ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g03 10/8 ಪು. 30
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—2003
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಜೇನುಹುಳುಗಳು ಆನೆಗಳನ್ನು ಹಿಮ್ಮೆಟ್ಟಿಸುತ್ತವೆ
  • ಮಧುಮೇಹ ರೋಗವು ಭಾರತದಲ್ಲಿ ಹೆಚ್ಚಾಗುತ್ತಿದೆ
  • ಎರಡು ಜೋಡಿ ನರವ್ಯೂಹಗಳು?
  • ಸೊಳ್ಳೆಗಳಿಂದ ರಕ್ಷಣೆ
  • ಆನೆಗಳು ಮಿತ್ರರೋ, ಶತ್ರುಗಳೊ?
    ಎಚ್ಚರ!—1994
  • ಗುಡ್‌-ಬೈ ಹೇಳುವ ಸಮಯವೋ?
    ಎಚ್ಚರ!—1990
  • ಜಗತ್ತನ್ನು ಗಮನಿಸುವುದು
    ಎಚ್ಚರ!—2005
  • ಮಕ್ಕಳಲ್ಲಿ ಬೊಜ್ಜು ಪರಿಹಾರ?
    ಎಚ್ಚರ!—2009
ಇನ್ನಷ್ಟು
ಎಚ್ಚರ!—2003
g03 10/8 ಪು. 30

ಜಗತ್ತನ್ನು ಗಮನಿಸುವುದು

ಜೇನುಹುಳುಗಳು ಆನೆಗಳನ್ನು ಹಿಮ್ಮೆಟ್ಟಿಸುತ್ತವೆ

ಕೆನ್ಯದಲ್ಲಿ ಆನೆಗಳ ಸಂಖ್ಯೆಯು ವೃದ್ಧಿಯಾಗುತ್ತಿದೆ, ಆದರೆ ಅದೇ ಸಮಯದಲ್ಲಿ ಇದು ಸಮಸ್ಯೆಗಳನ್ನೂ ತಂದೊಡ್ಡಿದೆ. ಅಲೆಮಾರಿ ಆನೆಗಳು ಮರಗಳನ್ನು ಮತ್ತು ಪೈರುಗಳನ್ನು ಧ್ವಂಸಮಾಡುತ್ತಿವೆ, ಹಾಗೂ ಪ್ರತಿ ಎರಡು ವಾರಕ್ಕೆ ಸರಾಸರಿ ಒಬ್ಬ ವ್ಯಕ್ತಿಯನ್ನು ಮೆಟ್ಟಿಕೊಲ್ಲುತ್ತವೆ. ಹಾಗಿದ್ದರೂ, ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞರಾದ ಫ್ರಿಟ್ಸ್‌ ಓಲ್‌ರ್ಯಾಟ್‌ರವರು ಸಂಭವನೀಯ ತಡೆಗಟ್ಟನ್ನು ಕಂಡುಹಿಡಿದಿದ್ದಾರೆ. ಆನೆಗಳು ತಮಗರಿವಿಲ್ಲದೆ ಒಂದು ಜೇನುಗೂಡನ್ನು ಕೆರಳಿಸಿದಾಗ, “ಅವುಗಳು ಅದರ ಕುರಿತು ನಿಶ್ಚಿಂತವಾಗಿರುವುದಿಲ್ಲ. ಅವುಗಳು ಕೂಡಲೆ ಅಲ್ಲಿಂದ ಪಲಾಯನಗೈಯುತ್ತವೆ ಮತ್ತು ಜೇನುಹುಳುಗಳು ಅವುಗಳನ್ನು ಅನೇಕ ಕಿಲೋಮೀಟರ್‌ಗಳಷ್ಟು ದೂರದ ವರೆಗೆ ಹಿಂದಟ್ಟುತ್ತವೆ.” ಆ ಜೇನುಹುಳುಗಳು ಆನೆಗಳನ್ನು, ಸುಲಭಭೇದ್ಯವಾಗಿರುವ ಸ್ಥಳಗಳ ಮೇಲೆ ಅಂದರೆ ಕಣ್ಣುಗಳ ಸುತ್ತ, ಕಿವಿಗಳ ಹಿಂದೆ, ಸೊಂಡಿಲಿನ ಕೆಳಭಾಗಕ್ಕೆ, ಮತ್ತು ಹೊಟ್ಟೆಯ ಮೇಲೆ ಚುಚ್ಚುತ್ತವೆ. ಓಲ್‌ರ್ಯಾಟ್‌ರವರು, ಆನೆಗಳು ಕ್ರಮವಾಗಿ ಭೇಟಿನೀಡುವ ಕಾಡುಗಳಲ್ಲಿನ ಕೆಲವು ಮರಗಳಲ್ಲಿ ಆಫ್ರಿಕನ್‌ ಜೇನುಹುಳಗಳುಳ್ಳ ಗೂಡುಗಳನ್ನು ಮತ್ತು ಕೆಲವು ಮರಗಳಲ್ಲಿ ಖಾಲಿಯಾಗಿರುವ ಜೇನುಗೂಡುಗಳನ್ನು ಇಟ್ಟರು. ನ್ಯೂ ಸಯಂಟಿಸ್ಟ್‌ ವಾರ್ತಾಪತ್ರಿಕೆಯ ವರದಿಗನುಸಾರ, ಜೇನುಹುಳುಗಳುಳ್ಳ ಗೂಡುಗಳಿದ್ದ ಮರಗಳಲ್ಲಿ ಒಂದನ್ನೂ ಆನೆಗಳು ದಾಳಿಮಾಡಲಿಲ್ಲ ಮತ್ತು ಖಾಲಿಯಾಗಿದ್ದ ಜೇನುಗೂಡುಗಳಿದ್ದ ಮರಗಳಲ್ಲಿ, ಮೂರರಲ್ಲಿ ಒಂದು ಮರವನ್ನು ದಾಳಿಮಾಡಿದವು. ಆದರೆ ಅವುಗಳು, ಜೇನುಗೂಡಿಲ್ಲದ 10 ಮರಗಳಲ್ಲಿ 9 ಮರಗಳನ್ನು ದಾಳಿಮಾಡಿದವು. ಅಷ್ಟುಮಾತ್ರವಲ್ಲದೆ, ಕೆರಳಿಸಲ್ಪಟ್ಟ ಜೇನುಹುಳುಗಳ ಶಬ್ದವನ್ನು ಧ್ವನಿವರ್ಧಕದಿಂದ ಕೇಳಿಸಿಕೊಂಡರೂ ಆನೆಗಳು ಹೆದರುತ್ತವೆ ಎಂಬುದನ್ನು ಓಲ್‌ರ್ಯಾಟ್‌ರವರು ಕಂಡುಕೊಂಡರು.(g03 7/08)

ಮಧುಮೇಹ ರೋಗವು ಭಾರತದಲ್ಲಿ ಹೆಚ್ಚಾಗುತ್ತಿದೆ

ಲೋಕವ್ಯಾಪಕವಾಗಿ 17 ಕೋಟಿಗಿಂತಲೂ ಹೆಚ್ಚಿನ ಜನರಿಗೆ ಮಧುಮೇಹ ರೋಗವಿದೆ ಎಂದು ಲೋಕಾರೋಗ್ಯ ಸಂಸ್ಥೆಯು ಅಂದಾಜುಮಾಡಿದೆ. ಭಾರತವು ಅತ್ಯಧಿಕ ಸಂಖ್ಯೆಯಲ್ಲಿ ಮಧುಮೇಹಿಗಳನ್ನು ಹೊಂದಿರುವ ದೇಶವಾಗಿದೆ. ಇಲ್ಲಿ 3.2 ಕೋಟಿಯಷ್ಟು ಜನರು ಈ ರೋಗದಿಂದ ಬಾಧಿತರಾಗಿದ್ದಾರೆ ಮತ್ತು ಈ ಸಂಖ್ಯೆಯು ಇಸವಿ 2005ರೊಳಗಾಗಿ 5.7ಕ್ಕೆ ಹೆಚ್ಚುವುದೆಂದು ನಿರೀಕ್ಷಿಸಲಾಗಿದೆ ಎಂಬುದಾಗಿ ಡೆಕ್ಕನ್‌ ಹೆರಲ್ಡ್‌ ವಾರ್ತಾಪತ್ರಿಕೆಯು ವರದಿಮಾಡಿದೆ. ಶ್ರೀಲಂಕಾದಲ್ಲಿ ಜರಗಿದ, ಏಷ್ಯಾದಲ್ಲಿನ ಮಧುಮೇಹ ರೋಗದ ಕುರಿತಾದ ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ, ರೋಗದ ತೀವ್ರಗತಿಯ ಹೆಚ್ಚುವಿಕೆಗೆ ಜನರ ಆಹಾರಪಥ್ಯೆ ಮತ್ತು ಜೀವನಶೈಲಿಯು ಮುಖ್ಯ ಕಾರಣಗಳಾಗಿವೆ ಎಂದು ಪರಿಣಿತರು ತಿಳಿಸಿದರು. ಇವುಗಳೊಂದಿಗೆ ಮಾನಸಿಕ ಒತ್ತಡ, ಅನುವಂಶೀಯ ಕಾರಣಗಳು, ಜನನದ ಸಮಯದಲ್ಲಿನ ಕಡಿಮೆ ತೂಕ, ಮತ್ತು ನವಜನಿತ ಶಿಶುಗಳಿಗೆ ಅತಿಯಾಗಿ ಆಹಾರವನ್ನು ಉಣಿಸುವುದು ಸಹ ಕೆಲವು ಕಾರಣಗಳಾಗಿದ್ದವು. ಎಲ್ಲಾ ದೇಶಗಳಿಗಿಂತಲೂ ಭಾರತದಲ್ಲಿ ಮಧುಮೇಹಿಗಳ ಚಿಕಿತ್ಸೆಗೆ ತಗಲುವ ಖರ್ಚು ತೀರಾ ಕಡಿಮೆ. ಹೀಗಿದ್ದರೂ, ಮಧುಮೇಹ ಸಂಬಂಧಿತ ಆರೋಗ್ಯ ಸಮಸ್ಯೆಗಳು ಮತ್ತು ಅದರಿಂದುಂಟಾಗುವ ಮರಣದ ಪರಿಮಾಣವು ತೀರಾ ಹೆಚ್ಚಾಗಿದೆ. ಭಾಗಶಃ ಇದಕ್ಕೆ ಕಾರಣವು, ರೋಗದ ಕುರಿತಾದ ತಿಳಿವಳಿಕೆಯ ಕೊರತೆ ಮತ್ತು ರೋಗವನ್ನು ಬಹಳ ತಡವಾಗಿ ಗುರುತಿಸುವುದೇ ಆಗಿದೆ. ಭಾರತದ ಅತಿ ದೊಡ್ಡ ನಗರಗಳಲ್ಲಿ ನಡೆಸಲಾದ ಒಂದು ಸಮೀಕ್ಷೆಯ ಪ್ರಕಾರ, ವಯಸ್ಕರ ಜನಸಂಖ್ಯೆಯಲ್ಲಿ 12 ಪ್ರತಿಶತ ಜನರು ಮಧುಮೇಹಿಗಳಾಗಿದ್ದಾರೆ ಮತ್ತು 14 ಪ್ರತಿಶತ ಜನರಿಗೆ ಮಧುಮೇಹ ರೋಗವು ಸಂಭವಿಸುವ ಮುನ್ನ ಕಂಡುಬರುವ ರೋಗಲಕ್ಷಣವಿದೆ, ಅಂದರೆ ಅವರು ಗ್ಲೂಕೋಸ್‌ ಅನ್ನು ಸರಿಯಾಗಿ ಪರಿವರ್ತಿಸಲು ಅಶಕ್ತರಾಗಿದ್ದಾರೆ. (g03 7/22)

ಎರಡು ಜೋಡಿ ನರವ್ಯೂಹಗಳು?

ಮಾನವರು ಪ್ರೀತಿ ಮತ್ತು ಕೋಮಲತೆಯನ್ನು ಗ್ರಹಿಸಲು ಶಕ್ತರಾಗುವಂತೆ ವಿಶೇಷವಾದ ನರವ್ಯೂಹವನ್ನು ಹೊಂದಿದ್ದಾರೆ ಎಂದು ಜರ್ಮನಿಯ ವೈಜ್ಞಾನಿಕ ಪತ್ರಿಕೆಯಾದ ಬಿಲ್ಟ್‌ ಡೇರ್‌ ವಿಸ್‌ಎನ್‌ಶ್ಯಾಫ್ಟ್‌ ವರದಿಸುತ್ತದೆ. ಒಬ್ಬಾಕೆ ಸ್ತ್ರೀಯು ತನ್ನ ಮುಖ್ಯ ಸ್ಪರ್ಶೇಂದ್ರಿಯದ ಸಾಮರ್ಥ್ಯವನ್ನು ಕಳೆದುಕೊಂಡಿದ್ದರೂ, ಅವಳ ಮೇಲೆ ಪೈಂಟ್‌ಬ್ರಷ್‌ನಿಂದ ಮೃದುವಾಗಿ ಒರಸಿದಾಗ ಆಕೆಗೆ ಒಂದು ಹಿತಕರವಾದ ಇಂದ್ರಿಯಾನುಭವವಾದದ್ದನ್ನು ಸ್ವೀಡಿಷ್‌ ವಿಜ್ಞಾನಿಗಳು ಕಂಡುಹಿಡಿದರು. ಅವರು ಕಂಡುಕೊಂಡದ್ದೇನೆಂದರೆ ಹಿತಕರವಾದ ಈ ಅನುಭವವು, ಚರ್ಮದಲ್ಲಿರುವ ಟ್ಯಾಕ್‌ಟೈಲ್‌ ಸಿ ನರವ್ಯೂಹ ಎಂದು ಕರೆಯಲಾದ ನಿಧಾನ-ವಾಹಕ ತಂತುಗಳುಳ್ಳ ಎರಡನೆಯ ನರವ್ಯೂಹದಿಂದ ಉಂಟಾಗುತ್ತದೆ. ಈ ನರವ್ಯೂಹವು ಕೇವಲ ಮೃದುವಾದ ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತದೆ ಮತ್ತು ಭಾವನೆಗಳೊಂದಿಗೆ ವ್ಯವಹರಿಸುವ ಮಿದುಳಿನ ಭಾಗವನ್ನು ಕ್ರಿಯಾಶೀಲವನ್ನಾಗಿ ಮಾಡುತ್ತದೆ. ಮಾನವರಿಗೆ ಏಕೆ ಎರಡು ಜೋಡಿ ನರವ್ಯೂಹಗಳಿರಬಹುದು ಎಂಬುದರ ಕುರಿತು ಹೇಳಿಕೆ ನೀಡುತ್ತಾ ಇಂಟರ್‌ನ್ಯಾಷನಲ್‌ ಹೆರಲ್ಡ್‌ ಟ್ರಿಬ್ಯೂನ್‌ ಎಂಬ ವಾರ್ತಾಪತ್ರಿಕೆಯು ತಿಳಿಸುವುದು: “ನಿಧಾನ-ವಾಹಕ ತಂತುಗಳು, ಒಂದುವೇಳೆ ನಾವು ತಾಯಿಯ ಗರ್ಭದಲ್ಲಿರುವಾಗಲೆ ಅಥವಾ ಹುಟ್ಟಿ ಕೆಲವು ತಾಸಿನೊಳಗೆ, ಹೀಗೆ ಜೀವನದ ಅತ್ಯಾರಂಭದ ತಾಸುಗಳಲ್ಲೇ ಕ್ರಿಯೆಗೈಯಲಾರಂಭಿಸುತ್ತವೆ. ಆದರೆ, ಶೀಘ್ರ-ವಾಹಕ ತಂತುಗಳು, ಜನನದ ನಂತರ ನಿಧಾನವಾಗಿ ಬೆಳೆಯಲಾರಂಭಿಸುತ್ತವೆ. ಆದುದರಿಂದಲೇ, ನವಜನಿತ ಶಿಶುಗಳು ಸ್ಪರ್ಶವನ್ನು ಗ್ರಹಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆಯುವ ಮುನ್ನವೇ ತಮ್ಮ ಹೆತ್ತವರ ಸ್ಪರ್ಶದಲ್ಲಿರುವ ಪ್ರೀತಿಯನ್ನು ಗ್ರಹಿಸಲು ಶಕ್ತವಾಗಿರಬಹುದು.” (g03 7/22)

ಸೊಳ್ಳೆಗಳಿಂದ ರಕ್ಷಣೆ

“ಸೊಳ್ಳೆಗಳು 2,500ಕ್ಕಿಂತಲೂ ಹೆಚ್ಚಿನ ಜಾತಿಗಳಲ್ಲಿದ್ದು ಭೂಮ್ಯಾದ್ಯಂತ ಅಸ್ತಿತ್ವದಲ್ಲಿವೆ,” ಎಂದು ಮೆಹೀಕೋ ಡೆಸ್ಕೋನೋಸೀ ಡೋ ಪತ್ರಿಕೆಯು ತಿಳಿಸುತ್ತದೆ. ಗಂಡುಸೊಳ್ಳೆಗಳು ಮತ್ತು ಹೆಣ್ಣುಸೊಳ್ಳೆಗಳು ಇವೆರಡೂ ಮಕರಂದವನ್ನು ಸೇವಿಸುತ್ತವಾದರೂ, ಹೆಣ್ಣುಸೊಳ್ಳೆಗಳು ಮಾತ್ರ ಕಚ್ಚುತ್ತವೆ. ಇದರ ಪರಿಣಾಮವಾಗಿ, ಅವುಗಳು ಮಲೇರಿಯ, ಡೆಂಗು ಜ್ವರ, ಮತ್ತು ವೆಸ್ಟ್‌ ನೈಲ್‌ ವೈರಸ್‌ ಮುಂತಾದವುಗಳನ್ನು ಮಾನವರಿಗೆ ರವಾನಿಸುತ್ತವೆ. ಸೊಳ್ಳೆಗಳಿಂದ ನೀವು ನಿಮ್ಮನ್ನೇ ಹೇಗೆ ರಕ್ಷಿಸಿಕೊಳ್ಳಬಲ್ಲಿರಿ? ಆ ವರದಿಯು ಈ ಮುಂದಿನ ಸಲಹೆಗಳನ್ನು ಕೊಡುತ್ತದೆ: (1) ಸೊಳ್ಳೆಗಳು ಅತೀ ಹೆಚ್ಚು ಕ್ರಿಯಾಶೀಲವಾಗಿರುವ ಸಮಯಗಳಾದ ಮುಸ್ಸಂಜೆಯಲ್ಲಿ ಮತ್ತು ರಾತ್ರಿವೇಳೆಯಲ್ಲಿ ಹೊರಗೆ ಹೋಗಬೇಡಿರಿ. (2) ಸೊಳ್ಳೆ ಪರದೆಯನ್ನು ಉಪಯೋಗಿಸಿರಿ, ಅದರಲ್ಲಿಯೂ ಕೀಟನಾಶಕಪೂರಿತವಾದ ಪರದೆಗಳು ಉತ್ತಮವಾಗಿರುತ್ತವೆ. (3) ಸಡಿಲವಾಗಿರುವ, ಉದ್ದವಾದ ತೋಳಿರುವ ಬಟ್ಟೆಯನ್ನು ಮತ್ತು ಪ್ಯಾಂಟನ್ನು ಧರಿಸಿರಿ ಹಾಗೂ ಅಗತ್ಯವಿದ್ದರೆ ಸಂಪೂರ್ಣ ದೇಹವನ್ನು ಮುಚ್ಚಿಕೊಳ್ಳಲು ನೆಟ್‌ ಉಳ್ಳ ಒಂದು ಟೋಪಿಯನ್ನು ಧರಿಸಿರಿ. (4) ಮುಚ್ಚಲ್ಪಟ್ಟಿರದಂಥ ಚರ್ಮದ ಭಾಗಗಳ ಮೇಲೆ ಕೀಟ ವಿಕರ್ಷಕ ಮದ್ದನ್ನು ಹಚ್ಚಿಕೊಳ್ಳಿ. (5) 300 ಮಿಲಿಗ್ರಾಮ್‌ ವಿಟಮಿನ್‌ B1 ಅನ್ನು ಪ್ರತಿದಿನ ಸೇವಿಸಿರಿ. ಇದು, ಕೆಲವು ಜನರ ಬೆವರನ್ನು ಸೊಳ್ಳೆಗಳಿಗೆ ವಿಕರ್ಷಕ ಮದ್ದಿನೋಪಾದಿ ಕ್ರಿಯೆಗೈಯುವಂತೆ ಮಾಡುತ್ತದೆ. (6) ಕೊಳಚೆ ಪ್ರದೇಶಗಳಲ್ಲಿರುವಾಗ, ನಿಮ್ಮ ಚರ್ಮದ ಮೇಲೆ ಕೆಸರನ್ನು ಒಂದು ತುರ್ತು ರಕ್ಷಕ ಸಾಧನವಾಗಿ ಹಚ್ಚಿಕೊಳ್ಳಿರಿ. ಒಂದುವೇಳೆ ನೀವು ಸೊಳ್ಳೆಯಿಂದ ಕಡಿಯಲ್ಪಟ್ಟಲ್ಲಿ, ಪರಚಿಕೊಳ್ಳಬೇಡಿರಿ ಏಕೆಂದರೆ ರಕ್ತಸ್ರಾವವು ಸೋಂಕಿಗೆ ನಡೆಸಬಲ್ಲದು. ಅದರ ಬದಲು ಕೂಡಲೆ ಕ್ಯಾಲಮೈನ್‌ ಮುಲಾಮನ್ನು ಹಚ್ಚಿರಿ.(g03 8/08)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ