ಕಷ್ಟ, ನೋವು, ಸಾವು ಯಾಕಿದೆ?
ಸೃಷ್ಟಿಕರ್ತ ದೇವರು ನಮ್ಮನ್ನ ಮಕ್ಕಳ ತರ ನೋಡ್ತಾರೆ. ನಾವು ಕಷ್ಟಪಡೋದು ಆತನಿಗೆ ಒಂಚೂರೂ ಇಷ್ಟ ಇಲ್ಲ. ಆದ್ರೂ ನಮಗೆ ಯಾಕೆ ಇಷ್ಟೊಂದು ಕಷ್ಟ ಇದೆ? ಅದಕ್ಕಿರೋ ಕಾರಣಗಳನ್ನು ನೋಡೋಣ.
ಮೊದಲ ಹೆತ್ತವರು
“ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.”—ರೋಮನ್ನರಿಗೆ 5:12.
ಮೊದಲ ಹೆತ್ತವರಾದ ಆದಾಮ ಮತ್ತು ಹವ್ವರನ್ನ ದೇವರು ಯಾವುದೇ ಪಾಪ ಇಲ್ಲದೆ ಪರಿಪೂರ್ಣರಾಗಿ ಸೃಷ್ಟಿ ಮಾಡಿದ್ರು. ಅವರಿಗೆ ಏದೆನ್ ಅನ್ನೋ ಸುಂದರ ತೋಟವನ್ನು ಮನೆಯಾಗಿ ಕೊಟ್ರು. ಆ ತೋಟದಲ್ಲಿರೋ ಎಲ್ಲಾ ಮರದ ಹಣ್ಣುಗಳನ್ನು ಅವರು ತಿನ್ನಬಹುದಿತ್ತು, ಒಂದೇ ಒಂದು ಮರದ ಹಣ್ಣನ್ನು ಮಾತ್ರ ತಿನ್ನಬಾರದಿತ್ತು. ಆದ್ರೆ ತಿನ್ನಬಾರದು ಅಂತ ಹೇಳಿದ್ದ ಮರದ ಹಣ್ಣನ್ನು ತಿಂದು ಅವರಿಬ್ರೂ ಪಾಪ ಮಾಡಿದ್ರು. (ಆದಿಕಾಂಡ 2:15-17; 3:1-19) ಅವರು ದೇವರ ಮಾತನ್ನು ಕೇಳದೇ ಹೋಗಿದ್ರಿಂದ ತೋಟದಿಂದ ಹೊರಗೆ ಹಾಕಿದ್ರು. ಅಲ್ಲಿಂದ ಅವರ ಕಷ್ಟದ ಜೀವನ ಶುರುವಾಯ್ತು. ಆಮೇಲೆ ಅವರಿಗೆ ಮಕ್ಕಳಾಗಿ ಅವರೂ ಕಷ್ಟಪಡಬೇಕಾಯ್ತು. ಹೀಗೆ ಅವರೂ ವಯಸ್ಸಾಗಿ ಸಾಯಬೇಕಾಯ್ತು. (ಆದಿಕಾಂಡ 3:23; 5:5) ಆದಾಮ ಹವ್ವರಿಂದ ನಾವು ಹುಟ್ಟಿರೋದ್ರಿಂದ ನಮಗೆ ಕಷ್ಟ, ನೋವು, ಸಾವಿದೆ.
ಕೆಟ್ಟ ದೇವದೂತರು
“ನಾವು ದೇವರಿಂದ ಬಂದವರು ಅಂತ ನಮಗೆ ಗೊತ್ತು. ಆದ್ರೆ ಇಡೀ ಲೋಕ ಸೈತಾನನ ಕೈಯಲ್ಲಿದೆ.”—1 ಯೋಹಾನ 5:19.
ಸೈತಾನ ದೇವರ ವಿರುದ್ಧ ದಂಗೆಯೆದ್ದ ಒಬ್ಬ ಆತ್ಮಜೀವಿ. (ಯೋಹಾನ 8:44; ಪ್ರಕಟನೆ 12:9) ಸ್ವರ್ಗದಲ್ಲಿದ್ದ ಬೇರೆ ದೇವದೂತರು ಸೈತಾನನ ಜೊತೆ ಸೇರಿಕೊಂಡ್ರು. ಇವರೇ ಕೆಟ್ಟ ದೇವದೂತರು. ಇವರು ತಮ್ಮ ಶಕ್ತಿಯನ್ನು ಉಪಯೋಗಿಸಿ ಮನುಷ್ಯರು ದೇವರ ಮಾತನ್ನು ಕೇಳದಿರೊ ತರ ಮಾಡ್ತಾರೆ. ಕೆಟ್ಟ ಕೆಟ್ಟ ವಿಷಯಗಳನ್ನ ಮಾಡೋಕೂ ಈ ಕೆಟ್ಟ ದೇವದೂತರು ಜನರನ್ನು ಪುಸಲಾಯಿಸ್ತಾರೆ. (ಕೀರ್ತನೆ 106:35-38; 1 ತಿಮೊತಿ 4:1) ಅಷ್ಟೇ ಅಲ್ಲ ಇವರೂ ಮತ್ತು ಸೈತಾನ, ಜನರಿಗೆ ಕಷ್ಟ-ನೋವು ಕೊಟ್ಟು ತುಂಬ ಖುಷಿ ಪಡಿತಾರೆ.
ನಮ್ಮ ತಪ್ಪು ತೀರ್ಮಾನಗಳು
“ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.”—ಗಲಾತ್ಯ 6:7.
ನಮಗೆ ಪಾಪ ಬಳುವಳಿಯಾಗಿ ಬಂದಿರೋದ್ರಿಂದ, ತಪ್ಪು ಮಾಡೋಕೆ ಸೈತಾನ ನಮ್ಮನ್ನು ಪುಸಲಾಯಿಸೋದ್ರಿಂದ ನಾವು ತುಂಬ ಕಷ್ಟಪಡ್ತೀವಿ. ಆದ್ರೆ ಕೆಲವೊಮ್ಮೆ ನಮ್ಮ ಕಷ್ಟಗಳಿಗೆ ನಾವೇ ಕಾರಣ ಆಗ್ತೀವಿ. ಹೇಗಂದ್ರೆ ನಾವು ತಪ್ಪು ತೀರ್ಮಾನ ಮಾಡಿದಾಗ, ಕೆಟ್ಟ ವಿಷ್ಯಗಳನ್ನು ಮಾಡಿದಾಗ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತೆ. ಒಂದುವೇಳೆ ನಾವು ಒಳ್ಳೇ ತೀರ್ಮಾನ ಮಾಡಿದ್ರೆ ಜೀವನ ಚೆನ್ನಾಗಿರುತ್ತೆ. ಉದಾಹರಣೆಗೆ, ಪ್ರಾಮಾಣಿಕನಾಗಿರೊ ಒಬ್ಬ ಮನೆ ಯಜಮಾನ ಕಷ್ಟಪಟ್ಟು ಕೆಲಸ ಮಾಡಿ ಕುಟುಂಬದವರನ್ನು ಪ್ರೀತಿಯಿಂದ ನೋಡಿಕೊಳ್ತಾನೆ. ಆಗ ಅವನೂ ಅವನ ಮನೆಯವರೆಲ್ಲರೂ ಖುಷಿ ಖುಷಿಯಾಗಿ ಇರ್ತಾರೆ. ಆದ್ರೆ ಕುಟುಂಬದ ಯಜಮಾನ ಜೂಜಾಟ ಆಡಿದ್ರೆ, ಕಂಠ ಪೂರ್ತಿ ಕುಡಿದ್ರೆ, ಸೋಮಾರಿಯಾಗಿದ್ರೆ ಅವನ ಕುಟುಂಬ ತುಂಬ ಕಷ್ಟಪಡುತ್ತೆ. ಅದಕ್ಕೆ ನಾವು ದೇವರ ಮಾತು ಕೇಳಿದ್ರೆ “ಅಪಾರ ಶಾಂತಿ” ಸಿಗುತ್ತೆ.—ಕೀರ್ತನೆ 119:165.
ಕೊನೇ ದಿನಗಳು
“ಕೊನೇ ದಿನಗಳಲ್ಲಿ . . . ತಮ್ಮ ಬಗ್ಗೆನೇ ಯೋಚಿಸುವವರು, ಹಣದಾಸೆ ಇರುವವರು . . . ಅಪ್ಪಅಮ್ಮನ ಮಾತು ಕೇಳದವರು . . . ತಮ್ಮನ್ನ ಹತೋಟಿಯಲ್ಲಿ ಇಟ್ಕೊಳ್ಳದವರು, ಉಗ್ರರು, ಒಳ್ಳೇದನ್ನ ದ್ವೇಷಿಸುವವರು. . . ಇರ್ತಾರೆ.”—2 ತಿಮೊತಿ 3:1-5.
ಈಗಿರೋ ಜನರು ಈ ವಚನದಲ್ಲಿ ಹೇಳಿರೋ ತರಾನೇ ನಡ್ಕೊತಿದ್ದಾರೆ. ಇವರ ನಡತೆಯಿಂದ ನಾವು ಕೊನೇ ದಿನಗಳಲ್ಲಿ ಇದ್ದೀವಿ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ ಈ ಕೊನೇ ದಿನಗಳಲ್ಲಿ ಭೂಕಂಪ, ಯುದ್ಧ, ಅಂಟುರೋಗಗಳು, ಆಹಾರದ ಕೊರತೆ ಹೆಚ್ಚಾಗುತ್ತಿದೆ. (ಮತ್ತಾಯ 24:3, 7, 8; ಲೂಕ 21:10, 11) ಈ ಎಲ್ಲಾ ವಿಷಯಗಳಿಂದ ನಾವು ಕಷ್ಟ ಅನುಭವಿಸ್ತಾ ಇದ್ದೀವಿ.