ದೇವರಲ್ಲಿ ನಂಬಿಕೆಯಿಲ್ಲದವರಿಗೆ ನೀವು ಹೇಗೆ ಸಾಕ್ಷಿ ನೀಡುವಿರಿ?
1 “ನನಗೆ ದೇವರಲ್ಲಿ ನಂಬಿಕೆಯಿಲ್ಲ” ಎಂದು ಪೋಲೆಂಡಿನ ಒಬ್ಬ ಅಧ್ಯಾಪಕಿಯು ಆಫ್ರಿಕದಲ್ಲಿದ್ದ ಒಬ್ಬ ಮಿಷನೆರಿಗೆ ಹೇಳಿದಳು. ಆದರೂ, ನಮ್ಮ ಸಹೋದರಿಯು ಆ ಹೆಂಗಸಿನೊಂದಿಗೆ ಒಂದು ಚರ್ಚೆಯನ್ನು ನಡೆಸಲು ಶಕ್ತಳಾದಳು ಮತ್ತು ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್) ಎಂಬ ಪುಸ್ತಕವನ್ನು ನೀಡಿದಳು. ಒಂದು ವಾರದ ನಂತರ ಮಿಷನೆರಿ ಸಹೋದರಿಯು ಹಿಂದಿರುಗಿ ಹೋದಾಗ, ಆ ಅಧ್ಯಾಪಕಿಯು “ಈಗ ನಾನು ದೇವರನ್ನು ನಂಬುತ್ತೇನೆ!” ಎಂದು ಹೇಳಿದಳು. ಆಕೆಯು ಸೃಷ್ಟಿ ಪುಸ್ತಕವನ್ನು ಸಂಪೂರ್ಣವಾಗಿ ಓದಿದ್ದಳು ಮತ್ತು ಈಗ ಅವಳು ಒಂದು ಬೈಬಲ್ ಅಭ್ಯಾಸಕ್ಕಾಗಿ ಕೇಳಿಕೊಂಡಳು. ತಮಗೆ ದೇವರಲ್ಲಿ ನಂಬಿಕೆಯಿಲ್ಲವೆಂದು ಹೇಳುವವರಿಗೆ ಸಾಕ್ಷಿನೀಡುವುದರಲ್ಲಿ ಯಶಸ್ವಿಯಾಗಲು ನೀವು ಏನು ಮಾಡಬಹುದು? ಪ್ರಥಮವಾಗಿ, ಜನರು ಏಕೆ ಈ ರೀತಿಯ ಪ್ರತಿಪಾದನೆಯನ್ನು ಮಾಡುತ್ತಾರೆಂಬುದಕ್ಕೆ ಹಲವಾರು ಕಾರಣಗಳನ್ನು ಪರಿಗಣಿಸಿರಿ.
2 ದೇವರಲ್ಲಿ ನಂಬಿಕೆಯಿಲ್ಲದಿರಲು ಕಾರಣಗಳು: ದೇವರಲ್ಲಿ ನಂಬಿಕೆಯಿಲ್ಲವೆಂದು ಹೇಳುವವರೆಲ್ಲರೂ ಹಾಗೆ ಬೆಳೆಸಲ್ಪಟ್ಟಿರಲಿಲ್ಲ. ಅವರಲ್ಲಿ ಅನೇಕರು ಯಾವುದಾದರೊಂದು ಧರ್ಮದ ಪ್ರಭಾವಕ್ಕೆ ಒಳಗಾಗಿದ್ದರು ಮತ್ತು ಒಂದು ಸಮಯದಲ್ಲಿ ದೇವರಲ್ಲಿ ನಂಬಿಕೆಯಿಟ್ಟಿದ್ದರು. ಆದರೆ, ಗಂಭೀರವಾದ ಆರೋಗ್ಯ ಸಮಸ್ಯೆಗಳು ಇಲ್ಲವೇ ಕುಟುಂಬ ಸಮಸ್ಯೆಗಳು ಅಥವಾ ಅವರಿಗಾಗಿರುವ ಕೆಲವು ಅನ್ಯಾಯಗಳು ಅವರ ನಂಬಿಕೆಯನ್ನು ಬಲಹೀನಗೊಳಿಸಿರುತ್ತವೆ. ಇನ್ನು ಕೆಲವರಿಗೆ, ಕಾಲೇಜುಗಳಲ್ಲಿ ಕಲಿಸಲ್ಪಡುವ ಕೆಲವು ಕೋರ್ಸುಗಳು, ದೇವರ ಕುರಿತು ಅವರಿಗಿದ್ದ ಕಲ್ಪನೆಯ ಮೇಲೆ ನಕಾರಾತ್ಮಕ ಪ್ರಭಾವವನ್ನು ಬೀರಿರುತ್ತವೆ. ದೇವರಲ್ಲಿ ನಂಬಿಕೆಯಿಲ್ಲದವರು ಕೊನೆಯಲ್ಲಿ ದೇವರಾದ ಯೆಹೋವನಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿಕೊಂಡು, ಆತನ ಸಾಕ್ಷಿಗಳಾಗಿ ಪರಿಣಮಿಸಿದವರ ಮುಂದಿನ ಉದಾಹರಣೆಗಳನ್ನು ಗಮನಿಸಿ.
3 ಪ್ಯಾರಿಸ್ ನಗರದ ಒಬ್ಬ ಮಹಿಳೆಯು, ಮೂಳೆ ರೋಗದ ದೌರ್ಬಲ್ಯದೊಂದಿಗೆ ಜನಿಸಿದ್ದಳು. ಒಬ್ಬ ಕ್ಯಾಥೊಲಿಕಳಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದರೂ, ತನಗೆ ದೇವರಲ್ಲಿ ನಂಬಿಕೆಯಿಲ್ಲವೆಂದು ಅವಳು ಹೇಳಿಕೊಳ್ಳುತ್ತಿದ್ದಳು. ದೇವರು ತನ್ನನ್ನು ಏಕೆ ಇಂಥ ದೈಹಿಕ ಅಸಾಮರ್ಥ್ಯದೊಂದಿಗೆ ಹುಟ್ಟಿಸಬೇಕಾಗಿತ್ತು ಎಂದು ಅವಳು ಕ್ರೈಸ್ತ ಸಂನ್ಯಾಸಿನಿಯರನ್ನು ಕೇಳಿದಾಗ, ಅವರ ಉತ್ತರವು “ಏಕೆಂದರೆ ಆತನು ನಿನ್ನನ್ನು ಪ್ರೀತಿಸುತ್ತಾನೆ” ಎಂಬುದಾಗಿತ್ತು. ಆ ಅಸಂಬದ್ಧ ಅಭಿಪ್ರಾಯವನ್ನು ಅಂಗೀಕರಿಸಲು ಅವಳು ನಿರಾಕರಿಸಿದಳು. ಇದರೊಂದಿಗೆ ಫಿನ್ಲೆಂಡಿನ ಒಬ್ಬ ಯೌವನಸ್ಥನ ಉದಾಹರಣೆಯನ್ನು ಪರಿಗಣಿಸಿ. ಅವನಿಗೆ ಗುಣಪಡಿಸಲಾಗದಂತಹ ಸ್ನಾಯು ರೋಗವಿದೆಯೆಂದು ಕಂಡುಹಿಡಿಯಲ್ಪಟ್ಟಾಗ, ಅವನು ಗಾಲಿಕುರ್ಚಿಯನ್ನೇ ಅವಲಂಬಿಸಿ ಜೀವನ ನಡೆಸಬೇಕಾಯಿತು. ರೋಗಿಗಳನ್ನು ಗುಣಪಡಿಸುತ್ತೇನೆಂದು ಹೇಳಿಕೊಳ್ಳುತ್ತಿದ್ದ ಒಬ್ಬ ಪೆಂಟೆಕಾಸ್ಟಲ್ ಪಾದ್ರಿಯ ಬಳಿ ಅವನ ತಾಯಿಯು ಅವನನ್ನು ಕರೆದೊಯ್ದಳು. ಆದರೆ, ಅಲ್ಲಿ ಯಾವುದೇ ಚಮತ್ಕಾರದ ಗುಣಪಡಿಸುವಿಕೆಯು ಆಗಲಿಲ್ಲ. ಇದರಿಂದಾಗಿ ಆ ಯೌವನಸ್ಥನು ದೇವರಲ್ಲಿದ್ದ ಆಸಕ್ತಿಯನ್ನು ಕಳೆದುಕೊಂಡು, ಒಬ್ಬ ನಾಸ್ತಿಕನಾದನು.
4 ಹೊಂಡ್ಯುರಸ್ನ ಒಬ್ಬ ವ್ಯಕ್ತಿಯು ಕ್ಯಾಥೊಲಿಕನಾಗಿ ಬೆಳೆಸಲ್ಪಟ್ಟಿದ್ದರೂ, ಸಮಾಜವಾದಿ ತತ್ವಜ್ಞಾನ ಮತ್ತು ನಾಸ್ತಿಕತೆಯ ಕುರಿತು ಕಲಿತಿದ್ದನು. ಮಾನವಕುಲವು ವಿಕಾಸದ ಉತ್ಪನ್ನವಾಗಿದೆ ಎಂಬ ವಿಶ್ವವಿದ್ಯಾನಿಲಯದ ಬೋಧನೆಯಿಂದ ಮನವೊಪ್ಪಿಸಲ್ಪಟ್ಟವನಾದ ಅವನು ದೇವರಲ್ಲಿನ ನಂಬಿಕೆಯನ್ನೇ ತೊರೆದುಬಿಟ್ಟನು. ತದ್ರೀತಿಯಲ್ಲಿ, ಅಮೆರಿಕಾದ ಓರ್ವ ಸ್ತ್ರೀಯು ಮೆತೊಡಿಸ್ಟಳಾಗಿ ಬೆಳೆಸಲ್ಪಟ್ಟಿದ್ದಳು. ಕಾಲೇಜಿನಲ್ಲಿ ಮನೋವಿಜ್ಞಾನದ ಪಠ್ಯಕ್ರಮವನ್ನು ಆರಿಸಿಕೊಂಡಳು. ಇದರಿಂದ ಅವಳ ನಂಬಿಕೆಯು ಹೇಗೆ ಬಾಧಿಸಲ್ಪಟ್ಟಿತು? “ಮೂರು ತಿಂಗಳೊಳಗೆ ಅಂದರೆ ಕೋರ್ಸ್ ಮುಗಿಯುವುದರೊಳಗಾಗಿ ಅವರು ಧರ್ಮದಲ್ಲಿದ್ದ ನನ್ನ ನಂಬಿಕೆಯನ್ನು ನುಚ್ಚುನೂರುಮಾಡಿಬಿಟ್ಟರು” ಎಂದು ಅವಳು ಹೇಳಿದಳು.
5 ಪ್ರಾಮಾಣಿಕ ವ್ಯಕ್ತಿಗಳ ಹೃದಯವನ್ನು ತಲುಪುವುದು: ದೇವರಲ್ಲಿ ನಂಬಿಕೆಯಿಲ್ಲವೆಂದು ಹೇಳುವ ಅನೇಕ ವ್ಯಕ್ತಿಗಳು ಅನಾರೋಗ್ಯ, ಕುಟುಂಬ ವೈಮನಸ್ಯ, ಅನ್ಯಾಯ ಇತ್ಯಾದಿಗಳಂತಹ ಸಮಸ್ಯೆಗಳಿಗೆ ಪರಿಹಾರವಿದೆಯೇ ಎಂಬುದನ್ನು ತಿಳಿದುಕೊಳ್ಳಲು ಬಯಸುವರು. ‘ಕೆಟ್ಟತನವು ಏಕಿದೆ?’ ‘ಒಳ್ಳೇ ಜನರಿಗೆ ಯಾವಾಗಲೂ ಏಕೆ ಅನ್ಯಾಯವಾಗುತ್ತದೆ?’ ಮತ್ತು ‘ಜೀವನದ ಅರ್ಥವೇನು?’ ಎಂಬ ಪ್ರಶ್ನೆಗಳಿಗೆ ಅವರು ಉತ್ತರಗಳನ್ನು ಕಂಡುಕೊಳ್ಳಲು ನಿಜವಾಗಿಯೂ ಆಸಕ್ತರಾಗಿದ್ದಾರೆ.
6 ಸ್ವಿಟ್ಸರ್ಲೆಂಡಿನಲ್ಲಿ ವಾಸಿಸುತ್ತಿರುವ ಒಬ್ಬ ಪತಿಪತ್ನಿಯು ದೇವರಲ್ಲಿ ನಂಬಿಕೆಯಿಲ್ಲದವರಾಗಿ ಬೆಳೆಸಲ್ಪಟ್ಟಿದ್ದರು. ಅವರು ಪ್ರಥಮ ಬಾರಿ ಸತ್ಯದ ಕುರಿತು ಕೇಳಿಸಿಕೊಂಡಾಗ ಅವರ ಪ್ರತಿಕ್ರಿಯೆಯು ನಕಾರಾತ್ಮಕವಾಗಿತ್ತು. ಆದರೆ ಅವರಿಗೆ ಗಂಭೀರವಾದ ಕುಟುಂಬ ಸಮಸ್ಯೆಗಳಿದ್ದವು ಮತ್ತು ಅವರು ವಿವಾಹ ವಿಚ್ಛೇದದ ಕುರಿತು ಪರ್ಯಾಲೋಚಿಸುತ್ತಿದ್ದರು. ಸಾಕ್ಷಿಯು ಅವರನ್ನು ಪುನಃ ಭೇಟಿಯಾದಾಗ, ಆ ದಂಪತಿಗಳು ತಮ್ಮ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದೆಂಬುದನ್ನು ಬೈಬಲಿನಿಂದ ತೋರಿಸಿದಳು. ಶಾಸ್ತ್ರಗಳಲ್ಲಿ ಅಡಕವಾಗಿದ್ದ ಪ್ರಾಯೋಗಿಕ ಸಲಹೆಗಳನ್ನು ಕಂಡು ಆ ದಂಪತಿಗಳು ಬೆರಗಾದರು ಮತ್ತು ಅವರು ಬೈಬಲ್ ಅಭ್ಯಾಸಕ್ಕೆ ಒಪ್ಪಿಕೊಂಡರು. ಅವರ ವಿವಾಹ ಬಂಧವು ಬಲಗೊಳಿಸಲ್ಪಟ್ಟಿತು ಮತ್ತು ಅವರು ಆತ್ಮಿಕವಾಗಿ ಪ್ರಗತಿಮಾಡಿ, ದೀಕ್ಷಾಸ್ನಾನವನ್ನು ಪಡೆದುಕೊಂಡರು.
7 ದೇವರಲ್ಲಿ ನಂಬಿಕೆಯಿಲ್ಲದವನಿಗೆ ನೀವು ಏನು ಹೇಳಬಹುದು? ನನಗೆ ದೇವರಲ್ಲಿ ನಂಬಿಕೆಯಿಲ್ಲ ಎಂದು ಯಾರಾದರೂ ನಿಮಗೆ ಹೇಳುವಲ್ಲಿ, ಅವನು ಹಾಗೆ ಹೇಳಲು ಕಾರಣವೇನಿರಬಹುದೆಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಅವನು ಪಡೆದುಕೊಂಡಂತಹ ವಿದ್ಯಾಭ್ಯಾಸದಿಂದಲೋ, ಅವನು ಅನುಭವಿಸಿರುವ ಕಷ್ಟಕಾರ್ಪಣ್ಯಗಳಿಂದಲೋ ಅಥವಾ ಧರ್ಮದಲ್ಲಿ ಅವನು ನೋಡಿರುವ ಕಪಟತನ ಮತ್ತು ಸುಳ್ಳು ಬೋಧನೆಗಳ ಕಾರಣದಿಂದ ಅವನು ಹಾಗಾಗಿರಬಹುದೋ? ನೀವು ಅವನನ್ನು ಹೀಗೆ ಕೇಳಬಹುದು: “ದೇವರಿಲ್ಲವೆಂದು ನಿಮಗೆ ಮೊದಲಿನಿಂದಲೂ ಅನಿಸಿದೆಯೇ?” ಅಥವಾ “ದೇವರಿಲ್ಲವೆಂದು ಹೇಳಲು ಕಾರಣವೇನು?” ಅವನು ಕೊಡುವ ಉತ್ತರವು, ನೀವು ಏನು ಹೇಳಬೇಕೆಂಬುದನ್ನು ನಿರ್ಧರಿಸಲು ಸಹಾಯಮಾಡುವುದು. ಒಬ್ಬ ದೇವರಿದ್ದಾನೆಂಬ ಬಲವಾದ ಪುರಾವೆಯನ್ನು ಕೊಡುವ ಅಗತ್ಯವಿರುವಲ್ಲೆಲ್ಲ, ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನು ಇದ್ದಾನೋ? (ಇಂಗ್ಲಿಷ್) ಎಂಬ ಪುಸ್ತಕವು ತಾನೇ ತಕ್ಕ ಪುಸ್ತಕವಾಗಿರುವುದು.
8 ದೇವರಲ್ಲಿ ನಂಬಿಕೆಯಿಲ್ಲದ ವ್ಯಕ್ತಿಗೆ ಹೀಗೆ ಕೇಳುವ ಮೂಲಕ ನೀವು ಸಂಭಾಷಣೆಯನ್ನು ಮುಂದುವರಿಸಬಹುದು:
◼“‘ದೇವರೊಬ್ಬನಿರುವುದಾದರೆ ಲೋಕದಲ್ಲಿ ಇಷ್ಟೊಂದು ಕಷ್ಟ ಮತ್ತು ಅನ್ಯಾಯ ಏಕೆ ನಡೆಯುತ್ತಿದೆ’ ಎಂದು ನೀವು ಎಂದಾದರೂ ಯೋಚಿಸಿದ್ದೀರೋ? [ಉತ್ತರಿಸಲು ಅನುಮತಿಸಿ.] ಇದರ ಕುರಿತು ಬೈಬಲ್ ಏನು ಹೇಳುತ್ತದೆಂದು ನಾನು ನಿಮಗೆ ತೋರಿಸಲೇ?” ಯೆರೆಮೀಯ 10:23ನ್ನು ಓದಿ. ಅದನ್ನು ಓದಿದ ನಂತರ ಆ ವಚನದ ಕುರಿತು ಅವನ ಅನಿಸಿಕೆ ಏನೆಂದು ಕೇಳಿ. ಅನಂತರ ಯುದ್ಧರಹಿತ ಲೋಕವು ಎಂದಾದರೂ ಇರುವುದೋ? (ಇಂಗ್ಲಿಷ್) ಎಂಬ ಬ್ರೋಷರಿನ 16 ಮತ್ತು 17ನೇ ಪುಟಗಳನ್ನು ತೋರಿಸಬಹುದು ಅಥವಾ ಸೃಷ್ಟಿಕರ್ತ ಎಂಬ ಪುಸ್ತಕದ 10ನೇ ಅಧ್ಯಾಯವನ್ನು ನೀವು ಉಪಯೋಗಿಸಬಹುದು. ಪುಸ್ತಕವನ್ನು ತೆಗೆದುಕೊಂಡು ಓದುವಂತೆ ಅವನನ್ನು ವಿನಯದಿಂದ ಕೇಳಿರಿ.—ಹೆಚ್ಚಿನ ಸಲಹೆಗಳಿಗಾಗಿ, ರೀಸನಿಂಗ್ ಪುಸ್ತಕದ ಪುಟ 150-1ನ್ನು ನೋಡಿ.
9 ದೇವರಲ್ಲಿ ನಂಬಿಕೆಯಿಲ್ಲದವರೆಲ್ಲರೂ ಸತ್ಯವನ್ನು ಸ್ವೀಕರಿಸಲಿಕ್ಕಿಲ್ಲವೆಂಬುದು ಒಪ್ಪತಕ್ಕ ವಿಷಯವೇ. ಆದರೆ, ಬೇರೊಂದು ದೃಷ್ಟಿಕೋನವನ್ನು ಪರಿಗಣಿಸಲು ಅನೇಕರು ಸಿದ್ಧಮನಸ್ಸುಳ್ಳವರಾಗಿದ್ದಾರೆ. ಅವರು ಸತ್ಯವನ್ನು ಗ್ರಹಿಸುವಂತೆ ಸಹಾಯಮಾಡಲು ತರ್ಕವನ್ನು ಉಪಯೋಗಿಸಿ ಮನವೊಪ್ಪಿಸಿರಿ, ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರ ವಾಕ್ಯದ ಬಲವನ್ನು ಪ್ರಯೋಗಿಸಿ.—ಅ. ಕೃ. 28:23, 24; ಇಬ್ರಿ. 4:12.