ವಿಶೇಷ ಅಗತ್ಯಗಳಿರುವ ಮಕ್ಕಳನ್ನು ಬೆಳೆಸುವುದು
ಫಿನ್ಲೆಂಡ್ನ ಎಚ್ಚರ! ಲೇಖಕರಿಂದ
ಇಪ್ಪತ್ತು ವಯಸ್ಸಿನ ಮಾರ್ಕುಸ್ಗೆ (ಎಡಗಡೆ) ಬೇರೆಯವರ ಸಹಾಯವಿಲ್ಲದೆ ತಿನ್ನುವುದಾಗಲಿ ಕುಡಿಯುವುದಾಗಲಿ ಸ್ನಾನ ಮಾಡುವುದಾಗಲಿ ಅಸಾಧ್ಯ. ಅವನು ನಿದ್ರಿಸುವುದು ಕಡಿಮೆ ಮತ್ತು ಅವನ ಮೇಲೆ ರಾತ್ರಿಯಿಡೀ ನಿಗಾ ಇಡಬೇಕಾಗುತ್ತದೆ. ಅವನು ಯಾವಾಗಲೂ ಒಂದಲ್ಲ ಒಂದು ವಿಧದ ಅಪಘಾತಕ್ಕೆ ತುತ್ತಾಗುವುದರಿಂದ ಪ್ರಥಮ ಚಿಕಿತ್ಸೆಯ ಅಗತ್ಯ ತಪ್ಪದೆ ಅವನಿಗಿರುತ್ತದೆ. ಆದರೂ ಮಾರ್ಕುಸ್ನ ತಂದೆತಾಯಿ ಅವನನ್ನು ಬಹಳ ಪ್ರೀತಿಸುತ್ತಾರೆ. ಅವನ ಸೌಮ್ಯವಾದ, ದಯಾಪರ ಮತ್ತು ಮಮತೆಯ ಮನೋಭಾವವನ್ನು ಅವರು ಮಾನ್ಯಮಾಡುತ್ತಾರೆ. ತಮ್ಮ ಮಗನ ದೌರ್ಬಲ್ಯಗಳ ಹೊರತೂ ಅವರಿಗೆ ಅವನ ವಿಷಯದಲ್ಲಿ ಅಭಿಮಾನವಿದೆ.
ಭೂಮಿಯಲ್ಲಿರುವ ಸುಮಾರು 3 ಪ್ರತಿಶತ ಜನರಿಗೆ ಒಂದಲ್ಲ ಒಂದು ವಿಧದ ಮಾನಸಿಕ ವಿಲಂಬನವಿದೆಯೆಂದು ಲೋಕಾರೋಗ್ಯ ಸಂಸ್ಥೆ ಅಂದಾಜುಮಾಡುತ್ತದೆ. ಆನುವಂಶೀಯ ಸಮಸ್ಯೆಗಳು, ಜನನಾಘಾತ, ಚಿಕ್ಕಂದಿನಲ್ಲಾಗಿರುವ ಮಿದುಳಿನ ಸೋಂಕು, ಆಹಾರಸೇವನೆಯಲ್ಲಿ ನ್ಯೂನತೆಯಿಂದ ಹಾಗೂ ಅಮಲೌಷಧ, ಮದ್ಯಸಾರ ಅಥವಾ ರಾಸಾಯನಿಕ ಪದಾರ್ಥಗಳಿಗೆ ಒಡ್ಡಲ್ಪಡುವುದರಿಂದ ಮಾನಸಿಕ ಸಾಮರ್ಥ್ಯದಲ್ಲಿ ಕುಂದುಂಟಾಗಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಇದಕ್ಕೆ ಕಾರಣ ಅಜ್ಞಾತವಾಗಿರುತ್ತದೆ. ಹಾಗಾದರೆ, ಇಂತಹ ವಿಶೇಷ ಅಗತ್ಯಗಳಿರುವ ಮಕ್ಕಳ ಹೆತ್ತವರಾಗಿರುವವರ ಅನುಭವವೇನು? ಅಂತಹ ತಂದೆತಾಯಿಗಳನ್ನು ನಾವು ಹೇಗೆ ಪ್ರೋತ್ಸಾಹಿಸಬಲ್ಲೆವು?
ಹೆತ್ತವರಿಗೆ ಕೆಟ್ಟ ಸುದ್ದಿ ತಿಳಿದುಬರುವಾಗ
ತಮ್ಮ ಮಗುವಿಗೆ ಮಾನಸಿಕ ದೌರ್ಬಲ್ಯವಿದೆಯೆಂದು ಹೆತ್ತವರಿಗೆ ತಿಳಿದುಬರುವಾಗ ಮಹಾ ಹೋರಾಟ ಆರಂಭವಾಗುತ್ತದೆ. “ನಮ್ಮ ಮಗಳಿಗೆ ಡೌನ್ ಸಿಂಡ್ರೋಮ್ ಎಂಬ ಬುದ್ಧಿಮಾಂದ್ಯ ಕಾಯಿಲೆ ಇದೆ ಎಂದು ನನಗೂ ನನ್ನ ಗಂಡನಿಗೂ ತಿಳಿದುಬಂದಾಗ, ನಮ್ಮ ಮನೆಯು ನಮ್ಮ ಮೇಲೆಯೇ ಕುಸಿದು ಬಿದ್ದು ನಮ್ಮನ್ನು ಜೀವಂತವಾಗಿ ಹೂಳಿಬಿಟ್ಟಿದೆ ಎಂಬ ಭಾವನೆ ನಮಗಾಯಿತು,” ಎಂದು ಸಿರ್ಕ್ಕಾ ಜ್ಞಾಪಿಸಿಕೊಳ್ಳುತ್ತಾಳೆ. ಮಾರ್ಕುಸ್ನ ತಾಯಿ ಆನ್ನಿ ಹೇಳುವುದು: “ಅವನಿಗೆ ಮಾನಸಿಕ ದೌರ್ಬಲ್ಯವಿರುತ್ತದೆಂದು ನನಗೆ ತಿಳಿದುಬಂದಾಗ, ಇತರರು ಅವನನ್ನು ಹೇಗೆ ವೀಕ್ಷಿಸಾರೆಂದು ನಾನು ಯೋಚಿಸತೊಡಗಿದೆ. ಆದರೆ ಬೇಗನೆ ನಾನು ಆ ಹಂತವನ್ನು ದಾಟಿ, ಅವನ ಆವಶ್ಯಕತೆಗಳ ಕುರಿತು ಮತ್ತು ಅವನಿಗಾಗಿ ನಾನೇನು ಮಾಡಬಲ್ಲೆನೆಂದು ಯೋಚಿಸಲಾರಂಭಿಸಿದೆ.” ಈರ್ಮ್ಗಾರ್ಡ್ ಎಂಬವಳು ಸಹ ಹಾಗೆಯೇ ಪ್ರತಿಕ್ರಿಯಿಸಿದಳು: “ನಮ್ಮ ಮಗಳಾದ ಯೂನಿಕೆಯ ದೌರ್ಬಲ್ಯದ ಕುರಿತು ಡಾಕ್ಟರ್ಗಳು ನಮಗೆ ತಿಳಿಸಿದಾಗ, ನನ್ನ ಮಗುವಿಗೆ ನಾನು ಹೇಗೆ ಸಹಾಯಮಾಡಬಲ್ಲೆ ಎಂಬುದೊಂದೇ ನನ್ನ ಚಿಂತೆಯಾಗಿತ್ತು.” ಇಂತಹ ರೋಗನಿರ್ಣಯದ ವಿಷಯ ಕೇಳಿಬಂದಾಗ, ಸಿರ್ಕ್ಕಾ, ಆನ್ನಿ ಮತ್ತು ಈರ್ಮ್ಗಾರ್ಡ್ನಂತಹ ಹೆತ್ತವರಿಗೆ ಯಾವ ಆಯ್ಕೆಗಳು ಲಭ್ಯ ಇವೆ?
‘ದೌರ್ಬಲ್ಯಗಳಿರುವ ಮಕ್ಕಳ ಬಗ್ಗೆ ಯು.ಎಸ್. ರಾಷ್ಟ್ರೀಯ ಮಾಹಿತಿ ಕೇಂದ್ರ’ ಕೊಡುವ ಸಲಹೆ ಹೀಗಿದೆ: “ನೀವು ಮಾಡಸಾಧ್ಯವಿರುವ ಪ್ರಥಮ ವಿಷಯವು ನಿಮ್ಮ ಮಗುವಿನ ದೌರ್ಬಲ್ಯದ ಬಗ್ಗೆ, ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮತ್ತು ನಿಮ್ಮ ಮಗು ಸಾಧ್ಯವಿರುವಷ್ಟು ಪೂರ್ಣ ಮಟ್ಟಿಗೆ ಪ್ರಗತಿಹೊಂದುವಂತೆ ನೀವು ಸಹಾಯಮಾಡಸಾಧ್ಯವಿರುವ ನಿರ್ದಿಷ್ಟ ವಿಷಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದೇ ಆಗಿದೆ.” ಈ ಮಾಹಿತಿಯ ಅನ್ವಯವು ನಿಮ್ಮ ಮಗುವಿನ ಪಾಲನೆಗೆ ಉದ್ದೇಶ ಮತ್ತು ನಿರ್ದೇಶನವನ್ನು ಕೊಡಬಲ್ಲದು. ಇದು, ಒಂದು ನಕ್ಷೆಯಲ್ಲಿ ನಿಮ್ಮ ಪ್ರಯಾಣದ ಪ್ರಗತಿಯನ್ನು ಅಂದರೆ, ನೀವು ಎಷ್ಟು ದೂರ ಪ್ರಯಾಣಿಸಿದ್ದೀರಿ, ಯಾವ ಯಾವ ಮೈಲಿಗಲ್ಲುಗಳನ್ನು ತಲುಪಿದ್ದೀರಿ ಎಂಬುದನ್ನು ಗುರುತಿಸುವ ಹಾಗಿದೆ.
ಆಶಾಕಿರಣ
ಪಂಥಾಹ್ವಾನಗಳ ಹೊರತೂ, ಶೈಶವದ ಮಾನಸಿಕ ದೌರ್ಬಲ್ಯವೆಂಬ ಕಪ್ಪು ಮೋಡದಲ್ಲಿ ಆಶಾಕಿರಣವೊಂದಿರಬಲ್ಲದು. ಅದು ಹೇಗೆ?
ಒಂದನೆಯದಾಗಿ, ಇಂತಹ ಮಕ್ಕಳಲ್ಲಿ ಹೆಚ್ಚಿನವರು ನರಳಾಡುತ್ತಿಲ್ಲವೆಂದು ತಿಳಿಯುವುದರಿಂದ ಹೆತ್ತವರು ಸಾಂತ್ವನಪಡೆಯಬಲ್ಲರು. ಮಾನಸಿಕವಾಗಿ ಕುಂಠಿತವಾಗಿರುವ ಮಗು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಡಾ. ರಾಬರ್ಟ್ ಐಸಕ್ಸನ್ ಬರೆಯುವುದು: “ಇವರಲ್ಲಿ ಹೆಚ್ಚಿನವರು ಸಂತೋಷದಿಂದಿರಲು, ಇತರರ ಒಡನಾಟದಲ್ಲಿ, ಸಂಗೀತ, ಕೆಲವು ಕ್ರೀಡೆಗಳು, ರುಚಿಕರವಾದ ಆಹಾರ ಮತ್ತು ಸ್ನೇಹಿತರಲ್ಲಿ ಆನಂದಿಸಲು ಶಕ್ತರಾಗಿರುತ್ತಾರೆ.” ಅವರ ಸಾಧನೆಗಳು ಕೊಂಚವಾಗಿರುತ್ತವೆ ಮತ್ತು ಮಾಮೂಲಿ ಮಕ್ಕಳಿಗಿಂತ ಇವರಿಗೆ ತಮ್ಮ ಸುತ್ತಲಿನ ಲೋಕದೊಂದಿಗೆ ಕಡಿಮೆ ಸಂಪರ್ಕವಿರುತ್ತದೆ. ಆದರೆ, ಹೆಚ್ಚಿನ ಗ್ರಹಣಶಕ್ತಿಯೆಂಬ “ದುರ್ಗಮನೆಯಲ್ಲಿ” ಜೀವಿಸುವ ಮಾಮೂಲಿ ಮಕ್ಕಳಿಗಿಂತ ಇವರು ಅನೇಕವೇಳೆ ತಮ್ಮ ಮಿತಸ್ವಾತಂತ್ರ್ಯದ “ಚಿಕ್ಕಮನೆಯಲ್ಲಿ” ಹೆಚ್ಚು ಆನಂದಿತರು.
ಎರಡನೆಯದಾಗಿ, ತಮ್ಮ ಮಗು ಕಷ್ಟಪಟ್ಟು ಸಾಧಿಸಿದ ಕೆಲಸಗಳ ಕುರಿತು ಹೆತ್ತವರು ಹೆಮ್ಮೆಪಡಸಾಧ್ಯವಿದೆ. ಅವರು ಕಲಿತಿರುವ ಪ್ರತಿಯೊಂದು ಹೊಸ ಕೆಲಸವು ಒಂದು ದೊಡ್ಡ ಬೆಟ್ಟವನ್ನೇರುವುದಕ್ಕೆ ಸಮಾನ ಮತ್ತು ಅಲ್ಲಿಗೇರಲು ಮಾಡಲ್ಪಟ್ಟ ಪ್ರಯತ್ನವನ್ನು ನೋಡುವಾಗ ಅದು ಹೆತ್ತವರಿಗೆ ಮಾತ್ರವಲ್ಲ, ಮಗುವಿಗೂ ಸಂತೋಷತರುತ್ತದೆ. ಉದಾಹರಣೆಗೆ, ಬ್ರಾಯನ್ ಎಂಬವನು ಪೆಡಸುಗಟ್ಟಿಕೆ (ಟ್ಯೂಬರಸ್ ಸ್ಕ್ಲೆರೋಸಿಸ್), ಮೂರ್ಛೆರೋಗ ಮತ್ತು ಸ್ವಮಗ್ನತೆ ಎಂಬ ಮನೋವಿಕಾರದಂಥ ರೋಗಗಳಿಂದ ಬಳಲುತ್ತಾನೆ. ಚುರುಕುಬುದ್ಧಿಯುಳ್ಳವನಾದರೂ, ಅವನಿಗೆ ಮಾತು ಬರುವುದಿಲ್ಲ ಮಾತ್ರವಲ್ಲ ತನ್ನ ಕೈಗಳ ಮೇಲೆ ಹತೋಟಿ ಅವನಿಗಿಲ್ಲ. ಆದರೂ ಅವನು ಕ್ರಮೇಣ, ಅರ್ಧತುಂಬಿರುವ ಕಪ್ನಿಂದ ಸ್ವಲ್ಪವೂ ಚೆಲ್ಲದೆ ಕುಡಿಯಲು ಕಲಿತಿದ್ದಾನೆ. ಮನಸ್ಸು ಮತ್ತು ಶರೀರದ ಮಧ್ಯೆ ಇಷ್ಟೊಂದು ಹೊಂದಾಣಿಕೆ ಪಡೆಯಲು ಸಾಧ್ಯವಾಗಿರುವ ಕಾರಣ ಬ್ರಾಯನ್ಗೆ ತನ್ನ ಮೆಚ್ಚಿನ ಪಾನೀಯವಾದ ಹಾಲನ್ನು ಯಾರ ಸಹಾಯವೂ ಇಲ್ಲದೆ ಕುಡಿಯಲು ಸಾಧ್ಯವಾಗುತ್ತದೆ.
ಬ್ರಾಯನ್ನ ಹೆತ್ತವರು ಅವನ ಈ ಸಾಧನೆಯನ್ನು, ಅವನ ದೌರ್ಬಲ್ಯಗಳನ್ನು ಜಯಿಸುವುದರಲ್ಲಿ ಅವನಿಗೆ ದೊರೆತಿರುವ ಇನ್ನೊಂದು ವಿಜಯವಾಗಿ ನೋಡುತ್ತಾರೆ. ಅವನ ತಾಯಿ ಲೋರೀ ಹೇಳುವುದು: “ನಾವು ನಮ್ಮ ಮಗನನ್ನು ಕಾಡಿನಲ್ಲಿರುವ ಗಟ್ಟಿಮರವಾಗಿ ವೀಕ್ಷಿಸುತ್ತೇವೆ. ಇಂತಹ ಗಟ್ಟಿಮರವು ಬೇರೆ ಮರಗಳಂತೆ ಬೇಗನೆ ಬೆಳೆಯುವುದಿಲ್ಲವಾದರೂ, ಅದು ತುಂಬಾ ಬೆಲೆಬಾಳುವ ಮರವನ್ನು ಉತ್ಪಾದಿಸುತ್ತದೆ. ತದ್ರೀತಿ, ದೌರ್ಬಲ್ಯಗಳಿರುವ ಮಕ್ಕಳು ನಿಧಾನವಾಗಿ ಬೆಳೆಯುತ್ತಾರೆ. ಆದರೆ ಹೆತ್ತವರಿಗೆ ಅವರು ಬಹುಕಾಲ ಬೆಲೆಬಾಳುವ ಪುಟ್ಟ ಓಕ್ ಮತ್ತು ಸಾಗವಾನಿಯಂಥ ಗಟ್ಟಿಮರಗಳಂತಿರುತ್ತಾರೆ.”
ಮೂರನೆಯದಾಗಿ, ತಮ್ಮ ಈ ವಿಶೇಷ ಅಗತ್ಯಗಳುಳ್ಳ ಮಕ್ಕಳ ಮಮತೆಭರಿತ ಸ್ವಭಾವವು ಅನೇಕ ಹೆತ್ತವರಿಗೆ ಹೃದಯೋಲ್ಲಾಸಕರವಾಗಿದೆ. ಈರ್ಮ್ಗಾರ್ಡ್ ಹೇಳುವುದು: “ರಾತ್ರಿ ಯೂನಿಕೆ ಬೇಗ ನಿದ್ರಿಸಲು ಇಷ್ಟಪಡುತ್ತಾಳೆ ಮತ್ತು ನಿದ್ರಿಸುವ ಮೊದಲು ಕುಟುಂಬದ ಪ್ರತಿಯೊಬ್ಬರಿಗೆ ಆಕೆ ಸದಾ ಮುದ್ದಿಡುತ್ತಾಳೆ. ಒಂದುವೇಳೆ ನಾವು ಮನೆಗೆ ಹಿಂದಿರುಗುವ ಮೊದಲೇ ಅವಳು ನಿದ್ದೆಹೋಗುವಲ್ಲಿ, ತಾನು ಹಾಗೆ ಮಾಡಿದ್ದಕ್ಕೆ ಕ್ಷಮೆ ಯಾಚಿಸುತ್ತ, ಆಕೆ ನಮ್ಮನ್ನು ಪ್ರೀತಿಸುತ್ತಾಳೆಂದೂ ಬೆಳಗ್ಗೆ ನಮ್ಮನ್ನು ನೋಡಲು ಎದುರು ನೋಡುತ್ತಾಳೆಂದೂ ಒಂದು ಚೀಟಿಯಲ್ಲಿ ಬರೆದಿಡುತ್ತಾಳೆ.”
ಮಾರ್ಕುಸ್ಗೆ ಮಾತು ಬರದಿದ್ದರೂ, ತನ್ನ ಹೆತ್ತವರನ್ನು ಪ್ರೀತಿಸುತ್ತೇನೆಂದು ಅವರಿಗೆ ಹೇಳಲು ಅವನು ಪ್ರಯಾಸಪಟ್ಟು ಸಂಕೇತ ಭಾಷೆಯಲ್ಲಿ ಕೆಲವೊಂದು ಪದಗಳನ್ನು ಕಲಿತನು. ಮಾನಸಿಕ ಬೆಳವಣಿಗೆಯು ಕುಂಠಿತವಾಗಿರುವ ಟೀಆ ಎಂಬವಳ ಹೆತ್ತವರು ತಮ್ಮ ಭಾವನೆಗಳನ್ನು ಈ ರೀತಿಯಲ್ಲಿ ವ್ಯಕ್ತಪಡಿಸಿದರು: “ಆಕೆ ನಮ್ಮ ಬದುಕನ್ನು ಪ್ರೀತಿ, ಸೌಹಾರ್ದತೆ, ಮಮತೆ, ಆಲಿಂಗನಗಳು ಮತ್ತು ಚುಂಬನಗಳಿಂದ ತುಂಬಿಸಿದ್ದಾಳೆ.” ಹೀಗಿರುವುದರಿಂದ, ಇಂತಹ ಎಲ್ಲ ಮಕ್ಕಳಿಗೆ ಹೆತ್ತವರು ತುಂಬ ಪ್ರೀತಿ ಮತ್ತು ವಾತ್ಸಲ್ಯವನ್ನು, ಮಾತುಗಳಲ್ಲೂ ಸ್ಪರ್ಶದ ಮೂಲಕವೂ ಕೊಡಬೇಕೆಂಬುದು ವ್ಯಕ್ತ.
ನಾಲ್ಕನೆಯದಾಗಿ, ತಮ್ಮ ಮಗು ದೇವರಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುವಾಗ ಕ್ರೈಸ್ತ ಹೆತ್ತವರಿಗೆ ಆಂತರಿಕ ತೃಪ್ತಿಯ ಅನಿಸಿಕೆಯಾಗುತ್ತದೆ. ಇದಕ್ಕೆ ಒಂದು ಯೋಗ್ಯ ಉದಾಹರಣೆ ಯೂಹಾ ಎಂಬವನದ್ದು. ಅವನ ತಂದೆಯ ಶವಸಂಸ್ಕಾರದ ಸಮಯದಲ್ಲಿ ತಾನು ಪ್ರಾರ್ಥಿಸಬಹುದೊ ಎಂದು ಅವನು ಕೇಳಿದಾಗ ಎಲ್ಲರೂ ಬೆರಗಾದರು. ಯೂಹಾ ಮಾಡಿದ ಚಿಕ್ಕ ಪ್ರಾರ್ಥನೆಯಲ್ಲಿ, ತನ್ನ ತಂದೆಯವರು ದೇವರ ಸ್ಮರಣೆಯಲ್ಲಿದ್ದಾರೆ ಮತ್ತು ತಕ್ಕ ಸಮಯದಲ್ಲಿ ದೇವರು ಅವರನ್ನು ಜೀವಕ್ಕೆ ತರುವನೆಂಬ ತನ್ನ ವಿಶ್ವಾಸವನ್ನು ವ್ಯಕ್ತಪಡಿಸಿದನು. ಬಳಿಕ, ತನ್ನ ಕುಟುಂಬದ ಸದಸ್ಯರೆಲ್ಲರಿಗೂ ದೇವರು ಸಹಾಯ ಮಾಡುವಂತೆ ಅವರಲ್ಲಿ ಪ್ರತಿಯೊಬ್ಬನನ್ನು ಹೆಸರಿಸಿದನು.
ಅದೇ ರೀತಿ, ಯೂನಿಕೆಗೆ ದೇವರಲ್ಲಿರುವ ಭರವಸೆ ಆಕೆಯ ಹೆತ್ತವರನ್ನು ಸಂತೋಷಪಡಿಸುತ್ತದೆ. ಆಕೆ ಕಲಿಯುವ ವಿಷಯಗಳಲ್ಲಿ ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಆಕೆ ಅಸಮರ್ಥಳು. ಉದಾಹರಣೆಗೆ, ಆಕೆಗೆ ಬೈಬಲಿನಲ್ಲಿನ ಅನೇಕ ವ್ಯಕ್ತಿಗಳ ಬಗ್ಗೆ ಗೊತ್ತಿದ್ದರೂ ಅವರ ಕುರಿತ ಬೇರೆ ಮಾಹಿತಿಗೂ ಅವರಿಗೂ ಇರುವ ಸಂಬಂಧ ಅವಳ ಮನಸ್ಸಿಗೆ ಬರುವುದಿಲ್ಲ. ಅದೆಲ್ಲವೂ ಅವಳಿಗೆ ಪೂರ್ಣಗೊಳಿಸದ ಚಿತ್ರಬಂಧದ ಬಿಡಿಬಿಡಿಯಾದ ಭಾಗಗಳಂತೆ ಇದೆ. ಆದರೂ, ಸರ್ವಶಕ್ತನಾದ ದೇವರು ಒಂದು ದಿನ ಭೂಮಿಯ ಮೇಲಿರುವ ಸಮಸ್ಯೆಗಳನ್ನು ತೊಲಗಿಸಿಬಿಡುವನೆಂಬ ವಿಚಾರವನ್ನು ಆಕೆ ಗ್ರಹಿಸಶಕ್ತಳು. ಯೂನಿಕೆ ದೇವರ ವಾಗ್ದತ್ತ ನೂತನ ಲೋಕದಲ್ಲಿ, ಎಲ್ಲಿ ಆಕೆಗೆ ಪೂರ್ತಿ ಮಾನಸಿಕ ಸಾಮರ್ಥ್ಯಗಳಿರುವುವೊ ಅಲ್ಲಿ ಜೀವಿಸುವುದನ್ನು ಎದುರು ನೋಡುತ್ತಾಳೆ.
ಪರಾವಲಂಬನೆಯನ್ನು ಕಡಿಮೆಗೊಳಿಸಲು ಪ್ರೋತ್ಸಾಹಿಸುವುದು
ಮಾನಸಿಕ ದೌರ್ಬಲ್ಯಗಳಿರುವ ಮಕ್ಕಳು ಸದಾ ಮಕ್ಕಳಾಗಿಯೇ ಉಳಿಯುವುದಿಲ್ಲ; ಅವರು ಬೆಳೆದು ಮಾನಸಿಕ ದೌರ್ಬಲ್ಯಗಳಿರುವ ವಯಸ್ಕರಾಗುತ್ತಾರೆ. ಆದುದರಿಂದ ಇಂತಹ ವಿಶೇಷ ಅಗತ್ಯಗಳಿರುವ ಮಕ್ಕಳು, ಅಗತ್ಯಕ್ಕಿಂತ ಹೆಚ್ಚಾಗಿ ತಮ್ಮ ಮೇಲೆ ಹೊಂದಿಕೊಳ್ಳದಿರುವಂತೆ ಹೆತ್ತವರು ಅವರಿಗೆ ಸಹಾಯನೀಡಬೇಕು. ಮಾರ್ಕುಸ್ನ ತಾಯಿ ಆನ್ನಿ ಹೇಳುವುದು: “ಮಾರ್ಕುಸ್ಗಾಗಿ ಎಲ್ಲ ಕೆಲಸಗಳನ್ನೂ ನಾವೇ ಮಾಡುವುದು ನಮಗೆ ಹೆಚ್ಚು ಸುಲಭವೂ ಹೆಚ್ಚು ಶೀಘ್ರವೂ ಆಗುತ್ತಿತ್ತಾದರೂ, ಅವನು ತನಗಾಗಿ ತಾನೇ ಸಾಧ್ಯವಿರುವಷ್ಟನ್ನು ಮಾಡಿಕೊಳ್ಳುವಂತೆ ನಾವು ತುಂಬ ಪ್ರಯತ್ನ ಮಾಡಿದೆವು.” ಯೂನಿಕೆಯ ತಾಯಿ ಹೇಳುವುದು: “ಯೂನಿಕೆಗೆ ಅನೇಕ ಉತ್ತಮ ಗುಣಗಳಿದ್ದರೂ, ಆಕೆ ಕೆಲವೊಮ್ಮೆ ಹಟಮಾರಿಯಾಗಿರುತ್ತಾಳೆ. ಅವಳಿಗೆ ಇಷ್ಟವಿಲ್ಲದ್ದನ್ನು ಆಕೆಯಿಂದ ಮಾಡಿಸಬೇಕಾದರೆ, ನಮ್ಮನ್ನು ಮೆಚ್ಚಿಸಲು ಆಕೆಗಿರುವ ಬಯಕೆಯನ್ನು ಜ್ಞಾಪಕ ಹುಟ್ಟಿಸಬೇಕಾಗುತ್ತದೆ. ಮತ್ತು ಆ ಕೆಲಸವನ್ನು ಮಾಡಲು ಆಕೆ ಒಪ್ಪಿಕೊಂಡ ಮೇಲೆಯೂ, ಅದನ್ನು ಮಾಡಿ ಮುಗಿಸಲು ನಾವು ಆಕೆಯನ್ನು ಪ್ರೋತ್ಸಾಹಿಸುತ್ತ ಇರಬೇಕಾಗಿದೆ.”
ಬ್ರಾಯನ್ನ ತಾಯಿ ಲೋರೀ, ಅವನ ಜೀವನ ಹೆಚ್ಚು ತೃಪ್ತಿಯನ್ನು ತರುವಂತೆ ಸಹಾಯ ಮಾಡಲು ಸದಾ ಮಾರ್ಗಗಳಿಗಾಗಿ ಹುಡುಕುತ್ತಿರುತ್ತಾಳೆ. ಬ್ರಾಯನ್ ಕಂಪ್ಯೂಟರ್ನಲ್ಲಿ ಟೈಪ್ ಮಾಡುವಂತೆ ಮೂರು ವರ್ಷಗಳ ಸಮಯಾವಧಿಯಲ್ಲಿ ಲೋರೀ ಮತ್ತು ಆಕೆಯ ಗಂಡ ಸಹಾಯಮಾಡಿದ್ದಾರೆ. ಈಗ ಬ್ರಾಯನ್ ಬಹಳ ಸಂತೃಪ್ತಿಯಿಂದ ತನ್ನ ಸ್ನೇಹಿತರಿಗೆ ಮತ್ತು ಕುಟುಂಬ ಸದಸ್ಯರಿಗೆ ಇ-ಮೇಲ್ ಕಳುಹಿಸುತ್ತಾನೆ. ಆದರೆ ಅವನು ಟೈಪ್ ಮಾಡುವಾಗ, ಯಾರಾದರೂ ಅವನ ಮಣಿಕಟ್ಟನ್ನು ಎತ್ತಿಹಿಡಿಯಬೇಕಾಗುತ್ತದೆ. ಈಗ ಅವನ ಹೆತ್ತವರು ಅವನಿಗೆ ಮೊಣಕೈಯ ಬಳಿ ಮಾತ್ರ ಆಸರೆಯು ಬೇಕಾಗುವ ಹಂತವನ್ನು ತಲಪುವಂತೆ ಸಹಾಯಮಾಡುತ್ತಿದ್ದಾರೆ. ಮೊಣಕೈಯ ಬಳಿ ಮಾತ್ರವೇ ಆಸರೆ ಪಡೆಯುವುದರಿಂದ ಅವನು ಹೆಚ್ಚು ಸ್ವಾವಲಂಬಿಯಾಗಿರುವಂತೆ ಆಗುತ್ತದೆ ಎಂಬುದು ಅವರಿಗೆ ತಿಳಿದದೆ.
ಹೀಗಿದ್ದರೂ, ಹೆತ್ತವರು ತಮ್ಮ ಮಗು ತುಂಬ ಸುಧಾರಿಸಿಕೊಳ್ಳುತ್ತಾನೆಂದು ನಿರೀಕ್ಷಿಸಲೂ ಬಾರದು, ಅವನು ಬೇಗನೆ ಪ್ರಗತಿಹೊಂದುವಂತೆ ಒತ್ತಾಯಮಾಡಲೂ ಬಾರದು. ಪ್ರತಿಯೊಂದು ಮಗುವಿಗೆ ವಿಭಿನ್ನ ಸಾಮರ್ಥ್ಯವಿದೆ. ವಿಶೇಷ ಆವಶ್ಯಕತೆಯುಳ್ಳ ಮಗು (ಇಂಗ್ಲಿಷ್) ಎಂಬ ಪುಸ್ತಕ ಸೂಚಿಸುವುದು: “ಹೆತ್ತವರು ಪಾಲಿಸಲು ಪ್ರಯತ್ನಿಸಬೇಕಾದ ಒಂದು ಉತ್ತಮ ಸಾಮಾನ್ಯ ನಿಯಮವು, ಅಂಥ ಮಕ್ಕಳು ಸ್ವಾವಲಂಬಿಗಳಾಗಿರುವಂತೆ ಪ್ರೋತ್ಸಾಹಿಸುವುದು ಮತ್ತು ಹತಾಶೆಯನ್ನು ತಡೆಯಲು ಸಾಕಷ್ಟು ನೆರವನ್ನು ನೀಡುವುದರ ಮಧ್ಯೆ ಸಮತೋಲನವನ್ನು ಕಾಪಾಡುವುದೇ ಆಗಿದೆ.”
ಸಹಾಯದ ಅತ್ಯಂತ ಉನ್ನತ ಮೂಲ
ದೌರ್ಬಲ್ಯವಿರುವ ಮಕ್ಕಳ ಎಲ್ಲ ಹೆತ್ತವರಿಗೆ ತಾಳ್ಮೆ ಮತ್ತು ಸಹನೆ ಅತ್ಯಾವಶ್ಯಕ. ಒಂದರ ಮೇಲೊಂದು ಸಮಸ್ಯೆಗಳು ಬರುವ ಕಾರಣ ಅನೇಕ ಹೆತ್ತವರು ಎದೆಗುಂದುತ್ತಾರೆ. ಬಳಲಿಕೆಯು ಕ್ರಮೇಣ ಪ್ರತಿಕೂಲ ಅನುಭವಗಳನ್ನು ಫಲಿಸುತ್ತದೆ. ಕಣ್ಣೀರು ಉಕ್ಕಿಬರುವಾಗ, ಸ್ವಾನುಕಂಪ ಅನೇಕವೇಳೆ ಮೇಲೇರಿ ಬರಬಹುದು. ಆಗ ಏನನ್ನು ಮಾಡಸಾಧ್ಯವಿದೆ?
ಹೆತ್ತವರು ‘ಪ್ರಾರ್ಥನೆಯನ್ನು ಕೇಳುವಾತನಾದ’ ದೇವರಿಗೆ ಮೊರೆಯಿಡಬಲ್ಲರು. (ಕೀರ್ತನೆ 65:2) ಆತನು ಧೈರ್ಯ, ನಿರೀಕ್ಷೆ ಮತ್ತು ತಾಳಿಕೊಳ್ಳಲು ಬೇಕಾದ ಬಲವನ್ನು ಕೊಡುತ್ತಾನೆ. (1 ಪೂರ್ವಕಾಲವೃತ್ತಾಂತ 29:12; ಕೀರ್ತನೆ 27:14) ಆತನು ನಮ್ಮ ನೋಯುತ್ತಿರುವ ಹೃದಯಗಳಿಗೆ ಸಾಂತ್ವನವನ್ನು ಒದಗಿಸುತ್ತಾನೆ ಮತ್ತು ಬೈಬಲ್ ಒದಗಿಸುವ ‘ನಿರೀಕ್ಷೆಯಲ್ಲಿ’ ನಾವು ‘ಉಲ್ಲಾಸಿಸಬೇಕೆಂಬುದು’ ಆತನ ಬಯಕೆ. (ರೋಮಾಪುರ 12:12; 15:4, 5; 2 ಕೊರಿಂಥ 1:3, 4) ದೇವಭಕ್ತಿಯ ತಂದೆತಾಯಿಗಳು ಭವಿಷ್ಯತ್ತಿನಲ್ಲಿ ‘ಕುರುಡರು ನೋಡುವಾಗ, ಕಿವುಡರು ಕೇಳಿಸಿಕೊಳ್ಳುವಾಗ, ಕುಂಟರು ನಡೆಯುವಾಗ, ಮೂಕರು ಹರ್ಷಧ್ವನಿಗೈಯುವಾಗ,’ ತಮ್ಮ ಅಮೂಲ್ಯವಾದ ಮಗುವೂ ಪರಿಪೂರ್ಣವಾದ ಮಾನಸಿಕ ಮತ್ತು ಶಾರೀರಿಕ ಸ್ವಾಸ್ಥ್ಯವನ್ನು ಹೊಂದುವುದೆಂದು ಭರವಸೆಯಿಂದಿರಬಲ್ಲರು.—ಯೆಶಾಯ 35:5, 6; ಕೀರ್ತನೆ 103:2, 3. (g 4/06)
ತಂದೆತಾಯಿಗಳು ಏನು ಮಾಡಬಲ್ಲರು?
◼ ನಿಮ್ಮ ಮಗುವಿನ ದೌರ್ಬಲ್ಯದ ಬಗ್ಗೆ ಕಲಿತುಕೊಂಡು ತಿಳಿವಳಿಕೆಯುಳ್ಳವರಾಗಿರಿ.
◼ ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳಲು ಪ್ರಯತ್ನಿಸಿರಿ.
◼ ನಿಮ್ಮ ಮಗು ತನ್ನ ಸಾಮರ್ಥ್ಯದ ಮಟ್ಟಕ್ಕನುಸಾರ ಸ್ವಾವಲಂಬಿಯಾಗಿರುವಂತೆ ಸಹಾಯ ನೀಡಿರಿ.
◼ ಧೈರ್ಯ, ನಿರೀಕ್ಷೆ ಮತ್ತು ಬಲಕ್ಕಾಗಿ ದೇವರಿಗೆ ಬೇಡಿಕೊಳ್ಳಿರಿ.
ಇತರರು ಏನು ಮಾಡಬಲ್ಲರು?
◼ ಮಗುವಿನೊಂದಿಗೆ ಬಾಲಿಶ ರೀತಿಯಲ್ಲಲ್ಲ ಬದಲಾಗಿ ಅದರ ಪ್ರಾಯಕ್ಕನುಸಾರ ಮತ್ತು ಯಥಾರ್ಥತೆಯಿಂದ ಮಾತಾಡಿರಿ.
◼ ಹೆತ್ತವರೊಂದಿಗೆ ಅವರ ಮಗುವಿನ ವಿಷಯ ಮಾತಾಡಿರಿ ಮತ್ತು ಅವರನ್ನು ಪ್ರಶಂಸಿಸಿರಿ.
◼ ಮಗುವಿನ ಹೆತ್ತವರ ಭಾವನೆಗಳ ಬಗ್ಗೆ ಸೂಕ್ಷ್ಮಗ್ರಾಹಿಗಳಾಗಿರಿ.
◼ ವಿಶೇಷ ಅಗತ್ಯಗಳಿರುವ ಮಕ್ಕಳ ಹೆತ್ತವರು ಮತ್ತು ಕುಟುಂಬ ಸದಸ್ಯರನ್ನು ನಿಮ್ಮ ಚಟುವಟಿಕೆಗಳಲ್ಲಿ ಸೇರಿಸಿರಿ.
[ಪುಟ 18ರಲ್ಲಿರುವ ಚೌಕ/ಚಿತ್ರ]
ಇತರರು ಹೇಗೆ ಸಹಾಯ ಮಾಡಬಲ್ಲರು?
ದೀರ್ಘಕಾಲ ಮತ್ತು ತುಂಬ ದೂರ ಓಡಬೇಕಾಗುವ ಮಾರತನ್ ಓಟದ ಪಂದ್ಯದಲ್ಲಿನ ಓಟಗಾರರ ಸಹನೆಯನ್ನು ವೀಕ್ಷಕರು ಪ್ರಶಂಸಿಸುತ್ತಾರೆ. ಅದೇ ರೀತಿಯಲ್ಲಿ, ಮಾನಸಿಕ ದೌರ್ಬಲ್ಯವಿರುವ ಒಂದು ಮಗುವಿನ ಹೆತ್ತವರು ಪ್ರತಿದಿನ 24 ತಾಸು, ಹೀಗೆ ವಾರದ ಏಳು ದಿನಗಳೂ ಆರೈಕೆಮಾಡುವಾಗ ತೋರಿಸುವ ತಾಕತ್ತನ್ನು ನೋಡಿ ನೀವು ಆಶ್ಚರ್ಯಪಡಬಹುದು. ಮ್ಯಾರತನ್ ಓಟದಲ್ಲಿ ದಾರಿಯುದ್ದಕ್ಕೂ ಇರುವ ವೀಕ್ಷಕರು ಸಾಮಾನ್ಯವಾಗಿ ಓಟಗಾರರನ್ನು ಚೇತರಿಸಲು ಅವರಿಗೆ ನೀರಿನ ಸೀಸೆಗಳನ್ನು ಕೊಡುತ್ತಾರೆ. ಹಾಗೆಯೇ, ವಿಶೇಷ ಅಗತ್ಯಗಳಿರುವ ಒಂದು ಮಗುವಿಗೆ ಜೀವನಪರ್ಯಂತ ಆರೈಕೆ ಮಾಡುವ ತಂದೆತಾಯಿಗಳಿಗೆ ನೀವು ಉತ್ತೇಜನವನ್ನು ಕೊಡಬಲ್ಲಿರಾ?
ನೀವು ಸಹಾಯಮಾಡಬಲ್ಲ ಒಂದು ವಿಧವು ಅವರ ಮಗ ಅಥವಾ ಮಗಳೊಂದಿಗೆ ಕೇವಲ ಮಾತಾಡುವ ಮೂಲಕವೇ. ಇದರಿಂದ ನಿಮಗೆ ಮೊದಲು ಸ್ವಲ್ಪ ಇರಿಸುಮುರಿಸಾಗಬಹುದು, ಏಕೆಂದರೆ ನಿಮ್ಮ ಮಾತಿಗೆ ಆ ಮಕ್ಕಳು ಕೊಂಚವೇ ಪ್ರತಿಕ್ರಿಯೆ ತೋರಿಸಾರು, ಇಲ್ಲವೆ ಯಾವ ಪ್ರತಿಕ್ರಿಯೆಯನ್ನೂ ತೋರಿಸದೆ ಹೋದಾರು. ಆದರೆ ಅಂತಹ ಸ್ಥಿತಿಯಲ್ಲಿರುವ ಅನೇಕ ಮಕ್ಕಳು ಕಿವಿಗೊಡಲು ಇಷ್ಟಪಡುತ್ತಾರೆಂಬುದು ಮತ್ತು ನೀವು ಹೇಳುವ ವಿಷಯದ ಕುರಿತು ಯೋಚಿಸತೊಡಗುವ ಸಂಭವವಿದೆಯೆಂಬುದು ನಿಮಗೆ ತಿಳಿದಿರಲಿ. ಕೆಲವು ಸಂದರ್ಭಗಳಲ್ಲಿ ಅವರ ಮನಸ್ಸಿನಲ್ಲಿರುವ ಆಳವಾದ ಭಾವನೆಗಳು ಮುಖದಲ್ಲಿ ಕಾಣದೆ ಹೋದೀತು. ಅವು, ನೀರಿನ ಕೆಳಗಡೆ ಇರುವ ಹಿಮಗಡ್ಡೆ ಗುಡ್ಡದ ಅಧಿಕಾಂಶ ಭಾಗದಂತಿರಬಹುದು.a
ಮಕ್ಕಳ ನರತಜ್ಞರಾದ ಡಾ. ಆನ್ನಿಕೆ ಕಾಯ್ಸ್ಟಿನನ್, ನೀವು ಸಂಭಾಷಣೆಯನ್ನು ಹೇಗೆ ಸುಲಭವಾಗಿ ಆರಂಭಿಸಬಹುದೆಂದು ಸೂಚಿಸುತ್ತಾರೆ: “ಪ್ರಾರಂಭದಲ್ಲಿ ನೀವು ಅವರ ಕುಟುಂಬದ ಬಗ್ಗೆ ಇಲ್ಲವೆ ಅವರು ಕಾಲ ಹೇಗೆ ಕಳೆಯುತ್ತಾರೆಂಬುದರ ಬಗ್ಗೆ ಮಾತಾಡಬಹುದು. ಅವರ ಪ್ರಾಯಕ್ಕೆ ತಕ್ಕಂತೆ ಅವರೊಂದಿಗೆ ಮಾತಾಡಿರಿ. ತೀರ ಚಿಕ್ಕ ಮಕ್ಕಳೊಂದಿಗೆ ಮಾತಾಡುವಂತೆ ಅಲ್ಲ. ಒಮ್ಮೆಗೆ ಒಂದೇ ವಿಷಯವನ್ನು ಮಾತಾಡಿರಿ. ಚಿಕ್ಕಚಿಕ್ಕ ವಾಕ್ಯಗಳನ್ನು ಬಳಸಿರಿ. ನೀವು ಹೇಳುವ ವಿಷಯವನ್ನು ಅವರು ಗ್ರಹಿಸಲು ಸಮಯ ಕೊಡಿರಿ.”
ಅವರ ಹೆತ್ತವರಿಗೂ ನಿಮ್ಮ ಮಾತುಕತೆಯ ಅಗತ್ಯವಿದೆ. ಅವರು ಎದುರಿಸುತ್ತಿರುವ ಭಾವಾತ್ಮಕ ಪಂಥಾಹ್ವಾನಗಳ ಬಗ್ಗೆ ನೀವು ಹೆಚ್ಚು ಅರಿತುಕೊಳ್ಳುವಾಗ ನಿಮಗೆ ಅವರ ಮೇಲಿರುವ ಅನುಭೂತಿ ಹೆಚ್ಚಾಗುವುದು. ಉದಾಹರಣೆಗೆ, ಮಾರ್ಕುಸ್ನ ತಾಯಿ ಆನ್ನಿಗೆ ತನ್ನ ಪ್ರಿಯ ಮಗನನ್ನು ಹೆಚ್ಚಾಗಿ ತಿಳಿದುಕೊಳ್ಳುವ ಆಶೆಯಿದೆ. ಅವನಿಗೆ ತನ್ನೊಂದಿಗೆ ಮಾತಾಡಲು, ಮತ್ತು ಅವನ ಮನಸ್ಸಿನ ವಿಷಯಗಳನ್ನು ತಿಳಿಯಪಡಿಸಲು ಆಗುವುದಿಲ್ಲವಲ್ಲ ಎಂಬುದರ ಕುರಿತು ಆಕೆ ದುಃಖಿತಳಾಗಿದ್ದಾಳೆ. ತಾನು ಅವನಿಗಿಂತ ಮೊದಲೇ ಸತ್ತುಹೋಗುವಲ್ಲಿ ಅವನಿಗೆ ತಾಯಿ ಇಲ್ಲದಂತಾಗುತ್ತದಲ್ಲ ಎಂಬ ಚಿಂತೆಯೂ ಆಕೆಗಿದೆ.
ಮಾನಸಿಕ ದೌರ್ಬಲ್ಯವಿರುವ ಮಗುವಿಗೆ ಹೆತ್ತವರು ಎಷ್ಟೇ ಹೆಚ್ಚು ಆರೈಕೆಮಾಡಲಿ, ಅದಕ್ಕಿಂತ ಇನ್ನೂ ಹೆಚ್ಚಾಗಿ ಆರೈಕೆಮಾಡಬೇಕೆಂದು ಅವರು ಅನೇಕವೇಳೆ ಯೋಚಿಸುತ್ತಾರೆ. ಬ್ರಾಯನ್ನ ತಾಯಿ ಲೋರೀ, ತಾನು ಅವನ ಆರೈಕೆ ಮಾಡುವುದರಲ್ಲಿ ಸ್ವಲ್ಪ ತಪ್ಪಿದರೂ ತನ್ನ ಮೇಲೆಯೇ ಆರೋಪ ಹೊರಿಸಿಕೊಳ್ಳುತ್ತಾಳೆ. ತನ್ನ ಇತರ ಮಕ್ಕಳಿಗೆ ಹೆಚ್ಚು ಗಮನಕೊಡಲಿಕ್ಕಾಗದೆ ಇದದ್ದಕ್ಕಾಗಿಯೂ ಆಕೆಗೆ ದೋಷಿ ಮನೋಭಾವವಿದೆ. ಇಂತಹ ಹೆತ್ತವರ ಕಡೆಗೆ ಮತ್ತು ಅವರ ಅನಿಸಿಕೆಗಳ ಕಡೆಗೆ ನೀವು ತೋರಿಸುವ ಆಸಕ್ತಿ ಮತ್ತು ಮಾನ ಅವರಿಗೆ ಮತ್ತು ಅವರ ಮಕ್ಕಳಿಗೆ ಬೆಂಬಲವನ್ನು ಕೊಡುತ್ತದೆ. ಈ ವಿಷಯದಲ್ಲಿ ಈರ್ಮ್ಗಾರ್ಡ್ ಹೇಳುವುದು: “ನನ್ನ ಮಗಳ ಬಗ್ಗೆ ಮಾಡಲ್ಪಡುವ ಸಂಭಾಷಣೆಗಳು ನನಗೆ ಸ್ವೀಕರಣೀಯ. ಯೂನಿಕೆಯೊಂದಿಗಿನ ನನ್ನ ಜೀವನದ ಸಂತೋಷ ಮತ್ತು ದುಃಖದಲ್ಲಿ ಭಾಗಿಗಳಾಗಲು ಇಷ್ಟಪಡುವವರನ್ನು ನಾನು ಅಕ್ಕರೆಯಿಂದ ನೋಡುತ್ತೇನೆ.”
ಇವಲ್ಲದೆ, ನೀವು ಸಹಾಯಮಾಡಬಲ್ಲ ಇತರ ಅನೇಕ ಚಿಕ್ಕದೊಡ್ಡ ಮಾರ್ಗಗಳೂ ಇವೆ. ನೀವು ಪ್ರಾಯಶಃ ಆ ಹೆತ್ತವರನ್ನೂ ಅವರ ಮಗನನ್ನೂ/ಮಗಳನ್ನೂ ನಿಮ್ಮ ಮನೆಗೆ ಆಮಂತ್ರಿಸಬಲ್ಲಿರಿ, ಇಲ್ಲವೆ ನಿಮ್ಮ ಕುಟುಂಬ ಕಾರ್ಯಗಳಲ್ಲಿ ಅವರೂ ಸೇರುವಂತೆ ಕರೆಯಬಲ್ಲಿರಿ. ಅಲ್ಲದೆ, ನೀವು ಆ ಮಗುವಿನೊಂದಿಗೆ ಕೆಲವು ತಾಸುಗಳನ್ನು ಕಳೆದು, ಹೆತ್ತವರು ವಿಶ್ರಮಿಸುವಂಥ ಅವಕಾಶವನ್ನು ಕೊಡಲು ಸಹ ಸಾಧ್ಯವಿದ್ದೀತು.
[ಪಾದಟಿಪ್ಪಣಿ]
a ಇಸವಿ 2000 ಮೇ 8ರ ಎಚ್ಚರ! (ಇಂಗ್ಲಿಷ್) ಸಂಚಿಕೆಯಲ್ಲಿ “ಮೌನ ಲೋಕದಿಂದ ಹೊರಕ್ಕೆ ಅಡಿಯಿಡಲು ಲಾಯ್ಡಾಳ ಪ್ರಯಾಣ” ಎಂಬ ಲೇಖನ ನೋಡಿ.
[ಪುಟ 18ರಲ್ಲಿರುವ ಚಿತ್ರ]
ನೈಜ ಕಾಳಜಿಯನ್ನು ತೋರಿಸುವುದು ಹೆತ್ತವರಿಗೂ ಮಗುವಿಗೂ ಗೌರವ ತರುತ್ತದೆ
[ಪುಟ 19ರಲ್ಲಿರುವ ಚಿತ್ರ]
ಯೂನಿಕೆಯಂತೆ, ಮಾನಸಿಕ ದೌರ್ಬಲ್ಯವಿರುವ ಮಕ್ಕಳು ದೊಡ್ಡವರಾಗುತ್ತಾ ಹೋದಂತೆ ಅವರಿಗೆ ಮಮತೆಯನ್ನು ತೋರಿಸುತ್ತಾ ಇರಬೇಕು
[ಪುಟ 20ರಲ್ಲಿರುವ ಚಿತ್ರ]
ಲೋರೀ ಎಂಬಾಕೆ ತನ್ನ ಮಗ ಬ್ರಾಯನ್ ಟೈಪ್ ಮಾಡಲು ಕಲಿಯುವಂತೆ ಸಹಾಯನೀಡಿ, ಹೀಗೆ ಅವನು ಸ್ವಾವಲಂಬಿಯಾಗಿರುವಂತೆ ಉತ್ತೇಜಿಸಿದ್ದಾಳೆ