ಬೆಲೆ ಏರಿಕೆಯ ಬರೆಗೆ ಔಷಧಿ!
ಯೋಚ್ನೆ ಮಾಡಿ ಖರ್ಚು ಮಾಡಿ
ಬೆಲೆ ಏರಿಕೆ ನಮ್ಮೆಲ್ರ ಬದುಕಲ್ಲಿ ಬರೆ ಎಳೆದಿದೆ. ಆದ್ರೆ, ಬೇರೆ ದಾರಿನೇ ಇಲ್ಲದೆ ನೀವು ಇದ್ರಲ್ಲಿ ಬೆಂದು ಹೋಗಬೇಕು ಅಂತೇನಿಲ್ಲ. ಯೋಚ್ನೆ ಮಾಡಿ ಖರ್ಚು ಮಾಡಿದ್ರೆ ನಿಮ್ಮ ಪರಿಸ್ಥಿತಿನ ನೀವು ಸುಧಾರಿಸಬಹುದು.
ಇದನ್ನ ತಿಳ್ಕೊಳ್ಳೋದು ಯಾಕೆ ಮುಖ್ಯ?
ನೀವು ಕಣ್ಮುಚ್ಚಿ ಖರ್ಚು ಮಾಡ್ತಾ ಹೋದ್ರೆ, ನಿಮ್ಮ ಹತ್ರ ಇರೋ ಹಣ ಎಲ್ಲ ನೀರಿನ ತರ ಖರ್ಚು ಆಗಿ ಹೋಗುತ್ತೆ. ಆಗ ಚಿಂತೆ, ಒತ್ತಡ ಜಾಸ್ತಿ ಆಗಿ ಬಿಡುತ್ತೆ. ಆದ್ರೆ ನಿಮ್ಮ ಹತ್ರ ಸ್ವಲ್ಪನೇ ಹಣ ಇದ್ರೂ ಚೆನ್ನಾಗಿ ಪ್ಲಾನ್ ಮಾಡೋದಾದ್ರೆ ನಿಮ್ಮ ಪರಿಸ್ಥಿತಿನ ನೀವು ಬದಲಾಯಿಸಬಹುದು.
ನೀವೇನು ಮಾಡಬಹುದು?
ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ನೀವಿದನ್ನ ಮಾಡಿದ್ರೆ ಯೋಚ್ನೆ ಮಾಡಿ ಖರ್ಚು ಮಾಡ್ತೀರ. ಆಗ ದಿಢೀರ್ ಅಂತ ಯಾವುದೇ ಖರ್ಚು ಬಂದ್ರೂ ನಿಮ್ಮ ಕೈಯಲ್ಲಿ ಸ್ವಲ್ಪ ಕಾಸು ಇರುತ್ತೆ.
ಹಾಸಿಗೆ ಇದ್ದಷ್ಟೇ ಕಾಲು ಚಾಚೋಕೆ ಏನು ಮಾಡಬೇಕು? ಒಂದು ಬಜೆಟ್ ಮಾಡಬೇಕು. ಅಂದ್ರೆ ಒಂದು ತಿಂಗಳಿಗೆ ನಿಮಗೆ ಎಷ್ಟು ಆದಾಯ ಬರುತ್ತೆ, ಎಷ್ಟು ಖರ್ಚು ಆಗುತ್ತೆ ಅಂತ ಬರೀಬೇಕು. ಖರ್ಚು ಬಗ್ಗೆ ಬರೀವಾಗ ನಿಜವಾಗಿ ನಿಮಗೆ ಆ ತಿಂಗಳಲ್ಲಿ ಏನು ಬೇಕಿದ್ಯೋ ಅದನ್ನ ಮಾತ್ರ ಬರೀಬೇಕು. ಒಂದುವೇಳೆ, ವಸ್ತುಗಳ ಬೆಲೆ ಅಥವಾ ನಿಮ್ಮ ಆದಾಯದಲ್ಲಿ ಏನಾದ್ರೂ ಬದಲಾವಣೆ ಆದ್ರೆ ಅದಕ್ಕೆ ತಕ್ಕಂತೆ ನಿಮ್ಮ ಬಜೆಟ್ನ ಹೊಂದಿಸ್ಕೊಬೇಕು. ಒಂದುವೇಳೆ ನಿಮಗೆ ಮದುವೆ ಆಗಿರೋದಾದ್ರೆ ಹಣಕಾಸಿನ ಬಗ್ಗೆ ನೀವು ಯಾವುದೇ ನಿರ್ಧಾರ ಮಾಡೋ ಮುಂಚೆ ನಿಮ್ಮ ಸಂಗಾತಿ ಹತ್ರ ಅದ್ರ ಬಗ್ಗೆ ಮಾತಾಡಬೇಕು ಅಂತ ನೆನಪಿಡಿ.
ಹೀಗೆ ಮಾಡಿ ನೋಡಿ: ಸಾಲಕ್ಕೆ (EMI) ವಸ್ತುಗಳನ್ನ ಕೊಡ್ತಾರೆ ಅಂತ ಮುಗಿಬಿದ್ದು ತಗೊಳ್ಳೋಕೆ ಹೋಗಬೇಡಿ. ಸಾಲ ಮಾಡದೆ, ಇರೋ ದುಡ್ಡಲ್ಲೇ ವಸ್ತುಗಳನ್ನ ತಗೊಂಡ್ರೆ ತುಂಬ ಪ್ರಯೋಜ್ನ ಇದೆ. ಹೀಗೆ ಮಾಡಿದ್ರೆ ‘ನೀವು ಮಾಡಿರೋ ಬಜೆಟ್ ಪ್ರಕಾರ ನಡ್ಕೊಬಹುದು. ಸಾಲದ ಸುಳಿಯಿಂದ ತಪ್ಪಿಸ್ಕೊಬಹುದು’ ಅಂತ ಕೆಲವರು ಹೇಳ್ತಾರೆ. ಇದ್ರ ಜೊತೆಗೆ ನೀವು ಆಗಿಂದಾಗ್ಗೆ ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ ನೋಡ್ತಾ ಇರಬೇಕು. ಇಲ್ಲಿವರೆಗೂ ಎಷ್ಟು ಖರ್ಚು ಮಾಡಿದ್ದೀರ, ಇನ್ನು ಎಷ್ಟು ಉಳಿದಿದೆ ಮತ್ತು ಮುಂದೆ ಹೇಗೆ ಜೀವನ ಮಾಡಬೇಕು ಅಂತ ಅದ್ರಿಂದ ನಿಮಗೆ ಗೊತ್ತಾಗುತ್ತೆ. ಆಗ ನಿಮಗೆ ಜಾಸ್ತಿ ಒತ್ತಡ ಆಗಲ್ಲ.
ಹಾಸಿಗೆ ಇದ್ದಷ್ಟೇ ಕಾಲು ಚಾಚೋದು ಹೇಳಿದಷ್ಟು ಸುಲಭ ಅಲ್ಲ ಅಂತ ನಿಮಗೆ ಅನಿಸಬಹುದು. ಆದ್ರೆ ಚೆನ್ನಾಗಿ ಯೋಚ್ನೆ ಮಾಡಿ ಬಜೆಟ್ ಮಾಡಿದ್ರೆ, ಅದ್ರ ಪ್ರಕಾರ ಖರ್ಚು ಮಾಡಿದ್ರೆ ನಿಮಗೇ ಸಹಾಯ ಆಗುತ್ತೆ. ನಿಮ್ಮ ಹಣನ ಜಾಣತನದಿಂದ ಹೇಗೆ ಖರ್ಚು ಮಾಡಬೇಕು ಅಂತ ತಿಳ್ಕೊತೀರ.
ಕೆಲಸ ಕಳ್ಕೊಬೇಡಿ. ಇರೋ ಕೆಲ್ಸಾನ ಕಳ್ಕೊಂಡ್ರೆ ತುಂಬ ಕಷ್ಟ ಆಗಬಹುದು. ಹಾಗಾದ್ರೆ ಕೆಲಸನ ಕಳ್ಕೊಳ್ಳದೆ ಇರೋಕೆ ಏನು ಮಾಡಬೇಕು? ಹೀಗೆ ಮಾಡಿ: ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಿ, ಕೆಲಸದ ಬಗ್ಗೆ ತಪ್ಪಾಗಿ ಯೋಚ್ನೆ ಮಾಡಬೇಡಿ. ಏನೇ ಕೆಲಸ ಇದ್ರು ಮುಂದೆ ಹೋಗಿ ಅದನ್ನ ಮಾಡಿ. ಕಷ್ಟಪಟ್ಟು ಕೆಲಸ ಮಾಡಿ, ಎಲ್ರ ಜೊತೆ ಗೌರವದಿಂದ ನಡ್ಕೊಳ್ಳಿ. ಕಂಪನಿ ಹೇಳೋ ರೂಲ್ಸ್ನ ಫಾಲೋ ಮಾಡಿ. ನಿಮ್ಮ ಕೆಲಸಕ್ಕೆ ಬೇಕಾಗೋ ಕೌಶಲ್ಯನ ಬೆಳೆಸ್ಕೊಳ್ತಾ ಇರಿ.
ಹಣನ ವೇಸ್ಟ್ ಮಾಡ್ಬೇಡಿ. ಇವತ್ತು ತುಂಬ ಜನ ಬೆವರು ಸುರಿಸಿ ದುಡಿದಿರೋ ಹಣನ ಡ್ರಗ್ಸ್ ತಗೊಳೋದ್ರಲ್ಲಿ, ಜೂಜಾಡೋದ್ರಲ್ಲಿ, ಸಿಗರೇಟ್ ಸೇದೋದ್ರಲ್ಲಿ ಮತ್ತು ಕುಡಿಯೋದ್ರಲ್ಲಿ ಕಳೆದು ಬಿಡ್ತಾರೆ. ಈ ಕೆಟ್ಟ ಅಭ್ಯಾಸಗಳಿಂದ ಅವ್ರ ಆರೋಗ್ಯನ ಹಾಳು ಮಾಡ್ಕೊಳ್ತಾರೆ. ಅಲ್ಲದೇ ಇರೋ ಕೆಲಸಾನೂ ಕಳ್ಕೊಳ್ತಾರೆ. ಹಾಗಾಗಿ ನೀವು ನಿಮ್ಮನ್ನೇ ಹೀಗೆ ಕೇಳ್ಕೊಳ್ಳಿ, ‘ನಾನು ಹಣನ ಬೇಕಾಬಿಟ್ಟಿ ಖರ್ಚು ಮಾಡ್ತೀನಾ? ನನಗೆ ಈ ತರ ಕೆಟ್ಟ ಅಭ್ಯಾಸಗಳಿದ್ಯಾ?’
ಕಷ್ಟ ಕಾಲಕ್ಕೆ ಅಂತ ಎತ್ತಿಡಿ. “ಹನಿ ಹನಿ ಕೂಡಿದ್ರೆ ಹಳ್ಳ” ಅನ್ನೋ ತರ ನಿಮ್ಮ ಕೈಲಾದಾಗ ಸ್ವಲ್ಪ-ಸ್ವಲ್ಪ ಹಣನ ಎತ್ತಿಡಿ. ಆಗ ನಿಮ್ಮ ಕಷ್ಟ ಕಾಲಕ್ಕೆ ಅದು ಸಹಾಯ ಮಾಡುತ್ತೆ. ನಿಮ್ಮ ಕುಟುಂಬದವ್ರಲ್ಲಿ ಯಾರಿಗಾದ್ರೂ ಕಾಯಿಲೆ ಬಂದ್ರೆ, ನೀವೇ ಕೆಲಸ ಕಳ್ಕೊಂಡ್ರೆ ಅಥವಾ ದಿಢೀರ್ ಅಂತ ಒಂದು ಕಷ್ಟ ಬಂದ್ರೆ ಅದು ಸ್ವಲ್ಪ ಮಟ್ಟಿಗೆ ನಿಮಗೆ ಸಹಾಯ ಮಾಡುತ್ತೆ.