ಪ್ರಗತಿಪರರಾಗಿರಿ—ಅಭಿವೃದ್ಧಿಮಾಡಿರಿ
ನೀವು ಪ್ರಥಮವಾಗಿ ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಲು ಕಲಿತಾಗ, ನಿಮ್ಮಲ್ಲಿ ಆಳವಾಗಿ ಮೂಡಿದ್ದ ಆಲೋಚನಾ ವಿಧಾನಗಳು, ಮಾತು ಮತ್ತು ವರ್ತನೆಗಳು ಕ್ರಮೇಣ ಬದಲಾಗತೊಡಗಿದವು. ಇದರಲ್ಲಿ ಹೆಚ್ಚಿನದ್ದು ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಸೇರುವ ಮೊದಲೇ ಸಂಭವಿಸಿತು. ನೀವು ಈಗ ಪ್ರಾಯಶಃ ಯೆಹೋವನಿಗೆ ನಿಮ್ಮ ಜೀವವನ್ನು ಸಮರ್ಪಿಸಿಕೊಳ್ಳುವ ಹಂತದ ತನಕ ಪ್ರಗತಿಮಾಡಿರಬಹುದು. ಹಾಗಾದರೆ ಅದರ ಅರ್ಥ ನೀವು ಪ್ರಗತಿಯನ್ನು ಮಾಡುವುದನ್ನು ನಿಲ್ಲಿಸಸಾಧ್ಯವಿದೆಯೆಂದೋ? ನಿಶ್ಚಯವಾಗಿಯೂ ಅಲ್ಲ. ನಿಮ್ಮ ದೀಕ್ಷಾಸ್ನಾನವು ಪ್ರಗತಿಯ ಕೇವಲ ಆರಂಭವಾಗಿರುತ್ತದೆ.
ಶಿಷ್ಯ ತಿಮೊಥೆಯನಿಗೆ ಪೌಲನು, ಅವನಿಗೆ ಕೊಡಲ್ಪಟ್ಟಿದ್ದ ಸಲಹೆ ಮತ್ತು ಸೇವಾ ಸುಯೋಗಗಳ ಕುರಿತು “ಪರ್ಯಾಲೋಚಿಸು,” ಅವುಗಳಲ್ಲಿ “ಆಸಕ್ತನಾಗಿರು,” ಮತ್ತು ಹೀಗೆ ಅವನ “ಅಭಿವೃದ್ಧಿಯು ಎಲ್ಲ ವ್ಯಕ್ತಿಗಳಿಗೆ ತೋರಿಬಂದೀತು” ಎಂದು ಹೇಳಿದಾಗ, ತಿಮೊಥೆಯನು ಈಗಾಗಲೇ ಒಬ್ಬ ಕ್ರೈಸ್ತ ಹಿರಿಯನಾಗಿ ಸೇವೆಮಾಡುತ್ತಿದ್ದನು. (1 ತಿಮೊ. 4:12-15, NW) ನೀವು ಸತ್ಯಮಾರ್ಗವನ್ನು ಈಗ ತಾನೇ ಅನುಸರಿಸಲು ಆರಂಭಿಸಿರಲಿ, ಕ್ರೈಸ್ತ ಜೀವಿತದಲ್ಲಿ ನೀವು ಹೆಚ್ಚು ಅನುಭವವನ್ನು ಪಡೆದವರಾಗಿರಲಿ, ನಿಮಗೆ ಅಭಿವೃದ್ಧಿಯನ್ನು ಮಾಡುವುದರಲ್ಲಿ ಆಸಕ್ತಿಯಿರಬೇಕು.
ಜ್ಞಾನ ಮತ್ತು ಪರಿವರ್ತನೆ
ಎಫೆಸ 3:14-19 ರಲ್ಲಿ, ಅಪೊಸ್ತಲ ಪೌಲನು ತನ್ನ ಜೊತೆವಿಶ್ವಾಸಿಗಳ ವಿಷಯದಲ್ಲಿ, ಅವರು ಸತ್ಯದ “ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು . . . ಗ್ರಹಿಸ”ಬೇಕೆಂದು ಪ್ರಾರ್ಥಿಸಿದನೆಂದು ನಾವು ಓದುತ್ತೇವೆ. ಈ ಉದ್ದೇಶದಿಂದ, ಸಭೆಗೆ ಕಲಿಸಲು, ಹೊಂದಾಣಿಕೆಗಳನ್ನು ಮಾಡಲು, ಮತ್ತು ಆತ್ಮೋನ್ನತಿ ಮಾಡಲಿಕ್ಕಾಗಿ ಯೇಸು ಪುರುಷರ ರೂಪದಲ್ಲಿ ದಾನಗಳನ್ನು ಕೊಟ್ಟನು. ದೇವರ ಪ್ರೇರಿತ ವಾಕ್ಯದ ಕುರಿತು ಕ್ರಮವಾಗಿ ಮನನಮಾಡುವುದರ ಜೊತೆಯಲ್ಲಿ, ಅನುಭವಸ್ಥ ಬೋಧಕರ ಮಾರ್ಗದರ್ಶನವು, ನಾವು ಆತ್ಮಿಕವಾಗಿ ‘ಬೆಳೆಯುವಂತೆ’ ನಮಗೆ ಸಹಾಯಮಾಡಬಲ್ಲದು.—ಎಫೆ. 4:11-15.
ಆ ಬೆಳವಣಿಗೆಯಲ್ಲಿ, “ನಿಮ್ಮ ಮನಸ್ಸನ್ನು ಪ್ರಚೋದಿಸುವ ಶಕ್ತಿಯಲ್ಲಿ ಹೊಸಬ”ರಾಗುವುದೂ ಸೇರಿದೆ. ಇದರಲ್ಲಿ, ದೇವರ ಮತ್ತು ಕ್ರಿಸ್ತನ ಮಾನಸಿಕ ಪ್ರವೃತ್ತಿಗೆ ಹೊಂದಿಕೆಯಲ್ಲಿರುವ ಬಲವಾದ ಮಾನಸಿಕ ಪ್ರವೃತ್ತಿಯನ್ನು ಸ್ಥಾಪಿಸುವುದು ಒಳಗೂಡಿದೆ. “ಹೊಸ ವ್ಯಕ್ತಿತ್ವವನ್ನು ಧರಿಸುವ” ಸಲುವಾಗಿ, ಅವರ ಆಲೋಚನೆಗೆ ನಮ್ಮ ಆಲೋಚನೆಯನ್ನು ಸತತವಾಗಿ ಒಡ್ಡುವ ಆವಶ್ಯಕತೆಯಿದೆ. (ಎಫೆ. 4:23, 24, NW) ನೀವು ಸುವಾರ್ತಾ ಪುಸ್ತಕಗಳನ್ನು ಅಧ್ಯಯನ ಮಾಡುವಾಗ, ಅದರಲ್ಲಿ ಕೊಡಲ್ಪಟ್ಟಿರುವ ಕ್ರಿಸ್ತನ ಜೀವನ ವೃತ್ತಾಂತಗಳನ್ನು ನೀವು ಅನುಸರಿಸತಕ್ಕ ಮಾದರಿಯೋಪಾದಿ ದೃಷ್ಟಿಸುತ್ತೀರೊ? ಯೇಸು ತೋರಿಸಿದ ವಿಶಿಷ್ಟ ಗುಣಗಳನ್ನು ಗುರುತಿಸಿ, ಬಳಿಕ ಇವುಗಳನ್ನು ನಿಮ್ಮ ಸ್ವಂತ ಜೀವಿತದಲ್ಲಿ ಅನುಕರಿಸಲು ನೀವು ನಿಜ ಪ್ರಯತ್ನವನ್ನು ಮಾಡುತ್ತೀರೊ?—1 ಪೇತ್ರ 2:21.
ನೀವು ಸಂಭಾಷಣೆಯಲ್ಲಿ ಯಾವ ವಿಷಯಗಳನ್ನು ಒಳಗೂಡಿಸುತ್ತೀರೊ ಅದು, ನೀವು ಎಷ್ಟರ ಮಟ್ಟಿಗೆ ಅಂಥ ಅಭಿವೃದ್ಧಿಯನ್ನು ಮಾಡಿದ್ದೀರೆಂಬುದಕ್ಕೆ ಸೂಚಕವಾಗಿರಬಲ್ಲದು. ಯಾರು ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡಿದ್ದಾರೋ ಅವರು, ಅಪ್ರಾಮಾಣಿಕ, ನಿಂದಾತ್ಮಕ, ಅಶ್ಲೀಲ ಅಥವಾ ನಕಾರಾತ್ಮಕವಾದ ಮಾತುಗಳನ್ನಾಡುವುದರಲ್ಲಿ ಒಳಗೂಡುವುದಿಲ್ಲ. ಬದಲಿಗೆ, ಅವರ ಮಾತು “ಭಕ್ತಿಯನ್ನು ವೃದ್ಧಿ”ಮಾಡುವಂತಹದ್ದೂ “ಕೇಳುವವರ ಹಿತಕ್ಕಾಗಿ” ಇರುವಂತಹದ್ದೂ ಆಗಿರುತ್ತದೆ. (ಎಫೆ. 4:25, 26, 29, 31; 5:3, 4; ಯೂದ 16) ಖಾಸಗಿಯಾಗಿಯೂ ಸಭಾ ಕೂಟಗಳಲ್ಲಿಯೂ ಅವರು ಕೊಡುವ ಉತ್ತರಗಳು ಮತ್ತು ಆಡುವ ಮಾತುಗಳು, ಸತ್ಯವು ಅವರ ಜೀವಿತಗಳನ್ನು ಪರಿವರ್ತಿಸುತ್ತಿದೆ ಎಂಬುದನ್ನು ತೋರಿಸುತ್ತದೆ.
ನೀವು ಈಗ, “ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು” ಹೋಗದಿರುವವರಾಗಿರುವಲ್ಲಿ, ಅದೂ ನಿಮ್ಮ ಅಭಿವೃದ್ಧಿಯ ರುಜುವಾತಾಗಿದೆ. (ಎಫೆ. 4:14) ಉದಾಹರಣೆಗೆ, ಈ ಲೋಕವು ಹೊಸ ವಿಚಾರಧಾರೆಗಳನ್ನು, ಧ್ಯೇಯಗಳನ್ನು ಅಥವಾ ಬೇರೆ ಬೇರೆ ರೀತಿಯ ಮನೋರಂಜನೆಯ ಸುರಿಮಳೆಯನ್ನೇ ಸುರಿಸುವಾಗ ನಿಮ್ಮ ಪ್ರತಿಕ್ರಿಯೆಯೇನು? ನೀವು ಆತ್ಮಿಕ ಜವಾಬ್ದಾರಿಗಳಿಗಾಗಿ ಕೊಡಬೇಕಾದ ಸಮಯವನ್ನು ಇಂತಹ ವಿಷಯಗಳನ್ನು ಬೆನ್ನಟ್ಟಲಿಕ್ಕಾಗಿ ಕೊಡುವಂತೆ ಪ್ರೇರಿಸಲ್ಪಡುತ್ತೀರೊ? ಹಾಗೆ ಮಾಡುವಲ್ಲಿ ಅದು ಆತ್ಮಿಕ ಅಭಿವೃದ್ಧಿಯನ್ನು ನಿಗ್ರಹಿಸಬಹುದು. ಆದುದರಿಂದ, ಆತ್ಮಿಕ ಬೆನ್ನಟ್ಟುವಿಕೆಗಳಿಗಾಗಿ ಸಮಯವನ್ನು ಕೊಂಡುಕೊಳ್ಳುವುದು ಅದೆಷ್ಟು ವಿವೇಕಯುತವಾಗಿದೆ!—ಎಫೆ. 5:15, 16, NW.
ನೀವು ಇತರರೊಂದಿಗೆ ವ್ಯವಹರಿಸುವ ವಿಧವೂ ಆತ್ಮಿಕ ಅಭಿವೃದ್ಧಿಯ ಸೂಚಕವಾಗಿರಬಲ್ಲದು. ನೀವು ನಿಮ್ಮ ಸಹೋದರ ಸಹೋದರಿಯರ ಬಗ್ಗೆ “ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ” ಇರಲು ಕಲಿತಿದ್ದೀರೊ?—ಎಫೆ. 4:32.
ಯೆಹೋವನಿಗೆ ಇಷ್ಟವಾಗುವ ವಿಧದಲ್ಲಿ ಸಂಗತಿಗಳನ್ನು ಮಾಡುವುದರಲ್ಲಿ ನೀವು ಮಾಡುವ ಪ್ರಗತಿಯು, ಸಭೆಯಲ್ಲಿಯೂ ಮನೆಯಲ್ಲಿಯೂ ತೋರ್ಪಡಿಸಲ್ಪಡಬೇಕು. ಅದು ಶಾಲೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ನಿಮ್ಮ ಐಹಿಕ ಉದ್ಯೋಗದ ಸ್ಥಳದಲ್ಲಿಯೂ ತೋರಿಬರಬೇಕು. (ಎಫೆ. 5:21-6:9) ನೀವು ಈ ಎಲ್ಲ ಪರಿಸ್ಥಿತಿಗಳಲ್ಲಿ ಪೂರ್ಣ ರೀತಿಯಲ್ಲಿ ದೈವಿಕ ಗುಣಗಳನ್ನು ಪ್ರದರ್ಶಿಸುವಾಗ, ನಿಮ್ಮ ಅಭಿವೃದ್ಧಿಯು ತಾನಾಗಿಯೇ ತೋರಿಬರುವುದು.
ನಿಮ್ಮಲ್ಲಿರುವ ವರದಾನವನ್ನು ಉಪಯೋಗಿಸಿರಿ
ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬನಿಗೆ ಜಾಣ್ಮೆಯನ್ನು ಮತ್ತು ವಿಶೇಷ ಸಾಮರ್ಥ್ಯಗಳನ್ನು ಕೊಟ್ಟಿದ್ದಾನೆ. ನಮ್ಮ ಮೂಲಕ ಆತನು ತನ್ನ ಅಪಾತ್ರ ಕೃಪೆಯನ್ನು ವ್ಯಕ್ತಪಡಿಸಸಾಧ್ಯವಾಗುವಂಥ ರೀತಿಯಲ್ಲಿ ನಾವು ಈ ಸಾಮರ್ಥ್ಯಗಳನ್ನು ಇತರರ ಪರವಾಗಿ ಉಪಯೋಗಿಸುವಂತೆ ಆತನು ಬಯಸುತ್ತಾನೆ. ಇದರ ಕುರಿತು ಅಪೊಸ್ತಲ ಪೇತ್ರನು ಬರೆದುದು: “ನೀವೆಲ್ಲರು ದೇವರ ವಿವಿಧ [“ಅಪಾತ್ರ,” NW] ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.” (1 ಪೇತ್ರ 4:10) ಹಾಗಾದರೆ, ನೀವು ನಿಮಗೆ ಕೊಡಲ್ಪಟ್ಟಿರುವ ಮನೆವಾರ್ತೆಯ ಕೆಲಸವನ್ನು ಹೇಗೆ ನಡೆಸುತ್ತಿದ್ದೀರಿ?
“ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ,” ಎಂದು ಪೇತ್ರನು ಹೇಳುತ್ತಾನೆ. (1 ಪೇತ್ರ 4:11) ದೇವರಿಗೆ ಮಹಿಮೆ ತರುವ ಉದ್ದೇಶದಿಂದ, ದೇವರ ವಾಕ್ಯಕ್ಕೆ ಸಂಪೂರ್ಣವಾಗಿ ಹೊಂದಿಕೆಯಲ್ಲಿರುವ ರೀತಿಯಲ್ಲಿ ಮಾತಾಡುವ ಜವಾಬ್ದಾರಿಯನ್ನು ಈ ವಚನವು ಒತ್ತಿಹೇಳುತ್ತದೆ. ಇಂತಹ ನುಡಿಯುವಿಕೆಯ ರೀತಿಯು ಸಹ ಯೆಹೋವನಿಗೆ ಮಹಿಮೆಯನ್ನು ತರಬೇಕು. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೂಲಕ ಕೊಡಲ್ಪಡುವ ತರಬೇತಿಯು, ನಿಮ್ಮ ವರದಾನವನ್ನು ಆ ರೀತಿಯಲ್ಲಿ, ಅಂದರೆ ನೀವು ಇತರರಿಗೆ ಸಹಾಯಮಾಡುವ ರೀತಿಯ ಮೂಲಕ ದೇವರನ್ನು ಮಹಿಮೆಪಡಿಸಲು ಉಪಯೋಗಿಸುವಂತೆ ನಿಮಗೆ ಸಹಾಯಮಾಡಬಲ್ಲದು. ಇದು ನಿಮ್ಮ ಗುರಿಯಾಗಿರುವುದರಿಂದ, ನೀವು ಶಾಲೆಯಲ್ಲಿ ಮಾಡುವ ಪ್ರಗತಿಯನ್ನು ಹೇಗೆ ಅಳೆಯಬೇಕು?
ಭಾಷಣ ಸಲಹಾ ಪಟ್ಟಿಯಲ್ಲಿ ನೀವು ಎಷ್ಟು ಅಂಶಗಳನ್ನು ಆವರಿಸಿದ್ದೀರಿ ಅಥವಾ ನಿಮಗೆ ಯಾವ ರೀತಿಯ ಭಾಷಣವು ನೇಮಿಸಲ್ಪಟ್ಟಿದೆ ಎಂಬುದರ ಕುರಿತು ಯೋಚಿಸುವ ಬದಲು, ಕೊಡಲ್ಪಟ್ಟಿರುವ ತರಬೇತಿಯು ನಿಮ್ಮ ಸ್ತೋತ್ರಯಜ್ಞದ ಗುಣಮಟ್ಟವನ್ನು ಎಷ್ಟರ ಮಟ್ಟಿಗೆ ಉತ್ತಮಗೊಳಿಸಿದೆ ಎಂಬುದರ ಕುರಿತು ಚಿಂತಿಸಿರಿ. ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಈ ಶಾಲೆಯು ನಮ್ಮನ್ನು ತಯಾರಿಸುತ್ತದೆ. ಆದುದರಿಂದ, ಹೀಗೆ ಕೇಳಿಕೊಳ್ಳಿ: ‘ನಾನು ಕ್ಷೇತ್ರ ಸೇವೆಯಲ್ಲಿ ಏನು ಹೇಳುವೆನು ಎಂಬುದನ್ನು ನಿಜವಾಗಿಯೂ ತಯಾರಿಸುತ್ತೇನೊ? ನಾನು ಯಾರಿಗೆ ಸಾಕ್ಷಿ ನೀಡುತ್ತೇನೊ ಅವರ ಬಗ್ಗೆ ವೈಯಕ್ತಿಕ ಆಸಕ್ತಿಯನ್ನು ತೋರಿಸಲು ನಾನು ಕಲಿತಿದ್ದೇನೊ? ಮುಂದಿನ ಭೇಟಿಯಲ್ಲಿ ಚರ್ಚೆಗಾಗಿ ನಾನು ಜನರ ಬಳಿ ಒಂದು ಪ್ರಶ್ನೆಯನ್ನು ಬಿಟ್ಟು ಬರುವ ಮೂಲಕ ಪುನರ್ಭೇಟಿಗೆ ಅಸ್ತಿವಾರವನ್ನು ಹಾಕುತ್ತೇನೊ? ನಾನು ಒಬ್ಬರೊಡನೆ ಬೈಬಲ್ ಅಧ್ಯಯನ ನಡೆಸುತ್ತಿರುವಲ್ಲಿ, ಆ ವಿದ್ಯಾರ್ಥಿಯ ಹೃದಯವನ್ನು ತಲಪುವ ಬೋಧಕನೋಪಾದಿ ಅಭಿವೃದ್ಧಿಯನ್ನು ಮಾಡಲು ಪ್ರಯತ್ನಿಸುತ್ತಿದ್ದೇನೊ?’
ಕೇವಲ ನಿಮಗೆ ಕೊಡಲ್ಪಡುವ ಸೇವಾ ಸುಯೋಗಗಳ ಆಧಾರದ ಮೇಲೆ ನಿಮ್ಮ ಪ್ರಗತಿಯನ್ನು ಅಳೆಯದಿರಿ. ನಿಮ್ಮ ಅಭಿವೃದ್ಧಿಯು ಕಂಡುಬರುವುದು ನಿಮಗೆ ಕೊಡಲ್ಪಡುವ ನೇಮಕದಲ್ಲಲ್ಲ, ಆ ನೇಮಕವನ್ನು ನೀವು ಹೇಗೆ ಪೂರೈಸುತ್ತೀರಿ ಎಂಬುದರಲ್ಲೇ. ಕಲಿಸುವುದನ್ನು ಒಳಗೂಡಿರುವ ಒಂದು ನೇಮಕವು ನಿಮಗೆ ಕೊಡಲ್ಪಡುವಲ್ಲಿ, ಸ್ವತಃ ಹೀಗೆ ಕೇಳಿಕೊಳ್ಳಿ: ‘ನಾನು ನಿಜವಾಗಿಯೂ ಬೋಧಿಸುವ ಕಲೆಯನ್ನು ಉಪಯೋಗಿಸಿದೆನೊ? ಕೇಳುಗರ ಜೀವಿತಗಳಲ್ಲಿ ಬದಲಾವಣೆಯನ್ನು ತರುವಂಥ ರೀತಿಯಲ್ಲಿ ನಾನು ಆ ವಿಷಯವನ್ನು ನಿರ್ವಹಿಸಿದೆನೊ?’
ನಿಮ್ಮ ವರದಾನವನ್ನು ಉಪಯೋಗಿಸಿರಿ ಎಂಬ ಬುದ್ಧಿವಾದವು, ನೀವು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವುದನ್ನು ಅರ್ಥೈಸುತ್ತದೆ. ಕ್ಷೇತ್ರ ಶುಶ್ರೂಷೆಯಲ್ಲಿ ಇತರರೊಂದಿಗೆ ಸೇವೆ ಮಾಡುವುದರಲ್ಲಿ ನೀವು ಮುಂತೊಡಗುತ್ತೀರೊ? ನಿಮ್ಮ ಸಭೆಯ ಸದಸ್ಯರಲ್ಲಿ ಹೊಸಬರು, ಎಳೆಯರು ಅಥವಾ ಅಶಕ್ತರಾಗಿರುವವರಿಗೆ ಸಹಾಯಮಾಡುವ ಸಂದರ್ಭಗಳಿಗಾಗಿ ನೀವು ಮುನ್ನೋಡುತ್ತೀರೊ? ರಾಜ್ಯ ಸಭಾಗೃಹವನ್ನು ಸ್ವಚ್ಛಮಾಡಲು ಅಥವಾ ವಿವಿಧ ಅಧಿವೇಶನಗಳು ಮತ್ತು ಸಮ್ಮೇಳನಗಳಲ್ಲಿ ನೆರವು ನೀಡಲು ನೀವಾಗಿಯೇ ಮುಂದೆ ಬರುತ್ತೀರೊ? ಆಗಾಗ ಆಕ್ಸಿಲಿಯರಿ ಪಯನೀಯರ್ ಸೇವೆಯಲ್ಲಿ ನೀವು ಒಳಗೂಡಬಲ್ಲಿರೊ? ರೆಗ್ಯುಲರ್ ಪಯನೀಯರರಾಗಿ ಸೇವೆಮಾಡಲು ಅಥವಾ ಹೆಚ್ಚು ಅಗತ್ಯವಿರುವ ಸಭೆಯೊಂದರಲ್ಲಿ ಸಹಾಯಮಾಡಲು ನೀವು ಸಮರ್ಥರಾಗಿದ್ದೀರೊ? ನೀವು ಒಬ್ಬ ಸಹೋದರರಾಗಿರುವಲ್ಲಿ, ಶುಶ್ರೂಷಾ ಸೇವಕರು ಮತ್ತು ಹಿರಿಯರಿಗಾಗಿರುವ ಶಾಸ್ತ್ರೀಯ ಸೇವಾ ಯೋಗ್ಯತೆಗಳನ್ನು ಎಟುಕಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದೀರೊ? ನೆರವು ನೀಡಲು ಮತ್ತು ಜವಾಬ್ದಾರಿಯನ್ನು ಅಂಗೀಕರಿಸಲು ನಿಮಗಿರುವ ಸಿದ್ಧಮನಸ್ಸು, ಅಭಿವೃದ್ಧಿಯ ಒಂದು ಸಂಕೇತವಾಗಿದೆ.—ಕೀರ್ತ. 110:3.
ಅನುಭವವು ವಹಿಸುವ ಪಾತ್ರ
ಕ್ರೈಸ್ತ ಜೀವಿತದಲ್ಲಿ ಹೆಚ್ಚು ಅನುಭವವಿಲ್ಲದ ಕಾರಣ ನೀವು ಸೀಮಿತವಾದದ್ದನ್ನು ಮಾತ್ರ ಮಾಡಬಲ್ಲಿರೆಂದು ನಿಮಗನಿಸುವಲ್ಲಿ, ಧೈರ್ಯ ತಂದುಕೊಳ್ಳಿ. ದೇವರ ವಾಕ್ಯವು “ಬುದ್ಧಿಹೀನರಿಗೆ [“ಅನನುಭವಿಗಳಿಗೆ,” NW] ವಿವೇಕಪ್ರದವಾಗಿದೆ.” (ಕೀರ್ತ. 19:7; 119:130; ಜ್ಞಾನೋ. 1:1-4) ಬೈಬಲಿನ ಸಲಹೆಯನ್ನು ಅನ್ವಯಿಸಿಕೊಳ್ಳುವುದರಿಂದ ನಾವು ಯೆಹೋವನ ಪರಿಪೂರ್ಣ ವಿವೇಕದಿಂದ ಪ್ರಯೋಜನ ಪಡೆಯುವಂತಾಗುತ್ತದೆ. ಇದು ಅನುಭವದಿಂದ ಮಾತ್ರ ಕಲಿಯುವ ಯಾವುದೇ ವಿಷಯಕ್ಕಿಂತಲೂ ಎಷ್ಟೋ ಹೆಚ್ಚು ಬೆಲೆಬಾಳುವಂತಹದ್ದಾಗಿದೆ. ಆದರೂ, ನಾವು ಯೆಹೋವನಿಗೆ ಸಲ್ಲಿಸುವ ಸೇವೆಯಲ್ಲಿ ಅಭಿವೃದ್ಧಿಯನ್ನು ಮಾಡುವಾಗ, ಬೆಲೆಬಾಳುವ ಅನುಭವವನ್ನು ನಿಶ್ಚಯವಾಗಿ ಪಡೆಯುತ್ತೇವೆ. ಇದನ್ನು ನಾವು ಹೇಗೆ ಸದುಪಯೋಗಿಸಬಲ್ಲೆವು?
ನಮ್ಮ ಜೀವನದಲ್ಲಿ ನಾವು ವಿವಿಧ ಪರಿಸ್ಥಿತಿಗಳಿಗೆ ಒಡ್ಡಲ್ಪಟ್ಟಿರುವುದರಿಂದ, ‘ನಾನು ಈ ಪರಿಸ್ಥಿತಿಯನ್ನು ಈ ಮೊದಲೇ ಎದುರಿಸಿದ್ದೇನೆ. ಆದುದರಿಂದ ಏನು ಮಾಡಬೇಕೆಂದು ನನಗೆ ಗೊತ್ತಿದೆ’ ಎಂದು ಒಬ್ಬನು ತರ್ಕಿಸುವಂತೆ ಪ್ರೇರೇಪಿಸಲ್ಪಡಬಹುದು. ಆದರೆ ಇದು ವಿವೇಕದ ಮಾರ್ಗವಾಗಿದ್ದೀತೊ? ಜ್ಞಾನೋಕ್ತಿ 3:7 ಎಚ್ಚರಿಸುವುದು: ‘ನೀನೇ ಬುದ್ಧಿವಂತನು ಎಂದೆಣಿಸಬೇಡ.’ ಜೀವನದ ಪರಿಸ್ಥಿತಿಗಳೊಂದಿಗೆ ಹೆಣಗಾಡುವಾಗ, ಪರಿಗಣಿಸಬೇಕಾದ ವಿಷಯಗಳ ಕುರಿತಾದ ನಮ್ಮ ದೃಷ್ಟಿಕೋನವನ್ನು ಅನುಭವವು ಖಂಡಿತವಾಗಿಯೂ ವಿಶಾಲಗೊಳಿಸಬೇಕು. ಆದರೆ ನಾವು ಆತ್ಮಿಕ ಪ್ರಗತಿಯನ್ನು ಮಾಡುತ್ತಿರುವಲ್ಲಿ, ಯಶಸ್ಸನ್ನು ಹೊಂದಬೇಕಾದರೆ ನಮಗೆ ಯೆಹೋವನ ಆಶೀರ್ವಾದವು ಅತ್ಯಗತ್ಯ ಎಂಬುದನ್ನೂ ನಮ್ಮ ಅನುಭವವು ನಮ್ಮ ಹೃದಮನಗಳಲ್ಲಿ ನಾಟಿಸಬೇಕು. ಆದಕಾರಣ, ನಮ್ಮ ಅಭಿವೃದ್ಧಿಯು ವ್ಯಕ್ತವಾಗುವುದು ನಾವು ಪರಿಸ್ಥಿತಿಗಳನ್ನು ಆತ್ಮವಿಶ್ವಾಸದಿಂದ ಎದುರಿಸುವುದರಿಂದಲ್ಲ, ಬದಲಿಗೆ ನಮ್ಮ ಜೀವಿತಗಳಲ್ಲಿ ಮಾರ್ಗದರ್ಶನಕ್ಕಾಗಿ ಸಿದ್ಧಮನಸ್ಸಿನಿಂದ ಯೆಹೋವನ ಕಡೆಗೆ ತಿರುಗುವುದರಿಂದಲೇ. ಆತನ ಅನುಮತಿಯಿಲ್ಲದೆ ಏನೂ ಸಂಭವಿಸುವುದಿಲ್ಲ ಎಂಬ ಆತ್ಮವಿಶ್ವಾಸದಿಂದ ಮತ್ತು ನಮ್ಮ ಸ್ವರ್ಗೀಯ ತಂದೆಯೊಂದಿಗೆ ಭರವಸೆಯ ಮತ್ತು ವಾತ್ಸಲ್ಯಭರಿತ ಸಂಬಂಧವನ್ನು ಕಾಪಾಡಿಕೊಳ್ಳುವುದರಿಂದ ಇದು ತೋರಿಸಲ್ಪಡುತ್ತದೆ.
ಎದೆಬೊಗ್ಗಿದವರಾಗಿ ಮುಂದೆ ಸಾಗಿರಿ
ಅಪೊಸ್ತಲ ಪೌಲನು ಆತ್ಮಿಕವಾಗಿ ಪ್ರೌಢನಾಗಿದ್ದ ಅಭಿಷಿಕ್ತ ಕ್ರೈಸ್ತನಾಗಿದ್ದರೂ, ಜೀವನದ ಗುರಿಯನ್ನು ಸಾಧಿಸಲಿಕ್ಕಾಗಿ “ಎದೆಬೊಗ್ಗಿದವನಾಗಿ” ಮುಂದೆ ಸಾಗುವ ಆವಶ್ಯಕತೆಯನ್ನು ಮನಗಂಡನು. (ಫಿಲಿ. 3:13-16) ಇದೇ ಹೊರನೋಟ ನಿಮಗೂ ಇದೆಯೊ?
ನೀವು ಎಷ್ಟರ ಮಟ್ಟಿಗೆ ಪ್ರಗತಿಯನ್ನು ಮಾಡಿದ್ದೀರಿ? ನಿಮ್ಮ ಬೆಳವಣಿಗೆಯನ್ನು, ಹೊಸ ವ್ಯಕ್ತಿತ್ವವನ್ನು ನೀವು ಎಷ್ಟು ಪೂರ್ಣವಾಗಿ ಧರಿಸಿದ್ದೀರಿ, ಯೆಹೋವನ ಪರಮಾಧಿಕಾರಕ್ಕೆ ಎಷ್ಟು ಪೂರ್ಣವಾಗಿ ಅಧೀನರಾಗಿದ್ದೀರಿ ಮತ್ತು ಯೆಹೋವನನ್ನು ಗೌರವಿಸಲಿಕ್ಕಾಗಿ ಎಷ್ಟು ಶ್ರದ್ಧಾಪೂರ್ವಕವಾಗಿ ನಿಮ್ಮ ವರದಾನಗಳನ್ನು ಉಪಯೋಗಿಸುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಅಳೆಯಿರಿ. ನೀವು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯುವಾಗ, ನೀವು ಮಾತಾಡುವ ಮತ್ತು ಬೋಧಿಸುವ ರೀತಿಯಲ್ಲಿ ದೇವರ ವಾಕ್ಯದಲ್ಲಿ ಎತ್ತಿಹೇಳಲ್ಪಟ್ಟಿರುವ ಗುಣಗಳು ಪ್ರಗತಿಪರವಾಗಿ ಕಂಡುಬರತಕ್ಕದ್ದು. ನಿಮ್ಮ ಬೆಳವಣಿಗೆಯ ಈ ಅಂಶಗಳನ್ನು ಕೇಂದ್ರಬಿಂದುವಾಗಿ ಇಟ್ಟುಕೊಳ್ಳಿರಿ. ಹೌದು, ಅವುಗಳಲ್ಲಿ ಹರ್ಷಿಸಿರಿ. ಆಗ ನಿಮ್ಮ ಅಭಿವೃದ್ಧಿಯು ಪ್ರತ್ಯಕ್ಷವಾಗಿ ತೋರಿಬರುವುದು.