ಮುಖಪುಟ ಲೇಖನ | ಒಳ್ಳೆಯ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ
2 ಒಳ್ಳೇ ವಾತಾವರಣ ಇರಲಿ
ಆರೋಗ್ಯಕರ ಆಹಾರ ತಿನ್ನೋಣ ಅಂತ ನಿರ್ಧಾರ ಮಾಡಿರುತ್ತೀರಾ, ಆದರೆ ನಿಮ್ಮ ಕಣ್ಮುಂದೆನೇ ಐಸ್‌ಕ್ರೀಮ್ ಇದ್ದಾಗ ಆ ನಿರ್ಧಾರವೆಲ್ಲಾ ನೀರುಪಾಲಾಗುತ್ತದೆ.
ಸಿಗರೇಟ್ ಸೇದುವುದನ್ನ ಬಿಡಬೇಕು ಅಂತಿರುತ್ತೀರಾ, ಇದು ಗೊತ್ತಿರೋ ನಿಮ್ಮ ಸ್ನೇಹಿತನೇ ಬಂದು ಸೇದು ಅಂತ ಸಿಗರೇಟ್ ಕೊಡ್ತಾನೆ.
ಜಾಗಿಂಗ್‌ಗೆ ಹೋಗೋಣ ಅಂತ ಅಂದುಕೊಂಡಿರುತ್ತೀರಾ, ಆದರೆ ಶೂ ಹುಡುಕಿ ಹಾಕಿಕೊಳ್ಳೋಕೂ ಸುಸ್ತು ಅನಿಸ್ತಿದೆ!
ಈ ಎಲ್ಲಾ ಸನ್ನಿವೇಶದಲ್ಲಿ ಒಂದು ಸಾಮಾನ್ಯವಾಗಿತ್ತು ಅದೇನಂತ ಗಮನಿಸಿದ್ರಾ? ನಾವು ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಂಡು ಕೆಟ್ಟ ಅಭ್ಯಾಸಗಳನ್ನು ಬಿಡುವ ನಮ್ಮ ಪ್ರಯತ್ನ ಎಷ್ಟರ ಮಟ್ಟಿಗೆ ಸಫಲ ಆಗುತ್ತೆ ಅನ್ನುವುದು ನಮ್ಮ ಸುತ್ತ-ಮುತ್ತಲಿನ ಪರಿಸ್ಥಿತಿ ಮತ್ತು ಜನರ ಮೇಲೆ ಹೊಂದಿಕೊಂಡಿರುತ್ತದೆ.
ಬೈಬಲ್ ತತ್ವ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 22:3.
ಮೊದಲೇ ಯೋಚನೆ ಮಾಡಿ ಅಂತ ಬೈಬಲ್ ಸಲಹೆ ಕೊಡುತ್ತೆ. ಈ ರೀತಿ ಯೋಚನೆ ಮಾಡಿದರೆ ನಾವು ಮಾಡಿರೋ ನಿರ್ಧಾರಗಳನ್ನು ಮುರಿಯುವಂಥ ಪರಿಸ್ಥಿತಿ ಅಥವಾ ಸನ್ನಿವೇಶದಿಂದ ದೂರ ಇರುತ್ತೇವೆ. (2 ತಿಮೊಥೆಯ 2:22) ಹೀಗೆ ನಾವು ಬುದ್ಧಿವಂತರಾಗಿ ನಡೆದುಕೊಳ್ಳಬಹುದು.
ಕೆಟ್ಟ ಅಭ್ಯಾಸಗಳಿಗೆ ಅವಕಾಶ ಕೊಡಬೇಡಿ, ಒಳ್ಳೇ ಅಭ್ಯಾಸಗಳನ್ನು ಮಾಡಲು ಸುಲಭವಾಗುವಂತೆ ನೋಡಿಕೊಳ್ಳಿ
ನೀವೇನು ಮಾಡಬಹುದು?
ಕೆಟ್ಟ ಅಭ್ಯಾಸಗಳಿಗೆ ಅವಕಾಶ ಕೊಡಬೇಡಿ. ಉದಾಹರಣೆಗೆ, ಕುರುಕಲು ತಿಂಡಿಗಳಿಂದ ದೂರವಿರಬೇಕು ಅಂತ ಇದ್ದರೆ ಮನೆಯಲ್ಲಿ ಅಂತ ವಸ್ತುಗಳು ಇರದಂತೆ ನೋಡಿಕೊಳ್ಳಿ. ಆಗ ನಿಮ್ಮ ನಿರ್ಧಾರಕ್ಕೆ ಅಂಟಿಕೊಳ್ಳಲು ಸಹಾಯ ಆಗುತ್ತೆ.
ಒಳ್ಳೇ ಅಭ್ಯಾಸಗಳನ್ನು ಮಾಡಲು ಸುಲಭವಾಗುವಂತೆ ನೋಡಿಕೊಳ್ಳಿ. ಉದಾಹರಣೆಗೆ, ಬೆಳಿಗ್ಗೆ ವ್ಯಾಯಾಮ ಮಾಡಬೇಕು ಅಂತ ನಿರ್ಧಾರ ಮಾಡಿದ್ದರೆ ಹಿಂದಿನ ರಾತ್ರಿಯೇ ಜಾಗಿಂಗ್ ಬಟ್ಟೆಯನ್ನು ಎತ್ತಿ ನಿಮ್ಮ ಹಾಸಿಗೆ ಹತ್ರ ಇಡಿ. ಆಗ ವ್ಯಾಯಾಮಕ್ಕೆ ಹೋಗಲು ಸುಲಭ ಆಗುತ್ತೆ.
ಒಳ್ಳೇ ಸ್ನೇಹಿತರನ್ನು ಆರಿಸಿಕೊಳ್ಳಿ. ನಾವು ಯಾರೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತೇವೋ ಅವರಂತೆ ಆಗಿಬಿಡುತ್ತೇವೆ. (1 ಕೊರಿಂಥ 15:33) ಹಾಗಾಗಿ, ಕೆಟ್ಟ ಅಭ್ಯಾಸಗಳನ್ನು ಬಿಡುವ ನಿಮ್ಮ ಪ್ರಯತ್ನಕ್ಕೆ ಅಡ್ಡಗಾಲು ಹಾಕುವವರ ಸಹವಾಸದಿಂದ ದೂರವಿರಿ. ಒಳ್ಳೇ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಬೆಂಬಲಿಸುವವರ ಸಹವಾಸ ಮಾಡಿ. (g16-E No. 4)