ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g 7/06 ಪು. 7-9
  • ಕೊನೆಗೂ ಭೂಮಿಯ ಮೇಲೆ ಶಾಂತಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೊನೆಗೂ ಭೂಮಿಯ ಮೇಲೆ ಶಾಂತಿ!
  • ಎಚ್ಚರ!—2006
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹಿಂಸಾಚಾರವು ನಮ್ಮ ಸಮಸ್ಯೆಗಳಿಗೆ ಪರಿಹಾರವಲ್ಲ
  • ದೇವರು ನಮ್ಮ ಭರವಸೆಗೆ ಅರ್ಹನೇಕೆ?
  • ಭೂಮಿಯ ಮೇಲೆ ಎಂದೆಂದಿಗೂ ಶಾಂತಿ!
  • ಭಯೋತ್ಪಾದನೆಗೆ ಕೊನೆ ಯಾವಾಗ?
    ಇತರ ವಿಷಯಗಳು
  • “ಹೆದರಬೇಡಿರಿ, ಕಳವಳಗೊಳ್ಳಬೇಡಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ರಕ್ತದಿಂದ ಬರೆಯಲ್ಪಟ್ಟ ಇತಿಹಾಸ
    ಎಚ್ಚರ!—2006
  • ಹಿಂಸಾಕೃತ್ಯಕ್ಕೆ ಶಾಶ್ವತ ಕೊನೆ—ಹೇಗೆ?
    ಕಾವಲಿನಬುರುಜು—1996
ಇನ್ನಷ್ಟು
ಎಚ್ಚರ!—2006
g 7/06 ಪು. 7-9

ಕೊನೆಗೂ ಭೂಮಿಯ ಮೇಲೆ ಶಾಂತಿ!

ಕೇವಲ ಹಿಂಸಾಚಾರದಿಂದ ರಾಜಕೀಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಶುದ್ಧಿ ಪ್ರಾಪ್ತಿಯಾಗಬಲ್ಲದೆಂಬುದು ಕೆಲವರ ಅಂಬೋಣ ಇಲ್ಲವೆ ಅಭಿಪ್ರಾಯ. ಕೇವಲ ನಾಶಕಾರಿ ಶಕ್ತಿಯ ಪ್ರಯೋಗದಿಂದಲೇ ಅನಪೇಕ್ಷಿತ ನಾಯಕರನ್ನು ಅಳಿಸಿಹಾಕಲು ಸಾಧ್ಯವಿದೆ ಎಂಬುದು ಅವರ ಎಣಿಕೆ. ಅಲ್ಲದೆ ಕೆಲವು ಸರಕಾರಗಳು ಸಹ ಶಿಸ್ತನ್ನು ಕಾಪಾಡಲಿಕ್ಕಾಗಿ ಮತ್ತು ತಮಗೆ ಅಧೀನದಲ್ಲಿರುವ ಜನರನ್ನು ಹದ್ದುಬಸ್ತಿನಲ್ಲಿಡಲಿಕ್ಕಾಗಿ ಭಯವನ್ನು ಬಳಸುತ್ತವೆ. ಆದರೆ ಒಂದುವೇಳೆ ಭಯೋತ್ಪಾದನೆಯು ಉತ್ತಮ ಆಳ್ವಿಕೆ ಹಾಗೂ ಸಾಮಾಜಿಕ ಸುಧಾರಣೆಯನ್ನು ತರುವ ಒಂದು ಪರಿಣಾಮಕಾರಿ ಸಾಧನವಾಗಿರುತ್ತಿದ್ದಲ್ಲಿ, ಅದರಿಂದ ಶಾಂತಿ, ಸಮೃದ್ಧಿ ಮತ್ತು ಸ್ಥಿರತೆಯು ಫಲಿಸಬೇಕಿತ್ತು. ಅಲ್ಲದೆ, ಸ್ವಲ್ಪ ಸಮಯದ ಬಳಿಕ ಹಿಂಸಾಚಾರ ಮತ್ತು ಭಯ ಕಡಿಮೆಯಾಗಬೇಕಿತ್ತು. ಈ ರೀತಿಯ ಫಲಿತಾಂಶಗಳನ್ನು ನಾವು ಎಲ್ಲಾದರೂ ಕಂಡಿದ್ದೇವೊ?

ಸತ್ಯ ಸಂಗತಿಯೇನೆಂದರೆ ಭಯೋತ್ಪಾದನೆಯು ಜೀವಕ್ಕಾಗಿರುವ ಗೌರವವನ್ನು ತುಳಿದುಹಾಕುತ್ತದೆ ಮತ್ತು ರಕ್ತಪಾತ ಹಾಗೂ ಕ್ರೌರ್ಯಕ್ಕೆ ನಡೆಸುತ್ತದೆ. ಭಯೋತ್ಪಾದನೆಗೆ ತುತ್ತಾಗಿರುವವರ ನೋವು ಅವರು ಪ್ರತೀಕಾರ ತೀರಿಸುವಂತೆ ಮಾಡುತ್ತದೆ, ಆದರೆ ಅವರ ಪ್ರತೀಕಾರದ ಕೃತ್ಯಗಳಿಂದಾಗಿ ಅವರನ್ನು ಇನ್ನೂ ಹೆಚ್ಚಾಗಿ ಅದುಮಿಡಲು ಪ್ರಯತ್ನಿಸಲಾಗುತ್ತದೆ ಮತ್ತು ಇದಕ್ಕೆ ಪ್ರತಿಕ್ರಿಯೆಯಲ್ಲಿ ಅವರು ಇನ್ನೂ ಹೆಚ್ಚಿನ ಪ್ರತೀಕಾರದ ಕೃತ್ಯಗಳನ್ನು ನಡೆಸುತ್ತಾರೆ.

ಹಿಂಸಾಚಾರವು ನಮ್ಮ ಸಮಸ್ಯೆಗಳಿಗೆ ಪರಿಹಾರವಲ್ಲ

ಮಾನವರು ತಮ್ಮ ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ತಮ್ಮಷ್ಟಕ್ಕೆ ಬಗೆಹರಿಸಲು ಸಾವಿರಾರು ವರ್ಷಗಳಿಂದ ಪ್ರಯತ್ನಿಸಿರುವುದಾದರೂ, ಅವರ ಎಲ್ಲ ಪ್ರಯತ್ನಗಳು ನೆಲಕಚ್ಚಿವೆ. ಇದು ಬೈಬಲು ಹೇಳಿದಂತೆಯೇ ನಡೆದಿದೆ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಯೇಸು ಹೇಳಿದ್ದು: “ವಿವೇಕ [ಅದರ] ಫಲಿತಾಂಶಗಳಿಂದಲೇ ನಿಲ್ಲುತ್ತದೆ ಇಲ್ಲದಿದ್ದರೆ ಬೀಳುತ್ತದೆ.” (ಮತ್ತಾಯ 11:​19, ದ ನ್ಯೂ ಟೆಸ್ಟಮೆಂಟ್‌ ಇನ್‌ ಮಾಡರ್ನ್‌ ಇಂಗ್ಲಿಷ್‌, ಜೆ. ಬಿ. ಫಿಲಿಪ್ಸ್‌) ಈ ಬೈಬಲ್‌ ಮೂಲತತ್ತ್ವಗಳನ್ನು ಹೆಚ್ಚು ವಿಶಾಲಾರ್ಥದಲ್ಲಿ ನೋಡುವುದಾದರೆ, ಭಯೋತ್ಪಾದನೆಯು ಒಂದು ಹುಸಿ ನಿರೀಕ್ಷೆ ಆಗಿದೆಯೆಂದು ಅವು ಸೂಚ್ಯವಾಗಿ ತಿಳಿಸುತ್ತಿವೆ. ಭಯೋತ್ಪಾದನೆಯ ಫಲಗಳು ಸ್ವಾತಂತ್ರ್ಯ ಹಾಗೂ ಸಂತೋಷವಾಗಿರುವ ಬದಲು ಮರಣ, ದಾರಿದ್ರ್ಯ ಹಾಗೂ ವಿನಾಶವಾಗಿರುತ್ತವೆ. ಈ ಕೆಟ್ಟ ಫಲಗಳು 20ನೇ ಶತಮಾನದಲ್ಲಿ ತುಂಬಿತುಳುಕಿದವು ಮತ್ತು ಈ 21ನೇ ಶತಮಾನದಲ್ಲೂ ತುಂಬಿಕೊಳ್ಳುತ್ತಾ ಇವೆ. ಭಯೋತ್ಪಾದನೆಯು, ಸಮಸ್ಯೆಗೆ ಪರಿಹಾರವಾಗಿರುವ ಬದಲು ಅದೇ ಒಂದು ಸಮಸ್ಯೆಯಾಗಿದೆ ಎಂಬುದು ಅನೇಕರ ಅಭಿಪ್ರಾಯ.

“ನನ್ನ ಕುಟುಂಬದಲ್ಲಾಗಲಿ ಸ್ನೇಹಿತರಲ್ಲಾಗಲಿ ಯಾರೂ ಸಾಯಬಾರದೆಂದು ನಾನು ಪ್ರತಿ ದಿನ ಹಾರೈಸುತ್ತೇನೆ . . . ಬಹುಶಃ ಒಂದು ಚಮತ್ಕಾರ ನಡೆಯಬೇಕು” ಎಂದು ಬರೆದ ಒಬ್ಬ ಹದಿವಯಸ್ಕಳ ದೇಶವು ಭಯೋತ್ಪಾದಕರ ಹಿಂಸಾಚಾರದಿಂದ ಛಿದ್ರಛಿದ್ರವಾಗಿತ್ತು. ಅವಳ ಆ ಮಾತುಗಳು, ಮನುಷ್ಯರ ಸಮಸ್ಯೆಗಳಿಗೆ ಪರಿಹಾರವು ಮಾನವನಿಗಿಂತಲೂ ಶ್ರೇಷ್ಠವಾಗಿರುವ ಮೂಲದಿಂದ ಮಾತ್ರವೇ ಬರಬಲ್ಲದು ಎಂದು ಅನೇಕರು ಈಗಾಗಲೇ ತಲಪಿರುವ ತೀರ್ಮಾನಕ್ಕೆ ಬೊಟ್ಟುಮಾಡುತ್ತವೆ. ಭಯೋತ್ಪಾದನೆಯ ಸಮೇತ ಭೂಮಿಯಲ್ಲಿರುವ ಸದ್ಯದ ಎಲ್ಲ ತೊಂದರೆಗಳನ್ನು ಕೇವಲ ಮಾನವನ ಸೃಷ್ಟಿಕರ್ತನು ಬಗೆಹರಿಸಬಲ್ಲನು. ಆದರೆ ನಾವು ದೇವರಲ್ಲಿ ಏಕೆ ಭರವಸೆಯನ್ನಿಡಬೇಕು?

ದೇವರು ನಮ್ಮ ಭರವಸೆಗೆ ಅರ್ಹನೇಕೆ?

ಒಂದು ಕಾರಣವೇನೆಂದರೆ, ಸೃಷ್ಟಿಕರ್ತನಾಗಿ ನಮಗೆ ಜೀವಕೊಟ್ಟವನು ಯೆಹೋವನೇ ಮತ್ತು ನಾವು ಸುಖಶಾಂತಿಯಲ್ಲಿ ಜೀವನವನ್ನು ಆನಂದಿಸುವಂತೆ ಆತನು ಬಯಸುತ್ತಾನೆ. ಆತನ ಪ್ರವಾದಿಯಾದ ಯೆಶಾಯನು ಹೀಗೆ ಬರೆಯಲು ಪ್ರಚೋದಿಸಲ್ಪಟ್ಟನು: “ಈಗಲಾದರೋ ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ.” (ಯೆಶಾಯ 64:8) ಯೆಹೋವನು ಮಾನವಕುಲದ ಪಿತನಾಗಿದ್ದಾನೆ ಮತ್ತು ಎಲ್ಲ ರಾಷ್ಟ್ರಗಳ ಜನರು ಆತನಿಗೆ ಅಮೂಲ್ಯರು. ಭಯೋತ್ಪಾದನೆಗೆ ಕಾರಣವಾಗಿರುವ ಅನ್ಯಾಯ ಮತ್ತು ದ್ವೇಷಕ್ಕೆ ಆತನು ಜವಾಬ್ದಾರನಲ್ಲ. ಬುದ್ಧಿವಂತ ರಾಜನಾದ ಸೊಲೊಮೋನನು ಒಂದು ಕಾಲದಲ್ಲಿ ಹೀಗೆ ಘೋಷಿಸಿದನು: “ದೇವರು ಮನುಷ್ಯರನ್ನು ಸತ್ಯವಂತರನ್ನಾಗಿ ಸೃಷ್ಟಿಸಿದನು, ಅವರಾದರೋ ಬಹು ಯುಕ್ತಿಗಳನ್ನು ಕಲ್ಪಿಸಿಕೊಂಡಿದ್ದಾರೆ.” (ಪ್ರಸಂಗಿ 7:29) ಭಯೋತ್ಪಾದನೆಗೆ ಮಾನವನ ದುಷ್ಟತನ ಮತ್ತು ದೆವ್ವಗಳ ಪ್ರಭಾವವೇ ಮೂಲಕಾರಣವಾಗಿದೆಯೇ ಹೊರತು ಅದು ದೇವರ ಕಡೆಯಿಂದ ಯಾವುದೊ ಲೋಪದ ಫಲವಾಗಿರುವುದಿಲ್ಲ.​—⁠ಎಫೆಸ 6:​11, 12.

ನಾವು ಯೆಹೋವನ ಮೇಲೆ ಭರವಸೆಯಿಡಬಹುದಾದ ಇನ್ನೊಂದು ಕಾರಣವೇನೆಂದರೆ, ಬೇರಾವನಿಗಿಂತಲೂ ಆತನು ಮಾನವಕುಲದ ಸಮಸ್ಯೆಗಳ ಕಾರಣ ಏನೆಂಬುದನ್ನು ಮತ್ತು ಸಮಸ್ಯೆಗಳನ್ನು ಹೇಗೆ ಬಗೆಹರಿಸುವುದೆಂಬುದನ್ನು ಅತ್ಯುತ್ತಮವಾಗಿ ಅರ್ಥೈಸಬಲ್ಲನು. ಏಕೆಂದರೆ ಆತನು ಮಾನವರನ್ನು ಸೃಷ್ಟಿಸಿದನು. ಈ ಸತ್ಯವನ್ನು ಬೈಬಲು ಜ್ಞಾನೋಕ್ತಿ 3:19ರಲ್ಲಿ ತಿಳಿಸುತ್ತದೆ: “ಯೆಹೋವನು ಜ್ಞಾನದ ಮೂಲಕ ಭೂಮಿಯನ್ನು ಸ್ಥಾಪಿಸಿ ವಿವೇಕದ ಮುಖಾಂತರ ಆಕಾಶಮಂಡಲವನ್ನು ಸ್ಥಿರಪಡಿಸಿದನು.” ದೇವರಲ್ಲಿ ಪೂರ್ಣ ಭರವಸೆಯೊಂದಿಗೆ ಪ್ರಾಚೀನಕಾಲದ ಒಬ್ಬ ವ್ಯಕ್ತಿಯು ಬರೆದುದು: “ನನ್ನ ಸಹಾಯವು ಎಲ್ಲಿಂದ ಬರುವದು? ಭೂಮ್ಯಾಕಾಶಗಳನ್ನು ನಿರ್ಮಿಸಿದ ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.”​—⁠ಕೀರ್ತನೆ 121:1, 2.

ನಾವು ದೇವರ ಮೇಲೆ ಏಕೆ ಭರವಸೆಯಿಡಬಲ್ಲೆವೆಂಬುದಕ್ಕೆ ಮೂರನೆಯ ಕಾರಣವೂ ಇದೆ. ಅದೇನೆಂದರೆ, ಹಿಂಸಾತ್ಮಕ ರಕ್ತಪಾತವನ್ನು ಕೊನೆಗಾಣಿಸುವ ಶಕ್ತಿ ಆತನಿಗಿದೆ. ನೋಹನ ಕಾಲದಲ್ಲಿ “ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.” (ಆದಿಕಾಂಡ 6:11) ಆಗ ದೇವರ ನ್ಯಾಯತೀರ್ಪು ಥಟ್ಟನೆ ಮತ್ತು ಸಂಪೂರ್ಣವಾಗಿ ಬಂದೆರಗಿತು: “ಆತನು ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು.”​—⁠2 ಪೇತ್ರ 2:⁠5.

ನೋಹನ ದಿನದ ಜಲಪ್ರಳಯದಿಂದ ನಾವು ಕಲಿಯಬೇಕಾದ ಒಂದು ಪಾಠವನ್ನು ಬೈಬಲ್‌ ತಿಳಿಸುತ್ತದೆ: “[ಯೆಹೋವನು] ತನ್ನ ಭಕ್ತರನ್ನು ಕಷ್ಟಗಳೊಳಗಿಂದ ತಪ್ಪಿಸುವದಕ್ಕೂ ದುರ್ಮಾರ್ಗಿಗಳನ್ನು ನ್ಯಾಯತೀರ್ಪಿನ ದಿನದ ತನಕ ಶಿಕ್ಷಾನುಭವದಲ್ಲಿ ಇಡುವದಕ್ಕೂ ಬಲ್ಲವನಾಗಿದ್ದಾನೆ.” (2 ಪೇತ್ರ 2:9) ಉತ್ತಮ ಜೀವನವನ್ನು ನಿಜವಾಗಿ ಬಯಸುವವರು ಯಾರು ಮತ್ತು ಇತರರ ಜೀವನವನ್ನು ಕಷ್ಟಕರವನ್ನಾಗಿ ಮಾಡಬಯಸುವವರು ಯಾರು ಎಂಬುದನ್ನು ದೇವರು ತಿಳಿಯಬಲ್ಲನು. ಬೇರೆಯವರ ಜೀವನವನ್ನು ಕಷ್ಟಕರವನ್ನಾಗಿ ಮಾಡುವವರನ್ನು ಆತನು ‘ನಾಶಕ್ಕಾಗಿ’ ಕಾದಿರಿಸಿದ್ದಾನೆ. ಆದರೆ ಶಾಂತಿಯನ್ನು ಹಾರೈಸುವವರಿಗಾಗಿ ಆತನು, ನೀತಿಯು ವಾಸವಾಗಿರುವ ಒಂದು ನೂತನ ಭೂಮಂಡಲವನ್ನು ಸಿದ್ಧಗೊಳಿಸುತ್ತಿದ್ದಾನೆ.​—⁠2 ಪೇತ್ರ 3:​7, 13.

ಭೂಮಿಯ ಮೇಲೆ ಎಂದೆಂದಿಗೂ ಶಾಂತಿ!

ಬೈಬಲ್‌ ಲೇಖಕರು ಅನೇಕವೇಳೆ ಮಾನವಕುಲವನ್ನು ಸೂಚಿಸಲು ‘ಭೂಮಿ’ ಇಲ್ಲವೆ ಭೂಮಂಡಲ ಎಂಬ ಪದವನ್ನು ಉಪಯೋಗಿಸಿದರು. ಅಪೊಸ್ತಲ ಪೇತ್ರನು ‘ನೂತನ ಭೂಮಂಡಲದ’ ಬಗ್ಗೆ ಬರೆದಾಗ ಅವನ ಮನಸ್ಸಿನಲ್ಲಿಯೂ ಇದೇ ವಿಷಯವಿತ್ತು. ದೇವರಾದ ಯೆಹೋವನು ಭೂಮಿಯಲ್ಲಿ ನೀತಿನ್ಯಾಯಗಳನ್ನು, ಹಿಂಸಾಚಾರ ಹಾಗೂ ದ್ವೇಷದ ಸ್ಥಾನದಲ್ಲಿ ಕಾಯಂ ಆಗಿ ತುಂಬಿಕೊಳ್ಳುವಂತೆ ಮಾಡುವ ಮೂಲಕ ಮಾನವ ಸಮಾಜವನ್ನು ಪುನಃ ನೂತನಗೊಳಿಸುವನು. ಮೀಕ 4:3ರಲ್ಲಿ ದಾಖಲಿಸಲ್ಪಟ್ಟಿರುವ ಒಂದು ಪ್ರವಾದನೆಯಲ್ಲಿ ಬೈಬಲ್‌ ನಮಗನ್ನುವುದು: “ಆತನು ಬಹು ರಾಷ್ಟ್ರದವರ ವ್ಯಾಜ್ಯಗಳನ್ನು ವಿಚಾರಿಸುವನು, ಪ್ರಬಲ ಜನಾಂಗಗಳಿಗೆ ನ್ಯಾಯತೀರಿಸುವನು; ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”

ಆ ಪ್ರವಾದನೆಯು ನೆರವೇರುವಾಗ ಜನರು ಹೇಗೆ ಜೀವಿಸುವರು? ಮೀಕ 4:4 ತಿಳಿಸುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” ಆ ಭೂಪರದೈಸಿನಲ್ಲಿ ಯಾರೂ, ಮುಂದಿನ ಭಯೋತ್ಪಾದಕ ದಾಳಿ ಯಾವಾಗ ನಡೆಯಲಿದೆಯೊ ಏನೋ ಎಂಬ ಭಯದಲ್ಲಿ ಜೀವಿಸರು. ಈ ವಾಗ್ದಾನದಲ್ಲಿ ನೀವು ಭರವಸೆಯಿಡಬಹುದೊ? ಖಂಡಿತವಾಗಿಯೂ ಇಡಬಹುದು ಏಕೆಂದರೆ ‘ಸೇನಾಧೀಶ್ವರನಾದ ಯೆಹೋವನ ಬಾಯೇ ಅದನ್ನು ನುಡಿದಿದೆ.’​—⁠ಮೀಕ 4:⁠4.

ಆದುದರಿಂದ ಭಯೋತ್ಪಾದಕರ ಬೆದರಿಕೆಗಳು ಹೆಚ್ಚುತ್ತಾ ಹೋಗುವಾಗ ಮತ್ತು ಹಿಂಸಾಚಾರದಿಂದಾಗಿ ರಾಷ್ಟ್ರಗಳು ನಡುಗುತ್ತಿರುವಾಗ, ಶಾಂತಿಪ್ರಿಯರಿಗಿರುವ ಪರಿಹಾರವು ಯೆಹೋವನಲ್ಲಿ ಭರವಸೆಯಿಡುವುದೇ ಆಗಿದೆ. ಆತನು ಬಗೆಹರಿಸಲಾಗದ ಒಂದೇ ಒಂದು ಸಮಸ್ಯೆಯೂ ಇಲ್ಲ. ಆತನು ನೋವು, ಕಷ್ಟ ಮತ್ತು ಮರಣವನ್ನೂ ತೆಗೆದುಹಾಕುವನು. ಬೈಬಲ್‌ ತಿಳಿಸುವುದು: “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.” (ಯೆಶಾಯ 25:8) ಜನರಿಗೆ ಅಮೂಲ್ಯವಾಗಿರುವ ಅನೇಕಾನೇಕ ದೇಶಗಳು ಇಂದು ಬೇನೆಭೀತಿಗಳಿಂದ ತುಂಬಿರುವುದಾದರೂ, ಅವು ಬೇಗನೆ ಶಾಂತಿಯ ಫಲದಿಂದ ತುಂಬಿತುಳುಕುತ್ತಿರುವವು. ಮಾನವಕುಲಕ್ಕೆ ತುರ್ತಾಗಿ ಅಗತ್ಯವಿರುವ ಆ ಶಾಂತಿಯನ್ನೇ ‘ಸುಳ್ಳಾಡದ’ ದೇವರು ವಾಗ್ದಾನಿಸಿದ್ದಾನೆ.​—⁠ತೀತ 1:2; ಇಬ್ರಿಯ 6:​17, 18. (g 6/06)

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ಗುಂಡುಗಳು ಮತ್ತು ಸ್ಫೋಟಕಗಳಿಗೆ ಒಂದು ಪರಿಣಾಮಕಾರಿ ಬದಲಿ

ಹಿಂಸಾಚಾರವೇ ರಾಜಕೀಯ ಬದಲಾವಣೆಯನ್ನು ತರುವಂಥ ಏಕಮಾತ್ರ ಮಾರ್ಗವೆಂದು ಒಂದು ಸಮಯದಲ್ಲಿ ನಂಬುತ್ತಿದ್ದ ಕೆಲವು ವ್ಯಕ್ತಿಗಳ ಅಭಿವ್ಯಕ್ತಿಗಳು ಇಲ್ಲಿವೆ.

◼ “ನಾನು ಇತಿಹಾಸದ ಪುಸ್ತಕಗಳನ್ನು ಓದುತ್ತಿದ್ದಂತೆ, ರಾಜರು ಮತ್ತು ಉನ್ನತಾಧಿಕಾರಿಗಳು ಯಾವಾಗಲೂ ಬಡಜನರ ಮೇಲೆ ದಬ್ಬಾಳಿಕೆ ನಡೆಸಿರುವುದನ್ನು ಗಮನಿಸಿದೆ. ಈ ಕೆಳವರ್ಗದವರ ಕಷ್ಟನುಭವಗಳು ನನ್ನ ಮನಸ್ಸನ್ನು ಕಲಕಿದವು. ಈ ಕೆಟ್ಟತನವನ್ನು ಹೇಗೆ ಅಂತ್ಯಗೊಳಿಸಬಹುದೆಂಬುದರ ಬಗ್ಗೆ ನಾನು ಯೋಚಿಸುತ್ತಿದ್ದಾಗ, ನಾವು ಹೋರಾಡಬೇಕು, ಗುಂಡಿನ ಚಕಮಕಿ ನಡೆಯಲೇಬೇಕೆಂಬ ತೀರ್ಮಾನಕ್ಕೆ ಬಂದೆ.”​—⁠ರಾಮೋನ್‌.a

◼ “ನಾನು ಸಶಸ್ತ್ರ ಹಿಂಸಾಚಾರದಲ್ಲಿ ಪಾಲ್ಗೊಂಡೆ. ಹಳೇ ಅಧಿಕಾರಿಗಳನ್ನು ಧಿಕ್ಕರಿಸಿ, ಜಗತ್ತಿನ ಜನರ ನಡುವೆ ಇರುವ ಅಸಮಾನತೆಗಳನ್ನು ತೆಗೆದುಹಾಕುವ ಒಂದು ಸಮಾಜವನ್ನು ಸ್ಥಾಪಿಸುವುದೇ ನನ್ನ ಗುರಿಯಾಗಿತ್ತು.”​—⁠ಲೂಚ್ಯಾನ್‌.

◼ “ನಾನೊಬ್ಬ ಬಾಲಕನಾಗಿದ್ದಂದಿನಿಂದಲೇ ನಡೆಯುತ್ತಿದ್ದ ಅನ್ಯಾಯಗಳು ನನ್ನ ನೆಮ್ಮದಿಗೆಡಿಸುತ್ತಿದ್ದವು. ಅನ್ಯಾಯಗಳೆಂದು ಹೇಳುವಾಗ ಬಡತನ, ಅಪರಾಧ, ಕೀಳ್ಮಟ್ಟದ ಶಿಕ್ಷಣ ಮತ್ತು ವೈದ್ಯಕೀಯ ಆರೈಕೆಯ ಕೊರತೆ ಇವೆಲ್ಲವೂ ಒಳಗೂಡಿದ್ದವು. ಆಯುಧಗಳನ್ನು ಬಳಸಿ, ಎಲ್ಲರಿಗೆ ಶಿಕ್ಷಣ, ಆರೋಗ್ಯಾರೈಕೆ, ಮನೆ ಮತ್ತು ಉದ್ಯೋಗವನ್ನು ಪಡೆಯುವಂತೆ ಮಾಡಸಾಧ್ಯವಿದೆಯೆಂಬುದು ನನ್ನ ಅಭಿಪ್ರಾಯವಾಗಿತ್ತು. ಸರಿಯಾದ ರೀತಿಯಲ್ಲಿ ನಡೆದುಕೊಳ್ಳಲು ಮತ್ತು ತನ್ನ ನೆರೆಯವನನ್ನು ಗೌರವಿಸಲು ಮನಸ್ಸಿಲ್ಲದ ಯಾವುದೇ ವ್ಯಕ್ತಿಗೆ ಶಿಕ್ಷೆಯನ್ನು ಕೊಡಬೇಕೆಂಬುದು ನನ್ನ ವಿಚಾರವಾಗಿತ್ತು.”​—⁠ಪೀಟರ್‌.

◼ “ನಾನೂ ನನ್ನ ಗಂಡನೂ, ಹಿಂಸಾತ್ಮಕ ಬಂಡಾಯವನ್ನು ಪ್ರವರ್ಧಿಸುತ್ತಿದ್ದ ಒಂದು ಗುಪ್ತ ಸಂಘಟನೆಯ ಭಾಗವಾಗಿದ್ದೆವು. ಜನರ ಕ್ಷೇಮಾಭಿವೃದ್ಧಿಮಾಡುವ ಮತ್ತು ಸಮುದಾಯದಲ್ಲಿ ಶಿಸ್ತು ಹಾಗೂ ಎಲ್ಲರಲ್ಲಿಯೂ ಸಮಾನತೆಯನ್ನು ಮೂಡಿಸುವ ಒಂದು ಸರಕಾರವನ್ನು ರಚಿಸುವ ನಿರೀಕ್ಷೆ ನಮಗಿತ್ತು. ನಮ್ಮ ದೇಶದಲ್ಲಿ ನ್ಯಾಯ ದೊರಕಬೇಕಾದರೆ ಸರಕಾರಕ್ಕೆ ವಿರೋಧವಾಗಿರುವ ಚಟುವಟಿಕೆಗಳಿಂದಲೇ ಅದು ಸಾಧ್ಯವೆಂದು ನಮಗನಿಸುತ್ತಿತ್ತು.”​—⁠ಲುರ್ದೆಸ್‌.

ಇವರೆಲ್ಲರೂ ಕಷ್ಟದಿಂದ ನರಳುತ್ತಿರುವ ಮಾನವಕುಲಕ್ಕೆ, ಬಲಪ್ರಯೋಗದ ಮೂಲಕ ಸಹಾಯಮಾಡಲು ಪ್ರಯತ್ನಿಸಿದರು. ಆದರೆ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನಮಾಡಿದರ ಪರಿಣಾಮವಾಗಿ, ದೇವರ ವಾಕ್ಯವು ಹೆಚ್ಚು ಉತ್ತಮವಾದ ಮಾರ್ಗವನ್ನು ಮುಂದಿಡುತ್ತದೆಂದು ಅವರು ಗ್ರಹಿಸಿಕೊಂಡರು. ಯಾಕೋಬ 1:20ರಲ್ಲಿ ಬೈಬಲ್‌ ತಿಳಿಸುವುದು: “ಮನುಷ್ಯನ ಕೋಪವು ದೇವರಿಗೆ ಮೆಚ್ಚಿಕೆಯಾಗಿರುವ ನೀತಿಗೆ ಅನುಕೂಲವಾಗುವದಿಲ್ಲ.” ಟುಡೇಸ್‌ ಇಂಗ್ಲಿಷ್‌ ವರ್ಷನ್‌ ಅದನ್ನು ಹೀಗೆ ತಿಳಿಸುತ್ತದೆ: “ಮನುಷ್ಯನ ಸಿಟ್ಟು ದೇವರ ನೀತಿಭರಿತ ಉದ್ದೇಶವನ್ನು ಸಾಧಿಸುವುದಿಲ್ಲ.”

ಕೇವಲ ದೇವರ ಆಳ್ವಿಕೆಯು ಮಾತ್ರ ಮಾನವ ಸಮಾಜವನ್ನು ಬದಲಾಯಿಸಬಲ್ಲದು. ಮತ್ತಾಯ ಅಧ್ಯಾಯ 24 ಮತ್ತು 2 ತಿಮೊಥೆಯ 3:​1-5ರಂಥ ಬೈಬಲ್‌ ಪ್ರವಾದನೆಗಳು, ದೇವರ ಸರಕಾರವು ಇದನ್ನು ಬೇಗನೆ ಮಾಡಲಿಕ್ಕಿದೆ ಎಂಬುದನ್ನು ಸೂಚಿಸುತ್ತವೆ. ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡುವ ಮೂಲಕ ಈ ಸತ್ಯಗಳನ್ನು ನೀವೇ ಕಲಿತುಕೊಳ್ಳುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ.

[ಪಾದಟಿಪ್ಪಣಿ]

a ಹೆಸರುಗಳನ್ನು ಬದಲಾಯಿಸಲಾಗಿವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ