ಗುಡ್-ಬೈ ಹೇಳುವ ಸಮಯವೋ?
ಒಂದು ವಿಚಿತ್ರ ಯುದ್ಧ ಆಫ್ರಿಕಾದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ಪ್ರದೇಶ, ರಾಜಕೀಯ ಆದರ್ಶ ಅಥವಾ ಧಾರ್ಮಿಕ ನಂಬಿಕೆಗಳಿಂದಾಗಿ ನಡೆಯುವ ಯುದ್ಧ ಇದಲ್ಲ. ಮಾನವ ಪ್ರಾಣ ನಷ್ಟ, ದುಃಖಕರವಾದರೂ ಅನೇಕ ಯುದ್ಧಗಳಿಗೆ ಹೋಲಿಸುವಾಗ ಇಲ್ಲಿ ಕೊಂಚವೇ. ಆದರೂ ಈ ಯುದ್ಧ ಭೂಲೋಕದ ಸುತ್ತಲೂ ಜನಾಂಗಗಳ ಗಮನವನ್ನು ಸೆಳೆಯುತ್ತಾ ಇದೆ. ಆನೆಗಳ ಸಂಬಂಧದ ಯುದ್ಧವೇ ಇದು.
ಈ ಯುದ್ಧ ವನರಕ್ಷಕರನ್ನು ಮತ್ತು ಬೇಟೆಕಾವಲುಗಾರರನ್ನು ಕಳ್ಳಬೇಟೆಗಾರರ ವಿರುದ್ಧವಾಗಿರಿಸುತ್ತದೆ. ವನರಕ್ಷಕ ಮತ್ತು ಬೇಟೆಕಾವಲುಗಾರರಿಗೆ ಬೆಂಬಲವಾಗಿ ಕಾಯಿದೆಗಳು, ಸರಕಾರಗಳು ಮತ್ತು ನಿಸರ್ಗಪಾಲಕರಿದ್ದಾರೆ. ಕಳ್ಳಬೇಟೆಗಾರರೊಂದಿಗೆ ಆಧುನಿಕ ಆಯುಧಗಳಿದ್ದು ಅವರು ಆವಶ್ಯಕತೆ ಮತ್ತು ಲೋಭದಿಂದ ಪ್ರಚೋದಿಸಲ್ಪಡುತ್ತಾರೆ. ಆನೆಯ ದಾಡೆಯೆಂದರೆ ಹಣವೆಂದರ್ಥ. ಬಡದೇಶಗಳಲ್ಲಿ ಅನೇಕ ವೇಳೆ, ಇದನ್ನು ಸಂಪತ್ತೆಂದು ಭಾವಿಸಲಾಗುವುದಿಲ್ಲ. ಎರಡೂ ಪಕ್ಷಗಳು ಬಂದೂಕು ಹಾರಿಸುವುದು ಕೊಲ್ಲುವ ಉದ್ದೇಶದಿಂದಲೇ. ಆದರೆ ಆನೆಗಳ ಕುರಿತು ಇಷ್ಟು ಚಿಂತೆಯೇಕೆ? ಅವುಗಳಿಗಿರುವ ಅಪಾಯ ನಿಜವಾಗಿಯೂ ಅಷ್ಟು ಗಂಭೀರವೋ?
ಕಳ್ಳಬೇಟೆಯ ವೆಚ್ಚ
ಯೋಚಿಸಿ. 1930ರ ದಶಕದಲ್ಲಿ ಆಫ್ರಿಕಾದಲ್ಲಿ ಸುಮಾರು 1 ಕೋಟಿ ಆನೆಗಳಿದ್ದವು. 1979ರೊಳಗೆ 13 ಲಕ್ಷ ಆನೆಗಳು ಉಳಿದಿದ್ದವು. ಈಗ, ಹತ್ತು ವರ್ಷಗಳ ಬಳಿಕ ಅವುಗಳ ಸಂಖ್ಯೆ ಅರ್ಧಕ್ಕಿಳಿದಿದೆ. ಇಂದು ಆಫ್ರಿಕಾದ ಆನೆಗಳ ಅಂದಾಜು ಸಂಖ್ಯೆ ಸುಮಾರು 6 ಲಕ್ಷ 25 ಸಾವಿರ. ಈ ತೀವ್ರ ಇಳಿಮುಖವೇಕೆ? ಕಳ್ಳಬೇಟೆಯ ಮೇಲೆ ವ್ಯಾಪಕವಾಗಿ ದೂರು ಹೊರಿಸಲಾಗುತ್ತದೆ. ಇದು ಯಂತ್ರಕಲಾಶಾಸ್ತ್ರದ ಫಲವಾಗಿ ಆಧುನಿಕ ದಿನಗಳಲ್ಲಿ ವೃದ್ಧಿಯಾಗುತ್ತಿರುವ ಪುರಾತನ ಪಾತಕ.
ಗತಕಾಲಗಳಲ್ಲಿ, ಆಫ್ರಿಕಾದ ಕಳ್ಳಬೇಟೆಗಾರರು ಬಿಲ್ಲು, ಬಾಣ ಅಥವಾ ಈಟಿಗಳಿದ್ದ ಬುಡಕಟ್ಟು ಜನರಾಗಿದ್ದರು. ಶಸ್ತ್ರವಿಲ್ಲದ ಕಾವಲುಗಾರನನ್ನು ನೋಡಿದರೂ ಇವರು ಓಡಿ ಹೋಗುತ್ತಿದ್ದರು. ಇಂದು, ಕಾವಲುಗಾರರೂ ಕಳ್ಳಬೇಟೆಗಾರರೂ ಶಸ್ತ್ರಸಜ್ಜಿತರು ಮತ್ತು ಕಳ್ಳಬೇಟೆಗಾರರು ಹೆಚ್ಚು ಶಸ್ತ್ರಸಜ್ಜಿತರು. ಆಫ್ರಿಕಾದಲ್ಲಿ ವರ್ಷಗಟ್ಟಲೆ ನಡೆದುಬಂದಿರುವ ಅಶಾಂತಿಯ ಸ್ಥಿತಿ ಎಷ್ಟೋ ಬಂದೂಕುಗಳನ್ನು ಬಿಟ್ಟು ಹೋಗಿಯದೆ ಮತ್ತು ಇದು ಪಾತಕಿಗಳಿಗೆ ಸುಲಭವಾಗಿ ದೊರೆಯುತ್ತದೆ. ಇಂದು ಕಳ್ಳಬೇಟೆಗಾರರು ತಂಡವಾಗಿ ಹೋಗಿ ಮಹಾಶಕ್ತಿಯ ಸ್ವಯಂಚಲಿತ ಆಯುಧಗಳಿಂದ ಆನೆಗಳ ಬೇಟೆಯಾಡುತ್ತಾರೆ. ಕೆಲವೇ ನಿಮಿಷಗಳಲ್ಲಿ ಅನೇಕ ಆನೆಗಳನ್ನು ಕೊಂದು ಸರಪಣಿ ಗರಗಸದಿಂದ ಅವುಗಳ ತಲೆಯ ಮುಂಭಾಗವನ್ನು ಸಿಗಿದು ದಾಡೆಗಳನ್ನು ತೆಗೆದು ಬೇಟೆಯಾಡುತ್ತಾ ಹೋಗುತ್ತಾರೆ. ದಂತದ ಬೆಲೆ ಲೋಕ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಕಳ್ಳಬೇಟೆಗಾರರು ಒಂದೇ ದಿನದಲ್ಲಿ ಸಾವಿರಾರು ಡಾಲರುಗಳನ್ನು ಗಳಿಸಬಲ್ಲರು; ಅವರ ಹೊರೆಯಾಳುಗಳು ಸಹ ನೂರಾರು ಡಾಲರುಗಳನ್ನು ಸಂಪಾದಿಸಬಲ್ಲರು. ಯು. ಎಸ್. ನ್ಯೂಸ್ ಆ್ಯಂಡ್ ವರ್ಲ್ಡ್ ರಿಪೋರ್ಟ್ ಹೇಳುವಂತೆ, “ಇವರು ಸ್ಥಳೀಕ ಬುಡಕಟ್ಟು ವಂಶಸ್ಥರಲ್ಲ. ಹೆಚ್ಚು ಹಣವಿರುವ, ವ್ಯಾಪಾರವನ್ನು ನಡಿಸುವ ಸುಸಂಸ್ಕೃತ ಹಾಗೂ ಕನಿಕರರಹಿತ ಕಸುಬಿನವರು.”
ಇವರು ಅತ್ಯುತ್ತಮ ವ್ಯಾಪಾರವನ್ನೂ ಮಾಡಿದ್ದಾರೆ. 1973ರಿಂದ ಕೆನ್ಯದ ಆನೆಗಳ ಸಂಖ್ಯೆ 85 ಸೇಕಡಾ, ಟಾನ್ಸೇನಿಯದಲ್ಲಿ 53 ಸೇಕಡಾ ಮತ್ತು ಯುಗಾಂಡದಲ್ಲಿ 89 ಸೇಕಡಾ ಕೆಳಗಿಳಿದಿವೆ. ವಾಸ್ತವವಾಗಿ, ಪ್ರತಿ ವರ್ಷ ಸುಮಾರು 70,000 ಆಫ್ರಿಕಾದ ಆನೆಗಳು ಹತಿಸಲ್ಪಡುತ್ತವೆ. ಇತ್ತೀಚೆಗೆ ಜಿಂಬಾಬ್ವೆ ಮತ್ತು ಕೆನ್ಯಾ ದೇಶಗಳು ತಮ್ಮ ವನರಕ್ಷಕರು ಕಳ್ಳಬೇಟೆಗಾರರನ್ನು ಕಂಡೊಡನೆ ಬಂದೂಕಿನಿಂದ ಹೊಡೆದು ಕೊಲ್ಲಲು ಆಜ್ಞೆಯನ್ನಿತ್ತಿವೆ. ಆದರೆ ಸಮಸ್ಯೆಯೇನಂದರೆ, ಕಳ್ಳಬೇಟೆಗಾರರು ಹೆಚ್ಚು ಶಕ್ತಿಯ ಬಂದೂಕಿಗಳಿಂದ ಪ್ರತ್ಯುತ್ತರ ಕೊಡುತ್ತಾರೆ. ಅವರು ಈ ಪಹರೆಯವರನ್ನೂ ಸಾಮಾನ್ಯ ಜನರನ್ನೂ ಇಷ್ಟ ಪೂರ್ವಕವಾಗಿ ಕೊಂದಿದ್ದಾರೆ. 1988ರ ಮಾಗಿಕಾಲದಲ್ಲಿ, ಕಳ್ಳಬೇಟೆಗಾರರ ಒಂದು ತಂಡ ಬೇಟೆ ಕಾವಲುಗಾರರ ಮುಖ್ಯ ಕಾರ್ಯಾಲಯಕ್ಕೆ ಆಕ್ರಮಣಮಾಡಿ, ಅವರನ್ನು ಕಟ್ಟಿ ಹಾಕಿ, ಹೊಡೆದು ಕೆನ್ಯಾದ ಪಾರ್ಕುಗಳಲ್ಲಿರುವ ಬಿಳಿ ಖಡ್ಗ ಮೃಗ ಜಾತಿಯವುಗಳಲ್ಲಿ ಕೊನೆಯ ಐದು ಖಡ್ಗ ಮೃಗಗಳನ್ನು ಕೊಂದರು. ಆದರೆ ಈ ಕಳ್ಳ ಬೇಟೆಗಾರರು ಕೇವಲ ಕೊಂಬುಗಳನ್ನು ಮಾತ್ರ ತೆಗೆದು ಕೊಂಡು ಹೋದರು. ಈ ವಿರಳ ಪ್ರಾಣಿಗಳ ದೊಡ್ಡ ಹೆಣಗಳು ಕೊಳೆಯುವಂತೆ ಬಿಟ್ಟು ಹೋದರು.
ಆನೆಗಳನ್ನು ಏಕೆ ರಕ್ಷಿಸಬೇಕು?
ಆನೆಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಈ ಕಾವಲುಗಾರರೇ ಸಾಯುತ್ತಿದ್ದಾರೆ. ಈ ಮಧ್ಯೆ, ಈ ಶತಮಾನ ಮುಗಿಯುವುದರೊಳಗೆ ಆಗಬಹುದಾದ ಆನೆಗಳ ನಿರ್ಮೂಲವನ್ನು ಮುಂದೆ ದೂಡಲು ಒಂದು ಅಂತರ್‌ರಾಷ್ಟ್ರೀಯ ನಿಸರ್ಗ ಪಾಲನೆಯ ಪ್ರಯತ್ನ ನಡೆಯುತ್ತಾ ಇದೆ. ಆದರೆ ಅನೇಕರು, “ಆನೆಗಳ ವಿಷಯ ಇಷ್ಟು ರಂಪವೇಕೆ?” ಎಂದು ಪ್ರಶ್ನಿಸಬಹುದು. ಎಷ್ಟೆಂದರೂ ಪ್ರಾಣಿಜಾತಿ ನಿರ್ಮೂಲ ಈ ಗ್ರಹದಲ್ಲಿ ಹೊಸದಲ್ಲ. ಹೆಸರಾಂತ ಡೈನೊಸಾರ್‌ಗಳು ನಿರ್ನಾಮವಾಗಲಿಲ್ಲವೇ? ಹಾಗಾದರೆ ಆನೆಗಳು ನಿರ್ಮೂಲವಾದರೆ ಚಿಂತೆಯೇಕೆ?
ಅನೇಕರಿಗೆ ಇದರ ಉತ್ತರ ಆ ಪ್ರಾಣಿಯ ಗಾಂಭೀರ್ಯದಲ್ಲಿದೆ. ಅದು ರಚನೆಯ ಅತ್ಯುತ್ಕೃಷ್ಟ ಕೃತಿ. ಕಾಡಿನಲ್ಲಿ ಆನೆಗಳ ಹಿಂಡನ್ನು ಪ್ರೇಕ್ಷಿಸುವವರು ಅವುಗಳು ನಿರ್ಮೂಲವಾಗುತ್ತವೆಂಬ ಪ್ರತೀಕ್ಷೆಯಿಂದ ನಷ್ಟಭಾವವನ್ನು ಅನುಭವಿಸುವರೆಂಬದು ನಿಸ್ಸಂಶಯ. ಅವು ತಮ್ಮ ಮರಿಗಳಿಗೆ ತರಬೇತು ಕೊಟ್ಟು ಕಾಪಾಡುವುದು, ಅವುಗಳ ಸೊಂಡಿಲಿನ ಆಶ್ಚರ್ಯವಾದ ಕೌಶಲ್ಯ ಮತ್ತು ಅವುಗಳ ಭಯಭಕ್ತಿ ಹುಟ್ಟಿಸುವ ಬೃಹದಾಕಾರ—ಇವೆಲ್ಲಾ ಅನುಪಮ ವಿವೇಕದ ರಚಕನೊಬ್ಬನಿದ್ದಾನೆಂಬುದಕ್ಕೆ ಅಪ್ಪಟ ಸಾಬೀತುಗಳು.
ಅಷ್ಟೇ ಅಲ್ಲ, ಆನೆಗಳು ತಾವು ಜೀವಿಸುತ್ತಿರುವ ಪರಿಸರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಮನುಷ್ಯನನ್ನು ಬಿಟ್ಟರೆ, ಆನೆ ಇತರ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚು ಸುತ್ತುಗಟ್ಟನ್ನು ಬದಲಾಯಿಸಿ ರೂಪಿಸುತ್ತವೆ. ಆದರೆ ಮಾನವನಿಗೆ ಅಸದೃಶವಾಗಿ, ಆನೆಗಳೋ ಪರಿಸರವನ್ನು ಇತರ ಜೀವಿಗಳಿಗೆ ಹೆಚ್ಚು ವಾಸಯೋಗ್ಯವಾಗಿ ಮಾಡುತ್ತವೆ. ಇದು ಹೇಗೆ? ಅವುಗಳ ಸರ್ವಗ್ರಾಸಿ ಹಸಿವೆಯೇ ಇದರ ಕೀಲಿಕೈ. ಒಂದು ಆನೆ ಪ್ರತಿ ದಿನ 300 ಪೌಂಡು ಸಸ್ಯಾಹಾರವನ್ನು ತಿನ್ನುತ್ತದೆ!
ದಟ್ಟವಾದ ಕಾಡುಗಳಲ್ಲಿ ಆನೆಗಳು ರೆಂಬೆಗಳನ್ನೂ ಚಿಕ್ಕಮರಗಳನ್ನೂ ಕೆಡವಿಹಾಕುವುದರಿಂದ ಸೂರ್ಯಪ್ರಕಾಶ ದಟ್ಟವಾದ ಎಲೆಗಳ ಚಪ್ಪರವನ್ನು ತೂರಿ ಬರುವಂತಾಗುತ್ತದೆ. ಈ ಬೆಳಕು ನೆಲದ ಸಸ್ಯಗಳು ಬೆಳೆಯುವಂತೆ ಮಾಡುವುದರಿಂದ ಅದು ಚಿಕ್ಕ ಪ್ರಾಣಿಗಳಿಗೆ, ಅಂದರೆ ಕಾಡುಕೋಣ, ಗೊರಿಲ್ಲ ಮತ್ತು ಕಾಡು ಹಂದಿಗಳಿಗೆ ಆಹಾರವನ್ನೊದಗಿಸುತ್ತದೆ. ಆಫ್ರಿಕಾದ ವಿಶಾಲ ಹುಲ್ಲುಗಾಡಿನಲ್ಲಿ ಅಥವಾ ಸವಾನ್ವಗಳಲ್ಲಿ ಆನೆಗಳು ಇದೇ ರೀತಿಯ ಸೇವೆಯನ್ನೊದಗಿಸುತ್ತವೆ: ಅವುಗಳ ಮೇವಿನ ಅಭ್ಯಾಸದಿಂದಾಗಿ ಹುಲ್ಲು ಮತ್ತು ಕಾಡಿನ ಮಿಶ್ರ ಪ್ರದೇಶ ಬೆಳೆದು, ಈ ಪ್ರದೇಶವಿಲ್ಲದಿದ್ದರೆ ಇರಸಾಧ್ಯವಿರುವುದಕ್ಕಿಂತಲೂ ಹೆಚ್ಚು ವಿವಿಧತೆಯ ಸಸ್ಯಾಹಾರಿ ಪ್ರಾಣಿಗಳನ್ನು, ಜಿರಾಫೆ, ಜೀಬ್ರಾಗಳು ಸಣ್ಣ ಜಿಂಕೆ, ದೊಡ್ಡ ಜಿಂಕೆ ಮೊದಲಾದವುಗಳನ್ನು ಪೋಷಿಸುತ್ತವೆ.
ಆದರೆ ಈ ಅನ್ಯೋನ್ಯಾಶ್ರಯದ ಜಟಿಲ ಸರಪಣಿಯನ್ನು ಮುರಿಯುವುದು ಸುಲಭ. ಒಂದು ಪ್ರದೇಶದಲ್ಲಿ ಅನೇಕ ಆನೆಗಳು ನಷ್ಟವಾದರೆ ಅಥವಾ ಇನ್ನೊಂದರಲ್ಲಿ ತೀರಾ ಹೆಚ್ಚು ಆನೆಗಳನ್ನು ಒತ್ತಾಗಿ ಇಡುವುದಾದರೆ ಈ ಸರಪಣಿ ಮುರಿಯಸಾಧ್ಯವಿದೆ. ಮಾನವ ಸಂತತಿ ಇವರೆಡನ್ನೂ ಮಾಡುತ್ತದೆ. ಅಂದರೆ ರಕ್ಷಣಾವನಗಳ ಹೊರಗಿರುವ ಆನೆಗಳನ್ನು ನಿರ್ಮೂಲಮಾಡಿ ಆ ವನಗಳೊಳಗೆ ಮಿತಿಮೀರುವ ಸಂಖ್ಯೆಯಲ್ಲಿ ಆನೆಗಳನ್ನಿಡುತ್ತದೆ. ಹೀಗೆ ಆನೆಗಳು ಪಡುವ ಪಾಡು ಮನುಷ್ಯನು ಮಾಡುವ ನಿರ್ಮೂಲಗಳಲ್ಲಿ ಪ್ರತ್ಯೇಕತೆ ಏನೆಂಬುದನ್ನು ಚಿತ್ರಿಸುತ್ತದೆ: ಈ ನಿರ್ಮೂಲಗಳು ಒಂದು ಮಹಾ ಉದ್ದೇಶ ಅಥವಾ ರಚನೆಯ ಭಾಗವಲ್ಲ. ಬದಲಿಗೆ, ಅವು ಸ್ವಾರ್ಥದಿಂದ, ಅಂತಿಮ ಪರಿಣಾಮದ ಲಕ್ಷವಿಲ್ಲದೇ ಮಾಡುವ ನಿರ್ಮೂಲಗಳು. ಅಪೂರ್ಣ ಮತ್ತು ಸ್ವಾರ್ಥಿಯಾದ ಮಾನವನು ಈ ಭೂಗ್ರಹವನ್ನು ಅಂಕೆಯಲ್ಲಿಟ್ಟುಕೊಳ್ಳಲು ಯೋಗ್ಯನಲ್ಲವೆಂದು ಸಹ ಇದು ತೋರಿಸುತ್ತದೆ.
ಅವುಗಳನ್ನು ರಕ್ಷಿಸಲು ಹೋರಾಟ
ಈ ಸಂಹಾರದ ಪ್ರವಾಹವನ್ನು ತಡೆಯಲು ಹೋರಾಡುವ ಜನರಿದ್ದಾರೆ. ನಿಸರ್ಗ ರಕ್ಷಕ ಸಂಸ್ಥೆಗಳು ಮತ್ತು ಕೆಲವು ಸರಕಾರಗಳು ಆನೆಯನ್ನು ಕಾಪಾಡಲು ಶತಪ್ರಯತ್ನ ಮಾಡುತ್ತಿವೆ. ಆದರೆ ಅದನ್ನು ಹೇಗೆ ಸಾಧಿಸುದೆಂಬ ವಿಷಯ ಅವರೆಲ್ಲರೂ ಏಕಾಭಿಪ್ರಾಯದಿಂದಿಲ್ಲ. ಅಂತರ್‌ರಾಷ್ಟ್ರೀಯ ದಂತ ವ್ಯಾಪಾರವನ್ನು ನಿಷೇಧಿಸ ಬಾರದೆಂದು ಒಂದು ಗುಂಪು ನಿರ್ಣಯಿಸಿದೆ. ಅಂಥ ನಿಷೇಧ ಈ ವ್ಯಾಪಾರವನ್ನು ಗುಪ್ತ ರೀತಿಯಲ್ಲಿ ಮಾಡುವಂತೆ ಬಲಾತ್ಕರಿಸುವುದರಿಂದ ಅದನ್ನು ನಿಯಂತ್ರಿಸುವುದು ಕಷ್ಟಕರವೆಂದು ಆ ಗುಂಪಿನ ಅಭಿಪ್ರಾಯ. ಏಕೆಂದರೆ ಖಡ್ಗ ಮೃಗದ ಕೊಂಬಿನ ವ್ಯಾಪಾರದ ನಿಷೇಧವು ಖಡ್ಗ ಮೃಗ ನಿರ್ಮೂಲವಾಗುವುದನ್ನು ನಿಧಾನಿಸಲು ಏನೂ ಮಾಡಿರುವುದಿಲ್ಲ. ಆದರೂ, ಜೂನ್ 1989ರಲ್ಲಿ ಅನೇಕ ನಿಸರ್ಗ ರಕ್ಷಕ ಗುಂಪುಗಳು ದಂತ ವ್ಯಾಪಾರವನ್ನು ನಿಲ್ಲಿಸ ಬೇಕೆಂದು ಕರೆಕೊಟ್ಟಿವೆ. ಮೂರು ದಿನಗಳ ನಂತರ, ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ದಂತದ ಆಮದನ್ನು ನಿಷೇಧಿಸಿದರು. ದಂತ ವ್ಯಾಪಾರದ ಮೇಲೆ ಭೂವ್ಯಾಪಕ ನಿಷೇಧ ಸನ್ನಿಹಿತವಾಗಿದೆ.
ಒಂದು ನಿಸರ್ಗ ರಕ್ಷಕ ಗುಂಪು ಹತ್ತಾರು ಪ್ರದೇಶದಲ್ಲಿ 2 ಲಕ್ಷದಿಂದ 3 ಲಕ್ಷ ಆನೆಗಳನ್ನು ಕಾಪಾಡಲು ನಿರೀಕ್ಷಿಸುತ್ತದೆ. ಮಾನವ ಆತ್ಮಹಿತವನ್ನು ಸಂಬೋಧಿಸಿ, ಕಳ್ಳಬೇಟೆಯನ್ನು ತಡೆದಾಗ ಆನೆಗಳು ಪ್ರದೇಶಕ್ಕೆ ಹೆಚ್ಚು ಹಣವನ್ನು ತರುತ್ತವೆಂದು ಸ್ಥಳೀಕರಿಗೆ ಮಂದಟ್ಟು ಮಾಡಿ ಕೊಡುವುದರ ಮೂಲಕ ದಂತ ವ್ಯಾಪಾರವನ್ನು ತಡೆಯಲು ಅದು ಹಾರೈಸುತ್ತದೆ. ಈ ಕಾರ್ಯಕ್ರಮದಲ್ಲಿ ತುಸು ಸಾಫಲ್ಯ ಕಂಡುಬಂದಿದೆ.
ಆದರೆ ಆನೆಗಳ ಉಳಿಯುವಿಕೆ ಮಾನವ ಆತ್ಮಹಿತದ ಮೇಲೆ ಹೊಂದಿಕೊಂಡಿರುವುದು ಎಷ್ಟು ಸುಭದ್ರ? ಅವುಗಳಿಗೆ ಮೊದಲು ಅಪಾಯ ತಂದಿರುವುದು ಮಾನವ ಆತ್ಮಹಿತವೇ, ಅಲ್ಲವೇ? ದಂತ ವ್ಯಾಪಾರ ಹುಲುಸಾಗಿ ನಡೆಯುತ್ತಿದೆ. ಲೋಕಕ್ಕೆ ಮುದ್ರೆ, ಒಡವೆ ಮತ್ತು ಆಟದ ವಸ್ತುಗಳನ್ನು ಒದಗಿಸಲಿಕ್ಕಾಗಿ ಈ ಬೃಹದ್ಜೀವಿಗಳನ್ನು ಬಲಿಕೊಡಲಾಗುತ್ತದೆ. ಈ ಒಡವೆಗಳಲ್ಲಿ 80 ಸೇಕಡಾ, ಕಳ್ಳತನದ ದಂತದಿಂದ ಮಾಡಲಾಗುತ್ತದೆಂದು ಅಂದಾಜು. ಈ ಕೆನ್ಯಾ ಸರಕಾರ ಸುಮಾರು 50 ವನಪಾಲಕರನ್ನು ಮತ್ತು ಬೇಟೆಕಾವಲುಗಾರರನ್ನು ಕೆಲಸದಿಂದ ತೆಗೆಯಿತು ಅಥವಾ ತಾತ್ಕಾಲಿಕವಾಗಿ ರದ್ದು ಮಾಡಿತು. ಇವರು ಹಣದ ಆಶೆಗೆ ಬಲಿಬಿದ್ದು ಕಳ್ಳಬೇಟೆಗಾರರೊಂದಿಗೆ ಸಹೋದ್ಯಮ ನಡಿಸಿದರೆಂದು ಇವರ ಮೇಲೆ ಆರೋಪ ಹಾಕಲಾಯಿತು. ಈ ಸಂತತಿಯಲ್ಲಿ ಮಾನವರು ಆತ್ಮದ ಹಿತದ ವಿಷಯದಲ್ಲಿ ಹೊಸ ತಳಕ್ಕಿಳಿದಿದ್ದಾರೆಂಬುದನ್ನು ಯಾರು ಅಲ್ಲಗಳೆಯುವರು? ಮಾನವ ಸಂತತಿ ಆತ್ಮಭ್ರಾಂತಿಯಿಂದ ಬೆಳೆಯುತ್ತಿರುವಾಗ ಜಗತ್ತು ಕಡಿಮೆ ಭದ್ರವಾಗಿ ಬೆಳೆಯುತ್ತಾ ಇದೆ.
ಭಾಗ್ಯವಶಾತ್, ಬೈಬಲು ನಮ್ಮ ಭೂಗ್ರಹ ಮತ್ತು ಅದರ ವನ್ಯ ಜೀವಿಗಳಿಗೆ ಹೆಚ್ಚು ಉತ್ತಮವಾದ ಭವಿಷ್ಯವನ್ನು ನೀಡುತ್ತದೆ. ಸೃಷ್ಟಿಕರ್ತನು ಈ ಭೂಮಿಯನ್ನು ತನ್ನ ಮೂಲ ಉದ್ದೇಶದ ಸ್ಥಿತಿಗೆ, ಶಾಂತಿ ತುಂಬಿರುವ ಭೂವ್ಯಾಪಕ ಪ್ರಮೋದವನಕ್ಕೆ ಬೇಗನೇ ಪುನಃ ಸ್ಥಾಪಿಸುವನೆಂದು ಅದು ಹೇಳುತ್ತದೆ. ಆಗ ಆನೆಗಳ ವಿರುದ್ಧ ಮತ್ತು ಪರಿಸರದಲ್ಲಿರುವ ಸಕಲ ಆಶ್ಚರ್ಯಗಳ ಮೇಲೆ ಮಾನವನು ಮಾಡುವ ಯುದ್ಧ ಕಟ್ಟಕಡೆಗೆ ಇಲ್ಲವಾಗುವುದು.—ಯೆಶಾಯ 11:6-9. (g89 11/22)