ಅಧ್ಯಾಯ 2
ಪದಗಳನ್ನು ಸ್ಪಷ್ಟವಾಗಿ ಆಡುವುದು
ಪರಿಣಾಮಕಾರಿಯಾಗಿ ಸಂವಾದಿಸಬೇಕಾದರೆ, ನೀವು ಸ್ಪಷ್ಟವಾಗಿ ಮಾತನಾಡಬೇಕು. ನೀವು ಹೇಳಲಿಕ್ಕಿರುವ ವಿಷಯವು ಆಸಕ್ತಿಕರವಾಗಿದ್ದೀತು, ಪ್ರಾಮುಖ್ಯವೂ ಆಗಿದ್ದೀತು. ಆದರೆ ನಿಮ್ಮ ಮಾತು ಸುಲಭವಾಗಿ ಅರ್ಥವಾಗದಿರುವಲ್ಲಿ, ನೀವು ಏನು ಹೇಳುತ್ತೀರೊ ಅದರಲ್ಲಿ ಹೆಚ್ಚಿನದ್ದು ನಿಷ್ಪ್ರಯೋಜಕವಾಗಿ ಹೋಗುವುದಂತೂ ಖಂಡಿತ.
ನಿಜವಾಗಿಯೂ ಅರ್ಥವಾಗದಂಥ ಮಾತುಗಳಿಂದ ಜನರು ಪ್ರಚೋದಿತರಾಗುವುದಿಲ್ಲ. ಒಬ್ಬ ವ್ಯಕ್ತಿಯ ಸ್ವರವು ಪ್ರಬಲವಾಗಿದ್ದು, ಅವನು ಹೇಳುತ್ತಿರುವ ವಿಷಯವು ನಿಮಗೆ ಕೇಳಿಸುವುದಾದರೂ, ಅವನು ಮಾತುಗಳನ್ನು ತೇಲಿಸಿ ಹೇಳುವಲ್ಲಿ, ಅವು ಇತರರನ್ನು ಕ್ರಿಯೆಗೈಯುವಂತೆ ಪ್ರೇರಿಸುವುದಿಲ್ಲ. ಅದು ಅವನು ಅನ್ಯ ಭಾಷೆಯಲ್ಲಿ ಮಾತಾಡುತ್ತಿದ್ದಾನೋ ಎಂಬಂತಿದ್ದು, ಕಿವಿಗೊಡುವವನು ಅದನ್ನು ಗ್ರಹಿಸಲು ಅಸಮರ್ಥನಾಗಿರುವನು. (ಯೆರೆ. 5:15) ಬೈಬಲು ನಮಗೆ ಜ್ಞಾಪಕ ಹುಟ್ಟಿಸುವುದು: “ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು? ಹಾಗೆಯೇ ನೀವೂ ತಿಳಿಯಬಹುದಾದ ಭಾಷೆಯನ್ನೂ ಬಾಯಿಂದ ಆಡದೆಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವದು? ನೀವು ಗಾಳಿಯ ಸಂಗಡ ಮಾತಾಡಿದ ಹಾಗಿರುವದಷ್ಟೆ.”—1 ಕೊರಿಂ. 14:8, 9.
ಮಾತನ್ನು ಯಾವುದು ಅಸ್ಪಷ್ಟಗೊಳಿಸುತ್ತದೆ? ಬಾಯಿಯನ್ನು ಸಾಕಷ್ಟು ತೆರೆಯದೆ ಮಾತಾಡುವುದರಿಂದ ಹೀಗಾಗಬಹುದು. ಬಿಗಿಯಾಗಿರುವ ದವಡೆ ಸ್ನಾಯುಗಳು ಮತ್ತು ತೀರ ಸ್ವಲ್ಪ ಮಟ್ಟಿಗೆ ಚಲಿಸುವ ತುಟಿಗಳು ಸಹ ತೀರ ಕಡಿಮೆ ಧ್ವನಿ ಹಾಗೂ ಅಸ್ಪಷ್ಟ ಮಾತುಗಳಿಗೆ ಕಾರಣವಾಗಿರಬಹುದು.
ತುಂಬ ವೇಗವಾಗಿ ಮಾತನಾಡುವುದು ಸಹ ಅರ್ಥಮಾಡಿಕೊಳ್ಳಲು ಕಷ್ಟಕರವಾದ ಭಾಷಣವಾಗಿ ಪರಿಣಮಿಸಬಹುದು. ರೆಕಾರ್ಡ್ ಮಾಡಿರುವ ಒಂದು ಭಾಷಣವನ್ನು ನಿಯಮಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ನುಡಿಸುವಲ್ಲಿ ಏನಾಗುತ್ತದೊ ಹಾಗೆಯೇ ಇದಿರುವುದು. ಪದಗಳೆಲ್ಲವೂ ಅದರಲ್ಲಿರುವುದಾದರೂ ಇದರಿಂದ ಹೆಚ್ಚಿನ ಪ್ರಯೋಜನ ಸಿಗುವುದಿಲ್ಲ.
ಕೆಲವು ಸಂದರ್ಭಗಳಲ್ಲಿ, ಮಾತಿನ ಅಂಗಗಳ ರಚನೆಯಲ್ಲಿರುವ ದೋಷವೇ ಅಸ್ಪಷ್ಟವಾದ ಮಾತಿಗೆ ಕಾರಣವಾಗಿರುತ್ತದೆ. ಆದರೆ, ಇಂತಹ ಸಮಸ್ಯೆಯೊಂದಿಗೆ ಹೋರಾಡಲೇಬೇಕಾಗಿರುವವರು ಸಹ, ಈ ಅಧ್ಯಯನದಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನ್ವಯಿಸಿಕೊಳ್ಳುವ ಮೂಲಕ ಅಭಿವೃದ್ಧಿಹೊಂದಲು ಹೆಚ್ಚು ಪ್ರಯತ್ನವನ್ನು ಮಾಡಬಲ್ಲರು.
ಆದರೆ ಸಾಮಾನ್ಯವಾಗಿ ಅಸ್ಪಷ್ಟ ಮಾತು ಫಲಿಸುವುದು ಶಬ್ದಗಳನ್ನು ತೇಲಿಸಿ ನುಡಿಯುವುದರಿಂದಲೇ, ಅಂದರೆ ಅವುಗಳನ್ನು ಮಧ್ಯೆ ಮಧ್ಯೆ ನಿಲ್ಲಿಸದೆ ಅವಸರದಿಂದ ಅವುಗಳನ್ನು ಹೇಳುತ್ತಾ ಹೋಗುವುದರಿಂದಲೇ ಆಗಿದೆ. ಇದರಿಂದಾಗಿ ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗುತ್ತದೆ. ಇದರಲ್ಲಿ ಉಚ್ಚಾರಾಂಶಗಳನ್ನು ಅಥವಾ ವಿಶೇಷ ಅಕ್ಷರಗಳನ್ನು ಬಿಟ್ಟು ಓದುವುದು ಅಥವಾ ಪದಾಂತ್ಯಗಳನ್ನು ಬಿಟ್ಟುಬಿಡುವುದು ಸೇರಿರಬಹುದು. ಒಬ್ಬನು ಪದಗಳನ್ನು ಸಿಕ್ಕಾಬಟ್ಟೆ ಆತುರದಿಂದ ಹೇಳುವಾಗ, ಅವನಿಗೆ ಕಿವಿಗೊಡುವವರು ಕೆಲವು ವಿಚಾರಗಳನ್ನು ಮತ್ತು ಪದಗುಚ್ಛಗಳನ್ನು ಅರ್ಥಮಾಡಿಕೊಳ್ಳಬಹುದಾದರೂ, ಬೇರೆ ವಿಷಯಗಳನ್ನು ಅವರು ಊಹಿಸಬೇಕಾಗುತ್ತದೆ. ಆದುದರಿಂದ, ಪದಗಳನ್ನು ಸ್ಪಷ್ಟವಾಗಿ ಹೇಳಲು ತಪ್ಪಿಹೋಗುವುದು ಒಬ್ಬನ ಬೋಧನೆಯ ಪರಿಣಾಮಕಾರಿತ್ವವನ್ನು ಕುಂದಿಸಬಲ್ಲದು.
ಸ್ಪಷ್ಟವಾಗಿ ಮಾತನಾಡುವ ವಿಧ. ಪದಗಳನ್ನು ಸರಿಯಾಗಿ ಹೇಳಲಿಕ್ಕಾಗಿರುವ ಕೀಲಿ ಕೈಗಳಲ್ಲಿ ಒಂದು, ನಿಮ್ಮ ಭಾಷೆಯಲ್ಲಿ ಪದಗಳ ರಚನೆಯನ್ನು ಸರಿಯಾಗಿ ತಿಳಿದುಕೊಳ್ಳುವುದೇ ಆಗಿದೆ. ಹೆಚ್ಚಿನ ಭಾಷೆಗಳಲ್ಲಿ ಪದಗಳು ಉಚ್ಚಾರಾಂಶಗಳಿಂದ ರಚಿಸಲ್ಪಟ್ಟಿರುತ್ತವೆ. ಉಚ್ಚಾರಾಂಶಗಳು, ಏಕ ಪದವಾಗಿ ಉಚ್ಚರಿಸಲ್ಪಡುವ ಒಂದು ಅಥವಾ ಹೆಚ್ಚು ಅಕ್ಷರಗಳನ್ನು ಒಳಗೂಡಿರುತ್ತವೆ. ಇಂತಹ ಭಾಷೆಗಳಲ್ಲಿ ನೀವು ಮಾತಾಡುವಾಗ ಸಾಮಾನ್ಯವಾಗಿ ಪ್ರತಿ ಉಚ್ಚಾರಾಂಶವು ಉಚ್ಚರಿಸಲ್ಪಟ್ಟರೂ, ಎಲ್ಲ ಉಚ್ಚಾರಾಂಶಗಳನ್ನು ಏಕ ಸಮಾನವಾದ ಒತ್ತುಹಾಕಿ ಉಚ್ಚರಿಸಲಾಗುವುದಿಲ್ಲ. ನಿಮ್ಮ ಭಾಷಣದ ಸ್ಪಷ್ಟತೆಯನ್ನು ಉತ್ತಮಗೊಳಿಸುವ ಮನಸ್ಸು ನಿಮಗಿರುವಲ್ಲಿ, ನಿಧಾನವಾಗಿ ಮಾತಾಡುತ್ತ, ಪ್ರತಿಯೊಂದು ಉಚ್ಚಾರಾಂಶವನ್ನು ಉಚ್ಚರಿಸಲು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸಿರಿ. ಆರಂಭದಲ್ಲಿ ನೀವು ವಿಪರೀತ ನಿಷ್ಕೃಷ್ಟವಾಗಿ ಮಾತಾಡುವಂತೆ ತೋರಿಬಂದರೂ, ನೀವು ರೂಢಿಮಾಡಿಕೊಳ್ಳುತ್ತಾ ಹೋದಂತೆ, ಕ್ರಮೇಣ ಸರಾಗವಾಗಿ ಮಾತನಾಡಲು ತೊಡಗುವಿರಿ. ನಿರರ್ಗಳವಾಗಿ ಮಾತನಾಡಲಿಕ್ಕಾಗಿ, ಕೆಲವು ಪದಗಳನ್ನು ಮಧ್ಯೆ ನಿಲ್ಲಿಸದೆ ಒಟ್ಟೊಟ್ಟಿಗೆ ಹೇಳುವಿರೆಂಬುದರಲ್ಲಿ ಸಂಶಯವಿಲ್ಲವಾದರೂ, ಪದಗಳ ಅರ್ಥವು ಮೊಬ್ಬಾಗುವ ಅಪಾಯವಿರುವಲ್ಲಿ ಇದನ್ನು ದೂರಮಾಡತಕ್ಕದ್ದು.
ಎಚ್ಚರಿಕೆಯ ಒಂದು ಸೂಚನೆ: ನಿಮ್ಮ ಉಚ್ಚಾರಣೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ನೀವು ವಿಪರೀತ ನಿಷ್ಕೃಷ್ಟವಾದ ರೀತಿಯಲ್ಲಿ ಮಾತಾಡಲು ಮತ್ತು ಓದಲು ರೂಢಿಮಾಡಿಕೊಳ್ಳಬಹುದು. ಆದರೆ ಅದು ನಿಮ್ಮ ಕ್ರಮವಾದ ಮಾತಾಡುವ ಶೈಲಿಯಾಗುವಂತೆ ಬಿಡಬೇಡಿ. ಏಕೆಂದರೆ ಅದು ಕೃತಕವಾದದ್ದಾಗಿ ಮತ್ತು ಅಸಹಜವಾದದ್ದಾಗಿ ಕೇಳಿಬರುವುದು.
ನಿಮ್ಮ ಮಾತು ಧ್ವನಿಗುಂದಿದಂತೆ ಕೇಳಿಬರುವುದಾದರೆ, ನಿಮ್ಮ ತಲೆಯನ್ನು ಮೇಲೆತ್ತಿ ಹಿಡಿದು, ಗಲ್ಲವನ್ನು ಎದೆಯಿಂದ ಮೇಲಕ್ಕೆತ್ತಿರಿ. ಬೈಬಲಿನಿಂದ ಓದುವಾಗ, ಅದನ್ನು ಸಾಕಷ್ಟು ಎತ್ತರದಲ್ಲಿ ಹಿಡಿಯಿರಿ. ಆಗ ನಿಮ್ಮ ದೃಷ್ಟಿಯನ್ನು ಸಭಿಕರಿಂದ ಬೈಬಲಿನ ಕಡೆಗೆ ತಿರುಗಿಸುವಾಗ, ಕೇವಲ ಸ್ವಲ್ಪ ಕೆಳಗೆ ನೋಡುವುದು ಸಾಕಾಗುವುದು. ಇದು ನಿಮ್ಮ ಮಾತು ತಡೆಯಿಲ್ಲದೆ ಹೊರಬರುವಂತೆ ಸಾಧ್ಯಮಾಡುವುದು.
ಉದ್ವೇಗವನ್ನು ಬಿಡುಗಡೆಮಾಡಲು ಕಲಿಯುವುದು ಸಹ ನಿಮ್ಮ ಮಾತನ್ನು ಉತ್ತಮಗೊಳಿಸಬಲ್ಲದು. ಮುಖದ ಸ್ನಾಯುಗಳಲ್ಲಿ ಅಥವಾ ಉಸಿರಾಟವನ್ನು ನಿಯಂತ್ರಿಸುವ ಸ್ನಾಯುಗಳಲ್ಲಿ ಉದ್ವೇಗವು, ಮಾತಾಡುವ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆಂಬುದು ಸುಪರಿಚಿತವಾದ ಸಂಗತಿಯಾಗಿದೆ. ಇಂತಹ ಉದ್ವೇಗವು, ಯಾವ ಕಾರ್ಯವು ಸರಾಗವಾಗಿಯೂ ಸಹಜವಾಗಿಯೂ ಮುನ್ನಡೆಯಬೇಕೊ ಆ ನಿಮ್ಮ ಮನಸ್ಸು, ಮಾತಿನ ಅಂಗಗಳು ಮತ್ತು ಉಸಿರಾಟ ನಿಯಂತ್ರಣದ ಮಧ್ಯೆ ಇರುವ ಹೊಂದಾಣಿಕೆಯ ಸುಸಂಘಟನೆಗೆ ಅಡ್ಡಬರುತ್ತದೆ.
ಮಿದುಳಿನ ನಿರ್ದೇಶನಕ್ಕೆ ಕೂಡಲೇ ಪ್ರತಿಕ್ರಿಯೆ ತೋರಿಸಲಿಕ್ಕಾಗಿ ದವಡೆಯ ಸ್ನಾಯುಗಳನ್ನು ಸಡಿಲು ಬಿಡುವ ಅಗತ್ಯವಿದೆ. ತುಟಿಗಳೂ ಸಡಿಲವಾಗಿರಬೇಕು. ಏಕೆಂದರೆ ಬಾಯಿಯಲ್ಲಿ ಮತ್ತು ಕಂಠದಲ್ಲಿ ಉಂಟಾಗುವ ಅನೇಕ ಧ್ವನಿಗಳನ್ನು ವ್ಯಕ್ತಪಡಿಸಲಿಕ್ಕಾಗಿ ತುಟಿಗಳು ಬೇಗ ಬೇಗನೆ ಹಿಗ್ಗಲು ಮತ್ತು ಕುಗ್ಗಲು ಸಿದ್ಧವಾಗಿರಬೇಕು. ದವಡೆಯೂ ತುಟಿಗಳೂ ಉದ್ವೇಗದಿಂದ ಬಿಗುವಾಗಿರುವಲ್ಲಿ, ಬಾಯಿಯು ಸರಿಯಾಗಿ ತೆರೆದುಕೊಳ್ಳುವುದಿಲ್ಲ ಮತ್ತು ಧ್ವನಿಯು ಹಲ್ಲುಗಳ ಎಡೆಯಿಂದ ಹೊರಗೆ ಹೋಗಬೇಕಾಗುತ್ತದೆ. ಇದು ಕರ್ಕಶವಾದ, ಧ್ವನಿಗುಂದಿದ, ಅಸ್ಪಷ್ಟವಾದ ಮಾತನ್ನು ಹೊರತರುತ್ತದೆ. ಆದರೂ, ದವಡೆ ಮತ್ತು ತುಟಿಗಳನ್ನು ಸಡಿಲು ಬಿಡುವುದೆಂದರೆ, ಪದಗಳನ್ನು ಹೇಳುವಾಗ ನಾವು ಸೋಮಾರಿತನವನ್ನು ತೋರಿಸಬೇಕೆಂಬುದು ಇದರರ್ಥವಲ್ಲ. ಇದನ್ನು, ಸ್ಫುಟವಾಗಿ ಮಾತನಾಡುವಂಥ ರೀತಿಯಲ್ಲಿ ಧ್ವನಿರಚನೆಯ ರೂಢಿಯೊಂದಿಗೆ ಸರಿದೂಗಿಸುವ ಅಗತ್ಯವಿದೆ.
ನಿಮ್ಮ ಸನ್ನಿವೇಶವನ್ನು ವಿಶ್ಲೇಷಿಸುವಾಗ, ಗಟ್ಟಿಯಾಗಿ ಓದುವುದನ್ನು ನೀವು ಸಹಾಯಕರವಾದದ್ದಾಗಿ ಕಂಡುಕೊಳ್ಳಬಹುದು. ಅದ್ಭುತಕರವಾದ ಮಾತಿನ ಅಂಗಗಳನ್ನು ನೀವು ಹೇಗೆ ಉಪಯೋಗಿಸುತ್ತಿದ್ದೀರೆಂಬುದನ್ನು ನಿಕಟವಾಗಿ ಅವಲೋಕಿಸಿರಿ. ಯಾವುದೇ ತಡೆಯಿಲ್ಲದೆ ಮಾತಿನ ಧ್ವನಿಗಳು ಸರಾಗವಾಗಿ ಹೊರಬರುವಂತೆ, ನೀವು ಬಾಯಿಯನ್ನು ಸಾಕಷ್ಟು ತೆರೆಯುತ್ತೀರೊ? ನಾಲಿಗೆಯು ಅತಿ ಕಾರ್ಯನಿರತವಾದ ಅಂಗಗಳಲ್ಲಿ ಒಂದಾಗಿರುವುದಾದರೂ ಮಾತಿನ ಅಂಗವು ಅದೊಂದೇ ಆಗಿರುವುದಿಲ್ಲ ಎಂಬುದನ್ನು ನೀವು ನೆನಪಿನಲ್ಲಿಡತಕ್ಕದ್ದು. ಕತ್ತು, ಕೆಳದವಡೆ, ತುಟಿಗಳು, ಮುಖದ ಸ್ನಾಯುಗಳು ಮತ್ತು ಕಂಠದ ಸ್ನಾಯುಗಳು—ಇವೆಲ್ಲ ತಮ್ಮ ತಮ್ಮ ಪಾತ್ರಗಳನ್ನು ವಹಿಸುತ್ತವೆ. ನೀವು ಮಾತನಾಡುವಾಗ, ಮೌಖಿಕ ಚಲನೆಯಿಲ್ಲದೆ ಮಾತನಾಡುತ್ತೀರಿ ಎಂದು ನಿಮಗನಿಸುತ್ತದೊ? ಹಾಗಿರುವಲ್ಲಿ, ನಿಮ್ಮ ಮಾತು ಅಸ್ಪಷ್ಟವಾಗಿದೆ ಎಂಬುದಕ್ಕೆ ಬಲವಾದ ಸಂಭವನೀಯತೆಯಿದೆ.
ಒಂದು ಟೇಪ್ ರೆಕಾರ್ಡರ್ ಲಭ್ಯವಿರುವಲ್ಲಿ, ಕ್ಷೇತ್ರ ಶುಶ್ರೂಷೆಯಲ್ಲಿ ನೀವು ಹೇಗೆ ಮಾತನಾಡುತ್ತೀರೊ ಹಾಗೆ ಸಹಜ ರೀತಿಯಲ್ಲಿ ಮಾತನಾಡುತ್ತಿರುವಾಗ ನಿಮ್ಮ ಸ್ವಂತ ಧ್ವನಿಯನ್ನು ರೆಕಾರ್ಡ್ ಮಾಡಿರಿ. ಕೆಲವು ನಿಮಿಷಗಳ ಸಂಭಾಷಣಾ ರೀತಿಯ ಮಾತುಗಳನ್ನು ರೆಕಾರ್ಡ್ ಮಾಡಿರಿ. ಆ ರೆಕಾರ್ಡಿಂಗನ್ನು ಕೇಳಿಸಿಕೊಳ್ಳುವುದು, ಕೆಲವು ಪದಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವುದರಲ್ಲಿ ನಿಮಗಿರುವ ತೊಂದರೆಯನ್ನು ಕಂಡುಹಿಡಿಯುವಂತೆ ನಿಮಗೆ ಸಹಾಯಮಾಡಸಾಧ್ಯವಿದೆ. ತೇಲು ಮಾತು, ಧ್ವನಿಗುಂದಿಸುವ ಅಥವಾ ಪದಗಳನ್ನು ಸಂಕ್ಷಿಪ್ತಗೊಳಿಸಿ ಮಾತಾಡುವ ಸಂದರ್ಭಗಳನ್ನು ಪರೀಕ್ಷಿಸಿ, ಅದಕ್ಕೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸಿರಿ. ಸಾಮಾನ್ಯವಾಗಿ, ಈ ಮೇಲೆ ಚರ್ಚಿಸಲ್ಪಟ್ಟಿರುವ ಅಂಶಗಳನ್ನು ಉತ್ತಮಗೊಳಿಸುವುದರಿಂದ, ಈ ಬಲಹೀನತೆಯನ್ನು ಹೋಗಲಾಡಿಸಸಾಧ್ಯವಿದೆ.
ನಿಮಗೆ ಮಾತಿನ ಅಡಚಣೆ ಇದೆಯೆ? ನಿಮ್ಮ ಬಾಯಿಯನ್ನು ಈ ಮುಂಚೆ ನೀವು ತೆರೆಯುತ್ತಿದ್ದುದಕ್ಕಿಂತ ತುಸು ಹೆಚ್ಚು ತೆರೆಯುವುದನ್ನು ರೂಢಿಮಾಡಿಕೊಳ್ಳಿ, ಮತ್ತು ಇನ್ನೂ ಹೆಚ್ಚು ಜಾಗರೂಕತೆಯಿಂದ ಸ್ಫುಟವಾಗಿ ಮಾತನಾಡಲು ಪ್ರಯತ್ನಿಸಿರಿ. ನೀವು ಉಸಿರಾಡುವಾಗ ನಿಮ್ಮ ಶ್ವಾಸಕೋಶಗಳನ್ನು ಗಾಳಿಯಿಂದ ತುಂಬಿಸಿ ಮತ್ತು ನಿಧಾನವಾಗಿ ಮಾತನಾಡಿ. ಹೀಗೆ ಮಾಡುವುದರಿಂದ ಮಾತಿನ ಅಡಚಣೆಯಿದ್ದ ಅನೇಕರು ಹೆಚ್ಚು ಸ್ಪಷ್ಟವಾಗಿ ಮಾತನಾಡುವಂತಾಗಿದೆ. ನೀವು ತೊದಲು ಮಾತಾಡುವವರಾಗಿರುವಲ್ಲಿ, ಪದಗಳಲ್ಲಿ ಸ ಮತ್ತು ಝ ಧ್ವನಿಗಳನ್ನು ಉಚ್ಚರಿಸುವಾಗ ನಿಮ್ಮ ನಾಲಿಗೆಯನ್ನು ಮುಂದಿನ ಹಲ್ಲುಗಳಿಗೆ ತಗಲದಂತೆ ಹಿಂದಕ್ಕೆ ಎಳೆದುಕೊಳ್ಳಿರಿ. ಇದರಿಂದ ನಿಮ್ಮ ಸಮಸ್ಯೆ ಪೂರ್ಣವಾಗಿ ಪರಿಹರಿಸಲ್ಪಡದಿದ್ದರೂ, ಹತಾಶರಾಗದಿರಿ. ತೊದಲು ಮಾತಾಡುವವನಾಗಿದ್ದಿರಬಹುದಾದ ಮೋಶೆಯನ್ನು, ಇಸ್ರಾಯೇಲ್ ಜನರಿಗೂ ಐಗುಪ್ತದ ಫರೋಹನಿಗೂ ಮಹತ್ವವುಳ್ಳ ಸಂದೇಶಗಳನ್ನು ತಿಳಿಯಪಡಿಸಲು ಯೆಹೋವನು ಆರಿಸಿಕೊಂಡನೆಂಬುದು ನೆನಪಿರಲಿ. (ವಿಮೋ. 4:10-12) ನಿಮಗೆ ಇಷ್ಟವಿರುವಲ್ಲಿ, ಆತನು ನಿಮ್ಮನ್ನೂ ಉಪಯೋಗಿಸುವನು, ಮತ್ತು ನಿಮ್ಮ ಶುಶ್ರೂಷೆಯನ್ನು ಯಶಸ್ವಿಗೊಳಿಸಿ ಆಶೀರ್ವದಿಸುವನು.