ಭಾಗ 7
ದಂಗೆಯ ಫಲಿತಾಂಶ ಏನಾಗಿದೆ?
1-3. ಯೆಹೋವನು ಸರಿಯೆಂದು ಸಮಯವು ಹೇಗೆ ರುಜುಪಡಿಸಿದೆ?
ದೇವರ ಆಳುವ ಹಕ್ಕಿನ ವಿವಾದಾಂಶದ ಕುರಿತು, ದೇವರಿಂದ ಸ್ವತಂತ್ರವಾಗಿರುವ ಮಾನವನಾಳಿಕೆಯ ಇವೆಲ್ಲಾ ಶತಮಾನಗಳ ಸಂಬಂಧದಲ್ಲಿ, ಫಲಿತಾಂಶವು ಏನಾಗಿದೆ? ದೇವರಿಗಿಂತಲೂ ಮಾನವರು ಉತ್ತಮ ಆಳುವವರಾಗಿ ಪರಿಣಮಿಸಿದ್ದಾರೊ? ಮಾನವನೆಡೆಗೆ ಮಾನವನ ಅಮಾನುಷತೆಯ ದಾಖಲೆಯಿಂದ ನಾವು ತೀರ್ಪುಮಾಡುವುದಾದರೆ, ಖಂಡಿತವಾಗಿಯೂ ಅವರು ಹಾಗೆ ಪರಿಣಮಿಸಿರುವುದಿಲ್ಲ.
2 ದೇವರಾಳಿಕೆಯನ್ನು ನಮ್ಮ ಮೊದಲ ಹೆತ್ತವರು ತ್ಯಜಿಸಿದಾಗ, ಅನಾಹುತವು ಹಿಂಬಾಲಿಸಿತು. ಅವರು ಸ್ವತಃ ತಮ್ಮ ಮೇಲೆ ಮತ್ತು ಅವರಿಂದ ಬಂದ ಎಲ್ಲಾ ಮಾನವ ಕುಟುಂಬದ ಮೇಲೆ ಕಷ್ಟಾನುಭವವನ್ನು ತಂದರು. ಮತ್ತು ತಮ್ಮ ಹೊರತು ಅವರಿಗೆ ದೂಷಿಸಲು ಬೇರೆ ಯಾವನೂ ಇರಲಿಲ್ಲ. ದೇವರ ವಾಕ್ಯವು ಹೇಳುವುದು: “ಆದರೆ ಅವರು ತಮ್ಮ ಸ್ವಂತ ವತಿಯಿಂದ ವಿನಾಶಕರವಾಗಿ ವರ್ತಿಸಿದರು; ಅವರು ಅವನ ಮಕ್ಕಳಲ್ಲ, ದೋಷವು ಅವರ ಸ್ವಂತದ್ದೇ.”—ಧರ್ಮೋಪದೇಶಕಾಂಡ 32:5, NW.
3 ದೇವರ ಮುನ್ನೇರ್ಪಾಡುಗಳ ಅಧೀನತೆಯಿಂದ ಅವರು ಹೊರಗೆ ಚಲಿಸುವುದಾದರೆ, ಕ್ಷಯಿಸುವರು ಮತ್ತು ಕಟ್ಟಕಡೆಗೆ ಸಾಯುವರು ಎಂದು ಆದಾಮ, ಹವ್ವರಿಗೆ ದೇವರು ಕೊಟ್ಟ ಎಚ್ಚರಿಕೆಯ ಔಚಿತ್ಯವನ್ನು ಇತಿಹಾಸವು ತೋರಿಸಿದೆ. (ಆದಿಕಾಂಡ 2:17; 3:19) ಅವರು ದೇವರಾಳಿಕೆಯ ಅಡಿಯಿಂದ ಹೊರಗೆ ಚಲಿಸಿಯೇ ಬಿಟ್ಟರು, ಮತ್ತು ಕಾಲಾನುಕ್ರಮದಲ್ಲಿ ಅವರು ಕ್ಷಯಿಸಿದರು ಮತ್ತು ಮೃತಿಹೊಂದಿದರು.
4. ನಾವೆಲ್ಲರೂ ಅಪರಿಪೂರ್ಣರಾಗಿಯೂ, ರೋಗ ಮತ್ತು ಮರಣದ ಪ್ರವೃತ್ತಿಯುಳ್ಳವರಾಗಿಯೂ ಯಾಕೆ ಹುಟ್ಟುತ್ತೇವೆ?
4 ಅನಂತರ ಅವರ ಎಲ್ಲಾ ಸಂತತಿಯವರಿಗೆ ಏನು ಸಂಭವಿಸಿತು ಎಂಬುದು ರೋಮಾಪುರ 5:12 ರಲ್ಲಿ ವಿವರಿಸಿದಂತೆಯೆ ಇತ್ತು: “ಒಬ್ಬ ಮನುಷ್ಯನಿಂದಲೇ [ಆದಾಮ, ಮಾನವಕುಲದ ಕುಟುಂಬ ಶಿರಸ್ಸು] ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” ಆದುದರಿಂದ ದೇವರ ಮೇಲ್ವಿಚಾರಣೆಯ ವಿರುದ್ಧ ನಮ್ಮ ಮೊದಲ ಹೆತ್ತವರು ದಂಗೆಯೆದ್ದಾಗ, ಅವರು ನ್ಯೂನತೆಯುಳ್ಳ ಪಾಪಿಗಳಾದರು. ತಳಿಶಾಸ್ತ್ರದ ನಿಯಮದ ಹೊಂದಿಕೆಯಲ್ಲಿ, ಫಲಿಸಿದ ಅಪರಿಪೂರ್ಣತೆಯನ್ನು ತಾನೇ ಅವರು ಅವರ ಸಂತತಿಯ ಮೇಲೆ ದಾಟಿಸಶಕ್ತರಾಗಿದ್ದರು. ಆದುದರಿಂದ ನಾವೆಲ್ಲರು ನ್ಯೂನತೆಯುಳ್ಳವರಾಗಿ, ರೋಗ ಮತ್ತು ಮರಣದ ಪ್ರವೃತ್ತಿಯುಳ್ಳವರಾಗಿ ಹುಟ್ಟಿರುತ್ತೇವೆ.
5, 6. ನಿಜ ಶಾಂತಿ ಮತ್ತು ಅಭ್ಯುದಯವನ್ನು ತರುವುದರಲ್ಲಿ ಮಾನವನ ಪ್ರಯತ್ನಗಳ ಕುರಿತು ಇತಿಹಾಸವು ಏನನ್ನು ತೋರಿಸಿದೆ?
5 ಹಲವು ಶತಮಾನಗಳು ಗತಿಸಿವೆ. ಸಾಮ್ರಾಜ್ಯಗಳು ಬಂದಿವೆ ಮತ್ತು ಹೋಗಿವೆ. ಊಹಿಸಸಾಧ್ಯವಾಗುವ ಪ್ರತಿಯೊಂದು ವಿಧದ ಸರಕಾರವನ್ನು ಪರೀಕ್ಷಿಸಿ ನೋಡಲಾಗಿದೆ. ಆದರೂ, ಮೇಲಿಂದ ಮೇಲೆ ಮಾನವ ಕುಟುಂಬಕ್ಕೆ ಘೋರ ಸಂಗತಿಗಳು ಸಂಭವಿಸಿವೆ. ಆರು ಸಾವಿರ ವರ್ಷಗಳ ಅನಂತರ, ಭೂವ್ಯಾಪಕವಾಗಿ ಶಾಂತಿ, ನ್ಯಾಯ, ಮತ್ತು ಅಭ್ಯುದಯದ ಬಿಂದುವಿಗೆ ಮಾನವರು ಪ್ರಗತಿ ಮಾಡಿರುವರು ಮತ್ತು ಇಷ್ಟರೊಳಗೆ ದಯೆ, ಕನಿಕರ, ಮತ್ತು ಸಹಕಾರದ ಸಕಾರಾತ್ಮಕ ಮೌಲ್ಯಗಳ ಹತೋಟಿಯನ್ನು ಸಾಧಿಸಿರುವರು ಎಂದು ಒಬ್ಬನು ಎಣಿಸಬಹುದು.
6 ಆದಾಗ್ಯೂ, ವಾಸ್ತವ್ಯವು ಮಾತ್ರ ಕೇವಲ ವಿಪರ್ಯಸ್ತವಾಗಿದೆ. ಎಂದಾದರೂ ಯೋಜಿಸಲ್ಪಟ್ಟ ಯಾವುದೇ ವಿಧದ ಸರಕಾರವೊಂದು ಎಲ್ಲರಿಗಾಗಿ ನಿಜ ಶಾಂತಿ ಮತ್ತು ಅಭ್ಯುದಯವನ್ನು ತಂದಿಲ್ಲ. ಈ 20 ನೆಯ ಶತಮಾನದಲ್ಲೊಂದರಲ್ಲಿಯೇ, ಯೆಹೂದ್ಯರ ಸರ್ವನಾಶದ ಸಮಯದಲ್ಲಿ ನಡೆದ ಉದ್ದೇಶಪೂರ್ವಕವಾದ ಲಕ್ಷಾಂತರ ಕೊಲೆಗಳನ್ನು ಮತ್ತು ಯುದ್ಧಗಳಲ್ಲಿ ಹತ್ತು ಕೋಟಿಗಳಿಗಿಂತಲೂ ಅಧಿಕ ಜನರ ಹತಿಸುವಿಕೆಗಳನ್ನು ನಾವು ನೋಡಿರುತ್ತೇವೆ. ನಮ್ಮ ಸಮಯದಲ್ಲಿ ಅಸಹಿಷ್ಣುತೆ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳ ಕಾರಣ, ಅಸಂಖ್ಯಾತ ಜನರು ಹಿಂಸಿಸಲ್ಪಟ್ಟಿದ್ದಾರೆ, ಕೊಲೆಗೈಯಲ್ಪಟ್ಟಿದ್ದಾರೆ, ಮತ್ತು ಸೆರೆಮನೆಗೆ ಹಾಕಲ್ಪಟ್ಟಿದ್ದಾರೆ.
ಇಂದು ಪರಿಸ್ಥಿತಿಯು
7. ಇಂದು ಮಾನವ ಕುಟುಂಬದ ಪರಿಸ್ಥಿತಿಯನ್ನು ಹೇಗೆ ವಿವರಿಸಬಹುದು?
7 ಇದಕ್ಕೆ ಕೂಡಿಸಿ, ಇಂದು ಮಾನವ ಕುಟುಂಬದ ಒಟ್ಟಿನ ಪರಿಸ್ಥಿತಿಯನ್ನು ಪರಿಗಣಿಸಿರಿ. ಪಾತಕ ಮತ್ತು ಬಲಾತ್ಕಾರ ಬಹಳವಾಗಿ ಹಬ್ಬಿರುತ್ತದೆ. ಮಾದಕೌಷಧದ ದುರುಪಯೋಗವು ಒಂದು ವ್ಯಾಧಿಯಾಗಿದೆ. ರತಿ ರವಾನಿತ ರೋಗಗಳು ಸರ್ವವ್ಯಾಪಿಯಾಗಿವೆ. ದಿಗಿಲುಗೊಳಿಸುವ ಏಯ್ಡ್ಸ್ ರೋಗವು ಲಕ್ಷಾಂತರ ಜನರನ್ನು ತಟ್ಟುತ್ತಿದೆ. ಕೋಟಿಗಟ್ಟಲೆ ಜನರು ಹಸಿವು ಯಾ ರೋಗದಿಂದ ಪ್ರತಿವರ್ಷ ಸಾಯುತ್ತಿರುವಾಗ, ಅತಿ ಕೊಂಚ ಸಂಖ್ಯೆಯವರಲ್ಲಿ ಅಪಾರ ಐಶ್ವರ್ಯವಿದೆ. ಮಾನವರು ಭೂಮಿಯನ್ನು ಮಲಿನ ಮತ್ತು ಲೂಟಿ ಮಾಡುತ್ತಿದ್ದಾರೆ. ಎಲ್ಲೆಡೆಗಳಲ್ಲಿಯೂ ಕುಟುಂಬ ಜೀವನ ಮತ್ತು ನೈತಿಕ ಮೌಲ್ಯಗಳು ಮುರಿದುಬಿದ್ದಿವೆ. ನಿಜವಾಗಿಯೂ, ಇಂದಿನ ಜೀವಿತವು ‘ಈ ಪ್ರಪಂಚದ ದೇವರು’ ಆಗಿರುವ ಸೈತಾನನ ಭೀಷಣ ಪ್ರಭುತ್ವವನ್ನು ಪ್ರತಿಬಿಂಬಿಸುತ್ತದೆ. ಅವನು ದೊರೆಯಾಗಿರುವ ಲೋಕವು ನೀರಸವೂ, ನಿರ್ದಯೆಯದ್ದೂ, ಮತ್ತು ಸಮಗ್ರವಾಗಿ ಭ್ರಷ್ಟಗೊಂಡದ್ದೂ ಆಗಿರುತ್ತದೆ.—2 ಕೊರಿಂಥ 4:4.
8. ಮಾನವನ ಸಾಧನೆಗಳು ನಿಜ ಪ್ರಗತಿಯೆಂದು ನಾವು ಯಾಕೆ ಹೇಳಸಾಧ್ಯವಿಲ್ಲ?
8 ಅವರ ವೈಜ್ಞಾನಿಕ ಮತ್ತು ಭೌತಿಕ ಪ್ರಗತಿಯ ಉಚ್ಚ ಬಿಂದುವಿಗೆ ಬರುವಂತೆ ಮಾನವರಿಗೆ ತಕ್ಕಷ್ಟು ಸಮಯವನ್ನು ದೇವರು ಅನುಮತಿಸಿದ್ದಾನೆ. ಆದರೆ, ಬಿಲ್ಲು ಬಾಣಗಳ ಸ್ಥಾನದಲ್ಲಿ ಯಂತ್ರ ಫಿರಂಗಿಗಳು, ಟ್ಯಾಂಕುಗಳು, ಸಿಡಿಗುಂಡುಗಳನ್ನೆಸೆಯುವ ಜೆಟ್ ವಿಮಾನಗಳು, ಮತ್ತು ಅಣ್ವಸ್ತ್ರಗಳ ಕ್ಷಿಪಣಿಗಳು ಇರುವಾಗ, ಅದೊಂದು ಸಾಚ ಪ್ರಗತಿಯೇ? ಅಂತರಾಳಕ್ಕೆ ಜನರು ಪ್ರಯಾಣಿಸಲು ಶಕ್ಯರಾದರೂ, ಭೂಮಿಯ ಮೇಲೆ ಒಟ್ಟಿಗೆ ಜೀವಿಸಲು ಸಾಧ್ಯವಿರದಾಗ, ಅದು ಪ್ರಗತಿಯೇ? ರಾತ್ರಿ ಸಮಯದಲ್ಲಿ ಜನರು ರಸ್ತೆಯ ಮೇಲೆ, ಕೆಲವು ಸ್ಥಳಗಳಲ್ಲಿ ಹಗಲು ಹೊತ್ತಿಗೂ ಕೂಡ, ನಡೆಯಲು ಹೆದರುತ್ತಿರುವಾಗ, ಅದು ಪ್ರಗತಿಯೇ?
ಸಮಯವು ತೋರಿಸಿದ ಸಂಗತಿಗಳು
9, 10. (ಎ) ಗತಿಸಿದ ಶತಮಾನಗಳ ಸಮಯವು ಏನನ್ನು ಸ್ಪಷ್ಟವಾಗಿ ತೋರಿಸಿದೆ? (ಬಿ) ಇಚ್ಛಾ ಸ್ವಾತಂತ್ರ್ಯವನ್ನು ದೇವರು ಯಾಕೆ ಹಿಂತೆಗೆದುಕೊಳ್ಳನು?
9 ದೇವರಾಳಿಕೆಯ ಹೊರತಾಗಿ ಮಾನವರು ಅವರ ಹೆಜ್ಜೆಗಳನ್ನು ಯಶಸ್ವಿಯಾಗಿ ಮಾರ್ಗದರ್ಶಿಸಲು ಸಾಧ್ಯವಿಲ್ಲವೆಂದು ಶತಮಾನಗಳ ಸಮಯದ ಪರೀಕ್ಷೆಯು ತೋರಿಸಿದೆ. ಉಣ್ಣದೆ, ಕುಡಿಯದೆ, ಮತ್ತು ಉಸಿರಾಡದೆ ಅವರಿಗೆ ಜೀವಿಸಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ಅದನ್ನು ಮಾಡಲು ಕೂಡ ಅವರಿಗೆ ಸಾಧ್ಯವಿಲ್ಲ. ಪುರಾವೆಯು ಸ್ಪಷ್ಟವಾಗಿದೆ: ಆಹಾರ, ನೀರು ಮತ್ತು ಗಾಳಿಯ ಮೇಲೆ ಆತುಕೊಂಡಿರಲು ನಾವು ಹೇಗೆ ಸೃಷ್ಟಿಸಲ್ಪಟ್ಟಿದ್ದೇವೊ, ಹಾಗೆಯೇ ನಮ್ಮ ಸೃಷ್ಟಿಕರ್ತನ ಮೇಲೆ ಆತುಕೊಂಡಿರುವಂತೆ ನಾವು ರಚಿಸಲ್ಪಟ್ಟೆವು.
10 ದುಷ್ಟತನವನ್ನು ಅನುಮತಿಸುವುದರ ಮೂಲಕ, ದೇವರು ಒಮ್ಮೆ ಮತ್ತು ಸದಾ ಸರ್ವದಾ, ಇಚ್ಛಾ ಸ್ವಾತಂತ್ರ್ಯದ ದುರುಪಯೋಗದ ದುಃಖಕರ ಫಲಿತಾಂಶಗಳನ್ನು ಪ್ರದರ್ಶಿಸಿದ್ದಾನೆ. ಮತ್ತು ಇಚ್ಛಾ ಸ್ವಾತಂತ್ರ್ಯವು ಎಂತಹ ಒಂದು ಅಮೂಲ್ಯವಾದ ಕೊಡುಗೆಯಾಗಿದೆಯೆಂದರೆ, ಅದನ್ನು ಮಾನವರಿಂದ ತೆಗೆಯುವ ಬದಲು, ಅದರ ದುರುಪಯೋಗ ಯಾವ ಅರ್ಥದಲ್ಲಿರುತ್ತದೆ ಎಂದು ನೋಡಲು ದೇವರು ಅವರಿಗೆ ಅನುಮತಿಯನ್ನಿತ್ತಿದ್ದಾನೆ. ಇದನ್ನು ಹೇಳುವಾಗ ದೇವರ ವಾಕ್ಯವು ಸತ್ಯವನ್ನು ನುಡಿಯುತ್ತದೆ: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” ಇದನ್ನೂ ಹೇಳುವಾಗ, ಅದು ಸತ್ಯತೆಯದ್ದಾಗಿದೆ: “ಮನುಷ್ಯನು ಮನುಷ್ಯನ ಮೇಲೆ ಅವನಿಗೆ ಹಾನಿಯಾಗುವಂತೆ ಅಧಿಕಾರ ನಡಿಸಿದ್ದಾನೆ.”—ಯೆರೆಮೀಯ 10:23; ಪ್ರಸಂಗಿ 8:9.
11. ಮಾನವನ ಆಳಿಕೆಯ ಯಾವುದೇ ವಿಧವು ಕಷ್ಟಾನುಭವವನ್ನು ನಿರ್ಮೂಲಗೊಳಿಸಿದೆಯೇ?
11 ಕಷ್ಟಾನುಭವವನ್ನು ನಿಲ್ಲಿಸಲು ಮನುಷ್ಯನು ಅಶಕ್ತನಾಗಿದ್ದಾನೆ ಎಂದು ಆರು ಸಾವಿರ ವರ್ಷಗಳಿಗೆ ಮಾನವನಾಳಿಕೆಯ ದೇವರ ಅನುಮತಿಯು ಬಲಯುತವಾಗಿ ಉದಾಹರಿಸುತ್ತದೆ. ಉದಾಹರಣೆಗೆ, ಇಸ್ರಾಯೇಲಿನ ಅರಸ ಸೊಲೊಮೋನನು, ಅವನ ಎಲ್ಲಾ ವಿವೇಕ, ಐಶ್ವರ್ಯ, ಮತ್ತು ಬಲದೊಂದಿಗೆ ಮಾನವನಾಳಿಕೆಯಿಂದುಂಟಾಗುವ ದುರವಸ್ಥೆಯನ್ನು ತನ್ನ ದಿನಗಳಲ್ಲಿ ನೇರಗೊಳಿಸಲು ಶಕ್ತನಾಗಲಿಲ್ಲ. (ಪ್ರಸಂಗಿ 4:1-3) ತದ್ರೀತಿಯಲ್ಲಿ, ನಮ್ಮ ದಿನಗಳಲ್ಲಿ, ಲೋಕದ ಧುರೀಣರು, ಎಲ್ಲಾ ತಾಂತ್ರಿಕತೆಯ ಪ್ರಗತಿಯೊಂದಿಗೆ ಕೂಡ, ಕಷ್ಟಾನುಭವವನ್ನು ನಿರ್ಮೂಲಗೊಳಿಸಲು ಶಕ್ತರಾಗಿರುವುದಿಲ್ಲ. ಇನ್ನೂ ಕೀಳಾಗಿ, ದೇವರಾಳಿಕೆಯಿಂದ ಸ್ವತಂತ್ರರಾದ ಮಾನವರು, ಅದನ್ನು ನಿರ್ಮೂಲಗೊಳಿಸುವ ಬದಲು, ಕಷ್ಟಾನುಭವವನ್ನು ಏರಿಸಿದ್ದಾರೆ ಎಂದು ಇತಿಹಾಸವು ತೋರಿಸುತ್ತದೆ.
ದೇವರ ದೂರ-ವ್ಯಾಪ್ತಿಯ ನೋಟ
12-14. ಕಷ್ಟಾನುಭವಕ್ಕೆ ದೇವರ ಅನುಮತಿಯ ಫಲಿತಾಂಶವಾಗಿ ಯಾವ ದೂರ-ವ್ಯಾಪ್ತಿಯ ಪ್ರಯೋಜನಗಳು ಬಂದಿವೆ?
12 ಕಷ್ಟಾನುಭವಕ್ಕೆ ದೇವರ ಅನುಮತಿಯು ನಮಗೆ ವೇದನಾಮಯವಾಗಿ ಇದೆ. ಆದರೆ ಕಟ್ಟಕಡೆಯಲ್ಲಿ ಉತ್ತಮ ಫಲಿತಾಂಶಗಳು ಬರುವುವು ಎಂದು ತಿಳಿದವನಾಗಿದ್ದುಕೊಂಡು, ಅವನು ದೂರ-ವ್ಯಾಪ್ತಿಯ ನೋಟವೊಂದನ್ನು ತೆಗೆದು ಕೊಂಡಿರುತ್ತಾನೆ. ದೇವರ ನೋಟವು ಸೃಷ್ಟಿಜೀವಿಗಳಿಗೆ, ಕೇವಲ ಕೆಲವೇ ವರ್ಷಗಳಿಗೆ ಯಾ ಕೆಲವೇ ಸಾವಿರ ವರ್ಷಗಳಿಗೆ ಮಾತ್ರವಲ್ಲ, ಕೋಟಿಗಟ್ಟಲೆ ವರ್ಷಗಳಿಗೆ, ಹೌದು ಎಲ್ಲಾ ನಿತ್ಯತೆಗೆ ಪ್ರಯೋಜನಕರವಾಗಲಿರುವುದು.
13 ಭವಿಷ್ಯತ್ತಿನ ಯಾವುದೇ ಒಂದು ಸಮಯದಲ್ಲಿ ಎಂದಾದರೂ ಯಾವನೋ ಒಬ್ಬನು, ದೇವರ ಕಾರ್ಯ ವಿಧಾನವನ್ನು ಪ್ರಶ್ನೆಗೆಳೆಯಲು ಇಚ್ಛಾ ಸ್ವಾತಂತ್ರ್ಯವನ್ನು ದುರುಪಯೋಗಿಸುವಲ್ಲಿ, ಅವನ ನೋಟಗಳನ್ನು ರುಜುಪಡಿಸಲು ಪ್ರಯತ್ನಿಸುವಂತೆ ಅವನಿಗೆ ಸಮಯವನ್ನು ಕೊಡುವ ಆವಶ್ಯಕತೆಯೇನೂ ಅಲ್ಲಿರದು. ದಂಗೆಕೋರರಿಗೆ ಈಗಾಗಲೇ ಸಾವಿರಾರು ವರ್ಷಗಳನ್ನು ಅನುಮತಿಸಿರುವುದರಿಂದ, ವಿಶ್ವದಲ್ಲಿ ಎಲ್ಲಿಯೂ ನಿತ್ಯತೆಯಲೆಲ್ಲಾ ಅನ್ವಯಿಸಸಾಧ್ಯವಿರುವ ಒಂದು ಶಾಸನ ಸಮ್ಮತ ಪೂರ್ವನಿದರ್ಶನವನ್ನು ದೇವರು ಸ್ಥಾಪಿಸಿರುತ್ತಾನೆ.
14 ಈ ಸಮಯದಲ್ಲಿ ಯೆಹೋವನು ದುಷ್ಟತನ ಮತ್ತು ಕಷ್ಟಾನುಭವವನ್ನು ಅನುಮತಿಸಿದ ಕಾರಣ, ಅವನೊಂದಿಗೆ ಹೊಂದಾಣಿಕೆಯಲ್ಲಿಲ್ಲದ ಯಾವುದೇ ಒಂದು ಸಂಗತಿಯು ಅಭ್ಯುದಯ ಹೊಂದುವುದಿಲ್ಲವೆಂದು ಈಗಾಗಲೇ ವಿಸ್ತಾರವಾಗಿ ರುಜುಪಡಿಸಲ್ಪಟ್ಟಿರುವುದು. ಮನುಷ್ಯರ ಯಾ ಆತ್ಮ ಜೀವಿಗಳ ಸ್ವತಂತ್ರವಾಗಿರುವ ಯಾವುದೇ ಯೋಜನೆಯು ಬಾಳುವ ಪ್ರಯೋಜನಗಳನ್ನು ತರಸಾಧ್ಯವಿಲ್ಲವೆಂದು ನಿಸ್ಸಂದೇಹವಾಗಿ ತೋರಿಸಲ್ಪಟ್ಟಿರುವುದು. ಆದಕಾರಣ, ಆಗ ದೇವರು ಯಾವನೇ ದಂಗೆಕೋರನನ್ನು ತತ್‌ಕ್ಷಣ ಜಜ್ಜುಬಡಿಯುವುದರಲ್ಲಿ ಪೂರ್ಣವಾಗಿ ನ್ಯಾಯಿಯೆಂದು ಸಮರ್ಥಿಸಲ್ಪಡುವನು. “ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.”—ಕೀರ್ತನೆ 145:20; ರೋಮಾಪುರ 3:4.
[ಪುಟ 15ರಲ್ಲಿರುವ ಚಿತ್ರ]
ನಮ್ಮ ಮೊದಲ ಹೆತ್ತವರು ದೇವರಿಂದ ಸ್ವಾತಂತ್ರ್ಯವನ್ನು ಆರಿಸಿಕೊಂಡಾದ ಮೇಲೆ, ಅವರು ಕಟ್ಟಕಡೆಗೆ ಮುದುಕರಾದರು ಮತ್ತು ಸತ್ತರು
[ಪುಟ 16ರಲ್ಲಿರುವ ಚಿತ್ರಗಳು]
ದೇವರ ಹೊರತಾಗಿರುವ ಮಾನವನಾಳಿಕೆಯು ವಿಪತ್ಕಾರಕವಾಗಿ ಪರಿಣಮಿಸಿದೆ
[ಕೃಪೆ]
U.S. Coast Guard photo