ಬೈಬಲಿನ ದೃಷ್ಟಿಕೋನ
ಸ್ತ್ರೀಯರ ವಿಷಯದಲ್ಲಿ ಬೈಬಲ್ ಭೇದಭಾವವನ್ನು ತೋರಿಸುತ್ತದೊ?
ಮೂರನೇ ಶತಮಾನದ ದೇವತಾಶಾಸ್ತ್ರಜ್ಞನಾಗಿದ್ದ ಟೆರ್ಟಲ್ಯನ್ ತನ್ನ ಬರಹಗಳಲ್ಲೊಂದರಲ್ಲಿ ಸ್ತ್ರೀಯರನ್ನು “ಪಿಶಾಚನ ಪ್ರವೇಶದ್ವಾರ” ಎಂದು ವರ್ಣಿಸಿದ್ದನು. ಇನ್ನಿತರರು, ಸ್ತ್ರೀಯರು ಪುರುಷರಿಗಿಂತ ಕಡಿಮೆ ಮಹತ್ವವುಳ್ಳವರಾಗಿದ್ದಾರೆ ಎಂಬುದನ್ನು ತೋರಿಸಲಿಕ್ಕಾಗಿ ಬೈಬಲನ್ನು ಉಪಯೋಗಿಸಿದ್ದಾರೆ. ಇದರ ಫಲಿತಾಂಶವಾಗಿ, ಸ್ತ್ರೀಯರ ವಿಷಯದಲ್ಲಿ ಬೈಬಲ್ ಭೇದಭಾವವನ್ನು ತೋರಿಸುತ್ತದೆ ಎಂದು ಅನೇಕರು ಭಾವಿಸುತ್ತಾರೆ.
ಯುನೈಟೆಡ್ ಸ್ಟೇಟ್ಸ್ನಲ್ಲಿ ಸ್ತ್ರೀಯರ ಹಕ್ಕುಗಳಿಗಾಗಿ ಹೋರಾಡಿದ 19ನೇ ಶತಮಾನದ ಚಳುವಳಿಗಾರ್ತಿಯಾಗಿದ್ದ ಎಲಿಸಬೆತ್ ಕ್ಯಾಡಿ ಸ್ಟ್ಯಾಂಟನ್ಳಿಗೆ ಅನಿಸಿದ್ದೇನೆಂದರೆ, “ಸ್ತ್ರೀಯರ ವಿಮೋಚನೆಯ ಹಾದಿಯಲ್ಲಿ ಬೈಬಲ್ ಮತ್ತು ಚರ್ಚು ಅತಿ ದೊಡ್ಡ ತಡೆಗಟ್ಟುಗಳಾಗಿವೆ.” ಬೈಬಲಿನ ಮೊದಲ ಐದು ಪುಸ್ತಕಗಳ ಕುರಿತಾಗಿ ಸ್ಟ್ಯಾಂಟನ್ ಒಮ್ಮೆ ಹೇಳಿದ್ದು: “ನನಗೆ ಗೊತ್ತಿರುವಂತೆ, ಬೇರೆ ಯಾವ ಪುಸ್ತಕಗಳೂ ಇಷ್ಟು ಸಮಗ್ರವಾಗಿ ಸ್ತ್ರೀಯರ ಅಧೀನತೆಯನ್ನು ಮತ್ತು ಅವಹೇಳನವನ್ನು ಬೋಧಿಸುವುದಿಲ್ಲ.”
ಇಂದು ಕೆಲವರಲ್ಲಿ ಇಂಥ ಅತಿರೇಕದ ದೃಷ್ಟಿಕೋನಗಳು ಕಂಡುಬರಬಹುದಾದರೂ, ಬೈಬಲಿನ ಕೆಲವು ಭಾಗಗಳು ಸ್ತ್ರೀಯರ ಕಡೆಗಿನ ಭೇದಭಾವವನ್ನು ಬೆಂಬಲಿಸುತ್ತವೆ ಎಂದು ಅನೇಕರು ಇನ್ನೂ ನಂಬುತ್ತಾರೆ. ಈ ತೀರ್ಮಾನಕ್ಕೆ ಬರುವುದು ಸಮಂಜಸವಾದದ್ದಾಗಿದೆಯೋ?
ಹೀಬ್ರು ಶಾಸ್ತ್ರವಚನಗಳಲ್ಲಿ ಸ್ತ್ರೀಯರನ್ನು ಹೇಗೆ ಪರಿಗಣಿಸಲಾಗಿದೆ?
“ನಿನ್ನ ಗಂಡನ ಮೇಲೆ ನಿನ್ನ ಬಯಕೆ ಇರುವುದು; ಅವನು ನಿನ್ನನ್ನು ಆಳುವನು.” (ಆದಿಕಾಂಡ 3:16, NIBV) ವಿಮರ್ಶಕರು ಇದನ್ನು ದೇವರಿಂದ ಹವ್ವಳಿಗೆ ಕೊಡಲ್ಪಟ್ಟ ನ್ಯಾಯತೀರ್ಪಾಗಿ ಮತ್ತು ಪುರುಷನು ಸ್ತ್ರೀಯನ್ನು ಹತೋಟಿಯಲ್ಲಿಡಲು ದೊರೆತ ದೈವಿಕ ಸಮ್ಮತಿಯಾಗಿ ಪರಿಗಣಿಸುತ್ತಾರೆ. ಆದರೆ, ಇದು ದೇವರ ಉದ್ದೇಶಕ್ಕೆ ಸಂಬಂಧಿಸಿದ ಹೇಳಿಕೆಯಾಗಿರುವುದಕ್ಕೆ ಬದಲಾಗಿ, ಪಾಪದ ಮತ್ತು ದೇವರ ಪರಮಾಧಿಕಾರವನ್ನು ತಿರಸ್ಕರಿಸುವುದರ ಕೆಟ್ಟ ಪರಿಣಾಮಗಳ ಕುರಿತಾದ ನಿಷ್ಕೃಷ್ಟ ಹೇಳಿಕೆಯಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯವು ದೈವೇಚ್ಛೆಯ ಫಲಿತಾಂಶವಲ್ಲ ಬದಲಾಗಿ ಮಾನವಕುಲದ ಅಪರಿಪೂರ್ಣತೆಯ ನೇರವಾದ ಫಲಿತಾಂಶವಾಗಿದೆ. ಅನೇಕ ಸಂಸ್ಕೃತಿಗಳಲ್ಲಿ ಹೆಂಡತಿಯರು ತಮ್ಮ ಗಂಡಂದಿರ ದಬ್ಬಾಳಿಕೆಗೆ ಒಳಗಾಗಿದ್ದಾರೆ; ಅನೇಕವೇಳೆ ತುಂಬ ನಿರ್ದಯವಾದ ವಿಧಗಳಲ್ಲಿ ಹೀಗೆ ಮಾಡಲಾಗುತ್ತದೆ. ಆದರೆ ಇದು ದೇವರ ಉದ್ದೇಶವಾಗಿರಲಿಲ್ಲ.
ಆದಾಮಹವ್ವರಿಬ್ಬರೂ ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿದ್ದರು. ಅಷ್ಟುಮಾತ್ರವಲ್ಲ ಬಹುಸಂತಾನವುಳ್ಳವರಾಗಿ ಹೆಚ್ಚುವ, ಭೂಮಿಯನ್ನು ತುಂಬಿಕೊಳ್ಳುವ ಮತ್ತು ಅದನ್ನು ವಶಮಾಡಿಕೊಳ್ಳುವ ಆಜ್ಞೆಯು ಇಬ್ಬರಿಗೂ ಕೊಡಲ್ಪಟ್ಟಿತು. ಅವರಿಬ್ಬರೂ ಜೊತೆಗೂಡಿ ಕಾರ್ಯನಡಿಸಬೇಕಿತ್ತು. (ಆದಿಕಾಂಡ 1:27, 28) ಸ್ಪಷ್ಟವಾಗಿ, ಆ ಸಮಯದಲ್ಲಿ ಅವರಲ್ಲಿ ಯಾರೊಬ್ಬರೂ ಇನ್ನೊಬ್ಬರ ಮೇಲೆ ನಿರ್ದಯವಾಗಿ ದಬ್ಬಾಳಿಕೆ ನಡಿಸುತ್ತಿರಲಿಲ್ಲ. ಆದಿಕಾಂಡ 1:31 ಹೇಳುವುದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”
ಕೆಲವೊಂದು ವಿದ್ಯಮಾನಗಳಲ್ಲಿ, ಬೈಬಲ್ ವೃತ್ತಾಂತಗಳು ಒಂದು ವಿಷಯದ ಕುರಿತಾದ ದೇವರ ದೃಷ್ಟಿಕೋನವನ್ನು ಸೂಚಿಸುವುದಿಲ್ಲ. ಅವು ಕೇವಲ ಐತಿಹಾಸಿಕ ಕಥನಗಳಾಗಿರಬಹುದು. ಉದಾಹರಣೆಗೆ, ಲೋಟನು ಸೊದೋಮ್ ಪಟ್ಟಣದವರಿಗೆ ತನ್ನ ಹೆಣ್ಣುಮಕ್ಕಳನ್ನು ಒಪ್ಪಿಸಲು ಮುಂದಾದುದರ ಕುರಿತಾದ ವೃತ್ತಾಂತವು, ಅದು ನೈತಿಕವಾಗಿ ಸ್ವೀಕಾರಾರ್ಹವಾಗಿದೆಯೋ ಇಲ್ಲವೊ ಅಥವಾ ದೇವರು ಲೋಟನ ಕೃತ್ಯವನ್ನು ಖಂಡಿಸಿದನೋ ಇಲ್ಲವೊ ಎಂಬ ವಿವರಣೆಯಿಲ್ಲದೆ ತಿಳಿಸಲ್ಪಟ್ಟಿದೆ.a—ಆದಿಕಾಂಡ 19:6-8.
ವಾಸ್ತವಾಂಶವೇನೆಂದರೆ, ದೇವರು ಎಲ್ಲ ರೀತಿಯ ಶೋಷಣೆಯನ್ನು ಮತ್ತು ದೌರ್ಜನ್ಯವನ್ನು ಹಗೆಮಾಡುತ್ತಾನೆ. (ವಿಮೋಚನಕಾಂಡ 22:22; ಧರ್ಮೋಪದೇಶಕಾಂಡ 27:19; ಯೆಶಾಯ 10:1, 2) ಮೋಶೆಯ ಧರ್ಮಶಾಸ್ತ್ರವು ಬಲತ್ಕಾರಸಂಭೋಗ ಹಾಗೂ ಸೂಳೆಗಾರಿಕೆಯನ್ನು ಖಂಡಿಸಿತ್ತು. (ಯಾಜಕಕಾಂಡ 19:29; ಧರ್ಮೋಪದೇಶಕಾಂಡ 22:23-29) ಹಾದರವು ನಿಷೇಧಿಸಲ್ಪಟ್ಟಿತ್ತು ಮತ್ತು ಇದರಲ್ಲಿ ಒಳಗೂಡುವ ಪುರುಷ ಮತ್ತು ಸ್ತ್ರೀ ಇಬ್ಬರಿಗೂ ಮರಣಶಿಕ್ಷೆಯು ವಿಧಿಸಲ್ಪಡುತ್ತಿತ್ತು. (ಯಾಜಕಕಾಂಡ 20:10) ಧರ್ಮಶಾಸ್ತ್ರವು ಸ್ತ್ರೀಯರ ವಿಷಯದಲ್ಲಿ ಭೇದಭಾವವನ್ನು ತೋರಿಸುವುದಕ್ಕೆ ಬದಲಾಗಿ, ಸುತ್ತಮುತ್ತಲ ಜನಾಂಗಗಳಲ್ಲಿ ಸಾಮಾನ್ಯವಾಗಿ ವ್ಯಾಪಕವಾಗಿದ್ದ ಶೋಷಣೆಯಿಂದ ಅವರನ್ನು ಮೇಲಕ್ಕೇರಿಸಿತು ಮತ್ತು ಸಂರಕ್ಷಿಸಿತು. ಒಬ್ಬ ಸಮರ್ಥ ಯೆಹೂದಿ ಪತ್ನಿಯನ್ನು ತುಂಬ ಗೌರವಿಸಲಾಗುತ್ತಿತ್ತು ಮತ್ತು ಅಮೂಲ್ಯವಾಗಿ ಪರಿಗಣಿಸಲಾಗುತ್ತಿತ್ತು. (ಜ್ಞಾನೋಕ್ತಿ 31:10, 28-30) ಸ್ತ್ರೀಯರಿಗೆ ಗೌರವವನ್ನು ತೋರಿಸುವುದರ ವಿಷಯದಲ್ಲಿ ದೇವರು ಕೊಟ್ಟಿದ್ದ ನಿಯಮಗಳನ್ನು ಅನುಸರಿಸಲು ಇಸ್ರಾಯೇಲ್ಯರು ತಪ್ಪಿಬಿದ್ದದ್ದು ಅವರ ಸ್ವಂತ ತಪ್ಪಾಗಿತ್ತಷ್ಟೆ, ದೈವೇಚ್ಛೆಯಲ್ಲ. (ಧರ್ಮೋಪದೇಶಕಾಂಡ 32:5) ಅಂತಿಮವಾಗಿ, ಈ ಜನಾಂಗದವರ ನಿರ್ಲಜ್ಜ ಅವಿಧೇಯತೆಗಾಗಿ ದೇವರು ಇಡೀ ಜನಾಂಗಕ್ಕೆ ನ್ಯಾಯತೀರ್ಪನ್ನು ವಿಧಿಸಿ ಶಿಕ್ಷಿಸಿದನು.
ಅಧೀನತೆಯು ಭೇದಭಾವವನ್ನು ಸೂಚಿಸುತ್ತದೊ?
ಯಾವುದೇ ಸಮಾಜವು, ವ್ಯವಸ್ಥಾಪಿತ ರೀತಿಯಲ್ಲಿ ವಿಷಯಗಳು ನಡೆಯುವಾಗ ಮಾತ್ರ ಒಳ್ಳೇ ರೀತಿಯಲ್ಲಿ ಕಾರ್ಯನಡಿಸಬಲ್ಲದು. ಇದು ಅಧಿಕಾರನಿರ್ವಹಣೆಯನ್ನು ಅಗತ್ಯಪಡಿಸುತ್ತದೆ. ಅಧಿಕಾರದ ಸ್ಥಾನದಲ್ಲಿ ಯಾರೂ ಇಲ್ಲದಿರುವಲ್ಲಿ ಸಂಪೂರ್ಣ ಅವ್ಯವಸ್ಥೆಯೇ ತುಂಬಿರಸಾಧ್ಯವಿದೆ. ಆದರೆ “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.”—1 ಕೊರಿಂಥ 14:33.
ಅಪೊಸ್ತಲ ಪೌಲನು ಕುಟುಂಬದ ತಲೆತನದ ಏರ್ಪಾಡನ್ನು ಹೀಗೆ ವರ್ಣಿಸುತ್ತಾನೆ: “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ.” (1 ಕೊರಿಂಥ 11:3) ದೇವರ ಹೊರತಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನಗಿಂತ ಮೇಲಿರುವ ಅಧಿಕಾರಕ್ಕೆ ತನ್ನನ್ನು ಅಧೀನಪಡಿಸಿಕೊಳ್ಳುತ್ತಾನೆ. ಯೇಸು ಸಹ ಒಬ್ಬನಿಗೆ ಅಧೀನನಾಗಿದ್ದಾನೆ ಎಂಬ ವಾಸ್ತವಾಂಶದ ಅರ್ಥ, ಅವನ ವಿಷಯದಲ್ಲಿಯೂ ಭೇದಭಾವವನ್ನು ತೋರಿಸಲಾಗಿದೆ ಎಂದಾಗಿದೆಯೊ? ನಿಶ್ಚಯವಾಗಿಯೂ ಇಲ್ಲ! ಸಭೆಯಲ್ಲಿ ಮತ್ತು ಕುಟುಂಬದಲ್ಲಿ ಮುಂದಾಳುತ್ವವನ್ನು ವಹಿಸುವ ನೇಮಕವು ಪುರುಷರಿಗೆ ಶಾಸ್ತ್ರೀಯವಾಗಿ ಕೊಡಲ್ಪಟ್ಟಿದೆ ಎಂಬ ವಾಸ್ತವಾಂಶದ ಅರ್ಥ, ಸ್ತ್ರೀಯರ ವಿಷಯದಲ್ಲಿ ಭೇದಭಾವವನ್ನು ತೋರಿಸಲಾಗುತ್ತಿದೆ ಎಂದಲ್ಲ. ಕುಟುಂಬವು ಹಾಗೂ ಸಭೆಯು ಏಳಿಗೆಯನ್ನು ಹೊಂದಬೇಕಾದರೆ, ಪುರುಷರು ಹಾಗೂ ಸ್ತ್ರೀಯರು ಪ್ರೀತಿ ಮತ್ತು ಗೌರವದಿಂದ ತಮ್ಮ ನೇಮಿತ ಪಾತ್ರಗಳನ್ನು ನಿರ್ವಹಿಸುವ ಅಗತ್ಯವಿದೆ.—ಎಫೆಸ 5:21-25, 28, 29, 33.
ಯೇಸು ಯಾವಾಗಲೂ ಸ್ತ್ರೀಯರನ್ನು ಗೌರವದಿಂದ ಕಾಣುತ್ತಿದ್ದನು. ಫರಿಸಾಯರಿಂದ ಕಲಿಸಲ್ಪಟ್ಟ ಭೇದಭಾವದಿಂದ ಕೂಡಿದ ಸಂಪ್ರದಾಯಗಳು ಮತ್ತು ನಿಬಂಧನೆಗಳನ್ನು ಅವನು ಅನುಸರಿಸಲಿಲ್ಲ. ಅವನು ಯೆಹೂದ್ಯೇತರ ಸ್ತ್ರೀಯರೊಂದಿಗೆ ಮಾತಾಡಿದನು. (ಮತ್ತಾಯ 15:22-28; ಯೋಹಾನ 4:7-9) ಸ್ತ್ರೀಯರಿಗೆ ಆಧ್ಯಾತ್ಮಿಕ ವಿಷಯಗಳನ್ನು ಕಲಿಸಿದನು. (ಲೂಕ 10:38-42) ಅವರು ಪರಿತ್ಯಜಿಸಲ್ಪಡುವುದರಿಂದ ಅವರನ್ನು ಕಾಪಾಡಿದನು. (ಮಾರ್ಕ 10:11, 12) ಯೇಸುವಿನ ಕಾಲದ ಬಹುಶಃ ಅತ್ಯಂತ ಕ್ರಾಂತಿಕಾರಕ ಹೆಜ್ಜೆಯು, ಅವನು ಸ್ತ್ರೀಯರನ್ನು ತನ್ನ ಆಪ್ತ ಸ್ನೇಹಿತರನ್ನಾಗಿ ಸ್ವೀಕರಿಸಿದ್ದಾಗಿತ್ತು. (ಲೂಕ 8:1-3) ದೇವರ ಗುಣಗಳನ್ನು ಪರಿಪೂರ್ಣವಾಗಿ ಪ್ರತಿಬಿಂಬಿಸುತ್ತಿದ್ದ ಯೇಸು, ಪುರುಷರು ಮತ್ತು ಸ್ತ್ರೀಯರು ದೇವರ ದೃಷ್ಟಿಯಲ್ಲಿ ಸಮಾನ ಮೌಲ್ಯವುಳ್ಳವರಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟನು. ವಾಸ್ತವದಲ್ಲಿ, ಆರಂಭದ ಕ್ರೈಸ್ತರಲ್ಲಿ ಪುರುಷರು ಹಾಗೂ ಸ್ತ್ರೀಯರು ಪವಿತ್ರಾತ್ಮದ ವರದಾನವನ್ನು ಪಡೆದುಕೊಂಡರು. (ಅ. ಕೃತ್ಯಗಳು 2:1-4, 17, 18) ಅಭಿಷಿಕ್ತರಾಗಿದ್ದು, ಕ್ರಿಸ್ತನೊಂದಿಗೆ ರಾಜರುಗಳಾಗಿಯೂ ಯಾಜಕರಾಗಿಯೂ ಸೇವೆಮಾಡುವ ಪ್ರತೀಕ್ಷೆಯುಳ್ಳವರು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಟ್ಟ ಬಳಿಕ, ಅವರಲ್ಲಿ ಲಿಂಗಜಾತಿಯ ಯಾವುದೇ ತಾರತಮ್ಯ ಇರುವುದಿಲ್ಲ. (ಗಲಾತ್ಯ 3:28) ಬೈಬಲಿನ ಗ್ರಂಥಕರ್ತನಾಗಿರುವ ಯೆಹೋವನು ಸ್ತ್ರೀಯರ ವಿಷಯದಲ್ಲಿ ಭೇದಭಾವವನ್ನು ತೋರಿಸುವುದಿಲ್ಲ. (g05 11/8)
[ಪಾದಟಿಪ್ಪಣಿ]
a ಇಸವಿ 2005, ಫೆಬ್ರವರಿ 1ರ ಕಾವಲಿನಬುರುಜು ಪತ್ರಿಕೆಯ 25-6ನೇ ಪುಟಗಳನ್ನು ನೋಡಿ.
[ಪುಟ 18ರಲ್ಲಿರುವ ಚಿತ್ರ]
ತನ್ನ ಸಮಕಾಲೀನರಲ್ಲಿ ಹೆಚ್ಚಿನವರಿಗೆ ಭಿನ್ನವಾಗಿ, ಯೇಸು ಸ್ತ್ರೀಯರನ್ನು ಗೌರವದಿಂದ ಕಂಡನು