ಜಗತ್ತನ್ನು ಗಮನಿಸುವುದು
ಜಗತ್ತಿನ ಅಚ್ಚುಮೆಚ್ಚಿನ ಪ್ರಾಣಿ
“ನಾಯಿಯು ಮನುಷ್ಯನ ಆಪ್ತ ಮಿತ್ರನಾಗಿರಬಹುದು, ಆದರೆ ಜಗತ್ತಿನ ಅಚ್ಚುಮೆಚ್ಚಿನ ಪ್ರಾಣಿ ಹುಲಿಯಾಗಿದೆ” ಎಂದು ಲಂಡನ್‌ನ ದಿ ಇಂಡಿಪೆಂಡೆಂಟ್ ವಾರ್ತಾಪತ್ರಿಕೆಯು ವರದಿಸುತ್ತದೆ. ಹತ್ತು ಪ್ರಾಣಿಗಳಲ್ಲಿ ಪ್ರತಿಯೊಂದನ್ನು ಎತ್ತಿತೋರಿಸುವಂಥ ಸಾಕ್ಷ್ಯಚಿತ್ರಗಳ ಸರಣಿಯನ್ನು ಪ್ರದರ್ಶಿಸಿದ ಬಳಿಕ, 73 ದೇಶಗಳಿಂದ ಬಂದ 52,000ಕ್ಕಿಂತಲೂ ಹೆಚ್ಚು ಮಂದಿಯ ಒಂದು ಸಮೀಕ್ಷೆಯು ಹುಲಿಗೆ ಪ್ರಥಮ ಸ್ಥಾನವನ್ನು ನೀಡಿತು ಮತ್ತು ಕೇವಲ 17 ಮತಗಳ ವ್ಯತ್ಯಾಸದಲ್ಲಿ ನಾಯಿಗೆ ಎರಡನೇ ಸ್ಥಾನವು ಕೊಡಲ್ಪಟ್ಟಿತು. ಮೂರನೇ ಸ್ಥಾನವು ಡಾಲ್ಫಿನ್‌ಗೆ ಮತ್ತು ತದನಂತರದ ಸ್ಥಾನಗಳು ಕುದುರೆ, ಸಿಂಹ, ಹಾವು, ಆನೆ, ಚಿಂಪಾಂಜಿ, ನರವಾನರ ಹಾಗೂ ತಿಮಿಂಗಿಲಕ್ಕೆ ಕೊಡಲ್ಪಟ್ಟವು. ಪ್ರಾಣಿಗಳ ವರ್ತನೆಯ ಪರಿಣತರಾಗಿರುವ ಡಾ. ಕ್ಯಾಂಡೀ ಡ್ಸಾರವರು ವಿವರಿಸಿದ್ದೇನೆಂದರೆ, ಮಾನವರಿಗೆ “ಹುಲಿಯೊಂದಿಗೆ ಸಂಬಂಧ ಕಲ್ಪಿಸಸಾಧ್ಯವಿದೆ, ಏಕೆಂದರೆ ಅದು ಹೊರತೋರಿಕೆಗೆ ಉಗ್ರವಾದದ್ದೂ ಗಂಭೀರವಾದದ್ದೂ ಆಗಿದೆಯಾದರೂ ಆಂತರ್ಯದಲ್ಲಿ ಉದಾತ್ತವೂ ವಿವೇಚನೆಯುಳ್ಳದ್ದೂ ಆಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ನಾಯಿಯು ನಿಷ್ಠೆ ಹಾಗೂ ಗೌರವಭರಿತ ಪ್ರಾಣಿಯಾಗಿದೆ ಮತ್ತು ಮಾನವರು ಹೆಚ್ಚು ಸ್ನೇಹಪರವಾದ, ಅಭಿವ್ಯಕ್ತಿಶೀಲ ಗುಣವನ್ನು ತೋರಿಸುವಂತೆ ಮಾಡುವಂಥದ್ದಾಗಿದೆ.” ಹುಲಿಯ ಈ ವಿಜಯವು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಕರಿಗೆ ಸಂತೋಷ ತಂದಿತು. ನಿಸರ್ಗಕ್ಕಾಗಿರುವ ಲೋಕವ್ಯಾಪಕ ನಿಧಿ ಸಂಸ್ಥೆಯ ಸದಸ್ಯರಾದ ಕಲಮ್ ರಾಂಕನ್ ಹೇಳಿದ್ದು: “ಹುಲಿ ತಮ್ಮ ಅಚ್ಚುಮೆಚ್ಚಿನ ಪ್ರಾಣಿಯೆಂದು ಜನರು ಮತಹಾಕುತ್ತಿರುವಲ್ಲಿ, ಅವರು ಹುಲಿಗಳ ಪ್ರಮುಖತೆಯನ್ನು ಮತ್ತು ಬಹುಶಃ ಅವುಗಳ ಉಳಿವನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯವನ್ನು ಮನಗಾಣುತ್ತಾರೆ ಎಂಬುದು ಇದರ ಅರ್ಥವಾಗಿದೆ.” ಕಾಡಿನಲ್ಲಿ ಈಗ ಕೇವಲ 5,000 ಹುಲಿಗಳು ಮಾತ್ರ ಉಳಿದಿವೆ ಎಂದು ಅಂದಾಜುಮಾಡಲಾಗಿದೆ. (g05 12/22)
ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಆರೋಗ್ಯ
ಸೈಅನ್ಸ್ ಎಂಬ ಪತ್ರಿಕೆಯು ತಿಳಿಸುವುದು: “ಬಾಯಿಯು ತುಂಬ ಜಟಿಲವಾದ ಒಂದು ಪರಿಸರ ವ್ಯವಸ್ಥೆಯಾಗಿದೆ. ಕಳೆದ 40 ವರ್ಷಗಳಿಂದ ಬಾಯಿಯ ಕುರಿತು ಅಧ್ಯಯನ ನಡೆಸುತ್ತಿರುವ ಜೀವಶಾಸ್ತ್ರಜ್ಞರು, ಹಲ್ಲುಗಳು, ಒಸಡುಗಳು ಹಾಗೂ ನಾಲಿಗೆಯ ಮೇಲೆ ಮತ್ತು ಸುತ್ತಲೂ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಅತ್ಯಧಿಕ ಸಂಖ್ಯೆಯ ಸೂಕ್ಷಜೀವಿಗಳ ಜಾತಿಗಳನ್ನು ಪರಿಶೀಲಿಸುತ್ತಾ ಇದ್ದಾರೆ.” ಸಾಮಾನ್ಯವಾಗಿ ಬಾಯಿಯಲ್ಲಿ ಕಂಡುಬರುವ ಬ್ಯಾಕ್ಟೀರಿಯವು ದೇಹದ ಬೇರೆ ಭಾಗಗಳನ್ನು ಸಹ ತಲಪಸಾಧ್ಯವಿದೆ ಮತ್ತು ಸಮಸ್ಯೆಗಳನ್ನು ಉಂಟುಮಾಡಸಾಧ್ಯವಿದೆ ಎಂಬುದು ಸ್ವಲ್ಪ ಕಾಲಾವಧಿಗೆ ಮುಂಚಿನಿಂದ ಜೀವಶಾಸ್ತ್ರಜ್ಞರಿಗೆ ತಿಳಿದಿದೆ. ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳಲ್ಲೊಂದು ಹೃದಯದ ಸಮಸ್ಯೆಗಳಿಗೆ ಕಾರಣವಾಗಿದೆ ಎಂಬುದು ಈಗಾಗಲೇ ಕಂಡುಹಿಡಿಯಲ್ಪಟ್ಟಿದೆ, ಮತ್ತು ಇನ್ನೊಂದು ರೀತಿಯ ಬ್ಯಾಕ್ಟೀರಿಯವು ಅಕಾಲಿಕ ಜನನಕ್ಕೆ ಕಾರಣವಾದ ಅಂಶವಾಗಿರಬಹುದು ಎಂಬುದನ್ನು ಅಧ್ಯಯನಗಳು ಸೂಚಿಸುತ್ತಿವೆ. ಹಾನಿಕಾರಕ ಬ್ಯಾಕ್ಟೀರಿಯಗಳು ಹೆಚ್ಚಿನ ಹಾನಿಯನ್ನು ನೇರವಾಗಿಯೇ ಮಾಡುತ್ತವೆ ಎಂಬುದಂತೂ ನಿಜ. ಅವು ತೀವ್ರಗತಿಯಲ್ಲಿ ಅಧಿಕಗೊಂಡು, ಬಾಯಿಯಲ್ಲಿರುವ ಒಳ್ಳೇ ಬ್ಯಾಕ್ಟೀರಿಯಕ್ಕಿಂತ ಅವುಗಳ ಸಂಖ್ಯೆ ಹೆಚ್ಚಾಗುವಲ್ಲಿ, ದಂತಕುಳಿಗಳು, ರಕ್ತಸ್ರವಿಸುವ ಒಸಡುಗಳು ಮತ್ತು ಉಸಿರಿನ ದುರ್ವಾಸನೆಯು ಉಂಟಾಗಬಹುದು. ಆ ವರದಿಯು ತಿಳಿಸುವುದು: “65ಕ್ಕಿಂತಲೂ ಹೆಚ್ಚಿನ ಪ್ರಾಯದ 10ರಲ್ಲಿ ಮೂರು ಮಂದಿ ತಮ್ಮ ಎಲ್ಲ ಹಲ್ಲುಗಳನ್ನು ಕಳೆದುಕೊಂಡಿರುತ್ತಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಎಲ್ಲ ವಯಸ್ಕರಲ್ಲಿ ಅರ್ಧದಷ್ಟು ಮಂದಿಗೆ ಒಸಡಿನ ರೋಗವಿರುತ್ತದೆ ಅಥವಾ ಹುಳುಕು ಹಲ್ಲಿರುತ್ತದೆ.” ಈ ಬ್ಯಾಕ್ಟೀರಿಯಗಳ ಕುರಿತು ಅಧ್ಯಯನಮಾಡುವ ಮೂಲಕ, “ಬಾಯಿಯಲ್ಲಿರುವ ಒಳ್ಳೆಯ ಹಾಗೂ ಕೆಟ್ಟ ಸೂಕ್ಷ್ಮಜೀವಿಗಳನ್ನು ತಡೆಯುವಂಥ ಮೌತ್‌ವಾಷ್ (ಬಾಯಿಯನ್ನು ಮುಕ್ಕಳಿಸಲು ಬಳಸುವ ಪೂತಿನಾಶಕ ದ್ರವ)ಗಳಿಗೆ ಬದಲಾಗಿ ಕೆಟ್ಟ ಸೂಕ್ಷ್ಮಜೀವಿಗಳನ್ನು ಮಾತ್ರ ತಡೆಗಟ್ಟುವಂಥ ಮೌತ್‌ವಾಷ್‌ಗಳನ್ನು” ಹೇಗೆ ತಯಾರಿಸುವುದು ಎಂಬುದನ್ನು ತಿಳಿಯುವ ನಿರೀಕ್ಷೆ ಸಂಶೋಧಕರಿಗಿದೆ. (g05 12/22)
ನಿದ್ರಾ ರೂಢಿಗಳು
“ಏಷಿಯದ ಜನರು ಮಧ್ಯರಾತ್ರಿಯ ವರೆಗೆ ದೀಪವನ್ನು ಉರಿಸುತ್ತಾರೆ, ಅಮೆರಿಕದ ಹಾಗೂ ಯೂರೋಪ್‌ನ ಅಧಿಕಾಂಶ ಜನರಿಗಿಂತಲೂ ತೀರ ತಡವಾಗಿ ಮಲಗುತ್ತಾರೆ ಮತ್ತು ಬೇಗನೆ ಏಳುತ್ತಾರೆ ಎಂದು ನಿದ್ರಾ ರೂಢಿಗಳ ಕುರಿತಾದ ಒಂದು ಭೌಗೋಳಿಕ ಸಮೀಕ್ಷೆಯು ಕಂಡುಹಿಡಿದಿದೆ” ಎಂಬುದಾಗಿ ಆಲ್‌ಜಾಸೀರಾ ಎಂಬ ವಾರ್ತಾ ಚ್ಯಾನಲ್ ವರದಿಸುತ್ತದೆ. 28 ದೇಶಗಳಲ್ಲಿರುವ 14,000ಕ್ಕಿಂತಲೂ ಹೆಚ್ಚು ಜನರನ್ನು, ಸಾಮಾನ್ಯವಾಗಿ ಅವರು ಯಾವಾಗ ಮಲಗುತ್ತಾರೆ ಮತ್ತು ಯಾವಾಗ ಏಳುತ್ತಾರೆ ಎಂದು ಕೇಳಲಾಯಿತು. ಪೋರ್ಚುಗಲ್‌ನಲ್ಲಿ, 4 ಮಂದಿಯಲ್ಲಿ ಮೂವರು ಮಧ್ಯರಾತ್ರಿ ಕಳೆದ ಬಳಿಕ ಮಲಗುತ್ತಾರೆ. ಏಷಿಯದವರು ಅತಿ ಬೇಗನೆ ಏಳುವವರಾಗಿದ್ದಾರೆ—ಇದರಲ್ಲಿ ಇಂಡೊನೇಷಿಯವು ಪ್ರಥಮ ಸ್ಥಾನದಲ್ಲಿದ್ದು “ಇಲ್ಲಿನ 91% ಮಂದಿ ಬೆಳಗ್ಗೆ 7 ಗಂಟೆಯಷ್ಟಕ್ಕೆ ಏಳುತ್ತೇವೆ ಎಂದು ಹೇಳಿದರು.” ಜಪಾನೀಯರು ತೀರ ಕಡಿಮೆ ನಿದ್ರಿಸುವವರಾಗಿದ್ದಾರೆ. ಅವರಲ್ಲಿ 40 ಪ್ರತಿಶತಕ್ಕಿಂತಲೂ ಹೆಚ್ಚು ಮಂದಿ ಪ್ರತಿ ರಾತ್ರಿ ಆರು ತಾಸು ಅಥವಾ ಅದಕ್ಕಿಂತಲೂ ಕಡಿಮೆ ತಾಸು ನಿದ್ರಿಸುತ್ತಾರೆ. ಅತಿ ಹೆಚ್ಚು ನಿದ್ರಿಸುವವರು ಆಸ್ಟ್ರೇಲಿಯದವರಾಗಿದ್ದಾರೆ. ಅಲ್ಲಿ ರಾತ್ರಿ 10 ಗಂಟೆಗಿಂತಲೂ ಮುಂಚೆ ನಿದ್ರೆಹೋಗುವವರ ಸಂಖ್ಯೆ ಅತ್ಯಧಿಕವಾಗಿದೆ ಮಾತ್ರವಲ್ಲ, ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಸುಮಾರು ಮೂರನೇ ಒಂದು ಭಾಗದಷ್ಟು ಮಂದಿ ಸರಾಸರಿ ತಾವು ಪ್ರತಿ ರಾತ್ರಿ ಒಂಬತ್ತು ತಾಸುಗಳಿಗಿಂತಲೂ ಹೆಚ್ಚು ನಿದ್ರೆಮಾಡುತ್ತೇವೆ ಎಂದು ಹೇಳಿದರು. (g05 12/22)
ಮಕ್ಕಳಿಗಾಗಿ “ಕಾಂಗರೂ ಆರೈಕೆ”
“ಕಾಂಗರೂ ಆರೈಕೆಯನ್ನು ಪಡೆಯುವ ಶಿಶುಗಳು ಹೆಚ್ಚು ಸಮಯ ನಿದ್ರಿಸುತ್ತವೆ, ಅವುಗಳ ಉಸಿರಾಟ ಉತ್ತಮಗೊಳ್ಳುತ್ತದೆ ಮತ್ತು ಬೇಗನೆ ತೂಕವನ್ನು ಗಳಿಸುತ್ತವೆ” ಎಂದು ಜಪಾನ್‌ನ ಡೈಲಿ ಯೋಮೀಯುರೀ ವಾರ್ತಾಪತ್ರಿಕೆಯು ತಿಳಿಸುತ್ತದೆ. ಈ “ಕಾಂಗರೂ ಆರೈಕೆ” ಏನಾಗಿದೆ? ಇದರರ್ಥ, ತಾಯಂದಿರು ಅಥವಾ ತಂದೆಯರು ಹಾಸಿಗೆಯಲ್ಲಿ ಮೇಲ್ಮುಖವಾಗಿ ಮಲಗುತ್ತಾರೆ ಮತ್ತು ಪ್ರತಿ ದಿನ ಒಂದೆರಡು ತಾಸುಗಳ ವರೆಗೆ ಶಿಶುವನ್ನು ತಮ್ಮ ಬತ್ತಲೆ ಎದೆಯ ಮೇಲೆ ಮಲಗಿಸಿಕೊಳ್ಳುತ್ತಾರೆ. ಟೋಕಿಯೊ ಮೆಟ್ರೊಪೊಲಿಟನ್ ಬೋಕುಟೋ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ವಿಭಾಗದ ಮುಖ್ಯಸ್ಥರಾಗಿರುವ ಟೋಬೋಕೋ ವಾಟಾನಾಬೆ ಹೇಳಿದ್ದು: “ಕೊಲಂಬಿಯದಲ್ಲಿ ಇನ್‌ಕ್ಯುಬೇಟರ್‌ನ [ಕೃತಕ ಶಾಖೋಪಕರಣದ] ಕೊರತೆಯಿದ್ದಾಗ ತುರ್ತಿನ ಕ್ರಮದೋಪಾದಿ ಕಾಂಗರೂ ಆರೈಕೆಯು ಆರಂಭಗೊಂಡಿತು. ಇದರ ಪರಿಣಾಮವಾಗಿ ಅಕಾಲಿಕವಾಗಿ ಹುಟ್ಟಿರುವ ಶಿಶುಗಳ ಮರಣ ಪ್ರಮಾಣವು ಇದ್ದಕ್ಕಿದ್ದಂತೆ ಕಡಿಮೆಯಾಯಿತು ಮತ್ತು ಆಸ್ಪತ್ರೆಯಲ್ಲಿ ಇರಬೇಕಾದ ಕಾಲಾವಧಿಯು ಸಹ ಕಡಿಮೆಯಾಯಿತು ಎಂಬುದನ್ನು ಯೂನಿಸೆಫ್ ಗಮನಿಸಿತು.” ಡೈಲಿ ಯೋಮೀಯುರೀ ವಾರ್ತಾಪತ್ರಿಕೆಯು ತಿಳಿಸಿದಂತೆ, ಈಗ “ವಿಕಾಸಹೊಂದಿರುವ ದೇಶಗಳಲ್ಲಿ ಅಕಾಲಿಕವಾಗಿ ಹುಟ್ಟುವ ಶಿಶುಗಳಿಗಾಗಿ ಮತ್ತು ಸರಿಯಾದ ಸಮಯದಲ್ಲಿ ಹುಟ್ಟುವ ಶಿಶುಗಳಿಗಾಗಿ ಕಾಂಗರೂ ಆರೈಕೆಯು ಹೆಚ್ಚೆಚ್ಚು ಜನಪ್ರಿಯಗೊಳ್ಳುತ್ತಿದೆ.” ಚರ್ಮದಿಂದ ಚರ್ಮದ ಸಂಪರ್ಕವು ಅನೇಕ ಪ್ರಯೋಜನಗಳನ್ನು ಹೊಂದಿದ್ದು, ಹೆತ್ತವರು ತಮ್ಮ ಶಿಶುಗಳೊಂದಿಗೆ ಆಪ್ತ ಸಂಬಂಧವನ್ನು ಬೆಳೆಸುವಂಥ ಒಂದು ಪ್ರಯೋಜನವು ಇದರಲ್ಲಿ ಸೇರಿದೆ. ಅಷ್ಟುಮಾತ್ರವಲ್ಲ, ಇದಕ್ಕೆ ಹಣಕಾಸಿನ ವೆಚ್ಚವೂ ಇಲ್ಲ, ವಿಶೇಷ ಉಪಕರಣಗಳ ಆವಶ್ಯಕತೆಯೂ ಇಲ್ಲ. (g05 12/22)
ಯುವ ಜನರು ಮತ್ತು ಮೊಬೈಲ್ ಫೋನ್‌ಗಳು
“ಬ್ರಿಟನ್‌ನ ಯುವ ಜನರ ಬಳಿ ಮೊಬೈಲ್ ಟೆಲಿಫೋನ್‌ಗಳು ಇಲ್ಲದೆ ಹೋದರೆ, ಅವರಿಗೆ ತಮ್ಮ ಜೀವನಗಳನ್ನು ವ್ಯವಸ್ಥಾಪಿಸುವುದು ಅಸಾಧ್ಯವಾದದ್ದಾಗುತ್ತದೆ” ಎಂದು ಲಂಡನ್‌ನ ಡೈಲಿ ಟೆಲಿಗ್ರಾಫ್ ವಾರ್ತಾಪತ್ರಿಕೆಯು ವರದಿಸುತ್ತದೆ. ಸಂಶೋಧಕರು 15ರಿಂದ 24 ವರ್ಷದ ಯುವ ಜನರ ಒಂದು ಗುಂಪಿನ ಬಳಿ ಎರಡು ವಾರಗಳ ವರೆಗೆ ಸೆಲ್ ಫೋನ್‌ಗಳು ಇಲ್ಲದಿರುವಂತೆ ನೋಡಿಕೊಂಡರು. ಆ ವರದಿಯು ತಿಳಿಸುವುದು: “ಅದು ತುಂಬ ವಿಚಿತ್ರವಾದ ಅನುಭವವಾಗಿತ್ತು. ಯುವ ಜನರು ಅಸಾಮಾನ್ಯವಾದ ಅನುಭವಗಳಿಗೆ ಒಗ್ಗಿಕೊಳ್ಳುವಂತೆ ಒತ್ತಾಯಿಸಲ್ಪಟ್ಟರು; ಇವುಗಳಲ್ಲಿ ತಮ್ಮ ಸ್ವಂತ ಹೆತ್ತವರೊಂದಿಗೆ ಮಾತಾಡುವುದು, ಸ್ನೇಹಿತರೊಂದಿಗೆ ಫೋನ್‌ನಲ್ಲಿ ಮಾತಾಡುವುದಕ್ಕೆ ಬದಲಾಗಿ ಅವರನ್ನು ವ್ಯಕ್ತಿಗತವಾಗಿ ಮನೆಗಳಲ್ಲಿ ಭೇಟಿಮಾಡುವುದು ಮತ್ತು ತಮ್ಮ ಸ್ನೇಹಿತರ ಹೆತ್ತವರನ್ನು ಸಂಧಿಸುವುದು ಒಳಗೂಡಿತ್ತು.” ಇಂಗ್ಲೆಂಡ್‌ನ ಲ್ಯಾಂಕಸ್ಟರ್ ಯೂನಿವರ್ಸಿಟಿಯ ಪ್ರೊಫೆಸರ್ ಮೀಕಾಯೆಲ್ ಹ್ಯೂಮ್ ಅವರು, ಸೆಲ್ ಫೋನ್‌ಗಳನ್ನು ಉಪಯೋಗಿಸುವ ಯುವ ಜನರ ಸಾಮಾನ್ಯ ಸಂಭಾಷಣೆಗಳು “ಸ್ವತಃ ತಮಗೆ ಆಶ್ವಾಸನೆ ನೀಡಿಕೊಳ್ಳುವ ಮತ್ತು ವೈಯಕ್ತಿಕ ಗುರುತನ್ನು ಸ್ಥಾಪಿಸಿಕೊಳ್ಳುವ ಒಂದು ವಿಧವಾಗಿವೆ” ಎಂದು ವರ್ಣಿಸುತ್ತಾರೆ. ಹದಿಪ್ರಾಯದ ಒಬ್ಬ ಹುಡುಗಿಗೆ ಫೋನ್ ಇಲ್ಲದಿದ್ದುದರಿಂದ “ಕಳವಳ ಹಾಗೂ ಒತ್ತಡದ” ಅನಿಸಿಕೆಯಾಯಿತು, ಇನ್ನೊಬ್ಬ ಹದಿವಯಸ್ಕನಿಗೆ ಒಂಟಿಯಾದ ಅನಿಸಿಕೆಯಾಯಿತು ಮತ್ತು “[ಅವನು] ಇಷ್ಟಪಟ್ಟಾಗಲೆಲ್ಲ [ಅವನ] ಸ್ನೇಹಿತರೊಂದಿಗೆ ಮಾತಾಡಲು ಶಕ್ತನಾಗುವುದಕ್ಕೆ” ಬದಲಾಗಿ “ಜನರನ್ನು ನಿರ್ದಿಷ್ಟ ಸಮಯಗಳಲ್ಲಿ ಭೇಟಿಯಾಗಲು ಮುಂಚಿತವಾಗಿಯೇ ಯೋಜನೆಯನ್ನು ಮಾಡಬೇಕಾಗಿತ್ತು” ಎಂದು ಆ ವಾರ್ತಾಪತ್ರಿಕೆಯು ವರದಿಸುತ್ತದೆ. (g05 11/8)
“ಅತಿ ಸುಂದರವಾದ ಗೃಹಾಲಂಕಾರ”
“ಚೀನಾದಲ್ಲಿ ಕಾನೂನುಬಾಹಿರವಾಗಿ ಹುಲಿಗಳ ಚರ್ಮಗಳನ್ನು ಖರೀದಿಸುತ್ತಿರುವ ಪಾಶ್ಚಾತ್ಯ ಪ್ರವಾಸಿಗರು ಮತ್ತು ವ್ಯಾಪಾರಿಗಳು, ಜಗತ್ತಿನಲ್ಲಿ ಅತಿ ಹೆಚ್ಚಾಗಿ ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದರ ವಧೆಗೆ ಕಾರಣರಾಗಿದ್ದಾರೆ” ಎಂದು ಲಂಡನ್‌ನ ದ ಸಂಡೆ ಟೆಲಿಗ್ರಾಫ್ ವಾರ್ತಾಪತ್ರಿಕೆಯು ತಿಳಿಸುತ್ತದೆ. ಒಂದು ಶತಮಾನಕ್ಕೆ ಮುಂಚೆ ಕಾಡಿನ ಹುಲಿಗಳ ಸಂಖ್ಯೆಯು 1,00,000ದಷ್ಟಿತ್ತು, ಆದರೆ ಇಂದು ಅದು 5,000ಕ್ಕಿಂತಲೂ ಕಡಿಮೆ ಸಂಖ್ಯೆಗೆ ಇಳಿದಿದೆ. ಇವುಗಳಲ್ಲಿ ಹೆಚ್ಚಿನವು ಭಾರತದಲ್ಲಿವೆ ಮತ್ತು ಇನ್ನು ಕೆಲವು ದಕ್ಷಿಣ ಏಷಿಯ ಹಾಗೂ ದೂರ ಪ್ರಾಚ್ಯದ ಇತರ ದೇಶಗಳಲ್ಲಿವೆ. ಲಂಡನ್‌ನ ಪರಿಸರೀಯ ವಿಚಾರಣಾ ಏಜೆನ್ಸಿ ಎಂಬ ಧರ್ಮಕಾರ್ಯದ ಸಂಸ್ಥೆಯು ವರದಿಸುವಂತೆ, ಯಾರು ಹುಲಿಗಳ ಚರ್ಮಗಳನ್ನು ಖರೀದಿಸುತ್ತಾರೋ ಅವರು “ಅವುಗಳನ್ನು ಅತಿ ಸುಂದರವಾದ ಗೃಹಾಲಂಕಾರ ವಸ್ತುಗಳಾಗಿ ಪರಿಗಣಿಸುತ್ತಾರೆ, ಆದರೆ ಹೀಗೆ ಅವರು ಹುಲಿಗಳ ಜಾತಿಯನ್ನೇ ಅಳಿವಿನ ಅಂಚಿಗೆ ದೂಡುತ್ತಿದ್ದಾರೆ. . . . ಈ ಪ್ರಾಣಿಗಳು ಎಷ್ಟು ಗಂಭೀರ ರೀತಿಯಲ್ಲಿ ಅಳಿವಿನ ಅಂಚಿನಲ್ಲಿವೆಯೆಂದರೆ, ಬೇರೆ ಬೇರೆ ಜಾತಿಯ ಹುಲಿಯ ಬದುಕಿ ಉಳಿಯುವಿಕೆಗಾಗಿ ಪ್ರತಿಯೊಂದು ಹುಲಿಯೂ ಅತ್ಯಾವಶ್ಯಕವಾದದ್ದಾಗಿದೆ.” 1994 ಮತ್ತು 2003ರ ನಡುವೆ 684 ಹುಲಿ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಆದರೆ ಕಾನೂನುಬಾಹಿರವಾಗಿ ಕಳ್ಳಸಾಗಣೆಮಾಡಲ್ಪಡುವ ಸಂಖ್ಯೆಯಲ್ಲಿ ಇದು ಕೇವಲ ಒಂದು ಚಿಕ್ಕ ಅಂಶ ಆಗಿದೆ ಅಷ್ಟೆ. (g05 11/8)
ನಗುವಿನ ಶಕ್ತಿ
“ಆನಂದದಿಂದ ಕೇವಲ ಅರ್ಧ ನಿಮಿಷ ನಗುವುದು 45 ನಿಮಿಷಗಳ ಸಂಪೂರ್ಣ ವಿಶ್ರಾಂತಿಗೆ ಸಮಾನವಾಗಿದೆ ಎಂದು ವಿಜ್ಞಾನಿಗಳು ಅಂದಾಜುಮಾಡಿದ್ದಾರೆ” ಎಂದು ಶೇಯಾಚೂಕಾ ಎಂಬ ಪೋಲೆಂಡ್‌ನ ಸಾಪ್ತಾಹಿಕ ಪತ್ರಿಕೆಯು ವರದಿಸುತ್ತದೆ. “ಇದ್ದಕ್ಕಿದ್ದಂತೆ ಹಠಾತ್ತನೆ ನಗುವುದು ಮೂರು ನಿಮಿಷಗಳ ಏರೋಬಿಕ್ ವ್ಯಾಯಾಮಕ್ಕೆ ಸರಿಸಮವಾಗಿದೆ, ಅದೇ ಸಮಯದಲ್ಲಿ ಹತ್ತು ಬಾರಿ ಮನಃಪೂರ್ವಕವಾಗಿ ನಸುನಗುವುದು ಹತ್ತು ನಿಮಿಷಗಳ ವರೆಗೆ ಬಿರುಸಾಗಿ ಹುಟ್ಟುಹಾಕುವ ವ್ಯಾಯಾಮವನ್ನು ಮಾಡುವುದಕ್ಕೆ ಸಮಾನವಾಗಿದೆ” ಎಂದು ಅದು ವರದಿಸಿತು. ನಗುವುದರಿಂದ ಸಿಗುವ ಇತರ ಪ್ರಯೋಜನಗಳು ಯಾವುವೆಂದರೆ, ಶ್ವಾಸಕೋಶಗಳೊಳಗೆ ಸೆಳೆದುಕೊಳ್ಳಲ್ಪಡುವ ಗಾಳಿಯ ಪ್ರಮಾಣವು ಮೂರುಪಟ್ಟು ಹೆಚ್ಚಾಗುತ್ತದೆ ಹಾಗೂ ರಕ್ತಪರಿಚಲನೆ, ಜೀರ್ಣವಾಗುವಿಕೆ, ಜೀವರಾಸಾಯನಿಕ ಕ್ರಿಯೆ, ಮಿದುಳಿನ ಕಾರ್ಯಾಚರಣೆಗಳು ಉತ್ತಮಗೊಳ್ಳುತ್ತವೆ ಮತ್ತು ಹಾನಿಕರವಾದ ವಸ್ತುಗಳ ವಿಸರ್ಜನೆಯೂ ಹೆಚ್ಚು ಉತ್ತಮಗೊಳ್ಳುತ್ತದೆ. ನೀವು ಸಂತೋಷಕರ ಮನಃಸ್ಥಿತಿಯನ್ನು ಹೊಂದಬೇಕಾದರೆ, ಬೆಳಗ್ಗೆ ಎದ್ದ ಕೂಡಲೆ ಮೊತ್ತಮೊದಲು ಸ್ವತಃ ನಿಮ್ಮ ಕಡೆಗೆ, ನಿಮ್ಮ ಸಂಗಾತಿಯ ಕಡೆಗೆ ಮತ್ತು ನಿಮ್ಮ ಮಕ್ಕಳ ಕಡೆಗೆ ನಸುನಗೆ ಬೀರಬೇಕು ಎಂದು ಆ ಪತ್ರಿಕೆಯು ಸೂಚಿಸುತ್ತದೆ. ಅದು ಕೂಡಿಸಿ ಹೇಳುವುದು: “ನಿಮ್ಮ ಬಗ್ಗೆಯೇ ನಗಲು ಕಲಿಯಿರಿ. ಕಷ್ಟಕರ ಸನ್ನಿವೇಶಗಳಲ್ಲಿಯೂ ವಿಷಯಗಳ ಆಶಾದಾಯಕ ಭಾಗವನ್ನು ನೋಡಲು ಪ್ರಯತ್ನಿಸಿರಿ.” (g05 10/22)