“ನಾನು ಬೆಳೆದದ್ದು ನಾಸ್ತಿಕನಾಗಿ”
ಪ್ರಾಗ್ನಲ್ಲಿರುವ ಚಾರ್ಲ್ಸ್ ವಿಶ್ವವಿದ್ಯಾಲಯದ ಪ್ರೊಫೆಸರ್ ಫ್ರಾಂಟಿಶೆಕ್ ವೀಸ್ಕೊಚೀಲ್ ಎಂಬವರು ನರಶರೀರವಿಜ್ಞಾನದಲ್ಲಿ ಮಾಡಿದ ಸಂಶೋಧನೆಗೆ ಅಂತಾರಾಷ್ಟ್ರೀಯ ಖ್ಯಾತಿ ಪಡೆದವರು. ಹಿಂದೆ ನಾಸ್ತಿಕರಾಗಿದ್ದ ಇವರು, ದೇವರಿದ್ದಾನೆಂದು ಈಗ ದೃಢವಾಗಿ ನಂಬುತ್ತಾರೆ. ಅವರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿದ್ದೇಕೆಂದು ಎಚ್ಚರ! ಪತ್ರಿಕೆಯ ಈ ಸಂದರ್ಶನದಲ್ಲಿ ವಿವರಿಸುತ್ತಾರೆ.
ವಿಜ್ಞಾನ ಕ್ಷೇತ್ರದಲ್ಲಿ ಜೀವನವೃತ್ತಿಯನ್ನು ಆರಂಭಿಸುವ ಮುಂಚೆ ಧರ್ಮದ ಬಗ್ಗೆ ನಿಮ್ಮ ನೋಟವೇನಾಗಿತ್ತು?
ನಾನು ಬೆಳೆದದ್ದು ನಾಸ್ತಿಕನಾಗಿ. ಪಾದ್ರಿಗಳ ಬಗ್ಗೆ ನನ್ನ ತಂದೆ ಆಗಾಗ್ಗೆ ಅಣಕವಾಡುತ್ತಿದ್ದರು. ನಾನು ಶಾಲೆಗೆ ಹೋಗುತ್ತಿದ್ದಾಗ, ಜೀವವಿಕಾಸವೇ ಜೀವವೈವಿಧ್ಯತೆಗೆ ಕಾರಣ ಎಂಬ ವಾದವನ್ನು ನಂಬುತ್ತಿದ್ದೆ. 1963ರಲ್ಲಿ ನಾನು ಕಾಲೇಜಿನಿಂದ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪದವಿಪಡೆದೆ.
ವಿಜ್ಞಾನ ಕ್ಷೇತ್ರದಲ್ಲಿ ನಿಮ್ಮ ಜೀವನವೃತ್ತಿ ಬಗ್ಗೆ ಸ್ವಲ್ಪ ಹೇಳಿ.
ಡಾಕ್ಟರೇಟ್ ಪದವಿ ಪಡೆದ ಬಳಿಕ ನಾನು ಮಾಡಿದ ಅಧ್ಯಯನವು ನರತಂತು ಸಂಧಿಗಳ ರಾಸಾಯನಿಕ ಹಾಗೂ ವಿದ್ಯುತ್ ಗುಣಲಕ್ಷಣಗಳ ವಿಷಯವಾಗಿತ್ತು. ನರಕೋಶಗಳು, ಅವುಗಳ ಪೊರೆಯಲ್ಲಿರುವ ರೇಚಕದಂಥ ಗುಣಲಕ್ಷಣಗಳು, ಸ್ನಾಯು ಹಾಗೂ ನರಗಳು ಸೇರಿದಂತೆ ಇತರ ಅಂಗಾಂಶಗಳ ಕಸಿ ಬಗ್ಗೆ ಸಂಶೋಧಿಸಿದೆ. ಅಲ್ಲದೆ ಚಿಕಿತ್ಸೆಗೆಂದು ಕೊಡಲಾಗಿರುವ ಅಲರ್ಜಿಕಾರಕ ವಸ್ತುವಿಗೆ ಒಂದು ಜೀವಿ ನಕಾರಾತ್ಮಕವಾಗಿ ಪ್ರತಿಕ್ರಿಯಿಸದಂತೆ ಮಾಡುವ ವಿಧಾನಗಳ ಬಗ್ಗೆಯೂ ಅಧ್ಯಯನ ನಡೆಸಿದೆ. ಈ ಅಧ್ಯಯನಗಳ ಫಲಿತಾಂಶಗಳಲ್ಲಿ ಹೆಚ್ಚಿನವು ಲೇಖನಗಳಾಗಿ ಪ್ರಕಟವಾಗಿವೆ. ಅವುಗಳಲ್ಲಿ ಕೆಲವೊಂದನ್ನು ಪರಾಮರ್ಶೆ ಕೃತಿಗಳಾಗಿ ಬಳಸಲಾಗುತ್ತಿದೆ. ಸ್ವಲ್ಪ ಸಮಯಾನಂತರ ನಾನು ‘ಚೆಕ್ ಗಣರಾಜ್ಯದ ವಿದ್ವಾಂಸರ ಸಂಘ’ದ ಸದಸ್ಯನಾದೆ. ಈ ಸಂಘವು, ಸಮಕಾಲೀನ ವಿಜ್ಞಾನಿಗಳಿಂದ ಆರಿಸಲ್ಪಟ್ಟ ವಿಜ್ಞಾನಿಗಳ ಒಂದು ಗುಂಪು. 1989ರ ಡಿಸೆಂಬರ್ ತಿಂಗಳಲ್ಲಿ ನಡೆದ ‘ವೆಲ್ವೆಟ್ ಕ್ರಾಂತಿ’ಯ ಬಳಿಕ ನಾನು ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರನಾದೆ. ಆಮೇಲೆ ಪಾಶ್ಚಿಮಾತ್ಯ ದೇಶಗಳಿಗೆ ಪ್ರಯಾಣಿಸಿ ಅಲ್ಲಿ ಇತರ ವಿಜ್ಞಾನಿಗಳನ್ನು ಭೇಟಿಯಾಗಲು ನನಗೆ ಅವಕಾಶಸಿಕ್ಕಿತು. ಅವರಲ್ಲಿ ಕೆಲವರು ನೊಬೆಲ್ ಪ್ರಶಸ್ತಿ ವಿಜೇತರು.
ದೇವರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದುಂಟೊ?
ಒಂದು ರೀತಿಯಲ್ಲಿ ಹೌದು. ದೇವರಿದ್ದಾನೆಂದು ಅನೇಕ ಮಂದಿ ಸುಶಿಕ್ಷಿತರು, ನನ್ನ ಪ್ರೊಫೆಸರರಲ್ಲೂ ಕೆಲವರು ನಂಬುತ್ತಿದ್ದರು. ಆದರೆ ದೇಶವು ಕಮ್ಯೂನಿಸ್ಟ್ ಆಗಿದ್ದರಿಂದ ಅದನ್ನು ಹೊರಗೆ ತೋರಿಸುತ್ತಿರಲಿಲ್ಲ. ಅವರೆಲ್ಲ ಯಾಕೆ ದೇವರನ್ನು ನಂಬುತ್ತಾರೆಂದು ಕೆಲವೊಮ್ಮೆ ಯೋಚಿಸುತ್ತಿದ್ದೆ. ದೇವರುದಿಂಡರು ಎಲ್ಲ ಮಾಡಿದವನು ಮನುಷ್ಯನೇ ಎಂದು ನೆನಸುತ್ತಿದ್ದೆ. ಧರ್ಮದ ಹೆಸರಿನಲ್ಲಿ ನಡೆಸಲಾಗುತ್ತಿದ್ದ ದುಷ್ಕೃತ್ಯಗಳಿಂದಲೂ ನಾನು ರೊಚ್ಚಿಗೇಳುತ್ತಿದ್ದೆ.
ಜೀವವಿಕಾಸದ ಕುರಿತ ನಿಮ್ಮ ಅಭಿಪ್ರಾಯ ಬದಲಾದದ್ದು ಹೇಗೆ?
ಜೀವವಿಕಾಸದ ಕುರಿತು ನಾನು ಸಂದೇಹಿಸತೊಡಗಿದ್ದು ನರತಂತು ಸಂಧಿಗಳ (ಸೈನಾಪ್ಸ್) ಕುರಿತು ಅಧ್ಯಯನ ನಡೆಸುತ್ತಿದ್ದಾಗಲೇ. ನರಕೋಶಗಳ ನಡುವಣ ಈ ಜೋಡಣೆಗಳು ಸರಳವೆಂದು ತೋರಬಹುದು. ಆದರೆ ಅವುಗಳ ವಿಸ್ಮಯಕರ ಜಟಿಲತೆಯನ್ನು ನೋಡಿ ದಂಗಾಗಿ ಹೋದೆ. ‘ಈ ಸೈನಾಪ್ಸ್ಗಳು ಮತ್ತು ಅವುಗಳ ರಚನೆ ಹಾಗೂ ಕಾರ್ಯವಿಧಾನವನ್ನು ಸಾಧ್ಯಗೊಳಿಸುವ ವಂಶವಾಹಿ ಮಾಹಿತಿಯು ಆಕಸ್ಮಿಕವಾಗಿ ಉಂಟಾಗುವುದಾದರೂ ಹೇಗೆ?’ ಎಂದು ಯೋಚಿಸಿದೆ. ನನಗದು ಸರಿಯನಿಸಲಿಲ್ಲ.
ಬಳಿಕ 1970ನೇ ದಶಕದ ಆರಂಭದಲ್ಲಿ, ಒಬ್ಬ ಪ್ರಸಿದ್ಧ ವಿಜ್ಞಾನಿಯೂ ಪ್ರೊಫೆಸರನೂ ಆಗಿದ್ದ ರಷ್ಯನ್ ವ್ಯಕ್ತಿಯ ಉಪನ್ಯಾಸಕ್ಕೆ ಹಾಜರಾದೆ. ಯದ್ವಾತದ್ವಾ ನಡೆದ ಮಾರ್ಪಾಟುಗಳಿಂದ ಹಾಗೂ ನೈಸರ್ಗಿಕ ಆಯ್ಕೆಯಿಂದ ಜೀವಿಗಳು ಉಂಟಾಗಲು ಸಾಧ್ಯವಿಲ್ಲವೆಂದು ಅವರು ಹೇಳಿದರು. ಆಗ ಸಭಿಕರಲ್ಲೊಬ್ಬನು ‘ಹಾಗಾದರೆ ಅವು ಉಂಟಾದದ್ದು ಹೇಗೆ?’ ಎಂದು ಪ್ರಶ್ನಿಸಿದನು. ಆಗ ಪ್ರೊಫೆಸರರು ತಮ್ಮ ಜೇಬಿನಿಂದ ಒಂದು ಪುಟ್ಟ ರಷ್ಯನ್ ಬೈಬಲನ್ನು ತೆಗೆದು ಮೇಲೆತ್ತಿ ಹಿಡಿದು, “ಬೈಬಲನ್ನು ಓದಿ. ಅದರಲ್ಲೂ ವಿಶೇಷವಾಗಿ ಆದಿಕಾಂಡದಲ್ಲಿರುವ ಸೃಷ್ಟಿಯ ವೃತ್ತಾಂತವನ್ನು ಓದಿ” ಎಂದು ಹೇಳಿದರು.
ಉಪನ್ಯಾಸದ ನಂತರ ನಾನು ಆ ಪ್ರೊಫೆಸರರಿಗೆ, ಬೈಬಲು ಹೇಳುವ ವಿಷಯವನ್ನು ಅವರು ನಿಜವಾಗಿ ನಂಬುತ್ತಾರೊ ಎಂದು ಕೇಳಿದೆ. ಅವರು ಕೊಟ್ಟ ಉತ್ತರದ ಸಾರಾಂಶ ಹೀಗಿತ್ತು: “ಸಾಮಾನ್ಯ ಬ್ಯಾಕ್ಟೀರಿಯವು 20 ನಿಮಿಷಕ್ಕೊಮ್ಮೆ ವಿಭಜನೆಯಾಗಬಲ್ಲದು ಮತ್ತು ಅದರಲ್ಲಿ ನೂರಾರು ಬಗೆಯ ಪ್ರೋಟೀನುಗಳಿರುತ್ತವೆ. ಈ ಪ್ರೋಟೀನುಗಳಲ್ಲಿ ಪ್ರತಿಯೊಂದರಲ್ಲೂ ನೂರಾರು ಸರಪಳಿಗಳಂತೆ ಉದ್ದುದ್ದವಾಗಿ ಜೋಡಿಸಲಾದ 20 ವಿಧಗಳ ಅಮೀನೊ ಆಮ್ಲಗಳಿವೆ. ಭೂಮಿ ಮೇಲೆ ಜೀವ ಅಸ್ತಿತ್ವಕ್ಕೆ ಬಂದು ಮೂರು ಅಥವಾ ನಾಲ್ಕು ಬಿಲಿಯ ವರ್ಷಗಳಾಗಿವೆ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಉಪಯುಕ್ತವಾದ ಮಾರ್ಪಾಟುಗಳ ಮೂಲಕ ಬ್ಯಾಕ್ಟೀರಿಯ ವಿಕಾಸಗೊಳ್ಳಲಿಕ್ಕೇ ಅದಕ್ಕಿಂತ ಎಷ್ಟೋ ಹೆಚ್ಚು ವರ್ಷಗಳು ಬೇಕು.” ಆದ್ದರಿಂದಲೇ ಬೈಬಲಿನ ಆದಿಕಾಂಡ ಪುಸ್ತಕದ ವೃತ್ತಾಂತವು ಹೆಚ್ಚು ಅರ್ಥಭರಿತವೆಂದು ಆ ಪ್ರೊಫೆಸರರಿಗನಿಸಿತು.
ಪ್ರೊಫೆಸರರ ಮಾತುಗಳು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಿದವು?
ನನ್ನನ್ನು ಕಾಡುತ್ತಿದ್ದ ಸಂದೇಹಗಳ ಜೊತೆಗೆ ಪ್ರೊಫೆಸರರ ಆ ಮಾತುಗಳು, ಜೀವ ಹೇಗೆ ಅಸ್ತಿತ್ವಕ್ಕೆ ಬಂತೆಂಬ ವಿಷಯವನ್ನು ನಾನು ಧರ್ಮಶ್ರದ್ಧೆಯುಳ್ಳ ಸಹೋದ್ಯೋಗಿಗಳು ಹಾಗೂ ಸ್ನೇಹಿತರೊಂದಿಗೆ ಚರ್ಚಿಸುವಂತೆ ಮಾಡಿದವು. ಆದರೆ ಅವರ ಅಭಿಪ್ರಾಯಗಳಿಂದ ನನ್ನ ಮನಸ್ಸಿಗೆ ತೃಪ್ತಿಯಾಗಲಿಲ್ಲ. ಬಳಿಕ ಒಬ್ಬ ಔಷಧವಿಜ್ಞಾನಿಯೊಂದಿಗೆ ಮಾತಾಡಿದೆ. ಅವರು ಯೆಹೋವನ ಸಾಕ್ಷಿ ಆಗಿದ್ದರು. ಮೂರು ವರ್ಷಗಳ ವರೆಗೆ ಅವರು ನನಗೂ ನನ್ನ ಹೆಂಡತಿ ಎಮಾಳಿಗೂ ಬೈಬಲ್ ಕುರಿತು ವಿವರಿಸಿದರು. ನಮ್ಮನ್ನು ಬೆರಗುಗೊಳಿಸಿದ ಎರಡು ವಿಷಯಗಳಿದ್ದವು. ಮೊದಲನೆಯದ್ದು, ‘ಕ್ರೈಸ್ತಮತ’ ಹಾಗೂ ಬೈಬಲಿಗೆ ರಾತ್ರಿಹಗಲಿನಷ್ಟು ಅಂತರವಿದೆ. ಎರಡನೆಯದ್ದು, ಬೈಬಲು ವಿಜ್ಞಾನ ಪುಸ್ತಕವಲ್ಲದಿದ್ದರೂ ಅದು ನಿಜ ವಿಜ್ಞಾನದೊಂದಿಗೆ ಹೊಂದಿಕೆಯಲ್ಲಿದೆ.
ನಿಮ್ಮ ಬದಲಾದ ಅಭಿಪ್ರಾಯವು ನಿಮ್ಮ ವೈಜ್ಞಾನಿಕ ಸಂಶೋಧನೆಗೆ ಅಡ್ಡಿಯಾಗಿದೆಯೋ?
ಖಂಡಿತ ಇಲ್ಲ. ಒಬ್ಬ ಒಳ್ಳೇ ವಿಜ್ಞಾನಿಯ ವೈಯಕ್ತಿಕ ನಂಬಿಕೆಗಳೇನೇ ಇರಲಿ ಸಾಧ್ಯವಾದಷ್ಟು ಮಟ್ಟಿಗೆ ಅದು ಅವನ ಕೆಲಸವನ್ನು ಪ್ರಭಾವಿಸಬಾರದು. ಆದರೆ ನನ್ನ ನಂಬಿಕೆಯು ನನ್ನನ್ನು ಬದಲಾಯಿಸಿದೆ. ಉದಾಹರಣೆಗೆ, ನನ್ನಲ್ಲಿ ಈಗ ಅತಿಯಾದ ಆತ್ಮವಿಶ್ವಾಸವಿಲ್ಲ, ಸ್ಪರ್ಧಾತ್ಮಕ ಮನೋಭಾವವಿಲ್ಲ, ನನ್ನ ವೈಜ್ಞಾನಿಕ ಕೌಶಲಗಳ ಬಗ್ಗೆ ಗರ್ವವೂ ಇಲ್ಲ. ನನಗಿರುವ ಶಕ್ತಿಸಾಮರ್ಥ್ಯಗಳಿಗಾಗಿ ನಾನೀಗ ದೇವರಿಗೆ ಕೃತಜ್ಞನು. ಅಷ್ಟುಮಾತ್ರವಲ್ಲ ಸೃಷ್ಟಿಯಲ್ಲಿರುವ ವಿಸ್ಮಯಕಾರಿ ರಚನೆಗಳು ಆಕಸ್ಮಿಕವಾಗಿ ಬಂದವೆಂದು ತಪ್ಪಾಗಿ ಹೇಳುವ ಬದಲು ‘ದೇವರು ಇದನ್ನು ಮಾಡಿದ್ದಾದರೂ ಹೇಗೆ?’ ಎಂದು ನಾನೂ ಇತರ ಹಲವಾರು ವಿಜ್ಞಾನಿಗಳೂ ನಮ್ಮನ್ನೇ ಕೇಳಿಕೊಳ್ಳುತ್ತೇವೆ. (g10-E 11)
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ದೇವರು ಇದನ್ನು ಮಾಡಿದ್ದಾದರೂ ಹೇಗೆ?’ ಎಂದು ನಾನೂ ಇತರ ಹಲವಾರು ವಿಜ್ಞಾನಿಗಳೂ ನಮ್ಮನ್ನೇ ಕೇಳಿಕೊಳ್ಳುತ್ತೇವೆ