ಶಾಂತಭಾವದ ಮಂದಚರ್ಮಿಯನ್ನು ಉಳಿಸುವುದು
“ಮುದ್ದಾಗಿರುವ ಆ ಮರಿಗಳನ್ನು ನೋಡಿ! ಅವೆಷ್ಟು ಆಕರ್ಷಕ! ಯಾರು, ನಮ್ಮ ಕಡೆ ಬರುತ್ತಿರುವ ಆ ಲಂಕನೆಂಬ ಹೆಸರಿನವನಿಗೆ ಪ್ರಾಯವು ಕೇವಲ ಏಳೇ ತಿಂಗಳೊ? ಮತ್ತು ಅಲ್ಲಿ ಆ ಲಜ್ಜಾಶೀಲಳಾಗಿ ನಿಂತಿರುವ ಕಾಂಚನಳಿಗೆ ಎಂಟು ತಿಂಗಳು ವಯಸ್ಸೊ? ಮತ್ತು ಮರಿ ಕೂದಲು ದೇಹವಿಡೀ ನೆಟ್ಟಗಾಗಿರುವ, ಕಾಡಿನಿಂದ ಧಾವಿಸಿ ಬರುತ್ತಿರುವ ಇವುಗಳೆಲ್ಲ ಯಾವ ಉದ್ದೇಶದಿಂದ ಹಾಗೆ ಮಾಡುತ್ತಿವೆ? ಓಹೋ, ಆಹಾರ ಕೊಡುವ ಸಮಯವಾದುದರಿಂದ ಅವು ಹಾಗೆ ಮಾಡುವುದು ಆಶ್ಚರ್ಯವಲ್ಲ! ದಿವಸಕ್ಕೆ ಐದು ಬಾರಿ ಮತ್ತು ಪ್ರತಿ ಸಲ ಪೂರ್ತಿ ಒಂದೊಂದು ಲೀಟರಿನ ಏಳು ಸೀಸೆ ಹಾಲು ಅವುಗಳಿಗೆ ದೊರೆಯುತ್ತದೆಯೆ? ಹಾಗಾದರೆ ಅದು ಒಟ್ಟಿಗೆ 35 ಲೀಟರ್ ಹಾಲಾಯಿತು! ಅವುಗಳಲ್ಲಿ ಪ್ರತಿಯೊಂದು ಕೇವಲ ಕೆಲವೇ ತಿಂಗಳು ಪ್ರಾಯದವುಗಳಾದರೂ ಸುಮಾರು 90 ಕಿಲೊಗ್ರಾಮ್ ಭಾರವಿರುವುದರಲ್ಲಿ ಆಶ್ಚರ್ಯವಿಲ್ಲ!”
ನಾವು ಶ್ರೀ ಲಂಕದ ಪ್ರಧಾನ ನಗರವಾದ ಕೊಲೊಂಬೋದಿಂದ ಸುಮಾರು 85 ಕಿಲೊಮೀಟರ್ ದೂರದಲ್ಲಿರುವ ಪಿನವೇಲ ಅನಾಥ ಗಜಾಲಯದಲ್ಲಿದ್ದೇವೆ. ಕಾಡಿನಲ್ಲಿ ತ್ಯಜಿಸಲ್ಪಟ್ಟಿರುವ ಯಾ ಗಾಯಗೊಂಡಿರುವ ಆನೆ ಮರಿಗಳು ಕಂಡುಹಿಡಿಯಲ್ಪಟ್ಟಾಗ, ಅವುಗಳನ್ನು ಈ ಅನಾಥಾಲಯಕ್ಕೆ ತಂದು ಇಲ್ಲಿ ಅವನ್ನು ಪಕ್ವಾವಸ್ಥೆಗೆ ಬೆಳೆಸಲಾಗುತ್ತದೆ. ನಾವು ಭೇಟಿ ಕೊಟ್ಟಾಗ ಅಲ್ಲಿ ಸುಮಾರು 15 ಮರಿಗಳಿದ್ದುವು. ಸಾಮಾನ್ಯವಾಗಿ ಅವುಗಳನ್ನು ದೊಡ್ಡ ಆನೆಗಳೊಂದಿಗೆ ಬೆರಸಿ ವಿಶಾಲವಾದ ಕಾಡು ಪ್ರದೇಶದಲ್ಲಿ ಬಿಡಲಾಗುತ್ತದೆ. ಆದರೆ ಉಣ್ಣಿಸುವ ಸಮಯದಲ್ಲಿ ಮರಿಗಳನ್ನು ಅವುಗಳ ಹಾಲಿನ ಭತ್ಯಕ್ಕಾಗಿ ಕರೆಯಲಾಗುತ್ತದೆ. ಈ ಅನಾಥ ಆನೆಗಳು ಅಲ್ಲಿಗೆ ಬರಲು ಮತ್ತು ತುಂಬಿದ ಹಾಲಿನ ಸೀಸೆಗಳೊಂದಿಗೆ ಕಾದು ನಿಂತಿರುವ ಮೂರೋ ನಾಲ್ಕೋ ಅನುಚರರನ್ನು ಕಂಡುಹಿಡಿಯಲು ಹೆಚ್ಚು ಸಮಯ ತಕ್ಕೊಳ್ಳುವುದಿಲ್ಲ.
ಅವು ತಮ್ಮ ಸೊಂಡಿಲುಗಳನ್ನು ತಲೆಗಳ ಮೇಲೆ ಎತ್ತಿ ಸುತ್ತಿ ಹಿಡಿದು, ಬಾಯಿಗಳನ್ನು ಅಗಲವಾಗಿ ತೆರೆದು, ಅನುಚರನು ಸೀಸೆಯನ್ನು ಬಗ್ಗಿಸಿ ಹಾಲನ್ನು ಸುರಿಯುವಾಗ ಸಾಧ್ಯವಿರುವಷ್ಟು ಬೇಗನೆ ನುಂಗಿ ಬಿಡುತ್ತವೆ. ಈ ಸೀಸೆಗಳಿಗೆ ಚೂಚುಕಗಳ ಅವಶ್ಯವಿಲ್ಲ! ಹಾಲು ನುಗ್ಗಿ ಹರಿದು ಕೆಲವು ಬಾರಿ ಬಾಯಿಯ ಇಬ್ಬದಿಗಳಿಂದ ಹೊರಗೆ ಹರಿಯುತ್ತದೆ. ಇತರರಿಗಿಂತ ದೊಡ್ಡ ಗಾತ್ರದ ಒಬ್ಬನನ್ನು, ಚಿಕ್ಕ ಗಾತ್ರದವರಿಗೆ ಕುಡಿಯುವ ಸಂದರ್ಭ ಕೊಡಲಿಕ್ಕಾಗಿ ಸರಪಣಿಯಿಂದ ಕಟ್ಟಲಾಗಿತ್ತು. ಈ “ಪಕ್ಷಪಾತ”ದಿಂದ ತೀರ ಉದ್ರೇಕಗೊಂಡಿರುವ ಇವನು ಒಂದು ಬದಿಯಿಂದ ಇನ್ನೊಂದಕ್ಕೆ ಓಲಾಡುತ್ತಾ, ತನ್ನ ಸೊಂಡಿಲನ್ನು ಮೇಲೆತ್ತಿ ವಾತಾವರಣವನ್ನು ಆಕ್ಷೇಪಣೆಯ ಚೀರಾಟಗಳಿಂದ ತುಂಬಿಸಿದನು. ಈ ಮರಿಗಳ ಹೊಟ್ಟೆತುಂಬಿದಾಗ, ಅವು ನಿಮ್ಮ ಸುತ್ತಲೂ ಗುಂಪಾಗಿ ನಿಂತು, ನಿಮ್ಮ ಗಮನವನ್ನು ಸೆಳೆಯಲು ನಿಮ್ಮ ಮೇಲೆ ಒರಗುವುದಲ್ಲದೆ, ನಿಮ್ಮ ಕಾಲಿನ ಸುತ್ತ ಸೊಂಡಿಲನ್ನು ಸುತ್ತುವುದೂ ಉಂಟು.
ಆನೆಗಳ ಸ್ನಾನದ ತೊಟ್ಟಿ
ದಿನಾಂತ್ಯ ಸ್ನಾನದ ಸಮಯ. ದೊಡ್ಡ ಚಿಕ್ಕ ಆನೆಗಳನ್ನೆಲ್ಲ ಅರ್ಧ ಮೈಲು ಕೆಳಗಿರುವ ಮಹಾ ಆಯ ನದೀತೀರಕ್ಕೆ ಗುಂಪಾಗಿ ಕಳುಹಿಸಲಾಗುತ್ತದೆ. ಈ ನದಿಯ ಆಳ ಕಡಮೆಯಾದರೂ ಅಗಲ ಜಾಸ್ತಿಯಾಗಿದ್ದು ದೊಡ್ಡ ಸಮತಟ್ಟಾದ ಬಂಡೆಗಳು ನೀರಿನಿಂದ ಮೇಲೆದ್ದಿವೆ. ಮೂವರು ಯಾ ನಾಲ್ವರು ಸ್ತ್ರೀಯರು, ಬಟೆಯ್ಟಿಂದ ಕೊಳೆಯನ್ನು ಸಡಿಲಿಸಲಿಕ್ಕಾಗಿ ಅದನ್ನು ಬಂಡೆಗೆ ಹೊಡೆದು ಬಟ್ಟೆ ಒಗೆಯುತ್ತಾ, ಬಳಿಕ ಅವನ್ನು ಒಣಗಲಿಕ್ಕಾಗಿ ಬಂಡೆಯ ಮೇಲೆ ಹಾಸುತ್ತಿದ್ದಾರೆ. ದೂರದಿಂದ ನೋಡುವಾಗ, ಸುಂದರ ವರ್ಣದ ರಜಾಯಿಗಳನ್ನು ಬಂಡೆಯ ಮೇಲೆ ಹಾಸಿದಂತೆ ತೋರುತ್ತದೆ. ಮಹಾ ಆಯದ ಆಚೆದಡದ ಅಂಚಿನಲ್ಲಿ ದಟ್ಟವಾದ ಹುಲುಸಾದ ಕಾಡುಗಳು ಕಂಡುಬರುತ್ತವೆ. ಇದು ಆನೆಗಳಿಗೆ ಆಕರ್ಷಕವಾದ ಮತ್ತು ವಿಸ್ತಾರವಾದ ಸ್ನಾನದ ತೊಟ್ಟಿಯನ್ನಾಗಿ ಮಾಡುತ್ತದೆ.
ಅವು ಸಮಯ ಕಳೆಯದೆ, ಮರಿಗಳು ಮುಂದಿನಿಂದ ನಡೆದು ನೀರಿನೊಳಗಿಳಿಯುತ್ತವೆ. ಆದರೆ ನೀರಿನಲ್ಲಿ ಮಲಗಿಕೊಳ್ಳುವ ವಿಷಯದಲ್ಲಿ ಎಲ್ಲ ಆನೆಗಳೂ ಹಿಂಜರಿಯುತ್ತವೆ. ಆಗ ಅನುಚರರು ಅವುಗಳ ಮೇಲೆ ನೀರು ಚೆಲ್ಲಿ, ಉದ್ದದ ಕೋಲುಗಳಿಂದ ಅವನ್ನು ತಿವಿಯುತ್ತಾರೆ. ಹೀಗೆ ಪ್ರೋತ್ಸಾಹಿಸಲ್ಪಟ್ಟ ಆನೆಗಳು ಒಂದು ಶೀತಲ ನೆನೆತಕ್ಕಾಗಿ ತಮ್ಮನ್ನು ನೀರಿನೊಳಗೆ ಇಳಿಸಿಕೊಳ್ಳುತ್ತವೆ. ಕೆಲವು ದೊಡ್ಡ ಆನೆಗಳು ತಮ್ಮ ತಲೆಗಳನ್ನು ನೀರೊಳಗೆ ಮುಳುಗಿಸಿದರೂ ಸೊಂಡಿಲುಗಳ ತುದಿಗಳನ್ನು ಉಸಿರಾಟಕ್ಕಾಗಿ ಸ್ನಾರ್ಕೆಲ್ ಉಸಿರಾಟದ ಉಪಕರಣದಂತೆ ನೀರಿನ ಮೇಲಿರಿಸುತ್ತವೆ. ಸೂರ್ಯ ತಾಪ ಬಹಳವಾಗಿರುವುದರಿಂದ ನೀರು ಅವುಗಳ ದಪ್ಪ ಚರ್ಮಕ್ಕೆ ಶಮನವನ್ನು ಒದಗಿಸಬೇಕು—ಪ್ಯಾಕಿಡರ್ಮ್ ಎಂಬ ಅವುಗಳ ಇಂಗ್ಲಿಷ್ ಹೆಸರಿನ ಅರ್ಥ “ಮಂದಚರ್ಮಿ” ಎಂದಾಗಿದೆ.
ರಾಷ್ಟ್ರೀಯ ಮೃಗಾಲಯದ ಡೈರೆಕ್ಟರ್, ಶ್ರೀ ಬ್ರ್ಯಾಡ್ಲಿ ಫೆರ್ನಾಂಡೊ ಎಂಬವರಿಗೆ ಈ ಅನಾಥಾಲಯದ ಮೇಲ್ವಿಚಾರಣೆಯಿದೆ. ಈ ಮೃಗಾಲಯದ ಉದ್ದೇಶವನ್ನು ಅವರು ಎಚ್ಚರ!ಕ್ಕೆ ತೋರಿಸಿಕೊಡುತ್ತಾರೆ: “ಆರಂಭದಲ್ಲಿ, ಈ ಆನೆಮರಿಗಳು ಬದುಕಿ ಉಳಿಯಬೇಕೆಂಬುದು ನಮ್ಮ ಅಪೇಕ್ಷೆ. ಆ ಬಳಿಕ ದೀರ್ಘಾವಧಿಯಲ್ಲಿ, ನಾವು ಒಂದು ತಳಿ ಬೆಳೆಸುವ ಗುಂಪನ್ನು ಬೆಳೆಸಬೇಕೆಂದಿದ್ದೇವೆ.”
ಆದರೂ ಈ ಶಾಂತಭಾವದ ಏಷಿಯನ್ ಮಂದಚರ್ಮಿಗೆ ಯಾವ ವೈರಿಯಿದ್ದಾನು? ತನ್ನ ಆಫ್ರಿಕನ್ ಸೋದರನಿಗಿಂತ ಗಣನೀಯವಾಗಿ ಚಿಕ್ಕವನಾದರೂ ಶ್ರೀ ಲಂಕದ ವಯಸ್ಕ ಆನೆ, ನಾಲ್ಕು ಟನ್ನು ಯಾ ಹೆಚ್ಚು ಭಾರವುಳ್ಳದ್ದಾಗಿದ್ದು ಹೆಗಲ ತನಕ ಮೂರು ಮೀಟರ್ ಎತ್ತರವುಳ್ಳದ್ದಾಗಿದೆ. ಇಂಥ ಭಾರೀ ಗಾತ್ರವೇ ಹೆಚ್ಚಿನ ಕೊಲ್ಲುವ ಪ್ರಾಣಿಗಳನ್ನು ನಿರುತ್ಸಾಹಗೊಳಿಸಲು ಸಾಕು. ಶ್ರೀ ಲಂಕದ ಚಿರತೆಗಳು, ಇತರ ದೇಶಗಳ ಸಿಂಹ ಮತ್ತು ಹುಲಿಗಳಂತೆ, ಬೆಳೆದ ಆನೆಗಳಿಂದ ತೀರಾ ದೂರವಿರುತ್ತವೆ ನಿಶ್ಚಯ.
ಹಾಗಾದರೆ, ವೈರಿಯಾಗ ಸಾಧ್ಯವಿರುವವನು ಯಾರು? ಮನುಷ್ಯನೇ. ಆನೆಗೆ ಜಮೀನು ಬೇಕು; ಮನುಷ್ಯನಿಗೂ ಜಮೀನು ಬೇಕು; ಮನುಷ್ಯನು ಜಮೀನನ್ನು ಪಡೆಯುತ್ತಾನೆ. ಮತ್ತು ಶ್ರೀ ಲಂಕದ ಆನೆ ಅಳಿದು ಹೋಗಲು ಸಿದ್ಧವಾಗಿ ನಿಂತಿದೆ. ಕಡಮೆ ಪಕ್ಷ, ಏಷಿಯವೀಕ್ ಆದರೂ ಇದನ್ನು ಹಾಗೆ ವೀಕ್ಷಿಸುತ್ತದೆ:
“ಶ್ರೀ ಲಂಕದ ಪುರಾತನದ ರಾಜರು ವನ್ಯಜೀವಿ ಸಂರಕ್ಷಣೆ ತಮ್ಮ ಪವಿತ್ರ ಕರ್ತವ್ಯವೆಂದೆಣಿಸಿದರು. ತಾವು ಕಟ್ಟಿದ ಸವಿಸ್ತಾರವಾದ ನೀರಾವರಿ ಜಲಾಶಯಗಳ ಸುತ್ತಲೂ ಆಶ್ರಯ ಸ್ಥಾನಗಳನ್ನು ನಿರ್ಮಿಸಲು ಅವರು ರಾಜಶಾಸನ—ಪ್ರಾಯಶಃ ಲೋಕದ ಪ್ರಥಮ ಸಂರಕ್ಷಣಾ ನಿಯಮಗಳು—ಗಳನ್ನು ಹೊರಡಿಸಿದರು. ಬೇಟೆಗೆ ಅನುಮತಿಯಿತ್ತು, ಮತ್ತು ಅದನ್ನು ಇತರ ವಲಯಗಳಲ್ಲಿ ನಡೆಸಿದರೂ ಆನೆಯು ಆಹಾರ ಯಾ ಕ್ರೀಡೆಗಾಗಿ ಎಂದಿಗೂ ಕೊಲ್ಲಲ್ಪಡುತ್ತಿರಲಿಲ್ಲ. ಮತ್ತು ಈ ಪ್ರಾಣಿಯನ್ನು ಹಿಡಿದು, ರಾಜವೈಭವದ ಮತ್ತು ಧಾರ್ಮಿಕ ಮೆರೆವಣಿಗೆಗಾಗಿ ತರಬೇತಿ ಪಡೆಯಲು ಯಾ ಕೆಲಸದ ಪಶುವಾಗಿ ಉಪಯೋಗಿಸಲ್ಪಡಲು ಅನುಮತಿಸುವ ಅಧಿಕಾರ ಕೇವಲ ರಾಜನಿಗಿತ್ತು. ವಸಾಹತು ಆಳಿಕೆಯ ಸಮಯದಲ್ಲಿ ಇದೆಲ್ಲ ಮಾರ್ಪಟ್ಟಿತು.”
ನಾಗರಿಕತೆ ಉಪದ್ರವ ತರುತ್ತದೆ
ಹಿಂದಿನ ಸಮಯಗಳಲ್ಲಿ ಆನೆಯನ್ನು ಕ್ರೀಡೆಗಾಗಿ ಎಂದಿಗೂ ಕೊಲಲ್ಲಾಗುತ್ತಿದ್ದಿಲ್ಲ, ಆದರೆ ಪಾಶ್ಚಾತ್ಯ ನಾಗರಿಕತೆ—ಮತ್ತು ಅದರೊಂದಿಗೆ ಷಿಕಾರಿ—ಬಂದಾಗ, ಸಂಗತಿ ಮಾರ್ಪಟ್ಟಿತು. ಆನೆ ಷಿಕಾರಿಯ ವಿಷಯದಲ್ಲೇನು? ಜೆ. ಎಮರ್ಸನ್ ಟೆನೆಂಟ್ ಬರೆದ ಸ್ಕೆಚೆಸ್ ಆಫ್ ದ ನ್ಯಾಚುರಲ್ ಹಿಸ್ಟರಿ ಆಫ್ ಸಿಲೋನ್ ಎಂಬ ಪುಸ್ತಕ ಗಮನಿಸುವುದು: “ಮೇಜರ್ ರಾಜರ್ಸ್ ಎಂಬ ಒಬ್ಬ ಅಧಿಕಾರಿ, 1,400ಕ್ಕೂ ಹೆಚ್ಚು [ಆನೆಗಳನ್ನು] ಕೊಂದನು, ಕ್ಯಾಪ್ಟನ್ ಗಾಲ್ವೆ ಆ ಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚನ್ನು ಕೊಂದನು; ರೋಡ್ಸ್ ಕಮಿಷನರ್ ಆಗಿದ್ದ ಮೇಜರ್ ಸ್ಕಿನ್ನರ್ ಸುಮಾರು ಅಷ್ಟನ್ನೇ ಕೊಂದನು; ಮತ್ತು ಕಡಮೆ ಹೆಬ್ಬಯಕೆಯ ಉತ್ಕಾಂಕ್ಷಿಗಳು, ಈ ಮೊತ್ತವನ್ನು ಸಮೀಪಿಸುವ ವಿಷಯದಲ್ಲಿ ದೂರದಲ್ಲಿದ್ದಾರೆ.”
ವಸಾಹತು ಸರಕಾರ ಆನೆಗಳನ್ನು ಕೊಲ್ಲಲು—ಅವು ಉಪದ್ರವಕಾರಿಗಳು ಎಂದು ವೀಕ್ಷಿಸಲ್ಪಡುತ್ತಿದ್ದವು—ಪ್ರತಿಯೊಂದಕ್ಕೆ ಕೆಲವು ಷಿಲಿಂಗ್ಗಳನ್ನು ನೀಡಿತು. ಕೆಲವೇ ವರ್ಷಗಳಲ್ಲಿ ಈ ಇನಾಮಿಗಾಗಿ 5,500 ಕೇಳಿಕೆಗಳು ಬಂದವೆಂದು ಟೆನೆಂಟ್ ಕೂಡಿಸಿ ಹೇಳುತ್ತಾರೆ. ಟೆನೆಂಟ್ ಮುಕ್ತಾಯಗೊಳಿಸುವುದು: “ಸಿಲೋನ್ [ಈಗ ಶ್ರೀ ಲಂಕ] ನಲ್ಲಿ ಷಿಕಾರಿಗಳಿಂದ ನಡೆದ ಎಡೆಬಿಡದ ಈ ಆನೆ ಸಂಹಾರವು, ನಾಶದ ಮಾನಸಿಕ ಪ್ರವೃತ್ತಿಗೆ ಅವರ ಅಧೀನತೆಯಿಂದ ಮಾತ್ರವೆಂದು ತೋರಿಬರುತ್ತದೆ. ಏಕೆಂದರೆ ಹೆಣವನ್ನು ಯಾವ ಸದುದ್ದೇಶಕ್ಕೂ ಬಳಸದೆ, ಅದು ಕೊಳೆತು, ಕಾಡಿನ ಗಾಳಿಯನ್ನು ಮಲಿನಗೊಳಿಸುವರೆ ಬಿಡಲಾಗುತ್ತಿತ್ತು.” ಶ್ರೀ ಲಂಕದಲ್ಲಿ ದಂತವು ಮುಖ್ಯ ವಿಷಯವಾಗಿರಲಿಲ್ಲ, ಏಕೆಂದರೆ “ಸಿಲೋನಿನಲ್ಲಿ ನೂರರಲ್ಲಿ ಒಂದು ಆನೆಯಲ್ಲಿಯೂ ದಾಡೆಗಳಿಲ್ಲ, ಮತ್ತು ದಾಡೆಗಳಿರುವ ಕೆಲವೇ ಆನೆಗಳು ಗಂಡು ಆನೆಗಳು ಮಾತ್ರ.”
ವಸಾಹತು ಸಮಯಗಳಲ್ಲಿ ಮತ್ತು ಅಂದಿನಿಂದ ಆನೆಗಳ ಅವಸ್ಥೆ ಹೇಗೆ ಹೀನವಾಗಿದೆಯೆಂಬ ವೃತ್ತಾಂತವನ್ನು ಏಷಿಯವೀಕ್ ಮುಂದುವರಿಸುತ್ತದೆ: “ಅಂದಿನಿಂದ ಹಿಡಿದು ರಾಜಶಾಸನದಿಂದ ಸಂರಕ್ಷಿಸಲ್ಪಟ್ಟಿರದ ಅವುಗಳ ಕಾಡು ಆಶ್ರಯಸ್ಥಾನವನ್ನು ಚಹಾ ತೋಟಗಳಿಗಾಗಿ ಕಡಿಯಲಾಯಿತು. ಇಸವಿ 1800ರಲ್ಲಿ ಈ ದ್ವೀಪದಲ್ಲಿ ಪ್ರಾಯಶಃ 50,000 ಆನೆಗಳಿದ್ದವು. ಇಸವಿ 1900ರಲ್ಲಿ 12,000 ಉಳಿದಿದ್ದವು. ಇಂದು, ಕಟ್ಟುನಿಟ್ಟಿನ ಸಂರಕ್ಷಣಾ ನಿಯಮಗಳಿದ್ದು ಈಗ 50 ವರ್ಷಗಳಾಗಿರುವುದಾದರೂ, ಸಂಖ್ಯೆ 3,000ಕ್ಕೂ ಕೆಳಗಿದೆ.” ಈ ಸಂಹಾರದಲ್ಲಿ ದಂತವು ದೊಡ್ಡ ಸಂಗತಿಯೆಂಬುದನ್ನೂ ಏಷಿಯವೀಕ್ ತೊರೆದರೂ ದಾಡೆಗಳಿರುವ ಆನೆಗಳ ಪ್ರಮಾಣವನ್ನು 100 ರಲ್ಲಿ 1ರ ಬದಲಿಗೆ 20 ರಲ್ಲಿ 1ಕ್ಕೆ ಹಾಕುತ್ತದೆ. ಬಳಿಕ ಅದು ಶ್ರೀ ಲಂಕದ ಆನೆಗಳ ಆಪತಿಗ್ತೆ ನಿಜ ಕಾರಣವನ್ನು ಉದಾಹರಿಸುತ್ತದೆ: “ನಿಜ ಅಪಾಯವು ಜಮೀನಿಗಾಗಿ ಮನುಷ್ಯನ ನಿರ್ದಯೆಯ ಅನ್ವೇಷಣವೇ. ಶ್ರೀ ಲಂಕದ ಆನೆಗಳ ನೈಸರ್ಗಿಕ ವಾಸಸ್ಥಳದ ಅಂಚನ್ನು ಕೃಷಿಸ್ಥಳವು ಆಕ್ರಮಿಸಿದಂತೆ, ಅವು ಅಳಿವಿನ ಎದುರಾಗಿ ನಿಲ್ಲುತ್ತವೆ.”
ಯಾಲ ನ್ಯಾಷನಲ್ ಪಾರ್ಕ್
ಶ್ರೀ ಲಂಕದ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣ ಸಮಾಜದ ಅಧ್ಯಕ್ಷ, ಡಾ. ರಂಜೆನ್ ಫೆರ್ನಾಂಡೊ, ಎಚ್ಚರ!ಕ್ಕೆ ಹೇಳಿದ್ದು: “ಅಧಿಕಾಂಶವಾಗಿ ನಮ್ಮ ಸಮಾಜದ ಯತ್ನದ ಕಾರಣ, ಪ್ರಥಮ ವನ್ಯಜೀವಿ ಸಂರಕ್ಷಣಾ ಕ್ಷೇತ್ರವು ಬೇಟೆಗಾವಲಿನ ಪ್ರದೇಶವಾಗಿ 1898ರಲ್ಲಿ ಯಾಲದಲ್ಲಿ ಸ್ಥಾಪಿಸಲ್ಪಟ್ಟಿತು. ಯಾಲ, 1938ರಲ್ಲಿ ನಮ್ಮ ಮೊದಲನೆಯ ನ್ಯಾಷನಲ್ ಪಾರ್ಕ್ ಆಗಿ ಪರಿಣಮಿಸಿತು ಮತ್ತು ಇತರ ಪಾರ್ಕ್ಗಳು ಕೂಡಿಸಲ್ಪಡುತ್ತಾ ಹೋದವು. ಈ ಪಾರ್ಕ್ಗಳು ರಾಷ್ಟ್ರೀಯ ನಿಕ್ಷೇಪಗಳೆಂದು ನಾವೆಣಿಸುತ್ತೇವೆ, ಮತ್ತು ಇವು ನಮ್ಮ ಎಲ್ಲ ಅಮೂಲ್ಯ ವನ್ಯಜೀವಿಗಳಿಗೆ ಸಂರಕ್ಷಣೆಯಾಗಿ ಮುಂದುವರಿಯಬೇಕೆಂದು ನಮ್ಮ ಅಪೇಕ್ಷೆ.”
ನಾವು ಯಾಲ ನ್ಯಾಷನಲ್ ಪಾರ್ಕ್ಗೆ ಸಂಚಾರ ಕೈಕೊಳ್ಳುವ ತಖ್ತೆ ಮಾಡಿದ್ದೆವು, ಮತ್ತು ಫೆರ್ನಾಂಡೊ ಅವರ ಈ ಸಂಬಂಧದ ಮಾತು, ನಮ್ಮ ಆಸಕ್ತಿಯನ್ನು ಹೆಚ್ಚಿಸಿತು. ನಾವು ಪಿನವೇಲ ಗಜ ಅನಾಥಾಲಯದ ಅನುಚರರಿಗೆ, ಅವರು ನಮಗೆ ತೋರಿಸಿದ ದಯೆ, ಉಪಚಾರಗಳಿಗಾಗಿ ಉಪಕಾರ ಹೇಳಿ, ಮಹಾ ಆಯದಲ್ಲಿ ಇನ್ನೂ ಸ್ನಾನದಲ್ಲಿ ಆನಂದಿಸುತ್ತಿರುವ ಅನಾಥರಿಗೂ ವಯಸ್ಕರಿಗೂ ಕೈಯಾಡಿಸುತ್ತಾ ಬೀಳ್ಕೊಟ್ಟು (ಅವು ಗಮನಿಸಿದವೂ ಇಲ್ಲವೋ ಎಂಬುದು ನನಗೆ ನಿಶ್ಚಯವಿಲ್ಲ), ಯಾಲ ನ್ಯಾಷನಲ್ ಪಾರ್ಕಿಗೆ ಹೊರಟೆವು.
ನಾವು ಅಲ್ಲಿ, ಸಾಗರ ತೀರದಲ್ಲಿದ್ದ ಒಂದು ಬಂಗೆಯ್ಲಲ್ಲಿ ಮೂರು ರಾತ್ರಿ ಕಳೆದೆವು. ಒಬ್ಬ ಗೈಡ್ ನಮ್ಮನ್ನು ವಾಹನದಲ್ಲಿ—ಕೆಳಗಿಳಿಯಲು ಅನುಮತಿಯಿಲ್ಲ—ಪ್ರಾಣಿಗಳನ್ನು ನೋಡಲು ತಿರುಗಾಡಿಸಿದನು. ನಾವು ಜಿಂಕೆ, ಕಾಡು ಹಂದಿಗಳು, ಅನೇಕ ದೊಡ್ಡ ಉಡಗಳು, ಅನೇಕ ಸುಂದರ ಪಕ್ಷಿಗಳನ್ನು ನೋಡಿದೆವು. ಒಂದು ಗಂಡು ನವಿಲು ತನ್ನ ಅಲಂಕಾರಯುತ ಬಾಲವನ್ನು ಹರಡಿಸಿ ಪ್ರಣಯ ನರ್ತನ ಮಾಡಿತು. ಗೀಜಗ ಹಕ್ಕಿ ಗೂಡುಗಳು ಮರದಿಂದ ತೂಗಾಡುತ್ತಿದ್ದವು, ಮತ್ತು ತಮ್ಮ ಭವ್ಯ ಸೌಂದರ್ಯದಲ್ಲಿ ಪೆಯಿಂಟೆಡ್ ಸ್ಟಾರ್ಕ್ ಕೊಕ್ಕರೆಗಳು ಮನಮುಟ್ಟುವಂತಿದ್ದವು. ಚಿರತೆಗಳು ಅಲ್ಲಿದ್ದರೂ ಅವುಗಳನ್ನು ನೋಡದ ಕಾರಣ ನಿರಾಶೆ ಪಟ್ಟೆವು. ಆದರೂ, ನಮ್ಮ ಹಳೆಯ ಮಿತ್ರರಾದ ಏಷಿಯನ್ ಆನೆಗಳ ಅನೇಕ ಗುಂಪುಗಳನ್ನು ನೋಡಿದೆವು. ತಮ್ಮ ರಕ್ಷಿತ ತೋಟಪ್ರದೇಶದಲ್ಲಿ ಅವು ಶಾಂತಭಾವದವುಗಳೂ ತೃಪ್ತವೂ ಆಗಿ ಕಂಡುಬಂದವು.
ಆನೆಗೆ ತುಂಬಾ ಸ್ಥಳವೇನೋ ಬೇಕು. ಮತ್ತು ಮಾನವ ಜನಸಂಖ್ಯೆಯ ಸ್ಫೋಟನ ಕಾರಣ ವ್ಯವಸಾಯದ ಜಮೀನು ಹೆಚ್ಚು ವಿರಳವಾಗಿದ್ದು ಅದಕ್ಕೆ ಹೆಚ್ಚು ಗಿರಾಕಿಯಿದೆ. ಆನೆಯ ಬದುಕಿ ಉಳಿಯುವಿಕೆಗೆ ಸರಕಾರದ ಬದ್ಧತೆ ಎಷ್ಟು ಸಮಯದ ವರೆಗೆ ದೃಢವಾಗಿರುವುದೆಂಬ ವಿಷಯದಲ್ಲಿ ವನರಕ್ಷಕರು ಹೆಚ್ಚಿದ ಚಿಂತೆಯನ್ನು ವ್ಯಕ್ತಪಡಿಸುತ್ತಾರೆ. ಇದರ ಪರಿಣಾಮವನ್ನು ಕಾಲವೇ ಪ್ರಕಟಪಡಿಸುವುದು.—ಎಚ್ಚರ!ದ ಸಿಬ್ಬಂದಿ ಲೇಖಕರೊಬ್ಬರಿಂದ. (g92 11/22)
[ಪುಟ 17 ರಲ್ಲಿರುವ ಚಿತ್ರಗಳು]
ಸ್ನಾನದ ಸಮಯದಲ್ಲಿ ಆನೆಗಳು ನೀರಿನಲ್ಲಿ ಮಲಗುವಂತೆ ಪುಸಲಾಯಿಸಲ್ಪಡುತ್ತವೆ, ಅಲ್ಲಿ ಅವು ತಮ್ಮ ಸೊಂಡಿಲುಗಳನ್ನು ಸ್ನಾರ್ಕೆಲ್ ಉಪಕರಣಗಳಂತೆ ಬಳಸುತ್ತವೆ
[ಪುಟ 18,19 ರಲ್ಲಿರುವ ಚಿತ್ರಗಳು]
ಕಾಡಿನಲ್ಲಿ ಅನಾಥವಾದ ಆನೆಮರಿಗಳು ಪಿನವೇಲದಲ್ಲಿ ಪ್ರೌಢತೆಗೆ ಪೋಷಿಸಲ್ಪಡುತ್ತವೆ