ ಅದರೊಳಗೆ ನೋಡಲು ಸಾಧ್ಯವಾಯಿತು.
ರೋಗಗಳನ್ನು ಜಯಿಸುವುದು
ಯುಗಗಳಾದ್ಯಂತ, ಸಿಡುಬು ಮುಂತಾದ ಅಂಟುರೋಗಗಳು ಪದೇ ಪದೇ ಸಾಂಕ್ರಾಮಿಕ ರೋಗ, ಭೀತಿ, ಮತ್ತು ಮರಣವನ್ನು ತಂದಿವೆ. ಆ ಕಾಲದ ಮುಸಲ್ಮಾನ್ ಜಗತ್ತಿನ ಮಹಾ ವೈದ್ಯನೆಂದು ಕೆಲವರಿಂದ ಪರಿಗಣಿಸಲ್ಪಟ್ಟ ಪರ್ಷಿಯದ ಒಂಬತ್ತನೇ ಶತಮಾನದ ಆರಾಸೀ ಎಂಬವನು, ಸಿಡುಬಿನ ಕುರಿತಾದ ವೈದ್ಯಕೀಯವಾಗಿ ನಿಷ್ಕೃಷ್ಟವಾದ ಮೊದಲ ವಿವರಣೆಯನ್ನು ಬರೆದನು. ಆದರೆ ಅದನ್ನು ವಾಸಿಮಾಡುವ ವಿಧಾನವನ್ನು ಶತಮಾನಗಳ ನಂತರ ಬ್ರಿಟಿಷ್ ವೈದ್ಯನಾಗಿದ್ದ ಎಡ್ವರ್ಡ್ ಜೆನ್ನರ್ ಕಂಡುಹಿಡಿದನು. ಒಬ್ಬ ವ್ಯಕ್ತಿಯು ಹಸುವಿನ ಸಿಡುಬು ಎಂಬ ನಿರಪಾಯಕಾರಿ ರೋಗದಿಂದ ಸೋಂಕಿತನಾದಾಗ ಅವನು ಸಿಡುಬಿನಿಂದ ರಕ್ಷಿತನಾಗುತ್ತಾನೆ ಎಂಬುದನ್ನು ಜೆನ್ನರ್ ಗಮನಿಸಿದನು. ಈ ಅವಲೋಕನೆಯ ಆಧಾರದ ಮೇಲೆ, ಸಿಡುಬಿನ ವಿರುದ್ಧ ಲಸಿಕೆಯನ್ನು ತಯಾರಿಸಲಿಕ್ಕಾಗಿ ಹಸುವಿನ ಸಿಡುಬಿನ ಚರ್ಮಗಾಯಗಳನ್ನು ಜೆನ್ನರ್ ಉಪಯೋಗಿಸಿದನು. ಅದು 1796ರಲ್ಲಿ ಸಂಭವಿಸಿತು. ಇವನಿಗಿಂತ ಮುಂಚಿನ ಮೊದಲಿಗರಿಗಾದಂತೆಯೇ, ಜೆನ್ನರ್ ಟೀಕೆ ಮತ್ತು ವಿರೋಧವನ್ನು ಎದುರಿಸಿದನು. ಆದರೆ ಲಸಿಕೆಹಾಕುವ ಕಾರ್ಯವಿಧಾನದ ಅವನ ಕಂಡುಹಿಡಿತವು, ಕ್ರಮೇಣ ಆ ರೋಗದ ನಿರ್ಮೂಲನಕ್ಕೆ ನಡೆಸಿತು ಮತ್ತು ರೋಗದ ವಿರುದ್ಧ ಹೋರಾಡಲು ಔಷಧಶಾಸ್ತ್ರಕ್ಕೆ ಶಕ್ತಿಯುತವಾದ ಒಂದು ಹೊಸ ಸಾಧನವನ್ನು ಒದಗಿಸಿತು.
ಫ್ರೆಂಚ್ ನಾಡಿಗನಾಗಿದ್ದ ಲೂಯಿ ಪ್ಯಾಶ್ಚರ್ ನಾಯಿಹುಚ್ಚು ಮತ್ತು ನೆರಡಿರೋಗದ ವಿರುದ್ಧ ಹೋರಾಡಲು ಲಸಿಕೆಹಾಕುವಿಕೆಯನ್ನು ಉಪಯೋಗಿಸಿದನು. ರೋಗಗಳನ್ನು ಉಂಟುಮಾಡುವುದರಲ್ಲಿ ಕೀಟಾಣುಗಳು ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂಬುದನ್ನೂ ಅವನು ರುಜುಪಡಿಸಿದನು. 1882ರಲ್ಲಿ, ರಾಬರ್ಟ್ ಕಾಕ್ ಕ್ಷಯರೋಗವನ್ನು ಉಂಟುಮಾಡುವ ಕೀಟಾಣುವನ್ನು ಗುರುತಿಸಿದನು. ಇದನ್ನು ಒಬ್ಬ ಇತಿಹಾಸಗಾರನು “ಹತ್ತೊಂಬತ್ತನೇ ಶತಮಾನದ ಮಹಾ ಹಂತಕ ರೋಗ” ಎಂದು ವರ್ಣಿಸಿದನು. ಸುಮಾರು ಒಂದು ವರ್ಷದ ನಂತರ, ಕಾಲರವನ್ನು ಉಂಟುಮಾಡುವ ಕೀಟಾಣುವನ್ನು ಕಾಕ್ ಗುರುತಿಸಿದನು. ಜೀವ (ಇಂಗ್ಲಿಷ್) ಪತ್ರಿಕೆಯು ಹೇಳುವುದು: “ಪ್ಯಾಶ್ಚರ್ ಮತ್ತು ಕಾಕ್ರ ಕೆಲಸವು ಸೂಕ್ಷ್ಮಜೀವಶಾಸ್ತ್ರ ವಿಜ್ಞಾನವನ್ನು ಒಳತಂದು, ರೋಗರಕ್ಷಾಶಾಸ್ತ್ರ, ನೈರ್ಮಲ್ಯಶಾಸ್ತ್ರ ಮತ್ತು ಆರೋಗ್ಯಶಾಸ್ತ್ರದ ಏಳಿಗೆಗೆ ನಡೆಸಿ, ಕಳೆದ 1000 ವರ್ಷಗಳಲ್ಲಿ ಮಾನವನ ಆಯುಷ್ಯದ ಅಭಿವೃದ್ಧಿಗೆ ಬೇರೆ ಯಾವ ವೈಜ್ಞಾನಿಕ ಮುನ್ನಡೆಯು ಮಾಡಿರುವುದಕ್ಕಿಂತಲೂ ಹೆಚ್ಚಿನದ್ದನ್ನು ಮಾಡಿತು.”
ಇಪ್ಪತ್ತನೇ ಶತಮಾನದ ಔಷಧಶಾಸ್ತ್ರ
ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಔಷಧಶಾಸ್ತ್ರವು ಇವರ ಮತ್ತು ಇನ್ನಿತರ ಯಶಸ್ವೀ ವೈದ್ಯರ ಹೆಗಲಿನ ಮೇಲೆ ನಿಂತುಕೊಂಡಿತ್ತು. ಅಂದಿನಿಂದ, ಉಸಿರುಕಟ್ಟಿಸುವಂಥ ಪ್ರಮಾಣದಲ್ಲಿ ವೈದ್ಯಕೀಯ ಅಭಿವೃದ್ಧಿಗಳು ಆಗಿವೆ—ಮಧುಮೂತ್ರ ವ್ಯಾಧಿಗಾಗಿ ಇನ್ಸುಲಿನ್, ಕ್ಯಾನ್ಸರ್ಗಾಗಿ ಕೀಮೋಥೆರಪಿ, ರಸಗ್ರಂಥಿಗಳ ತೊಂದರೆಗಳಿಗಾಗಿ ಹಾರ್ಮೋನ್ ಚಿಕಿತ್ಸೆ, ಕ್ಷಯರೋಗಕ್ಕಾಗಿ ಪ್ರತಿಜೀವಾಣು, ಕೆಲವು ಬಗೆಯ ಮಲೇರಿಯಕ್ಕಾಗಿ ಕ್ಲೋರೋಕ್ವಿನ್, ಮೂತ್ರಜನಕಾಂಗದ ತೊಂದರೆಗಳಿಗಾಗಿ ಡಯಾಲಿಸಿಸ್, ಹಾಗೂ ತೆರೆದ-ಹೃದಯ ಶಸ್ತ್ರಚಿಕಿತ್ಸೆ ಮತ್ತು ಅಂಗಗಳ ಸ್ಥಳಾಂತರ. ಇಷ್ಟರ ತನಕ ಆಗಿರುವ ಅನೇಕ ಅಭಿವೃದ್ಧಿಗಳಲ್ಲಿ ಇವು ಕೆಲವಾಗಿವೆ.
ಆದರೆ ಈಗ, ನಾವು 21ನೇ ಶತಮಾನದ ಆರಂಭದಲ್ಲಿ ಬಂದು ನಿಂತಿದ್ದೇವೆ. ಆದುದರಿಂದ, “ಲೋಕದಲ್ಲಿರುವ ಎಲ್ಲಾ ಜನರಿಗೆ ಅಂಗೀಕಾರಾರ್ಹ ಮಟ್ಟದ ಆರೋಗ್ಯ”ದ ಖಾತ್ರಿನೀಡುವ ಗುರಿಯನ್ನು ಔಷಧಶಾಸ್ತ್ರವು ಎಷ್ಟರ ಮಟ್ಟಿಗೆ ಸಾಧಿಸಿದೆ?
ಎಟುಕಲಸಾಧ್ಯವಾದ ಗುರಿಯೋ?
ಆಟದ ಸಂಗಾತಿಯ ಹೆಗಲಿನ ಮೇಲೆ ಹತ್ತಿದ ಮಾತ್ರಕ್ಕೆ ಎಲ್ಲಾ ಸೀಬೆಹಣ್ಣುಗಳನ್ನು ಎಟುಕಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮಕ್ಕಳು ಕಲಿತುಕೊಳ್ಳುತ್ತಾರೆ. ತುಂಬ ಹಣ್ಣಾದ ಕೆಲವು ಸೀಬೆಹಣ್ಣುಗಳು ಮರದ ತುದಿಯಲ್ಲಿ ಅಂದರೆ ಅವರಿಗೆ ಎಟುಕದ ಜಾಗದಲ್ಲಿರುತ್ತವೆ. ಅದೇ ರೀತಿಯಲ್ಲಿ, ಔಷಧಶಾಸ್ತ್ರವು ಒಂದು ಸಾಧನೆಯಿಂದ ಇನ್ನೊಂದಕ್ಕೆ ಸಾಗುತ್ತಾ, ಎತ್ತರದಿಂದ ಎತ್ತರಕ್ಕೆ ಹೋಗಿದೆ. ಆದರೆ ಎಲ್ಲರಿಗೂ ಒಳ್ಳೆಯ ಆರೋಗ್ಯವನ್ನು ಕೊಡುವ ಅತ್ಯಮೂಲ್ಯವಾದ ಗುರಿಯು ಮಾತ್ರ ಕೈಗೆ ಎಟುಕದ ಹಾಗೆ ಮರದ ತುದಿಯಲ್ಲಿದೆ.
ಆದುದರಿಂದ, 1998ರಲ್ಲಿ ಯೂರೋಪಿಯನ್ ಕಮಿಷನ್ ಮಂಡಲಿಯು, “ಯೂರೋಪಿನವರು ಇಷ್ಟು ದೀರ್ಘವಾದ ಮತ್ತು ಆರೋಗ್ಯಕರವಾದ ಬಾಳನ್ನು ಹಿಂದೆಂದೂ ಅನುಭವಿಸಿರಲಿಲ್ಲ” ಎಂದು ವರದಿಸಿದಾಗ, ಅದು ಕೂಡಿಸಿದ್ದು: “ಐವರಲ್ಲಿ ಒಬ್ಬ ವ್ಯಕ್ತಿ 65ರ ಪ್ರಾಯಕ್ಕಿಂತ ಮುಂಚೆ ಅಕಾಲಿಕವಾಗಿ ಸಾಯುವನು. ಈ ಮರಣಗಳಲ್ಲಿ ಸುಮಾರು 40% ಕ್ಯಾನ್ಸರ್ನಿಂದಾಗುವುದು, 30% ಹೃದಯ ಮತ್ತು ರಕ್ತನಾಳದ ರೋಗಗಳಿಂದಾಗುವುದು . . . ಆರೋಗ್ಯದ ಹೊಸ ಬೆದರಿಕೆಗಳ ವಿರುದ್ಧ ಹೆಚ್ಚು ಉತ್ತಮವಾದ ಸಂರಕ್ಷಣೆ ಕೊಡಲ್ಪಡಲೇಬೇಕು.”
ನವೆಂಬರ್ 1998ರಲ್ಲಿ ಜರ್ಮನ್ ಆರೋಗ್ಯ ಪತ್ರಿಕೆಯಾದ ಗೆಸುಂಟ್ಹೈಟ್, ಕಾಲರ ಮತ್ತು ಕ್ಷಯರೋಗದಂತಹ ಸೋಂಕು ರೋಗಗಳು ಹೆಚ್ಚುತ್ತಿರುವ ಬೆದರಿಕೆಯನ್ನು ತೋರಿಸುತ್ತಿವೆ ಎಂಬುದಾಗಿ ವರದಿಸಿತು. ಏಕೆ? ಏಕೆಂದರೆ ಪ್ರತಿಜೀವಾಣುಗಳು “ತಮ್ಮ ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತಿವೆ. ಹೆಚ್ಚೆಚ್ಚು ಏಕಜೀವಾಣುಗಳು ಕಡಿಮೆಪಕ್ಷ ಒಂದು ಸಾಮಾನ್ಯ ಮದ್ದನ್ನಾದರೂ ನಿರೋಧಿಸುತ್ತವೆ; ಹೆಚ್ಚಿನವು ಹಲವಾರು ಮದ್ದುಗಳನ್ನು ನಿರೋಧಿಸುತ್ತವೆ ಎಂಬುದೂ ಸತ್ಯ.” ಹಳೆಯ ರೋಗಗಳು ಹಿಂದಿರುಗುತ್ತಿವೆ ಮಾತ್ರವಲ್ಲದೆ, ಏಡ್ಸ್ನಂತಹ ಹೊಸ ರೋಗಗಳೂ ತಲೆದೋರಿವೆ. ಜರ್ಮನಿಯ ಔಷಧವಸ್ತುಗಳ ಪ್ರಕಾಶನ ಸಂಖ್ಯಾ ಸಂಗ್ರಹಣ ’97 (ಇಂಗ್ಲಿಷ್) ನಮಗೆ ಜ್ಞಾಪಿಸುವುದು: “ಜ್ಞಾತ ರೋಗಗಳ ಮೂರರಲ್ಲಿ ಎರಡು ಭಾಗ, ಅಂದರೆ ಸುಮಾರು 20,000 ರೋಗಗಳ ಕಾರಣಕ್ಕೆ ಚಿಕಿತ್ಸೆ ನೀಡಲು ಇದುವರೆಗೂ ಯಾವುದೇ ವಿಧಾನವು ಕಂಡುಕೊಳ್ಳಲ್ಪಟ್ಟಿಲ್ಲ.”
ತಳಿ ಚಿಕಿತ್ಸೆಯು ಉತ್ತರವನ್ನು ಹೊಂದಿದೆಯೋ?
ಬದಲಾವಣೆ ಹೊಂದಿರುವ ಚಿಕಿತ್ಸೆಗಳು ಬೆಳೆಯುತ್ತ ಮುಂದುವರಿಯುತ್ತವೆಂಬುದು ಒಪ್ಪತಕ್ಕ ವಿಷಯವೇ. ಉದಾಹರಣೆಗಾಗಿ, ಉತ್ತಮ ಆರೋಗ್ಯಕ್ಕೆ ಬೇಕಾದ ಕೀಲಿ ಕೈಯನ್ನು ತಳಿ ಎಂಜಿನಿಯರಿಂಗ್ ಹೊಂದಿರಬಹುದು ಎಂಬುದು ಕೆಲವರ ಅನಿಸಿಕೆಯಾಗಿದೆ. ಅಮೆರಿಕದಲ್ಲಿ 1990ಗಳಲ್ಲಿ ಡಾ. ಡಬ್ಲ್ಯೂ. ಫ್ರೆಂಚ್ ಆ್ಯಂಡರ್ಸನ್ರಂತಹ ವೈದ್ಯರಿಂದ ಸಂಶೋಧನೆ ನಡೆಸಲ್ಪಟ್ಟ ಬಳಿಕ, ತಳಿ ಚಿಕಿತ್ಸೆಯು “ವೈದ್ಯಕೀಯ ಸಂಶೋಧನೆಯ ಹೊಸ ರೋಮಾಂಚಕ ಮತ್ತು ಜನಪ್ರಿಯ ಕ್ಷೇತ್ರ” ಎಂದು ವರ್ಣಿಸಲಾಯಿತು. ಹೈಲನ್ ಮೀಟ್ ಗೇನನ್ (ತಳಿಗಳ ಮೂಲಕ ವಾಸಿಮಾಡುವಿಕೆ) ಎಂಬ ಪುಸ್ತಕವು ಹೇಳುವುದೇನೆಂದರೆ, ತಳಿ ಚಿಕಿತ್ಸೆಯ ಸಂಬಂಧದಲ್ಲಿ “ಔಷಧ ವಿಜ್ಞಾನವು ಒಂದು ಪ್ರಥಮಾನ್ವೇಷಕ ಬೆಳವಣಿಗೆಯ ಅಂಚಿನಲ್ಲಿರಬಹುದು. ಇದುವರೆಗೂ ವಾಸಿಮಾಡಲಸಾಧ್ಯವಾಗಿದ್ದ ಕಾಯಿಲೆಗಳ ಚಿಕಿತ್ಸೆಯ ವಿಷಯದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.”
ಸಕಾಲದಲ್ಲಿ, ಸರಿಪಡಿಸುವಂತಹ ತಳಿಗಳನ್ನು ರೋಗಿಗಳಿಗೆ ಚುಚ್ಚುವ ಮೂಲಕ ಜನ್ಮಸಿದ್ಧ ತಳಿ ಸಂಬಂಧಿತ ರೋಗಗಳನ್ನು ವಾಸಿಮಾಡಲು ಶಕ್ತರಾಗುವುದನ್ನು ವಿಜ್ಞಾನಿಗಳು ನಿರೀಕ್ಷಿಸುತ್ತಾರೆ. ಕ್ಯಾನ್ಸರ್ ಜೀವಕೋಶಗಳಂತಹ ಹಾನಿಕರವಾದ ಜೀವಕೋಶಗಳು ಸಹ ತಮ್ಮನ್ನು ತಾವೇ ನಾಶಮಾಡಿಕೊಳ್ಳುವಂತೆ ಪ್ರಾಯಶಃ ಮಾಡಸಾಧ್ಯವಿದೆ. ಒಬ್ಬ ವ್ಯಕ್ತಿಯು ಕೆಲವು ಅಸ್ವಸ್ಥತೆಗಳನ್ನು ಪಡೆದುಕೊಳ್ಳುವ ಸಂಭಾವ್ಯತೆಯನ್ನು ಕಂಡುಹಿಡಿಯುವ ತಳಿ ವಿಜ್ಞಾನ ಸ್ಕ್ರೀನಿಂಗ್ ಈಗಾಗಲೇ ಲಭ್ಯವಿದೆ. ಫಾರ್ಮಕಾಜೆನಾಮಿಕ್ಸ್—ರೋಗಿಯ ತಳಿಯ ರಚನೆಗೆ ತಕ್ಕ ಹಾಗೆ ಮದ್ದನ್ನು ಸರಿಹೊಂದಿಸುವುದು—ಮುಂದಿನ ಬೆಳವಣಿಗೆಯಾಗಿರುವುದು ಎಂದು ಕೆಲವರು ಹೇಳುತ್ತಾರೆ. ವೈದ್ಯರು “ತಮ್ಮ ರೋಗಿಗಳ ರೋಗನಿರ್ಣಯಮಾಡಲು ಮತ್ತು ವಾಸಿಮಾಡಲು ಡಿಎನ್ಎ ಅಣುಗಳ ನೂಲಿನ ತುಂಡುಗಳನ್ನು ಒಂದು ದಿನ ಕೊಡಶಕ್ತರಾಗುವರು” ಎಂದು ಒಬ್ಬ ಪ್ರಖ್ಯಾತ ಸಂಶೋಧಕರು ನಂಬುತ್ತಾರೆ.
ಆದರೂ, ತಳಿ ಚಿಕಿತ್ಸೆಯು ಭವಿಷ್ಯದ “ಅದ್ಭುತ ಗುಂಡು” ವಾಸಿಮಾಡುವಿಕೆಯ ನಿರೀಕ್ಷೆಯನ್ನು ನೀಡುವುದು ಎಂಬುದರ ಕುರಿತು ಎಲ್ಲರೂ ಭರವಸೆಯಿಂದಿಲ್ಲ. ವಾಸ್ತವದಲ್ಲಿ, ಸಮೀಕ್ಷೆಗಳಿಗನುಸಾರ, ಜನರು ಒಂದುವೇಳೆ ತಮ್ಮ ತಳಿ ರಚನೆಯನ್ನು ಪರೀಕ್ಷಿಸಿ ನೋಡಲು ಸಹ ಬಯಸದೇ ಇರಬಹುದು. ತಳಿ ಚಿಕಿತ್ಸೆಯು ಪ್ರಕೃತಿಯಲ್ಲಿ ಅಪಾಯಕರವಾದ ಹಸ್ತಕ್ಷೇಪವಾಗಿರಬಹುದು ಎಂದು ಅನೇಕರು ಭಯಪಡುತ್ತಾರೆ.
ತಳಿ ಎಂಜಿನಿಯರಿಂಗ್ ಅಥವಾ ಔಷಧಶಾಸ್ತ್ರದ ಬೇರೆ ಉಚ್ಚ-ತಂತ್ರಜ್ಞಾನಗಳು, ತಮ್ಮ ವಿಪರೀತ ವಾಗ್ದಾನಗಳನ್ನು ಪೂರೈಸುವವೋ ಎಂಬುದನ್ನು ಸಮಯವೇ ತಿಳಿಸುವುದು. ಹಾಗಿದ್ದರೂ, ಅನಾವಶ್ಯಕವಾದ ಆಶಾವಾದವನ್ನು ತ್ಯಜಿಸಲು ಕಾರಣವಿದೆ. ಮಣ್ಣಿನ ಆಧಾರಪೀಠ (ಇಂಗ್ಲಿಷ್) ಎಂಬ ಪುಸ್ತಕವು, ಒಂದು ಚಿರಪರಿಚಿತ ಚಕ್ರಗತಿಯನ್ನು ವಿವರಿಸುತ್ತದೆ: “ಒಂದು ಹೊಸ ಚಿಕಿತ್ಸೆಯು ವೈದ್ಯಕೀಯ ಸಭೆಗಳಲ್ಲಿ ಮತ್ತು ವೈದ್ಯಕೀಯ ಪತ್ರಿಕೆಗಳಲ್ಲಿ ಪ್ರಕಟಿಸಲ್ಪಟ್ಟು ಹೊರಬರುತ್ತದೆ. ಅದನ್ನು ಕಂಡುಹಿಡಿದವರು ವೈದ್ಯಕೀಯ ವೃತ್ತಿಯಲ್ಲಿಯೇ ಪ್ರಖ್ಯಾತರಾಗುತ್ತಾರೆ, ಮತ್ತು ಪ್ರಚಾರ ಮಾಧ್ಯಮವು ಆ ಅಭಿವೃದ್ಧಿಯನ್ನು ಉದ್ಘೋಷಿಸುತ್ತದೆ. ಈ ಅದ್ಭುತ ಚಿಕಿತ್ಸೆಯ ಬೆಂಬಲದಲ್ಲಿ ಸ್ವಲ್ಪ ಕಾಲದ ಸಡಗರ ಹಾಗೂ ಸಾಕ್ಷ್ಯಪ್ರಮಾಣಗಳ ನಂತರ, ಕ್ರಮೇಣವಾದ ಭ್ರಮನಿರಸನವು ಶುರುವಾಗುತ್ತದೆ, ಇದು ಕೆಲವು ತಿಂಗಳುಗಳ ಅಥವಾ ಕೆಲವು ದಶಕಗಳ ವರೆಗೂ ಮುಂದುವರಿಯಬಹುದು. ತದನಂತರ ಒಂದು ಹೊಸ ಔಷಧವು ಕಂಡುಹಿಡಿಯಲ್ಪಡುತ್ತದೆ ಮತ್ತು ದಿನ ಬೆಳಗಾಗುವುದರೊಳಗೋ ಎಂಬಂತೆ, ಇದು ಹಳೇದನ್ನು ಸ್ಥಾನಪಲ್ಲಟಮಾಡುತ್ತದೆ, ಮತ್ತು ಅದು ಉಪಯುಕ್ತವಿಲ್ಲದ್ದೆಂದು ಕೂಡಲೇ ತೊರೆಯಲ್ಪಡುತ್ತದೆ.” ವಾಸ್ತವದಲ್ಲಿ, ಹೆಚ್ಚಿನ ವೈದ್ಯರು ಈಗ ಪರಿಣಾಮಕಾರಿಯಲ್ಲವೆಂದು ತ್ಯಜಿಸಿರುವ ಔಷಧಗಳು, ಕೆಲವೇ ವರ್ಷಗಳ ಹಿಂದೆ ಒಳ್ಳೆಯ ಮಟ್ಟದವುಗಳೆಂದು ವರ್ಣಿಸಲ್ಪಟ್ಟಿದ್ದವು.
ಪ್ರಾಚೀನ ಕಾಲಗಳಲ್ಲಿ ವೈದ್ಯರಿಗೆ ಕೊಡಲ್ಪಡುತ್ತಿದ್ದ ಧಾರ್ಮಿಕ ಮರ್ಯಾದೆ ಇಂದಿರುವ ಡಾಕ್ಟರ್ಗಳಿಗೆ ನೀಡಲ್ಪಡುವುದಿಲ್ಲವಾದರೂ, ವೈದ್ಯಕೀಯ ವೃತ್ತಿಗಾರರಿಗೆ ಹೆಚ್ಚುಕಡಿಮೆ ದೇವರಂಥ ಶಕ್ತಿಗಳಿವೆ ಮತ್ತು ಮಾನವರ ಎಲ್ಲಾ ಅಸ್ವಸ್ಥತೆಗಳಿಗೆ ವೈಜ್ಞಾನಿಕ ಪರಿಹಾರವು ಸಾಧ್ಯವಿದೆ ಎಂಬ ಊಹೆ ಕೆಲವು ಜನರಿಗಿದೆ. ಆದರೆ ನಿಜತ್ವವು ಈ ಊಹೆಗೆ ಅತಿದೂರದಲ್ಲಿದೆ. ನಮಗೆ ಹೇಗೆ ಮತ್ತು ಯಾಕೆ ವಯಸ್ಸಾಗುತ್ತದೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಡಾ. ಲೆನರ್ಡ್ ಹೇಫ್ಲಿಕ್ ಗಮನಿಸುವುದು: “ಇಸವಿ 1900ರಲ್ಲಿ, ಅಮೆರಿಕದಲ್ಲಿದ್ದ 75 ಪ್ರತಿಶತ ಜನರು ಅರುವತ್ತೈದರ ಪ್ರಾಯಕ್ಕೆ ಮುಂಚಿತವಾಗಿ ಸತ್ತು ಹೋದರು. ಇಂದು ಈ ಅಂಕಿಸಂಖ್ಯೆಯು ಹೆಚ್ಚುಕಡಿಮೆ ಹಿಮ್ಮುಖವಾಗಿದೆ: 70 ಪ್ರತಿಶತ ಜನರು ಅರುವತ್ತೈದರ ಪ್ರಾಯದ ನಂತರ ಸಾಯುತ್ತಿದ್ದಾರೆ.” ಆಯುಷ್ಯದಲ್ಲಿ ಇಂತಹ ಗಮನಾರ್ಹವಾದ ಹೆಚ್ಚಳವನ್ನು ಯಾವುದು ಉಂಟುಮಾಡಿತು? “ಅಧಿಕವಾಗಿ ನವಜನಿತ ಮಕ್ಕಳ ಮರಣ ಪ್ರಮಾಣವು ಕಡಿಮೆಯಾಗಿರುವುದರಿಂದಲೇ” ಅದು ಸಾಧ್ಯವಾಯಿತು ಎಂದು ಹೇಫ್ಲಿಕ್ ವಿವರಿಸುತ್ತಾರೆ. ಒಂದುವೇಳೆ ಈಗ ವೃದ್ಧರಲ್ಲಿ ಮರಣಕ್ಕೆ ಪ್ರಧಾನ ಕಾರಣಗಳಾದ ಹೃದ್ರೋಗ, ಕ್ಯಾನ್ಸರ್ ಮತ್ತು ಲಕ್ವವನ್ನು ಔಷಧಶಾಸ್ತ್ರವು ನಿರ್ಮೂಲ ಮಾಡುವಲ್ಲಿ ಏನಾದೀತು? ಅದು ಅಮರತ್ವವನ್ನು ಕೊಟ್ಟೀತೋ? ಖಂಡಿತವಾಗಿಯೂ ಇಲ್ಲ. ಡಾ. ಹೇಫ್ಲಿಕ್ ಸೂಚಿಸುವುದು, ಆಗಲೂ “ಹೆಚ್ಚಿನ ಜನರು ಸುಮಾರು ನೂರು ವರ್ಷ ಬಾಳುವರು.” ಅವರು ಕೂಡಿಸುವುದು: “ಆಗ ಕೂಡ ಈ ಶತಾಯುಷಿಗಳು ಅಮರರಾಗಿರುವುದಿಲ್ಲ. ಹಾಗಾದರೆ ಅವರು ಯಾವುದರಿಂದ ಸತ್ತುಹೋಗುವರು? ಮರಣವು ಸಂಭವಿಸುವ ವರೆಗೆ ಅವರು ದುರ್ಬಲರಾಗುತ್ತಾ ಹೋಗುವರು.”
ಹೀಗೆ, ವೈದ್ಯಕೀಯ ವಿಜ್ಞಾನದ ಅತ್ಯುತ್ತಮವಾದ ಪ್ರಯತ್ನಗಳ ಎದುರಿನಲ್ಲೂ, ಮರಣವನ್ನು ನಿರ್ಮೂಲಮಾಡುವುದು ಔಷಧಶಾಸ್ತ್ರಕ್ಕೆ ಇನ್ನೂ ಎಟುಕಲಾಗದಷ್ಟು ಎತ್ತರದಲ್ಲಿದೆ. ವಿಷಯವು ಹೀಗೇಕೆ ಇದೆ? ಮತ್ತು ಎಲ್ಲರಿಗೂ ಒಳ್ಳೆಯ ಆರೋಗ್ಯವೆಂಬ ಗುರಿಯು ನನಸಾಗದ ಒಂದು ಕನಸು ಮಾತ್ರವೋ?
(g01 6/8)
[ಪಾದಟಿಪ್ಪಣಿಗಳು]
a ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯದ ಪ್ರಕಾರ, ಜೀರ್ಣಗೊಳಿಸಲ್ಪಟ್ಟ ಆಹಾರವನ್ನು ಯಕೃತ್ತು ರಕ್ತವನ್ನಾಗಿ ಬದಲಾಯಿಸುತ್ತದೆ ಮತ್ತು ಇದು ತದನಂತರ ದೇಹದಲ್ಲೆಲ್ಲ ಪ್ರವಹಿಸಿ ಹೀರಿಕೊಳ್ಳಲ್ಪಡುತ್ತದೆ ಎಂದು ಗೇಲನ್ ನೆನಸಿದನು.
b “ಯಾತನೆಯಿಂದ ಅನೆಸ್ತೀಸಿಯಕ್ಕೆ” ಎಂಬ ಲೇಖನವನ್ನು ಎಚ್ಚರ! ಪತ್ರಿಕೆಯ, ಜನವರಿ-ಮಾರ್ಚ್ 2001ರ ಸಂಚಿಕೆಯಲ್ಲಿ ನೋಡಿ.
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪ್ರಾಚೀನ ಜನರ ಅನೇಕ ನಂಬಿಕೆಗಳು ಔಷಧ ವೃತ್ತಿಯ ಮೇಲೆ ಬಿಟ್ಟುಹೋಗಿರುವ ಪ್ರಭಾವವು ಇಂದಿನ ತನಕ ಉಳಿದಿದೆ.”—ಮಣ್ಣಿನ ಆಧಾರಪೀಠ
[ಪುಟ 4, 5ರಲ್ಲಿರುವ ಚಿತ್ರಗಳು]
ಹಿಪೊಕ್ರೇಟೀಸ್, ಗೇಲನ್ ಮತ್ತು ವೆಸೇಲಿಯಸ್ರು ಆಧುನಿಕ ಔಷಧಶಾಸ್ತ್ರದ ಅಸ್ತಿವಾರಗಳನ್ನು ಹಾಕಿದರು
[ಕೃಪೆ]
ಕಾಸ್ ದ್ವೀಪ, ಗ್ರೀಸ್
Courtesy National Library of Medicine
Woodcut by Jan Steven von Kalkar of A. Vesalius, taken from Meyer’s Encyclopedic Lexicon
[ಪುಟ 6ರಲ್ಲಿರುವ ಚಿತ್ರಗಳು]
ಪ್ರಥಮಾನ್ವೇಷಕ ಕ್ಷೌರಿಕ-ಶಸ್ತ್ರಚಿಕಿತ್ಸಕನಾಗಿದ್ದ ಆಂಬ್ರಾಸ್ ಪಾರೇ, ಫ್ರಾನ್ಸ್ನ ನಾಲ್ಕು ರಾಜರುಗಳ ಸೇವೆಯನ್ನು ಮಾಡಿದನು
ಪರ್ಷಿಯದ ವೈದ್ಯನಾದ ಆರಾಸೀ (ಎಡಕ್ಕೆ), ಮತ್ತು ಬ್ರಿಟಿಷ್ ವೈದ್ಯನಾದ ಎಡ್ವರ್ಡ್ ಜೆನ್ನರ್ (ಬಲಕ್ಕೆ)
[ಕೃಪೆ]
Paré and Ar-Rāzī: Courtesy National Library of Medicine
From the book Great Men and Famous Women
[ಪುಟ 7ರಲ್ಲಿರುವ ಚಿತ್ರ]
ಫ್ರೆಂಚ್ ನಾಡಿಗನಾದ ಲೂಯಿ ಪ್ಯಾಶ್ಚರ್ ಕೀಟಾಣುವಿನಿಂದ ರೋಗವು ಉಂಟಾಗುತ್ತದೆ ಎಂಬುದನ್ನು ರುಜುಪಡಿಸಿದನು
[ಕೃಪೆ]
© Institut Pasteur
[ಪುಟ 8ರಲ್ಲಿರುವ ಚಿತ್ರಗಳು]
ಮರಣವನ್ನು ಉಂಟುಮಾಡುವ ಪ್ರಧಾನ ಕಾರಣಗಳು ನಿರ್ಮೂಲಮಾಡಲ್ಪಟ್ಟರೂ, ಆಗಲೂ ವೃದ್ಧಾಪ್ಯದಿಂದಾಗಿ ಮರಣವು ಬರುವುದು