“ದೇವರೊಂದಿಗೆ ನಡೆಯಿರಿ” ಜಿಲ್ಲಾ ಅಧಿವೇಶನಕ್ಕೆ ಸ್ವಾಗತ
◼ ಲೋಕದಾದ್ಯಂತ ನೂರಾರು ಸ್ಥಳಗಳಲ್ಲಿ ನಡೆಯುವ ಜಿಲ್ಲಾ ಅಧಿವೇಶನಕ್ಕೆ ಲಕ್ಷಾಂತರ ಜನರು ಹಾಜರಾಗುವರು. ಸಾಮಾನ್ಯವಾಗಿ ಶುಕ್ರವಾರದಿಂದ ಭಾನುವಾರದ ವರೆಗೆ ನಡೆಸಲ್ಪಡುವ ಮೂರು ದಿನದ ಈ ಒಕ್ಕೂಟಗಳಲ್ಲಿ ಒಂದು, ಬಹುಶಃ ನಿಮಗೆ ಸಮೀಪವಾಗಿರುವ ನಗರವೊಂದರಲ್ಲಿ ನಡೆಯುವುದು.
ಹೆಚ್ಚಿನ ಸ್ಥಳಗಳಲ್ಲಿ ಕಾರ್ಯಕ್ರಮವು ಪ್ರತಿ ದಿನ ಬೆಳಗ್ಗೆ 9:30ಕ್ಕೆ ಸಂಗೀತದ ಕಾರ್ಯಕ್ರಮದೊಂದಿಗೆ ಆರಂಭವಾಗುವುದು. ಶುಕ್ರವಾರದ ಮುಖ್ಯ ವಿಷಯವು “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದಾಗಿದೆ. “ಯೆಹೋವನು ತನ್ನ ಮಾರ್ಗಗಳ ಕುರಿತು ನಮಗೆ ಬೋಧಿಸಸಾಧ್ಯವಾಗುವಂತೆ ಕೂಡಿಬಂದಿದ್ದೇವೆ” ಎಂಬ ಸ್ವಾಗತ ಭಾಷಣದ ಬಳಿಕ, ದೇವರೊಂದಿಗೆ ನಿಷ್ಠೆಯಿಂದ ನಡೆಯುತ್ತಿರುವವರೊಂದಿಗಿನ ಇಂಟರ್ವ್ಯೂಗಳನ್ನು ಸಾದರಪಡಿಸುವ ಭಾಗವು ನಡೆಸಲ್ಪಡುವುದು. “ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ” ಮತ್ತು “ದೇವರ ವಾಕ್ಯವು ಪ್ರತಿನಿತ್ಯ ನಿಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸಲಿ” ಎಂಬ ಭಾಷಣಗಳ ಅನಂತರ, “ಗೊಂದಲಮಯ ಸಮಯಗಳಲ್ಲಿ ದೇವರೊಂದಿಗೆ ನಡೆಯಿರಿ” ಎಂಬ ಮುಖ್ಯ ಭಾಷಣದೊಂದಿಗೆ ಬೆಳಗ್ಗಿನ ಸೆಷನ್ ಮುಕ್ತಾಯಗೊಳ್ಳುವುದು.
ಶುಕ್ರವಾರ ಮಧ್ಯಾಹ್ನದ ಸೆಷನ್ನಲ್ಲಿ “ಹೋಶೇಯನ ಪ್ರವಾದನೆಯು ದೇವರೊಂದಿಗೆ ನಡೆಯುವಂತೆ ನಮಗೆ ಸಹಾಯಮಾಡುತ್ತದೆ” ಎಂಬ ಮೂರು ಭಾಗದ ಭಾಷಣಮಾಲೆ ಇರುವುದು. ತದನಂತರ “‘ದೇವರು ಕೂಡಿಸಿದ್ದನ್ನು’ ಅಗಲಿಸದಿರಿ” ಮತ್ತು “ನಮ್ಮ ಪವಿತ್ರ ಕೂಟಗಳಿಗೆ ಗೌರವವನ್ನು ತೋರಿಸುವುದು” ಎಂಬ ಭಾಷಣಗಳು ಕೊಡಲ್ಪಡುವವು. “ಸರ್ವ ದೇಶಗಳ ಜನರಿಗಾಗಿ ಸುವಾರ್ತೆ” ಎಂಬುದು ಶುಕ್ರವಾರದ ಕೊನೆಯ ಭಾಷಣವಾಗಿದ್ದು, ಎಲ್ಲಾ ಭಾಷೆಗಳ ಜನರಿಗೆ ಸುವಾರ್ತೆಯನ್ನು ತಲಪಿಸಲು ಉತ್ತೇಜನವನ್ನು ನೀಡುವುದು.
ಶನಿವಾರದ ಮುಖ್ಯ ವಿಷಯವು “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ” ಎಂದಾಗಿದೆ. ಬೆಳಗ್ಗಿನ ಭಾಷಣಮಾಲೆಯು “ಶುಶ್ರೂಷಕರೋಪಾದಿ ಪ್ರಗತಿಪರವಾಗಿ ಮುನ್ನಡೆಯುವುದು” ಎಂದಾಗಿದ್ದು, ಬೇರೆ ಭಾಷೆಗಳನ್ನು ಮಾತಾಡುವವರನ್ನು ತಲಪುವುದರ ಕುರಿತಾದ ಇನ್ನೂ ಹೆಚ್ಚಿನ ಸಲಹೆಗಳನ್ನು ನೀಡುವಂಥ ಒಂದು ಭಾಗವನ್ನು ಒಳಗೂಡಿದೆ. ಬೆಳಗ್ಗಿನ ಕಾರ್ಯಕ್ರಮವು, “ಕಾಲಗೊತ್ತುಮಾಡಿಕೊಂಡು ಯೆಹೋವನೊಂದಿಗೆ ನಡೆಯುವುದು” ಎಂಬ ಪ್ರಮುಖ ಭಾಷಣದೊಂದಿಗೆ ಮುಕ್ತಾಯಗೊಳ್ಳುವುದು. ಇದಾದ ಬಳಿಕ ಅರ್ಹ ವ್ಯಕ್ತಿಗಳಿಗೆ ದೀಕ್ಷಾಸ್ನಾನ ಪಡೆದುಕೊಳ್ಳುವ ಸದವಕಾಶವಿದೆ.
ಶನಿವಾರ ಮಧ್ಯಾಹ್ನದ ಭಾಷಣಗಳು “ಎಡವಲು ಕಾರಣವಾಗದಿರಿ” ಮತ್ತು “ಚೈತನ್ಯಗೊಳಿಸುವ ಹಿತಕರವಾದ ಚಟುವಟಿಕೆಗಳು” ಎಂಬ ವಿಚಾರಗಳನ್ನು ಒಳಗೂಡಿವೆ. ಮುಂದಿನ ಭಾಷಣಗಳು “ಯೆಹೋವನು ನಮ್ಮ ಕುರುಬನು,” “ಅನುಕೂಲವಾದ ಸಮಯವನ್ನು ಖರೀದಿಸುವುದು,” ಮತ್ತು “ಬೆಳಗುತ್ತಾ ಹೋಗುವ ಮಾರ್ಗದಲ್ಲಿ ನಡೆಯುವುದು” ಎಂಬ ಮೇಲ್ವಿಷಯವನ್ನು ಹೊಂದಿದ್ದು, ಇವುಗಳಲ್ಲಿ ಪ್ರತಿಯೊಂದೂ ಉತ್ತೇಜನದಾಯಕ ಇಂಟರ್ವ್ಯೂಗಳನ್ನು ಪ್ರಸ್ತುತಪಡಿಸುತ್ತದೆ. ಅಂದಿನ ಸೆಷನ್ “‘ಸದಾ ಎಚ್ಚರವಾಗಿರಿ’—ನ್ಯಾಯತೀರ್ಪಿನ ಗಳಿಗೆಯು ಬಂದಿದೆ” ಎಂಬ ಆಲೋಚನಾಪ್ರೇರಕ ಭಾಷಣದೊಂದಿಗೆ ಕೊನೆಗೊಳ್ಳುವುದು.
ಭಾನುವಾರದ ಕಾರ್ಯಕ್ರಮದ ಮುಖ್ಯ ವಿಷಯವು ‘ಸತ್ಯದಲ್ಲಿ ನಡೆಯುತ್ತಾ ಇರಿ’ ಎಂದಾಗಿದ್ದು, ಇದು “ಯುವಜನರೇ—ನೀತಿಮಾರ್ಗದಲ್ಲಿ ನಡೆಯಿರಿ” ಎಂಬ ಭಾಷಣದಲ್ಲಿ ಒತ್ತಿಹೇಳಲ್ಪಡುತ್ತದೆ. ತದನಂತರ ಅಪೊಸ್ತಲ ಪೌಲನ ಶುಶ್ರೂಷೆಯನ್ನು ಎತ್ತಿತೋರಿಸುವಂಥ ಪೂರ್ಣ ಪೋಷಾಕುಸಜ್ಜಿತ ಡ್ರಾಮವು ನಡೆಸಲ್ಪಡುವುದು. ಇದಾದ ಬಳಿಕ ಡ್ರಾಮದಿಂದ ಕಲಿತುಕೊಳ್ಳಸಾಧ್ಯವಿರುವ ಪಾಠಗಳನ್ನು ಒತ್ತಿಹೇಳುವಂಥ ಒಂದು ಭಾಷಣವಿರುವುದು. ಮಧ್ಯಾಹ್ನದ ಕಾರ್ಯಕ್ರಮವು “ದೇವರೊಂದಿಗೆ ನಡೆಯುವುದು ಇಂದು ಮತ್ತು ಎಂದೆಂದಿಗೂ ಆಶೀರ್ವಾದಗಳನ್ನು ತರುತ್ತದೆ” ಎಂಬ ಸಾರ್ವಜನಿಕ ಭಾಷಣವನ್ನು ಒಳಗೂಡಿರುವುದು.
ನಿಮ್ಮ ಮನೆಗೆ ಹೆಚ್ಚು ಸಮೀಪವಾಗಿರುವ ಅಧಿವೇಶನದ ನಿವೇಶನದ ಕುರಿತು ತಿಳಿದುಕೊಳ್ಳಲಿಕ್ಕಾಗಿ ನೀವು ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಬಹುದು ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಪತ್ರವನ್ನು ಬರೆಯಬಹುದು. (g04 6/8)