ಯುವ ಜನರು ಪ್ರಶ್ನಿಸುವುದು . . .
ನಾವು ಔಪಚಾರಿಕ ಮದುವೆಯನ್ನು ಏರ್ಪಡಿಸಬೇಕೊ?
“ನಮ್ಮ ಎಲ್ಲ ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿಳಿಸದೆ ಖಾಸಗಿ ರೀತಿಯಲ್ಲಿ ಮದುವೆಯಾಗಲು, ಯಾರಿಗೂ ಹೇಳದೆ ಕೇಳದೆ ಹೊರಟುಹೋಗುವುದರ ಬಗ್ಗೆ ಪ್ರಥಮವಾಗಿ ಪ್ರಸ್ತಾಪಿಸಿದ್ದು ನನಗೆ ನಿಶ್ಚಯಮಾಡಲ್ಪಟ್ಟಿದ್ದ ಹುಡುಗಿಯಾದ ಸಿಂಡಿಯೇ. ಇದರ ಕುರಿತು ಚರ್ಚಿಸಿದ ಬಳಿಕ, ಈ ಆಯ್ಕೆಯಿಂದಾಗಿ ಹೆಚ್ಚು ಸಮಯ ಮತ್ತು ಶಕ್ತಿ ವ್ಯರ್ಥವಾಗುವುದಿಲ್ಲ ಹಾಗೂ ಇದರಿಂದ ಹೆಚ್ಚು ಒತ್ತಡವೂ ಇರುವುದಿಲ್ಲ ಎಂದು ನಮ್ಮಿಬ್ಬರಿಗೂ ಅನಿಸಿತು.”— ಅಲನ್.a
ಒಂದುವೇಳೆ ನೀವು ಮದುವೆಯ ಪ್ರಾಯದವರಾಗಿದ್ದು ಯಾರನ್ನಾದರೂ ಪ್ರೀತಿಸುತ್ತಿರುವಲ್ಲಿ, ಯಾರಿಗೂ ಹೇಳದೆ ಕೇಳದೆ ಹೊರಟುಹೋಗಿ ಮದುವೆಯಾಗುವುದು ಒಳ್ಳೇ ಆಯ್ಕೆಯಾಗಿ ತೋರಬಹುದು. ಕೆಲವು ಸನ್ನಿವೇಶಗಳಲ್ಲಿ ಒಂದು ಜೋಡಿಯು ಮನೆಯಿಂದ ಓಡಿಹೋಗಿ, ತಮ್ಮ ಹೆತ್ತವರಿಗೂ ತಿಳಿಸದೆ ಮದುವೆಯಾಗಲು ತುಂಬ ಮನಸ್ಸಾಗಬಹುದು. ಏನು ಮಾಡಬೇಕು ಎಂಬುದನ್ನು ನಿರ್ಧರಿಸಲು ಯಾವ ಮೂಲತತ್ತ್ವಗಳು ನಿಮಗೆ ಸಹಾಯಮಾಡಬಲ್ಲವು?
ಸಂಪ್ರದಾಯವು ತುಂಬ ಪ್ರಾಮುಖ್ಯವಾದದ್ದಾಗಿದೆಯೊ?
ಅಧಿಕಾಂಶ ಸಂಸ್ಕೃತಿಗಳಲ್ಲಿ ಮದುವೆಯು ಸಾಮಾನ್ಯವಾಗಿರುವುದಾದರೂ, ಈ ಸಮಾರಂಭದಲ್ಲಿ ಒಳಗೂಡಿರುವ ಪದ್ಧತಿಗಳು ಮಹತ್ತರವಾದ ಭಿನ್ನತೆಗಳನ್ನು ಹೊಂದಿರುತ್ತವೆ. ಒಂದು ಕ್ರೈಸ್ತ ಜೋಡಿಗಾದರೋ, ಅವರ ಮದುವೆಯು ಸ್ಥಳಿಕ ಪದ್ಧತಿಯ ಎಲ್ಲ ನಿರೀಕ್ಷಣೆಗಳನ್ನು ಪೂರೈಸುತ್ತದೊ ಇಲ್ಲವೊ ಎಂಬುದು ಪ್ರಾಮುಖ್ಯವಾದ ಚಿಂತೆಯಾಗಿರುವುದಿಲ್ಲ. (ರೋಮಾಪುರ 12:2) ಬದಲಾಗಿ, ತಮ್ಮ ಪ್ರಣಯಾಚರಣೆ ಮತ್ತು ವಿವಾಹವನ್ನು ಯೆಹೋವ ದೇವರಿಗೆ ಘನತೆ ತರುವಂಥ ರೀತಿಯಲ್ಲಿ ನಡೆಸುವುದೇ ಅವರ ಪ್ರಮುಖ ಬಯಕೆಯಾಗಿರುತ್ತದೆ.—1 ಕೊರಿಂಥ 10:31.
ವಿವಾಹವು ಘನತೆಭರಿತ ಏರ್ಪಾಡಾಗಿರುವುದರಿಂದ, ಅಧಿಕಾಂಶ ಜೋಡಿಗಳು ಇದನ್ನು ಗುಟ್ಟಾಗಿರಿಸಲು ಬಯಸುವುದಿಲ್ಲ. ಅನೇಕ ಪಾಶ್ಚಾತ್ಯ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳಾಗಿರುವ ಜೋಡಿಗಳು ಸಾಮಾನ್ಯವಾಗಿ ತಮ್ಮ ಸ್ಥಳಿಕ ರಾಜ್ಯ ಸಭಾಗೃಹದಲ್ಲಿನ ಒಂದು ಸಮಾರಂಭದಲ್ಲಿ ವಿವಾಹಮಾಡಿಕೊಳ್ಳುವ ಏರ್ಪಾಡನ್ನು ಮಾಡುತ್ತಾರೆ.b ತದನಂತರ ಅವರು ಒಂದು ರಿಸೆಪ್ಷನ್ ಇಟ್ಟುಕೊಂಡು, ಕುಟುಂಬ ಹಾಗೂ ಸ್ನೇಹಿತರೊಂದಿಗೆ ಊಟವನ್ನು ಮತ್ತು ಬಹುಶಃ ಮನೋರಂಜನೆಯನ್ನು ಏರ್ಪಡಿಸುವ ಆಯ್ಕೆಮಾಡಬಹುದು. ಅಂಥ ಸಂದರ್ಭಗಳು ತುಂಬ ಆಡಂಬರದಿಂದ ಕೂಡಿರುವ ಅಗತ್ಯವಿರುವುದಿಲ್ಲ. ಆದರೂ, ಮದುವೆಯನ್ನು ಮತ್ತು ಒಂದು ರಿಸೆಪ್ಷನ್ ಅನ್ನು ಏರ್ಪಡಿಸುವುದು ಒತ್ತಡಕರವಾದದ್ದಾಗಿದೆ ಹಾಗೂ ಸಾಕಷ್ಟು ವೆಚ್ಚವನ್ನೂ ಒಳಗೂಡಿರಬಹುದು ಎಂಬುದು ಒಪ್ಪಿಕೊಳ್ಳ ಸಂಗತಿಯೇ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್ನಲ್ಲಿ ಮದುವೆಯ ರಿಸೆಪ್ಷನ್ಗಳಿಗಾಗಿ ಅನೇಕವೇಳೆ ಸಾವಿರಾರು ಡಾಲರ್ಗಳಷ್ಟು ಹಣವು ವೆಚ್ಚವಾಗುತ್ತದೆ.
ಒತ್ತಡ ಮತ್ತು ವೆಚ್ಚವನ್ನು ಕಡಿಮೆಗೊಳಿಸುವ ಪ್ರಯತ್ನದಿಂದ ಕೆಲವು ಜೋಡಿಗಳು ಇನ್ನಷ್ಟು ಸರಳವಾಗಿರುವ ಒಂದು ಆಯ್ಕೆಯನ್ನು ಮಾಡಿದ್ದಾರೆ. ಸಿಂಡಿ ಹೇಳುವುದು: “ಮದುವೆಯ ಸಂದರ್ಭವು ಸರಳವೂ ಕಡಿಮೆ ವೆಚ್ಚದ್ದೂ ಆಗಿರಬೇಕೆಂದು ನಾವು ಬಯಸುವುದರಿಂದ ಸಾಂಪ್ರದಾಯಿಕ ರೀತಿಯಲ್ಲಿ ನಾವು ಮದುವೆಯಾಗುವುದಿಲ್ಲ ಎಂದು ನಮ್ಮ ಹೆತ್ತವರಿಗೆ ತಿಳಿಸಿದೆವು. ನಮ್ಮ ಸನ್ನಿವೇಶವನ್ನು ತಾವು ಅರ್ಥಮಾಡಿಕೊಂಡಿದ್ದೇವೆ ಎಂಬ ಆಶ್ವಾಸನೆಯನ್ನು ನೀಡಿದ ನನ್ನ ಹೆತ್ತವರು ನಮ್ಮ ಆಯ್ಕೆಗೆ ಸಮ್ಮತಿಯನ್ನು ಕೊಟ್ಟರು. ಅವರು ನಮಗೆ ತುಂಬ ಸಹಕಾರ ನೀಡಿದರು.” ಇನ್ನೊಂದು ಕಡೆಯಲ್ಲಿ, ಈ ಮುಂಚೆ ಉಲ್ಲೇಖಿಸಲ್ಪಟ್ಟಿರುವ ಅಲನ್ ಅಂದರೆ ಸಿಂಡಿಗೆ ನಿಶ್ಚಿತನಾಗಿದ್ದ ಹುಡುಗನು ತನ್ನ ಹೆತ್ತವರಿಗೆ ತಮ್ಮ ಮದುವೆಯ ಯೋಜನೆಗಳ ಕುರಿತು ತಿಳಿಸಿದಾಗ ಈ ಜೋಡಿಯ ನಿರ್ಧಾರಕ್ಕಾಗಿರುವ ಕಾರಣಗಳನ್ನು ಅಂಗೀಕರಿಸಲು ಅವರಿಗೆ ತುಂಬ ಕಷ್ಟಕರವಾಗಿತ್ತು. ಅಲನ್ ಹೇಳುವುದು: “ಅವರೇನನ್ನೋ ಮಾಡಿರುವುದರಿಂದ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಮತ್ತು ಇದು ತಮ್ಮದೇ ತಪ್ಪು ಎಂದು ಅವರು ನೆನಸಿದರು. ಆದರೆ ಖಂಡಿತವಾಗಿಯೂ ಇದರಲ್ಲಿ ಅಂಥ ಯಾವ ಕಾರಣವೂ ಇರಲಿಲ್ಲ.”
ಒಂದುವೇಳೆ ನೀವು ತುಂಬ ಸರಳವಾದ ರೀತಿಯಲ್ಲಿ ಮದುವೆಯಾಗಲು ನಿರ್ಧರಿಸುವಲ್ಲಿ ನಿಮ್ಮ ಹೆತ್ತವರಿಗೆ ಸಹ ತುಂಬ ಬೇಸರವಾಗಬಹುದು, ಏಕೆಂದರೆ ಅವರು ಈ ವಿಶೇಷ ದಿನದ ಆನಂದವನ್ನು ಸಾಧ್ಯವಾದಷ್ಟು ಹೆಚ್ಚು ಜನರೊಂದಿಗೆ ಹಂಚಿಕೊಳ್ಳಲು ಇಷ್ಟಪಡಬಹುದು. ಆದರೆ, ನಿಮ್ಮ ವಿವಾಹಕ್ಕೆ ಕುಟುಂಬದ ವಿರೋಧವಿದೆ ಎಂದು ನಿಮಗೆ ತಿಳಿದಿರುವುದರಿಂದ ನಿಮ್ಮ ಹೆತ್ತವರಿಗೂ ಹೇಳದೆ ವಿವಾಹಮಾಡಿಕೊಳ್ಳುವ ಆಲೋಚನೆಯನ್ನು ನೀವು ಮಾಡುತ್ತಿರುವಲ್ಲಿ ಆಗೇನು?
ನಿಮ್ಮ ಕುಟುಂಬದ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳಿರಿ
ಇಂಥ ಒಂದು ಪ್ರಮುಖ ನಿರ್ಣಯವನ್ನು ಮಾಡಲು ನೀವಿನ್ನೂ ಚಿಕ್ಕವರು ಎಂದು ನೆನಸುವ ಕಾರಣ ನಿಮ್ಮ ಹೆತ್ತವರು ನಿಮ್ಮ ವಿವಾಹಕ್ಕೆ ಆಕ್ಷೇಪವೆತ್ತಬಹುದು. ನೀವು ಪ್ರೌಢರಾಗುತ್ತಾ ಹೋದಂತೆ ನಿಮ್ಮ ಅಭಿರುಚಿಗಳು ಬದಲಾಗುವವು ಮತ್ತು ನೀವು ವಿವಾಹ ಸಂಗಾತಿಯ ಕುರಿತಾಗಿ ಮಾಡಿದ ಆಯ್ಕೆಯ ಬಗ್ಗೆ ಸ್ವಲ್ಪದರಲ್ಲೇ ವಿಷಾದಿಸುವಿರಿ ಎಂಬ ಭಯ ಅವರಿಗಿರಬಹುದು. ಇಲ್ಲದಿದ್ದರೆ, ನೀವು ಮದುವೆ ಪ್ರಾಯದವರಾಗಿದ್ದೀರಿ ಎಂಬುದನ್ನು ಅವರು ಅಂಗೀಕರಿಸಬಹುದು, ಆದರೆ ನೀವು ಪ್ರೀತಿಸುತ್ತಿರುವಂಥ ವ್ಯಕ್ತಿಯ ಸ್ವಭಾವದಲ್ಲಿ ಕೆಲವು ಲೋಪದೋಷಗಳಿವೆ ಎಂದು ಅವರು ನೆನಸುತ್ತಿರಬಹುದು. ಅಥವಾ ನೀವು ಆಯ್ಕೆಮಾಡಿರುವ ಸಂಗಾತಿಯು ನಿಮಗಿರುವಂಥ ಧಾರ್ಮಿಕ ನಂಬಿಕೆಗಳನ್ನು ಹೊಂದಿಲ್ಲದ ಕಾರಣಕ್ಕಾಗಿಯೂ ಅವರು ನಿಮ್ಮ ವಿವಾಹಕ್ಕೆ ನಿಷೇಧವನ್ನು ಒಡ್ಡಬಹುದು.
ನಿಮ್ಮ ಹೆತ್ತವರು ಸತ್ಯ ಕ್ರೈಸ್ತರಾಗಿರುವಲ್ಲಿ, ಅವರ ಚಿಂತೆಗಳಿಗೆ ಬೈಬಲಾಧಾರಿತ ಕಾರಣಗಳಿರುವುದು ಸಂಭವನೀಯ. ಅವರು ತಮ್ಮ ಮನಸ್ಸಿನಲ್ಲಿರುವ ಯಾವುದೇ ಶಂಕೆಗಳನ್ನು ವ್ಯಕ್ತಪಡಿಸುವುದು ಸೂಕ್ತವಾದದ್ದಾಗಿದೆ. ಒಂದುವೇಳೆ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದಿರುವಲ್ಲಿ, ಯೆಹೋವನು ಅವರನ್ನು ನಿರ್ಲಕ್ಷ್ಯ ಮನೋಭಾವದವರಾಗಿಯೂ ಪ್ರೀತಿರಹಿತರನ್ನಾಗಿಯೂ ಪರಿಗಣಿಸಸಾಧ್ಯವಿದೆ. ಅಷ್ಟುಮಾತ್ರವಲ್ಲ, ಅವರ ದೃಷ್ಟಿಕೋನವನ್ನು ಕೇಳಿಸಿಕೊಳ್ಳುವುದು ನಿಮಗೆ ಒಳಿತನ್ನುಂಟುಮಾಡುವುದು.—ಜ್ಞಾನೋಕ್ತಿ 13:1, 24.
ಇದನ್ನು ಹೀಗೆ ಉದಾಹರಿಸಬಹುದು: ನೀವು ಒಂದು ಉಡುಪನ್ನು ಖರೀದಿಸುವಾಗ, ಅದು ನಿಮಗೆ ಚೆನ್ನಾಗಿ ಕಾಣುತ್ತದೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ನೀವು ಇನ್ನೊಬ್ಬರ ಅಭಿಪ್ರಾಯವನ್ನು ಕೇಳುವುದು ಸಂಭವನೀಯ. ನೀವು ಎಲ್ಲ ಸಮಯದಲ್ಲೂ ಅವರ ಅಭಿಪ್ರಾಯಕ್ಕೆ ಸೈ ಎನ್ನದಿರಬಹುದು, ಆದರೂ ನಿರ್ದಿಷ್ಟ ಉಡುಪು ನಿಮಗೆ ತಕ್ಕದ್ದಾಗಿಲ್ಲ ಅಥವಾ ಅದರಲ್ಲಿ ನೀವು ಚೆನ್ನಾಗಿ ಕಾಣದಿದ್ದರೆ ಅದನ್ನು ನಿಮ್ಮ ಆಪ್ತ ಸ್ನೇಹಿತರು ಹೇಳಬೇಕು ಎಂದು ನೀವು ನಿರೀಕ್ಷಿಸುತ್ತೀರಿ ಅಲ್ಲವೆ? ಅವರ ಅಭಿಪ್ರಾಯಗಳನ್ನು ನೀವು ಗಣ್ಯಮಾಡುತ್ತೀರಿ, ಏಕೆಂದರೆ ಹಾಗೆ ಹೇಳುವುದರಿಂದ ನಿಮ್ಮ ಹಣ ಪೋಲಾಗದಂತೆ ಅವರು ನಿಮಗೆ ಸಹಾಯಮಾಡುತ್ತಿದ್ದಾರೆ. ಹೀಗಿರುವಾಗ, ನಿಮ್ಮ ವಿವಾಹ ಸಂಗಾತಿಯ ಆಯ್ಕೆಯ ಬಗ್ಗೆ ನಿಮ್ಮ ಕುಟುಂಬದ ಅಭಿಪ್ರಾಯವನ್ನು ತಿಳಿದುಕೊಳ್ಳುವುದನ್ನು ನೀವು ಇನ್ನೆಷ್ಟು ಗಣ್ಯಮಾಡಬೇಕು! ಒಂದು ಉಡುಪು ಇಷ್ಟವಾಗದಿರುವಲ್ಲಿ ನೀವು ಅದನ್ನು ಬದಲಾಯಿಸಸಾಧ್ಯವಿದೆ ಅಥವಾ ಉಪಯೋಗಿಸದೆ ಇಟ್ಟುಬಿಡಸಾಧ್ಯವಿದೆ, ಆದರೆ ನಿಮ್ಮ ವಿವಾಹ ಸಂಗಾತಿಯೊಂದಿಗೆ ನಿಮ್ಮ ಇಡೀ ಜೀವನವನ್ನು ಸಾಗಿಸುವಂತೆ ಯೆಹೋವನು ನಿರೀಕ್ಷಿಸುತ್ತಾನೆ. (ಮತ್ತಾಯ 19:5, 6) ನಿಮ್ಮ ವ್ಯಕ್ತಿತ್ವ ಮತ್ತು ಆಧ್ಯಾತ್ಮಿಕತೆಗೆ ನಿಜವಾಗಿಯೂ ಹೊಂದಾಣಿಕೆಯಲ್ಲಿ ಇಲ್ಲದಿರುವಂಥ ಒಬ್ಬ ಸಂಗಾತಿಯನ್ನು ನೀವು ಆಯ್ಕೆಮಾಡುವಲ್ಲಿ, ಅಂಥ ವಿವಾಹಬಂಧವು ತಕ್ಕದಾಗಿಲ್ಲದ ಒಂದು ಉಡುಪನ್ನು ಧರಿಸುವಾಗ ಉಂಟಾಗುವುದಕ್ಕಿಂತಲೂ ಹೆಚ್ಚು ಕಷ್ಟವನ್ನು ಉಂಟುಮಾಡುವುದು. (ಆದಿಕಾಂಡ 2:18; ಜ್ಞಾನೋಕ್ತಿ 21:9) ಅಷ್ಟುಮಾತ್ರವಲ್ಲ, ಇದರಿಂದಾಗಿ ನಿಜವಾದ ಸಂತೋಷವನ್ನು ಕಂಡುಕೊಳ್ಳುವ ಅವಕಾಶವನ್ನೂ ನೀವು ಕಳೆದುಕೊಳ್ಳಬಹುದು.—ಜ್ಞಾನೋಕ್ತಿ 5:18; 18:22.
ಒಂದು ವಿವಾಹಕ್ಕೆ ಆಕ್ಷೇಪವನ್ನೊಡ್ಡಲು ಕೆಲವು ಹೆತ್ತವರಿಗೆ ಸ್ವಾರ್ಥಪರ ಕಾರಣಗಳಿರಬಹುದು ಎಂಬುದೇನೋ ನಿಜ. ಉದಾಹರಣೆಗೆ, ತಮ್ಮ ಮಗನ/ಮಗಳ ಮೇಲೆ ಹಿಡಿತವನ್ನಿಟ್ಟುಕೊಳ್ಳುವ ಉದ್ದೇಶ ಅವರಿಗಿರಬಹುದು. ಆದರೆ, ನಿಮ್ಮ ಹೆತ್ತವರ ಭಾವನೆಗಳನ್ನು ಸ್ವಾರ್ಥಪರವೆಂದು ಪರಿಗಣಿಸಿ, ಯಾರಿಗೂ ಹೇಳದೆ ಕೇಳದೆ ಹೊರಟುಹೋಗಿ ಮದುವೆಯಾಗಲು ನಿರ್ಧರಿಸುವುದಕ್ಕೆ ಮುಂಚೆ, ಅವರ ಆಕ್ಷೇಪಣೆಗಳನ್ನು ಜಾಗರೂಕವಾಗಿ ಪರಿಶೀಲಿಸುವುದರಿಂದ ಏನಾದರೂ ನಷ್ಟವಾದೀತೆ?
ಎಚ್ಚರಿಕೆಗೆ ಕಾರಣಗಳು
ನೀವು ಪ್ರೌಢರಾಗುತ್ತಾ ಹೋದಂತೆ ನಿಮ್ಮ ಅಭಿರುಚಿಗಳು ಸಹ ಬದಲಾಗುವುದು ವಾಸ್ತವಿಕ ಸಂಗತಿಯಾಗಿದೆ. ಅಪೊಸ್ತಲ ಪೌಲನು ಬರೆಯುವುದು: “ನಾನು ಬಾಲಕನಾಗಿದ್ದಾಗ ಬಾಲಕನ ಮಾತುಗಳನ್ನಾಡಿದೆನು, ಬಾಲಕನ ಸುಖದುಃಖಗಳನ್ನು ಅನುಭವಿಸಿದೆನು, ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು. ಪ್ರಾಯಸ್ಥನಾದ ಮೇಲೆ ಬಾಲ್ಯದವುಗಳನ್ನು ಬಿಟ್ಟುಬಿಟ್ಟೆನು.” (1 ಕೊರಿಂಥ 13:11) ತದ್ರೀತಿಯಲ್ಲಿ, ನೀವು ಹದಿಪ್ರಾಯದವರಾಗಿರುವಾಗ ಇನ್ನೊಬ್ಬ ವ್ಯಕ್ತಿಯಲ್ಲಿ ನಿಮಗೆ ಇಷ್ಟವಾಗುವಂಥ ಗುಣಗಳು, ನೀವು ಇನ್ನೂ ಹೆಚ್ಚು ಪ್ರಾಯದವರಾದಾಗ ಇಷ್ಟವಾಗುವಂಥ ಗುಣಗಳಿಗಿಂತ ತೀರ ಭಿನ್ನವಾಗಿರುವುದು ಸಂಭವನೀಯ. ಹೀಗಿರುವುದರಿಂದ, ಒಬ್ಬ ವಿವಾಹ ಸಂಗಾತಿಯನ್ನು ಆಯ್ಕೆಮಾಡುವ ಗಂಭೀರ ಹೆಜ್ಜೆಯನ್ನು ನೀವು ತೆಗೆದುಕೊಳ್ಳುವ ಮೊದಲು, “ಯೌವನದ ಪರಿಪಕ್ವ ಸ್ಥಿತಿಯನ್ನು ದಾಟುವ ತನಕ” (NW) ಅಂದರೆ ನಿಮ್ಮ ಲೈಂಗಿಕ ಬಯಕೆಗಳು ಅತಿ ತೀವ್ರವಾಗಿರುವ ವರ್ಷಗಳು ಕೊನೆಗೊಳ್ಳುವ ವರೆಗೆ ಕಾಯುವಂತೆ ಬೈಬಲ್ ನಿಮಗೆ ಶಿಫಾರಸ್ಸುಮಾಡುತ್ತದೆ.—1 ಕೊರಿಂಥ 7:36.
ನಿಮ್ಮ ಹೆತ್ತವರು ನೀವು ಮದುವೆಯಾಗಲು ಇಷ್ಟಪಟ್ಟಿರುವ ವ್ಯಕ್ತಿಯಲ್ಲಿ ಏನಾದರೂ ಲೋಪದೋಷಗಳನ್ನು ಕಂಡುಕೊಳ್ಳುವಲ್ಲಿ ಆಗೇನು? ಜೀವನದಲ್ಲಿನ ಅನುಭವದ ಕಾರಣ ನಿಮ್ಮ ಹೆತ್ತವರ ಗ್ರಹಣಶಕ್ತಿಗಳು ಒಳ್ಳೇದರ ಮತ್ತು ಕೆಟ್ಟದ್ದರ ನಡುವಣ ಭೇದವನ್ನು ವಿವೇಚಿಸಲು ಹೆಚ್ಚು ಉತ್ತಮವಾಗಿ ತರಬೇತಿಗೊಂಡಿರಬಹುದು. (ಇಬ್ರಿಯ 5:14) ಆದುದರಿಂದ ನೀವು ಇಷ್ಟಪಟ್ಟಿರುವ ಸಂಗಾತಿಯ ವ್ಯಕ್ತಿತ್ವದಲ್ಲಿರುವ ಗಂಭೀರವಾದ ಲೋಪದೋಷಗಳು ಅವರ ಕಣ್ಣಿಗೆ ಬೀಳಬಹುದು, ಆದರೆ ನಿಮ್ಮ ಕಣ್ಣಿಗೆ ಕಾಣಿಸದೆ ಇರಬಹುದು. ವಿವೇಕಿಯಾದ ಸೊಲೊಮೋನನು ಏನು ಬರೆದನೋ ಅದನ್ನು ತತ್ತ್ವತಃ ಪರಿಗಣಿಸಿರಿ: “ಮೊದಲು ವಾದಿಸುವವನು ನ್ಯಾಯವಾದಿ ಎಂದು ತೋರುವನು; ಪ್ರತಿವಾದಿ ಎದ್ದ ಮೇಲೆ ಅವನ ಪರೀಕ್ಷೆ ಆಗುವದು.” (ಜ್ಞಾನೋಕ್ತಿ 18:17) ತದ್ರೀತಿಯಲ್ಲಿ, ನಿಮ್ಮ ಪ್ರಿಯ ವ್ಯಕ್ತಿಯು ನಿಮಗೆ, ‘ಅನುರೂಪ ಜೋಡಿಯಾಗಿದ್ದೇನೆ’ ಎಂಬ ನಿಶ್ಚಿತಾಭಿಪ್ರಾಯವನ್ನು ನಿಮ್ಮಲ್ಲಿ ಮೂಡಿಸಿರಬಹುದು. ಆದರೆ, ನಿಮ್ಮ ಹೆತ್ತವರು ‘ಅವರನ್ನು ಪರೀಕ್ಷೆ’ ಮಾಡಿದ ಬಳಿಕ, ಪರಿಗಣನೆಗೆ ಅರ್ಹವಾದ ಕೆಲವು ವಾಸ್ತವಾಂಶಗಳ ಕಡೆಗೆ ಅವರು ನಿಮ್ಮ ಗಮನ ಸೆಳೆಯಬಹುದು.
ಉದಾಹರಣೆಗೆ, ನಿಜ ಕ್ರೈಸ್ತರು “ಕರ್ತನಲ್ಲಿ ಮಾತ್ರ” (NW) ವಿವಾಹವಾಗಬೇಕು ಎಂದು ಬೈಬಲ್ ನಿರ್ದೇಶಿಸುತ್ತದೆ ಎಂಬುದನ್ನು ನಿಮ್ಮ ಹೆತ್ತವರು ನಿಮಗೆ ದೃಢವಾಗಿ ನೆನಪುಹುಟ್ಟಿಸಬಹುದು. (1 ಕೊರಿಂಥ 7:39) ಆಗ, ಮದುವೆಗೆ ಮುಂಚೆ ಕ್ರೈಸ್ತ ನಂಬಿಕೆಯುಳ್ಳವನಾಗಿರದಂಥ ಒಬ್ಬ ವ್ಯಕ್ತಿಯನ್ನು ವಿವಾಹವಾಗಿ ಈಗ ಇಬ್ಬರೂ ಜೊತೆಯಾಗಿ ಸಂತೋಷದಿಂದ ಯೆಹೋವನ ಸೇವೆಮಾಡುತ್ತಿರುವ ಒಬ್ಬರ ಬಗ್ಗೆ ನಿಮಗೆ ಗೊತ್ತಿದೆ ಎಂದು ನೀವು ಆಕ್ಷೇಪವೆತ್ತಬಹುದು. ಹೀಗೆ ಸಂಭವಿಸುತ್ತದೆ ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಆದರೆ, ಹೀಗೆ ಸಂಭವಿಸಿರುವುದು ಬಹಳ ಅಪರೂಪ; ಹೆಚ್ಚಿನವರು ಕೆಟ್ಟ ಪರಿಣಾಮವನ್ನು ಎದುರಿಸಿದ್ದಾರೆ. ನೀವು ಕ್ರೈಸ್ತ ನಂಬಿಕೆಯಲ್ಲಿರದಂಥ ಯಾರನ್ನಾದರೂ ವಿವಾಹವಾಗುವಲ್ಲಿ, ನೀವು ಯೆಹೋವನ ಮಟ್ಟಗಳನ್ನು ಅಗೌರವಿಸುತ್ತೀರಿ ಮಾತ್ರವಲ್ಲ ಸ್ವತಃ ನಿಮ್ಮನ್ನು ಗಂಭೀರವಾದ ಆಧ್ಯಾತ್ಮಿಕ ಅಪಾಯಕ್ಕೆ ಒಡ್ಡಿಕೊಳ್ಳುತ್ತೀರಿ.—2 ಕೊರಿಂಥ 6:14.c
ವಿವಾಹವಾಗಲು ಅವಿವೇಕಯುತವಾದ ಕಾರಣ
ಕೆಲವು ಯುವ ಜನರು ಅನೈತಿಕ ನಡತೆಯಲ್ಲಿ ಒಳಗೂಡಿದ ಕಾರಣ ಮತ್ತು ತಮ್ಮ ಸಹಭಾಗಿಯನ್ನು ವಿವಾಹವಾಗುವುದು ತಮ್ಮ ಮನಸ್ಸಾಕ್ಷಿಯನ್ನು ಹಗುರಗೊಳಿಸುತ್ತದೆ ಎಂದು ಭಾವಿಸಿದ ಕಾರಣ ಮನೆಯಿಂದ ಓಡಿಹೋಗಿ ವಿವಾಹವಾಗಿದ್ದಾರೆ. ಅಥವಾ ಅನುದ್ದೇಶಿತ ಗರ್ಭಧಾರಣೆಯಂಥ ತಮ್ಮ ಪಾಪದ ಪರಿಣಾಮಗಳನ್ನು ಮರೆಮಾಚುವ ಉದ್ದೇಶವೂ ಅವರಿಗಿರಬಹುದು.
ಒಂದುವೇಳೆ ಪಾಪವನ್ನು ಮರೆಮಾಚಲಿಕ್ಕಾಗಿ ನೀವು ವಿವಾಹವಾಗುತ್ತಿರುವಲ್ಲಿ, ಒಂದು ತಪ್ಪಿಗೆ ಇನ್ನೊಂದನ್ನು ಕೂಡಿಸುವ ಮೂಲಕ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತಿದ್ದೀರಷ್ಟೆ. ಸೊಲೊಮೋನನು ಎಚ್ಚರಿಕೆ ನೀಡಿದ್ದು: “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋಕ್ತಿ 28:13) ಸೊಲೊಮೋನನ ತಂದೆತಾಯಿಯರಾಗಿದ್ದ ದಾವೀದಬತ್ಷೆಬೆಯರು, ತಮ್ಮ ಅನೈತಿಕ ನಡತೆಯನ್ನು ಮರೆಮಾಚಲು ಪ್ರಯತ್ನಿಸಿದ್ದು ಎಷ್ಟು ಮೂರ್ಖತನದ ಕೆಲಸವಾಗಿತ್ತೆಂಬ ಪಾಠವನ್ನು ಕಲಿತಿದ್ದರು. (2 ಸಮುವೇಲ 11:2–12:25) ನಿಮ್ಮ ಪಾಪವನ್ನು ಮರೆಮಾಚುವ ಬದಲು, ನಿಮ್ಮ ಹೆತ್ತವರೊಂದಿಗೆ ಮತ್ತು ಸಭಾ ಹಿರಿಯರೊಂದಿಗೆ ಮಾತಾಡಿರಿ. ಹೀಗೆ ಮಾಡುವುದು ನಿಮ್ಮಿಂದ ಧೈರ್ಯವನ್ನು ಅಗತ್ಯಪಡಿಸಬಹುದು, ಆದರೆ ನೀವು ಪಶ್ಚಾತ್ತಾಪಪಡುವಲ್ಲಿ ಯೆಹೋವನು ನಿಮ್ಮನ್ನು ಕ್ಷಮಿಸುವನು ಎಂಬ ದೃಢನಿಶ್ಚಿತತೆ ನಿಮಗಿರಸಾಧ್ಯವಿದೆ. (ಯೆಶಾಯ 1:18) ಒಮ್ಮೆ ನೀವು ಶುದ್ಧ ಮನಸ್ಸಾಕ್ಷಿಯನ್ನು ಹಿಂದೆ ಪಡೆದ ಬಳಿಕ, ವಿವಾಹದ ಕುರಿತಾದ ಸಮತೂಕದ ನಿರ್ಧಾರವನ್ನು ಮಾಡಲು ನೀವು ಹೆಚ್ಚು ಉತ್ತಮ ಸ್ಥಾನದಲ್ಲಿರುವಿರಿ.
ವಿಷಾದಪಡದಿರುವುದು
ತನ್ನ ಮದುವೆಯ ಕುರಿತು ಜ್ಞಾಪಿಸಿಕೊಳ್ಳುತ್ತಾ ಅಲನ್ ಹೇಳುವುದು: “ನಾವು ಸರಳವಾದ ರೀತಿಯಲ್ಲಿ ಮದುವೆಯಾಗುವ ನಿರ್ಧಾರವನ್ನು ಮಾಡಿದ್ದರಿಂದ, ಆ ಸಂದರ್ಭದಲ್ಲಿ ನಾವು ಹೆಚ್ಚೇನೂ ಒತ್ತಡವನ್ನು ಅನುಭವಿಸಲಿಲ್ಲ. ನನಗಿರುವ ಒಂದೇ ವಿಷಾದವೇನೆಂದರೆ, ನಮ್ಮ ನಿರ್ಧಾರಕ್ಕಾಗಿರುವ ಕಾರಣಗಳನ್ನು ಹೆಚ್ಚು ಉತ್ತಮವಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವಂತೆ ನನ್ನ ಕುಟುಂಬಕ್ಕೆ ಸಹಾಯಮಾಡಲು ಶಕ್ತನಾಗಲಿಲ್ಲವಲ್ಲ ಎಂಬುದೇ.”
ಒಬ್ಬ ಪ್ರೌಢ ದಂಪತಿಯು ಸಾಂಪ್ರದಾಯಿಕ ರೀತಿಯ ಮದುವೆಯನ್ನು ಮಾಡಿಕೊಳ್ಳುತ್ತಾರೋ ಇಲ್ಲವೋ ಎಂಬುದು ಅವರ ಸ್ವಂತಕ್ಕೆ ಬಿಡಲ್ಪಟ್ಟ ವಿಷಯವಾಗಿದೆ ನಿಜ. ಆದರೆ, ವಿವಾಹದ ಕುರಿತಾದ ಯಾವುದೇ ನಿರ್ಧಾರಗಳನ್ನು ಮಾಡುವಾಗ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ, ನಿಮ್ಮ ಕುಟುಂಬದೊಂದಿಗೆ ವಿಷಯವನ್ನು ಚರ್ಚಿಸಿರಿ ಮತ್ತು ‘ನಿಮ್ಮ ಹೆಜ್ಜೆಗಳನ್ನು ಜಾಗರೂಕವಾಗಿ ಪರಿಗಣಿಸಿರಿ’ (NW). ಹೀಗೆಮಾಡುವಲ್ಲಿ, ನೀವು ವಿಷಾದಪಡಲಿಕ್ಕಾಗಿರುವ ಕಾರಣಗಳು ತೀರ ಕಡಿಮೆಯಾಗಿರುವವು.—ಜ್ಞಾನೋಕ್ತಿ 14:15. (g05 11/22)
[ಪಾದಟಿಪ್ಪಣಿಗಳು]
a ಹೆಸರುಗಳನ್ನು ಬದಲಾಯಿಸಲಾಗಿದೆ.
b ಈ ಆರಾಧನಾ ಸ್ಥಳಗಳು ಯೆಹೋವನ ಸಾಕ್ಷಿಗಳ ಮದುವೆಗಳಿಗೆ ಸೂಕ್ತವಾದ ಸ್ಥಳಗಳಾಗಿರುತ್ತವೆ. ಈ ಸಮಾರಂಭವು ಸರಳವಾಗಿರುತ್ತದೆ ಮತ್ತು ಅದರಲ್ಲಿ ಒಂದು ಒಳ್ಳೇ ವಿವಾಹದ ಅಸ್ತಿವಾರದೋಪಾದಿ ಕಾರ್ಯನಡಿಸುವ ಬೈಬಲ್ ಮೂಲತತ್ತ್ವಗಳ ಒಂದು ಸಂಕ್ಷಿಪ್ತ ಭಾಷಣವಿರುತ್ತದೆ. ಅವರು ಒಂದು ರಾಜ್ಯ ಸಭಾಗೃಹವನ್ನು ಉಪಯೋಗಿಸಲು ಯಾವುದೇ ರೀತಿಯ ವಂತಿಗೆಯನ್ನು ನೀಡಬೇಕಾಗಿರುವುದಿಲ್ಲ.
c ಈ ವಿಷಯದ ಕುರಿತಾದ ಹೆಚ್ಚು ವಿಸ್ತೃತ ಚರ್ಚೆಗಾಗಿ, ಕಾವಲಿನಬುರುಜು ಪತ್ರಿಕೆಯ 2004, ಜುಲೈ 1ರ ಸಂಚಿಕೆಯ 30-31ನೇ ಪುಟಗಳು, ಮತ್ತು 1990, ಜೂನ್ 1ರ ಸಂಚಿಕೆಯ 12-16ನೇ ಪುಟಗಳನ್ನು ನೋಡಿ.
[ಪುಟ 27ರಲ್ಲಿರುವ ಚಿತ್ರ]
ವಿವಾಹದ ಕುರಿತಾದ ಯಾವುದೇ ನಿರ್ಧಾರಗಳನ್ನು ಮಾಡಲಿಕ್ಕಿರುವಾಗ, ನಿಮ್ಮ ಕುಟುಂಬದೊಂದಿಗೆ ಚರ್ಚಿಸಿರಿ