ರಕ್ತದಿಂದ ಬರೆಯಲ್ಪಟ್ಟ ಇತಿಹಾಸ
ಕೇವಲ ಕೆಲವೇ ವರ್ಷಗಳ ಹಿಂದೆ ಭಯೋತ್ಪಾದನೆಯು ಉತ್ತರ ಐರ್ಲೆಂಡ್, ಉತ್ತರ ಸ್ಪೆಯಿನ್ನ ಬಾಸ್ಕ್ ಪ್ರದೇಶ ಮತ್ತು ಮಧ್ಯ ಪೂರ್ವದಲ್ಲಿನ ಕೆಲವು ಪ್ರದೇಶಗಳಂಥ ದೂರ ದೂರದ ಸ್ಥಳಗಳಲ್ಲಿ ಮಾತ್ರ ಇದೆ ಎಂಬಂತೆ ತೋರುತ್ತಿತ್ತು. ಆದರೆ ಈಗ, ವಿಶೇಷವಾಗಿ 2001ರ ಸೆಪ್ಟೆಂಬರ್ 11ರಂದು ನ್ಯೂ ಯಾರ್ಕ್ನಲ್ಲಿ ನಡೆದ ಅವಳಿ ಗೋಪುರಗಳ ವಿನಾಶದಂದಿನಿಂದ, ಅದು ಥಟ್ಟನೆ ಒಂದು ಜಗದ್ವ್ಯಾಪಕ ಸಂಗತಿಯಾಗಿ ಬೆಳೆದುಬಿಟ್ಟಿದೆ. ಇಂಡೊನೇಷ್ಯದ ಸುಂದರವಾದ ಉದ್ಯಾನದಂಥ ಬಾಲಿ, ಸ್ಪೆಯಿನ್ನ ಮಡ್ರಿಡ್, ಇಂಗ್ಲೆಂಡಿನ ಲಂಡನ್, ಶ್ರೀಲಂಕ, ಥಾಯ್ಲೆಂಡ್ ಮತ್ತು ನೇಪಾಳದಲ್ಲೂ ಅದು ಪುಟಿದೆದ್ದಿದೆ. ಹಾಗಿದ್ದರೂ ಭಯೋತ್ಪಾದನೆಯು ಒಂದು ಹೊಸ ಬೆಳವಣಿಗೆಯೇನಲ್ಲ. ಆದರೆ ಮೊದಲಾಗಿ, “ಭಯೋತ್ಪಾದನೆ” ಎಂಬುದರ ಅರ್ಥವೇನು?
ಭಯೋತ್ಪಾದನೆಯು, “ಒಬ್ಬ ವ್ಯಕ್ತಿ ಇಲ್ಲವೆ ಸಂಘಟಿತ ಗುಂಪು, ಹೆಚ್ಚಾಗಿ ಅದರ ಸೈದ್ಧಾಂತಿಕ ಇಲ್ಲವೆ ರಾಜಕೀಯ ಕಾರಣಗಳಿಗಾಗಿ ಸಮಾಜಗಳನ್ನಾಗಲಿ ಸರಕಾರಗಳನ್ನಾಗಲಿ ಹೆದರಿಸುವ ಇಲ್ಲವೆ ಒತ್ತಾಯಿಸುವ ಉದ್ದೇಶದಿಂದ ಜನರ ಮೇಲೆ ಅಥವಾ ಆಸ್ತಿಪಾಸ್ತಿಯ ಮೇಲೆ ಕಾನೂನುವಿರುದ್ಧವಾಗಿ ಮಾಡುವ ಹಿಂಸಾಚಾರ ಯಾ ಬಲಾತ್ಕಾರದ ಪ್ರಯೋಗ ಅಥವಾ ಅದನ್ನು ಬಳಸುವ ಬೆದರಿಕೆಯನ್ನೊಡ್ಡುವುದು” ಆಗಿರುತ್ತದೆ ಎಂದು ಅರ್ಥನಿರೂಪಿಸಲಾಗಿದೆ. (ದಿ ಅಮೆರಿಕನ್ ಹೆರಿಟೆಜ್ ಡಿಕ್ಷನೆರಿ ಆಫ್ ದ ಇಂಗ್ಲಿಷ್ ಲ್ಯಾಂಗ್ವೇಜ್) ಜೆಸಿಕ ಸ್ಟರ್ನ್ ಎಂಬ ಲೇಖಕಿ ಹೇಳುವುದು: “ಭಯೋತ್ಪಾದನೆ ಎಂಬ ವಿಷಯವನ್ನು ಅಧ್ಯಯನಮಾಡುತ್ತಿರುವ ಒಬ್ಬ ವಿದ್ಯಾರ್ಥಿಗೆ ಅದರ ಬಗ್ಗೆ ಅನೇಕಾನೇಕ ಅರ್ಥನಿರೂಪಣೆಗಳು ಸಿಗಬಹುದು. . . . ಆದರೆ ಭಯೋತ್ಪಾದನೆಯನ್ನು ಬೇರೆ ವಿಧದ ಹಿಂಸಾಚಾರದಿಂದ ಭಿನ್ನಗೊಳಿಸುವ ಮುಖ್ಯ ಗುಣಲಕ್ಷಣಗಳು ಬರೀ ಎರಡೇ ಆಗಿವೆ.” ಅವು ಯಾವುವು? “ಮೊದಲನೆಯದು, ಭಯೋತ್ಪಾದನೆಯಲ್ಲಿ ಯಾರು ಯಾವುದೇ ರೀತಿಯಲ್ಲಿ ಒಳಗೂಡಿರುವುದಿಲ್ಲವೊ ಅಂಥವರನ್ನೇ ಗುರಿಪಡಿಸಲಾಗುತ್ತದೆ. . . . ಎರಡನೆಯದು, ಭಯೋತ್ಪಾದಕರು ಹಿಂಸಾಚಾರವನ್ನು ಉಪಯೋಗಿಸುವುದು ಬೆಚ್ಚಿಬೀಳಿಸುವಂಥ ರೀತಿಯ ಪರಿಣಾಮವನ್ನು ಬೀರಲಿಕ್ಕೋಸ್ಕರವೇ. ಅವರ ಉದ್ದೇಶ, ಅವರು ಹೆದರಿಸಲು ಬಯಸುವ ಜನರಲ್ಲಿ ಭಯವನ್ನು ಮೂಡಿಸುವುದೇ ಆಗಿದೆ. ಇದು ಅವರಿಗೆ, ಅವರು ನಡೆಸುವ ದಾಳಿಗಿಂತಲೂ ಹೆಚ್ಚು ಮಹತ್ತ್ವದ್ದಾಗಿದೆ. ಬೇಕುಬೇಕೆಂದು ಭೀತಿಯನ್ನು ಹುಟ್ಟಿಸುವ ಈ ಸಂಗತಿಯಿಂದಾಗಿಯೇ ಭಯೋತ್ಪಾದನೆಯು ಬೇರಾವುದೇ ಸಾಮಾನ್ಯ ಕೊಲೆ ಇಲ್ಲವೆ ದಾಳಿಯಿಂದ ಭಿನ್ನವಾಗಿದೆ.”
ಗತಕಾಲದಲ್ಲೇ ಬೇರುಬಿಟ್ಟಿರುವ ಹಿಂಸಾಚಾರ
ಪ್ರಥಮ ಶತಮಾನದ ಯೂದಾಯದಲ್ಲಿ ‘ಸೆಲಟ್ಸ್’ (ಹಠೋತ್ಸಾಹಿಗಳು) ಎಂದು ಕರೆಯಲಾಗುತ್ತಿದ್ದ ಒಂದು ಹಿಂಸಾತ್ಮಕ ಗುಂಪು, ರೋಮನ್ ಆಳ್ವಿಕೆಯಿಂದ ಯೆಹೂದ್ಯರನ್ನು ಸ್ವತಂತ್ರಗೊಳಿಸಲು ಪ್ರಯತ್ನಿಸುತ್ತಿತ್ತು. ಆ ಗುಂಪಿನ ಅತಿ ಕಟ್ಟಕ್ಕರೆಯ ಅನುಯಾಯಿಗಳು, ಸಿಕಾರೀ ಇಲ್ಲವೆ ಕತ್ತಿಧಾರಿಗಳು ಎಂದು ಕುಖ್ಯಾತರಾದರು. ಇವರು ತಮ್ಮ ಉಡುಪುಗಳೊಳಗೆ ಚಿಕ್ಕ ಕತ್ತಿಗಳನ್ನು ಬಚ್ಚಿಡುತ್ತಿದ್ದದರಿಂದಲೇ ಅವರಿಗೆ ಆ ಹೆಸರು ಬಂತು. ಇವರು, ಉತ್ಸವಗಳಿಗಾಗಿ ಯೆರೂಸಲೇಮಿನಲ್ಲಿ ಕೂಡಿಬರುತ್ತಿದ್ದ ಜನಸಮೂಹಗಳ ಮಧ್ಯೆ ಬೆರೆತು, ತಮ್ಮ ವೈರಿಗಳ ಕತ್ತನ್ನು ಸೀಳುವ ಮೂಲಕ ಇಲ್ಲವೆ ಬೆನ್ನಿನಲ್ಲಿ ಕತ್ತಿಯನ್ನು ಇರಿಯುವ ಮೂಲಕ ಅವರನ್ನು ಕೊಲ್ಲುತ್ತಿದ್ದರು.a
ಸಾ.ಶ. 66ರಲ್ಲಿ ಸೆಲಟರ ಒಂದು ಗುಂಪು ಮೃತ ಸಮುದ್ರದ ಬಳಿಯಲ್ಲಿದ್ದ ಮಸಾಡದ ಕೋಟೆಯನ್ನು ಸ್ವಾಧೀನಪಡಿಸಿಕೊಂಡಿತು. ಆ ಸೆಲಟರು, ಪರ್ವತತುದಿಯಲ್ಲಿದ್ದ ಆ ಕೋಟೆಯಲ್ಲಿನ ರೋಮನ್ ರಕ್ಷಕಸೈನ್ಯವನ್ನು ಸಂಹರಿಸಿ ಅದನ್ನು ತಮ್ಮ ಕಾರ್ಯಾಚರಣೆಗಳ ನೆಲೆಯಾಗಿ ಮಾಡಿಕೊಂಡರು. ಅನೇಕ ವರ್ಷಗಳ ತನಕ ಅವರು ಅಲ್ಲಿಂದ ರೋಮನ್ ಅಧಿಕಾರಿಗಳ ಮೇಲೆ ಆಕ್ರಮಣಗಳನ್ನು ನಡೆಸಿದರು ಮತ್ತು ಅವರನ್ನು ಪೀಡಿಸಿದರು. ಸಾ.ಶ. 73ರಲ್ಲಿ ಗವರ್ನರ್ ಫ್ಲೇವಿಯಸ್ ಸಿಲ್ವಾರವರ ನೇತೃತ್ವದಡಿ ರೋಮನರ ಹತ್ತನೆಯ ಸೇನಾದಳವು ಮಸಾಡವನ್ನು ಪುನಃ ವಶಪಡಿಸಿಕೊಂಡಿತು. ಆದರೆ ಅವರು ಸೆಲಟರನ್ನು ಜಯಿಸಲಿಕ್ಕಾಗಲಿಲ್ಲ. ಏಕೆಂದರೆ ಆ ಸಮಯದಲ್ಲಿದ್ದ ಒಬ್ಬ ಇತಿಹಾಸಗಾರನು ಹೇಳಿದಂತೆ, ಅಲ್ಲಿದ್ದ 960 ಜನರಲ್ಲಿ ಇಬ್ಬರು ಸ್ತ್ರೀಯರು ಮತ್ತು ಐದು ಮಂದಿ ಮಕ್ಕಳನ್ನು ಬಿಟ್ಟು ಉಳಿದವರೆಲ್ಲರೂ ರೋಮ್ಗೆ ಶರಣಾಗುವ ಬದಲಿಗೆ ಆತ್ಮಹತ್ಯೆ ಮಾಡಿಕೊಂಡರು.
ಆ ಸೆಲಟರ ಬಂಡಾಯವು, ನಾವು ಇಂದು ಯಾವುದನ್ನು ಭಯೋತ್ಪಾದನೆ ಎಂದು ಕರೆಯುತ್ತೇವೊ ಅದರ ಆರಂಭವಾಗಿತ್ತೆಂಬುದು ಕೆಲವರ ಅಭಿಪ್ರಾಯ. ಇದು ಸತ್ಯವಾಗಿರಲಿ ಇಲ್ಲದಿರಲಿ, ಅಂದಿನಿಂದ ಭಯೋತ್ಪಾದನೆಯು ಇತಿಹಾಸದ ಹಾದಿಯಲ್ಲಿ ಅಳಿಸಲಾಗದ ಗುರುತುಗಳನ್ನು ಬಿಟ್ಟುಹೋಗಿದೆ ಎಂಬುದಂತೂ ಸತ್ಯ.
ಕ್ರೈಸ್ತಪ್ರಪಂಚದಲ್ಲಿ ಭಯೋತ್ಪಾದನೆಯ ಬೇರುಗಳು
ಇಸವಿ 1095ರಿಂದ ಆರಂಭಿಸಿ ಮುಂದಿನ ಎರಡು ಶತಮಾನಗಳಲ್ಲಿ, ಕ್ರೂಸೇಡರ್ ಸೈನ್ಯಗಳು ಯುರೋಪ್ನಿಂದ ಮಧ್ಯ ಪೂರ್ವಕ್ಕೆ ಪದೇಪದೇ ಹೋಗಿ ಬರುತ್ತಾ ಇದ್ದವು. ಇವರಿಗೆ ವಿರುದ್ಧವಾಗಿ ಏಷ್ಯಾ ಮತ್ತು ಉತ್ತರ ಆಫ್ರಿಕದ ಮುಸಲ್ಮಾನರ ಪಡೆಗಳು ಹೋರಾಡುತ್ತಿದ್ದವು. ಈ ಎರಡೂ ಪಕ್ಷಗಳಿಗೆ ಯೆರೂಸಲೇಮಿನ ಮೇಲೆ ನಿಯಂತ್ರಣ ಬೇಕಾಗಿತ್ತು ಮತ್ತು ಅವು ಅದನ್ನು ಪಡೆಯಲು ಪ್ರಯತ್ನಿಸುತ್ತಿದ್ದವು. ಈ “ಪವಿತ್ರ ಯೋಧರು” ನಡೆಸಿದ ಅನೇಕ ಕದನಗಳಲ್ಲಿ ಪರಸ್ಪರರನ್ನು ಹತಿಸಿದರು. ಅಮಾಯಕ ಜನರ ಮೇಲೂ ಅವರು ತಮ್ಮ ಕತ್ತಿಗಳನ್ನೂ ಗಂಡುಗೊಡಲಿಗಳನ್ನೂ ಪ್ರಯೋಗಿಸಿದರು. ಕ್ರೂಸೇಡರರು ಸಾ.ಶ. 1099ರಲ್ಲಿ ಯೆರೂಸಲೇಮನ್ನು ಹೇಗೆ ಪ್ರವೇಶಿಸಿದರೆಂಬುದನ್ನು 12ನೇ ಶತಮಾನದ ಪಾದ್ರಿ ವಿಲ್ಯಮ್ ಆಫ್ ಟೈರ್ ಈ ರೀತಿಯಾಗಿ ವರ್ಣಿಸಿದನು:
“ಅವರೆಲ್ಲರೂ ತಮ್ಮ ಕತ್ತಿಬರ್ಜಿಗಳನ್ನೂ ಕೈಯಲ್ಲಿ ಹಿಡಿದುಕೊಂಡು ಒಟ್ಟಿಗೆ ಬೀದಿಗಳಲ್ಲಿ ಹೋದರು. ಅವರಿಗೆ ಎದುರಾಗುತ್ತಿದ್ದ ಎಲ್ಲರನ್ನೂ, ಸ್ತ್ರೀಪುರುಷರು, ಮಕ್ಕಳ ಸಹಿತ ಯಾರನ್ನೂ ಬಿಡದೆ ಎಲ್ಲರನ್ನೂ ಹತಿಸಿದರು. . . . ಅವರು ಬೀದಿಗಳಲ್ಲಿ ಎಷ್ಟೊಂದು ಜನರನ್ನು ಹತಿಸಿದರೆಂದರೆ ಶವಗಳ ದೊಡ್ಡ ದೊಡ್ಡ ರಾಶಿಗಳು ಬಿದ್ದಿದ್ದವು. ಒಬ್ಬನು ಮುಂದಕ್ಕೆ ಹೋಗಬೇಕಾದರೆ ಆ ಶವಗಳನ್ನು ಮೆಟ್ಟಿಕೊಂಡೇ ಹೋಗಬೇಕಾಗುತ್ತಿತ್ತು. . . . ಎಷ್ಟೊಂದು ರಕ್ತವು ಸುರಿಸಲ್ಪಟ್ಟಿತ್ತೆಂದರೆ ಎಲ್ಲ ಕಾಲುವೆಗಳಲ್ಲೂ ಚರಂಡಿಗಳಲ್ಲೂ ರಕ್ತದ ಕೋಡಿ ಹರಿಯುತ್ತಿತ್ತು, ಮತ್ತು ಆ ಪಟ್ಟಣದ ಎಲ್ಲ ಬೀದಿಗಳಲ್ಲಿ ಮೃತ ಪುರುಷರ ದೇಹಗಳು ಬಿದ್ದಿದ್ದವು.”b
ಮುಂದಿನ ಶತಮಾನಗಳಲ್ಲಿ ಭಯೋತ್ಪಾದಕರು ಸ್ಫೋಟಕಪದಾರ್ಥಗಳನ್ನೂ ಬೆಂಕಿಕಾರುವ ಶಸ್ತ್ರಗಳನ್ನೂ ಬಳಸಲಾರಂಭಿಸಿದರು ಮತ್ತು ಇದರ ಫಲಿತಾಂಶಗಳು ಭೀಕರವೂ ಪ್ರಾಣಾಂತಕವೂ ಆಗಿದ್ದವು.
ಕೋಟಿಗಟ್ಟಲೆ ಜನರ ಸಾವು
ಇಸವಿ 1914ರ ಜೂನ್ 28ನ್ನು ಇತಿಹಾಸಕಾರರು ಯೂರೋಪಿಯನ್ ಇತಿಹಾಸದ ತಿರುಗು ಬಿಂದು ಆಗಿ ಪರಿಗಣಿಸುತ್ತಾರೆ. ಕೆಲವರು ‘ಹೀರೊ’ ಎಂದು ಪರಿಗಣಿಸುವಂಥ ಒಬ್ಬ ಯುವಕನು, ಆಸ್ಟ್ರಿಯದ ಯುವರಾಜನಾಗಿದ್ದ ಫ್ರಾನ್ಸಿಸ್ ಫರ್ಡಿನೆಂಡ್ನನ್ನು ಗುಂಡಿಕ್ಕಿ ಕೊಂದುಹಾಕಿದನು. ಈ ಘಟನೆಯು ಮಾನವಕುಲವನ್ನು ಒಂದನೇ ಲೋಕ ಯುದ್ಧದೊಳಗೆ ಸೆಳೆಯಿತು. ಆ ‘ಮಹಾ ಯುದ್ಧವು’ ಕೊನೆಗೊಳ್ಳುವಷ್ಟರಲ್ಲಿ 2 ಕೋಟಿ ಜನರು ಅದರಲ್ಲಿ ಅಸುನೀಗಿದರು.
ಒಂದನೇ ಲೋಕ ಯುದ್ಧದ ಮುಂದಿನ ಭಾಗವು ಎರಡನೇ ಲೋಕ ಯುದ್ಧವಾಗಿತ್ತು. ಈ ಯುದ್ಧದ ಸಮಯದಲ್ಲಿದ್ದ ಸೆರೆಶಿಬಿರಗಳು, ಬಾಂಬ್ ದಾಳಿಗಳಲ್ಲಿ ನಾಗರಿಕರ ಹತ್ಯೆ ಮತ್ತು ಅಮಾಯಕ ಜನರ ಮೇಲಿನ ಪ್ರತೀಕಾರದ ಕೃತ್ಯಗಳಿಂದಾಗಿ ಅದು ಹಿಂದಿನ ಲೋಕ ಯುದ್ಧಕ್ಕಿಂತ ಭಿನ್ನವಾಗಿತ್ತು. ಯುದ್ಧವು ಕೊನೆಗೊಂಡ ಬಳಿಕವೂ, ಭಯೋತ್ಪಾದಕರಿಂದ ಹತ್ಯೆಗಳು ಮುಂದುವರಿದವು. 1970ರ ದಶಕದಲ್ಲಿ ಕಂಬೋಡಿಯದ ಯುದ್ಧರಂಗದಲ್ಲಿ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಜನರು ಕೊಲ್ಲಲ್ಪಟ್ಟರು. ರುಆಂಡ ದೇಶದ ಜನರು, 1990ನೇ ದಶಕದಲ್ಲಿ ನಡೆದ 8,00,000ಕ್ಕಿಂತಲೂ ಹೆಚ್ಚು ಜನರ ಹತ್ಯಾಕಾಂಡದಿಂದ ಈಗಲೂ ತತ್ತರಿಸುತ್ತಿದ್ದಾರೆ.
ಇಸವಿ 1914ರಿಂದ ಹಿಡಿದು ನಮ್ಮ ಕಾಲದ ವರೆಗೂ ಅನೇಕ ದೇಶಗಳಲ್ಲಿ ಮಾನವರು ಭಯೋತ್ಪಾದಕರ ಚಟುವಟಿಕೆಯಿಂದಾಗಿ ನರಳಿದ್ದಾರೆ. ಆದರೂ, ಇತಿಹಾಸದಿಂದ ಆಧುನಿಕ ಮಾನವನಿಗೆ ಕಲಿಯಲು ಯಾವುದೇ ಪಾಠಗಳಿಲ್ಲ ಎಂಬಂತೆ ಕೆಲ ಜನರು ವರ್ತಿಸುತ್ತಾರೆ. ಕ್ರಮವಾಗಿ ಭಯೋತ್ಪಾದಕರ ದಾಳಿಗಳಿಂದಾಗಿ ನೂರಾರು ಮಂದಿ ಕೊಲ್ಲಲ್ಪಡುತ್ತಾರೆ, ಸಾವಿರಾರು ಮಂದಿ ಅಂಗಹೀನರಾಗುತ್ತಾರೆ, ಮತ್ತು ಲಕ್ಷಾಂತರ ಮಂದಿಯಿಂದ ಮನಶ್ಶಾಂತಿ ಹಾಗೂ ಸುರಕ್ಷೆಯನ್ನು ಹೊಂದುವ ಅವರ ಹಕ್ಕನ್ನು ದೋಚಲಾಗುತ್ತದೆ. ಮಾರುಕಟ್ಟೆಗಳಲ್ಲಿ ಬಾಂಬುಗಳು ಸ್ಫೋಟಿಸುತ್ತವೆ, ಹಳ್ಳಿಗಳನ್ನು ಸುಟ್ಟುಹಾಕಿ ನೆಲಸಮಮಾಡಲಾಗುತ್ತದೆ, ಹೆಂಗಸರ ಮೇಲೆ ಅತ್ಯಾಚಾರವೆಸಗಲಾಗುತ್ತದೆ, ಮಕ್ಕಳನ್ನು ಬಂದಿಗಳಾಗಿಡಲಾಗುತ್ತದೆ, ಜನರು ಸಾವಿಗೀಡಾಗುತ್ತಿದ್ದಾರೆ. ಭಯೋತ್ಪಾದನೆಯ ವಿರುದ್ಧ ಕಾನೂನುಗಳಿದ್ದು, ವಿಶ್ವದಾದ್ಯಂತ ಖಂಡನೆಯ ಮಾತುಗಳು ಕೇಳಿಬರುತ್ತಿದ್ದರೂ ಈ ರೀತಿಯ ಕ್ರೂರವಾದ ನಿತ್ಯಕ್ರಮವು ನಿಂತುಹೋಗುತ್ತಿಲ್ಲ. ಹಾಗಾದರೆ, ಭಯೋತ್ಪಾದನೆಯು ಅಂತ್ಯಗೊಳ್ಳುವುದೆಂಬ ನಿರೀಕ್ಷೆ ಇದೆಯೊ? (g 6/06)
[ಪಾದಟಿಪ್ಪಣಿಗಳು]
a ಅಪೊಸ್ತಲರ ಕೃತ್ಯಗಳು 21:38ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಪೊಸ್ತಲ ಪೌಲನು 4,000 ಮಂದಿ ‘ಘಾತಕರ’ ಇಲ್ಲವೆ ಕತ್ತಿಧಾರಿಗಳ ನಾಯಕನೆಂದು ಒಬ್ಬ ರೋಮನ್ ಮಿಲಿಟರಿ ಸೇನಾಧಿಪತಿಯು ಅವನ ಮೇಲೆ ತಪ್ಪಾಗಿ ಆರೋಪ ಹೊರಿಸಿದನು.
b ಯೇಸು ತನ್ನ ಶಿಷ್ಯರಿಗೆ ‘ನಿಮ್ಮ ವೈರಿಗಳನ್ನು ಪ್ರೀತಿಸಿರಿ’ ಎಂದು ಹೇಳಿದನೇ ಹೊರತು ಅವರನ್ನು ದ್ವೇಷಿಸಿರಿ ಇಲ್ಲವೆ ಕೊಲ್ಲಿರಿ ಎಂದು ಹೇಳಲಿಲ್ಲ.—ಮತ್ತಾಯ 5:43-45.
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಇಸವಿ 1914ರ ಜೂನ್ 28ರಂದು ಲೋಕವು ಯುದ್ಧಕ್ಕೆ ಧುಮುಕಿತು
[ಪುಟ 5ರಲ್ಲಿರುವ ಚಿತ್ರ]
ಇಸ್ಟಾನ್ಬುಲ್ ನವೆಂಬರ್ 15, 2003
[ಪುಟ 5ರಲ್ಲಿರುವ ಚಿತ್ರ]
ಮಡ್ರಿಡ್ ಮಾರ್ಚ್ 11, 2004
[ಪುಟ 5ರಲ್ಲಿರುವ ಚಿತ್ರ]
ಲಂಡನ್ ಜುಲೈ 7, 2005
[ಪುಟ 5ರಲ್ಲಿರುವ ಚಿತ್ರ]
ನ್ಯೂ ಯಾರ್ಕ್ ಸೆಪ್ಟೆಂಬರ್ 11, 2001
[ಪುಟ 5ರಲ್ಲಿರುವ ಚಿತ್ರ ಕೃಪೆ]
ಎಡದಿಂದ ಬಲಕ್ಕೆ: AP Photo/Murad Sezer; AP Photo/ Paul White; Photo by Peter Macdiarmid/Getty Images
[ಪುಟ 6ರಲ್ಲಿರುವ ಚಿತ್ರ ಕೃಪೆ]
Culver Pictures ▸